ಶೆಟ್ಟರ್ ಎಂಬ ಶ್ಯಾನುಬೋಗರು


– ಡಾ.ಎನ್.ಜಗದೀಶ್ ಕೊಪ್ಪ


 

ಕನಾಟಕದಲ್ಲಿ ಜನಪ್ರತಿನಿಧಿಗಳಿಂದ ರೂಪುಗೊಂಡ ಒಂದು ಸರ್ಕಾರ ಅಸ್ತಿತ್ವದಲ್ಲಿ ಇದೆ ಎಂಬ ನಂಬಿಕೆ ಯಾವ ನಾಗರೀಕನಿಗೂ ಈ ದಿನಗಳಲ್ಲಿ ಇಲ್ಲವಾಗಿದೆ. ಜನಪರ ಕಾಳಜಿಗಳಿಲ್ಲದ, ಸಮಸ್ಯೆಗಳಿಗೆ ಸ್ಪಂದಿಸಲಾಗದ, ದಿನ ನಿತ್ಯ ತನ್ನ ಆಂತರಿಕ ಸಮಸ್ಯೆಗಳು ಮತ್ತು ಕಚ್ಚಾಟದಿಂದ ದಿನದೂಡುತ್ತಿರುವ ಈ ಬಿ.ಜೆ.ಪಿ. ಸರ್ಕಾರ ಯಾವ ಪುರುಷಾರ್ಥಕ್ಕೆ ರಾಜ್ಯದಲ್ಲಿ ಆಡಳಿತದಲ್ಲಿರಬೇಕು ಎಂಬುದರ ಬಗ್ಗೆ ಈ ಪಕ್ಷವನ್ನು ಆಡಳಿತಕ್ಕೆ ತಂದ ಮತದಾರರು ಒಮ್ಮೆ ತಮ್ಮತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ,

ವಿಶ್ವವಿಖ್ಯಾತ ಮಾಹಿತಿ ತಂತ್ರಜ್ಞಾನದ ನಗರವೆಂಬ ಪ್ರಸಿದ್ಧಿಪಡೆದಿದ್ದ ಬೆಂಗಳೂರು ನಗರ ಈಗ ಕಸದತೊಟ್ಟಿಯಾಗಿ ಮೂರು ತಿಂಗಳಾಯಿತು. ಈ ನಾಡಿನ ಮುಖ್ಯಮಂತ್ರಿಯಾದವನಿಗೆ ಈ ಕುರಿತು ಕಿಂಚಿತ್ತೂ ಕಾಳಜಿ ಇಲ್ಲದೆ ಮೌನವಾಗಿದ್ದರೆ ಇದನ್ನು ಮುಖ್ಯಮಂತ್ರಿಯಯೊಬ್ಬನ ಸಜ್ಜನಿಕೆ ಎಂದು ಕರೆಯಲಾಗದು. ಬದಲಾಗಿ ಇದನ್ನು ನಿಷ್ಕ್ರಿಯತೆ ಎಂದು ಕರೆಯಬೇಕಾಗುತ್ತದೆ.

ಬೆಂಗಳೂರು ನಗರದ ಕಸದ ಸಮಸ್ಯೆ ಭಾರತವಷ್ಟೇ ಅಲ್ಲ, ಅಂತರಾಷ್ಟ್ರೀಯ ಮಟ್ಟದ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳಲ್ಲಿ ಸುದ್ಧಿಯಾಗುವುದರ ಜೊತೆಗೆ ಕರ್ನಾಟಕದ ಉಚ್ಛನ್ಯಾಯಾಲಯದಲ್ಲಿ ಸರ್ಕಾರಕ್ಕೆ ಎರಡು ಮೂರು ಬಾರಿ ಕಪಾಳ ಮೋಕ್ಷವಾಗಿದೆ. ಆದರೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ರ ದಿವ್ಯ ಮೌನವನ್ನು ಮಾತ್ರ ಈವರೆಗೆ ಯಾರಿಂದಲೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವರ ಈ ವರ್ತನೆ ನಮ್ಮ ಹಳ್ಳಿಗಳಲ್ಲಿ ಜನಪದರ ನಡುವೆ ಇರುವ “ಊರಿನ ಮೇಲೆ ಊರು ಬಿದ್ದರೆ, ಶ್ಯಾನುಬೋಗನಿಗೇನು ಚಿಂತೆ?” ಎಂಬ ಗಾದೆಯಂತಿದೆ.

ವಾರಕ್ಕೊಮ್ಮೆ ಹುಬ್ಬಳ್ಳಿ ನಗರಕ್ಕೆ ಬಂದು ಕಿರಾಣಿ ಅಂಗಡಿ, ಪಾನ್‌ಶಾಪ್ ಗಳನ್ನು ಉದ್ಘಾಟಿಸುವುದು, ಇಲ್ಲವೇ ಪರಿಚಿತರ, ಸಂಬಂಧಿಕರ ಮಕ್ಕಳ ಹುಟ್ಟುಹಬ್ಬ-ನಾಮಕರಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತೊಟ್ಟಿಲು ತೂಗುವುದು ಇವುಗಳೇ ನಾಡಿನ ಮುಖ್ಯಮಂತ್ರಿಯ ಆದ್ಯತೆಯ ಕೆಲಸಗಳಾಗಿವೆ. ಜಗದೀಶ್ ಶೆಟ್ಟರಿಗೆ ಇದಕ್ಕಿಂತ ಮಾಡಬಹುದಾದ ಕೆಲಸಗಳು ಬೇಕಾದಷ್ಟಿವೆ ಎಂದು ಬುದ್ಧಿ ಹೇಳುವವರು ಯಾರೂ ಇಲ್ಲ. ಅದೇ ಈ ನಾಡಿನ ದುರಂತ.

ವಿಧಾನಸೌದದಲ್ಲಿ ಎರಡು ದಿನಗಳ ಕಾಲ ನಿರಂತರ ಕುಳಿತು ಕೆಲಸ ಮಾಡಿದ ಶೆಟ್ಟರ್‌ರನ್ನು ನಾವು ಕಾಣಲೇ ಇಲ್ಲ. ಬೆಂಗಳೂರಿನ ಕಸ ವಿಲೆವಾರಿ ಮಹಾನಗರ ಪಾಲಿಕೆಗೆ ಸೇರಿದ ವಿಚಾರ ಅಥವಾ ತಲೆನೋವು, ಇದು ಸರ್ಕಾರಕ್ಕೆ ಸಂಬಂಧಪಟ್ಟ ವಿಷಯವಲ್ಲ ಎಂದು ನಂಬಿದಂತಿರುವ ಜಗದೀಶ್ ಶೆಟ್ಟರ್ ಕೂಡಲೇ ಈ ತಿಳುವಳಿಕೆಯನ್ನು ತಮ್ಮ ತಲೆಯಿಂದ ತೆಗೆದು ಹಾಕಿ ಪರಿಹಾರಕ್ಕೆ ಮುಂದಾಗಬೇಕಿದೆ. ತಮ್ಮ ಮುಖ್ಯಮಂತ್ರಿ ನಿಧಿಯಿಂದ ಎರಡು ಅಥವಾ ಮೂರು ಕೋಟಿ ಹಣವನ್ನು ವಿನಿಯೋಗಿಸಿ ತಕ್ಷಣ ತಾತ್ಕಾಲಿಕವಾಗಿ ನೂರು ಲಾರಿ ಮತ್ತು ಸಾವಿರ ನೌಕರರನ್ನು ನೇಮಕ ಮಾಡಿ ಕೇವಲ ಒಂದು ವಾರದ ಅವಧಿಯಲ್ಲಿ ಕಸ ಸಾಗಿಸುವುದು ಕಷ್ಟದ ವಿಷಯವೇನಲ್ಲ. ಇಲ್ಲಿ ಬೇಕಾಗಿರುವುದು ಧೃಡ ಮನಸ್ಸು ಮಾತ್ರ. ನಗರದ ರಸ್ತೆಗಳಲ್ಲಿ ತಿಂಗಳುಗಟ್ಟಲೆ ಕೊಳೆತು ನಾರುತ್ತಿರುವ ಕಸದ ವಿಲೆವಾರಿಗಾಗಿ ಟೆಂಡರ್ ಪ್ರಕ್ರಿಯೆ ಅಥವಾ ಹೊಸ ಗುತ್ತಿಗೆದಾರರ ನೇಮಕ ಇವೆಲ್ಲವೂ ಸದ್ಯಕ್ಕೆ ಮುಗಿಯಬಹುದಾದ ಪರಿಹಾರವಲ್ಲ. ಇಂತಹ ವಾಸ್ತವ ಸತ್ಯ ನಮ್ಮನ್ನು ಆಳುವ ಜನಪ್ರತಿನಿಧಿಗಳಿಗೆ ಮತ್ತು ಅವಿವೇಕಿತನವನ್ನು ಹಾಗೂ ಸೋಮಾರಿತನವನ್ನು ಮೈಗೂಡಿಸಿಕೊಂಡಿರುವ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಒಂದಲ್ಲ ಒಂದು ಹಗರಣದಲ್ಲಿ ಮಿಂದೆದ್ದ ಈ ಸರ್ಕಾರಕ್ಕೆ ಜನರ ಸಮಸ್ಯೆಗಳಿಗಿಂತ ಪಕ್ಷದ ಮತ್ತು ನಾಯಕರ ಒಳಜಗಳವೇ ಮುಖ್ಯ ಸಂಗತಿಯಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದ ತತ್ವ ಸಿದ್ಧಾಂತ ಇವುಗಳ ಬಗ್ಗೆ ನಮ್ಮ ತಕರಾರುಗಳು ಏನೇ ಇರಲಿ, ಶಿಸ್ತಿನ ಪಕ್ಷ ಎಂದು ಖ್ಯಾತಿ ಗಳಿಸಿದ್ದ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಸ್ವತಃ ಹಲವಾರು ಹಗರಣಗಳನ್ನು ಮೈಮೇಲೆ ಎಳೆದುಕೊಂಡು, ಮುಖಕ್ಕೆ ಮಸಿ ಬಳಿದುಕೊಂಡು ನಿಂತಿದ್ದಾರೆ. ಬಿ.ಜೆ.ಪಿ.ಯ ಇತರೆ ನಾಯಕರು ತಮ್ಮ ಆತ್ಮಸಾಕ್ಷಿ ಮರೆತವರಂತೆ ಯಾವುದೇ ಅಂಜಿಕೆ ಅಥವಾ ಸಂಕೋಚವಿಲ್ಲದೆ ಗಡ್ಕರಿಯನ್ನು ಪೈಪೋಟಿಗೆ ಬಿದ್ದವರಂತೆ ಸಮರ್ಥಿಸಿಕೊಳ್ಳುತಿದ್ದಾರೆ. ಇಂತಹ ದಯನೀಯ ಸ್ಥಿತಿಯಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ ರಾಜ್ಯ ಘಟಕಗಳ ಮೇಲಿದ್ದ ಹತೋಟಿ ಸಂಪೂರ್ಣ ಕೈತಪ್ಪಿ ಹೋಗಿದೆ. ಇದರಿಂದಾಗಿ ಯಾವುದೇ ಲಂಗು, ಲಗಾಮುಗಳೇ ಇಲ್ಲದ ನಿಷ್ಕ್ರಿಯ ಸರ್ಕಾರದ ಕೈಯಲ್ಲಿ ಕರ್ನಾಟಕದ ಜನತೆ ಆಳಿಸಿಕೊಳ್ಳಬೇಕಿದೆ.

ಈಗಾಗಲೇ ಪಕ್ಷದಿಂದ ಬಹುದೂರ ಹೋಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಗುರುತಿಸಿಕೊಂಡಿರುವ ಹಲವು ಸಚಿವರು, ಶಾಸಕರು ಮತ್ತು ನಿಗಮಗಳ ಅಧ್ಯಕ್ಷರು ಯಾವುದೇ ನೈತಿಕತೆಯ ಪ್ರಜ್ಞೆ ಇಲ್ಲದ ವ್ಯಕ್ತಿಗಳಂತೆ ರಾಜ್ಯ ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳುವುದರ ಜೊತೆ ಪಕ್ಷದಲ್ಲಿದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆ ಕಾರ್ಯಗಳಿಗೆ ಕೈಜೋಡಿಸುತಿದ್ದಾರೆ, ಯುಡಿಯೂರಪ್ಪನವರ ಆಪ್ತರು ಎಂದು ಗುರುತಿಸಿಕೊಂಡಿರುವ ಸಚಿವರ ಕಾರ್ಯ ವೈಖರಿಯನ್ನು ಗಮನಿಸಿದರೆ, ಇವರು ತಮ್ಮಗಳ ಖಾತೆಯ ನಿರ್ವಹಣೆಗಿಂತ ಯಡಿಯೂರಪ್ಪನವರನ್ನು ನಿರ್ವಹಿಸಿದ್ದೇ ಹೆಚ್ಚು. ಇಂತಹ ಅನೈತಿಕ ಚಟುವಟಿಕೆಗಾಗಿ ರಾಜ್ಯದ ಜನಸಾಮಾನ್ಯನ ತೆರಿಗೆ ಹಣವನ್ನು ತಮ್ಮ ಸಾರಿಗೆ ಮತ್ತು ಸವಲತ್ತುಗಳಿಗೆ ಯಾವುದೇ ಅಂಜಿಕೆ ಇಲ್ಲದೆ ಬಳಸಿಕೊಳ್ಳುತಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಮ್ಮ ಮಿತವಾದ ಮಾತು ಮತ್ತು ಸಜ್ಜನಿಕೆಯ ನಡುವಳಿಕೆಗಳಿಗೆ ಹೆಸರಾದವರು. ಇದರಿಂದಾಗಿ ಅವರಿಗೆ ಅಜಾತ ಶತ್ರು ಎಂಬ ಬಿರುದು ಕೂಡ ಲಭಿಸಿದೆ. ಆದರೆ, ಒಬ್ಬ ಜನನಾಯಕನಿಗೆ ಇಂತಹ ಸದ್ಗುಣಗಳ ಜೊತೆ ಜೊತೆಗೆ ಪಾರದರ್ಶಕ ಆಡಳಿತ ನೀಡಲು ನಿಷ್ಟುರವಾದ ಮನೋಭಾವ ಇರಬೇಕಾಗುತ್ತದೆ. ಪ್ರಾಮಾಣಿಕತೆ ಮತ್ತು ನಿಷ್ಠುರತೆ ಆಡಳಿತಕ್ಕೆ ಮಂತ್ರದಂಡವಾದರೆ, ನಾಯಕನ ಸಜ್ಜನಿಕೆ, ವಿಶ್ವಾಸ ಒಳ್ಳೆಯ ಆಡಳಿತಕ್ಕೆ ಪೂರಕವಾಗಬಲ್ಲವು. ಸಧ್ಯದ ಸ್ಥಿತಿಯಲ್ಲಿ ತಮ್ಮ ಎಲ್ಲಾ ಕೈ ಮತ್ತು ಕಾಲುಗಳನ್ನು ಯಡಿಯೂರಪ್ಪನವರಿಗೆ ನೀಡಿ ಹಗ್ಗ ಬಿಗಿಸಿಕೊಂಡಿರುವ ಜಗದೀಶ್ ಶೆಟ್ಟರಿಂದ ಯಾವುದೇ ದಕ್ಷತೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಎಲ್ಲಾ ಅಸಮಾಧಾನಗಳ ಜೊತೆ ರಾಜಧಾನಿ ಬೆಂಗಳೂರು ನಗರದ ಕಸದ ವಾಸನೆಯನ್ನು ಸಹಿಸಿಕೊಳ್ಳುವುದು ಕರ್ನಾಟಕದ ಜನತೆಗೆ ಅನಿವಾರ್ಯವಾಗಿದೆ.

3 thoughts on “ಶೆಟ್ಟರ್ ಎಂಬ ಶ್ಯಾನುಬೋಗರು

  1. anand prasad

    ಜಗದೀಶ್ ಶೆಟ್ಟರ್ ಅವರು ಸಜ್ಜನಿಕೆಯ ನಡವಳಿಕೆ ಹಾಗೂ ಸಾಹಿತ್ಯ, ಓದು ಇತ್ಯಾದಿ ಅಭಿರುಚಿ ಉಳ್ಳ ಸಂವೇದನಾಶೀಲ ಎಂದು ಹೇಳಲಾಗುತ್ತಿದ್ದರೂ ಅವರು ಓರ್ವ ಪತ್ರಕರ್ತನ ಕಾನೂನುಬಾಹಿರ ಬಂಧನವನ್ನು ತಡೆಯದೆ ಹೋದುದು ಅವರ ಅವಧಿಯ ಕಪ್ಪು ಚುಕ್ಕೆಯಾಗಿ ಇತಿಹಾಸದಲ್ಲಿ ನಿಲ್ಲಲಿದೆ. ತನ್ನ ಕರ್ತವ್ಯ ನಿರ್ವಹಿಸಿದ ಪತ್ರಕರ್ತನನ್ನು ಪೊಲೀಸರು ಕಾನೂನುಬಾಹಿರವಾಗಿ ಬಂಧಿಸಿರುವಾಗ ಓರ್ವ ಸೂಕ್ಷ್ಮ ಮನಸ್ಸಿನ, ಸಾಹಿತ್ಯ ಹಾಗೂ ಓದುವ ಅಭಿರುಚಿ ಉಳ್ಳ ಮುಖ್ಯಮಂತ್ರಿಯ ರಕ್ತ ಇಂಥ ಅನ್ಯಾಯದ ವಿರುದ್ಧ ಕುದಿಯಬೇಕಾಗಿತ್ತು. ಅನ್ಯಾಯದ ವಿರುದ್ಧ ಅಂಥ ಸಾತ್ವಿಕ ಸಿಟ್ಟು ಮೂಡದೆ ಹೋದರೆ ಓದುವ ಹವ್ಯಾಸ, ಸಾಹಿತ್ಯದ ಒಲವು ಇದ್ದರೂ ವ್ಯರ್ಥ. ಇಂಥ ಕಾನೂನುಬಾಹಿರ ಬಂಧನವನ್ನು ತಡೆಯುವ ಹಾಗೂ ಹೀಗೆ ಕಾನೂನಿನ ದುರುಪಯೋಗಪಡಿಸಿದ ಪೋಲೀಸರನ್ನು ಶಿಕ್ಷಿಸುವ ಅಧಿಕಾರ ಇದ್ದರೂ ಅದನ್ನು ಬಳಸದೆ ನಿಷ್ಕ್ರಿಯರಾದ ಶೆಟ್ಟರ್ ಅವರ ನಿಲುವು ಎಂದಿಗೂ ಕರ್ನಾಟಕದ ಇತಿಹಾಸದಲ್ಲಿ ಒಂದು ಘೋರ ಕಪ್ಪು ಚುಕ್ಕೆಯಾಗಿ ನಿಲ್ಲಲಿದೆ.

    Reply
  2. Anand Yadwad

    ಸರಕಾರ ಇದೆಯೇ ಎಂಬ ಪ್ರಶ್ನೆ ನಿಸ್ಸಂದೇಹವಾಗಿ ಎಲ್ಲರನ್ನೂ ಕಾಡುತ್ತಿದೆ. ತಮ್ಮ ತಮ್ಮ ಕಚ್ಚಾಟದಲ್ಲಿರುವ ಇವರು ಬಿಎಸ್ಆರ್, ಬಿಎಸ್ವೈ ಮತ್ತು ಬಿಜೆಪಿ ಎಂಬ ಹೋಳುಗಳಾಗಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರುಗಳು ಬಹಿರಂಗವಾಗಿ ತಾವು ಯಾವ ಗುಂಪಿನಲ್ಲಿರಬೇಕು ಎಂದು ನಿರ್ಲಜ್ಜವಾಗಿ ಚರ್ಚೆ ಮಾಡುತ್ತಿದ್ದಾರೆ. ಇವರಾರು ಮೇಲೂ ‘ಶಿಸ್ತಿನ ಪಕ್ಷ’ವಾದ ಬಿಜೆಪಿ ಕ್ರಮ ಕೈಗೊಳ್ಳುತ್ತಿಲ್ಲ. ಸರಕಾರ ಈಗಾಗಲೇ ಆಲ್ಪಮತಕ್ಕೆ ಕುಸಿದಿದೆ. ಅಧಿಕಾರದಲ್ಲಿ ಮುಂದುವರೆಯುವ ಯಾವ ನೈತಿಕ ಹಕ್ಕೂ ಈ ಶಾನುಭೋಗರ ಸರಕಾರಕ್ಕೆ ಇಲ್ಲ.

    Reply
    1. ಆನಂದ್

      ಬಿಜೆಪಿಯನ್ನು ’ಶಿಸ್ತಿನ ಪಕ್ಷ’ ಎಂದು ಕರೆಯುವುದು ಅನ್ಯಾಯ. ಅವರಲ್ಲಿ ಶಿಸ್ತು ಇದ್ದದ್ದು ಎಂದು? ರಾಜ್ಯದಲ್ಲಿ ಅಧಿಕಾರಕ್ಕೆ ಬಂದೊಡನೆ ಶುರುವಾದ ಕಚ್ಚಾಟ ಮುಗಿಯುವಂತೆ ಕಾಣುತ್ತಿಲ್ಲ. ಬಹುಶಃ ಅದರ ಮಾತೃ ಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಗಮನದಲ್ಲಿಟ್ಟು ನಾವು ’ಶಿಸ್ತಿನ ಪಕ್ಷ’ ಅನ್ನುತ್ತೇವೆ. ಆದರೆ ನಮ್ಮ ರಾಜ್ಯದಲ್ಲಿನ, ರಾಷ್ಟ್ರದಲ್ಲಿನ ಬಿಜೆಪಿ ರಾಸ್ವಸಂಘದ ’ದಾರಿ ತಪ್ಪಿದ ಮಗ’ ಅನ್ನಬಹುದು.

      Reply

Leave a Reply

Your email address will not be published. Required fields are marked *