ಪ್ರಜಾ ಸಮರ-10 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ದಂಡಕಾರಣ್ಯವೆಂಬುದು ಇಂದು ಮಧ್ಯಭಾರತದ ನಾಲ್ಕು ರಾಜ್ಯಗಳ ನಡುವೆ ಹಂಚಿ ಹೋಗಿರುವ ಅರಣ್ಯವಾದರೂ ಇಂದಿಗೂ ಈ ಅರಣ್ಯದಲ್ಲಿ ವಾಸಿಸುವ ಎಪ್ಪತ್ತು ಲಕ್ಷ ಆದಿವಾಸಿ ಬುಡಕಟ್ಟು ಜನಾಂಗಗಳ ಪಾಲಿಗೆ ಒಂದೇ ತಾಯಿ ನೆಲವಾಗಿದೆ.

ಮಹಾರಾಷ್ಟ್ರದ ಗಡ್‌ಚಿರೋಲಿ, ಭಂಡಾರ, ಮಧ್ಯಪ್ರದೇಶದ ಬಾಳ್‌ಘಾಟ್, ರಾಜ್‌ನಂದನ್‌ಗಾವ್, ಛತ್ತೀಸ್ ಗಡದ ಕಂಕೇರ್, ಬಸ್ತಾರ್, ಒರಿಸ್ಸಾದ ದಂತೇವಾಡ, ಮಲ್ಕನ್ ಗಿರಿ ಎಂಬ ನಾಲ್ಕು ರಾಜ್ಯಗಳ ಎಂಟು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ದಂಡಕಾರಣ್ಯದ ಪ್ರಾಕೃತಿಕ ಸಂಪತ್ತು ಈಗ ಆದಿವಾಸಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ಅರಣ್ಯದ ನಡುವೆ ಹರಿಯುವ ನದಿಗಳು, ಇಲ್ಲಿನ ಬಿದಿರು, ತೇಗ, ಹೊನ್ನೆ ಮರಗಳು, ಬೀಡಿ ತಯಾರಿಕೆಗೆ ಬಳಸಲಾಗುವ ತೆಂಡು ಮರದಎಲೆಗಳು, ಈ ನೆಲದ ಗರ್ಭದಡಿಯಲ್ಲಿ ಅಡಗಿರುವ ತಾಮ್ರ, ಕಲ್ಲಿದ್ದಲು, ಬಾಕ್ಷೈಟ್, ಗ್ರಾನೈಟ್ ಮತ್ತು ಮಾರ್ಬಲ್, ಲೈಮ್ ಸ್ಟೋನ್ ( ಸಿಮೆಂಟ್ ತಯಾರಿಕೆಗೆ ಬಳಸುವ ಸುಣ್ಣದ ಕಲ್ಲು) ಇವೆಲ್ಲವೂ ನಿರಂತರ ಲೂಟಿಯಾಗುತಿದ್ದು, ಇವುಗಳ ರಕ್ಷಕರಾಗಿ, ದಂಡಕಾರಣ್ಯದ ಮಕ್ಕಳಾಗಿ ಬದುಕಿದ್ದ ಗೊಂಡಾ ಮತ್ತು ಕೋಯಾ ಬುಡಕಟ್ಟು ಜನಾಂಗ ಸೇರಿದಂತೆ ಹಲವಾರು ಆದಿವಾಸಿಗಳು ಈಗ ತಮ್ಮ ಕಣ್ಣೆದುರುಗಿನ ದರೋಡೆಗೆ ಮೂಕ ಸಾಕ್ಷಿಗಳಾಗಿದ್ದಾರೆ. ದಂಡಕಾರಣ್ಯದ ನೈಸರ್ಗಿಕ ಸಂಪತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಹೇಗಿತ್ತು ಎಂಬುದಕ್ಕೆ ಪ್ರಖ್ಯಾತ ಪಕ್ಷಿ ತಜ್ಞ ಸಲೀಂ ಅಲಿಯವರ ಆತ್ಮ ಕಥನ “The fall of a Sparrow” (ಒಂದು ಗುಬ್ಬಚ್ಚಿಯ ಪತನ) ಕೃತಿಯನ್ನು ನಾವು ಓದಬೇಕು. 1930ರ ದಶಕದಲ್ಲಿ ಈ ಪ್ರದೇಶಕ್ಕೆ ಪಕ್ಷಿಗಳ ಅಧ್ಯಯನಕ್ಕೆ ಹೋಗಿದ್ದ ಸಲೀಂ ಅಲಿಯವರು ಇಲ್ಲಿನ ಪಾಕೃತಿಕ ಸಂಪತ್ತು, ಬುಡಕಟ್ಟು ಜನಾಂಗ, ಅವರ ಸಂಸ್ಕೃತಿ ಎಲ್ಲವನ್ನೂ ವಿವರವಾಗಿ ಅಲ್ಲದಿದ್ದರೂ, ಸಾಂದರ್ಭಿಕವಾಗಿ ಪ್ರಸ್ತಾಪಿಸಿದ್ದಾರೆ.

ನಮ್ಮನ್ನಾಳುವ ಸರ್ಕಾರಗಳ ದಿವು ನಿರ್ಲಕ್ಷ್ಯ ಮತ್ತು ವಿಫಲತೆ ಹಾಗೂ ಜನಪ್ರತಿನಿಧಿಗಳ ಹಗಲು ದರೋಡೆಗೆ ಬೇಸತ್ತ ಇಲ್ಲಿನ ಆದಿವಾಸಿಗಳು ಮಾವೋವಾದಿ ನಕ್ಸಲರ ನೇತೃತ್ವದಲ್ಲಿ ಈಗ ತಮ್ಮದೇ ಆದ ಜನತಾ ಸರ್ಕಾರ ರಚಿಸಿಕೊಂಡು ಬದುಕಿತಿದ್ದಾರೆ. ದಂಡಕಾರಣ್ಯ ವ್ಯಾಪ್ತಿಯ 2,800 ಹಳ್ಳಿಗಳಲ್ಲಿ ಮಾವೋವಾದಿ ನಕ್ಷಲರ ನೇತೃತ್ವದ ಪರ್ಯಾಯ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಈ ಹಳ್ಳಿಗಳಿಗೆ ಯಾವೊಬ್ಬ ಜನಪ್ರತಿನಿಧಿ, ಸರ್ಕಾರಿ ನೌಕರ ಕಾಲಿಡಲಾಗದ ಪರಿಸ್ಥಿತಿ ಉದ್ಬವವಾಗಿದೆ. ತಮ್ಮ ಸುದೀರ್ಘ ಮೂರು ದಶಕಗಳ ಒಡನಾಟದಿಂದ ಮಾವೋವಾದಿ ನಕ್ಷಲರು ಇಲ್ಲಿನ ಜನರ ಪ್ರೀತಿ, ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರದೇಶಕ್ಕೆ ನೆರೆಯ ಆಂಧ್ರದಿಂದ 1980ರ ಜೂನ್ ತಿಂಗಳಿನಲ್ಲಿ ನಕ್ಸಲಿಯರು ಪ್ರಥಮ ಬಾರಿಗೆ ಕಾಲಿಟ್ಟರು. ಈ ಹಿಂದೆ ಪ್ರಸ್ತಾಪಿಸಿರುವ ಹಾಗೆ ಕೊಂಡಪಲ್ಲಿ ಸೀತಾರಾಮಯ್ಯನವರ ವೈದ್ಯೆ ಪುತ್ರಿಯಿಂದಾಗಿ ನಕ್ಸಲರು ದಂಡಕಾರಣ್ಯಕ್ಕೆ ಕಾಲಿಡಲು ಪ್ರೇರಣೆಯಾಯಿತು.

1980ರ ಏಪ್ರಿಲ್ 22ರಂದು, ಕೊಂಡಪಲ್ಲಿ ಸೀತಾರಾಮಯ್ಯ ಪ್ರಜಾಸಮರ ದಳವನ್ನು (ಸಿ.ಪಿ.ಐ. ಎಂ.ಎಲ್ ಬಣ) ವನ್ನು ಸ್ಥಾಪಿಸಿದ ನಂತರ ಉತ್ತರ ತೆಲಂಗಾಣ ಮತ್ತು ಅದಕ್ಕೆ ಹೊಂದಿಕೊಂಡಂತೆ ಇದ್ದ ಮಹಾರಾಷ್ರದ ಗಡ್‌ಚಿರೋಲಿ ಮತ್ತು ಬಸ್ತಾರ್ ವಲಯದ ( ಬಸ್ತಾರ್ ಈಗ ಛತ್ತೀಸ್‌ಘಡ ರಾಜ್ಯಕ್ಕೆ ಸೇರಿದೆ) ಆದಿವಾಸಿಗಳ ಪರವಾಗಿ ಹೋರಾಟ ನಡೆಸಲು ನಿರ್ಧರಿಸಿದರು. ಅಲ್ಲಿನ ಆದಿವಾಸಿಗಳು ಅರಣ್ಯ ಗುತ್ತಿಗೆದಾರರು ಮತ್ತು ಅರಣ್ಯಾಧಿಕಾರಿಗಳಿಂದ ತೀವ್ರವಾಗಿ ಶೋಷಣೆಗೆ ಒಳಗಾಗಿದ್ದರು. ಬೀಡಿ ತಯಾರಿಕೆ ಬಳಸಲಾಗುತಿದ್ದ ತಂಡು ಎಲೆಗಳ ಒಂದು ಕಟ್ಟಿಗೆ (ನೂರು ಎಲೆಗಳು) ಆದಿವಾಸಿಗಳಿಗೆ ಕೇವಲ 5 ಪೈಸೆ ನೀಡಲಾಗುತಿತ್ತು. ಪೇಪರ್ ತಯಾರಿಕೆಗೆ ಬಳಸುತಿದ್ದ ಮೂರು ಅಡಿ ಉದ್ದದ ಬಿದಿರಿನ ನೂರು ಬೊಂಬುಗಳ ಒಂದು ಕಟ್ಟಿಗೆ ಒಂದು ರೂಪಾಯಿಯನ್ನು ನೀಡಲಾಗುತಿತ್ತು. ಆದಿವಾಸಿಗಳಿಂದ ಪಡೆದ ತಂಡು ಎಲೆಗಳು ಮತ್ತು ಬಿದಿರು ಬೊಂಬುಗಳನ್ನು ಗುತ್ತಿಗೆದಾರರು ಶೇಕಡ ನೂರರಿಂದ ಇನ್ನೂರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತಿದ್ದರು. ದಿನಕ್ಕೆ ಒಮ್ಮೆ ಮಾತ್ರ ಉಪ್ಪು ಹಾಕಿದ ಜೋಳದ ಗಂಜಿ ಆದಿವಾಸಿಗಳ ಆಹಾರವಾಗಿತ್ತು. ಹಸಿವಾದಾಗಲೆಲ್ಲಾ ಅವರು ಅರಣ್ಯದಲ್ಲಿ ದೊರೆಯುವ ಹಣ್ಣು ಇಲ್ಲವೆ ಸೊಪ್ಪು, ಮತ್ತು ಗೆಡ್ಡೆಗಳನ್ನು ಆಯ್ದು ತಂದು ಬೇಯಿಸಿ ತಿನ್ನುವುದರ ಮೂಲಕ ತಮ್ಮ ಹಸಿವೆಯನ್ನು ನೀಗಿಸಿಕೊಳ್ಳುತಿದ್ದರು. ಈ ಬಡತನ ಮತ್ತು ಹಸಿವಿನ ನಡುವೆಯೂ ಗುತ್ತಿಗೆದಾರರು, ಸರ್ಕಾರಿ ನೌಕರರು ಇವರುಗಳ ಕಾಮ ತೃಷೆಗೆ ತಮ್ಮ ಹೆಣ್ಣು ಮಕ್ಕಳು ಬಲಿಯಾಗುತಿದ್ದಾಗ ಆದಿವಾಸಿಗಳು ಮೌನವಾಗಿ ಒಳಗೊಳೆಗೆ ಅತ್ತು ತಮ್ಮನ್ನು ತಾವೇ ಸಂತೈಸಿಕೊಳ್ಳುತಿದ್ದರು.

ಇದರ ನಡುವೆ ಕಾಡಿನ ಕಿರು ಉತ್ಪನ್ನಗಳ ಸಂಗ್ರಹಕ್ಕೆ ಅರಣ್ಯಕ್ಕೆ ಹೋದಾಗ ಅರಣ್ಯಾಧಿಕಾರಿಗಳಿಂದ ಕಿರುಕುಳ ಅನುಭವಿಸಬೇಕಾಗಿತ್ತು. ಹಲವು ವೇಳೆ ಕಾಡಿನ ನಡುವೆ ವಿರಳವಾದ ಪ್ರದೇಶದಲ್ಲಿ ಆದಿವಾಸಿಗಳು ಬೆಳೆದಿದ್ದ ಫಸಲನ್ನು ಆನೆಗಳಿಂದ ಧ್ವಂಸ ಮಾಡಿಸಿ ಕೈಗೆ ಬಂದ ಫಸಲು ಭಾಯಿಗೆ ಇಲ್ಲದಂತೆ ಮಾಡುತಿದ್ದರು. ಕಿರುಕುಳ ತಡೆಯಲು ಆದಿವಾಸಿಗಳು ಅಧಿಕಾರಿಗಳಿಗೆ ಕೋಳಿ, ಮೀನು ಇವುಗಳನ್ನು ಒದಗಿಸಬೇಕಾಗಿತ್ತು. ಕೆಲವು ವೇಳೆ ಈ ಮುಗ್ಧ ಜನತೆ ಸಂಗ್ರಹಿಸಿ ಇಟ್ಟಿದ್ದ ಮಸಾಲೆ ಪದಾರ್ಥಗಳು ( ಚಕ್ಕೆ ಲವಂಗ ಇತ್ಯಾದಿ) ಮತ್ತು ಹುಣಸೆ ಹಣ್ಣು ಇವುಗಳನ್ನು ಕೊಂಡೊಯ್ಯತಿದ್ದರು. ಮಧ್ಯ ಪ್ರದೇಶ ಸಕಾರವೊಂದೇ ಅರಣ್ಯದ ಕಿರು ಉತ್ಪನ್ನಗಳ ಗುತ್ತಿಗೆ ನೀಡುವುದರಿಂದ ವಾರ್ಷಿಕ 250 ಕೋಟಿ ಆದಾಯ ಪಡೆಯುತಿತ್ತು. ವಾಸ್ತವವಾಗಿ ದಂಡಕಾರಣ್ಯದ ಅರಣ್ಯದಲ್ಲಿ ಎರಡರಿಂದ ಮೂರು ಸಾವಿರ ಕೋಟಿ ಬೆಲೆ ಬಾಳುವ ಕಿರು ಉತ್ಪನ್ನಗಳು ಅರಣ್ಯ ಗುತ್ತಿಗೆ ಹೆಸರಿನಲ್ಲಿ ಲೂಟಿಯಾಗುತಿದ್ದವು. ಇವುಗಳಲ್ಲಿ ಸುಗಂಧ ತಯಾರಿಕೆಗೆ ಬಳಸಲಾಗುವ ಗಿಡಮೂಲಿಕೆಗಳು ಮತ್ತು ಸೋಪು ತಯಾರಿಕೆಗೆ ಬಳಸಲಾಗುತಿದ್ದ ಎಣ್ಣೆಯನ್ನು ಉತ್ಪತ್ತಿ ಮಾಡುತಿದ್ದ ಹಲವು ಜಾತಿಯ ಮರಗಳು ಗುತ್ತಿಗೆದಾರರ ಲಾಭಕೋರತನಕ್ಕೆ ಬಲಿಯಾದವು. ನಾಲ್ಕು ಸಾವಿರ ಚದುರ ಕಿಲೋಮೀಟರ್ ವ್ಯಾಪ್ತಿ ಪ್ರದೇಶದ 236 ಹಳ್ಳಿಗಳ 12 ಸಾವಿರ ಆದಿವಾಸಿಗಳಿಂದ 67 ವಿವಿಧ ಬಗೆಯ ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸಲಾಗುತಿತ್ತು.

ಇಂತಹ ಪರಿಸ್ಥಿತಿಯಲ್ಲಿ ನೆರೆಯ ಆಂಧ್ರದ ಉತ್ತರ ತೆಲಂಗಾಣದ ವಾರಂಗಲ್ ಕರೀಂನಗರ ಮತ್ತು ಅದಿಲಾಬಾದ್ ಹಾಗೂ ಕಮ್ಮಮ್ ಜಿಲ್ಲೆಗಳಿಂದ 1980ರ ಜೂನ್ ತಿಂಗಳಿನಲ್ಲಿ ಎರಡು ತಂಡಗಳಲ್ಲಿ ನಕ್ಸಲರು ಈ ಪ್ರದೇಶಕ್ಕೆ ಕಾಲಿಟ್ಟರು. ಒಂದು ತಂಡ ಬಸ್ತಾರ್ ವಲಯ ಪ್ರವೇಶಿಸಿದರೆ, ಇನ್ನುಂದು ಗಡ್‌ಚಿರೋಲಿ ಅರಣ್ಯ ಪ್ರದೇಶಕ್ಕೆ ಕಾಲಿಟ್ಟಿತು.

ಗಡ್ ಚಿರೋಲಿ ಅರಣ್ಯ ಪ್ರದೇಶಕ್ಕೆ ತನ್ನ ಸಹ ಕಾರ್ಯಕರ್ತರ ಜೊತೆ ಕಾಲಿಟ್ಟ ತಂಡದ ನಾಯಕ ಪೆದ್ದಿ ಶಂಕರ್ ಎಂಬ ದಲಿತ ಯುವಕ. ಈತನ ತಂದೆ ತೆಲಂಗಾಣ ಪ್ರಾಂತ್ಯದ ಸಿಂಗರೇಣಿ ಕಲ್ಲಿದ್ದಲು ಗಣಿಯಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತಿದ್ದ. ಕಲ್ಲಿದ್ದಲು ಗಣಿ ಕಾರ್ಮಿಕರ ಕೂಲಿ ದರ ಹೆಚ್ಚಳಕ್ಕಾಗಿ ನಕ್ಸಲರು ನಡೆಸಿದ ಹೋರಾಟದಿಂದ ಪ್ರಭಾವಿತನಾಗಿದ್ದ ಪೆದ್ದಿ ಶಂಕರ ಹೈಸ್ಕೂಲು ಶಿಕ್ಷಣ ಮುಗಿದ ಕೂಡಲೇ, ಪ್ರಜಾ ಸಮರಂ ಗ್ರೂಪ್ ನ ರ್‍ಯಾಡಿಕಲ್ ಯೂತ್ ಲೀಗ್ ಸಂಘಟನೆಯ ಸದಸ್ಯನಾಗಿ ಗುರುತಿಸಿಕೊಂಡು, ಖಾಸಾಗಿ ಬಸ್ ಒಂದರಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತಿದ್ದ.

ತನ್ನ ಹಳ್ಳಿಯಲ್ಲಿ ನಡೆದ ಒಂದು ಘಟನೆ ಅವನನ್ನು ಪೂರ್ಣಾವಧಿ ಮಾವೋವಾದಿ ನಕ್ಸಲನನ್ನಾಗಿ ಪರಿವರ್ತಿಸಿತು. ತನ್ನ ಹುಟ್ಟೂರಾದ ಅದಿಲಾಬಾದ್ ಜಿಲ್ಲೆಯ ಬೆಲಂಪಲ್ಲಿಯಲ್ಲಿ ತನ್ನ ಜಾತಿಗೆ ಸೇರಿದ ಇಬ್ಬರು ರೌಡಿಗಳು (ಕುಂಡೆಲ ಶಂಕರ ಮತ್ತು ದಸ್ತಗಿರಿ) ಊರ ಜನರು ಸೇರಿದಂತೆ ಮಹಿಳೆಯರಿಗೆ ಇನ್ನಿಲ್ಲದ ಕಿರುಕುಳ ನೀಡುತಿದ್ದರು. ಅವರ ವಿರುದ್ಧ ಮಾತನಾಡುವರೇ ಇಲ್ಲದ ಸ್ಥಿತಿಯಲ್ಲಿ ಪೆದ್ದಿ ಶಂಕರ ಮತ್ತು ಅವನ ಕಾಮ್ರೇಡ್ ಗೆಳೆಯರು ರೌಡಿಗಳಿಗೆ ಒಮ್ಮೆ ಎಚ್ಚರಿಕೆ ಕೊಟ್ಟಿದ್ದರು. ಆದರೂ ಸಹ ನಡುರಸ್ತೆಯಲ್ಲಿ ನಿಂತು ಮಹಿಳೆಯರನ್ನು ಅಶ್ಲೀಲ ಶಬ್ಧಗಳಿಂದ ಚುಡಾಯಿಸುವುದು ಮುಂದುವರಿದಾಗ, ಕೋಪಗೊಂಡ ಪೆದ್ದಿ ಶಂಕರ ತನ್ನ ಮಿತ್ರ ಗಜಲ್ಲ ಗಂಗಾರಾಮ್ ಜೊತೆ ಸೇರಿ ಹಾಡು ಹಗಲೇ ಇಬ್ಬರೂ ರೌಡಿಗಳನ್ನು ನಡುರಸ್ತೆಯಲ್ಲಿ ಕೊಚ್ಚಿ ಕೊಂದು ಬಿಸಾಕಿದ. ದಲಿತ ಯುವಕ ಪೆದ್ದಿಶಂಕರನ ಈ ಶೌರ್ಯ ಅವನ ಹುಟ್ಟೂರು ಸೇರಿದಂತೆ ಹಲವು ಹಳ್ಳಿಗಳಲ್ಲಿ ಪ್ರಶಂಸೆಗೆ ಪಾತ್ರವಾಯಿತು. ಈ ಘಟನೆಯ ನಂತರ ಸಿಂಗರೇಣಿ ಕಲ್ಲಿದ್ದಲು ಗಣಿಯಲ್ಲಿ ಮಹಿಳಾ ಕೂಲಿ ಕಾರ್ಮಿಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಕಂಪನಿಯನ್ನು ಮತ್ತು ಅಲ್ಲಿನ ಅಧಿಕಾರಿಗಳನ್ನು ಪ್ರತಿಭಟನೆಯ ಮೂಲಕ ಅಲುಗಾಡಿಸಿದ್ದ. ಅತ್ಯಾಚಾರವೆಸಗಿದ ಅಧಿಕಾರಿಯ ಮನೆಗೆ ನುಗ್ಗಿ ಇಡೀ ಮನೆಯನ್ನು ಧ್ವಂಸ ಮಾಡಿದ್ದ. ಇದಲ್ಲದೆ, 1978ರಲ್ಲಿ ಸಾವಿರಾರು ಅಡಿ ಆಳದ ಕಲ್ಲಿದ್ದಲ ಗಣಿಯಲ್ಲಿ ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲದೆ ಅಮಾಯಕ ಅಶಿಕ್ಷಿತ ಕಾರ್ಮಿಕರು ದುಡಿಯುತ್ತಿರುವದನ್ನು ನೋಡಿದ್ದ ಶಂಕರ ಕಾರ್ಮಿಕರ ಮೂಲಭೂತ ಸೌಕರ್ಯಕ್ಕಾಗಿ ಕಂಪನಿಯ ವಿರುದ್ಧ ನಡೆಸಿದ ಬೃಹತ್ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರ ಗೋಲಿಬಾರ್ ನಿಂದ ಇಬ್ಬರು ಕಾರ್ಮಿಕರು ಮೃತಪಟ್ಟರು. ಪೊಲೀಸರು ಪೆದ್ದಿ ಶಂಕರ್ ವಿರುದ್ಧ ಡಕಾಯಿತಿ, ಕೊಲೆ ಯತ್ನ ಮತ್ತು ಹಿಂಸೆಗೆ ಪ್ರಚೋದನೆ ನೀಡಿದ ಆರೋಪ ಮುಂತಾದ ಮೊಕದ್ದಮೆಗಳನ್ನು ದಾಖಲಿಸಿದರು. ಇದರಿಂದಾಗಿ ಪೆದ್ದಿ ಶಂಕರ್ ಅನಿವಾರ್ಯವಾಗಿ ಭೂಗತನಾಗುವುದರ ಮೂಲಕ ನಕ್ಸಲ್ ಹೋರಾಟಕ್ಕೆ ದುಮುಕಿ ಬಂದೂಕವನ್ನು ಕೈಗೆತ್ತಿಕೊಂಡಿದ್ದ.

1980ರ ಜೂನ್ ತಿಂಗಳಲ್ಲಿ ಗೋದಾವರಿ ನದಿಯನ್ನು ದಾಟಿ ಮಹರಾಷ್ಟ್ರದ ಚಂದ್ರಾಪುರ ಅರಣ್ಯ ಪ್ರವೇಶಿಸಿದ ಪೆದ್ದಿಶಂಕರ ಮತ್ತು ಅವನ ತಂಡ ಪ್ರಾರಂಭದಲ್ಲಿ ಮೂರು ಹಳ್ಳಿಗಳಲ್ಲಿ ವಾಸವಾಗಿದ್ದ ಸುಮಾರು 700 ಗೊಂಡಾ ಆದಿವಾಸಿಗಳ ಜೊತೆ ಅವರುಗಳ ಗೊಂಡಾ ಭಾಷೆಯಲ್ಲಿ ಮಾತನಾಡುತ್ತಾ, ಅರಣ್ಯ ಗುತ್ತಿಗೆದಾರರು ಮತ್ತು ಹಣದ ಲೇವಾದೇವಿದಾರರು ಹೇಗೆ ಸುಲಿಯುತಿದ್ದಾರೆ ಎಂಬುದನ್ನು ವಿವರಿಸಿ, ಅವರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದರು. ಆದಿವಾಸಿಗಳ ವಿಶ್ವಾಸ ಗಳಿಸಿದ ನಂತರ ಮೊಯಿನ್‌ಬಿನ್‌ಪೆಟ್ಟ, ಬೌರ ಮತ್ತು ಪೈಡ್‌ಗನ್ ಎಂಬ ಮೂರು ಹಳ್ಳಿಗಳಲ್ಲಿ ವಾಸಿಸುತ್ತಾ ಆದಿವಾಸಿಗಳನ್ನು ಹೋರಾಟಕ್ಕೆ ಅಣಿಗೊಳಿಸಿದರು. ದುರಾದೃಷ್ಟವಶಾತ್ ಅದೇ ವರ್ಷ ನವಂಬರ್ 2ರಂದು ಪೆದ್ದಿ ಶಂಕರ ಮಹಾರಾಷ್ಟ್ರ ಪೊಲೀಸರ ಗುಂಡಿಗೆ ಬಲಿಯಾಗಬೇಕಾಯಿತು. ಅಂದು ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯದಲ್ಲಿ ಮೊಯಿನ್‌ಬಿನ್‌ಪೆಟ್ಟ ಹಳ್ಳಿಗೆ ಶಂಕರ ಮತ್ತು ಅವನ ತಂಡ ಊಟಕ್ಕಾಗಿ ಬರುತ್ತಿರುವ ಬಗ್ಗೆ ಜಮೀನ್ದಾರನೊಬ್ಬನ ಸೇವಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಊಟ ಮುಗಿಸಿ ಶಂಕರ ಮತ್ತು ಅವನ ನಾಲ್ವರು ಸಂಗಾತಿಗಳು ಹೊರಡುತಿದ್ದಂತೆ ಶಂಕರನ ತಂಡಕ್ಕೆ ಪೊಲೀಸರು ಎದುರಾದರು. ಅವರಿಂದ ತಪ್ಪಿಸಿಕೊಂಡು ಓಡುತಿದ್ದಾಗ, ಪೊಲೀಸರು ಹಾರಿಸಿದ ಗುಂಡು ಪೆದ್ದಿಶಂಕರನ ಬೆನ್ನಿಗೆ ತಾಗಿ ಜೋಳದ ಹೊಲದಲ್ಲಿ ಮಕಾಡೆ ಬಿದ್ದುಬಿಟ್ಟ. ಉಳಿದ ನಾಲ್ವರು ಸಂಗಾತಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೂರು ದಿನಗಳ ಕಾಲ ಸ್ಥಳಿಯ ಶಾಲೆಯೊಂದರಲ್ಲಿ ಶಂಕರನ ಶವವನ್ನು ಆದಿವಾಸಿಗಳು ಸರಂಕ್ಷಿಸಿ ಕಾಯ್ದಿದ್ದರು. ನಂತರ ಮಹಾರಾಷ್ಟ್ರ ಪೊಲೀಸರು ತಮ್ಮ ವಶಕ್ಕೆ ಪಡೆದು ಅಂತ್ಯ ಸಂಸ್ಕಾರ ಮಾಡಲು ಮುಂದಾದಾಗ ಪ್ರತಿಭಟಿಸಿದ ಆದಿವಾಸಿಗಳು ಪೊಲೀಸರಿಂದ ಶಂಕರನ ಶವವನ್ನು ಮರಳಿ ಪಡೆದು ಶಂಕರನಿಗೆ ಗುಂಡೇಟು ಬಿದ್ದ ಜಾಗದಲ್ಲೇ ಅಂತ್ಯಸಂಸ್ಕಾರ ನೆರೆವೇರಿಸಿದರು. ಮಗನ ಸಾವಿನ ಸುದ್ಧಿ ತಂದೆಗೆ ಹತ್ತು ದಿನಗಳ ನಂತರ ತಿಳಿಯಿತು. ಅದಿಲಾಬಾದ್‌ನಿಂದ ಬಂದಿದ್ದ ಶಂಕರನ ತಂದೆ, ತನ್ನ ಮಗ ಪೊಲೀಸರ ಗುಂಡಿಗೆ ಬಲಿಯಾದ ಜೋಳದ ಹೊಲದ ಭೂಮಿಯಲ್ಲಿ ಶವಸಂಸ್ಕಾರ ಮಾಡಿದ್ದ ಪೂಜೆ ಸಲ್ಲಿಸಿ ಹಿಂತಿರುಗಿದ. ಮಹಾರಾಷ್ಟ್ರ ಸರ್ಕಾರ ಶಂಕರನ ಮೇಲೆ ಗುಂಡು ಹಾರಿಸಿದ ಪೊಲೀಸ್ ಪೇದೆ ಚಂದ್ರಿಕದೀಪ್ ರಾಯ್ ಎಂಬಾತನಿಗೆ ಐನೂರು ರೂಪಾಯಿ ಬಹುಮಾನ ಮತ್ತು ಆತನ ಜೊತೆಗಿದ್ದವರಿಗೆ ತಲಾ ನೂರು ಬಹುಮಾನ ಘೋಷಿಸಿತು.

ಆಂಧ್ರಪ್ರಧೇಶದಿಂದ ದಂಡಕಾರಣ್ಯ ವಲಯಕ್ಕೆ ತನ್ನ ಕಾರ್ಯಚಟುವಟಿಕೆ ವಿಸ್ತರಿಸಿದ ಪ್ರಜಾಸಮರಂ ಗುಂಪಿನ ಮೊದಲ ಬಲಿಯಾಗಿ ಪೆದ್ದಿ ಶಂಕರ ಪ್ರಾಣ ತೆತ್ತ ಘಟನೆ ಪರೋಕ್ಷವಾಗಿ ಗೊಂಡಾ ಆದಿವಾಸಿಗಳಲ್ಲಿ ನಕ್ಸಲರ ಬಗ್ಗೆ, ಅವರ ಬದ್ಧತೆ ಕುರಿತಂತೆ ವಿಶ್ವಾಸ ಮೂಡಲು ಕಾರಣವಾಯಿತು. ಪೆದ್ದಿಶಂಕರನ ಸಾವಿನಿಂದ ಮಹರಾಷ್ಟ್ರದಲ್ಲಿ ನಕ್ಸಲ್ ಚಳುವಳಿ ತಲೆಯೆತ್ತುವುದಿಲ್ಲ ಎಂದು ನಂಬಿದ್ದ ಪೊಲೀಸರ ಲೆಕ್ಕಾಚಾರವೆಲ್ಲಾ ಸಂಪೂರ್ಣ ತಲೆಕೆಳಗಾಯಿತು. ಮಹರಾಷ್ಟ್ರದ ನಕ್ಸಲ್ ಪೀಡಿತ ಜಿಲ್ಲೆಗಳ ಪೈಕಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಗಡ್‌ಚಿರೋಲಿ ಜಿಲ್ಲೆ ಇವತ್ತಿಗೂ ಮುಂಚೂಣಿಯಲ್ಲಿದೆ.

(ಮುಂದುವರೆಯುವುದು)

Leave a Reply

Your email address will not be published. Required fields are marked *