ದುಷ್ಟರ ನಿರ್ಭೀತಿ, ವಿಕೃತಿಗಳ ನಡುವೆ ನ್ಯಾಯಾಗ್ರಹ ಮತ್ತು ಆತಂಕಗಳು…

– ರವಿ ಕೃಷ್ಣಾರೆಡ್ಡಿ

ಕಳೆದ ಶನಿವಾರ ನಾವಂದುಕೊಂಡಂತೆ ಆಗಲಿಲ್ಲ. ಶುಕ್ರವಾರ ಮಂಗಳೂರಿನ ನ್ಯಾಯಾಲಯ ನವೀನ್ ಸೂರಿಂಜೆಯವರ ಜಾಮೀನು ವಿಷಯಕ್ಕೆ ಆದೇಶ ನೀಡಲಿಲ್ಲ. ಮಾರನೇ ದಿನ ನೀಡುವುದಾಗಿ ಪ್ರಕಟಿಸಿದ್ದರು. ಹಾಗಾಗಿ, ಬಹುಶಃ ಜೈಲಿನಿಂದ ಹೊರಗೆ ಭೇಟಿಯಾದರೂ ಆಗಬಹುದು ಎಂದು ನಾವುಗಳು ಭಾವಿಸಿದ್ದಂತೆ ಆಗಲಿಲ್ಲ.

ಶುಕ್ರವಾರ ರಾತ್ರಿ ನನ್ನ ಇತರೆ ಸ್ನೇಹಿತರ ಜೊತೆ ಸುಳ್ಯದಲ್ಲಿ ನಮ್ಮ ವರ್ತಮಾನ.ಕಾಮ್ ಬಳಗದ ಲೇಖಕ ಡಾ.ಕೆ.ಆರ್. ಆಶೋಕರ ರೂಮಿನಲ್ಲಿ ಉಳಿದುಕೊಂಡಿದ್ದ ನಾವುಗಳು ಮಾರನೆ ದಿನ ಡಾ. ಅಶೋಕರನ್ನೂ ಕರೆದುಕೊಂಡು ಬೆಳಗ್ಗೆ ಹತ್ತಕ್ಕೆ ಮಂಗಳೂರು ತಲುಪಿದೆವು. ಬೆಂಗಳೂರಿನಿಂದ ನಮ್ಮ ಬಳಗದ ಬಿ.ಶ್ರೀಪಾದ್ ಭಟ್ ಬಸ್ಸಿನಲ್ಲಿ ಪ್ರತ್ಯೇಕವಾಗಿ ಅಲ್ಲಿಗೆ ಆಗಾಗಲೆ ಬಂದು ತಲುಪಿದ್ದರು. ಗೆಳೆಯ ಮುನೀರ್ ಕಾಟಿಪಾಳ್ಲ ಮತ್ತು ನಮ್ಮ ಬಳಗದ ಮತ್ತೋರ್ವ ಲೇಖಕ ತೇಜ ಸಚಿನ್ ಪೂಜಾರಿ ಸಹ ಅಲ್ಲಿ ಜೊತೆಯಾದರು. ಜೈಲಿನಲ್ಲಿ ಸಂದರ್ಶನಕ್ಕೆ ಬಿಡುವುದು ಹನ್ನೊಂದುವರೆಯ ನಂತರ. ಅಲ್ಲಿಯವರೆಗೆ ಮಾತನಾಡಿಕೊಂಡಿದ್ದ ನಾವು ಸಮಯಕ್ಕೆ ಸರಿಯಾಗಿ ಜೈಲಿಗೆ ಹೋಗಿ ನವೀನರನ್ನು ಭೇಟಿಯಾದೆವು. ಯಾವುದೇ ನಿರಾಶೆ ಮತ್ತು ಭಯಾತಂಕಗಳು ಅವರ ಮುಖದಲ್ಲಿ ಕಾಣಲಿಲ್ಲ. ಅದೊಂದು ಸಮಾಧಾನದ ಸಂಗತಿ. ವರ್ತಮಾನ.ಕಾಮ್‌ಗೆ ಬರೆಯುವ ನಾವು ನಾಲ್ಕು ಜನ ಇತರೆ ಸ್ನೇಹಿತರ ಜೊತೆ ಸರಳುಗಳ ಈಚೆ ಬದಿ, ಅತ್ತ ನವೀನ್ ಸೂರಿಂಜೆ. ಅಂದು ತಮ್ಮನನ್ನು ನೋಡಲು ಮುಂಬಯಿಯಿಂದ ನವೀನರ ಅಣ್ಣ ಬಂದಿದ್ದರು. ಅವರೂ ಗೆಲುವಾಗೇ ಇದ್ದರು. ನಾವೂ ಸಹ ಮೇಲ್ನೋಟಕ್ಕೆ ಇದ್ದೆವು. ಆದರೆ ಒಳಗೆ ಎಲ್ಲರಲ್ಲೂ ವಿಷಾದವಿತ್ತು.

ಹಿಂದಿನ ದಿನ ಮುಂದೂಡಲಾಗಿದ್ದ ಕೋರ್ಟ್ ಆದೇಶ ಅಂದು ಮಧ್ಯಾಹ್ನ ಇತ್ತು. ಸಾಧ್ಯವಾದರೆ ಅಂದು ಇದ್ದಾದರೂ ಸರಿ ನವೀನರನ್ನು ಜೈಲಿನಿಂದ ಹೊರಗೆ ನೋಡೋಣ ಎಂದು ನಾವೆಲ್ಲ ಭೇಟಿಯ ನಂತರ ಕೋರ್ಟ್‌ಗೆ ಹೋಗಿ ಆದೇಶಕ್ಕೆ ಕಾದು ಕುಳಿತೆವು. ಒಳಗೆ ನಾನು ನಟೇಶ್ ಉಲ್ಲಾಳ್ ಮತ್ತು ವಿದ್ಯಾ ದಿನಕರ್ ದಂಪತಿಯವರೊಡನೆ ಕುಳಿತಿದ್ದೆ. ನಾಲ್ಕೂವರೆ ಸುಮಾರಿಗೆ ನ್ಯಾಯಮೂರ್ತಿಗಳು ಒಂದು ವಾಕ್ಯದಲ್ಲಿ ಜಾಮೀನು ನಿರಾಕರಿಸಿ ಆದೇಶ ಇತ್ತರು. ಇನ್ನುಳಿದಿದ್ದ ಭರವಸೆ ಸೋಮವಾರ ಹೈಕೋರ್ಟ್‌ನಲ್ಲಿದ್ದ ಅರ್ಜಿವಿಚಾರಣೆ.

ಮೊನ್ನೆ ಸೋಮವಾರ ರಾಜ್ಯ ಹೈಕೋರ್ಟ್ ನವೀನರ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಿತು. ಆ ಆದೇಶದ ಅಧಿಕೃತ ಪ್ರತಿ ಸೂಕ್ತ ಸಮಯಕ್ಕೆ ಸಿಗದ ಕಾರಣ ನೆನ್ನೆ ಮಂಗಳೂರು ನ್ಯಾಯಾಲಯದಲ್ಲಿ ಜಾಮೀನು ಆಗಲಿಲ್ಲ. ಹೋಮ್‌ಸ್ಟೇ ದಾಳಿಗೆ ಸಂಬಂಧಿಸಿದ ವಿಚಾರಣೆಗೆ ಎಲ್ಲಾ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ನೆನ್ನೆ ಅಲ್ಲಿಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಆ ಸಂಬಂಧ ವಿಚಾರಣಾಧೀನ ಕೈದಿಗೆ ಅನಗತ್ಯವಾಗಿ ಕೈಕೋಳ ತೊಡಿಸಿ ಕರೆದೊಯ್ಯಬಾರದು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿ ನವೀನ್ ಸೂರಿಂಜೆಗೆ ಕೈಕೋಳ ತೊಡಿಸಿ ಅಲ್ಲಿಯ ಪೋಲಿಸರು ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಇದನ್ನು ಬೇಜವಾಬ್ದಾರಿ ಅಥವ ಅಜ್ಞಾನ ಎನ್ನಲಾಗದು. ಇದೊಂದು ವಿಕೃತಿ. ಶಿಕ್ಷೆಯ ಭೀತಿ ಇಲ್ಲದಿದ್ದಾಗ ಪಟ್ಟಭದ್ರರ ಮತ್ತು ಪೋಲಿಸರ ಸಹಜ ನಡವಳಿಕೆ ಅಮಾನವೀಯವೂ, ವಿಕೃತವೂ ಆಗಿರುತ್ತದೆ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು.

ಇಂದು ಬಹುಶಃ ನವೀನ್ ಸೂರಿಂಜೆ ಜಾಮೀನಿನ ಮೇಲೆ ಬಿಡುಗಡೆ ಆಗಬಹುದು. ಆದರೆ, ಅವರ ಮೇಲಿನ ಆರೋಪಗಳು ಹಾಗೆಯೇ ಇವೆ. ಕಾನೂನು ಹೋರಾಟ ದೀರ್ಘವಾಗಿದೆ. ತಡೆಯಾಜ್ಞೆ ತೆರವಾದರೆ ವಿಚಾರಣೆ, ಬಂಧನ, ಏನು ಬೇಕಾದರೂ ಆಗಬಹುದು. ನ್ಯಾಯಾಲಯಕ್ಕೆ ಹೋಗಿಬರುವುದಂತೂ ಇದ್ದೇ ಇದೆ.

ಒಂದು ನಾಗರೀಕ, ಪ್ರಜ್ಞಾವಂತ ಸಮಾಜದಲ್ಲಿ ಈ ಎಲ್ಲಾ ಘಟನೆಗಳು ಘಟಿಸಬೇಕೆ? ವ್ಯವಸ್ಥೆಯದು ಇರಲಿ, ಸಮಾಜದ ನೈತಿಕತೆ ಮತ್ತು ಪ್ರಜ್ಞಾವಂತಿಕೆಗೆ ಏನಾಗಿದೆ?

ಮತ್ತು, ವಿಶೇಷವಾಗಿ ಮಂಗಳೂರಿನಲ್ಲಿ ಏನಾಗುತ್ತಿದೆ? ಅಲ್ಲಿಯ ಭ್ರಷ್ಟರು, ಕೋಮುವಾದಿಗಳು, ಫ್ಯಾಸಿಸ್ಟ್ ಶಕ್ತಿಗಳು, ಜಮೀನ್ದಾರರು, ಜಾತಿವಾದಿಗಳು, ಪೋಲಿಸ್ ಮತ್ತು ಇತರೆ ಆಡಳಿತ ವ್ಯವಸ್ಥೆ, ಎಲ್ಲರೂ ಜೊತೆಯಾಗಿದ್ದಾರೆ. ಪ್ರಗತಿಪರ ವಿಚಾರಗಳಿಗೆ ಮತ್ತು ನ್ಯಾಯಕ್ಕಾಗಿ ಹೋರಾಡುವವರಿಗೆ ಅಲ್ಲಿ ಸವಾಲುಗಳು ಮಾತ್ರವಲ್ಲ, ಭಯಾತಂಕಗಳೂ ಇವೆ. ಪ್ರಗತಿಪರರು ಬಹಳ ಎಚ್ಚರಿಕೆಯಿಂದ ಇರಬೇಕಿದೆ. ತಮ್ಮ ವೈಯಕ್ತಿಕ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಫೋನಿನಲ್ಲಿ ಸಹ ಎಷ್ಟು ಮಾತನಾಡಬೇಕು, ಏನು ಮಾತನಾಡಬೇಕು ಎನ್ನುವ ಬಗ್ಗೆ ಜಾಗ್ರತೆ ವಹಿಸಬೇಕಿದೆ. ದಮನಕಾರಿಗಳಿಗೆ ಇದು ವೈಯಕ್ತಿಕ ಅಲ್ಲ. ಆದರೆ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವಿಚಾರವನ್ನು ಮತ್ತು ನ್ಯಾಯಾಗ್ರಹವನ್ನು ದಮನಿಸುವ ಸಂಚು. ಇದನ್ನು ಎದುರಿಸುವುದಕ್ಕೆ ಕೇವಲ ನಮ್ಮ ಪ್ರಾಮಾಣಿಕತೆ ಮತ್ತು ನೈತಿಕತೆಯಷ್ಟೇ ಸಾಲದು. ಮತ್ತೇನು ಬೇಕು ಎನ್ನುವುದಕ್ಕೆ ಉತ್ತರ ಸರಳವಿಲ್ಲ. ಸಾಧ್ಯವಾದರೆ ಸಂಘಟಿತ ನೆಲೆಯಲ್ಲಿ, ಇಲ್ಲವಾದರೆ ನಮ್ಮ ವೈಯಕ್ತಿಕ ನೆಲೆಯಲ್ಲಿ, ನಾವೇ ಕಂಡುಕೊಳ್ಳಬೇಕು.

One thought on “ದುಷ್ಟರ ನಿರ್ಭೀತಿ, ವಿಕೃತಿಗಳ ನಡುವೆ ನ್ಯಾಯಾಗ್ರಹ ಮತ್ತು ಆತಂಕಗಳು…

  1. anand prasad

    ಪ್ರಗತಿಪರ ನಿಲುವಿನ ವ್ಯಕ್ತಿಗಳ ಚಲನವಲನಗಳನ್ನು ಕಂಡುಹಿಡಿಯಲು ಗುಪ್ತಚರ ಇಲಾಖೆಯ ಜನರನ್ನು ಬಿಡುವುದು, ಪ್ರಗತಿಪರ ನಿಲುವಿನ ವ್ಯಕ್ತಿಗಳ ಫೋನ್ ಕರೆಗಳನ್ನು ಕದ್ದಾಲಿಸುವುದು ಇವೆಲ್ಲ ಫ್ಯಾಸಿಸ್ಟ್ ಶಕ್ತಿಗಳು ಆಡಳಿತಕ್ಕೆ ಬಂದಾಗ ನಡೆಸುವ ಕುಟಿಲ ತಂತ್ರಗಳು. ದಕ್ಷಿಣ ಕನ್ನಡ ಅದರಲ್ಲೂ ಮುಖ್ಯವಾಗಿ ಮಂಗಳೂರಿನಲ್ಲಿ ಮೂಲಭೂತವಾದಿಗಳು ತಾಲಿಬಾನ್ ಪರ್ಯಾಯ ಆಡಳಿತ ನಡೆಸುವಂತೆ ಪರ್ಯಾಯ ಆಡಳಿತ ನಡೆಸುತ್ತಿದ್ದಾರೆ. ಇಲ್ಲಿ ಭಾರತದ ಕಾನೂನುಗಳು ಹಾಗೂ ಸಂವಿಧಾನ ಅನ್ವಯ ಆಗುವುದಿಲ್ಲ. ಇಲ್ಲಿ ಅಲಿಖಿತ ಕೇಸರಿ ಕಾನೂನುಗಳು ಅನ್ವಯ ಆಗುತ್ತವೆ. ಕೇಸರಿ ಕಾನೂನುಗಳನ್ನು ವಿರೋಧಿಸುವವರಿಗೆ ತೊಂದರೆ ತಪ್ಪಿದ್ದಲ್ಲ. ಹಾಗಾಗಿ ಪ್ರಗತಿಶೀಲ ನಿಲುವಿನ ವ್ಯಕ್ತಿಗಳು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಇದನ್ನೆಲ್ಲಾ ರಿಪೇರಿ ಮಾಡುವುದು ಜನರು ಮನಸ್ಸು ಮಾಡಿದರೆ ಸಾಧ್ಯ. ಹಾಗಾಗಬೇಕಾದರೆ ಕೇಸರಿ ಶಕ್ತಿಗಳು ಇಲ್ಲಿ ಚುನಾವಣೆಗಳಲ್ಲಿ ಸೋಲಬೇಕು ಅಥವಾ ರಾಜ್ಯದಲ್ಲಿ ಕೇಸರಿಯೇತರ ಸರಕಾರ ಬರಬೇಕು. ಅಲ್ಲಿಯವರೆಗೆ ಇಲ್ಲಿನ ಕೇಸರಿ ಶಕ್ತಿಗಳು ಅಟ್ಟಹಾಸ ಮೆರೆಯಬಹುದು. ಕಾಂಗ್ರೆಸ್ಸಿಗೆ ಪರ್ಯಾಯವಾಗಿ ದೇಶದಲ್ಲಿ ಮಧ್ಯಮ ವರ್ಗ ಬೆಂಬಲಿಸುವ ಇನ್ನೊಂದು ರಾಜಕೀಯ ಪಕ್ಷ ಕೇಸರಿಯೇತರವಾಗಿ ಬೆಳೆಯಬೇಕಾದ ಅಗತ್ಯ ಇದೆ. ಇಲ್ಲದೆ ಹೋದರೆ ದೇಶವು ಕೇಸರಿ ಮೂಲಭೂತವಾದಿಗಳ ಅಟ್ಟಹಾಸಕ್ಕೆ ನಲುಗಬೇಕಾಗಿ ಬರುತ್ತದೆ.

    Reply

Leave a Reply

Your email address will not be published. Required fields are marked *