Daily Archives: November 29, 2012

ಪತ್ರಿಕಾ ಸ್ವಾತ್ರಂತ್ರ್ಯ ಮತ್ತು ಪ್ರಜ್ಞಾವಂತ ಸಮಾಜ

– ತೇಜ ಸಚಿನ್ ಪೂಜಾರಿ

ನಮ್ಮ ಶಾಸಕ ಹಾಗೂ ಸಂಸದರಿಗೆ ಶಾಸನ ಸಭೆಗಳಿಗೆ ಸಂಬಂಧಪಟ್ಟ ಹಾಗೆ ಒಂದು ವಿಶೇಷ ಸಾಂವಿಧಾನಿಕ ಸವಲತ್ತು ಇದೆ. ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಅವರ ಒಟ್ಟಾರೆ ನಡವಳಿಕೆಯು ಹೊರಗಿನ ಕಾನೂನು ಹಾಗೂ ಪೋಲಿಸ್ ವ್ಯವಸ್ಥೆಯ ಸುಪರ್ದಿಗೆ ಬರುವುದಿಲ್ಲ. ಅಲ್ಲಿ ಸಭಾಧ್ಯಕ್ಷರೇ ಅಂತಿಮ ನ್ಯಾಯಾಧೀಶರು. ಶಾಸಕರು ನಿರ್ಭೀತ ಹಾಗೂ ನಿಷ್ಪಕ್ಷಪಾತ ಧೋರಣೆಯಿಂದ ಕಾರ್ಯನಿರ್ವಹಿಸಲು ಅನುವಾಗುವಂತೆ ನಮ್ಮ ಸಂವಿಧಾನ ನಿರ್ಮಾತೃಗಳು ಇಂತಹ ವ್ಯವಸ್ಥೆಯೊಂದನ್ನು ರೂಪಿಸಿದಾರೆ. ಇದು, ನಮ್ಮ ಪ್ರಜಾಪ್ರತಿನಿಧಿಗಳ ಸ್ವತಂತ್ರ ಕಾರ್ಯನಿರ್ವಹಣೆಗೆ ಸೂಕ್ತವಾದ ವೇದಿಕೆಯನ್ನು ಒದಗಿಸಿದೆ. ಹೊರಗಿನ ಪೋಲಿಸರು ಸದನದ ಒಳಗಿನ ಅವರ ಕೃತ್ಯಗಳಿಗೆ ಸಂಬಂಧ ಪಟ್ಟಹಾಗೆ ಮಾನನಷ್ಟ ಮೊಕದ್ಧಮೆ ಹಲ್ಲೆ ದರೋಡೆ ಮೊದಲಾದ ಪ್ರಕರಣಗಳನ್ನು ದಾಖಲಿಸುವುದು ಅಸಾದ್ಯ. ನಿಷ್ಪಕ್ಷಪಾತ ಕಾರ್ಯನಿರ್ವಹಣೆಗೆ ಸ್ವಾತಂತ್ರ್ಯ ಮೂಲಭೂತ ಅವಶ್ಯಕತೆಯಾಗಿರುತ್ತದೆ. ಅಂತಹ ಸ್ವಾತಂತ್ರ್ಯದ ರಕ್ಷಣೆಯ ಹಕ್ಕನ್ನು ನಮ್ಮ ಘನ ಸಂವಿಧಾನವು ಶಾಸಕರಿಗೆ ನೀಡಿದೆ.

ಇದೇ ಚೌಕಟ್ಟಿನಲ್ಲಿ ಯೋಚಿಸಿದಾಗ ಪತ್ರಕರ್ತರು ಅನುಭವಿಸಬೇಕಾದ ವಿಪತ್ಪರಂಪರೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಪತ್ರಕರ್ತರು ಕರ್ತವ್ಯ ನಿರ್ವಹಿಸುವುದು ಶಾಸನ ಸಭೆಯಂತಹ ಸರ್ವರಕ್ಷಿತ ವ್ಯವಸ್ಥೆಯಲ್ಲಿ ಅಲ್ಲ. ಅವರ ಕ್ರಿಯಾಶಿಲತೆಯ ವೇದಿಕೆ ಹೊರಗಿನ ಸಮಾಜವೇ ಆಗಿದೆ. ಹೀಗಾಗಿ ಅವರು ಕಾನೂನು ಹಾಗೂ ಪೋಲಿಸ್ ವ್ಯವಸ್ಥೆಯ ನೇರ ಸುಪರ್ದಿಯಲ್ಲಿ ಬರುತ್ತಾರೆ. ಇದು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತದೆ. ಅವರ ನಿಷ್ಕಾಮ ಹಾಗೂ ನಿರ್ಭೀತ ಸೇವೆಗೆ ಮಿತಿಗಳನ್ನು ಹೇರುತ್ತದೆ.

ಪೋಲಿಸ್ ವ್ಯವಸ್ಥೆಯು ಸರಕಾರದ ಅಡಿಯಾಳು. ಹೀಗಾಗಿ ಆಯಾ ಸಂಧರ್ಭದಲ್ಲಿ ಆಡಳಿತ ಸೂತ್ರ ಹಿಡಿದಿರುವ ರಾಜಕೀಯ ಪಕ್ಷವು ಪ್ರತಿಪಾದಿಸುತ್ತಿರುವ ಒಟ್ಟು ಮೌಲ್ಯವ್ಯವಸ್ಥೆಯನ್ನು ಧಿಕ್ಕರಿಸುವುದು ಸಾಮಾನ್ಯ ಪತ್ರಕರ್ತನಿಗೆ ಕಷ್ಟಸಾಧ್ಯ. ಜೊತೆಗೆ ಆಡಳಿತ ಪಕ್ಷವೇ ಮಾತ್ರವಲ್ಲದೇ ಆಯಾ ನಿರ್ದಿಷ್ಟ ಸಾಮಾಜಿಕ ವ್ಯವಸ್ಥೆಯಲ್ಲಿ ಕ್ರಿಯಾಶೀಲವಾಗಿರುವ ಮತ್ತು ಸರ್ವಪಕ್ಷಗಳಿಂದಲೂ ಸಮಾನ ಗೌರವನ್ನು ಪಡೆಯುತ್ತಿರುವ ಸಾಂಸ್ಕೃತಿಕ ಯಾಜಮಾನ್ಯವನ್ನು ಎದುರು ಹಾಕಿಕೊಳ್ಳುವುದು ಕೂಡಾ ಬಂಧನವನ್ನು ಆಹ್ವಾನಿಸಿದಂತೆಯೆ ಆಗಿರುತ್ತದೆ. ಪತ್ರಕರ್ತ ನವೀನ್ ಸೂರಿಂಜೆ ಇಂತಹ ಇಬ್ಬಗೆಯ ವೈರತ್ವವನ್ನು ಏಕಕಾಲಕ್ಕೆ ಎದುರಿಸುತ್ತಿದ್ದಾರೆ. ಹೀಗಾಗಿಯೇ ಅವರ ಜೈಲುಪರ್ವ ಮತ್ತೆ ಮತ್ತೆ ಮುಂದುವರಿಯುತ್ತಲೇ ಇದೆ.

***

ಪತ್ರಿಕಾ ಸ್ವಾತ್ರಂತ್ರ್ಯ ಇಂದು ಕೇವಲ ಘೋಷಣೆಯಾಗಿಯೇ ಉಳಿದಿದೆ. ಕನಸುಗಳು ಹಾಗೂ ಮೌಲ್ಯಗಳು ವಾಸ್ತವದಲ್ಲಿ ಅನುಷ್ಠಾನಕ್ಕೆ ಬಾರದೆ ಕೇವಲ ಆದರ್ಶ ಮಾತ್ರವೇ ಆಗಿ ಉಳಿಯುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ದೊಡ್ಡ ವೈಫಲ್ಯವಾಗಿದೆ. ಮೂಲಭೂತ ಹಕ್ಕುಗಳು, ಸಮಾನತೆ, ಜಾತಿ ನಿರ್ಮೂಲನೆ, ಸಮಾಜವಾದ ಇಂತಹ ಮೌಲ್ಯಗಳು ಇನ್ನೂ ನಿಲುಕದ ಊರಿನಾಚೆಗೇ ಇವೆ. ಹಾಗೆಯೆ “ಪತ್ರಿಕಾ ಸ್ವಾತ್ರಂತ್ರ್ಯ.”

ನವೀನ್ ಪತ್ರಿಕಾ ಸ್ವಾತ್ರಂತ್ರ್ಯದ ಮಿಥ್ಯೆಗೆ ಸಾಕ್ಷಿಯಾಗಿ ನಿಂತಿದ್ದಾರೆ. ಪತ್ರಕರ್ತರ ಸ್ವಾತಂತ್ರ್ಯವನ್ನೂ ಹಕ್ಕುಗಳನ್ನೂ ಉಳಿಸಬೇಕಾದವರು ಯಾರು ಎಂಬ ಅಂಶವೇ ಸದ್ಯಕ್ಕೆ ತಿಳಿಯುತ್ತಿಲ್ಲ. ಪೋಲಿಸರು ಹೋಂಸ್ಟೇ ದಾಳಿಕೋರರ ಮೇಲೆ ಹೊರಿಸಿದ ಅಷ್ಟೂ ಆರೋಪಗಳನ್ನು ನವೀನ್ ಸೂರಿಂಜಿಯವರ ಮೇಲೂ ದಾಖಲಿಸಿದ್ದಾರೆ. ದರೋಡೆ, ಅಕ್ರಮ ಪ್ರವೇಶದಂತಹ ಮೊಕದ್ಧಮೆಗಳು ಕೂಡಾ ಇವೆ. ಕ್ರಿಯಾಶೀಲ ಪತ್ರಕರ್ತನೊಬ್ಬನ ಮೇಲೆ ಇಂತಹ ಕಠಿಣ ಕೇಸುಗಳನ್ನು ದಾಖಲಿಸಿದರೆ ಆತ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದು ಸಾದ್ಯವೇ? ದಾಳಿಮಾಡಲು ಹೋದವರನ್ನೂ ವರದಿಮಾಡಲು ಹೋದ ಪತ್ರಕರ್ತನ್ನೂ ಒಂದೇ ತಕ್ಕಡಿಯಲ್ಲಿ ನೋಡುವುದು ನ್ಯಾಯವೇ? ದುರಾದೃಷ್ಟವಶಾತ್, ವ್ಯವಸ್ಥೆ ನ್ಯಾಯ ಅನ್ಯಾಯ ಅಥವಾ ಧರ್ಮ-ಅರ್ಧಮದ ಮಿತಿಗಳನ್ನು ಮೀರಿಯೇ ಕಾರ್ಯನಿರ್ವಹಿಸುತ್ತದೆ. ಅಂತಹ ಮಹಿಷಾಸುರ ವ್ಯವಸ್ಥೆಯ ಕಪಿಮುಷ್ಟಿಯಲ್ಲಿ ಉಸಿರುಗಟ್ಟಿ ನಲುಗುತ್ತಿರುವ ಹಾವಿನಂತೆ ಇರುವ ಪತ್ರಿಕಾಸ್ಯಾತಂತ್ರ್ಯದ ಕ್ಷೀಣ ದನಿಯಂತೆ ನವೀನ್ ಕಾಣಿಸುತ್ತಿದ್ದಾರೆ.

***

ನವೀನ್ ಪ್ರಕರಣದಲ್ಲೂ ಒಂದು ತಾತ್ವಿಕ ಪ್ರಶ್ನೆ ಇದೆ. ಅದು ಪತ್ರಕರ್ತನ ಸಾಮಾಜಿಕ ಜವಾಬ್ದಾರಿಗೆ ಸಂಬಂಧಪಟ್ಟ ಪ್ರಶ್ನೆಯಾಗಿದೆ. ಅದು ದಾಳಿ ಯಾ ಹೊಡೆದಾಟದಂತಹ ಆಕಸ್ಮಿಕದ ಸಂಧರ್ಭಗಳಲ್ಲಿ ವರದಿಗಾರ ಯಾವ ರೀತಿ ವರ್ತಿಸಬೇಕು ಎಂಬ ಕುರಿತದ್ದಾಗಿದೆ. ಅಂತಹ ವಿಷಮ ಸಂಧರ್ಭದಲ್ಲಿ ಪತ್ರಕರ್ತ ಘಟನೆಯ ವರದಿ ಮಾತ್ರವೇ ಮಾಡುತ್ತಿರಬೇಕೇ ಅಥವಾ ಸಂಕಷ್ಟಕೀಡಾದವರ ನೆರವಿಗೆ ಹೋಗಬೇಕೇ ಎಂಬ ವಿಚಾರ. ಇದು ಪೂರ್ಣವಾಗಿ ಮೌಲ್ಯ ವ್ಯವಸ್ಥೆಗೆ ಸಂಬಂಧಪಟ್ಟ ವಿಷಯವಾಗಿದೆ. ಇದನ್ನು ಚರ್ಚಿಸಿ ಒಂದು ಮೌಲ್ಯವಾಗಿ ರೂಪಿಸಿಕೊಳ್ಳಬೇಕಾಗಿರುವುದು ಸಮಾಜವೇ ಹೊರತು ಕಾನೂನು ಅಥವಾ ಪೋಲಿಸ್ ವ್ಯವಸ್ಥೆಗಳಲ್ಲ್ಲ. ಪತ್ರಕರ್ತರ ವ್ಯಾಪಕತೆಯಿಂದಾಗಿ ಇಂತಹ ಪ್ರಕರಣಗಳು ಇಂದು ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿವೆ ಮತ್ತು ಚರ್ಚೆಯಾಗುತ್ತಿವೆ. ವ್ಯವಸ್ಥೆಯು ವಾರಂಟ್-ಬಂಧನಗಳಂತಹ ತನ್ನೆಲ್ಲ ಅಹಂಕಾರ ಧೋರಣೆಯನ್ನು ಬಿಟ್ಟು ಸಾಮಾಜಿಕ ಚರ್ಚೆಗೆ ಅವಕಾಶ ಮಾಡಿಕೊಡುವುದು ಇಲ್ಲಿ ಅನಿವಾರ್ಯ.

***

ನವೀನ್ ಪ್ರತಿನಿಧಿಸುವ ಪತ್ರಿಕಾ ಸ್ಯತ್ರಂತ್ರ್ಯವನ್ನು ರಕ್ಷಿಸುವಲ್ಲಿ ಸಮಾಜದ ಜವಾಬ್ದಾರಿಯೂ ಇದೆ. ಆದರೆ ನಮ್ಮ ಸಮಾಜ ಇಲ್ಲೇ ಎಡವಿದೆ. ಬಂಧನದ ವಿರುದ್ದ ನಡೆಯಬೇಕಾಗಿದ್ದ ಹೋರಾಟ ಪ್ರತಿಭಟನೆಗಳು ಆರಂಭಗಳ ದಿನಗಳಿಗಷ್ಟೇ ಮೀಸಲಾದವು. ಇಂತಹ ಆರಂಭಶೂರತ್ವದ ವ್ಯಾಧಿಯು ಪತ್ರಕರ್ತರ ವಲಯಕ್ಕೂ ವ್ಯಾಪಿಸಿದೆ. ಕನ್ನಡದಲ್ಲಿ ದೊಡ್ಡ ಸಂಖ್ಯೆಯ ಪತ್ರಿಕೆಗಳೂ, ಚಾನೆಲ್‌ಗಳೂ ಇದ್ದಾಗ್ಯೂ ಒಬ್ಬ ಪತ್ರಕರ್ತನನ್ನೂ, ಆತನ ಸ್ವಾತಂತ್ರ್ಯವನ್ನೂ ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ಅವರ ನಿರ್ವೀರ್ಯತೆಗೆ ಸಾಕ್ಷಿಯಾಗಿದೆ.

ಸಾಮಾಜಿಕ ಕ್ರಿಯಾಶಿಲತೆಗೆ ಸಾಕ್ಷಿಪ್ರಜ್ಞೆಯಾಗಿರುವ ಸಾಹಿತ್ಯ ಹಾಗೂ ಬೌದ್ದಿಕ ವಲಯವೂ ಕೂಡಾ ನವೀನ್ ವಿಚಾರದಲ್ಲಿ ಮೌನಕ್ಕೆ ಶರಣಾಗಿ ಕುಳಿತಿದೆ. ಸಾಹಿತ್ಯಿಕ ಕೂಡುಗೆಗಳನ್ನೆಲ್ಲ ಬಿಟ್ಟು ನೋಡಿದಲ್ಲಿ ಒಬ್ಬ ಪುಂಡು ಕೋಮುವಾದಿಯಂತೆ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಡಾ| ಚಿದಾನಂದ ಮೂರ್ತಿಯವರಿಗೆ ಡಾಕ್ಟರೇಟ್ ಪದವಿಯನ್ನು ನೀಡಲು ರಾಜ್ಯಪಾಲರು ನಿರಾಕರಿಸಿದಾಗ ಅದನ್ನು ಪ್ರತಿಭಟಿಸುವ ಸಲುವಾಗಿಯೇ ಅನಂತಮೂರ್ತಿಯವರು ದೈಹಿಕ ಅನಾರೋಗ್ಯದ ನಡುವೆಯೂ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಮಾವೇಶದಲ್ಲಿ ಭಾಗವಹಿಸಿದ್ದರು. ಮತ್ತು ರಾಜ್ಯಪಾಲರ ನಿಲುವನ್ನು ಕಠಿಣ ಮಾತುಗಳಿಂದ ಖಂಡಿಸಿದ್ದರು. ಆದರೆ ಅವರೂ ಸೇರಿದಂತೆ ಕನ್ನಡದ ಹಲವು ಸಾಹಿತ್ಯ ಪ್ರತಿಭೆಗಳು ನವೀನ್ ಬಂಧನದ ಕೆಲವೇ ದಿನಗಳಲ್ಲಿ ಮೂಡಬಿದಿರೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದರು. ಅದೇ ಸಮಯದಲ್ಲಿ ಅಲ್ಲೇ ಮಂಗಳೂರಿನ ಜೈಲಿನಲ್ಲಿ ಕೊಳೆಯುತ್ತಿದ್ದ ಸಾಮಾಜಿಕ ಕಳಕಳಿಯ ಪತ್ರಕರ್ತ ನವೀನ್ ಸೂರಿಂಜೆಯ ಬಂಧನವನ್ನು ಖಂಡಿಸಿ ಪ್ರತಿಭಟಿಸಿ ಮಾತನಾಡುವಂತಹ ದೊಡ್ಡಮನಸ್ಸನ್ನು ಕನ್ನಡದ ಯಾವ ಜ್ಞಾನಪೀಠವೂ ತೋರಲಿಲ್ಲ ಎಂಬುವುದು ನಮ್ಮ ಸಾಮಾಜಿಕ ಸಂಧರ್ಭದ ನಿರೀಕ್ಷತ ದುರ್ದೈವವಾಗಿದೆ! ಮೌಲಿಕ ಸಾಹಿತ್ಯದ ದೌರ್ಬಲ್ಯವೇ ಇದು. ಒಂದೋ ಅದು ವ್ಯವಸ್ಥೆಯ ಪಾದಸೇವೆ ಮಾಡುತ್ತಿರುತ್ತದೆ ಇಲ್ಲವೇ ಗಾಂಧಾರಿ ಸಿಂಡ್ರೋಮ್‌ನಿಂದ ಬಳಲುತ್ತಿರುತ್ತದೆ. ಅನಂತಮೂರ್ತಿಯವರು ತಮ್ಮ ನುಡಿಸಿರಿ ಭಾಷಣದಲ್ಲಿ ಇತ್ತೀಚಿಗೆ ತಾವು ದಕ್ಷಿಣ ಕನ್ನಡದವರೇ ಆದ ಸೇಡಿಯಾಪು ಕೃಷ್ಣಭಟ್ಟರ ಕೃತಿಗಳು ಓದುತ್ತಿದ್ದೇನೆ ಎಂದು ಹೇಳಿದ್ದಾರೆ. ಬಹುಶಃ ಅವರು ಅದೇ ದಿನಗಳಲ್ಲಿ ದಕ್ಷಿಣ ಕನ್ನಡದ ವಾರ್ತೆಗಳನ್ನು ಕೇಳಬೇಕಿತ್ತೋ ಏನೋ.

ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಲು ನವೀನ್ ಯಾವ ಕಾರ್ಪೊರೇಟ್ ಪತ್ರಕರ್ತನೂ ಅಲ್ಲ; ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ಸೇರಲು ಠಾಕ್ರೆಯಂತಹ ರುದ್ರ ಭಯಂಕರನೂ ಅಲ್ಲ. ಒರ್ವ ಬಡಪಾಯಿ ಪತ್ರಕರ್ತನಷ್ಟೇ. ದೌರ್ಜನ್ಯದ ವ್ಯವಸ್ಥೆಯೊಂದರ ರೌರವ ಕ್ರೌರ್ಯಕ್ಕೆ ಕನ್ನಡಿ ಹಿಡಿದದ್ದಷ್ಟೇ ಅವರ ಅಪರಾದ. ಚಕ್ಕಳ ಹಾಕಿಸಿ ಮುಂದೆ ಕೂರಿಸಿಕೊಂಡು ತನ್ನನ್ನು ಧಿಕ್ಕರಿಸುವ ವ್ಯಕ್ತಿ ಹಾಗೂ ಸಂಘಟನೆಗಳನ್ನು ಹದಮಾಡುವ ಕಲೆ ವ್ಯವಸ್ಥೆಗೆ ಯಾವತ್ತೋ ಸಿದ್ದಿಸಿದೆ. ಅಂತಹ ಅಪಾಯಕ್ಕೆ ನವೀನ್ ಸಿಲುಕದಂತೆ ನೋಡಿಕೊಳ್ಳುವುದು ಕ್ರಿಯಾಶೀಲ ಸಮಾಜದ ಕರ್ತವ್ಯವಾಗಿದೆ.

ತಲೆ ಮರೆಸಿಕೊಂಡಿದ್ದರಿಂದ ಜಾಮೀನು ಇಲ್ಲ. ಇದು ಎಷ್ಟು ನಿಜ?

– ರವಿ ಕೃಷ್ಣಾರೆಡ್ಡಿ

ಈ ಕೋರ್ಟ್‌ಗಳ ತೀರ್ಪಿನ ಪರ-ವಿರುದ್ಧ ಎಷ್ಟು ಮಾತನಾಡಬೇಕು ಎಂದು ತಿಳಿಯುತ್ತಿಲ್ಲ. ನ್ಯಾಯಾಲಯಗಳೇ ಹಸಿ ಸುಳ್ಳುಗಳನ್ನು ಹೇಳಿಬಿಟ್ಟರೆ ಅಥವ ಪುರಸ್ಕರಿಸಿಬಿಟ್ಟರೆ ಏನು ಮಾಡುವುದು?

ಮಂಗಳವಾರದಂದು  (27/11/12) ಕೊಟ್ಟ ತೀರ್ಪಿನಲ್ಲಿ ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ನವೀನ್ ಸೂರಿಂಜೆಯವರ ಜಾಮೀನು ಮನವಿಯನ್ನು ನಿರಾಕರಿಸಿದ್ದರು. ಅವರು ಕೊಟ್ಟ ಕಾರಣ, ’ಸೆಪ್ಟೆಂಬರ್ 25 ರಂದು ಪೋಲಿಸರು ಚಾರ್ಜ್‌ಷೀಟ್ ಹಾಕಿದಂದಿನಿಂದ ತಲೆಮರೆಸಿಕೊಂಡಿದ್ದರು’ ಎನ್ನುವುದು? (ಇದರ ಬಗ್ಗೆ’ ’ದಿ ಹಿಂದು’ ಪತ್ರಿಕೆ ಮಾತ್ರ ಮುಖಪುಟದಲ್ಲಿ ವರದಿ ಮಾಡಿತ್ತು.)

ಹರ ಕೊಲ್ಲಲ್ ಪರ ಕಾಯ್ವನೇ?

ಇಂದಿನ ’ದಿ ಹಿಂದು’ ಪತ್ರಿಕೆಯಲ್ಲಿ ಈ ತೀರ್ಪಿನ ಬಗ್ಗೆ ಮತ್ತೊಂದು ವರದಿ ಇದೆ.  ನೆನ್ನೆ ಮಂಗಳೂರಿನ ಜೈಲಿನಲ್ಲಿ ನವೀನ್ ಸೂರಿಂಜೆಯವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರ ಜೊತೆ ಮಾತನಾಡಿದ ರಾಜ್ಯ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಎಮ್.ಎಫ್. ಸಲ್ದಾನಾರವರು ನವೀನ್ ಸೂರಿಂಜೆ ಜಾಮೀನು ವಿಚಾರದಲ್ಲಿ ಅಲ್ಲಿಯ ಎರಡೂ ಅಧೀನ ನ್ಯಾಯಾಲಯಗಳು ತಪ್ಪೆಸಗಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪೋಲಿಸರ ಕೃತ್ಯಕ್ಕೆ ನ್ಯಾಯಾಲಯ ಮೊಹರು ಒತ್ತುವುದು ಕೆಟ್ಟದ್ದು ಎಂದಿರುವ ಅವರು ಘಟನೆಗೆ ಸಂಬಂಧಪಟ್ಟ ವಾಸ್ತವಾಂಶಗಳ ಬಗ್ಗೆ ಗಮನ ಹರಿಸದೆ (without applying their mind to the facts of the case) ನ್ಯಾಯಾಧೀಶರುಗಳು ಪೋಲಿಸರ ಹೇಳಿಕೆಗಳನ್ನಷ್ಟೆ ಅವಲಂಬಿಸಿ ತೀರ್ಪು ನೀಡಿದ್ದಾರೆ ಎಂದು ಕಟುವಾಗಿ ವಿಮರ್ಶಿಸಿದ್ದಾರೆ.

ಇನ್ನು ಜಿಲ್ಲಾ ನ್ಯಾಯಾಲಯ ಅಭಿಪ್ರಾಯಪಟ್ಟಂತಹ “ತಲೆಮರೆಸಿಕೊಂಡ/ತಪ್ಪಿಸಿಕೊಂಡು ಓಡಾಡುತ್ತಿದ್ದ” ವಿಷಯ. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯುತ್ತಿಲ್ಲ? ನೆನ್ನೆಯಿಂದ ನನ್ನನ್ನು ತೀವ್ರವಾಗಿ ಕಾಡಿದ, ಬಾಧಿಸಿದ, ಆಕ್ರೋಶ ಮೂಡಿಸಿದ ಹೇಳಿಕೆ ಇದು. ನನಗೆ ಮೊದಲಿನಿಂದಲೂ ಗೊತ್ತಿರುವ ಹಾಗೆ ನವೀನ್ ಎಲ್ಲೂ ತಲೆತಪ್ಪಿಸಿಕೊಂಡಿರಲಿಲ್ಲ. ಅವರ ಪಾಡಿಗೆ ಅವರು ಮಂಗಳೂರು ನಗರ ಮತ್ತು ಜಿಲ್ಲೆಯಲ್ಲಿ ತಮ್ಮ ಕೆಲಸದಲ್ಲಿ ದಿನನಿತ್ಯ  ತೊಡಗಿಸಿಕೊಂಡಿದ್ದರು. ಅನೇಕ ಸರ್ಕಾರಿ ಕಾರ್ಯಕ್ರಮಗಳನ್ನು ಖುದ್ಡಾಗಿ ವರದಿ ಮಾಡಿದ್ದರು. ನನಗೆ ಗೊತ್ತಿದ್ದಂತೆ ಮಂಗಳೂರಿನ ಪೋಲಿಸ್ ಕಮೀಷನರ್‌ರ ಸುದ್ಧಿಗೋಷ್ಠಿಗೂ ಹೋಗಿ ಮುಂದಿನ ಸಾಲುಗಳಲ್ಲಿ ಕುಳಿತು ಬಂದು ವರದಿ ಮಾಡಿದ್ದರು. ಎಲ್ಲಿಯೂ ತಪ್ಪಿಸಿಕೊಂಡಿರಲಿಲ್ಲ ಮತ್ತು ಬಂಧಿಸಬೇಕಾದ ಪೋಲಿಸರೇ ಅವರು ಎದುರಿದ್ದಾಗಲೂ  ಬಂಧಿಸಿರಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದ್ದ ಸತ್ಯ. ಈ ವಿಚಾರದಲ್ಲಿ ಯಾರದಾದರೂ ತಪ್ಪಿದ್ದರೆ ಅದು ಪೋಲಿಸರದೇ ಹೊರತು ನವೀನರದಂತೂ ಅಲ್ಲವೇ ಅಲ್ಲ. ತಲೆಮರೆಸಿಕೊಂಡಿದ್ದ ಎಂದು ಯಾರಾದರೂ ಅದು ಹೇಗೆ ವಾದಿಸಿದರು ಮತ್ತು ಅದನ್ನು ನ್ಯಾಯಾಲಯ ಹೇಗೆ ಪುರಸ್ಕರಿಸಿತು ಎನ್ನುವುದು ರಾಜ್ಯದ  ನ್ಯಾಯಾಂಗ ವಲಯದಲ್ಲಿ ಚರ್ಚೆಯಾಗಬೇಕಾದ ವಿಷಯ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬದುಕಬೇಕು ಎಂದಾದರೆ ನಮ್ಮ ನ್ಯಾಯಾಂಗ ಪ್ರಾಮಾಣಿಕವಾಗಿರಬೇಕು, ನಿಷ್ಪಕ್ಷಪಾತವಿರಬೇಕು, ಮತ್ತು ನ್ಯಾಯಪರವಿರಲೇಬೇಕು. ಇವತ್ತು ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ, ಅನಾಚಾರ, ದುರಾಡಳಿತ, ಅಪ್ರಾಮಾಣಿಕತೆ ತುಂಬಿರುವುದಕ್ಕೆ ನಮ್ಮ ನ್ಯಾಯಾಂಗ ವ್ಯವಸ್ಥೆಯೂ ಒಂದು ಕಾರಣ ಮತ್ತು ಅದರಲ್ಲಿ ಅದೂ ಭಾಗಿ ಎನ್ನುವುದು ಸಮಾಜವನ್ನು ಅವಲೋಕಿಸುವವರಿಗೆ ಎಂದೋ ಮನದಟ್ಟಾಗಿದೆ.

ಮತ್ತೆ ಇನ್ನೊಂದು ವಿಷಯ. ಸೋನಿಯಾ ಗಾಂಧಿ ಅಕ್ಟೋಬರ್ 18 ರಂದು ಮಂಗಳೂರಿಗೆ ಭೇಟಿ ನೀಡಿ ಅಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದರು. ಅದೇ ಸಭೆಗೆ ವರದಿಗಾರಿಕೆಗೆಂದು ನವೀನ್ ಸೂರಿಂಜೆ ಸಹ ಹೋಗಿದ್ದರು. ಮತ್ತು ಅವರಿಗೆ ಆ ಸಭೆಯ ವರದಿಗಾರಿಕೆ ಮಾಡಲು ಪೋಲಿಸ್ ಪಾಸ್ ಬೇಕು. ನವೀನರಿಗೆ ಅದನ್ನು ಕೊಡಲಾಗಿತ್ತು. ಕೊಟ್ಟಿದ್ದದ್ದು ಮಂಗಳೂರಿನ ಪೋಲಿಸ್ ಕಮೀಷನರ್ ಕಚೇರಿ. ಈ ಹಿನ್ನೆಲೆಯಲ್ಲಿ, ನವೀನ್ ಎಲ್ಲಿ ಯಾವಾಗ ತಲೆಮರೆಸಿಕೊಂಡಿದ್ದರು ಅನ್ನುವುದನ್ನು ಅಲ್ಲಿಯ ಪೋಲಿಸರು ಹೇಳಬೇಕು. ಈ ವಿಷಯದಲ್ಲಿ ಪೋಲಿಸರು ನ್ಯಾಯಾಲಯದ ದಿಕ್ಕುತಪ್ಪಿಸಿರುವುದು ಸ್ಪಷ್ಟವಾಗಿದೆ. ಆದರೆ ನ್ಯಾಯಾಲಯ ತಾನೆ ಯಾಕೆ ದಿಕ್ಕುತಪ್ಪಬೇಕು? ಅದಕ್ಕೇ ಸಾಲ್ಡಾನಾ ಹೇಳಿರುವುದು: “The courts had gone by what was placed before them by the police, without applying their mind to the facts of the case. It is wrong to rubber stamp police action.”

ನವೀನ್ ಅಮಾಯಕರೂ ಅಲ್ಲ, ಸಮಾಜಕ್ಕೆ ಅಪರಿಚಿತರೂ ಅಲ್ಲ. ಈ ಕೇಸಿಗೆ ಸಂಬಂಧಪಟ್ಟಂತೆ ಒಂದು ಮಟ್ಟದಲ್ಲಾದರೂ ಜನರಿಗೆ ವಿಷಯ ಗೊತ್ತಾಗುತ್ತಿದೆ ಮತ್ತು ನವೀನರ ಬೆಂಬಲಕ್ಕೆ ಒಂದಷ್ಟು ಜನರಾದರೂ ಇದ್ದಾರೆ. ಮತ್ತು ನನ್ನಂತೆ, ನಿಮ್ಮಂತೆ ನೈತಿಕ ಬೆಂಬಲ ನೀಡುವ ನೂರಾರು ಜನರೂ  ಇದ್ದಾರೆ. ಅದರೂ ಅವರಿಗೆ ಹೀಗೆ ಆಗುತ್ತಿದೆ.  ನನ್ನ ಆತಂಕ ಅದಲ್ಲ. ನವೀನರಿಗೆ ಇರುವ ಬೆಂಬಲ ಮತ್ತು ಪರಿಚಿತತೆ ಇಲ್ಲದ ನಿರಪರಾಧಿ ಜನಸಾಮಾನ್ಯನೊಬ್ಬ ಇಂತಹ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡರೆ ಈ ವ್ಯವಸ್ಥೆ ಮತ್ತು ನ್ಯಾಯಾಲಯಗಳಿಂದ ಯಾವ ಪರಿ ಅನ್ಯಾಯಕ್ಕೆ ಒಳಗಾಗಬಹುದು ಎಂಬ ಆಲೋಚನೆಯೇ ನನ್ನನ್ನು ಬೆಚ್ಚಿಬೀಳಿಸುತ್ತಿದೆ.