Daily Archives: November 15, 2012

ಪ್ರಜಾ ಸಮರ-9 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ಆಂಧ್ರದಲ್ಲಿ ಎನ್.ಟಿ.ಆರ್. ನೇತೃತ್ವದ ತೆಲುಗು ದೇಶಂ ಸರ್ಕಾರ 1989ರ ಚುನಾವಣೆಯಲ್ಲಿ ಪತನಗೊಂಡು ಡಿಸಂಬರ್ ತಿಂಗಳಿನಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಮುಖ್ಯಮಂತ್ರಿಯಾಗಿ ಡಾ.ಎಂ. ಚೆನ್ನಾರೆಡ್ಡಿ ಅಧಿಕಾರ ವಹಿಸಿಕೊಂಡರು. ಪ್ರಜಾಸಮರಂ ಗ್ರೂಪ್ ಮೇಲೆ ತೆಲುಗು ದೇಶಂ ಸರ್ಕಾರ ಹೇರಲಾಗಿದ್ದ ನಿಷೇಧವನ್ನು ಕಾಂಗ್ರೆಸ್ ಸರ್ಕಾರ ತೆರವುಗೊಳಿಸಿತು. ಬಂಧಿಸಲಾಗಿದ್ದ ಎಲ್ಲಾ ನಾಯಕರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಯಿತು. ಇದರ ಅಂಗವಾಗಿ ವಾರಂಗಲ್ ಜಿಲ್ಲಾ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಬಹಿರಂಗ ರ್‍ಯಾಲಿಗೆ ಐದು ಲಕ್ಷ ಜನ ಸೇರುವುದರ ಮೂಲಕ ನಕ್ಸಲಿಯರ ಸಾಮರ್ಥ್ಯ ಏನೆಂಬುದನ್ನು ಸಮಾಜಕ್ಕೆ ತೋರಿಸಿಕೊಡಲಾಯಿತು. ಈ ವೇಳೆಗಾಗಲೇ ವಯಸ್ಸು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರನ್ನು ಬಸ್ತಾರ್ ಅರಣ್ಯ ಪ್ರದೇಶದ ಗುಪ್ತ ಸ್ಥಳಕ್ಕೆ ಸಾಗಿಸಿ ವಿಶ್ರಾಂತಿ ನೀಡಲಾಗಿತ್ತು.

ಇದೇ ಸಮಯಕ್ಕೆ ಸರಿಯಾಗಿ ಆಂಧ್ರದ ಪಿ.ಡಬ್ಲ್ಯು.ಜಿ. ಗುಂಪಿನ ಸದಸ್ಯರು ತಮಿಳುನಾಡಿನ ಕೆಲವು ಸದಸ್ಯರ ಮೂಲಕ ಶ್ರೀಲಂಕಾದ ಎಲ್.ಟಿ.ಟಿ.ಇ. ಗುಂಪಿನ ಜೊತೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ತಮಿಳು ಮೂಲದ ಎಲ್.ಟಿ.ಟಿ.ಇ. ಸಂಘಟನೆಯ ಸದಸ್ಯರು ಶ್ರೀಲಂಕಾದಿಂದ  ಆಂಧ್ರಕ್ಕೆ ಬಂದು ಅರಣ್ಯ ಪ್ರದೇಶದಲ್ಲಿ ಹಲವು ತಿಂಗಳು ಕಾಲ ನಕ್ಸಲಿಯರಿಗೆ ಆಧುನಿಕ ಗೆರಿಲ್ಲಾ ಯುದ್ಧ ತಂತ್ರಗಳನ್ನು ಕಲಿಸಿದರು. ಅಷ್ಟೇ ಅಲ್ಲದೇ ಕೇವಲ ಬಂದೂಕು ಮತ್ತು ಬಾಂಬ್‌‌ಗಳನ್ನು ಬಳಸುತ್ತಿದ್ದ ನಕ್ಸಲರಿಗೆ ಅತ್ಯಾಧುನಿಕ ಶಸ್ರಾಸ್ತ್ರಗಳಾದ ಏ.ಕೆ. 47 ಬಂದೂಕು, ಮಿಷಿನ್‌ಗನ್, ರಾಕೇಟ್‌ಲಾಂಚರ್‌‍ಗಳನ್ನು ಕೊಟ್ಟು ಹೋದರು. ಪಿ.ಡಬ್ಲ್ಯು.ಜಿ. ಮತ್ತು ಎಲ್.ಟಿ.ಟಿ.ಇ. ಸಂಘಟನೆಗಳ ನಡುವೆ ಶಸ್ರಾಸ್ತ್ರಗಳ ಖರೀದಿ ಒಪ್ಪಂದ ಕೂಡ ಏರ್ಪಟ್ಟಿತು.

ಕೇವಲ ಒಂದು ವರ್ಷದ ಅವಧಿಯಲ್ಲಿ, ಅಂದರೆ 1990ರಲ್ಲಿ ಡಾ. ಎಂ. ಚೆನ್ನಾರೆಡ್ಡಿಯ ಸ್ಥಾನಕ್ಕೆ ಮುಖ್ಯಮಂತ್ರಿಯಾಗಿ ಬಂದ ಎನ್. ಜನಾರ್ದನ ರೆಡ್ಡಿಯ ಆಗಮನದಿಂದಾಗಿ ಮಾವೋವಾದಿ ನಕ್ಸಲರ ಮತ್ತು ಸರ್ಕಾರದ ನಡುವೆ ಮತ್ತೆ ಸಂಘರ್ಷ ಏರ್ಪಟ್ಟಿತು. ಉಭಯ ಬಣಗಳ ಸಂಘರ್ಷ  ಮುಂದುವರೆದು, 92ರಲ್ಲಿ ಕಾಂಗ್ರೆಸ್ ಪಕ್ಷದ ಮೂರನೇ ಮುಖ್ಯಮಂತ್ರಿಯಾಗಿ ನೇಮಕಗೊಂಡ ವಿಜಯಬಾಸ್ಕರ ರೆಡ್ಡಿಯ ಕಾಲದಲ್ಲಿ ತೀವ್ರವಾಗಿ ಉಲ್ಭಣಗೊಂಡಿತು. ಇದರ ಪರಿಣಾಮವಾಗಿ ಕಾಂಗ್ರೆಸ್ ಸರ್ಕಾರ ಕೂಡ ಆಂಧ್ರ ಪ್ರದೇಶದಲ್ಲಿ ಎಲ್ಲಾ ನಕ್ಸಲ್ ಸಂಘಟನೆಗಳ ಮೇಲೆ ನಿಷೇಧವನ್ನು  ಜಾರಿ ಮಾಡಿತು.

1995ರಲ್ಲಿ ನಡೆದ ಚುಣಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಎನ್.ಟಿ.ಆರ್. ಮತ್ತೇ ಅಧಿಕಾರಕ್ಕೆ ಬಂದರು. ಆದರೆ ಅವರ ಅವಧಿ ಕೆಲವೇ ದಿನಗಳಿಗೆ ಸೀಮಿತವಾಗಿತ್ತು. ಏಕೆಂದರೆ, ಎನ್.ಟಿ.ಆರ್. ತಮ್ಮ ವೃದ್ಧಾಪ್ಯದಲ್ಲಿ ಶಿವಪಾರ್ವತಿ ಎಂಬ ಹೆಸರಿನ ಹರಿಕಥೆ ಮಾಡುತ್ತಿದ್ದ ಮಧ್ಯ ವಯಸ್ಸಿನ ಹೆಣ್ಣುಮಗಳನ್ನು ಮೋಹಿಸಿ ವಿವಾಹವಾದ ಕಾರಣಕ್ಕಾಗಿ ಕುಟುಂಬದ ಸದಸ್ಯರಿಂದ ಮತ್ತು ಪಕ್ಷದ ಶಾಸಕರಿಂದ ತಿರಸ್ಕೃತಗೊಂಡರು. ಕ್ಷಿಪ್ರಗತಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಎನ್.ಟಿ.ಆರ್. ಸ್ಥಾನಕ್ಕೆ ಅವರ ಅಳಿಯ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಬಂದರು. ನಾಯ್ಡು ಕೂಡ 1996ರ ಜುಲೈ ತಿಂಗಳಿನಲ್ಲಿ ಪ್ರಜಾ ಸಮರಂ ಮತ್ತು ಅದರ ಎಲ್ಲಾ ಅಂಗಸಂಸ್ಥೆಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಿ, ಕಾರ್ಯಕರ್ತರನ್ನು ಬಂಧಿಸಲು ಸೂಚಿಸಿದರು. ಇದರಿಂದ ಕೆರಳಿದ ನಕ್ಸಲರು ನಾಯ್ಡು ಹತ್ಯೆಗೆ ಸಂಚು ರೂಪಿಸಿದರು. 1998 ರಲ್ಲಿ ಕರೀಂನಗರ ಜಿಲ್ಲೆಯೊಂದರಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವ ಸಂದರ್ಭದಲ್ಲಿ ಸ್ಪೋಟಕಗಳನ್ನು ಇಡಲಾಗಿದ್ದ ಎತ್ತಿನ ಗಾಡಿಯೊಂದನ್ನು ರಸ್ತೆ ಬದಿ ನಿಲ್ಲಿಸಿ  ನಾಯ್ಡ ಅವರ ಕಾರು ಹಾಯ್ದು ಹೋಗುವಾಗ ಸ್ಪೋಟಿಸಲು ನಕ್ಸಲರು ಯೋಜನೆ ರೂಪಿಸಿದ್ದರು. ಆದರೆ, ಪೊಲೀಸರ ಮುಂಜಾಗ್ರತಾ ಕ್ರಮದಿಂದ ಬಾಂಬುಗಳು ಪತ್ತೆಯಾದ ಕಾರಣ ಆ ದಿನ ಚಂದ್ರಬಾಬು ನಾಯ್ಡುರವರ ಪ್ರಾಣ ಉಳಿಯಿತು.

ಪ್ರಜಾಸಮರ ದಳ ತನ್ನ ಕಾರ್ಯ ಚಟುವಟಿಕೆಯನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಪೀಪಲ್ಸ್ ಆರ್ಮಿ ಗ್ರೂಪ್ (ಪಿ.ಜಿ.ಎ.) ಎಂಬ ಇನ್ನೊಂದು ಹೋರಾಟದ ಪಡೆಯನ್ನು 2000ದ ಡಿಸಂಬರ್ ತಿಂಗಳಿನಲ್ಲಿ ಹುಟ್ಟುಹಾಕಿತು. ಇದಕ್ಕೆ ಶ್ರೀಲಂಕಾದ ಎಲ್.ಟಿ.ಟಿ. ಸಂಘಟನೆಯ ಕಾರ್ಯಯೋಜನೆ ಪರೋಕ್ಷವಾಗಿ ಪ್ರೇರಣೆಯಾಗಿತ್ತು. ಈ ಬೆಳವಣಿಗೆಯಿಂದ ವಿಚಲಿತಗೊಂಡ ನಾಯ್ಡು ಆಂಧ್ರ ಪ್ರದೇಶದಲ್ಲಿ ನಕ್ಸಲರ ಚಟುವಟಿಕೆಯನ್ನು ಬುಡಸಮೇತ ಕಿತ್ತೊಗೆಯಬೇಕೆಂದು ನಿರ್ಧರಿಸಿದರು. ಈ ಕಾರಣಕ್ಕಾಗಿ ಆಂಧ್ರ ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿದರು. ಇಂತಹ ಅವಕಾಶಕ್ಕಾಗಿ ಕಾಯುತ್ತಿದ್ದ ಪೊಲೀಸರು ನಕ್ಸಲ್ ನಾಯಕರನ್ನು ನಿರಂತರ ಬೇಟೆಯಾಡಿ ಕೊಂದರು. ಪೊಲೀಸರ ಈ ಆಕ್ರೋಶಕ್ಕೆ ಒಂದು ಬಲವಾದ ಕಾರಣವಿತ್ತು.

1989ರಲ್ಲಿ ನಕ್ಸಲ್ ಚಟುವಟಿಕೆಯ ನಿಗ್ರಹಕ್ಕೆ ಆಂಧ್ರ ಸರ್ಕಾರ ವಿಶೇಷ ಪಡೆಯೊಂದನ್ನು ರೂಪಿಸಿ, ಅದರ ನೇತೃತ್ವವನ್ನು ಹಿರಿಯ ಪೊಲೀಸ್ ಅಧಿಕಾರಿ ಕೆ.ಎಸ್.ವ್ಯಾಸ್ ಅವರಿಗೆ ವಹಿಸಿತ್ತು. ರಾಷ್ಟ್ರೀಯ ಭದ್ರತಾ ಕಮಾಂಡೋ ಪಡೆಯ ಮಾದರಿಯಲ್ಲಿ ಪೊಲೀಸರನ್ನು ತಯಾರು ಮಾಡಲು ವ್ಯಾಸ್ ಅವರು ಅರಣ್ಯದ ಮಧ್ಯೆ ತರಬೇತಿ ಶಿಬಿರ ಆರಂಭಿಸಿ, ಮಿಲಿಟರಿ ಅಧಿಕಾರಿಗಳ ಮೂಲಕ ಆಂಧ್ರ ಪೊಲೀಸರಿಗೆ ತರಬೇತಿ ನೀಡಲು ಪ್ರಾರಂಭಿಸಿದರು. ಈ ತರಬೇತಿ ಮತ್ತು ನಕ್ಸಲ್ ನಿಗ್ರಹ ಪಡೆ ಸೇರುವ ಪೊಲೀಸರಿಗೆ ತಮ್ಮ ವೇತನದ ಶೇ. 60 ರಷ್ಟು ಹೆಚ್ಚು ವೇತನ ನೀಡುವುದಾಗಿ ಆಂಧ್ರ ಸರ್ಕಾರ ಘೋಷಿಸಿತು.

ಆಂಧ್ರ ಸರ್ಕಾರದ ಈ ಯೋಜನೆಗೆ ಹಿಂಸೆಯ ಮೂಲಕ ಪ್ರತಿಕ್ರಿಯಿಸಿದ ನಕ್ಸಲರು 2001ರಲ್ಲಿ ಚಿತ್ತೂರು ಬಳಿ ಚಂದ್ರಬಾಬು ನಾಯ್ಡು ಮಾಲಿಕತ್ವದ ಹೆರಿಟೇಜ್ ಹಾಲು ಉತ್ಪಾದನಾ ಘಟಕದ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡಿದರು. ಇದಲ್ಲದೆ ಚಿತ್ತೂರು ಕೈಗಾರಿಕಾ ವಲಯದಲ್ಲಿ ಇರುವ ಟಾಟಾ ಟೀ ಕಂಪನಿ ಮತ್ತು ಕೋಕಾಕೋಲಾ ಕಂಪನಿಯ ಮೇಲೆ ದಾಳಿ ನಡೆಸಿದರು. ಕೇಂದ್ರ ಸಚಿವರೊಬ್ಬರ ಗ್ರಾನೈಟ್ ಉದ್ದಿಮೆಯ ಘಟಕವನ್ನೂ ಸಹ ನಾಶಪಡಿಸಿದರು. ಈ ಸಂದರ್ಭದಲ್ಲಿ ವಿಚಲಿತಗೊಂಡ ಆಂಧ್ರ ಸರ್ಕಾರ ನಕ್ಸಲರನ್ನು ಮಾತುಕತೆಗೆ ಆಹ್ವಾನಿಸಿತು. 2002 ರ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸತತವಾಗಿ ನಡೆದ ಮೂರು ಸುತ್ತಿನ ಮಾತುಕತೆಗಳು ವಿಫಲವಾದವು. ಕೇಂದ್ರ ಸರ್ಕಾರ ಕೂಡ 2003ರ ಫೆಬ್ರವರಿ 8ರಂದು ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸುಧೀರ್ಘವಾಗಿ ಚರ್ಚಿಸಿತು. ನಕ್ಸಲರ ಪ್ರಭಾವವನ್ನು ಕುಗ್ಗಿಸುವ ನಿಟ್ಟಿನಲ್ಲಿ ನಕ್ಸಲ್ ಪೀಡಿತ ರಾಜ್ಯಗಳ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಪ್ರತಿ ವರ್ಷ 15 ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವುದಾಗಿ ಘೋಷಿಸಿತು.

ತಮ್ಮ ಪ್ರತಿರೋಧವನ್ನು ತೀವ್ರಗೊಳಿಸಿದ ನಕ್ಸಲ್ ಕಾರ್ಯಕರ್ತರು 2003ರ ಮಾರ್ಚ್ 23ರಂದು ಅನಂತಪುರದ ಬಳಿ ಇರುವ ತಂಪು ಪಾನೀಯ ತಯಾರಿಕೆಯಲ್ಲಿ ದೈತ್ಯ ಬಹುರಾಷ್ಟ್ರೀಯ ಕಂಪನಿಯಾದ ಪೆಪ್ಸಿ ಘಟಕದ ಮೇಲೆ ದಾಳಿ ಮಾಡಿದರು. ಮೇ 28ರಂದು ರಾಯಾವರಂ ಎಂಬ ಗ್ರಾಮದಲ್ಲಿ ದೂರವಾಣಿ ಕೇಂದ್ರವನ್ನು ಧ್ವಂಸಗೊಳಿಸಿದರು. ಜುಲೈ ನಾಲ್ಕರಂದು ನಲ್ಗೊಂಡ ಜಿಲ್ಲೆಯ ದೊಂಡಪಡು ಎಂಬ ಗ್ರಾಮದಲ್ಲಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೇಲೆ ದಾಳಿ ನಾಲ್ಕು ಲಕ್ಷ ರೂ ನಗದು ಮತ್ತು ಐವತ್ತು ಲಕ್ಷ ರೂಪಾಯಿ ಮೌಲ್ಯದ ಒಂಬತ್ತು ಕೆ.ಜಿ. ಚಿನ್ನವನ್ನು ದೋಚುವುದರ ಮೂಲಕ ನಕ್ಸಲ್ ಹೋರಾಟ ರಾಯಲಸೀಮಾ (ಕಡಪ,  ಕರ್ನೂಲು, ಅನಂತಪುರ, ಚಿತ್ತೂರು ಜಿಲ್ಲೆಗಳು) ಪ್ರದೇಶಕ್ಕೂ ಕಾಲಿಟ್ಟಿದೆ ಎಂಬ ಸಂದೇಶವನ್ನು ಆಂಧ್ರ ಸರ್ಕಾರಕ್ಕೆ ರವಾನಿಸಿದರು. ಇದೂ ಸಾಲದೆಂಬಂತೆ ಪೊಲೀಸ್ ಅಧಿಕಾರಿ ವ್ಯಾಸ್ ಅವರನ್ನು ತಮ್ಮ ಹಿಟ್ ಲಿಸ್ಟ್‌‌ನಲ್ಲಿ ದಾಖಲಿಸಿಕೊಂಡಿದ್ದ ನಕ್ಸಲರು 1993ರಲ್ಲಿ ಹೈದರಾಬಾದ್ ನಗರದ ಅವರ ನಿವಾಸದ ಮುಂದಿ ಕೈತೋಟದಲ್ಲಿ ಬೆಳಗಿನ ಜಾವ ವ್ಯಾಯಾಮ ಮಾಡುತ್ತಿದ್ದ ಸಮಯದಲ್ಲಿ ಹತ್ಯೆ ಮಾಡಿದರು.

ಇವುಗಳಿಗೆ ತೃಪ್ತರಾಗದ ಪ್ರಜಾಸೈನ್ಯ ದಳ (ಪಿ.ಜಿ.ಎ.) ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹತ್ಯೆಗೆ ಮತ್ತೇ ಯೋಜನೆ ರೂಪಿಸಿತು. 1993 ರ ಅಕ್ಟೋಬರ್ ತಿಂಗಳಿನಲ್ಲಿ ನಾಯ್ಡು ತಿರುಪತಿಗೆ ಭೇಟಿ ನೀಡುವ ಸಮಯದಲ್ಲಿ ರಸ್ತೆಯಲ್ಲಿ ನೆಲಬಾಂಬ್ ಇರಿಸಿ ಕೊಲ್ಲಲು ಪ್ರಯತ್ನಿಸಲಾಯಿತು. ತಿರುಮಲ ಬೆಟ್ಟಕ್ಕೆ ಹೋಗುವ ಹಾದಿಯಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಬಾಂಬ್ ಅನ್ನು ಸ್ಪೋಟಿಸಲಾಯಿತಾದರೂ, ನಾಯ್ಡು ಪ್ರಯಾಣಿಸುತ್ತಿದ್ದ ಕಾರಿನ ಮುಂದಿನ ಚಕ್ರ ಮುಂದೆ ಸಾಗಿ, ಕಾರಿನ ಹಿಂದಿನ ಚಕ್ರದ ಬಳಿ ಬಾಂಬ್ ಸಿಡಿಯಿತು. ಮುಂದಿನ ಆಸನದಲ್ಲಿ ಕುಳಿತ್ತಿದ್ದ ನಾಯ್ಡು ಪ್ರಾಣಪಾಯದಿಂದ ಪಾರಾದರೂ ಕೂಡ ಅವರ ಭುಜಕ್ಕೆ ಬಲವಾದ ಪೆಟ್ಟು ಬಿದ್ದು ಪ್ರಜ್ಞಾಹೀನರಾದರು. ವೆಂಕಟೇಶ್ವರನ ದಯೆಯಿಂದ ಉಳಿದುಕೊಂಡೆ ಎಂದು ಹೇಳಿದ ಚಂದ್ರಬಾಬು ನಾಯ್ಡುಗೆ ಆಂಧ್ರದಲ್ಲಿ ನಕ್ಸಲಿಯರ ಬಗ್ಗೆ ಎಷ್ಟೊಂದು ಜೀವಭಯವಿದೆ ಎಂದರೆ, ಇವತ್ತಿಗೂ ಅವರು ಗೋದಾವರಿ ನದಿ ದಾಟಿ ಉತ್ತರ ತೆಲಂಗಾಣ ಪ್ರಾಂತ್ಯದ ಜಿಲ್ಲೆಗಳಿಗೆ ಹೋಗಲು ಹೆದರುತ್ತಾರೆ. ಯಾವುದೇ ಸಾರ್ವಜನಿಕ ಸಭೆಗಳಲ್ಲಿ ಅವರು ಭಾಗವಹಿಸುವುದಿಲ್ಲ. ಈ ಘಟನೆ ನಡೆದ ಒಂಬತ್ತು ವರ್ಷದ ನಂತರವೂ ಕೂಡ ನಕ್ಸಲರ ಹಿಟ್ ಲಿಸ್ಟ್‌ನಲ್ಲಿ ಚಂದ್ರಬಾಬು ನಾಯ್ಡು ಎಂಬ ಹೆಸರು ಮೊದಲನೇ ಸ್ಥಾನದಲ್ಲಿದೆ. ಏಕೆಂದರೆ, ನಾಯ್ಡು ಹತ್ಯೆಗೆ ಸಂಚು ರೂಪಿಸಿದ್ದ ಹಿರಿಯ ಮಾವೋವಾದಿ ನಾಯಕ ಸಂಡೆ ರಾಜಮೌಳಿಯನ್ನು 2007ರಲ್ಲಿ ಬಂಧಿಸದ ಆಂಧ್ರ ಪೊಲೀಸರು ಎನ್‌‍ಕೌಂಟರ್ ಮೂಲಕ ಮುಗಿಸಿದರು. ಈ ನಾಯಕನ ಸುಳಿವಿಗಾಗಿ ಆಂಧ್ರ ಸರ್ಕಾರ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.

ಆಂಧ್ರದಲ್ಲಿ ಪ್ರಜಾಸಮರಂ ಮತ್ತು ಅದರ ಅಂಗ ಘಟಕಗಳಿಂದ ತೀವ್ರತರವಾದ ಹಿಂಸಾತ್ಮಕ ಚಟುವಟಿಕೆ ನಡೆಯಲು ಅದರ ಸಂಸ್ಥಾಪಕ ಕೊಂಡಪಲ್ಲಿ ಸೀತಾರಾಮಯ್ಯನವರ ಅನುಪಸ್ಥಿತಿ ಕೂಡ ಪರೋಕ್ಷವಾಗಿ ಕಾರಣವಾಯಿತು. ಈ ನಡುವೆ ಕೊಂಡಪಲ್ಲಿಯವರ ವಿಚಾರಗಳಿಗೆ ಒಪ್ಪದ ಬಿಸಿರಕ್ತದ ಯುವ ನಾಯಕರು ಕೊಂಡಪಲ್ಲಿ ಅವರನ್ನು 1991ರಲ್ಲಿ ಸಂಘಟನೆಯಿಂದ ಹೊರಹಾಕಿದರು. ತನ್ನ ಒಡನಾಡಿ ಕೆ.ಜಿ. ಸತ್ಯಮೂರ್ತಿಯವರನ್ನು ಸೈದ್ಧಾಂತಿಕ ಭಿನ್ನಾಭಿಪ್ರಯಾದ ಮೇಲೆ ಹೊರಹಾಕಿದ್ದ ಕೋಡಪಲ್ಲಿ ಅದೇ ರೀತಿಯಲ್ಲಿ ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಯಿಂದ ವೃದ್ಧಾಪ್ಯದಲ್ಲಿ ಹೊರದಬ್ಬಿಸಿಕೊಂಡರು. ಪಾರ್ಕಿಸನ್ ಕಾಯಿಲೆಗೆ ತುತ್ತಾಗಿದ್ದ ಅವರು 1992ರಲ್ಲಿ ತಮ್ಮೂರಾದ ಜೊನ್ನಪಡು ಗ್ರಾಮದ ಮನೆಯಲ್ಲಿದ್ದಾಗ ಆಂಧ್ರ ಪೊಲೀಸರಿಂದ ಬಂಧಿತರಾದರು. ನಾಲ್ಕು ವರ್ಷಗಳ ನಂತರ ಆಂಧ್ರ ಸರ್ಕಾರ ವೃದ್ಧಾಪ್ಯದ ಹಿನ್ನಲೆ ಮತ್ತು ಮಾನವೀಯ ನೆಲೆಯಲ್ಲಿ ಅವರ ಮೇಲಿನ ಎಲ್ಲಾ ಮೊಕದ್ದಮೆಗಳನ್ನು ರದ್ದು ಪಡಿಸಿ ಬಿಡುಗಡೆ ಮಾಡಿತು. 2002ರ ಏಪ್ರಿಲ್ ತಿಂಗಳಿನ 12 ರಂದು ತಮ್ಮ 87 ನೇ ವಯಸ್ಸಿನಲ್ಲಿ ವಿಜಯವಾಡದ ತಮ್ಮ ಮೊಮ್ಮಗಳ ಮನೆಯಲ್ಲಿ ಕೊಂಡಪಲ್ಲಿ ಸೀತಾರಾಮಯ್ಯ ನಿಧನರಾದರು. ಹತ್ತು ವರ್ಷಗಳ ನಂತರ 2012ರ ಅದೇ ಏಪ್ರಿಲ್ 8 ರಂದು ಅವರ ಒಡನಾಡಿ ಕೆ.ಜಿ.ಸತ್ಯಮೂರ್ತಿ ಸಹ ವಿಜಯವಾಡದ ಸಮೀಪದ ಹಳ್ಳಿಯಲ್ಲಿ ಲಾರಿ ಚಾಲಕನಾಗಿದ್ದ ಅವರ ಕಿರಿಯ ಮಗನ ಮನೆಯಲ್ಲಿದ್ದಾಗ 84 ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಮೃತಪಟ್ಟರು. ಇದೇ 2012ರ ಏಪ್ರಿಲ್ ಕೊನೆಯ ವಾರ ಹೈದರಾಬಾದ್ ನಗರದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಯನ್ನು ಹುಟ್ಟು ಹಾಕಿದ ಇಬ್ಬರು ಮಹಾನ್ ನಾಯಕರ ನೆನಪಿಗೆ ಯಾವುದೇ ಭಾಷಣಗಳಿಲ್ಲದೆ, ಹೋರಾಟದ ಕ್ರಾಂತಿ ಗೀತೆಗಳನ್ನು ಹಾಡುವುದರ ಮೂಲಕ ಗೌರವ ಸಮರ್ಪಿಸಿದರು.

ಆಂಧ್ರ ಪ್ರದೇಶದಲ್ಲಿ 2003ರ ವೇಳೆಗೆ, 23 ವರ್ಷಗಳ ಅವಧಿಯಲ್ಲಿ (1980-2003) ಸರ್ಕಾರ ಮತ್ತು ನಕ್ಸಲಿಯರ ನಡುವೆ ನಡೆದ ಸಂಘರ್ಷದಲ್ಲಿ 6 ಸಾವಿರ ಮಂದಿ ಮೃತಪಟ್ಟಿದ್ದರು. ಇದರಲ್ಲಿ ಆಂಧ್ರ ಪೊಲೀಸರು ಎನ್‌ಕೌಂಟರ್ ಹೆಸರಿನಲ್ಲಿ 1800 ನಕ್ಸಲ್ ನಾಯಕರನ್ನು ಹತ್ಯೆಗೈಯ್ದಿದ್ದರು. ಅಲ್ಲದೇ ನಕ್ಸಲರ ಗುಂಡಿಗೆ 1100ಕ್ಕು ಹೆಚ್ಚು ಪೊಲೀಸರು ಬಲಿಯಾಗಿದ್ದರು. ಚಂದ್ರಬಾಬು ನಾಯ್ಡು ಅವಧಿಯಲ್ಲಿ ಅತಿ ಹೆಚ್ಚು ಎನ್‌‍ಕೌಂಟರ್‌ಗಳು ಜರುಗಿದ್ದವು. ಈ ನಡುವೆ ನಕ್ಸಲ್ ಸಂಘಟನೆಯಲ್ಲಿ ಮಹತ್ತರ ಬೆಳವಣಿಗೆಯೊಂದು ಜರುಗಿತು. ಎಂ.ಸಿ.ಸಿ. (ಮಾವೋ ಕಮ್ಯೂನಿಷ್ಟ್ ಸೆಂಟರ್) ಎಂದು ಪ್ರತ್ಯೇಕ ಗೊಂಡಿದ್ದ ಬಣ ಪೀಪಲ್ಸ್ ವಾರ್ ಗ್ರೂಪ್ ಜೊತೆ 2004ರಲ್ಲಿ ಸೇರ್ಪಡೆಗೊಂಡಿತು. ಇದರಿಂದಾಗಿ ಮಧ್ಯಭಾರತ ಮತ್ತು ಪೂರ್ವ ಭಾಗದ ರಾಜ್ಯಗಳ ಮೇಲೆ ಪೀಪಲ್ಸ್ ವಾರ್ ಗ್ರೂಪ್ ಬಣದ ಪ್ರಾಬಲ್ಯ ಮತ್ತಷ್ಟು ಹೆಚ್ಚಾಯಿತು.

2004ರಲ್ಲಿ ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಸರ್ಕಾರ ಪತನಗೊಂಡು, ಡಾ.ವೈ.ಎಸ್. ರಾಜಶೇಖರರೆಡ್ಡಿ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತು. ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾದ ಕೂಡಲೇ ಆಂಧ್ರದ ನಕ್ಸಲ್ ಸಂಘಟನೆಗಳ ಮೇಲಿದ್ದ ನಿಷೇಧವನ್ನು ತೆಗೆದು ಹಾಕಿದರು. ಎಲ್ಲಾ ಸಂಘಟನೆಯ ನಾಯಕರನ್ನು ಮಾತುಕತೆಗೆ ಆಹ್ವಾನಿಸಿದರು. 2004ರ ಅಕ್ಟೋಬರ್ 15 ರಿಂದ 18 ರವರೆಗೆ ಹೈದರಾಬಾದ್ ನಗರದಲ್ಲಿ ನಡೆದ ಮಾತುಕತೆಯಲ್ಲಿ ಪೀಪಲ್ಸ್ ವಾರ್ ಗ್ರೂಪ್‌‍ನ ಕಾರ್ಯದರ್ಶಿ ರಾಮಕೃಷ್ಣ ಅಲಿಯಾಸ್ ಅಕ್ಕಿರಾಜು ಮತ್ತು ಆಂಧ್ರ-ಒರಿಸ್ಸಾ ಗಡಿಭಾಗದ ಹೊಣೆಹೊತ್ತಿದ್ದ ಸುಧಾಕರ್ ಮತ್ತು ಉತ್ತರ ತೆಲಂಗಾಣ ಭಾಗದಿಂದ ಜಿ.ರವಿ ಹಾಗೂ ಜನಶಕ್ತಿ ಸಂಘಟನೆಯ ನಾಯಕರಾದ ಅಮರ್ ಮತ್ತು ರಿಯಾಜ್ ಸೇರಿದಂತೆ ಹಲವು ಪ್ರಮುಖರು ಮಾತುಕತೆಯಲ್ಲಿ ಪಾಲ್ಗೊಂಡರು. ಆಂಧ್ರ ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾದ ನಂತರ ನಾಗರೀಕ ಹಕ್ಕುಗಳ ರಕ್ಷಣೆಗಾಗಿ ಹೋರಾಡುತ್ತಿದ್ದ ಎಸ್.ಆರ್. ಶಂಕರನ್ ಉಭಯ ಬಣಗಳ ನಡುವೆ ಮಧ್ಯಸ್ತಿಕೆ ವಹಿಸಿದ್ದರು. ನಕ್ಸಲ್ ಸಂಘಟನೆಗಳ ನಾಯಕರು ಸರ್ಕಾರದ ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಇರಿಸಿದರು.

ಅವುಗಳೆಂದರೆ:

  1. ಸರ್ಕಾರ ಸ್ವತಂತ್ರ ಆಯೋಗವನ್ನು ರಚಿಸಿ ಸರ್ಕಾರಿ ಭೂಮಿಯನ್ನು ಗುರುತಿಸಬೇಕು.
  2. ಈ ಭೂಮಿಯನ್ನು ಆದಿವಾಸಿಗಳಿಗೆ ಮತ್ತು ಭೂರಹಿತ ಕೃಷಿಕೂಲಿಕಾರ್ಮಿಕರಿಗೆ ಹಂಚಬೇಕು.
  3. ಆಂಧ್ರ ಪ್ರದೇಶದಲ್ಲಿ ವಿಶ್ವಬ್ಯಾಂಕ್ ನೆರವಿನಿಂದ ನಡೆಯುತ್ತಿರುವ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸಬೇಕು.

ಈ ಬೇಡಿಕೆಗಳನ್ನು ಆಲಿಸಿದ  ಸರ್ಕಾರ ತಕ್ಷಣಕ್ಕೆ ಯಾವುದೇ ಆಶ್ವಾಸನೆ ನೀಡದೇ ಬೇಡಿಕೆಗಳ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸಿ ತೀರ್ಮಾನ ಕೈಗೊಳ್ಳುವುದಾಗಿ  ತಿಳಿಸಿತು. ಶಾಂತಿ ಮಾತುಕತೆಗಾಗಿ ಮೂರು ತಿಂಗಳ ಕಾಲ ಘೋಷಿಸಲಾಗಿದ್ದ ಕದನ ವಿರಾಮ ಮುಕ್ತಾಯದ ಹಂತಕ್ಕೆ ಬಂದರೂ ಕೂಡ ಆಂಧ್ರ ಸರ್ಕಾರದಿಂದ ನಕ್ಸಲರ ಯಾವುದೇ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಮಾತುಕತೆ ವಿಫಲವಾಯಿತು. ಆದರೆ, ಇದರಿಂದ ಆಂಧ್ರ ಪೊಲೀಸರಿಗೆ ಮಾತ್ರ ಉಪಯೋಗವಾಗಿತ್ತು. ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ ಹಲವಾರು ನಾಯಕರ ಭಾವಚಿತ್ರಗಳನ್ನ ಈ ಸಂದರ್ಭದಲ್ಲಿ ಸೆರೆ ಹಿಡಿದರು.

ಸರ್ಕಾರದೊಂದಿಗೆ ಮಾತುಕತೆ ವಿಫಲಗೊಂಡ ನಂತರ 2004ರ ಡಿಸಂಬರ್ ತಿಂಗಳಿನಲ್ಲಿ ಹೈದರಾಬಾದ್ ಸಮೀಪದ ಘಾಟ್‌ಶೇಖರ್ ಎಂಬ ಪಟ್ಟಣದ ಬಳಿ ಆಂಧ್ರ ಸರ್ಕಾರದ ಪಂಚಾಯತ್ ಖಾತೆ ಸಚಿವ ಎ. ಮಾಧವರೆಡ್ಡಿ ನಕ್ಸಲರ ಬಾಂಬ್ ಸ್ಪೋಟಕ್ಕೆ ಬಲಿಯಾಗಬೇಕಾಯಿತು. ನಂತರ 2005ರ ಮಾರ್ಚ್ 11ರಂದು ಗುಂಟೂರು ಜಿಲ್ಲೆಯ ಚಿಲ್ಕುರಿಪೇಟ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ ನಕ್ಸಲಿಯರು ಏಳು ಮಂದಿ ಪೊಲೀಸರ ಹತ್ಯೆಗೆ ಕಾರಣರಾದರು. ಇದಕ್ಕೆ ಪ್ರತಿಯಾಗಿ ಆಂಧ್ರ ಪೊಲೀಸರು 2005 ರ ಏಪ್ರಿಲ್ 5 ರಂದು ಜನಶಕ್ತಿ ಸಂಘಟನೆಯ ನಾಯಕ ರಿಯಾಜ್‌‍ನನ್ನು ಎನ್‌ಕೌಂಟರ್ ಮೂಲಕ ಮುಗಿಸಿದರು. ಇದರಿಂದ ರೊಚ್ಚಿಗೆದ್ದ ನಕ್ಸಲ್ ಸಂಘಟನೆಗಳು ಎನ್‌ಕೌಂಟರ್‌ಗೆ ಪ್ರತಿಯಾಗಿ 2005ರ ಆಗಸ್ಟ್ 15ರಂದು ಮೆಹಬೂಬ್ ನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ ನರಸರೆಡ್ಡಿ ಸೇರಿದಂತೆ ಎಂಟು ಮಂದಿ ಕಾಂಗ್ರೇಸ್ ಕಾರ್ಯಕರ್ತರನ್ನು ಹತ್ಯೆಮಾಡಿದರು. ಅಂತಿಮವಾಗಿ 2005ರ ಆಗಸ್ಟ್ 17ರಂದು ಆಂಧ್ರಾದ್ಯಂತ ಪೀಪಲ್ಸ್ ವಾರ್ ಗ್ರೂಪ್ ಸೇರಿದಂತೆ ಎಲ್ಲಾ ಸಂಘಟನೆಗಳ ಮೇಲೆ ಮತ್ತೇ ನಿಷೇಧ ಹೇರಲಾಯಿತು. ಮತ್ತೇ ಎರಡನೇ ಬಾರಿ ಆಂಧ್ರದಲ್ಲಿ ಅಧಿಕಾರದ ಗದ್ದುಗೆಯೇರಿದ ಡಾ. ರಾಜಶೇಖರ್ ರೆಡ್ಡಿ ನಂತರದ ಕೆಲವೇ ದಿನಗಳಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟರು. ಇದರಿಂದಾಗಿ ಸರ್ಕಾರ ಮತ್ತು ನಕ್ಸಲರ ನಡುವಿನ ಸಂಧಾನದ ಬಾಗಿಲು ಮುಚ್ಚಿ ಹೊಯಿತು.

ಈ ನಡುವೆ ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಪ್ರತ್ಯೇಕ ತೆಲಂಗಣಾ ರಾಜ್ಯಕ್ಕೆ ಹೋರಾಟ ತೀವ್ರಗೊಂಡಿದ್ದರಿಂದ ಇಡೀ ರಾಜ್ಯದ ಎಲ್ಲಾ ಜನತೆಯ ಗಮನ ಅತ್ತ ಹರಿಯಿತು. ಇತ್ತೀಚೆಗೆ ಆಂಧ್ರದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಸಂಘರ್ಷ ಕಡಿಮೆಯಾಗಿದ್ದು, ಅಘೋಷಿತ ಕದನ ವಿರಾಮ ಏರ್ಪಟ್ಟಂತೆ ಕಾಣಬರುತ್ತಿದೆ. ನಕ್ಸಲ್ ಸಂಘಟನೆಯ ನಾಯಕರು ತೆಲಂಗಣಾ ಹೋರಾಟಕ್ಕೆ ಬೆಂಬಲ ಸೂಚಿಸಿ ತಮ್ಮ ಕಾರ್ಯಚಟುವಟಿಕೆಯನ್ನು ಮಧ್ಯಪ್ರದೇಶ, ಛತ್ತೀಸ್‌ಘಡ ನಡುವಿನ ದಂಡಕಾರಣ್ಯ ಮತ್ತು ಬಸ್ತಾರ್ ಅರಣ್ಯ ಪ್ರದೇಶದ ಆದಿವಾಸಿಗಳಿಗೆ ಮೀಸಲಿರಿಸಿದ್ದಾರೆ. ಆಂಧ್ರದ ಕರೀಂನಗರ, ನಲ್ಗೊಂಡ, ವಾರಂಗಲ್. ಶ್ರೀಕಾಕುಳಂ, ಅದಿಲಾಬಾದ್, ಕೃಷ್ಣಾ, ಗೋದಾವರಿ, ಕಮ್ಮಂ ಜಿಲ್ಲೆಗಳಲ್ಲಿ ಇವತ್ತಿಗೂ ನಕ್ಸಲರ ಪ್ರಾಬಲ್ಯವಿದ್ದು, ಸರ್ಕಾರದ ಎಲ್ಲಾ ಕಾಮಗಾರಿ ಕೆಲಸಗಳ ಗುತ್ತಿಗೆದಾರರು ಮತ್ತು  ಅಬ್ಕಾರಿ ಗುತ್ತಿಗೆದಾರರ ಮೇಲೆ ನಿಯಂತ್ರಣ ಸಾಧಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಅಬ್ಕಾರಿ ಗುತ್ತಿಗೆಯನ್ನು ತಾವೇ ನಿಭಾಯಿಸುತಿದ್ದಾರೆ. ಪಶ್ಚಿಮ ಗೋದಾವರಿ ಜಿಲ್ಲೆಯ ಬಳಿ ಗೋದಾವರಿ ನದಿಗೆ ಪೊಲಾವರಂ ಬಳಿ ನಿರ್ಮಿಸಲು ಉದ್ದೇಶಿಲಾಗಿರುವ ಇಂದಿರಾ ಸಾಗರ ಅಣೆಕಟ್ಟಿನಿಂದ ಎರಡು ಲಕ್ಷ ಆದಿವಾಸಿ ಕುಟುಂಬಗಳು ಅತಂತ್ರರಾಗುವ ಸಂಭವವಿದೆ. ಈ ಅಣೆಕಟ್ಟಿನ ನಿರ್ಮಾಣಕ್ಕೆ ಪೀಪಲ್ಸ್ ವಾರ್ ಸಂಘಟನೆಯ ಈಗಿನ ನಾಯಕ ಗಣಪತಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಧ್ಯದ ಸ್ಥಿತಿಯಲ್ಲಿ ಆಂಧ್ರದಲ್ಲಿ ನಕ್ಸಲ್ ಹೋರಾಟ ಸ್ಥಗಿತಗೊಂಡಂತೆ ಭಾಸವಾದರೂ ಅದು ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವ ಕ್ಷಣದಲ್ಲಾದರೂ ಅಗ್ನಿಪರ್ವತದಂತೆ ಬಾಯಿ ತೆರೆಯಬಹುದು.

(ಮುಂದುವರಿಯುವುದು)