ಒಂದು ಗಲ್ಲು ಶಿಕ್ಷೆ

ಮೂಲ : ಜಾರ್ಜ್ ಆರ್ವೆಲ್
ಅನುವಾದ : ಬಿ.ಶ್ರೀಪಾದ ಭಟ್

ಮಳೆಯಲ್ಲಿ ತೊಯ್ದ ಬರ್ಮಾದ ಜೈಲಿನ ಆವರಣದ ಒಂದು ಬೆಳಗಿನ ಜಾವ. ಎತ್ತರದ ಜೈಲು ಗೋಡೆಗಳ ಮೇಲೆ ಸಣ್ಣದಾದ ಬೆಳಕು ನರ್ತಿಸುತ್ತಿತ್ತು. ಪ್ರಾಣಿಗಳ ಪಂಜರದಂತಿರುವ ಉಕ್ಕಿನ ಸರಳುಗಳ ಸಣ್ಣ ಸಣ್ಣ ಸೆಲ್‌ಗಳ ಮುಂದೆ ನಾವೆಲ್ಲ ಕಾಯುತ್ತಿದ್ದೆವು. ಆ ಉಕ್ಕಿನ ಸರಳುಗಳೊಳಗೆ ಮುಂದಿನ ಕೆಲವು ವಾರಗಳೊಳಗೆ ಗಲ್ಲು ಶಿಕ್ಷೆಗೆ ಗುರಿಯಾಗಲಿದ್ದ ಖೈದಿಗಳು ಜೈಲಿನ ಕಂಬಳಿಯನ್ನು ಹೊದ್ದು ಸಣ್ಣದಾದ ಹರಟೆಯಲ್ಲಿ ತೊಡಗಿದ್ದರು. ಕೃಶ ಕಾಯದ, ಸಣ್ಣ ಆಕೃತಿಯ, ಚಂಚಲ ಕಣ್ಣುಗಳ ಹಿಂದೂ ಖೈದಿಯೊಬ್ಬನನ್ನು ಆ ಉಕ್ಕಿನ ಸರಳುಗಳ ಸೆಲ್‌ನಿಂದ ಹೊರ ಕರೆತಂದರು.ಈ ಖೈದಿಯು ದಟ್ಟವಾದ ಹುರಿಮೀಸೆಯನ್ನು ಬೆಳೆಸಿದ್ದ. ಆದರೆ ಆತನ ಕೃಶ ಶರೀರಕ್ಕೆ ಸ್ವಲ್ಪವೂ ಹೊಂದಿಕೆಯಾಗದ ಈ ದಟ್ಟವಾದ ಹುರಿಮೀಸೆ ಆತನ ವ್ಯಕ್ತಿತ್ವಕ್ಕೆ ಚಲನಚಿತ್ರದ ಹಾಸ್ಯ ಪಾತ್ರಧಾರಿಯ ಸ್ವರೂಪವನ್ನು ನೀಡಿತ್ತು. ಆತನನ್ನು ಸುತ್ತುವರಿದ ಆರು ಭಾರತೀಯ ಕಾವಲುಗಾರರು ಈ ಖೈದಿಯನ್ನು ನೇಣುಗಂಬಕ್ಕೆ ಅಣಿಗೊಳಿಸುತ್ತಿದ್ದರು. ಅವರಲ್ಲಿ ಇಬ್ಬರು ಬಂದೂಕುಧಾರಿಗಳು ಆ ಖೈದಿಯನ್ನು ಸುತ್ತುವರೆದಿದ್ದರೆ ಉಳಿದ ಕಾವಲುಗಾರರು ಆತನ ಎರಡೂ ಕೈಗಳನ್ನು ಹಿಂದಕ್ಕೆ ಮಡಚಿ, ಆತನ ಮುಂಗೈಗಳಿಗೆ ಕೋಳವನ್ನು ತೊಡಿಸುತ್ತಿದ್ದರು. ಆ ಆರೂ ಮಂದಿ ಬಂದೂಕುಧಾರಿ ಕಾವಲುಗಾರರು ಆ ಖೈದಿಯ ಭುಜದ ಮೇಲೆ ಕೈ ಹಾಕಿ ಆತನ ಸುತ್ತಲೂ ಘೇರಾಯಿಸುತ್ತಾ ಆತ ತಮ್ಮ ಸುಪರ್ದಿಯೊಳಗಿದ್ದಾನೆಂಬ ಭರವಸೆಯಿಂದಿದ್ದರು. ಈ ದೃಶ್ಯವು ಕೈಗೆ ಸಿಕ್ಕ ಜೀವಂತ ಮೀನು ಮರಳಿ ನೀರಿಗೆ ಹಾರದಂತೆ ಅದನ್ನು ಕಾಯುತ್ತಿರುವಂತಿತ್ತು. ಆದರೆ ಯಾವುದೇ ಪ್ರತಿರೋಧ ತೋರದೆ ಆ ಗಲ್ಲು ಶಿಕ್ಷೆಗೆ ಗುರಿಯಾದ ಖೈದಿಯು ಅತ್ಯಂತ ನಿರ್ಲಿಪ್ತನಾಗಿ, ನಿಶ್ಚಲ ಸ್ಥಿತಿಯಲ್ಲಿ ನಿಂತಿದ್ದ. ಎಂಟು ಘಂಟೆಯೆಂದು ನೆನಪಿಸುವಂತೆ ಆ ತೇವವಾದ ಗಾಳಿಯಿಂದ ಕಹಳೆಯ ಶಬ್ದವೊಂದು ತೇಲಿಬಂತು. ತನ್ನ ಮೊನಚಾದ ಬಡಿಗೆಯಿಂದ ಸಣ್ಣ ಸಣ್ಣ ಬೆಣಚು ಕಲ್ಲುಗಳೊಂದಿಗೆ ಆಟವಾಡುತ್ತಿದ್ದ ಜೈಲಿನ ಸೂಪರಿಂಡೆಂಟ್ ಆ ಸೈರನ್‌ನ ಶಬ್ದಕ್ಕೆ ತಲೆಯೆತ್ತಿದ. ಸೇನೆಯ ವೈದ್ಯನಾಗಿದ್ದ ಈ ಜೈಲಿನ ಸೂಪರಿಂಡೆಂಟ್, “ಫ್ರಾನ್ಸಿಸ್, ಬೇಗನೇ ತಯಾರಾಗು! ಆಗಲೇ ಎಂಟು ಹೊಡೆಯಿತು. ಇಷ್ಟರಲ್ಲಾಗಲೇ ಈ ಖೈದಿಯು ಗಲ್ಲಿಗೇರಬೇಕಿತ್ತು.” ಎಂದು ಅಸಹನೆಯಿಂದ ಗೊಣಗುತ್ತಿದ್ದ. ಶ್ವೇತ ವಸ್ತ್ರವನ್ನು ಧರಿಸಿದ್ದ, ಕಪ್ಪನೆಯ ಮುಖ್ಯ ಜೈಲರ್ ಫ್ರಾನ್ಸಿಸ್ ತನ್ನ ಬಂಗಾರದ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತ, “ಆಯ್ತು ಸರ್! ಎಲ್ಲವನ್ನೂ ಸಮಾಧಾನಕರವಾಗಿ ಅಣಿಗೊಳಿಸಲಾಗಿದೆ. ಹ್ಯಾಂಗ್‌ಮನ್ ಸಹ ತಯಾರಿದ್ದಾನೆ. ನಾವಿನ್ನು ಶುರು ಮಾಡಬಹುದು,” ಎಂದು ಉತ್ತರಿಸಿದ.

“ಸರಿ ಹಾಗಾದರೆ. ಬೇಗ ನಡೆಯಿರಿ. ಗಲ್ಲಿಗೇರಿಸುವವರೆಗೂ ಉಳಿದ ಖೈದಿಗಳಿಗೆ ಬೆಳಗಿನ ಉಪಾಹಾರ ದೊರಕದು.”

ನಾವೆಲ್ಲರೂ ನಿಧಾನವಾಗಿ ನೇಣುಗಂಬದೆಡೆಗೆ ಹೆಜ್ಜೆ ಹಾಕತೊಡಗಿದೆವು. ಇಬ್ಬರು ಬಂದೂಕುಧಾರಿ ಕಾವಲುಗಾರರು ಆ ಖೈದಿಯ ಎರಡೂ ಕಡೆಗೆ ಸುತ್ತುವರೆದು ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿದ್ದರು. ನಾವೆಲ್ಲ ಇವರ ಹಿಂದೆ ಹೆಜ್ಜೆ ಹಾಕುತ್ತಿದ್ದೆವು. ಹಲವು ಮಾರು ದೂರ ಕ್ರಮಿಸುತ್ತಿದ್ದಂತೆಯೇ ಯಾವುದೇ ಆಜ್ಞೆ ಇಲ್ಲದೆ ನಮ್ಮ ಈ ಮೆರವಣಿಗೆ ಅನೀರೀಕ್ಷಿತವಾಗಿ ಸ್ಥಗಿತಗೊಂಡಿತು. ನಾವೆಲ್ಲ ನೋಡುತ್ತಿದ್ದಂತೆಯೇ ನಾಯಿಯೊಂದು ಬೊಗಳುತ್ತ ನಮ್ಮ ಮುಂದೆ ಪ್ರತ್ಯಕ್ಷವಾಯಿತು. ಇಷ್ಟೊಂದು ಜನರನ್ನು ಒಟ್ಟಿಗೆ ನೋಡಿ ಕ್ರೂರವಾಗಿ ದಿಟ್ಟಿಸುತ್ತ ನಮ್ಮ ಸುತ್ತಲೂ ಅಸಹನೆಯಿಂದ ಕುಪ್ಪಳಿಸತೊಡಗಿತು. ಕೆರಳಿದಂತಿದ್ದ ಈ ಕಂತ್ರಿ ನಾಯಿಯು ನಮ್ಮಲ್ಲೆರ ಊಹೆಗೂ ಮೀರಿ ಕೋಳಗಳಿಂದ ಬಂಧಿತನಾಗಿದ್ದ ಖೈದಿಯ ಮೇಲೆರೆಗಿ ಆತನ ಮುಖವನ್ನು ನೆಕ್ಕತೊಡಗಿತು. ದಿಗ್ಭ್ರಮೆಗೊಂಡ ನಾವೆಲ್ಲ ನಿಶ್ಚಲರಾಗಿ ನಿಂತಿದ್ದೆವು.

ಜೈಲಿನ ಸೂಪರಿಂಟೆಂಟ್ ಸಿಟ್ಟಿನಿಂದ ಕೂಗಾಡತೊಡಗಿದ. ಬಂದೂಕುಧಾರಿ ಕಾವಲುಗಾರನೊಬ್ಬ ಬೆಣಚು ಕಲ್ಲುಗಳನ್ನು ತೂರುತ್ತ ಕಂತ್ರಿ ನಾಯಿಯನ್ನು ಅಲ್ಲಿಂದ ಓಡಿಸಲು ಯತ್ನಿಸುತ್ತಿದ್ದ. ಇಡೀ ಸನ್ನಿವೇಶವನ್ನು ಈ ಕಂತ್ರಿ ನಾಯಿಯು ತನ್ನೆಡೆಗೆ ಸೆಳೆದುಕೊಂಡು ಕೆಲಕಾಲ ಅಸಂಗತತೆಯನ್ನು ಸೃಷ್ಟಿಸಿತ್ತು. ಆದರೆ ಇಡೀ ಸನ್ನಿವೇಶದ ಕೇಂದ್ರವಾಗಿದ್ದ ಖೈದಿ ಮಾತ್ರ ಇದಾವುದರಿಂದಲೂ ವಿಚಲಿತನಾಗದೆ ನಿರ್ವಿಕಾರದಿಂದಿದ್ದ. ಬಹುಶಃ ಈ ಘಟನೆಯೂ ಸಹ ಗಲ್ಲಿಗೇರಿಸುವ ಪ್ರಕ್ರಿಯೆಯ ಭಾಗವೆಂದು ಆತನಿಗೆ ಅನಿಸಿರಬಹುದೇನೊ. ಕಡೆಗೆ ಆ ಕಂತ್ರಿ ನಾಯಿಯ ಕೊರಳ ಪಟ್ಟಿಗೆ ಕಾಲರನ್ನೊಂದು ಬಿಗಿದು ಜೊತೆಗೆ ಎಳೆದೊಯ್ಯಲಾಯಿತು. ಇಷ್ಟಾದರೂ ಆ ಕಂತ್ರಿ ನಾಯಿಯು ಗುರುಗುಟ್ಟುತ್ತ, ನೆಗೆಯುತ್ತಾ, ಕುಣಿಯುತ್ತಲೇ ಇತ್ತು.

ನೇಣುಗಂಬ ಸುಮಾರು ನಲವತ್ತು ಮಾರು ದೂರದಲ್ಲಿತ್ತು. ಈ ಮೆರವಣಿಗೆಯನ್ನು ಹಿಂಬಾಲಿಸುತ್ತಿದ್ದ ನಾನು ನನ್ನ ಮುಂದೆ ನಡೆಯುತ್ತಿದ್ದ ಖೈದಿಯನ್ನು ಸೂಕ್ಷ್ಮವಾಗಿ ಗಮನಿಸಿದೆ. ತನ್ನ ಮೋಟುಗೈಯೊಂದಿಗೆ ಅಡ್ಡಾದಿಡ್ಡಿಯಾಗಿ ನಡೆಯುತ್ತಿದ್ದರೂ ಆತನ ಹೆಜ್ಜೆಯಲ್ಲಿ ಸ್ಥಿರತೆ ಇತ್ತು. ಮೊಣಕಾಲುಗಳು ಬಾಗಿದ್ದರೂ ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡುತ್ತಿದ್ದ. ನಡೆಯುವ ದಾರಿಯಲ್ಲಿ ಕೆಸರಿನ ಗುಂಡಿಗಳು, ಉಬ್ಬು ಬಂಡೆಗಳು ಎದುರಾದಾಗ ತನ್ನನ್ನು ಸುತ್ತುವರೆದಿದ್ದ ಬಂದೂಕಧಾರಿಗಳ ನಡುವೆಯೂ ಆ ಕೆಸರಿನ ಗುಂಡಿಗಳಲ್ಲಿ ಕಾಲಿಡದಂತೆ, ಉಬ್ಬು ಬಂಡೆಗಳನ್ನು ಎಡವದಂತೆ ಪಕ್ಕಕ್ಕೆ ಸರಿದು ನಾಜೂಕಾಗಿ ಮುನ್ನಡೆಯುತ್ತ್ತಿದ್ದ. ನಾನು ದಿಗ್ಭ್ರಮೆಗೊಂಡಿದ್ದೆ. ನೇಣುಗಂಬಕ್ಕೇರುತ್ತಿರುವ ವ್ಯಕ್ತಿ ತನ್ನ ಪಾದಗಳಿಗೆ ಕೆಸರು ಅಂಟಬಾರದೆಂದು, ಬಂಡೆಗಳನ್ನು ಎಡವಬಾರದೆಂದು ಎಚ್ಚರಿಕೆ ವಹಿಸುವ ದೃಶ್ಯವನ್ನು ಕಣ್ಣಾರೆ ಕಂಡಾಗ ಜೀವನವನ್ನು ತುಂಬಿಕೊಂಡಿರುವ ವ್ಯಕ್ತಿಯೊಬ್ಬನ ಜೀವವನ್ನು ಮೊಟುಕುಗೊಳಿಸುವ ನಮ್ಮ ಕೃತ್ಯದಲ್ಲಿ ಬಲು ದೊಡ್ಡ ದೋಷವಿದೆಯೆಂದು ನನ್ನ ಅಂತರಾತ್ಮ ಕೂಗುತ್ತಿತ್ತು. ಆ ಖೈದಿಯ ಕಣ್ಣುಗಳು ಬೆಣಚು ಕಲ್ಲುಗಳನ್ನು, ಕಂದು ಗೋಡೆಗಳನ್ನು ಗಮನಿಸುತ್ತಿದ್ದವು. ಆತನ ಮಿದುಳು ಕೆಸರಿನ ಗುಂಡಿಗಳನ್ನು ಕುರಿತಾಗಿ ಎಚ್ಚರಿಸುತ್ತಿತ್ತು. ಆತ ಮತ್ತು ನಾವೆಲ್ಲ ಒಟ್ಟಾಗಿ ಒಂದೇ ಜಗತ್ತಿನಲ್ಲಿ ನಡೆಯುತ್ತಿದ್ದೆವು, ಕೇಳುತ್ತಿದ್ದೆವು, ಗ್ರಹಿಸುತ್ತಿದ್ದೆವು. ಆದರೆ ಮುಂದಿನ ಕೆಲವು ನಿಮಿಷಗಳಲ್ಲಿ, ಒಂದೇ ಒಂದು ಕ್ಲಿಕ್ಕಿನಲ್ಲಿ ಒಂದು ಜೀವ ಕಡಿಮೆಯಾಗುತ್ತದೆ, ಒಂದು ಜಗತ್ತು ಕಡಿಮೆಯಾಗುತ್ತದೆ.

ಒಂದು ಸಣ್ಣ ಬಯಲಿನಲ್ಲಿ ನೇಣುಗಂಬವು ಪ್ರತ್ಯೇಕವಾಗಿ ನೆಲೆ ನಿಂತಿತ್ತು. ಮೇಲಿನ ಎರಡು ಉಕ್ಕಿನ ಕಂಬಗಳ ನಡುವೆ ಹಗ್ಗದ ಕುಣಿಕೆಯೊಂದು ನೇತಾಡುತ್ತಿತ್ತು. ನೇಣುಗಂಬದ ಬಳಿ ಕಾಯುತ್ತಿದ್ದ ಬಿಳಿಯ ಸಮವಸ್ತ್ರದಲ್ಲಿರುವ ಹ್ಯಾಂಗ್‌ಮನ್ ದಾಸ್ಯದ ವಿನಯದ ಮೂಲಕ ನಮ್ಮನ್ನು ಸ್ವಾಗತಿಸಿದ. ಜೈಲರ್ ಫ್ರಾನ್ಸಿಸ್‌ನ ಆದೇಶದಂತೆ ಬಂದೂಕುಧಾರಿ ಕಾವಲುಗಾರರು ಖೈದಿಯನ್ನು ಅಡ್ಡಾದಿಡ್ಡಿಯಾಗಿ ಮೇಲೆತ್ತಿ ನೇಣುಗಂಬದ ಬಳಿ ನಿಲ್ಲಿಸಿದರು. ನಂತರ ಹ್ಯಾಂಗ್‌ಮನ್ ಮೇಲೇರಿ ನೇಣಿನ ಕುಣಿಕೆಯನ್ನು ಖೈದಿಯ ಕೊರಳ ಸುತ್ತ ಬಿಗಿಗೊಳಸಿದ.

ನಾವು ಕೆಲ ಮಾರುಗಳ ದೂರದಲ್ಲಿ ನಿಂತು ಕಾಯುತ್ತಿದ್ದೆವು. ಬಂದೂಕುಧಾರಿ ಕಾವಲುಗಾರರು ನೇಣುಗಂಬದ ಸುತ್ತ ಒಂದು ವೃತ್ತವಾಗಿ ಸುತ್ತುವರೆದರು. ಕುಣಿಕೆಯು ತನ್ನ ಕೊರಳಿನ ಸುತ್ತ ಬಿಗಿಗೊಳ್ಳತೊಡಗಿದಾಗ ಖೈದಿಯು “ರಾಮ!ರಾಮ! ರಾಮ!” ಎಂದು ಎತ್ತರದ ಧ್ವನಿಯಲ್ಲಿ ನಿರಂತರವಾಗಿ ರೋಧಿಸಲಾರಂಬಿಸಿದ. ಆದರೆ ಧ್ವನಿಯಲ್ಲಿ, ರೋಧನೆಯಲ್ಲಿ ಭಯವಿರಲಿಲ್ಲ. ಸಹಾಯಕ್ಕಾಗಿ ಮೊರೆತವಿರಲಿಲ್ಲ. ಬದಲಾಗಿ ಒಂದು ಬಗೆಯ ಗಂಟೆಯ ನಾದದಂತಿತ್ತು. ಧ್ವನಿಯಲ್ಲಿ ಲಯಬದ್ಧತೆಯಿತ್ತು. ಈ ಧ್ವನಿಗೆ ಹತ್ತಿರದಲ್ಲಿದ್ದ ನಾಯಿಯು ಊಳಿಡುವಿಕೆಯ ಮೂಲಕ ಪ್ರತ್ಯುತ್ತರಿಸುತಿತ್ತು. ನೇಣುಗಂಬದ ಬಳಿ ನಿಂತಿದ್ದ ಹ್ಯಾಂಗ್‌ಮನ್ ಕಪ್ಪನೆಯ ಮುಸುಗನ್ನು ಹೊರತೆಗೆದು ಖೈದಿಯ ಮುಖದ ಮೇಲೆ ಹೊದಿಸಿದ. ಆ ಮುಸುಗನ್ನು ತೂರಿಕೊಂಡು “ರಾಮ! ರಾಮ! ರಾಮ!” ಶಬ್ದವು ಕೇಳಿಸುತ್ತಿತ್ತು.

ಹ್ಯಾಂಗ್‌ಮಾನ್ ನೇಣುಗಂಬದಿಂದ ಕೆಳಗಿಳಿದು ಬಂದು ಮೀಟುಗೋಲನ್ನು ಧೃಡವಾಗಿ ಬಳಸಿ ನಿಂತುಕೊಂಡ. ಖೈದಿಯಿಂದ ಎಲ್ಲಿಯೂ ತೊದಲದೆ ರೋದನೆ ಮುಂದುವರೆದಿತ್ತು. ಸೂಪರಿಂಡೆಂಟ್ ತನ್ನ ಬಡಿಗೆಯನ್ನು ನೆಲಕ್ಕೆ ತಟ್ಟುತ್ತ ಖೈದಿಯ ರೋದನವನ್ನು ಎಣಿಸುತ್ತಿದ್ದ. ಒಂದು, ಎರಡು…ಬಹುಶಃ ನೂರರವರೆಗೆ. ಅಲ್ಲಿರುವ ಪ್ರತಿಯೊಬ್ಬರ ಬಣ್ಣ ಬದಲಾಗುತ್ತಿತ್ತು.

ನಮ್ಮೆಲ್ಲರ ಮನಸಿನಲ್ಲಿ ತಲ್ಲಣಗಳುಂಟಾತೊಡಗಿತು. “ದಯವಿಟ್ಟು ಮುಗಿಸಿಬಿಡಿ! ಕೊನೆಗೊಳಸಿ ಜಿಗುಪ್ಸೆ ಹುಟ್ಟಿಸುವ ಈ ರೋದನೆಯನ್ನು!”

ಹಠಾತ್ತಾಗಿ ಸೂಪರಿಂಟೆಂಡೆಂಟ್ ತಲೆಯೆತ್ತಿ ತನ್ನ ಬಡಿಗೆಯನ್ನು ಗಾಳಿಯಲ್ಲಿ ಆಡಿಸುತ್ತ “ನಡೆಯಿರಿ” ಎಂದು ಆವೇಶದಿಂದ ಅಬ್ಬರಿಸಿದ.

ಅಗ ಝಣಗುಟ್ಟುವ ಮೌನ, ನಂತರ ನೀರವ ಮೌನ. ಖೈದಿಯು ಅಸ್ತಂಗತನಾಗಿದ್ದ, ಮತ್ತು ನೇಣಿನ ಕುಣಿಕೆಯು ಅಲ್ಲಿಯೇ ತಿರುಗುತ್ತಿತ್ತು. ನಾನು ನಾಯಿಯನ್ನು ಕಳಚಿದೆ. ಆಗ ಕೂಡಲೆ ನಾಯಿಯು ನಾಗಲೋಟದಿಂದ ನೇಣುಗಂಬದ ಹಿಂದಕ್ಕೆ ಓಡಿತು. ಅಲ್ಲಿ ನಿಂತು ಬೊಗಳಲಾರಂಬಿಸಿತು. ನಂತರ ಬಯಲಿನ ಮೂಲೆಗೆ ಹಿಮ್ಮೆಟ್ಟಿತು. ಅಲ್ಲಿನ ಕಸದ ನಡುವೆ ನಿಂತು ನಮ್ಮೆಡೆಗೆ ಭಯಭೀತನಾಗಿ ದೃಷ್ಟಿಸತೊಡಗಿತು. ನಾವೆಲ್ಲ ನೇಣುಗಂಬದ ಸುತ್ತ ಚಲಿಸುತ್ತ ಖೈದಿಯ ದೇಹವನ್ನು ಪರೀಕ್ಷಿಸತೊಡಗಿದೆವು. ಆ ಖೈದಿಯು ಬಂಡೆಗಲ್ಲಿನಂತೆ ನಿಧಾನವಾಗಿ ತಿರುಗುತ್ತಾ, ತನ್ನ ಕಾಲಬೆರಳನ್ನು ಕೆಳಮುಖವಾಗಿ ಗುರಿಯಿಡುತ್ತಾ ನೇತಾಡುತ್ತಿದ್ದ.

ಸೂಪರಿಂಡೆಂಟ್ ತನ್ನ ಬಡಗಿಯೊಂದಿಗೆ ನೇತಾಡುತ್ತಿದ್ದ ದೇಹದ ಬಳಿಗೆ ಸಾಗಿ, “ಆತ ಸರಿಯಾಗಿದ್ದಾನೆ” ಎಂದು ಉದ್ಗರಿಸಿ ನೇಣುಗಂಬದಿಂದ ಮರಳಿ ಹಿಂದಕ್ಕೆ ಬಂದು ನೀಳವಾಗಿ ಉಸಿರೆಳೆದುಕೊಂಡ. ಹಠಾತ್ತಾಗಿ ಆತನ ಮುಖದಿಂದ ವ್ಯಾಕುಲತೆ ಮರೆಯಾಯಿತು. ತನ್ನ ಕೈಗಡಿಯಾರವನ್ನು ನೋಡುತ್ತಾ ಗೊಣಗಿದ, “ಎಂಟು ನಿಮಿಷ ತಡವಾಯ್ತು. ಬೆಳಗಿನ ಜಾವಕ್ಕೆ ಇಷ್ಟು ಸಾಕು.”

ಕಾವಲುಗಾರರು ಬಂದೂಕುಗಳನ್ನು ಕಳಚಿಟ್ಟು ಅಲ್ಲಿಂದ ಹೊರನಡೆದರು. ತಾನು ದುರ್ವತನೆಯಿಂದ ನಡೆದುಕೊಂಡೆ ಎನ್ನುವ ಪಾಪಪ್ರಜ್ನೆಯಿಂದ ಕಂತ್ರಿ ನಾಯಿಯು ಅವರನ್ನು ಹಿಂಬಾಲಿಸಿತು.

ನಾವು ನೇಣುಗಂಬದ ಬಯಲಿನ ಜಾಗದಿಂದ ಹೊರನಡೆದು, ಕಾರಾಗೃಹದ ಸೆಲ್‌ಗಳನ್ನು ಮತ್ತು ಅದರೊಳಗೆ ಕಾಯುತ್ತಿರುವ ಖೈದಿಗಳನ್ನು ದಾಟಿಕೊಂಡು ಜೈಲಿನ ಮಧ್ಯಭಾಗಕ್ಕೆ ಬಂದು ತಲುಪಿದೆವು. ಅಷ್ಟರಲ್ಲಾಗಲೇ ಅಪರಾಧಿಗಳು ಕಾವಲುಗಾರರ ನಿರ್ದೇಶನದಡಿಯಲ್ಲಿ ತಮ್ಮ ಬೆಳಗಿನ ಉಪಹಾರವನ್ನು ಸೇವಿಸುತ್ತಿದ್ದರು. ಅವರ ಅಲ್ಯುಮೀನಿಯಂ ತಟ್ಟೆಗಳಿಗೆ ಅನ್ನ ಮತ್ತು ಸಾಂಬಾರನ್ನು ಬಡಿಸುತ್ತಿದ್ದರು. ಗಲ್ಲುಶಿಕ್ಷೆಯ ನಂತರ ಅಲ್ಲಿ ಒಂದು ಬಗೆಯ ಲವಲವಿಕೆಯ, ಮನೆಯ ವಾತಾವರಣ ನಿರ್ಮಾಣಗೊಂಡಿತ್ತು. ಕೆಲಸವನ್ನು ಮುಗಿಸಿದ ನಿರಾಳತೆಯ ಭಾವವನ್ನು ಪ್ರತಿಯೊಬ್ಬರ ಮುಖದಲ್ಲೂ ನೋಡಬಹುದಾಗಿತ್ತು.

ಅಲ್ಲಿ ನನ್ನ ಬಳಿ ಸುಳಿದಾಡುತ್ತಿದ್ದ ಹುಡುಗನೊಬ್ಬ ಮುಗುಳ್ನಗುತ್ತಾ, “ತನ್ನ ಕ್ಷಮಾದಾನದ ಅಪೀಲನ್ನು ವಜಾಗೊಳಿಸಿದ ಸುದ್ದಿಯನ್ನು ಕೇಳಿ ಅವನು (ನೇಣುಗಂಬಕ್ಕೇರಿದ ವ್ಯಕ್ತಿ) ತನ್ನ ಸೆಲ್ ಒಳಗೆ ಉಚ್ಚೆ ಹೊಯ್ದುಕೊಂಡದ್ದು ನಿಮಗೆ ಗೊತ್ತ ಸರ್? ದಯವಿಟ್ಟು ಈ ಸಿಗರೇಟನ್ನು ತೆಗೆದುಕೊಳ್ಳಿ. ಇದು ಯುರೋಪಿಯನ್ ಕ್ಲಾಸ್‌ದು ಸರ್. ಕೇವಲ ಎರಡು ರೂಪಾಯಿ ಮಾತ್ರ,” ಎಂದು ಗೋಗರೆಯತೊಡಗಿದ್ದ. ಆಗ ಎಲ್ಲರೂ ನಕ್ಕರು, ಯಾತಕ್ಕೆಂದು ಗೊತ್ತಿಲ್ಲದೆ.

ಸೂಪರಿಂಟೆಂಡೆಂಟ್ ಜೊತೆಗೆ ನಡೆಯುತ್ತ ಜೈಲರ್ ಪ್ರಾನ್ಸಿಸ್ ತೀವ್ರ ವಾಚಾಳಿತನದಿಂದ ಹೇಳುತ್ತಿದ್ದ, “ಎಲ್ಲವೂ ಸುಸೂತ್ರವಾಗಿ ನಡೆಯಿತು ಸರ್! ಇದು ಸರಳವಾಗಿ ಮುಗಿದುಹೋದ ಕಥೆ. ಕೆಲವೊಮ್ಮೆ ಏನಾಗುತ್ತಿತ್ತು ಗೊತ್ತೇ?ವೈದ್ಯನಾದವನು ನೇಣುಗಂಬದ ಕೆಳಕ್ಕೆ ತೆರಳಿ ನೇತಾಡುತ್ತಿದ್ದ ಖೈದಿಯ ಕಾಲುಗಳನ್ನು ಎಳೆದೆಳೆದು ಸತ್ತಿದ್ದಾನೆಂದು ಖಾತರಿಪಡಿಸಿಕೊಳ್ಳಬೇಕಾಗುತ್ತಿತ್ತು.ಇದು ಬಹಳ ಜಿಗುಪ್ಸೆ ಹುಟ್ಟಿಸುತ್ತಿತ್ತು ಸರ್.”

“ನಿಜಕ್ಕೂ ಹಾಗೆಯೇ? ಹಾಗಿದ್ದರೆ ಇದು ಬಹಳ ಕೆಡುಕಾದದ್ದು,” ಎಂದು ಸೂಪರಿಂಟೆಂಡೆಂಟ್ ಉತ್ತರಿಸಿದ.

“ಹಿಂದೊಮ್ಮೆ ಏನಾಯಿತೆಂದರೆ, ನೇಣುಗಂಬಕ್ಕೇರಬೇಕಾಗಿದ್ದ ಖೈದಿಯೊಬ್ಬ ತನ್ನ ಸೆಲ್‌ನ ಸರಳುಗಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದ. ಅದರಿಂದ ಅವನನ್ನು ಬಿಡಿಸಲು ಆರು ಕಾವಲುಗಾರರು ಬೆವರಿಳಿಸಬೇಕಾಯಿತು. ನಾವು, ’ಸ್ನೇಹಿತನೇ, ನಿನ್ನ ಈ ವರ್ತನೆಯಿಂದ ನಮಗೆಲ್ಲ ಕೊಡುತ್ತಿರುವ ತೊಂದರೆಗಳನ್ನು ನೀನು ಅರ್ಥ ಮಾಡಿಕೊಳ್ಳಬೇಕು,’ ಎಂದು ಆ ಖೈದಿಗೆ ಹೇಳಿದೆವು. ಆದರೆ ಆತ ನಮ್ಮ ಮಾತನ್ನೇ ಕೇಳುವ ಸ್ಥಿತಿಯಲ್ಲಿರಲಿಲ್ಲ.”

ನಾನು ಗಹಗಹಿಸಿ ನಗುತ್ತಿರುವುದು ನನ್ನ ಗಮನಕ್ಕೆ ಬಂತು. ಎಲ್ಲರೂ ನಗುತ್ತಿದ್ದರು. ಸೂಪರಿಂಟೆಂಡೆಂಟ್, “ನನ್ನ ಬಳಿ ವಿದೇಶಿ ಮದ್ಯವಿದೆ. ಬನ್ನಿ,” ಎಂದು ಕರೆಯುತ್ತಿದ್ದ.

ನಾವೆಲ್ಲ ಕಾರಾಗೃಹದ ಹೆಬ್ಬಾಗಿಲನ್ನು ದಾಟಿಕೊಂಡು ಹೊರಗಿನ ಬಯಲಿಗೆ ಬರುತ್ತಿರುವಾಗ ನೇತಾಡುತ್ತಿರುವ ಅವನ ಕಾಲುಗಳನ್ನು ಎಳೆದು ಎಂದು ಉದ್ಗರಿಸುತ್ತ ಬರ್ಮಾದ ಮಾಜಿಸ್ಟ್ರೇಟ್ ಗಹಗಹಿಸಿ ನಗತೊಡಗಿದ. ನಾವೆಲ್ಲ ನಗತೊಡಗಿದೆವು. ಆ ಸಮಯದಲ್ಲಿ ಜೈಲರ್ ಫ್ರಾನ್ಸಿಸ್ ನೀಡಿದ ವಿವರ ನಿಜಕ್ಕೂ ತಮಾಶೆಯಾಗಿತ್ತು. ನಾವೆಲ್ಲ ನಗುತ್ತ, ನಲಿಯುತ್ತ ಕುಡಿಯುತ್ತಿದ್ದೆವು. ನೂರು ಮಾರು ದೂರದಲ್ಲಿ ಸತ್ತ ವ್ಯಕ್ತಿ ನೇತಾಡುತ್ತಿದ್ದ.

(1931ರಲ್ಲಿ ಜಾರ್ಜ್ ಅರ್ವೆಲ್ ಬರ್ಮಾ ಜೈಲಿನಲ್ಲಿ ಕ್ಲರ್ಕ್ ಆಗಿದ್ದಾಗ ನಡೆದ ಘಟನೆ.)

One thought on “ಒಂದು ಗಲ್ಲು ಶಿಕ್ಷೆ

Leave a Reply

Your email address will not be published. Required fields are marked *