ಪೇಪರ್ ಟೈಗರ್‌ಗಳೂ, ಬಹುಸಂಖ್ಯಾತ ನೀರೋಗಳು ಮತ್ತು ಉತ್ತಮ ಪ್ರಜಾಪ್ರಭುತ್ವವೂ


-ಬಿ. ಶ್ರೀಪಾದ್ ಭಟ್


 

ನಮ್ಮ ಬಹುಪಾಲು ಮಾಧ್ಯಮಗಳು — ಅದರಲ್ಲೂ ಮುಖ್ಯವಾಗಿ ದೃಶ್ಯ ಮಾಧ್ಯಮಗಳು — ತಮ್ಮ ಇಳಿ ವಯಸ್ಸಿನಲ್ಲಿ ತೀರಿಕೊಂಡ ಫ್ಯಾಸಿಸ್ಟ್ ರಾಜಕಾರಣಿ ಬಾಳ ಠಾಕ್ರೆಯ ಸಾವನ್ನು ವೈಭವೀಕರಿಸಿದ ವೈಖರಿ ಅತ್ಯಂತ ಖಂಡನೀಯವಾದದ್ದು.

ಪೇಪರ್ ಟೈಗರ್ ಅನ್ನು ಹುಲಿಯನ್ನಾಗಿಸಿದ ಈ ಮಾಧ್ಯಮಗಳ ನೈತಿಕ ಅಧಃಪತನ ಹೇಸಿಗೆ ಮಾತ್ರ ಹುಟ್ಟಿಸಲು ಸಾಧ್ಯ. ಕನಿಷ್ಠ ಮಟ್ಟದ ಪತ್ರಿಕಾ ಮನೋಧರ್ಮದ ಸಂಯಮವನ್ನು ಕೈಬಿಟ್ಟ ಈ ದೃಶ್ಯ ಮಾಧ್ಯಮಗಳು ಮತ್ತು ಕೆಲವು ಮುದ್ರಣ ಮಾಧ್ಯಮಗಳು ಹಿಂಸಾಪ್ರವೃತ್ತಿಯ, ಕೋಮುವಾದದ ರಾಜಕಾರಣ ಮತ್ತು ಪ್ರವೃತ್ತಿಯನ್ನು ತಮ್ಮ ಉಸಿರಾಗಿಕೊಂಡ ರಾಜಕಾರಣಿ ಬಾಳ ಠಾಕ್ರೆ ಕಂಡಿದ್ದು ನುರಿತ, ಘರ್ಜಿಸುವ ಹುಲಿಯಾಗಿ!!

ಸದರಿ ರಾಜಕಾರಣಿಯ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಮುಂಬೈ ಅಕ್ಷರಶಃ ಬಂದ್ ಆಚರಿಸಿದ್ದು ಭಯದಿಂದ ಮಾತ್ರ ಎಂದು ಪ್ರಾಮಾಣಿಕವಾಗಿ ನುಡಿದ, ಅಲ್ಲದೆ ಭಗತ್‌ ಸಿಂಗ್‌ರಂತಹ ದೇಶಪ್ರೇಮಿಗಳಿಗೆ ಈ ಮಟ್ಟದ ಗೌರವ ಸಲ್ಲಬೇಕೇ ಹೊರತು ಬಾಳ ಠಾಕ್ರೆಯಂತಹವರಿಗಲ್ಲ ಎಂದು ಅತ್ಯಂತ ದಿಟ್ಟತನದಿಂದ ನುಡಿದ ಶಹೀನ್ ಮತ್ತು ಅದನ್ನು ಅನುಮೋದಿಸಿದ ರೇಣು ಅವರನ್ನು ಯಾವುದೇ ಪ್ರಚೋದನೆಯಿಲ್ಲದೆ ಬಂಧಿಸಿದ ಪೋಲೀಸರ ಕ್ರಮವನ್ನು ದೇಶದ ಪ್ರಜ್ಞಾವಂತರು ತೀವ್ರವಾಗಿ ಪ್ರತಿಭಟಿಸುತ್ತಿದ್ದರೆ ನಮ್ಮ ಬಹುಪಾಲು ದೃಶ್ಯ ಮಾಧ್ಯಮಗಳು ಮರೆ ಮೋಸದಿಂದ ವರ್ತಿಸಿದ್ದು ಪತ್ರಿಕಾ ಧರ್ಮವೇ? ಸಂಘ ಪರಿವಾರದ ಪಿತೂರಿಯಿಂದಾಗಿ ಬಂಧನಕ್ಕೊಳಗಾದ ಪತ್ರಕರ್ತ ನವೀನ್ ಸೂರಂಜೆಯ ಪರವಾಗಿ ನಿರಂತರ ಬೆಂಬಲವನ್ನು ವ್ಯಕ್ತಪಡಿಸುವ ಯಾವುದೇ ಕಾರ್ಯಕ್ರಮಗಳನ್ನು, ಚರ್ಚೆಗಳನ್ನು ಹಾಕಿಕೊಳ್ಳದ ಇವರ ಈ ವರ್ತನೆಗೆ ನಾವೆಲ್ಲ ಹೇಗೆ ಪ್ರತಿಕ್ರಯಿಸಬೇಕು? ನವೀನ್ ಸೂರಂಜೆಯ ಬಂಧನದ ಹಿಂದಿನ ಕುತಂತ್ರಗಳನ್ನು ಬಯಲುಗೊಳಿಸುತ್ತಲೇ ಆ ಮೂಲಕ ಇಡೀ ಕರಾವಳಿಯ ಕೋಮುವಾದದ, ಸ್ವಾರ್ಥದ ಕರಾಳ ಮುಖಗಳನ್ನು, ಅನುಕೂಲಸಿಂಧು ರಾಜಕೀಯದ ಒಡಂಬಡಿಕೆಗಳನ್ನು, ಅಲ್ಲಿನ ಸಮಾಜದಲ್ಲಿ ಅಂತರ್ಗತವಾಗಿ ಪ್ರವಹಿಸುತ್ತಿರುವ ದ್ವೇಷಮಯ ಸ್ವಭಾವಗಳನ್ನು ಚರ್ಚೆಗಳ ಮೂಲಕ, ಸಂವಾದಗಳ ಮೂಲಕ ಬಿಡಿ ಬಿಡಿಯಾಗಿ ಬಿಚ್ಚಿಡುವ ಅಪೂರ್ವ ಅವಕಾಶವನ್ನು ನಮ್ಮ ಮಾಧ್ಯಮಗಳು ಕಳೆದುಕೊಂಡಿದ್ದು ನಿಜಕ್ಕೂ ವಿಷಾದನೀಯ! ಕನಿಷ್ಠ ಮಟ್ಟದ ನೈತಿಕ ಪ್ರಜ್ಞೆ ಸಹ ಮರೆಯಾದಂತಹ ಈ ಕ್ಷಣಗಳನ್ನು ಸಹ್ಯವಾಗಿಸುವಂತೆ ವರ್ತಿಸಿಬೇಕಾದ ನಾವೆಲ್ಲ ಬಂಧಿತರಾದ ಅಮಾಯಕ ಯುವಕ, ಯುವತಿಯರಲ್ಲಿ ಸಿನಿಕತನ ಮತ್ತು ಭ್ರಮನಿರಸನವನ್ನು ಮಾತ್ರ ಹುಟ್ಟಿಸಲು ಸಾಧ್ಯ.

ಇತ್ತೀಚೆಗೆ ಉತ್ತರ ಪ್ರದೇಶದ ಫೈಜಾಬಾದ್‌ನಲ್ಲಿ ನಡೆದ ಕೋಮುಗಲಭೆಗಳು ಮಾಧ್ಯಮಗಳಿಂದ ನಿರ್ಲಕ್ಷಿತಗೊಂಡ ರೀತಿಯೂ ಸಹ ಗಾಬರಿ ಹುಟ್ಟಿಸುತ್ತದೆ. ದಸರಾ ಹಬ್ಬದ ವೇಳೆಯಲ್ಲಿ ಫೈಜಾಬಾದ್‌ನ ಪ್ರಸಿದ್ಧ ಕಾಳೀ ಮಂದಿರದಿಂದ ಕಾಳೀ, ಲಕ್ಷ್ಮಿ ಮತ್ತು ಸರಸ್ವತಿ ವಿಗ್ರಹಗಳು ಕಾಣೆಯಾದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಇದರ ಕುರಿತಾಗಿ ಸೂಕ್ಷ್ಮ ಮನಸ್ಸಿನ ಪತ್ರಕರ್ತ ಸಯೀದ್ ನಕ್ವಿ ವಿವರವಾಗಿ ಬರೆಯುತ್ತಾರೆ:

“ಯೋಗಿ ಆದಿತ್ಯಾನಂದ ಮತ್ತು ಆತನ ಸಹಚರರು ಕೋಮು ಭಾವನೆ ಕೆರಳಿಸುವ ಘೋಷಣೆಗಳನ್ನು ಕೂಗುತ್ತ ಒಂದು ವೇಳೆ ವಿಗ್ರಹಗಳು ದೊರಕದಿದ್ದರೆ ಇಡೀ ಭೂಮಂಡಲವೇ ಅಲ್ಲೋಲಕಲ್ಲೋಲವಾಗುತ್ತದೆಂದು ಫೂತ್ಕರಿಸುತ್ತ ಇಡೀ ಪಟ್ಟಣದಲ್ಲಿ ತಲ್ಲಣಗಳನ್ನು ಹುಟ್ಟುಹಾಕಿದರು. ಎಂದಿನಂತೆ ಪೋಲೀಸರು ಶೋಧನೆಗಾಗಿ ಮೊದಲು ಜಾಲಾಡಿದ್ದು ಅಜಮಗರ್‌ನ ಮುಸ್ಲಿಂರ ಮೊಹಲ್ಲಗಳ ಬಳಿ. ಅಲ್ಲಿನ ಮುಸ್ಲಿಂರ ಮನೆಗಳನ್ನು. ಆದರೆ ಕಡೆಗೆ ವಿಗ್ರಹಗಳು ದೊರಕಿದ್ದು ಕಾನ್ಪುರದ ನಾಲ್ಕು ಹಿಂದೂಗಳ ಮನೆಯಲ್ಲಿ ( ನಾಲ್ಕೂ ಮನೆಗಳು ವಿಭಿನ್ನ ಜಾತಿಗೆ ಸೇರಿದ್ದವು).

“ಮತ್ತೊಂದು ಘಟನೆಯಲ್ಲಿ ಮೊಹರಂನ ಸಂದರ್ಭದಲ್ಲಿ ಫೈಜಾಬಾದ್‌ನ ಬಳಿ ಇರುವ ಭದ್ರಾಸ ಟೌನ್‌ನಲ್ಲಿ ಇದ್ದಕ್ಕಿದ್ದ ಹಾಗೆ ಮುಸ್ಲಿಂರ ಗುಡಿಸಲುಗಳು ಬೆಂಕಿಗೆ ಆಹುತಿಯಾಗುತ್ತವೆ.ಈ ದುಷ್ಕೃತ್ಯವನ್ನು ಯಾವ ಮಟ್ಟದಲ್ಲಿ ಎಚ್ಚರಿಕೆಯಂದ ಕೈಗೊಂಡರೆಂದರೆ ಪಕ್ಕದ ಹಿಂದೂಗಳ ಗುಡಿಸಲಿಗೆ ಕೊಂಚವೂ ಬೆಂಕಿ ಸೋಂಕದಷ್ಟು. ಜೈ ಶ್ರೀರಾಂ ಎಂದು ಕೂಗುತ್ತ, ಕೈಯಲ್ಲಿ ತ್ರಿಶೂಲವನ್ನು ಝಳಪಿಸುತ್ತ ಧಾವಿಸಿದ ಗಲಭೆಕೋರರು ಬೆಂಕಿಗೆ ಆಹುತಿಯಾದ ಇಡೀ ಮುಸ್ಲಿಂರ ಗುಡಿಸಲನ್ನು ಸುತ್ತುವರೆದರು. ದೂರದಿಂದ ಪೋಲೀಸರ ಜೀಪು ಕಂಡು ಅಸಹಾಯಕ ಮುಸ್ಲಿಂ ಮಹಿಳೆಯರಲ್ಲಿ ಕೊಂಚ ಆಶಾಭಾವ ಮೂಡುತ್ತಿರುವಂತೆಯೇ ಅದು ಸಹ ಕ್ಷಣಿಕವಾಗಿತ್ತು. ಏಕೆಂದರೆ ಈ ತ್ರಿಶೂಲಧಾರಿಗಳು ಮತ್ತು ಪೋಲೀಸರ ನಡುವೆ ನಡೆದ ಗುಟ್ಟಿನ ಸಂಭಾಷಣೆಯ ಫಲವಾಗಿ ಬಂದಷ್ಟೇ ವೇಗದಿಂದ ಪೋಲೀಸ್ ಪಡೆ ಬೆಂಕಿಗೆ ಆಹುತಿಯಾದ ಘಟನೆಯ ಸ್ಥಳದ ಹತ್ತಿರಕ್ಕೂ ಸುಳಿಯದೆ ಬಂದ ದಾರಿಯಲ್ಲಿ ಮರಳಿತು.ಹಾಗಿದ್ದರೆ ಆ ತ್ರಿಶೂಲಧಾರಿ ಗಲಭೆಕೋರರು ಮತ್ತು ಪೋಲೀಸರ ನಡುವೆ ಸಂಭಾಷಣೆಯಾದರೂ ಏನು?

“ಫೈಜಾಬಾದ್‌ನಲ್ಲಿ ದಸರಾ ಹಬ್ಬದಂದು ದುರ್ಗ ಮಾತೆಯ ಮೆರವಣಿಗೆ 18ನೇ ಶತಮಾನದ ಐತಿಹಾಸಿಕ ಮಸೀದಿಯನ್ನು ಬಳಸಿ ಹಾದು ಹೋಗುತ್ತದೆ. ಈ ಮಸೀದಿಯು ಅಂದಿನಿಂದಲೂ ದುರ್ಗಾ ಮೆರವಣಿಗೆಯ ಸಂದರ್ಭದಲ್ಲಿ ದೇವಿಯನ್ನು ಪೂಜಿಸಲು ಹೂಗಳನ್ನು ಪೂರೈಸುತ್ತಿತ್ತು. ಹಿಂದೂ ಮಹಿಳೆಯರು ಈ ಮಸೀದಿಯ ಮೇಲೇರಿ ದುರ್ಗಾ ಮಾತೆಯ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದರು. ಅಷ್ಟರ ಮಟ್ಟಿಗೆ ಅಲ್ಲಿನ ಕೋಮು ಸೌಹಾರ್ದತೆ ಹೆಸರುವಾಸಿಯಾಗಿತ್ತು. ಆದರೆ ಹಿಂಸೆಗೆ ಬಲಿಯಾಗಿ ನಲುಗಿದ್ದ ಫೈಜಾಬಾದ್‌ನಲ್ಲಿ ಅಕ್ಟೋಬರ್ 24ರಂದು ಆದದ್ದೇ ಬೇರೆ. ಈ ಬಾರಿ ಹಿಂದೂ ಮಹಿಳೆಯರನ್ನು ದುರ್ಗಾ ಮಾತೆಯ ಮೆರವಣಿಗೆಯನ್ನು ವೀಕ್ಷಿಸಲು ಮನೆಯಿಂದ ಹೊರ ಬರದಂತೆ ದಿಗ್ಭಂದನ ವಿಧಿಸಿದ ಸಂಘಟಕರ ವರ್ತನೆ ಸಂಶಯವನ್ನು ಮೂಡಿಸಿತ್ತು. ಇದರ ಕುರಿತಾಗಿ ಪೋಲೀಸರಿಗೆ ದೂರನ್ನು ನೀಡಲಾಗಿದ್ದರೂ ಪೋಲೀಸರು ಅದನ್ನು ಕಡೆಗಣಿಸಿದ್ದರು. ಎಣೆಸಿದಂತೆಯೇ ನಡೆಯಿತು. ದುರ್ಗಾ ಮಾತೆಯ ಮೆರವಣಿಗೆಯ ಸಂದರ್ಭದಲ್ಲಿ ಸುಮಾರು 50 ಮುಸ್ಲಿಂರ ಅಂಗಡಿ, ಮುಂಗಟ್ಟುಗಳನ್ನು ಲೂಟಿ ಮಾಡಿ ಬೆಂಕಿಗೆ ಆಹುತಿ ಮಾಡಲಾಯಿತು.

“ಮೇಲಿನ ಎಲ್ಲ ಕೋಮು ಗಲಭೆಗಳು ಎಂದಿನಂತೆ ಹಿಂದು ಮತ್ತು ಮುಸ್ಲಿಂರ ನಡುವಿನ ನೇರವಾದ ಘರ್ಷಣೆಯಲ್ಲ. ಬದಲಾಗಿ ಪಾಸಿಸ್, ಲೋಹರ್, ಮಲ್ಲಾಹ್ ಉಪಪಂಗಡಗಳಿಗೆ ಸೇರಿದ ದಲಿತರನ್ನು ಇಡಿಯಾಗಿ ಮುಸ್ಲಿಂರ ವಿರುದ್ಧ ಗಲಭೆಗೆ ಬಳಸಿಕೊಳ್ಳಲಾಗಿತ್ತು. ಈ ಮೂಲಕ ಮುಸ್ಲಿಂ ಮತ್ತು ದಲಿತರ ಏಕೀಕರಣದ ಪ್ರಯತ್ನವನ್ನು ಅತ್ಯಂತ ಯಶಸ್ವಿಯಾಗಿ ಮೊಟಕುಗೊಳಿಸಲಾಯಿತು.

“ಇತ್ತೀಚೆಗೆ ಫೈಜಾಬಾದನಲ್ಲಿ ಮೊಳಗುತ್ತಿರುವ ಘೋಷಣೆಯೇ ಇದರ ಹಿಂದಿನ ಪಾತ್ರಧಾರಿಗಳನ್ನು ಬಯಲುಗೊಳಿಸುವುದಕ್ಕೆ ಪ್ರಮುಖ ಸಾಕ್ಷಿ. ಆ ಘೋಷಣೆಯೇನೆಂದರೆ “ಯುಪಿ ಅಬ್ ಗುಜರಾತ್ ಬನೇಗ; ಫೈಜಾಬಾದ್ ಶುರುವಾತ್ ಕರೇಗ.” (ಇನ್ನುಮುಂದೆ ಯುಪಿಯು ಗುಜರಾತನ ಮಾಡೆಲ್‌ನ್ನು ಅನುಸರಿಸುತ್ತದೆ; ಇದು ಫೈಜಾಬಾದನಿಂದಲೇ ಶುರುವಾಗುತ್ತದೆ.)

“ಇದೆಲ್ಲವೂ ನಡೆಯುತ್ತಿರುವುದು ಸೆಕ್ಯುಲರ್ ಪಕ್ಷವೆಂದು ಖ್ಯಾತಿ ಗಳಿಸಿದ ಸಮಾಜವಾದಿ ಪಕ್ಷ ಅಧಿಕಾರ ಹಿಡಿದಿರುವ ಉತ್ತರ ಪ್ರದೇಶದಲ್ಲಿ. ಯುವ ನೇತಾರ ಅಖಿಲೇಶ್‌ಸಿಂಗ್ ಯಾದವ್ ನೇತೃತ್ವದಲ್ಲಿ!!”

(ಕೃಪೆ : ಡೆಕ್ಕನ್ ಹೆರಾಲ್ಡ್, 24.11.2012)

ಮೇಲಿನ ಎಲ್ಲಾ ಘಟನೆಗಳಲ್ಲಿ ಮೂರು ಪ್ರಮುಖ ಅಂಶಗಳು ತೀವ್ರವಾಗಿವೆ. ಮೊದಲನೆಯದಾಗಿ ಮತ್ತೊಮ್ಮೆ ಕೋಮುವಾದದ ದುಷ್ಟ ಶಕ್ತಿಗಳು ಅಮಾಯಕ ಹಿಂದುಳಿದ ಮತ್ತು ದಲಿತ ಯುವಕರನ್ನು ಮುಂದಿಟ್ಟುಕೊಂಡು ವಿಜೃಂಬಿಸುತ್ತಿರುವುದು. ಈ ದುಷ್ಟ ಶಕ್ತಿಗಳಿಗೆ ಅಖಾಡವನ್ನು ಒದಗಿಸಿಕೊಡಲು ಸೂಕ್ತ ವೇದಿಕೆಯನ್ನು ಸಿದ್ಧಪಡಿಸಿಕೊಟ್ಟ ನಮ್ಮ ಪ್ರಜಾಪ್ರಭುತ್ವದ ಬೆನ್ನೆಲುಬಾದ ಪೋಲೀಸ್ ವ್ಯವಸ್ಥೆ. ಮತ್ತು ಈ ದಬ್ಬಾಳಿಕೆಯನ್ನು ಪ್ರತಿಭಟಿಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದ್ದರೂ ಮೂಕ ಪ್ರೇಕ್ಷಕರಂತೆ ತಣ್ಣಗೆ ಕುಳಿತಿರುವ ನಾಗರಿಕ ಸಮಾಜ ಮತ್ತು ಇದೇ ಉತ್ತಮ ಪ್ರಜಾಪ್ರಭುತ್ವದ ಪ್ರಮುಖ ಅಂಗವೆಂದು ಬೀಗುತ್ತಿರುವ ಪತ್ರಿಕಾರಂಗವು ತನ್ನ ಸತ್ಯಶೋಧನೆಯ ಪ್ರಾಮಾಣಿಕ ಮಾರ್ಗವನ್ನು ಕೈಬಿಟ್ಟ ರೀತಿ.

ನಮ್ಮ ಈ ಅತ್ಮವಂಚನೆಗೆ ಕೊನೆ ಇಲ್ಲವೇ?

4 thoughts on “ಪೇಪರ್ ಟೈಗರ್‌ಗಳೂ, ಬಹುಸಂಖ್ಯಾತ ನೀರೋಗಳು ಮತ್ತು ಉತ್ತಮ ಪ್ರಜಾಪ್ರಭುತ್ವವೂ

  1. anand prasad

    ಠಾಕ್ರೆ ಒಬ್ಬ ಪ್ರಾದೇಶಿಕ ನಾಯಕನೇ ಹೊರತು ರಾಷ್ಟ್ರೀಯ ನಾಯಕ ಅಲ್ಲವೇ ಅಲ್ಲ. ನಮ್ಮ ಮಾಧ್ಯಮಗಳು ಪ್ರಾದೇಶಿಕ ನಾಯಕ ಹಾಗೂ ರಾಷ್ಟ್ರೀಯ ನಾಯಕ ಇವೆರಡರ ನಡುವೆ ಇರುವ ವ್ಯತ್ಯಾಸದ ತಿಳುವಳಿಕೆ ಇಲ್ಲದ ರೀತಿಯಲ್ಲಿ ವರ್ತಿಸಿ ಠಾಕ್ರೆಯನ್ನು ಒಬ್ಬ ಮಹಾನ್ ರಾಷ್ಟ್ರೀಯ ನಾಯಕನ ರೀತಿ ಬಿಂಬಿಸಿ ಹಾಸ್ಯಾಸ್ಪದವಾಗಿವೆ. ಠಾಕ್ರೆಯಲ್ಲಿ ರಾಷ್ಟ್ರೀಯ ನಾಯಕನಿಗೆ ಇರಬೇಕಾದ ಯಾವ ಅರ್ಹತೆಗಳೂ ಇರಲಿಲ್ಲ

    Reply
    1. anand prasad

      ಭಾಷೆ, ಸಂಸ್ಕೃತಿ, ಧರ್ಮದ ಹೆಸರಿನಲ್ಲಿ ಜನರನ್ನು ಕೆರಳಿಸಿ ಕಾನೂನನ್ನು ಕೈಗೆತ್ತಿಕೊಂಡು ಪರ್ಯಾಯ ಸರ್ಕಾರ ನಡೆಸುವ ಸರ್ವಾಧಿಕಾರವನ್ನು ಆರಾಧಿಸುವ ಎಲ್ಲ ಬಲಪಂಥೀಯರಿಗೂ ಇವರು ನಾಯಕ. ದೇಶದ ಸಂವಿಧಾನವನ್ನು ಹಾಗೂ ಕಾನೂನುಗಳನ್ನು ಗೌರವಿಸದ ಎಲ್ಲ ಮೂಲಭೂತವಾದಿಗಳಿಗೂ ಇವರು ನಾಯಕ.

      Reply
      1. prasad raxidi

        ನಿಮ್ಮ ಉತ್ತರದಲ್ಲೇ ನನ್ನ ಪ್ರಶ್ನೆಯ ಉತ್ತರವೂ ಇದೆ..! ನೀವು ಹೇಳಿದ ಗುಣಗಳಿರುವ ಯಾರೂ ನಾಯಕರೆನಿಸಿಕೊಳ್ಳಲು ಅರ್ಹರಲ್ಲ. ಪ್ರಾದೇಶಿಕ ನಾಯಕನಾದವ ಪ್ರಾದೇಶಿಕ ಭಿನ್ನತೆ-ಅನನ್ಯತೆಯನ್ನು ಉಳಿಸಿಕೊಂಡು ತನ್ನ ಹಿಂದಿರುವ ಜನಸಮೂಹವನ್ನು ಉತ್ತಮ ಬದುಕಿನತ್ತ ಮುನ್ನಡೆಸಬಲ್ಲವನಾಗಿರುತ್ತಾನೆ.,ಆಮೂಲಕವೇ ಆತ ನಿಜವಾದ ರಾಷ್ಟ್ರೀಯ ನಾಯಕನೂ ಆಗುತ್ತಾನೆ….

        Reply

Leave a Reply

Your email address will not be published. Required fields are marked *