Daily Archives: November 12, 2012

ರಾಜ್ಯೋತ್ಸವ ಪ್ರಶಸ್ತಿ ಮತ್ತು ಆಯ್ಕೆಯ ಮಾನದಂಡ


-ಚಿದಂಬರ ಬೈಕಂಪಾಡಿ


 

ಕನ್ನಡ ರಾಜ್ಯೋತ್ಸವ ಆಚರಣೆಯ ಸಂಭ್ರಮ ಮುಗಿಯಿತು. ಮತ್ತೆ ಮುಂದಿನ ವರ್ಷ ನವೆಂಬರ್ 1 ರಂದು ಸಂಭ್ರಮ, ಅಲ್ಲಿಯ ತನಕ ಕಾಯುತ್ತಿರಬೇಕು. ಆದರೆ ಅಲ್ಲಲ್ಲಿ ಕನ್ನಡದ ಕೆಲಸಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಅದು ಕನ್ನಡ ಅಭಿಮಾನಿಗಳ ಕಾಯಕ. ರಾಜ್ಯ ಸರ್ಕಾರ ಆಯೋಜಿಸುವ ಕನ್ನಡ ರಾಜ್ಯೋತ್ಸವದ ಬಗ್ಗೆ ಯಾರಿಗೆ ಅದೆಷ್ಟು ಉತ್ಸಾಹವಿದೆಯೋ ಗೊತ್ತಿಲ್ಲ, ಆದರೆ ರಾಜ್ಯೋತ್ಸವದ ಸಂದರ್ಭದಲ್ಲಿ ಕೊಡುವ ಪ್ರಶಸ್ತಿಗಳ ಬಗ್ಗೆ ಮಾತ್ರ ಅಪರಿಮಿತವಾದ ಉತ್ಸಾಹವಿರುವುದನ್ನು ಯಾರೂ ನಿರಾಕರಿಸುವಂತಿಲ್ಲ. ಜೀವಮಾನದಲ್ಲಿ ಈ ಪ್ರಶಸ್ತಿಯನ್ನು ಪಡೆಯಲೇಬೇಕು ಎನ್ನುವ ಹಠ ಪ್ರಶಸ್ತಿಗೆ ಅರ್ಹರಾದವರಿಗಿಂತಲೂ ಪ್ರಶಸ್ತಿಗಾಗಿಯೇ ಅರ್ಹತೆಯನ್ನು ದಾಖಲೆಗಳ ಮೂಲಕ ಸಾಬೀತು ಮಾಡುವ ಉತ್ಸಾಹಿಗಳಿಗಿರುತ್ತದೆ. ನೂರಾರು ಪುಟಗಳಷ್ಟು ತಮ್ಮ ಬಗ್ಗೆ ಬರೆಯಲಾದ, ಬರೆಸಲ್ಪಟ್ಟ ಪತ್ರಿಕೆಯ ತುಣುಕುಗಳ ಜೆರಾಕ್ಸ್ ಕಡತ, ಫೋಟೋಗಳು, ಶಿಫಾರಸುಗಳ ಜೆರಾಕ್ಸ್‌ಗಳನ್ನು ಪುಸ್ತಕದ ರೂಪದಲ್ಲಿ ಬೈಂಡಿಂಗ್ ಮಾಡಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಕಚೇರಿ, ರಾಜ್ಯ ಕಚೇರಿ, ಶಾಸಕರು, ಮಂತ್ರಿಗಳು, ಅವರಿಗೆ ತೀರಾ ಪರಿಚಿತ ಪ್ರಭಾವಿಗಳ ಮೂಲಕ ರವಾನಿಸಿ ತಮ್ಮ ಹೆಸರು ಪ್ರಶಸ್ತಿಗೆ ಅಂತಿಮಗೊಳ್ಳುವ ಸುದ್ದಿ ತಿಳಿಯಲು ಹಗಲು ರಾತ್ರಿ ಕಾಯುತ್ತಿರುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಹೇಳಿಕೆಯನ್ನು ಮತ್ತೆ ಮತ್ತೆ ಓದಿ ಮನನ ಮಾಡಿಕೊಳ್ಳುತ್ತಾರೆ. ಇಲಾಖೆಯಿಂದ ದೂರವಾಣಿ ಕರೆ ಬರಬಹುದೆಂದು ಕಾಯುತ್ತಾರೆ. ಅಂತಿಮವಾಗಿ ಪ್ರಶಸ್ತಿ ಬರದಿದ್ದಾಗ ಮರಳಿ ಯತ್ನವ ಮಾಡು ಎನ್ನುವಂತೆ ಮತ್ತೆ ಮುಂದಿನ ವರ್ಷಕ್ಕೆ ಮತ್ತಷ್ಟು ಹೆಚ್ಚುವರಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುತ್ತಾರೆ. ಹೀಗೆ ಮರಳಿ ಯತ್ನವ ಮಾಡಿ ಅನೇಕ ಜನ ಫಲಕಂಡಿದ್ದಾರೆ ಎನುವುದರಲ್ಲಿ ಯಾವ ಅನುಮಾನವೂ ಬೇಡ. ಆದ್ದರಿಂದಲೇ ಪ್ರಶಸ್ತಿಗೆ ಅರ್ಹರಾದವರು ಸರ್ಕಾರದ ಪಟ್ಟಿಯಲ್ಲಿ ಶೇ.10 ಆಗಿದ್ದರೆ ಪ್ರಭಾವ ಬೀರಿ, ವಶೀಲಿ ಮಾಡಿ ಶೇ.90ರಷ್ಟು ಮಂದಿ ಅರ್ಹರಾಗಿಬಿಡುತ್ತಾರೆ, ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಾರೆ, ಅದು ಅವರ ನಿಜವಾದ ಸಾಮರ್ಥ್ಯ, ಜೈ ಭುವನೇಶ್ವರಿ.

ಆದರೆ ಪ್ರಶಸ್ತಿ ಪಟ್ಟಿ ಪ್ರಕಟವಾದಾಗ ನಾಡು-ನುಡಿಯ ಬಗ್ಗೆ ತಿಳುವಳಿಕೆ ಇದ್ದವರಿಗೆ ಅರ್ಹರನ್ನು ಗುರುತಿಸುವುದು ಕಷ್ಟವಾಗುವುದಿಲ್ಲ. ಉದಾಹರಣೆಗೆ ಈ ಸಾಲಿನಲ್ಲಿ ಪ್ರಶಸ್ತಿ ಪಡೆದ ಬೊಳುವಾರು ಮಹಮ್ಮದ್ ಕುಂಞ ಇಷ್ಟು ವರ್ಷಗಳಿಂದ ಪ್ರಶಸ್ತಿ ಆಯ್ಕೆ ಸಮಿತಿಯ ಕಣ್ಣುತಪ್ಪಿಸಿಕೊಂಡಿದ್ದವರು ಕೊನೆಗೂ ಸಿಕ್ಕಿಬಿದ್ದರು ಎನ್ನುವ ಸಂತೃಪ್ತಿಯಾಗುತ್ತದೆ. ಇಂಥ ಅನೇಕ ಮಂದಿ ಈ ವರ್ಷದ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿದ್ದಾರೆ, ಅವರನ್ನು ಅಭಿನಂದಿಸಲೇಬೇಕು. ಸರ್ಕಾರದ ಆಯ್ಕೆ ಮಾರ್ಗದರ್ಶಿ ಸೂತ್ರವನ್ನು ಮೊದಲು ಸುಟ್ಟು ಹಾಕಬೇಕು. ಯಾಕೆಂದರೆ ಪ್ರಶಸ್ತಿ ಅವರ ಸಾಧನೆಯನ್ನು ಗುರುತಿಸಿಕೊಡುವಂಥದ್ದೇ ಹೊರತು ಜಾತಿ, ಭಾಷೆ, ಪ್ರಾದೇಶಿಕತೆಯನ್ನು ಆಧರಿಸಿ ಆಗಬಾರದು. ಪ್ರಶಸ್ತಿಗೂ ಮೀಸಲಾತಿ ಸೂತ್ರ ಜಾರಿಗೆ ತಂದರೆ ಅರ್ಹತೆ ಎನ್ನುವ ಮಾನದಂಡವನ್ನು ಕಸದಬುಟ್ಟಿಗೆ ಎಸೆಯಬೇಕಾಗುತ್ತದೆ. ಈಗ ಸರ್ಕಾರವೇ ಹೇಳಿರುವುದನ್ನು ಸರಿಯಾಗಿ ಕೇಳಿಸಿಕೊಂಡಿದ್ದರೆ ಜಿಲ್ಲೆ, ಪ್ರಾದೇಶಿಕತೆ ಮತ್ತು ಎಲ್ಲಾ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎನ್ನುವ ನೀತಿಯೇ ಅಕ್ಷಮ್ಯ. ಇಂಥ ನೀತಿಯಿಂದಾಗಿಯೇ ಗಟ್ಟಿ ಕಾಳಿನ ಜೊತೆ ಅನಿವಾರ್ಯವಾಗಿ ಜೊಳ್ಳು ಸೇರಿಕೊಂಡುಬಿಡುತ್ತವೆ.

ಅರ್ಜಿ ಹಾಕದವರನ್ನೂ ಪ್ರಶಸ್ತಿಗೆ ಆಯ್ಕೆಮಾಡುವ ಸರ್ಕಾರದ ಕ್ರಮವನ್ನು ಮೆಚ್ಚಲೇ ಬೇಕು. ಮೊಟ್ಟಮೊದಲು ಪ್ರಶಸ್ತಿಗೆ ಅರ್ಜಿ ಹಾಕುವ ಪದ್ಧತಿಯನ್ನೇ ರದ್ಧುಮಾಡುವುದು ಸೂಕ್ತ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವವರು ಪ್ರಶಸ್ತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಕಾಯಕ ಮಾಡುವುದಿಲ್ಲ. ಪ್ರವೃತ್ತಿಯಾಗಿ, ವೃತ್ತಿಯಾಗಿ, ವಂಶಪಾರಂಪರ್‍ಯವಾಗಿ ಮಾಡುತ್ತಾರೆ. ಇಂಥವರು ಅರ್ಜಿ ಹಾಕಿ ಪ್ರಶಸ್ತಿಯ ಭಿಕ್ಷೆ ಕೇಳುವಂಥ ಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಬಾರದು. ಅಕಾಡೆಮಿಗಳು ಈ ನಾಡಿನ ಕಲೆ, ಸಂಸ್ಕೃತಿ, ಭಾಷೆ, ಪರಂಪರೆಯನ್ನು ಪ್ರತಿನಿಧಿಸುವಂಥವು. ಇವುಗಳ ಅಧ್ಯಕ್ಷರುಗಳು ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿರುತ್ತಾರೆ. ತಮ್ಮ ವ್ಯಾಪ್ತಿಯಲ್ಲಿರುವ ಅರ್ಹರನ್ನು ಆಯ್ಕೆ ಮಾಡುವುದು ಅವರಿಗೆ ಕಷ್ಟವೇನೂ ಆಗದು. ಇದು ನಿಜವಾದ ಸಾಧಕರನ್ನು ಗುರುತಿಸಲು ಸೂಕ್ತ ಮಾನದಂಡವಾಗುತ್ತದೆ.

ಅರ್ಜಿ ಹಾಕಿಸುವುದೆಂದರೆ ಪ್ರಶಸ್ತಿಯನ್ನು ಒಲಿಸಿಕೊಳ್ಳಲು ಮಾಡುವ ಕಸರತ್ತು ಮತ್ತೊಂದು ಅರ್ಥದಲ್ಲಿ ಭಿಕ್ಷೆ ಕೇಳುವುದಕ್ಕೆ ಸಮನಾದುದು. ಜಾತಿ, ಧರ್ಮ, ಭಾಷೆ, ವರ್ಣಗಳ ಮಾರ್ಗಸೂಚಿಯ ಮೂಲಕ ಅರ್ಹತೆಯನ್ನು ಅಳೆಯುವುದು ಅರ್ಹತೆಗೇ ಅವಮಾನ. ಇಂಥ ಅವಮಾನ ಮಾಡಿಸಿಕೊಂಡು ಪ್ರಶಸ್ತಿ ಸ್ವೀಕರಿಸಬೇಕೇ ಎನ್ನುವ ಪ್ರಶ್ನೆ.

ನಿಜವಾದ ಅರ್ಹರು ಹೇಗೆ ಪ್ರಶಸ್ತಿ ವಂಚಿತರಾಗುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆ ಕೊಡುತ್ತೇನೆ. ಅನಕ್ಷರಸ್ಥ, ತುತ್ತು ಕೂಳಿಗಾಗಿ ನಿತ್ಯವೂ ತಲೆ ಮೇಲೆ ಬುಟ್ಟಿ ಹೊತ್ತುಕೊಂಡು ತಿರುಗಾಡಿ ಕಿತ್ತಳೆ ಹಣ್ಣು ಮಾರಾಟ ಮಾಡುತ್ತಾನೆ. ಒಂದು ದಿನ ಹಣ್ಣು ಮಾರಲು ಹೋಗದಿದ್ದರೆ ಅವನ ಮನೆಯವರಿಗೆ ಉಪವಾಸ. ಇಂಥ ಸ್ಥಿತಿಯಲ್ಲಿದ್ದರೂ ತನ್ನ ಹಳ್ಳಿಯ ಮಕ್ಕಳಿಗೆ ಓದು ಬರಹ ಕಲಿಯಲು ಶಾಲೆ ಬೇಕೆನ್ನುವ ಕನಸು ಕಾಣುತ್ತಾನೆ. ತಾನು ನಿತ್ಯವೂ ಕಿತ್ತಳೆ ಹಣ್ಣು ಮಾರಿ ಬಂದ ಹಣದಲ್ಲಿ ಒಂದಂಶವನ್ನು ಕೂಡಿಟ್ಟು ಶಾಲೆ ತೆರೆಯಲು ಬಾಡಿಗೆ ಕಟ್ಟಡ ಪಡೆಯುತ್ತಾನೆ. ಅಲ್ಲೇ ಸ್ಥಳೀಯ ಮಕ್ಕಳಿಗೆ ಪುಟ್ಟ ಶಾಲೆ ಆರಂಭಿಸುತ್ತಾನೆ. ಸರ್ಕಾರದ ಕಚೇರಿಗಳಿಗೆ ಅಲೆದು ಅಲೆದು, ಅರ್ಜಿ ಹಾಕಿ ಕಾಡಿ ಬೇಡಿ ಶಾಲೆಗೆ ಮಂಜೂರಾತಿ ಪಡೆದುಕೊಳ್ಳುತ್ತಾನೆ. ಒಂದು, ಎರಡು, ಮೂರು, ಹೀಗೆ ಪ್ರಾಥಮಿಕ ಶಾಲೆ ತರಗತಿಗಳು ಆರಂಭವಾಗುತ್ತವೆ. ಇದು ಮಂಗಳೂರು ಸಮೀಪದ ಹರೇಕಳ ಎನ್ನುವ ಹಳ್ಳಿಯಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯದ ಹತ್ತಿರ. ಈ ಕೆಲಸ ಮಾಡಿದವರು ಹರೇಕಳ ಹಾಜಬ್ಬ ಎನ್ನುವ ಅನಕ್ಷರಸ್ಥ. ಈ ಅಕ್ಷರ ಯೋಗಿಯ ಬಗ್ಗೆ ಗುರುವಪ್ಪ ಎನ್ನುವ ಸ್ಥಳೀಯ ಪತ್ರಿಕೆಯ ವರದಿಗಾರ ಪುಟ್ಟ ಬರಹ ಬರೆದಿದ್ದರು.

2004ರಲ್ಲಿ ‘ಕನ್ನಡಪ್ರಭ’ ದಿನಪತ್ರಿಕೆ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಗುರುತಿಸಿ ವರ್ಷದ ವ್ಯಕ್ತಿ ಎಂದು ಒಂದು ಲಕ್ಷ ರೂಪಾಯಿ ಬಹುಮಾನ ನೀಡುವ ಯೋಜನೆ ಪ್ರಕಟಿಸಿತ್ತು. ಆಗ ಆ ಪತ್ರಿಕೆಯ ಪ್ರಧಾನ ವರದಿಗಾರನಾಗಿದ್ದ ನಾನು ಹರೇಕಳ ಹಾಜಬ್ಬ ಅವರನ್ನು ಸಾಧಕನೆಂದು ಗುರುತಿಸಿ ಟಿಪ್ಪಣಿಯೊಂದಿಗೆ ಆಯ್ಕೆಸಮಿತಿಗೆ ಕಳುಹಿಸಿದ್ದೆ. ಹಾಜಬ್ಬರ ಅರ್ಹತೆಯನ್ನು ಸಮಿತಿ ಗುರುತಿಸಿ 2004ರ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಿತು. ಅಂದು ನಾಡಿನಾದ್ಯಂತ ಹಾಜಬ್ಬ ಸುದ್ದಿಯಾಗಿಬಿಟ್ಟರು. ಈ ಪ್ರಶಸ್ತಿಯಿಂದಾಗಿ ಜಿಲ್ಲಾಧಿಕಾರಿ ಕಚೇರಿ ಸಹಿತ ಯಾವುದೇ ಅಧಿಕಾರಿಗಳ, ಬ್ಯಾಂಕ್ ಅಧ್ಯಕ್ಷರುಗಳ ಕಚೇರಿಯ ಬಾಗಿಲು ಹಾಜಬ್ಬ ಅವರ ಪಾಲಿಗೆ ಮುಕ್ತವಾಯಿತು. ಯಾವುದೇ ಪೂರ್ವಾನುಮತಿಯಿಲ್ಲದೆ ಭೇಟಿ ಮಾಡುವ ಅವಕಾಶವನ್ನು ತಂದುಕೊಟ್ಟಿತು. ಅಂದಿನ ರಾಜ್ಯಪಾಲರು ಹಾಜಬ್ಬ ಅವರನ್ನು ರಾಜಭವನಕ್ಕೆ ಕರೆಸಿಕೊಂಡು ಸತ್ಕರಿಸಿ ಕಳುಹಿಸಿದರು. ಮುಂದೆ ಈ ಹಾಜಬ್ಬ ಅವರನ್ನು ಹಳ್ಳಿಯ ಸುತ್ತಮುತ್ತಲಿನ ಜನ ತಮ್ಮ ಸಮುದಾಯದ ಸಾಧಕನೆಂದು ಹೆಮ್ಮೆಪಟ್ಟುಕೊಂಡರು. ಪ್ರಾಥಮಿಕ ಶಾಲೆ ಪ್ರೌಢಶಾಲೆಯಾಯಿತು. ದಾನಿಗಳ ಮಹಾಪೂರವೇ ಹರಿದು ಬಂತು. ಸಿಎನ್‌ಎನ್ ಐಬಿಎನ್ ಅನಕ್ಷರಸ್ಥ ಹಾಜಬ್ಬರನ್ನು ವಿಮಾನದಲ್ಲಿ ಕರೆಸಿಕೊಂಡು ಐದು ಲಕ್ಷ ರೂಪಾಯಿ ಸಹಿತ ಪ್ರಶಸ್ತಿ ನೀಡಿ ಗೌರವಿಸಿತು. ‘ಕನ್ನಡಪ್ರಭ’ ಪತ್ರಿಕೆಯ ನಗದು ಹಣವನ್ನು ಬ್ಯಾಂಕಿನಲ್ಲಿ ಠೆವಣಿ ಇಡಬೇಕು, ನಿಮ್ಮ ಮಗಳ ಮದುವೆಗೆ ಖರ್ಚು ಮಾಡಲು ಬೇಕಾಗುತ್ತದೆ ಎಂದು ಸಲಹೆ ಕೊಟ್ಟಿದ್ದೆ, ಹಾಗೇಯೇ ಮಾಡಿದ್ದರು.

ಅವರನ್ನು ‘ಕನ್ನಡಪ್ರಭ’ ಪ್ರಶಸ್ತಿಗೆ ಆಯ್ಕೆ ಮಾಡಲು ಕಾರಣವಾದ ನನ್ನನ್ನು ನನ್ನ ಮನೆಗೆ ಬಂದು ಬೇಡವೆಂದರೂ ಕೇಳದೆ ಹಠಕ್ಕೆ ನಿಂತು ಒಂದು ವಾರ ತಿಂದರೂ ಮುಗಿಯದಷ್ಟು ಕಿತ್ತಳೆ ಹಣ್ಣು ಕೊಟ್ಟು ಅವರು ಹೇಳಿದ ಮಾತು: ‘ದೇವರು ನಿಮ್ಮನ್ನು ಸುಖ, ಸಂಪತ್ತು ಕೊಟ್ಟು ಸುಖವಾಗಿರಿಸಲಿ. ನನ್ನಂಥ ಬಡವನನ್ನು ಇಷ್ಟು ದೊಡ್ಡ ಜನ ಮಾಡಿಸಿದಿರಿ…’ ಹೀಗೆ ಹೇಳಿ ಕೈಮುಗಿದು ಹೋದರು.

ಈ ಅನಕ್ಷರಸ್ಥ ಹಾಜಬ್ಬ ಈಗ ಕುವೆಂಪು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲಿ ಪಾಠವಾಗಿದ್ದಾರೆ. ಆದರೆ ಹಾಜಬ್ಬ ಅವರ ಈ ಸಾಧನೆ, ಅವರ ಶಿಕ್ಷಣ ಪ್ರೇಮ ಕರ್ನಾಟಕ ಸರ್ಕಾರ ಅರ್ಹರನ್ನು ಹುಡುಕಿಕೊಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮಾತ್ರ ಸುಳಿದಿಲ್ಲ. ಸರ್ಕಾರದ ಪ್ರಶಸ್ತಿ ನೀಡುವ ಕ್ಷೇತ್ರಗಳಲ್ಲಿರುವ ಶಿಕ್ಷಣ ಕ್ಷೇತ್ರಕ್ಕೆ ಹಾಜಬ್ಬ ಅರ್ಹರು ಅನಿಸಿಲ್ಲ ಯಾಕೆ? ಉತ್ತರ ಅತ್ಯಂತ ಸರಳ ಅವರು ಹಳ್ಳಿಯ ಮಕ್ಕಳಿಗೆ ವಿದ್ಯೆ ಕಲಿಯಲು ಶಾಲೆ ಬೇಕೆಂದು ಅರ್ಜಿ ಹಾಕಿದ್ದರು ಹೊರತು ನಾನು ಶಾಲೆ ಮಾಡಲು ಶ್ರಮಪಟ್ಟಿದ್ದೇನೆ, ನನಗೆ ಪ್ರಶಸ್ತಿ ಕೊಡಿ ಎಂದೇನೂ ಅರ್ಜಿ ಹಾಕಿಲ್ಲವಲ್ಲಾ?

ಈಗ ತೀರ್ಮಾನ ನೀವು ಕೊಡಿ, ಹಾಜಬ್ಬ ಅವರಂಥ ಶಿಕ್ಷಣ ಪ್ರೇಮಿ ಪ್ರಶಸ್ತಿಗೆ ಅರ್ಹರಲ್ಲವೇ?