ರಾಮರಾಜ್ಯ ಮತ್ತು ಗ್ರಾಮಸ್ವರಾಜ್ಯ

– ಪ್ರಸಾದ್ ರಕ್ಷಿದಿ

ಕರ್ನಾಟಕದಲ್ಲೀಗ ರಾಮರಾಜ್ಯ ತರುವವರು ಅಧಿಕಾರಕ್ಕೆ ಬಂದು ಐದನೇ ವರ್ಷ. ರಾಮರಾಜ್ಯದವರ ಆಳ್ವಿಕೆಯಲ್ಲಿ ಗ್ರಾಮರಾಜ್ಯ ಎಲ್ಲಿಗೆ ತಲಪಿದೆ ಎಂಬುದಕ್ಕೆ ನಮ್ಮೂರೊಂದು ಸಣ್ಣ ಉದಾಹರಣೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕ್ಯಾಮನಹಳ್ಳಿ ಪಂಚಾಯತ್ ಏಳು ಗ್ರಾಮಗಳು ಸೇರಿರುವ ಒಂದು ಗ್ರೂಪ್ ಪಂಚಾಯತ್. ಮೂರು ವರ್ಷಗಳ ಹಿಂದೆ ಗ್ರಾಮ ಪಂಚಾಯತ್ ಚುನಾವಣೆ ನಡೆದಾಗ ಹದಿಮೂರು ಜನ ಸದಸ್ಯರಿರುವ ಈ ಪಂಚಾಯತಿಗೆ ಕಾಂಗ್ರೆಸ್, ಜೆಡಿಎಸ್, ಹಾಗೂ ಬಿಜೆಪಿಯಿಂದ ಸುಮಾರಾಗಿ ಸಮಾನ ಸಂಖ್ಯೆಯ ಸದಸ್ಯರು ಆರಿಸಿ ಬಂದಿದ್ದರು. ಈ ಹಿಂದೆಲ್ಲಾ ಪಂಚಾಯತ್ ಚುನಾವಣೆಯೆಂದರೆ ತಿಂಗಳುಗಟ್ಟಲೆ ಕಾಲ ಹಳ್ಳಿಗಳು ಬಿಗುವಿನಲ್ಲಿರುತ್ತಿದ್ದರಿಂದ ಈ ಬಾರಿ ನಮ್ಮೂರಿನ ಮಟ್ಟಿಗಾದರೂ ಜಗಳ ಬೇಡವೆಂದು ಊರಿನ ಹಿರಿಯರು ಹಾಗೂ ರಾಜಕೀಯ ಕಾರ್ಯಕರ್ತರೂ ಸೇರಿ ಒಮ್ಮತದಿಂದ ಅಧ್ಯಕ್ಷ-ಉಪಾಧ್ಯಕ್ಷರನ್ನು ಆರಿಸಿದೆವು. ಉನ್ನತ ಶಿಕ್ಷಣ ಪಡೆದ ನಿವೃತ್ತ ಸೈನಿಕರೊಬ್ಬರು ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿ ಬಂದಾಗ ನಾವೆಲ್ಲ ನಮ್ಮ ಗ್ರಾಮರಾಜ್ಯ ರಾಮರಾಜ್ಯವಾಗುವ ದಿನವನ್ನು ಕಾಯುತ್ತ ಕುಳಿತಿದ್ದೆವು.

ಆಕಾಶ ಕಾಣುತ್ತಿರುವ ಮೀಟಿಂಗ್ ಹಾಲ್

ನಮ್ಮ ತಾಲ್ಲೂಕಿನಲ್ಲಿ ಹೇಮಾವತಿ ನದಿಹರಿಯುವುದರಿಂದ ಅನೇಕ ಪಂಚಾಯತ್‍ಗಳಿಗೆ ನದಿಮರಳಿನ ಟೆಂಡರ್ ಹಣ ಬರುತ್ತದೆ. ಈಗ ಟೆಂಡರ್ ನಿಂತಿದ್ದರೂ ಎರಡು ವರ್ಷದ ಹಿಂದೆ ನಮ್ಮ ಪಂಚಾಯತಿಗೆ ಬಂದ ಮರಳಿನ ವರಮಾನವೇ ಸುಮಾರು ಮೂವತ್ತೇಳು ಲಕ್ಷ ರೂಪಾಯಿಗಳು! (ನಮ್ಮ ಪಂಚಾಯತ್‌ನ ಗಡಿಯಲ್ಲೇ ಹೇಮಾವತಿ ನದಿ ಹರಿಯುತ್ತದೆ.) ಇನ್ನು ರಾಜ್ಯ ಕೇಂದ್ರ ಸರ್ಕಾರಗಳ ಬೇರೆ ಬೇರೆ ಯೋಜನೆಗಳ ಮೊತ್ತ ಸೇರಿದರೆ ಕೋಟಿಯನ್ನು ದಾಟುತ್ತಿತ್ತು.

ಆ ನಂತರ ಎಲ್ಲರೂ ರಾಜ್ಯ ರಾಜಕೀಯದ ನಿತ್ಯಪ್ರಹಸನವನ್ನು ಕೇಂದ್ರದ ರಾಮಲೀಲಾವನ್ನೂ ಟಿವಿಯಲ್ಲಿ ರೋಚಕವಾಗಿ ನೋಡುತ್ತಾ ಮೈಮರೆತದ್ದರಿಂದ ಗ್ರಾಮಪಂಚಾಯತಿಯನ್ನು ಮರೆತುಬಿಟ್ಟಿದ್ದರು. ಒಂದು ವರ್ಷ ಕಳೆಯುವಷ್ಟರಲ್ಲಿ ಪಂಚಾಯತಿಯಲ್ಲಿ ಬಡವರಿಗೆ ಏನೂ ಸಿಗುತ್ತಿಲ್ಲ, ಕುಡಿಯಲು ನೀರೂ ಇಲ್ಲ, ಪಂಚಾಯತ್ ದುಡ್ಡೆಲ್ಲಾ ಖಾಲಿಯಾಗಿದೆ ಎಂಬ ದೂರು ಪ್ರಾರಂಭವಾಯಿತು. ನಮ್ಮೂರಿನ ಅತ್ಯುತ್ಸಾಹಿ ಯುವಕರೊಬ್ಬರು, ಇದಕ್ಕೆಲ್ಲ ಕೊನೆ ಹಾಡುತ್ತೇನೆಂದು ಮಾಹಿತಿ ಹಕ್ಕು ಕಾಯಿದೆ ಪ್ರಕಾರ ದಾಖಲೆಗಳನ್ನು ತೆಗೆದರು. ಅದರ ಪ್ರಕಾರ ಪಂಚಾಯಿತಿಯ ಎಲ್ಲ ಯೋಜನೆಗಳಲ್ಲೂ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೇ ಕಾಣುತ್ತಿತ್ತು. ಉದ್ಯೋಗ ಖಾತ್ರಿ ಯೋಜನೆಯಂತೂ ಅವ್ಯವಹಾರ ಖಾತ್ರಿ ಯೋಜನೆಯಾಗಿತ್ತು. ಮರಳಿನ ಹಣ ನೀರಿನಂತೆ ಇಂಗಿಹೋಗಿತ್ತು. ಅವ್ಯವಹಾರಗಳ ಬಗ್ಗೆ ಒಂದು ಪತ್ರಿಕಾ ಗೋಷ್ಟಿಯೂ ನಡೆಯಿತು. ಎಂಟು ದಿನಗಳಕಾಲ ನಿರಂತರ ಸುದ್ದಿ ಮಾಡುತ್ತೇನೆಂದು ಹೊರಟ ಸುದ್ದಿವೀರರು ಎರಡನೇ ದಿನಕ್ಕೆ ತೆಪ್ಪಗಾದರು. ತೆರೆಮರೆಯಲ್ಲಿ ರಾಜೀ ಸಂಧಾನಗಳು ನಡೆದವು. ಪತ್ರಕರ್ತರ ಪೆನ್ನಿನಲ್ಲಿ ಇಂಕು ಖಾಲಿಯಾಯಿತು. ಜಿಲ್ಲಾಪಂಚಾಯತಿಗೆ ನೀಡಿದ ದೂರು ಕಡತ ವಿಲೇವಾರಿಯಾಯಿತು. ಲೋಕಾಯುಕ್ತಕ್ಕೆ ಹೋಗುತ್ತೇನೆಂದು ಹೊರಟ ಕೆಲವರು ತಣ್ಣಗೇ ಕುಳಿತರು.

ಹಾಳುಬಿದ್ದಂತಿರುವ ಪಂಚಾಯತ್ ಕಛೇರಿ

ಅಷ್ಟರಲ್ಲಿ ರಾಜ್ಯದಲ್ಲಿ ಯಡಿಯೂರಪ್ಪನವರು ಹೋಗಿ ಸದಾನಂದಗೌಡರ ಸರ್ಕಾರ ಬಂತು. ಸಕಲೇಶಪುರದಲ್ಲಿ ಸದಾನಂದ ಗೌಡರ ಕಾರ್ಯಕ್ರಮವಿತ್ತು. ಆದಿನ ಹೇಗೋ ಮುಖ್ಯಮಂತ್ರಿಗಳ ಭೇಟಿಯ ಅವಕಾಶ ಪಡೆದ ಗ್ರಾಮಸ್ಥರು, ಪಂಚಾಯತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ದೂರು ನೀಡಿ ಎಲ್ಲ ಮಾಹಿತಿಗಳ ಕಡತವನ್ನು ಒಪ್ಪಿಸಿದರು. ಮುಖ್ಯಮಂತ್ರಿಗಳು ವೀರಾವೇಶದಿಂದ ಇಂತಹ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ, ಕೂಡಲೇ ಕಠಿಣ ಕ್ರಮ ಕೈಗೊಳ್ಳಿ ಎಂದು ಆದೇಶ ನೀಡಿ ಹೋದರು.

ಅಲ್ಲಿಂದ ಮುಂದೆ, ದೂರುನೀಡಿದವರು ಗೇಲಿಗೊಳಗಾಗಿ ನಮ್ಮ ಪಂಚಾಯತ್‌ನಲ್ಲಿ ಓಡಾಡುವುದೇ ಕಠಿಣವಾಗಿಬಿಟ್ಟತು. ಕಡತ ಎಲ್ಲಿಗೆ ಹೋಯಿತೋ ತಿಳಿಯದು.

ಈಗ ಕೆಲವು ದಿನಗಳ ಹಿಂದೆ ಮನೆಸಿಕ್ಕದಿರುವ ಬಡವನೊಬ್ಬ ಪಂಚಾಯತ್ ಸದಸ್ಯನೊಬ್ಬನಿಗೆ ವಾಚಾಮಗೋಚರವಾಗಿ ಬೈದದ್ದರಿಂದ ಅವನಿಗೆ ಅಸಾಧ್ಯ ಸಿಟ್ಟುಬಂದು ಟಿವಿಯಲ್ಲಿ ಬರುತ್ತಿದ್ದ ರೋಚಕ ಸುದ್ದಿಗಳನ್ನೆಲ್ಲ ಬದಿಗಿಟ್ಟು, ಪಂಚಾಯ್ತಿ ಕಛೇರಿಗೆ ಹೋಗಿ ತನಗೆ ತಿಳಿದಷ್ಟು ಮಾಹಿತಿ ಕಲೆಹಾಕಿದ ನಂತರ ಅದು ಹೇಗೊ ಕೆಲವು ಸದಸ್ಯರುಗಳನ್ನು ಹಿಡಿದುತಂದ. ಎಲ್ಲರೂ ಸೇರಿ ಪಂಚಾಯತ್ ಅವ್ಯವಹಾರಗಳ ತನಿಖೆಯಾಗಬೇಕೆಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರುಕೊಟ್ಟರು. ಗ್ರಾಮ ಪಂಚಾಯತಿಯ ಸದಸ್ಯರು ಹೇಳಿದಾಕ್ಷಣ ತನಿಖೆ ನಡೆಸಲು ಬರುವುದಿಲ್ಲ, ನೀವು ನಿರ್ದಿಷ್ಟವಾದ ಪ್ರಕರಣಗಳಿದ್ದರೆ ತಿಳಿಸಿ, ಎಂದು ತಾಲ್ಲೂಕು ಪಂಚಾಯತಿಯ ಖಾವಂದರು ಅಪ್ಪಣೆ ಕೊಡಿಸಿದರು. ನಂತರ ಗ್ರಾಮದ ಹಲವರು ಹಿರಿಯರೂ ಸೇರಿ ಒತ್ತಡ ತಂದದ್ದರಿಂದ, ಇಡೀ ಪಂಚಾಯತ್ ತನಿಖೆ ಅವಸರದಲ್ಲಿ ಸಾಧ್ಯವಿಲ್ಲ, ಕೆಲವು ನಿರ್ದಿಷ್ಟ ಪ್ರಕರಣಗಳ ಬಗ್ಗೆ ಮಾತ್ರ ತನಿಖೆ ನಡೆಸುವುದೆಂದು ತೀರ್ಮಾನವಾಗಿ ಒಬ್ಬ ತನಿಖಾಧಿಕಾರಿಯನ್ನು ನೇಮಿಸಿದರು.

ದೂರಿನ ತನಿಖೆ ನಡೆಯುತ್ತಿರುವದು

ನಮ್ಮ ಗ್ರಾಮ ಪಂಚಾಯತ್ ದಟ್ಟ ಮಲೆನಾಡಿನ ಪ್ರದೇಶದಲ್ಲಿರುವುದರಿಂದ ಇಲ್ಲಿ ಮನೆಗಳನ್ನೂ ಮನುಷ್ಯರನ್ನೂ ಹುಡುಕಿಯೇ ಗುರುತಿಸಬೇಕಾಗುತ್ತದೆ. ಆದ್ದರಿಂದ ಕೊನೆಗೆ ಪಂಚಾಯತ್‌ನ ಒಂದು ಗ್ರಾಮದ, ಒಂದು ವಾರ್ಡನ ಹತ್ತು ಆಶ್ರಯ ಯೋಜನೆ ಮನೆಗಳ ಬಗ್ಗೆ ಹಾಗೂ ನಿರ್ಮಲಗ್ರಾಮ ಯೋಜನೆಯ ಐವತ್ತೊಂದು ಶೌಚಾಲಯಗಳ ಬಗ್ಗೆ ಮಾತ್ರ ತನಿಖೆ ನಡೆಯಿತು. ಇವೆಲ್ಲ ಕಾಮಗಾರಿ ಪೂರ್ಣಗೊಂಡ ಬಿಲ್ ಪಾವತಿಯಾದಂತಹವುಗಳು. ತನಿಖೆ ನಡೆದಾಗ ಐವತ್ತೊಂದು ಶೌಚಾಲಯಗಳ ಪೈಕಿ ಎರಡು ಮಾತ್ರ ಅಸ್ತಿತ್ವದಲ್ಲಿ ಇದ್ದವು! ಉಳಿದ ನಲುವತ್ತೊಂಬತ್ತು ಶೌಚಾಲಯಗಳು ದಾಖಲೆಗಳಲ್ಲಿ ಮಾತ್ರ ಇದ್ದವು. ಅಷ್ಟಕ್ಕೂ ಕೃತಕ ದಾಖಲೆ ಸೃಷ್ಟಿಲಾಗಿತ್ತು. ಕಾಫಿ ಪ್ಲಾಂಟರುಗಳ ಹೆಸರಿನಲ್ಲೂ ಶೌಚಾಲಯ ಮಂಜೂರಾಗಿ, ನಕಲಿ ಸಹಿ ಬಳಸಿ ಹಣ ಪಡೆಯಲಾಗಿದೆ. ಹತ್ತು ವರ್ಷದ ಹಿಂದೆ ಸತ್ತು ಹೋಗಿರುವ ಮಹಿಳೆಯೊಬ್ಬರು ಕೆಲವು ದಿನಗಳ ಹಿಂದೆ ಸಹಿ ಮಾಡಿದ್ದಾರೆ! ಇನ್ನು ಆಶ್ರಯ ಯೋಜನೆಯ ಮನೆಗಳ ಪೈಕಿ ಹತ್ತನ್ನು ಮಾತ್ರ ಪರಿಶೀಲಿಸಿದರೆ ಹತ್ತೂ ಮನೆಗಳು ಇಲ್ಲವೇ ಇಲ್ಲ. ಒಂದೆರಡು ತಳಕಟ್ಟು ಮಾತ್ರ ಮಾಡಲಾಗಿದೆ. ದಾಖಲೆಯಲ್ಲಿ ಎಲ್ಲವೂ ಪೂರ್ಣಗೊಂಡು ಹಣ ಪಡೆಯಲಾಗಿದೆ.. ಸಿಕ್ಕಿದ ಒಂದಿಬ್ಬರು ಫಲಾನುಭವಿಗಳ ಸಹಿಯನ್ನೂ ನಕಲಿ ಮಾಡಲಾಗಿತ್ತು.

ಕೆಲವು ದಿನಗಳಿಂದ ಸರಿಯಾಗಿ ಕುಡಿಯಲು ನೀರಿಲ್ಲ. ನಲ್ಲಿಪೈಪುಗಳು ಕಿತ್ತುಹೋಗಿವೆ. ಪಂಚಾಯತ್ ಕಛೇರಿ ತಿಪ್ಪೆ ಗುಂಡಿಯಾಗಿದೆ. ಮೋಟಾರುಗಳು ಸುಟ್ಟು ಕುಳಿತಿವೆ. ಲಕ್ಷಾಂತರ ರೂ ರಿಪೇರಿ ಬಿಲ್ ಪಾವತಿಯಾಗಿದೆ. ಮನೆಯಿಲ್ಲದವರು ಪ್ಲಾಸ್ಟಿಕ್ ಗುಡಿಸಲಿನಲ್ಲೇ ಇದ್ದಾರೆ.

ಹಿಂದೆ ಗ್ರಾಮ ಪಂಚಾಯತಿಗೆ ಬರುತ್ತಿದ್ದ ಹಣ ಕಡಿಮೆಯಿತ್ತು. ಆದರೂ ಕೆಲವು ವರ್ಷಗಳಿಂದ ನಮ್ಮ ಪಂಚಾಯತ್ (ಅನೇಕ ಜಗಳಗಳಿದ್ದರೂ) ಒಳ್ಳೆಯ ಗ್ರಾಮ ಪಂಚಾಯತ್ ಎಂದು ಹೆಸರು ಗಳಿಸಿತ್ತು. ಈಗ ಜಗಳ ಕಡಿಮೆಯಾಗಿದೆ. ಹಣ ಹರಿದುಬಂದಿದೆ, ಬಂದ ಹಾಗೇ ಹರಿದು ಹೋಗಿದೆ. ಹಿರಿಯರ ಗಾದೆ ಮಾತು ನೆನಪಾಗುತ್ತಿದೆ: ಅಕ್ಕಿ ತಿನ್ನೋನ ಓಡ್ಸುದ್ರೆ ಭತ್ತ ತಿನ್ನೋನೆ ತಗಲಾಕ್ಕಂಡ.

ಅರ್ದಕ್ಕೇ ನಿಂತಿರುವ ಹೊಸ ಕಟ್ಟಡ (ಕಳಪೆ ಕಾಮಗಾರಿ)

ಈ ತನಿಖೆಯ ಫಲಶ್ರುತಿಯ ಬಗ್ಗೆಯೂ ಯಾರಿಗೂ ಅಂತಹ ಭರವಸೆಯೇನೂ ಇಲ್ಲ. ಈ ಹಿಂದೆ ಬಾವಿ ಕಾಣೆಯಾದ ಕತೆ ಕೇಳಿದ್ದೆವು ಇನ್ನು ಮುಂದೆ ಊರೇ ಕಾಣೆಯಾಗಬಹುದು. ಜನ ಟಿ.ವಿ ಮುಂದೆ ಕುಳಿತು ಅಣ್ಣಾಹಜಾರೆ-ಕೇಜ್ರಿವಾಲರ ಹೋರಾಟವನ್ನು ನೋಡಿ ಆನಂದಿಸುತ್ತಿದ್ದಾರೆ.

ಇಂದು ಒಂದು ಗ್ರಾಮಪಂಚಾಯತಿಯ ಕತೆಯಲ್ಲ — ನಿಜ ಸಂಗತಿ. ಎಲ್ಲ ಗ್ರಾಮಪಂಚಾಯತಿಗಳೂ ಹೆಚ್ಚೂ ಕಡಿಮೆ ಹೀಗೇ ಇವೆ.

2 thoughts on “ರಾಮರಾಜ್ಯ ಮತ್ತು ಗ್ರಾಮಸ್ವರಾಜ್ಯ

  1. jagadishkoppa

    ಪ್ರಿಯ ರಕ್ಷಿದಿಯವರೇ, ನಮಸ್ಕಾರ. ಇದೀಗ ತಾನೇ ಹಿಂದೂ ದಿನಪತ್ರಿಕೆಯನ್ನು ಓದುತಿದ್ದೆ. ರಾಜ್ಯದಲ್ಲಿ 31 ಸಾವಿರ ಕೋಟಿ ರೂಪಾಯಿಗಳ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ, ರಸ್ತೆ, ಚರಂಡಿ, ಅಥವಾ ಕಟ್ಟಡ ಇವುಗಳ ನಿರ್ಮಾಣದ ಗುಣಮಟ್ಟದ ಬಗ್ಗೆ ಪರೀಕ್ಷಿಸುವ ಒಂದೇ ಒಂದುತಜ್ಞರ ಸಮಿತಿ ಇಲ್ಲ. ಬೆಳಗಾವಿಯ ಸುವರ್ಣ ಸೌಧದ ನಿರ್ಮಾಣದ ವೆಚ್ಚ ಕೇವಲ ಒಂದು ವರ್ಷದಲ್ಲಿ 220 ಕೋಟಿಯಿಂದ 380 ಕೋಟಿಗೆ ಹೇಗೆ ಏರಿಕೆಯಾಯಿತು? ಏಕೆ ಏರಿಕೆಯಾಯಿತು ಎಂದು ಪ್ರಶ್ನಿಸಿಸುವರು ಇಲ್ಲ. ಇದರ ಯೋಜನಾ ಅಂದಾಜು ವೆಚ್ಚ ತಯಾರಿಸಿದವರು ಇಂಜಿನಿಯರ್ ಗಳಾ? ಅಥವಾ ದನ ಕಾಯುವ ಮಂದಿನಾ ಅಂತಾ ಕೇಳಬೇಕಿದೆ. ಇನ್ನು ಮುಂದೆ ದಿಡೀರ್ ಹಣ ಮಾಡಲು ದರೋಡೆ ಮಾಡಬೇಕಿಲ್ಲ. ಮಂತ್ರಿ ಮಂಡಲದಲ್ಲಿ ಸಚಿವನಾದರೆ, ಸಾಕು.ಅಂತಹ ಕಳ್ಳಕಾಕರ ಸರ್ಕಾರಗಳನ್ನು ನಾವು ನೋಡುತಿದ್ದೇವೆ.

    Reply
  2. ಎಚ್. ಸುಂದರ ರಾವ್

    ನಮ್ಮದು ಪ್ರಜಾಪ್ರಭುತ್ವ. ಹೇಳುವ ಕೇಳುವ ಹೊಣೆ ನಮ್ಮದೇ-ಪ್ರಜೆಗಳದೇ. ಈಗಂತೂ ಸರಕಾರ ಮಾಹಿತಿ ಹಕ್ಕನ್ನು ಕೊಟ್ಟಿದೆ. ಕೇಳುವವರ ಸಂಖ್ಯೆ ಹೆಚ್ಚಬೇಕಾಗಿದೆ ಅಷ್ಟೇ.
    ಎಚ್. ಸುಂದರ ರಾವ್

    Reply

Leave a Reply

Your email address will not be published. Required fields are marked *