ನವೀನ್ ಸೂರಿಂಜೆ: ಜಾಮೀನು ನಕಾರ

 

 

 

 

 

 

 

 

 

 

 

ವರ್ತಮಾನ ಓದುಗರಿಗೆ ನಿರಾಶೆಯ ಸುದ್ದಿ ಇದೆ. ನಮ್ಮ ಬಳಗದ ಬರಹಗಾರ ಮತ್ತು ಕಸ್ತೂರಿ ನ್ಯೂಸ್ 24 ವರದಿಗಾರ ಮತ್ತಷ್ಟು ದಿನಗಳನ್ನು ಬಂದೀಖಾನೆಯಲ್ಲಿಯೇ ಕಳೆಯಬೇಕಾಗಿದೆ. ಮಂಗಳೂರಿನ ನ್ಯಾಯಾಲಯ ಶನಿವಾರ ಸೂರಿಂಜೆಗೆ ಜಾಮೀನು ನೀಡಲು ನಿರಾಕರಿಸಿದೆ. ವರದಿಗಾರನನ್ನು ಜೈಲಿನ ಹೊರಗೆ ಭೇಟಿಯಾಗುವ ನಿರೀಕ್ಷೆಯಲ್ಲಿದ್ದ ಬಳಗದ ಗೆಳೆಯರಿಗೆ ನಿರಾಶೆಯಾಗಿದೆ.

ವಿಚಿತ್ರ ನೋಡಿ. ಬಂಧನವಾದ ದಿನ, ಸುದ್ದಿವಾಹಿನಿಗಳು ಬಂಧನದ ಸುದ್ದಿಯನ್ನು ಬಿತ್ತರಿಸಿದವು. ನವೀನ್ ಕೆಲಸ ಮಾಡುವ ವಾಹಿನಿ ದಿನವಿಡೀ ಅದೇ ಸುದ್ದಿಯನ್ನು ಬಿತ್ತರ ಮಾಡಿ ನೋಡುಗರಲ್ಲಿ ಪೊಲೀಸರು ಅಮಾಯಕನ ವಿರುದ್ಧ ಸುಳ್ಳು ಆರೋಪ ಹೊರಿಸಿ ಬಂಧಿಸಿದ್ದರ ವಿರುದ್ಧ ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಿತು. ಆದರೆ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ನವೀನ್ ಕೆಲಸ ಮಾಡುವ ವಾಹಿನಿಯೂ ಸೇರಿದಂತೆ, ಎಲ್ಲಾ ವಾಹಿನಿಗಳೂ ಈ ಪ್ರಕರಣವನ್ನೇ ಮರೆತುಬಿಟ್ಟರೇ ಎಂಬ ಪ್ರಶ್ನೆ ಕಾಡುತ್ತದೆ.

ಜಾಮೀನು ಅರ್ಜಿ ವಿಚಾರಣೆಗೆ ಬಂದ ಸುದ್ದಿಯೂ ಇಲ್ಲ, ವಿಚಾರಣೆ ಮುಂದೂಡಿದ ಸುದ್ದಿಯೂ ಇಲ್ಲ, ಕೊನೆಗೆ ಜಾಮೀನು ತಿರಸ್ಕೃತವಾದ ವರ್ತಮಾನವನ್ನೂ ಜನರಿಗೆ ತಲುಪಿಸುತ್ತಿಲ್ಲ. ಕೋಮುವಾದಿ ಗ್ಯಾಂಗ್ ನ ಪಡ್ಡೆ ಹುಡುಗರು ಹೋಮ್ ಸ್ಟೇ ಮೇಲೆ ದಾಳಿ ಮಾಡಿದಾಗಿನ ದೃಶ್ಯಗಳು ನಮ್ಮಲ್ಲಿಯೇ ಮೊದಲು ಬಿತ್ತರಗೊಂಡದ್ದು, ನಮ್ಮಲ್ಲೇ ಮೊದಲು ‘exclusive’ ಸುದ್ದಿ ತೋರಿಸಿದ್ದು ಎಂದೆಲ್ಲಾ ಬೀಗುವ ಚಾನೆಲ್ ನೇತಾರರು, ಅದೇ ಸುದ್ದಿ ತರಲು ಹೋಗಿದ್ದೇ ಅಪರಾಧವೆಂಬಂತೆ ಬಿಂಬಿಸಿ ಪೊಲೀಸ್ ವ್ಯವಸ್ಥೆ ವರದಿಗಾರನ್ನು ಬಂಧನದಲ್ಲಿಟ್ಟಿರುವಾಗ ಸುಮ್ಮನಾಗಿಬಿಟ್ಟರೆ?

ಹೋಮ್ ಸ್ಟೇ ಮೇಲೆ ದಾಳಿ ಮಾಡಿದ ಹುಡುಗರ ಮೇಲೆ ಪೊಲೀಸರು ಯಾವ್ಯಾವ ಕಾಯ್ದೆ ಅಡಿ ಕೇಸು ದಾಖಲಿಸಿದ್ದಾರೋ, ಅದೇ ಕಾಯ್ದೆಗಳ ಅಡಿಯಲ್ಲಿಯೇ ಆ ಸುದ್ದಿಯನ್ನು ವರದಿ ಮಾಡಲು ಹೋದ ನವೀನ್ ನ್ನು ಬಂಧಿಸಿದ್ದಾರೆ. ಎಂಥ ವಿಚಿತ್ರ ನೋಡಿ, ನವೀನ್ ವಿರುದ್ಧ, ಕಳ್ಳತನದ ಪ್ರಕರಣವೂ ಇದೆ. ಇಡೀ ಘಟನೆಯಲ್ಲಿ ಎದ್ದು ಕಾಣುವುದು, ಪೊಲೀಸರ ಕುಕೃತ್ಯ.

ಈ ಹಿಂದೆ, ಒಂದು ಪಬ್ ಮೇಲೆ ಇದೇ ಮಂಗಳೂರಿನಲ್ಲಿ ಇಂಥದೇ ಗ್ಯಾಂಗ್ ನ ಹುಡುಗರಿಂದ ದಾಳಿಯಾಗಿತ್ತು. ಆಗಲೂ ದಾಳಿಯ ದೃಶ್ಯಗಳು ಎಲ್ಲಾ ಚಾನೆಲ್ ಗಳಲ್ಲೂ ಬಿತ್ತರಗೊಂಡವು. ಆದರೆ ಆ ಸಂದರ್ಭದಲ್ಲಿ, ಘಟನೆ ವರದಿ ಮಾಡಿದ ಪತ್ರಕರ್ತರ ವಿರುದ್ಧ ಕೇಸು ದಾಖಲಿಸುವ ಉತ್ಸಾಹವನ್ನು ಪೊಲೀಸರು ತೋರಿಸಿರಲಿಲ್ಲ. ಆದರೆ ಈ ಪ್ರಕರಣದಲ್ಲಿ, ಇಂತಹ ಘಟನೆ ವರದಿ ಮಾಡಿದ್ದರಿಂದಲೇ ಮಂಗಳೂರಿನ ಮರ್ಯಾದೆ ಹೋಯಿತು ಎಂದು ವರದಿಗಾರನ ಮೇಲೆ ಸುಳ್ಳು ಆರೋಪ ಹೊರಿಸಿ ಬಂಧಿಸಿದ್ದಾರೆ.

ಈ ಬಗ್ಗೆ ಪತ್ರಕರ್ತ ಸಮುದಾಯ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗಿ ಬರಬಹುದು. ಕಾರ್ಯನಿರತ ಪತ್ರಕರ್ತರ ಸಂಘದ ಮುಖಂಡರು ನವೀನ್ ವಿರುದ್ಧ ದಾಖಲಾಗಿರುವ ದೂರನ್ನು, ಆರೋಪ ಪಟ್ಟಿಯನ್ನು ಹಿಂತೆಗೆದುಕೊಳ್ಳುವ ತನಕ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದ್ದರು. ಅವರ ಹೋರಾಟ ಇನ್ನೂ ಜಾರಿಯಲ್ಲಿದೆ ಎಂದು ನಂಬೋಣವೆ?

ಇಂತಹ ಪ್ರಕರಣ ಅದೆಷ್ಟು ಭವಿಷ್ಯದ ಪತ್ರಕರ್ತರಲ್ಲಿ ಆತಂಕ ಸೃಷ್ಟಿಸಿದೆ ಎಂಬ ಅಂದಾಜು ಆಳುವ ವರ್ಗಕ್ಕೆ ಇದ್ದಂತಿಲ್ಲ. ಈಗಷ್ಟೆ ಪತ್ರಿಕೋದ್ಯಮ ಓದಿಕೊಂಡು ಕೆಲಸ ಹುಡುಕುತ್ತಿರುವವರು, ಸುದ್ದಿ ಮಾಡಿದ ಕಾರಣಕ್ಕೆ ಸುಳ್ಳು ಕೇಸು ಹಾಕಿಸಿಕೊಂಡು ಜೈಲಿಗೆ ಹೋಗಾಬೇಕಾ? ಹಾಗಿದ್ದರೆ ನಾವ್ಯಾಕೆ ಈ ಕ್ಷೇತ್ರಕ್ಕೆ ಬರೋದು? – ಇಂತಹ ಪ್ರಶ್ನೆಗಳನ್ನು ಹಾಕಿಕೊಂಡು ಗೊಂದಲದಲ್ಲಿ ಕುಳಿತಿದ್ದಾರೆ. ಅಷ್ಟೇ ಅಲ್ಲ, ಸೂಕ್ಷ್ಮ ಮನಸ್ಸಿನ ಪೋಷಕರು ಕೂಡಾ ತಮ್ಮ ಮಕ್ಕಳನ್ನು ಪತ್ರಿಕೋದ್ಯಮ ಅಧ್ಯಯನಕ್ಕೆ ಕಳುಹಿಸುವುದರ ಬಗ್ಗೆ ಮರುಚಿಂತನೆ ಮಾಡುತ್ತಿದ್ದಾರೆ.

10 thoughts on “ನವೀನ್ ಸೂರಿಂಜೆ: ಜಾಮೀನು ನಕಾರ

  1. prasad raxidi

    “ಪತ್ರಕರ್ತ ಸಮುದಾಯ ಎಚ್ಚತ್ತುಕೊಳ್ಳದಿದ್ದರೆ” ಎಂಬ ವಾಕ್ಯವೇ ವಿಷಾದ ಮತ್ತು ನಗುವನ್ನು ಮೂಡಿಸಿತು. ನಿಜವಾಗಿ ಎಚ್ಚತ್ತುಕೊಳ್ಳಬೇಕಾಗಿರುವುದು ಪ್ರಾಮಾಣಿಕ ಪತ್ರಕರ್ತರು ಮತ್ತು ಜನರು..ಮಾತ್ರ… ಪತ್ರಕರ್ತ ಸಮುದಾಯ.. ಜನ ಸಮುದಾಯ.. ವರ್ತಕ ಸಮುದಾಯ…. ನಾವೂ ಹೇಗೆ ವ್ಯವಸ್ಥೆಯ ನುಡಿಗಟ್ಟುಗಳೊಳಗೆ ಸೇರಿಹೋಗಿ.. ಬೆಕೆಟ್ ನ “ವೈಟಿಂಗ್ ಫಾರ್ ಗೋಡೋ” ನಾಟಕದ ಪೋಜೋ ಮತ್ತು ಲಕ್ಕಿಗಳಂತಾಗಿಬಿಡುತ್ತೇವೆ … ಅಲ್ಲವೆ..

    Reply
  2. anand prasad

    ಕರ್ನಾಟಕದ ಮಾಧ್ಯಮ ಲೋಕದಲ್ಲಿ ಕೇಸರೀಕರಣಗೊಂಡ ಪತ್ರಕರ್ತರು ಮೇಲುಗೈ ಪಡೆದಿದ್ದಾರೆ ಅಥವಾ ಮಾಧ್ಯಮಗಳನ್ನು ನಿಯಂತ್ರಿಸುವವರ ಮೇಲೆ ಕೇಸರೀಕರಣ ಮೇಲುಗೈ ಸಾಧಿಸಿದೆ. ಹೀಗಾಗಿ ಕನ್ನಡದ ಮಾಧ್ಯಮ ಲೋಕದಲ್ಲಿ ಪ್ರಗತಿಶೀಲ ಚಿಂತನೆಗಳು ಹಿನ್ನಡೆ ಕಾಣುತ್ತಿವೆ. ಹೀಗಾಗಿಯೇ ಮಾಧ್ಯಮ ಕ್ಷೇತ್ರದ ಮೇಲೆ ಸಂಘವು ಫ್ಯಾಸಿಸ್ಟ್ ದೌರ್ಜನ್ಯ ಹಾಗೂ ದಬ್ಬಾಳಿಕೆ ನಡೆಸುತ್ತಿರುವಾಗಲೂ ನಿರೀಕ್ಷಿತ ಆಕ್ರೋಶ ಸ್ಪೋಟಗೊಳ್ಳಲಿಲ್ಲ. ಕೇಸರಿ ಪತ್ರಕರ್ತರಿಂದ ಮಾನವೀಯ ಮೌಲ್ಯಗಳನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಕೇಸರಿ ಪತ್ರಕರ್ತರು ಜಮೀನ್ದಾರಿ ದೌರ್ಜನ್ಯ, ಫ್ಯಾಸಿಸ್ಟ್ ದೌರ್ಜನ್ಯ, ದೇವರು-ಧರ್ಮದ ಹೆಸರಿನಲ್ಲಿ ನಡೆಯುವ ದೌರ್ಜನ್ಯ, ಬಂಡವಾಳಶಾಹಿ ದೌರ್ಜನ್ಯ ಇವುಗಳನ್ನು ಎಂದೂ ವಿರೋಧಿಸುವ ಉನ್ನತ ಗುಣವನ್ನು ಹೊಂದಿರುವುದಿಲ್ಲ. ಅವರು ಇಂಥವುಗಳನ್ನು ಒಳಗಿಂದೊಳಗೆ ಬೆಂಬಲಿಸುತ್ತಿರುತ್ತಾರೆ ಹಾಗೂ ಅಂಥಾ ದೌರ್ಜನ್ಯ ನಡೆಸುವ ಶಕ್ತಿಗಳೊಂದಿಗೆ ಶಾಮೀಲಾಗಿರುತ್ತಾರೆ. ಕೇಸರಿ ಪತ್ರಕರ್ತರು ಯಾವಾಗಲೂ ಪಟ್ಟಭದ್ರ ಹಿತಾಸಕ್ತಿಗಳನ್ನು ರಕ್ಷಿಸುವ, ಯಥಾಸ್ಥಿತಿವಾದಿಗಳೇ ಆಗಿರುತ್ತಾರೆ. ಕರ್ನಾಟಕದಲ್ಲಿ ಇಂಥ ಕೇಸರಿ ಪತ್ರಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ರಾಜ್ಯದ ದೌರ್ಭಾಗ್ಯ.

    Reply
  3. ಆನಂದ್

    anand prasad ಅವರೇ ’ಕೇಸರಿ ಪತ್ರಕರ್ತರು’ ಅಂದ್ರೆ ಯಾರು ಅಂತ ಹೇಳ್ತೀರಾ?
    ಅಂತಹ ಪತ್ರಕರ್ತರೆಲ್ಲರೂ ಪ್ರಗತಿಶೀಲ ಚಿಂತನೆಗಳ ವಿರೋಧಿಗಳೇ?
    ಅಂತಹ ’ಕೇಸರಿ’ಗಳು ಕೇಸರಿಯಲ್ಲದ ಇತರ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಲೂ ಆಗದಂತೆ ಹೇಗೆ ನಿಯಂತ್ರಣ ಮಾಡಿದರು ಸ್ವಲ್ಪ ವಿವರಿಸುವಿರಾ?

    Reply
    1. anand prasad

      ಕೇಸರೀ ಶಕ್ತಿಗಳ ಕಡೆಗೆ ಒಲವುಳ್ಳ ಎಲ್ಲ ಪತ್ರಕರ್ತರೂ ಕೇಸರಿ ಪತ್ರಕರ್ತರೆಂದು ಹೇಳಬಹುದು. ಕೇಸರೀ ಶಕ್ತಿಗಳು ಯಾವಾಗಲೂ ಪ್ರತಿಗಾಮಿ ಧೋರಣೆಯನ್ನು ಹೊಂದಿರುತ್ತವೆ. ಕೇಸರೀ ಶಕ್ತಿಗಳು ಯಥಾಸ್ಥಿತಿವಾದವನ್ನು ಎತ್ತಿ ಹಿಡಿಯುತ್ತಾ ಅದಕ್ಕಾಗಿ ಶ್ರಮಿಸುತ್ತಿರುತ್ತವೆ. ಪ್ರಗತಿಶೀಲ ಧೋರಣೆಯನ್ನು ವಿರೋಧಿಸುವುದು ಕೇಸರೀ ಶಕ್ತಿಗಳ ಪ್ರಧಾನ ಧ್ಯೇಯವೂ ಆಗಿದೆ. ಪ್ರಗತಿಶೀಲ ಎಂದರೆ ಇದ್ದಲ್ಲಿಯೇ ಇರದೇ ಸುಧಾರಣೆಗಳ ಕಡೆಗೆ, ಮಾನವೀಯ ಮೌಲ್ಯಗಳ ಕಡೆಗೆ ಸಮಾಜವನ್ನು ಕೊಂಡೊಯ್ಯಬೇಕೆಂಬ ತುಡಿತ ಇರುವವರು ಎಂದರ್ಥ. ಪ್ರತಿಗಾಮಿಗಳು ಎಂದರೆ ಹಿಂದಿನ ಕಾಲದ ತಾರತಮ್ಯ, ಮೇಲು ಕೀಳು, ಶೋಷಣೆಯನ್ನೇ ಮುಂದುವರಿಸಬೇಕು ಎಂಬ ಮನೋಭಾವ ಉಳ್ಳವರು. ಕೇಸರೀ ಶಕ್ತಿಗಳು ಇದೇ ಮನೋಭಾವದವರು. ಕೇಸರೀ ಶಕ್ತಿಗಳೇ ಸಂಪಾದಕರು, ಆಡಳಿತ ಮಂಡಳಿಯ ನಿಯಂತ್ರಕರು, ಮಾಲಕರು ಅಥವಾ ಜಾಹೀರಾತು/ಆರ್ಥಿಕ ವಿಭಾಗದ ಮುಖ್ಯಸ್ಥರು ಆಗಿರುವ ಪತ್ರಿಕೆ, ಮಾಧ್ಯಮಗಳಲ್ಲಿ ಕೇಸರೀ ಅಲ್ಲದ ಪತ್ರಕರ್ತರು ಇದ್ದರೆ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗದ ಅಸಹಾಯಕ ಪರಿಸ್ಥಿತಿ ಇರುತ್ತದೆ. ಪ್ರತಿಗಾಮಿ ಮಾಧ್ಯಮಗಳಲ್ಲಿ ಪ್ರಗತಿಶೀಲ ಪತ್ರಕರ್ತರು ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದರೆ ಅಂಥವರೂ ಕೂಡ ತಮ್ಮ ನೈಜ ಅನಿಸಿಕೆ, ಅಭಿಪ್ರಾಯ ವ್ಯಕ್ತಪಡಿಸಲಾಗದ ಪರಿಸ್ಥಿತಿ ಇರುತ್ತದೆ, ವ್ಯಕ್ತಪಡಿಸಿದರೆ ಅವರ ಹೊಟ್ಟೆಪಾಡಿಗೆ ಕಲ್ಲು ಬೀಳಬಹುದು. ಕೇಸರೀ ಪತ್ರಕರ್ತರು ಸಾಮಾನ್ಯವಾಗಿ ಪ್ರಗತಿಶೀಲ ಗುಣ ಹೊಂದಿರುವುದಿಲ್ಲ. ಹೊಂದಿದ್ದರೆ ದೇಶದ ಪರಿಸ್ಥಿತಿ ಈಗಿರುವುದಕ್ಕಿಂತ ನೂರು ಪಟ್ಟು ಉತ್ತಮವಾಗಿರುತ್ತಿತ್ತು.

      Reply
  4. ಆನಂದ್

    ಧನ್ಯವಾದ anand prasad, ಇಲ್ಲಿ ಒಂದು ಪ್ರಶ್ನೆ: ಪ್ರಗತಿಶೀಲರಲ್ಲದವರು, ಶೋಷಣೆ ಮಾಡುವ ಮನೋಭಾವ ಉಳ್ಳವರು ಎಲ್ಲಾ ಕಾಲದಲ್ಲೂ, ಎಲ್ಲಾ ಸಮುದಾಯ, ಜಾತಿ, ಧರ್ಮ, ಪಂಗಡಗಳಲ್ಲೂ ಇರುವಾಗ ’ಕೇಸರಿ’ ಎಂಬ ಹಣೆಪಟ್ಟಿ ಹಚ್ಚುವುದೇಕೆ? ಹಾಗಂದೊಡನೆ ಒಂದು ನಿರ್ದಿಷ್ಟ ಜಾತಿಯನ್ನು ಅಥವಾ ಅದರೊಳಗೆ ಒಂದು ನಿರ್ದಿಷ್ಟ ಜಾತಿ/ಸಮುದಾಯವನ್ನು ಉದ್ದೇಶಿಸಿದಂತಾಗುತ್ತದೆ. ’ಕೇಸರಿ’ ಎಂಬುದು ಮೊದಲಿಗೆ ’ರಾ ಸ್ವ ಸಂ’ದ ಸದಸ್ಯರನ್ನು ಕುರಿತಾಗಿ ಬಳಸಲ್ಪಡುವಂತಿದ್ದದ್ದು ಇಂದು ’ಹಿಂದೂ’ ಎಂಬುವುದರ ಪರ್ಯಾಯ ಪದವಾಗಿ ಅನೇಕರಿಂದ ಉಪಯೋಗಿಸಲ್ಪಡುತ್ತಿದೆ. ಅಂತಹ ’ಎಲ್ಲರೂ ಪ್ರಗತಿ ವಿರೋಧಿ, ಶೋಷಣಾ ಮನೋಭಾವ ಉಳ್ಳವರೇ ಇರುವ’ ಯಾವುದಾದರೂ ಜಾತಿ/ಧರ್ಮ/ಸಮುದಾಯ/ಪಂಗಡ ಇದೆಯೇ? ಇದೆಯೆಂದು ಯಾವುದನ್ನಾದರೂ ಬೊಟ್ಟು ಮಾಡಿ ತೋರಿದರೆ ಅದು ನಮ್ಮ ಮನಸ್ಸಿನ ಸಂಕುಚಿತತೆಯನ್ನು ತೋರುತ್ತದಷ್ಟೇ ಅಲ್ಲದೆ ಪ್ರಗತಿಶೀಲ ಮನೋಭಾವವನ್ನಲ್ಲ. ಈ ತರಹದ ನಮ್ಮೊಳಗಿನ ಒಂದು ನಿರ್ದಿಷ್ಟ ಜಾತಿ/ಧರ್ಮವನ್ನು ಗುರಿ ಇಟ್ಟು ಮಾಡುವ ದೂಷಣೆಗಳು ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುವ ಪ್ರಯತ್ನಗಳೆಂದು ಹೇಳುವುದೇ ಪ್ರಗತಿ ವಿಮುಖಿ ಧೋರಣೆಯಾಗಿದೆ. ಯಾಕಂದ್ರೆ ನೀವು ಹೇಳುವ ಪ್ರಗತಿ/ಶೋಷಣೆಯ ವಿರುದ್ಧ ಪ್ರಾಮಾಣಿಕವಾಗಿ ಕೆಲಸ ಮಾಡುವ ಹೆಚ್ಚು ಕಡಿಮೆ ಎಲ್ಲರೂ ನಮ್ಮೊಂದಿಗೆ, ನಮ್ಮಂತೆಯೇ ಇರುವ ಬೇರೆ ಬೇರೆ ಜಾತಿ, ಸಮುದಾಯಗಳಿಂದ ಬಂದವರಾಗಿದ್ದಾರೆ ಅಥವಾ ’ಕೇಸರಿ’ಗಳಾಗಿದ್ದಾರೆ.

    ’ಕೇಸರಿ’ ಎಂದರೆ ಪ್ರಗತಿ ವಿರೋಧಿಗಳು ಅನ್ನುವುದರ ಇನ್ನೊಂದು ದೊಡ್ಡ ಅಪಾಯವೆಂದರೆ ಈ ಸೀಮಿತ (ಅಂತರ್ಗತವಾದ ಅರ್ಥದಲ್ಲಿ ಹಿಂದೂಗಳು, ಹಿಂದೂ ಪರರು) ಪಂಗಡಗಳನ್ನು ಬಿಟ್ಟು ಉಳಿದೆಲ್ಲರಿಗೂ ಪ್ರಗತಿ ವಿರೋಧಿ ಮತ್ತು ಶೋಷಣಾ ಪರ ವಿಚಾರ, ಆಚಾರಗಳನ್ನು ಮಾಡಲು ಮುಕ್ತ ಪರವಾನಗಿ ಕೊಟ್ಟಂತಾಗುವುದು.

    ಇನ್ನು ನೀವು ’ಕೇಸರಿ’ ಎನ್ನುವುದು ಯಾವುದೇ ಜಾತಿ/ಧರ್ಮ/ಸಮುದಾಯ/ಪಂಗಡಕ್ಕೆ ಸೀಮಿತವಾಗಿ ಅಥವಾ ಉದ್ದೇಶಿಸಿ ಹೇಳಿದ್ದಲ್ಲ – ಅಂತಹ ’ಪ್ರಗತಿ ವಿರೋಧಿ’ ಮನೋಭಾವ ಉಳ್ಳವರ ಬಗ್ಗ ಹೇಳಿದ್ದು ಅನ್ನುವುದಾದರೆ ’ಕೇಸರಿ’ ಪದದ ಉಪಯೋಗವೇಕೆ? ’ಪ್ರಗತಿ ವಿರೋಧಿಗಳು’ ಅಥವಾ ’ಶೋಷಣಾ ಮನೋಭಾವದವರು’ ಅನ್ನಿ. ಅಂತವರು ಎಲ್ಲಿದ್ದರೂ ಯಾರೇ ಆಗಿದ್ದರೂ ಅವರು ಎಚ್ಚೆತ್ತುಕೊಳ್ಳಲಿ.

    Reply
    1. anand prasad

      ಕೇಸರಿ ಎಂದರೆ ಎಲ್ಲ ಹಿಂದೂಗಳನ್ನು ಉದ್ಧೇಶಿಸಿದಂತೆ ಆಗುವುದಿಲ್ಲ, ಎಲ್ಲ ಹಿಂದೂಗಳು ಕೇಸರಿಯನ್ನು ಇಷ್ಟಪಡುವುದಿಲ್ಲ. ಕೇಸರಿಯನ್ನು ಲಾಂಛನವಾಗಿ ಹೊಂದಿರುವ ಹಿಂದೂ ಗುಂಪುಗಳು ತಾರತಮ್ಯ, ಮೇಲುಕೀಳು, ಶೋಷಣೆಯನ್ನು ಎತ್ತಿಹಿಡಿಯುವ ಕೆಲಸವನ್ನು ಹೆಚ್ಚಾಗಿ ಮಾಡುತ್ತಿರುವುದು ಇಂದು ಕಂಡುಬರುತ್ತಿದೆ. ಕೇಸರಿ ಲಾಂಛನ ಇಲ್ಲದ ಹಿಂದೂ ಗುಂಪುಗಳು ಶೋಷಣೆ, ಮೇಲುಕೀಳು, ತಾರತಮ್ಯದ ವಿರುದ್ಧ ಧ್ವನಿ ಎತ್ತುತ್ತಿರುವುದು ಕಂಡುಬರುತ್ತದೆ. ಉದಾಹರಣೆಗೆ ಮಡೆಸ್ನಾನ ರದ್ದು ಪಡಿಸಬೇಕೆಂದು ಕೇಸರಿಯಲ್ಲದ ಹಿಂದೂ ಗುಂಪುಗಳು ಧ್ವನಿ ಎತ್ತಿದರೆ, ಕೇಸರಿ ಗುಂಪುಗಳು ಮಡೆಸ್ನಾನ ಬೇಕೇಬೇಕು ಎಂದು ರಚ್ಚೆ ಹಿಡಿಯುತ್ತವೆ. ಹೀಗಾಗಿ ಕೇಸರಿ ಎಂದರೆ ಪ್ರತಿಗಾಮಿ ಎಂಬುದಕ್ಕೆ ಪರ್ಯಾಯ ಪದ ಎಂಬಂತೆ ಆಗಿದೆ. ಶೋಷಣೆ, ಮೇಲುಕೀಳು, ತಾರತಮ್ಯದ ವಿರುದ್ಧ ಕೇಸರಿ ಗುಂಪಿನವರು ಧ್ವನಿ ಎತ್ತುವುದು ಬಹಳ ಕಡಿಮೆ. ಮೇಲುಕೀಳು ಎಂಬ ವ್ಯವಸ್ಥೆಯನ್ನು ನಿರಂತರವಾಗಿ ಮುಂದುವರಿಸಬೇಕು ಎಂಬುದು ಕೇಸರಿ ಗುಂಪಿನ ಅಜೆಂಡಾ ಆಗಿರುವುದು ಕಂಡು ಬರುತ್ತದೆ. ಕೇಸರಿ ಅಲ್ಲದ ಹಿಂದೂಗಳು ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ದೇಶದಲ್ಲಿ ಇರುವ ಕಾರಣವೇ ಭಾರತದ ಸಂವಿಧಾನ ಇಂದಿಗೂ ಉಳಿದುಕೊಂಡಿದೆ. ಒಂದು ವೇಳೆ ಕೇಸರಿ ಹಿಂದೂಗಳ ಸಂಖ್ಯೆ ಹೆಚ್ಚಾಗಿರುತ್ತಿದ್ದರೆ ಭಾರತದ ಸಂವಿಧಾನವು ಕೇಸರಿ ಸಂವಿಧಾನವಾಗಿ ಬದಲಾಗಿಬಿಡುತ್ತಿತ್ತು. ಮೂಢ ನಂಬಿಕೆಗಳನ್ನು ಸಮರ್ಥಿಸುವ, ಅವುಗಳನ್ನು ಬೆಳೆಸುವಲ್ಲಿಯೂ ಕೇಸರಿ ಗುಂಪುಗಳು ಮುಂಚೂಣಿಯಲ್ಲಿವೆ, ಇದು ಭಾರತದ ಪ್ರಗತಿಗೆ ದೊಡ್ಡ ಅಡ್ಡಿಯಾಗಿದೆ, ಮಾನವೀಯ ಮೌಲ್ಯಗಳನ್ನು ಮೂಢ ನಂಬಿಕೆಗಳು ತುಳಿದುಹಾಕುತ್ತಿವೆ.

      Reply
  5. ಆನಂದ್

    anand prasad, ನೀವು ಹೇಳುವುದು ಸ್ವಲ್ಪ ಮಟ್ಟಿಗೆ ನಿಜ. ಇತ್ತೀಚಿನ ದಿನಗಳಲ್ಲಿ ಮಂಗಳೂರು ಆಸುಪಾಸಿನ ಆಗು ಹೋಗುಗಳನ್ನು ಗಮನಿಸಿದರೆ ಬಹಳವೇ ನಿಜವೆನ್ನಿಸುತ್ತದೆ. ಆದರೆ ಇನ್ನೂ ಆಳವಾಗಿ ನೋಡಿದರೆ, ಇಲ್ಲಿಯೂ ಕೆಲವೇ ಕೆಲವು ಹಿತಾಸಕ್ತಿಗಳ ಹುನ್ನಾರ ಕಾಣುತ್ತದೆಯೇ ಹೊರತು ಇಡೀ ಪಂಗಡದಲ್ಲ. ಯಾಕಂದರೆ ಇಂಥಹ ಘಟನೆಗಳು ಬೇರೆಲ್ಲೂ (ವ್ಯಾಪಕವಾಗಿ) ನಡೆಯುತ್ತಿಲ್ಲ (ನೀವು ಉದ್ದೇಶಿಸುವ ಕೇಸರಿಗಳು ದೇಶದೆಲ್ಲೆಡೆ, ಕೆಲವೆಡೆ ಇಲ್ಲಿಗಿಂತಲೂ ಹೆಚ್ಚಿನ, ಪ್ರಭಾವಶಾಲಿ ಸಂಖ್ಯೆಯಲ್ಲಿದ್ದಾರೆ). ಉದಾಹರಣೆಗೆ ಪಬ್ ಮೇಲಿನ ದಾಳಿ ಇತ್ಯಾದಿಗಳು ಮುಖ್ಯವಾಗಿ ಕೇಸರಿ ಲಾಂಛನವನ್ನು ಹೊಂದಿದ ಸಂಘವಲ್ಲದ, ಅದರ ನೆರಳಿನಲ್ಲಿ ಲಾಭ ಪಡೆಯುತ್ತಿರುವ ಒಂದು ಸಣ್ಣ ಗುಂಪಿನ ಕೃತ್ಯ. ವಿಷಾದದ ಸಂಗತಿಯೆಂದರೆ ಇಂತಹ ಜನ, ಕೃತ್ಯಗಳಿಂದಾಗಿ ಇಡಿಯ ಸಂಘಕ್ಕೆ ಕೆಟ್ಟ ಹೆಸರು ಬರುವುದು. ಇನ್ನು ಅಲ್ಲಿ ನಡೆದ ವರದಿಗಾರರ ಬಂಧನವೂ ಕೆಲ ಪ್ರಭಾವಿಗಳ ಹುನ್ನಾರದಂತೆ ಕಾಣುತ್ತದೆಯೇ ಹೊರತು ಇಡಿಯ ಸಮುದಾಯದ್ದಾಗಿ ಅಲ್ಲ. ಅಂತಹ ವ್ಯಕ್ತಿಗಳ ಪ್ರಭಾವವನ್ನು ಕಡಿಮೆ ಮಾಡುವುದೇ ಇದಕ್ಕಿರುವ ಪರಿಹಾರವೇ ಹೊರತು ಎಲ್ಲರನ್ನೂ ಒಟ್ಟು ಸೇರಿಸಿ ದೂರುವುದಲ್ಲ. ಹಾಗೆ ದೂರುವುದರಿಂದ ನಿಜವಾಗಿಯೂ ಕಾರಣಕರ್ತರಾದವರು ಮರೆಯಾಗಿ, ಇಂತಹ ಕೃತ್ಯಗಳನ್ನು ಮುಂದುವರಿಸುವ ಸಂಭವವಿದೆ.

    Reply
  6. anand prasad

    ತನ್ನ ಕರ್ತವ್ಯ ನಿರ್ವಹಿಸಿದ ಒಬ್ಬ ವರದಿಗಾರನನ್ನು ಅಪರಾಧಿ ಎಂದು ಅಪರಾಧ ನಡೆಸಿದವರ ಜೊತೆ ಬಂಧಿಸಿರುವುದು ನ್ಯಾಯ ಎಂಬುದು ಇದೆಯೇ ಎಂಬ ಪ್ರಶ್ನೆ ಏಳಲು ಕಾರಣವಾಗಿದೆ. ಇಲ್ಲಿ ಮೇಲ್ನೋಟಕ್ಕೆ ಅನ್ನ ತಿನ್ನುವವರಿಗೆ ವರದಿಗಾರ ಯಾವುದೇ ಅಪರಾಧ ಮಾಡಿಲ್ಲ ಎಂಬುದು ಕಂಡುಬರುತ್ತದೆ, ಆದರೆ ಕಾನೂನನ್ನು ಅಧ್ಯಯನ ಮಾಡಿದ ನ್ಯಾಯಾಧೀಶರಿಗೆ ಮಾತ್ರ ಇದು ವಾರಂಟ್ ಹೊರಡಿಸಿ ಬಂಧಿಸಲು ಅವಕಾಶ ಮಾಡಿಕೊಡುವ ಅಪರಾಧವಾಗಿ ಕಾಣುತ್ತದೆ. ಇಂಥ ನ್ಯಾಯ ವ್ಯವಸ್ಥೆಗೆ ಏನೆಂದು ಹೇಳಬೇಕು? ತುರ್ತು ಪರಿಸ್ಥಿತಿಯ ಸಮಯದಲ್ಲಿ ಅದರ ವಿರುದ್ಧ ಹೋರಾಡಿದವರೇ ಈಗ ಅಂಥದೇ ತುರ್ತು ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿರುವಾಗ ಯಾವ ಕೇಸರಿ ನಾಯಕರೂ ಅದನ್ನು ವಿರೋಧಿಸಿಲ್ಲ ಎಂಬುದು ಗಮನಾರ್ಹ. ಬೇರೆ ಪಕ್ಷದವರು ತುರ್ತು ಪರಿಸ್ಥಿತಿ ತಂದರೆ ಅದು ತಪ್ಪು, ಪ್ರಜಾಪ್ರಭುತ್ವದ ಕಗ್ಗೊಲೆ, ತಮ್ಮ ಪಕ್ಷದವರು ತಂದರೆ ಅದು ಸರಿ ಎಂಬ ನಿಲುವು ಕೇಸರಿ ಪಕ್ಷದ್ದು ಎಂಬ ಸಂದೇಶವನ್ನು ಇದು ಜನತೆಗೆ ನೀಡುತ್ತದೆ. ಕೆಲ ಪ್ರಭಾವಿಗಳ ಹುನ್ನಾರ ಇದರಲ್ಲಿ ಅಡಗಿದ್ದರೆ ಅದನ್ನು ಉಳಿದವರಿಗೆ ವಿರೋಧಿಸಲು ಆಗುವುದಿಲ್ಲವೇ? ಉಳಿದವರು ವಿರೋಧಿಸದೆ ಇರುವ ಕಾರಣ ಇದು ಎಲ್ಲ ಕೇಸರಿ ಗುಂಪುಗಳಿಗೂ ಒಪ್ಪಿಗೆ ಎಂಬ ಸಂದೇಶ ಜನತೆಗೆ ಹೋಗುತ್ತದೆ. ಅಂದರೆ ಪ್ರಭಾವಿಗಳ ನಿಲುವನ್ನು ವಿರೋಧಿಸುವ ಧೈರ್ಯ ಕೇಸರಿ ಗುಂಪುಗಳಿಗೆ ಇಲ್ಲ. ಇದರ ಅರ್ಥ ಏನೆಂದರೆ ಕೇಸರಿ ಗುಂಪುಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ಇಲ್ಲ, ಕೆಲವರ ಸರ್ವಾಧಿಕಾರಿ ಧೋರಣೆಗಳಿಗೆ ಉಳಿದವರು ಕುರಿಗಳಂತೆ ತಲೆ ಆಡಿಸಬೇಕು ಅಷ್ಟೇ ಎಂಬ ಸಂದೇಶ ಇದರಿಂದ ಜನತೆಗೆ ಹೋಗಲಿದೆ.

    ಮಹಿಳೆಯರ ಅಶ್ಲೀಲ ಪ್ರಾತಿನಿಧ್ಯ ಕಾಯಿದೆಯನ್ವಯವೂ ಪತ್ರಕರ್ತ ನವೀನರ ಮೇಲೆ ಕೇಸು ಹಾಕಿದ್ದಾರೆ. ಆದರೆ ಇದನ್ನು ಪ್ರಸಾರ ಮಾಡಿದ ಯಾವ ಟಿವಿ ವಾಹಿನಿಗಳ ಮೇಲೆಯೂ ಈ ಕೇಸನ್ನು ಹಾಕಿಲ್ಲ ಎಂದರೆ ಪೊಲೀಸರಿಗೆ ಕಣ್ಣೇ ಇಲ್ಲವೆಂದು ಕಾಣುತ್ತದೆ. ಇಲ್ಲಿ ಇದೇ ಕೇಸನ್ನು ಘಟನೆಯ ದೃಶ್ಯಗಳನ್ನು ಪ್ರಸಾರ ಮಾಡಿದ ಎಲ್ಲ ವಾಹಿನಿಗಳ ಮೇಲೆಯೂ ಹಾಕಬೇಕಾಗಿರುವುದು ನ್ಯಾಯ. ಅದೇ ರೀತಿ ಈ ಕೇಸನ್ನು ಟಿವಿ, ಸಿನೆಮಾ, ಜಾಹೀರಾತುಗಳಲ್ಲಿ ಅರೆನಗ್ನ ಹೆಣ್ಣಿನ ದೇಹ ತೋರಿಸುವ ಎಲ್ಲ ನಿರ್ದೇಶಕರು, ನಿರ್ಮಾಪಕರು, ಪ್ರಸಾರ ಮಾಡುವ ಟಿವಿ ವಾಹಿನಿಗಳ ಮೇಲೆ ಏಕೆ ಪೊಲೀಸರು ಹಾಕುವುದಿಲ್ಲ? ನವೀನರಿಗೆ ಒಂದು ನೀತಿ, ಉಳಿದವರಿಗೆ ಒಂದು ನೀತಿ ಅನುಸರಿಸಬೇಕೆಂದು ಭಾರತದ ಕಾನೂನು ಹಾಗೂ ಸಂವಿಧಾನ ಹೇಳುತ್ತದೆಯೋ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಏಳುತ್ತದೆ. ಇದಕ್ಕೆ ಪೋಲೀಸರ ಬಳಿ ಯಾವ ಸಮರ್ಥನೆಯೂ ಇಲ್ಲ. ಪೊಲೀಸರು ಕನಿಷ್ಠ ಮನುಷ್ಯತ್ವವನ್ನು ಕೂಡ ಹೊಂದಿಲ್ಲ ಎಂಬುದು ಇದರಿಂದ ತಿಳಿಯುತ್ತದೆ.

    Reply

Leave a Reply to ಆನಂದ್ Cancel reply

Your email address will not be published. Required fields are marked *