ದಿಕ್ಕೆಟ್ಟಿರುವ ಈ ಹೊತ್ತಿನಲ್ಲಿ ಜಗತ್ತಿನ ಅಂಕೆ ಹಿಡಿದವರ್‍ಯಾರು?

– ಮಹದೇವ ಹಡಪದ

ಚಳವಳಿಗಳು ಸತ್ತಿವೆಯೇ, ಮೊಟಕಾಗಿವೆಯೇ, ಸೊರಗಿವೆಯೇ, ಅಥವಾ ಇಂದಿನ ಈ ಕಾಲಗರ್ಭದಲ್ಲಿ ಎಲ್ಲ ರೀತಿಯಿಂದಲೂ ಅಸಮತೆಗಳಿದ್ದರೂ ಸಮಾನತೆ ಬಂದಿದೆ ಎಂದು ಭಾವಿಸಿಕೊಂಡು ಮನುಷ್ಯ ತೆಪ್ಪಗಾಗಿದ್ದಾನೆಯೇ? ಚಳವಳಿಗಳ ಸಾಂಘಿಕ ಶಕ್ತಿ, ಆಲೋಚನಾ ಕ್ರಮಗಳು ಬದಲಾಗಿವೆಯೇ? ಇರುವ ವ್ಯವಸ್ಥೆ ಹೇಗಿದೆಯೋ ಹಾಗೇ ಇರುವಾಗ ಜಗತ್ತು ಬದಲಾಗಿದೆ ಎಂಬ ಭ್ರಮೆ ಆಂತರಿಕ ಶತ್ರುವಾಗಿ ಪ್ರವೇಶ ಪಡೆದ ರೀತಿ ಯಾವ ಬಗೆಯದು? ಚಳವಳಿಗಳು ಸಮರ್ಥ ನಾಯಕತ್ವದ ಕೊರತೆಯಿಂದಾಗಿ ಹಿಮ್ಮುಖವಾದವೇನು? ಅಧಿಕಾರದ ದಾಹ ಸಾಮಾನ್ಯ ಕಾರ್‍ಯಕರ್ತನಲ್ಲೂ ಆಸೆಯ ಬೀಜ ಬಿತ್ತಿದವೋ?

ರಾಶಿ ಮಾಡುವ ರೈತ ಕಾಳುಗಳಲ್ಲಿನ ಕಸ-ಕಡ್ಡಿ ತೆಗೆಯಲು ಗಾಳಿಗೆ ರಾಶಿ ತೂರುತ್ತಾನೆ. ಆ ತೂರುವ ಕ್ರಿಯೆಗೆ ಒಂದೇ ದಿಕ್ಕಿಗೆ ಚಲಿಸುವ ಗಾಳಿ ಬರಬೇಕು. ಆಗ ಮಾತ್ರ ಹೊಟ್ಟು-ಕಾಳು ಬೇರೆ ಬೇರೆ ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ಆತ ದಿನಗಟ್ಟಲೇ ಗಂಟೆಗಟ್ಟಲೇ ಗಾಳಿಗೆದುರಾಗಿ ಕಾಯುತ್ತಾನೆ. ಸುತ್ತ ನಾಲ್ಕೂ ಕಡೆಗೆ ಬೀಸುವ ಹುಂಡಗಾಳಿಗೆ ಮೊರ ಹಿಡಿದು ತೂರಲು ಸಾಧ್ಯವಿಲ್ಲ ಹೇಗೋ ಹಾಗೇ… ಈ ಗೋಳೀಕರಣದ ವಿವಿಧ ಮಜಲಿನ ಮೈ-ಮಾಟಗಳಲ್ಲಿ ಹುಂಡಗಾಳಿಯ ಪರಿಣಾಮದಿಂದಾಗಿ ಸಾಮಾಜಿಕ ಸ್ವಾಸ್ತ್ಯ ಬಯಸುವ ಚಳವಳಿಗಳ ಅಸ್ತಿತ್ವವೂ ಗೊಂದಲಗೊಂಡಿದೆಯೇನೋ ಅನ್ನಿಸುತ್ತಿದೆ. ಚಳವಳಿಗಳ ಅಸ್ತಿತ್ವ ಒತ್ತಟ್ಟಿಗಿರಲಿ, ಅಧಿಕಾರದ ದಾರ್ಷ್ಟ್ಯ, ದುರಾಡಳಿತ, ಮತಾಂಧ ಯೋಜನೆಗಳನ್ನು, ಪಟ್ಟಭದ್ರ ಹಿತಾಸಕ್ತಿಗಳನ್ನು ಪ್ರಶ್ನಿಸುವ, ಧಿಕ್ಕರಿಸುವ ವೈಚಾರಿಕ ಮನಸ್ಸುಗಳು ಕೂಡ ಜಾಣಕುರುಡನ್ನು ಅಭಿನಯಿಸುತ್ತಿರುವುದು ಅಸಹ್ಯಕರವಾಗಿದೆ.

ಈಗ ನಾಡು-ನುಡಿ, ಸಂಸ್ಕೃತಿಗಳ ಕುರಿತಾಗಿ ಬೃಹತ್ತಾದ ಉತ್ಸವಗಳನ್ನು ಶಿಕ್ಷಣ ಸಂಸ್ಥೆಗಳು, ಮಠಗಳು, ಪ್ರಭಾವಿ ವ್ಯಕ್ತಿಗಳು ನಡೆಸುತ್ತಿದ್ದಾರೆ. ಅಲ್ಲೆಲ್ಲ ಚಳವಳಿಗಳು, ಸಾಮಾಜಿಕ ಸಮಸ್ಯೆಗಳನ್ನಲ್ಲದೆ ಮನುಷ್ಯನ ಬದುಕಿನ ತೀವ್ರತೆಯ ಕುರಿತಾಗಿ ದೀರ್ಘ ಚರ್ಚೆಗಳು, ಭಾಷಣಗಳು, ಠರಾವುಗಳು. ಹೀಗೆ ಮಾತಿನಲ್ಲೇ ಸಮಸ್ಯೆಗಳನ್ನು ಸೃಷ್ಟಿಸಿ ಪರಿಹಾರವನ್ನೂ ಕೊಟ್ಟುಬಿಡುವ ತಂತ್ರಗಾರಿಕೆಯೂ ಹುಂಡಗಾಳಿಗೆ ತೂರಿಬಿಡುವ ಕ್ರಿಯೆ ಆಗಿಬಿಟ್ಟಿದೆ. ಶಿವನ ಬೆವರ ಹನಿಯಿಂದ ಉದ್ಭವಿಸಿದ ವೀರಭದ್ರ,,, ದಕ್ಷಬ್ರಹ್ಮನ ಯಜ್ಞದ ಅಗ್ನಿ ನಾಶ ಮಾಡುವುದರೊಂದಿಗೆ ಆರಂಭವಾಗುವ ಪ್ರತಿಕ್ರಿಯಾತ್ಮಕ ಅಭಿಯಾನ ಇಂದಿನ ಕಾಲಘಟ್ಟದಲ್ಲಿ ಸಂಪೂರ್ಣ ನಿಂತೇ ಹೋಗಿದೆ ಅಂದರೆ, ಒಳಗೊಳ್ಳುವಿಕೆಯ ಕುಟಿಲ ನೀತಿಗೆ ಶಿವನ ಸಂಸ್ಕೃತಿ ಬಲಿಯಾಗಿದೆ ಅನ್ನುವುದು ನಿಶ್ಚಿತ. ಸಾಮಾಜಿಕ ವಾತಾವರಣದಲ್ಲಿ ಸಮಾನತೆ ಮಂತ್ರ ಒಂದು ಬೂಟಾಟಿಕೆಯ ತಂತ್ರವಾಗಿದೆ. ಸೋದರತೆಯೆಂಬುದು ಕೇವಲ ದೇಶಪ್ರೇಮದಲ್ಲಿ ಒಂದಾಗುವ, ಧರ್ಮಪ್ರೀತಿಯಲ್ಲಿ ಬೆಸೆದುಕೊಳ್ಳುವ ಹುಚ್ಚುಕಲ್ಪನೆಯ ಆದರ್ಶವಾಗಿ ಉಳಿದಿರುವಾಗ, ಭಾರತದಲ್ಲಿನ ಹಿಂದುಳಿದ ವರ್ಗದವರಿಗೆ ಪುರಾಣಗಳ, ದೇವದೇವರ ನಡುವಿನ ವ್ಯತ್ಯಾಸ ಉನ್ಮತ್ತ ಭಕ್ತಿಯ ಪರಾಕಾಷ್ಠೆ ಆಗಿದೆ. ಬ್ರಾಹ್ಮಣ್ಯದ (ಬ್ರಾಹ್ಮಣ್ಯ ಎಂಬುದು ಜಾತಿಯಲ್ಲ) ಕುಹಕ ನೀತಿ ಹುಟ್ಟುಹಾಕಿರುವ ಆದರ್ಶ ರಾಜ್ಯವೇ ಮಹಾತ್ಮರುಗಳ ಕನಸಿನ ರಾಜ್ಯ ಕಲ್ಪನೆಯೂ ಆಗಿದೆ. ಅಲ್ಲಿ ಈ ಯಾವ ಜನತಂತ್ರದ ಆಡಳಿತ, ಸುವ್ಯವಸ್ಥಿತ ಕಾನೂನು ಬೇಕಾಗುವುದಿಲ್ಲ. ಇವರ ಕಾಯ್ದೆಗಳನ್ನು ಮಾನ್ಯ ಮಾಡುವ ಸಚಿವಾಲಯಗಳು ಅಂದ್ರೆ ಮಠಗಳು.

ಇಂದು ಸಮಾಜ ಅನ್ನೋದು ಜಾತಿಯನ್ನಾಧರಿಸಿದ ಒಂದು ಕೋಮಿನ ಸಂಘಟನೆಯಾಗಿದೆ. ಲಿಂಗಾಯತ ಸಮಾಜ, ಬ್ರಾಹ್ಮಣ ಸಮಾಜ, ದಲಿತ ಸಮಾಜ, ಕುರುಬ ಸಮಾಜ, ಮುಸ್ಲಿಮ್ ಸಮಾಜ ಎಂಬ ವರ್ಗೀಕರಣಗಳು ಜನತಂತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಳಸಿಕೊಳ್ಳುತ್ತಿರುವ ಉಪಾಯಗಳಾಗಿವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಮತ್ತೆ ಮತ್ತೆ ಪ್ರಾದೇಶಿಕ ಪಕ್ಷಗಳು ನೆಲಕಚ್ಚುತ್ತಿರುವುದಕ್ಕೆ ಈ ವರ್ಗೀಕರಣವೇ ಕಾರಣವಿರಬಹುದು. ಚಳವಳಿಗಳು ಹುಟ್ಟುಹಾಕಿದ್ದ ರಾಜಕೀಯ ತೀವ್ರತೆಯನ್ನು ಅರ್ಥೈಸಿಕೊಳ್ಳಬೇಕಾದ ಹೊತ್ತಿನಲ್ಲಿಯೇ ಜಾತಿಯಾಧಾರಿತ ಸಮಾಜ ಕಲ್ಪನೆಗಳು ನಾಯಕತ್ವದ ಗೊಂದಲವನ್ನೆಬ್ಬಿಸಿ, ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಚಳವಳಿಯ ಪ್ರಜ್ಞೆಗಳನ್ನು ನಾಶಗೊಳಿಸುತ್ತಿವೆ.

ಚಳವಳಿಗಳು ರೂಪಿಸಿದ್ದ ಪ್ರಜ್ಞೆ – ಜಾತಿ ಪ್ರಜ್ಞೆಯಾಗಿ ಬೆಳೆದಂತೆ ಮನುಷ್ಯ ನಿರ್ಮಿತ ಮೌಲ್ಯಗಳು ಹೆಚ್ಚು ಸಂಕೀರ್ಣಗೊಂಡವು. ಜ್ಞಾನದ ಆಕರಗಳು ಅಕ್ಷರವಂತರ ಕೈಗೆ ಸುಲಭದಲ್ಲಿ ಸಿಗುವಂತಾದ ಮೇಲೆ ಶೋಷಣೆಯ ರೂಪಗಳು ಹೊಸ ಮುಖವಾಡಗಳೊಂದಿಗೆ ಪ್ರತ್ಯಕ್ಷವಾದವು. ಅಂಬೇಡ್ಕರ್, ಲೋಹಿಯಾ ಮತ್ತು ಮಾರ್ಕ್ಸ, ಈ ಮೂವರ ಆಲೋಚನೆಗಳ ಪರಿಣಾಮದಿಂದಾಗಿ ಭಾರತದ ನಾಗರೀಕ ಸಮಾಜದಲ್ಲಿ ಮಹತ್ವದ ತಿರುವುಗಳನ್ನು ಕಾಣಲು ಸಾಧ್ಯವಾಯಿತು. ಮಾನವೀಯ ಹಕ್ಕುಗಳ ಹೋರಾಟದ ಪರ್ವ ಸ್ವಾತಂತ್ರ್ಯಪೂರ್ವದಲ್ಲಿಯೇ ಅಲ್ಲಲ್ಲಿ ಕೆಲ ನಾಯಕರುಗಳ, ಉದಾತ್ತ ರಾಜರುಗಳ, ಸಂತರ, ಸಮಾಜಸುಧಾರಕರ ನೇತೃತ್ವದಲ್ಲಿ ಆರಂಭವಾದರೂ, ಚಳವಳಿಯಾಗಿ ರೂಪಗೊಂಡದ್ದು ಈ ಮೂರು ಜನರ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಒಳನೋಟದ ತೀಕ್ಷ್ಣ ದೃಷ್ಟಿಕೋನದಲ್ಲಿಯೇ ಅನ್ನಬಹುದು. ಈ ಸಾಧ್ಯತೆಯನ್ನು ಮನಗಂಡ ನಂತರವೇ ಸ್ವಾತಂತ್ರ್ಯದ ಕುರಿತಾದ ಭ್ರಮೆಗಳು ಹಕ್ಕಿನ, ಹಕ್ಕು ಚಲಾವಣೆಯ, ಸಮಾಜ ಬದಲಾವಣೆಯ ಮತ್ತು ಅಭಿವೃದ್ಧಿಯ ಕುರಿತಾದ ಆಶಯಗಳಾಗಿ ಪರಿವರ್ತನೆಯಾದವು.

ಸ್ವಾತಂತ್ರ್ಯದ ಸುಳ್ಳಾಟವು ಸತ್ಯವಾಗುತ್ತ ಹೊರಟ ಹಾದಿಯಲ್ಲಿಯೇ ಸತ್ಯದ ಸಮರ್ಥಕರು ಗ್ರಾಮೀಣವಾಸಿಗಳನ್ನು ನೀವೇ ಹೆಚ್ಚು ಸುಖವಾಗಿರುವವರು ಎಂದು ನಂಬಿಸಲು ಪ್ರಯತ್ನಿಸಿದರು. ಹಳ್ಳಿಗಳ ಅಂತಃಸತ್ವವೇ ಭಾರತದ ಭವ್ಯ ಪರಂಪರೆಯೆಂದು ನಿರೂಪಿಸಲು ಪ್ರಯತ್ನಿಸಿದರು. ಅಲ್ಲಿನ ನ್ಯಾಯಾಲಯಗಳನ್ನು, ವರ್ಗವ್ಯವಸ್ಥೆಯನ್ನು, ಊರು-ಕೇರಿಗಳನ್ನು ಹೇಗಿವೆಯೋ ಹಾಗೆಯೇ ಉಳಿಸಿಕೊಳ್ಳಲು ಹವಣಿಸುವ ಸನಾತನ ಸಂಸ್ಕೃತಿ ಆರಾಧಕರು ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ ಹಂಬಲಿಸಿದರು. ತಂತ್ರಕ್ಕೆ ಪ್ರತಿ ತಂತ್ರ ಹಾಕುವ ಮನಸುಗಳು ಈ ದೇಶದ ಹುಚ್ಚು ಭಾವನಾವಾದ ಮತ್ತು ಹುಚ್ಚುಚ್ಚು ಆಧ್ಯಾತ್ಮವಾದಗಳೆರಡನ್ನೂ ಒಂದರೊಡನೊಂದನ್ನು ಹೊಸೆಯಲು ಪ್ರಾರಂಭಿಸಿದರು, (ಇವತ್ತು ಬಾಬಾಸಾಹೇಬರನ್ನು ಮೂರ್ತೀಕರಿಸುತ್ತಿರುವ ದಲಿತ ಸಮುದಾಯಗಳಲ್ಲಿ ಈ ಮೇಲಿನ ಉನ್ಮತ್ತ ವಾದಗಳೆರಡೂ ಇಲ್ಲವೆಂಬುದನ್ನೂ ಮತ್ತು ಆತ್ಮಸ್ಥೈರ್ಯದ ಸಂಕೇತವಾಗಿ ಮಾತ್ರ ಡಾ|| ಅಂಬೇಡ್ಕರ್‌ರು ಇದ್ದಾರೆಂಬುದನ್ನು ವ್ಯಾಕುಲಗೊಳ್ಳುತ್ತಿರುವ ಪ್ರಗತಿಶೀಲ ಮನಸ್ಸುಗಳು ಅರ್ಥಮಾಡಿಕೊಳ್ಳಬೇಕು.) ಆ ಹೊಸೆಯುವ ಕ್ರಮದಲ್ಲಿ ಸಣ್ಣಪುಟ್ಟ ಅಸ್ತಿತ್ವಗಳೆಲ್ಲ ಭಾರತೀಯ ಆಧುನಿಕ ದರ್ಶನಗಳಾಗಿ ಉಳಿದುಕೊಳ್ಳಬೇಕಿತ್ತು. ಆದರೆ ಭಾರತೀಯತೆ ಎಂಬ ಭಾವನಾವಾದವೂ ಆಧ್ಯಾತ್ಮವಾದವೂ ಏಕಮುಖಿ ಸಂಸ್ಕೃತಿಯಾಗಿ ರೂಪುಗೊಳ್ಳುವ ಧಾವಂತದಲ್ಲಿ ಸಾವಿರಾರು ತೊರೆಗಳನ್ನು ಅಖಂಡ ಹಿಂದುತ್ವದಲ್ಲಿ ವಿಲೀನಗೊಳಿಸಿಕೊಂಡಿತು.

ಕನ್ನಡ ಕರಾವಳಿ ಜಿಲ್ಲೆಗಳಲ್ಲಿ ರೂಪಗೊಳ್ಳುತ್ತಿರುವ ಸನಾತನಿಗಳ ಹೊಸ ಅವತಾರಗಳನ್ನು, ಸಂಪ್ರದಾಯ, ಪರಂಪರೆಗಳ ವಕ್ತಾರರಂತೆ ವಹಿಸಿಕೊಂಡು ಹೋಗುತ್ತಿದ್ದ ನೈತಿಕ ಪೋಲಿಸರನ್ನು ಬೆತ್ತಲೆಗೊಳಿಸಿದ್ದ ಒಬ್ಬ ವರದಿಗಾರನನ್ನು ಜೈಲು ಸೇರಿಸುವ ಹುಂಬುತನ ಪ್ರದರ್ಶಿಸಿರುವ ಪೋಲಿಸ್ ವ್ಯವಸ್ಥೆಯೂ ಡೊನೇಶನ್ ದೊರೆಗಳ, ಮೂಲಭೂತಿಗಳ, ಧರ್ಮಾಂಧರ ಕೈ ದಾಳವಾಗಿ ನಡೆದುಕೊಂಡಿದ್ದು ಪ್ರಜಾತಂತ್ರದಲ್ಲಿನ ವ್ಯಂಗ್ಯವನ್ನು ತೋರಿಸುತ್ತದೆ. ಹೋಮಸ್ಟೇ ದಾಳಿಯ ಕುರಿತಾಗಿ ವರದಿ ಮಾಡಿದ ಸರಳ ಕಾರಣಕ್ಕಾಗಿ ನವೀನ ಸೂರಿಂಜೆಯಂಥ ದಿಟ್ಟ ಪತ್ರಕರ್ತನನ್ನು ಬಂದಿಸಲಾರರು, ಆ ಕಪ್ಪು ಕನ್ನಡಕದ ಗಿಣಿರಾಮನ ವೈಚಾರಿಕ ವಾಗ್ದಾಳಿಗೆ ತಡಯೊಡ್ಡಲು ಜಾಮೀನು ರಹಿತ ವಾರೆಂಟಗಾಗಿ ಕರಾವಳಿ ಜಿಲ್ಲೆಯ ಬಿಳಿ ಆನೆಗಳೆಲ್ಲವೂ ಶ್ರಮವಹಿಸಿರುವ ಅನುಮಾನವೂ ಇದೆ. ಆ ನೆಲದ ಬಗ್ಗೆ ಮೋಹ ಇಟ್ಟುಕೊಂಡವರು, ಅಯ್ಯೋ ಹೀಗಾಗುತ್ತಿದೆ ನನ್ನ ತವರು ಎಂದು ಅಲವತ್ತುಕೊಳ್ಳುವವರು ಗಳಗಳನೇ ಅತ್ತುಬಿಟ್ಟರೆ ಮೈಯಲ್ಲ ದುರಹಂಕಾರ ತುಂಬಿಕೊಂಡಿರುವ ಮೃದು ಮನಸಿನ ಆಸಾಮಿಗಳು ಕ್ಷಣಹೊತ್ತು ತಲ್ಲಣಿಸಿ ಅದಕ್ಕೂ ನಮ್ಮಲ್ಲೊಂದು ಬೇರುಂಟೆಂದು, ಹೊಸ ವರಸೆಯೊಂದಿಗೆ ಕೋಮು ಸಂಘಟನೆಯ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಆ ಉತ್ಸವಗಳ ಅಂತರಾಳದಲ್ಲಿ ಕಾವು ಕುಳಿತಿರುವ ಹಕ್ಕಿಯ ಉದ್ಧೇಶ ಬದಲಾದರೂ ಮೊಟ್ಟೆಯಿಂದ ಮೂಡಿಬರುವ ಶಿಶುವಿನ ರೂಪ ಭಯಂಕರವಾಗಿರುತ್ತದೆ.

One thought on “ದಿಕ್ಕೆಟ್ಟಿರುವ ಈ ಹೊತ್ತಿನಲ್ಲಿ ಜಗತ್ತಿನ ಅಂಕೆ ಹಿಡಿದವರ್‍ಯಾರು?

  1. anand prasad

    ಅನ್ಯಾಯದ ವಿರುದ್ಧ ಮೊದಲ ದನಿ ಏಳಬೇಕಾಗಿರುವುದು ಸಾಹಿತ್ಯ ವಲಯದಿಂದ, ಚಿಂತಕರ ವಲಯದಿಂದ. ಸಾಹಿತ್ಯ, ಚಿಂತಕರ ವಲಯ ಇಂದು ಭೋಗಜೀವನದಲ್ಲಿ ಮುಳುಗಿರುವ ಕಾರಣ ಅನ್ಯಾಯದ ವಿರುದ್ಧ ಈ ವಲಯದಿಂದ ಯಾವುದೇ ಧ್ವನಿ ಮೊಳಗುತ್ತಿಲ್ಲ. ಕರ್ನಾಟಕದಲ್ಲಿ ಮೂಲಭೂತವಾದಿಗಳು ತನ್ನ ಕರ್ತವ್ಯ ನಿರ್ವಹಿಸಿದ ವರದಿಗಾರನನ್ನು ಅನ್ಯಾಯವಾಗಿ ಬಂಧಿಸಿ ಜೈಲಿಗೆ ಅಟ್ಟಿರುವಾಗ ಕೆಲವರನ್ನು ಬಿಟ್ಟರೆ ಪ್ರಮುಖ ಸಾಹಿತಿಗಳಾರೂ ಇಂಥ ಅನ್ಯಾಯದ ವಿರುದ್ಧ ಧ್ವನಿ ಎತ್ತಿಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಸಮಾಜದ ವಿವೇಚನಾ ಪ್ರಜ್ಞೆಯನ್ನು ಬಡಿದೆಬ್ಬಿಸಬೇಕಾಗಿದ್ದ ಸಾಹಿತ್ಯ ವಲಯ ಚಕಾರ ಎತ್ತಿರುವುದು ಕಂಡು ಬಂದಿಲ್ಲ. ಕನ್ನಡದ ಪ್ರಖ್ಯಾತ ಸಾಹಿತಿಗಳು, ಜ್ಞಾನಪೀಠ ವಿಜೇತರಿಗೆ ಇಂಥ ಒಂದು ಅನ್ಯಾಯ ನಡೆದಿರುವುದು ಇಂದಿನ ಮಾಧ್ಯಮಗಳು ಮೇಲುಗೈ ಪಡೆದಿರುವ ದಿನಗಳಲ್ಲಿ ಗೊತ್ತೇ ಆಗಿಲ್ಲ ಎಂದರೆ ಆತ್ಮವಂಚನೆ ಆದೀತು. ಹಾಗಾದರೆ ಇವರ ಸಾಕ್ಷಿಪ್ರಜ್ಞೆಗೆ ಏನಾಗಿದೆ?

    Reply

Leave a Reply

Your email address will not be published. Required fields are marked *