ತಲೆ ಮರೆಸಿಕೊಂಡಿದ್ದರಿಂದ ಜಾಮೀನು ಇಲ್ಲ. ಇದು ಎಷ್ಟು ನಿಜ?

– ರವಿ ಕೃಷ್ಣಾರೆಡ್ಡಿ

ಈ ಕೋರ್ಟ್‌ಗಳ ತೀರ್ಪಿನ ಪರ-ವಿರುದ್ಧ ಎಷ್ಟು ಮಾತನಾಡಬೇಕು ಎಂದು ತಿಳಿಯುತ್ತಿಲ್ಲ. ನ್ಯಾಯಾಲಯಗಳೇ ಹಸಿ ಸುಳ್ಳುಗಳನ್ನು ಹೇಳಿಬಿಟ್ಟರೆ ಅಥವ ಪುರಸ್ಕರಿಸಿಬಿಟ್ಟರೆ ಏನು ಮಾಡುವುದು?

ಮಂಗಳವಾರದಂದು  (27/11/12) ಕೊಟ್ಟ ತೀರ್ಪಿನಲ್ಲಿ ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ನವೀನ್ ಸೂರಿಂಜೆಯವರ ಜಾಮೀನು ಮನವಿಯನ್ನು ನಿರಾಕರಿಸಿದ್ದರು. ಅವರು ಕೊಟ್ಟ ಕಾರಣ, ’ಸೆಪ್ಟೆಂಬರ್ 25 ರಂದು ಪೋಲಿಸರು ಚಾರ್ಜ್‌ಷೀಟ್ ಹಾಕಿದಂದಿನಿಂದ ತಲೆಮರೆಸಿಕೊಂಡಿದ್ದರು’ ಎನ್ನುವುದು? (ಇದರ ಬಗ್ಗೆ’ ’ದಿ ಹಿಂದು’ ಪತ್ರಿಕೆ ಮಾತ್ರ ಮುಖಪುಟದಲ್ಲಿ ವರದಿ ಮಾಡಿತ್ತು.)

ಹರ ಕೊಲ್ಲಲ್ ಪರ ಕಾಯ್ವನೇ?

ಇಂದಿನ ’ದಿ ಹಿಂದು’ ಪತ್ರಿಕೆಯಲ್ಲಿ ಈ ತೀರ್ಪಿನ ಬಗ್ಗೆ ಮತ್ತೊಂದು ವರದಿ ಇದೆ.  ನೆನ್ನೆ ಮಂಗಳೂರಿನ ಜೈಲಿನಲ್ಲಿ ನವೀನ್ ಸೂರಿಂಜೆಯವರನ್ನು ಭೇಟಿ ಮಾಡಿದ ನಂತರ ಪತ್ರಕರ್ತರ ಜೊತೆ ಮಾತನಾಡಿದ ರಾಜ್ಯ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಎಮ್.ಎಫ್. ಸಲ್ದಾನಾರವರು ನವೀನ್ ಸೂರಿಂಜೆ ಜಾಮೀನು ವಿಚಾರದಲ್ಲಿ ಅಲ್ಲಿಯ ಎರಡೂ ಅಧೀನ ನ್ಯಾಯಾಲಯಗಳು ತಪ್ಪೆಸಗಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಪೋಲಿಸರ ಕೃತ್ಯಕ್ಕೆ ನ್ಯಾಯಾಲಯ ಮೊಹರು ಒತ್ತುವುದು ಕೆಟ್ಟದ್ದು ಎಂದಿರುವ ಅವರು ಘಟನೆಗೆ ಸಂಬಂಧಪಟ್ಟ ವಾಸ್ತವಾಂಶಗಳ ಬಗ್ಗೆ ಗಮನ ಹರಿಸದೆ (without applying their mind to the facts of the case) ನ್ಯಾಯಾಧೀಶರುಗಳು ಪೋಲಿಸರ ಹೇಳಿಕೆಗಳನ್ನಷ್ಟೆ ಅವಲಂಬಿಸಿ ತೀರ್ಪು ನೀಡಿದ್ದಾರೆ ಎಂದು ಕಟುವಾಗಿ ವಿಮರ್ಶಿಸಿದ್ದಾರೆ.

ಇನ್ನು ಜಿಲ್ಲಾ ನ್ಯಾಯಾಲಯ ಅಭಿಪ್ರಾಯಪಟ್ಟಂತಹ “ತಲೆಮರೆಸಿಕೊಂಡ/ತಪ್ಪಿಸಿಕೊಂಡು ಓಡಾಡುತ್ತಿದ್ದ” ವಿಷಯ. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯುತ್ತಿಲ್ಲ? ನೆನ್ನೆಯಿಂದ ನನ್ನನ್ನು ತೀವ್ರವಾಗಿ ಕಾಡಿದ, ಬಾಧಿಸಿದ, ಆಕ್ರೋಶ ಮೂಡಿಸಿದ ಹೇಳಿಕೆ ಇದು. ನನಗೆ ಮೊದಲಿನಿಂದಲೂ ಗೊತ್ತಿರುವ ಹಾಗೆ ನವೀನ್ ಎಲ್ಲೂ ತಲೆತಪ್ಪಿಸಿಕೊಂಡಿರಲಿಲ್ಲ. ಅವರ ಪಾಡಿಗೆ ಅವರು ಮಂಗಳೂರು ನಗರ ಮತ್ತು ಜಿಲ್ಲೆಯಲ್ಲಿ ತಮ್ಮ ಕೆಲಸದಲ್ಲಿ ದಿನನಿತ್ಯ  ತೊಡಗಿಸಿಕೊಂಡಿದ್ದರು. ಅನೇಕ ಸರ್ಕಾರಿ ಕಾರ್ಯಕ್ರಮಗಳನ್ನು ಖುದ್ಡಾಗಿ ವರದಿ ಮಾಡಿದ್ದರು. ನನಗೆ ಗೊತ್ತಿದ್ದಂತೆ ಮಂಗಳೂರಿನ ಪೋಲಿಸ್ ಕಮೀಷನರ್‌ರ ಸುದ್ಧಿಗೋಷ್ಠಿಗೂ ಹೋಗಿ ಮುಂದಿನ ಸಾಲುಗಳಲ್ಲಿ ಕುಳಿತು ಬಂದು ವರದಿ ಮಾಡಿದ್ದರು. ಎಲ್ಲಿಯೂ ತಪ್ಪಿಸಿಕೊಂಡಿರಲಿಲ್ಲ ಮತ್ತು ಬಂಧಿಸಬೇಕಾದ ಪೋಲಿಸರೇ ಅವರು ಎದುರಿದ್ದಾಗಲೂ  ಬಂಧಿಸಿರಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದ್ದ ಸತ್ಯ. ಈ ವಿಚಾರದಲ್ಲಿ ಯಾರದಾದರೂ ತಪ್ಪಿದ್ದರೆ ಅದು ಪೋಲಿಸರದೇ ಹೊರತು ನವೀನರದಂತೂ ಅಲ್ಲವೇ ಅಲ್ಲ. ತಲೆಮರೆಸಿಕೊಂಡಿದ್ದ ಎಂದು ಯಾರಾದರೂ ಅದು ಹೇಗೆ ವಾದಿಸಿದರು ಮತ್ತು ಅದನ್ನು ನ್ಯಾಯಾಲಯ ಹೇಗೆ ಪುರಸ್ಕರಿಸಿತು ಎನ್ನುವುದು ರಾಜ್ಯದ  ನ್ಯಾಯಾಂಗ ವಲಯದಲ್ಲಿ ಚರ್ಚೆಯಾಗಬೇಕಾದ ವಿಷಯ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬದುಕಬೇಕು ಎಂದಾದರೆ ನಮ್ಮ ನ್ಯಾಯಾಂಗ ಪ್ರಾಮಾಣಿಕವಾಗಿರಬೇಕು, ನಿಷ್ಪಕ್ಷಪಾತವಿರಬೇಕು, ಮತ್ತು ನ್ಯಾಯಪರವಿರಲೇಬೇಕು. ಇವತ್ತು ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ, ಅನಾಚಾರ, ದುರಾಡಳಿತ, ಅಪ್ರಾಮಾಣಿಕತೆ ತುಂಬಿರುವುದಕ್ಕೆ ನಮ್ಮ ನ್ಯಾಯಾಂಗ ವ್ಯವಸ್ಥೆಯೂ ಒಂದು ಕಾರಣ ಮತ್ತು ಅದರಲ್ಲಿ ಅದೂ ಭಾಗಿ ಎನ್ನುವುದು ಸಮಾಜವನ್ನು ಅವಲೋಕಿಸುವವರಿಗೆ ಎಂದೋ ಮನದಟ್ಟಾಗಿದೆ.

ಮತ್ತೆ ಇನ್ನೊಂದು ವಿಷಯ. ಸೋನಿಯಾ ಗಾಂಧಿ ಅಕ್ಟೋಬರ್ 18 ರಂದು ಮಂಗಳೂರಿಗೆ ಭೇಟಿ ನೀಡಿ ಅಲ್ಲಿ ಬಹಿರಂಗ ಸಭೆಯಲ್ಲಿ ಪಾಲ್ಗೊಂಡಿದ್ದರು. ಅದೇ ಸಭೆಗೆ ವರದಿಗಾರಿಕೆಗೆಂದು ನವೀನ್ ಸೂರಿಂಜೆ ಸಹ ಹೋಗಿದ್ದರು. ಮತ್ತು ಅವರಿಗೆ ಆ ಸಭೆಯ ವರದಿಗಾರಿಕೆ ಮಾಡಲು ಪೋಲಿಸ್ ಪಾಸ್ ಬೇಕು. ನವೀನರಿಗೆ ಅದನ್ನು ಕೊಡಲಾಗಿತ್ತು. ಕೊಟ್ಟಿದ್ದದ್ದು ಮಂಗಳೂರಿನ ಪೋಲಿಸ್ ಕಮೀಷನರ್ ಕಚೇರಿ. ಈ ಹಿನ್ನೆಲೆಯಲ್ಲಿ, ನವೀನ್ ಎಲ್ಲಿ ಯಾವಾಗ ತಲೆಮರೆಸಿಕೊಂಡಿದ್ದರು ಅನ್ನುವುದನ್ನು ಅಲ್ಲಿಯ ಪೋಲಿಸರು ಹೇಳಬೇಕು. ಈ ವಿಷಯದಲ್ಲಿ ಪೋಲಿಸರು ನ್ಯಾಯಾಲಯದ ದಿಕ್ಕುತಪ್ಪಿಸಿರುವುದು ಸ್ಪಷ್ಟವಾಗಿದೆ. ಆದರೆ ನ್ಯಾಯಾಲಯ ತಾನೆ ಯಾಕೆ ದಿಕ್ಕುತಪ್ಪಬೇಕು? ಅದಕ್ಕೇ ಸಾಲ್ಡಾನಾ ಹೇಳಿರುವುದು: “The courts had gone by what was placed before them by the police, without applying their mind to the facts of the case. It is wrong to rubber stamp police action.”

ನವೀನ್ ಅಮಾಯಕರೂ ಅಲ್ಲ, ಸಮಾಜಕ್ಕೆ ಅಪರಿಚಿತರೂ ಅಲ್ಲ. ಈ ಕೇಸಿಗೆ ಸಂಬಂಧಪಟ್ಟಂತೆ ಒಂದು ಮಟ್ಟದಲ್ಲಾದರೂ ಜನರಿಗೆ ವಿಷಯ ಗೊತ್ತಾಗುತ್ತಿದೆ ಮತ್ತು ನವೀನರ ಬೆಂಬಲಕ್ಕೆ ಒಂದಷ್ಟು ಜನರಾದರೂ ಇದ್ದಾರೆ. ಮತ್ತು ನನ್ನಂತೆ, ನಿಮ್ಮಂತೆ ನೈತಿಕ ಬೆಂಬಲ ನೀಡುವ ನೂರಾರು ಜನರೂ  ಇದ್ದಾರೆ. ಅದರೂ ಅವರಿಗೆ ಹೀಗೆ ಆಗುತ್ತಿದೆ.  ನನ್ನ ಆತಂಕ ಅದಲ್ಲ. ನವೀನರಿಗೆ ಇರುವ ಬೆಂಬಲ ಮತ್ತು ಪರಿಚಿತತೆ ಇಲ್ಲದ ನಿರಪರಾಧಿ ಜನಸಾಮಾನ್ಯನೊಬ್ಬ ಇಂತಹ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡರೆ ಈ ವ್ಯವಸ್ಥೆ ಮತ್ತು ನ್ಯಾಯಾಲಯಗಳಿಂದ ಯಾವ ಪರಿ ಅನ್ಯಾಯಕ್ಕೆ ಒಳಗಾಗಬಹುದು ಎಂಬ ಆಲೋಚನೆಯೇ ನನ್ನನ್ನು ಬೆಚ್ಚಿಬೀಳಿಸುತ್ತಿದೆ.

5 thoughts on “ತಲೆ ಮರೆಸಿಕೊಂಡಿದ್ದರಿಂದ ಜಾಮೀನು ಇಲ್ಲ. ಇದು ಎಷ್ಟು ನಿಜ?

  1. anand prasad

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನ್ಯಾಯಾಂಗ ಕೂಡ ಮೂಲಭೂತವಾದಿಗಳ ಒತ್ತಡಕ್ಕೆ ಒಳಗಾಗಿರುವುದು ಕಂಡುಬರುತ್ತದೆ. ಹೀಗಾಗಿ ಇಂಥ ಅಸಂಬದ್ದ ತೀರ್ಪುಗಳು ಬರುತ್ತಿವೆ. ನವೀನರ ಬಂಧನ ಕುರಿತು Tehelka.com ಹಾಗೂ ಖ್ಯಾತ ಪತ್ರಕರ್ತ ಪಿ. ಸಾಯಿನಾಥರ Indigatogether.org ನಲ್ಲಿ ಬಂದ ಲೇಖನಗಳು ಹಾಗೂ ನವೀನರಿಗೆ ಜಾಮೀನು ನಿರಾಕರಿಸಿದ ಬಗ್ಗೆ ಜಸ್ಟಿಸ್ ಸಾಲ್ದಾನ ಅವರ ಟೀಕೆ ಕುರಿತ daijiworld.com ನಲ್ಲಿ ಬಂದ ವರದಿಗಳನ್ನು ನಾನು ಕೇಂದ್ರ ಸರ್ಕಾರದ ಗೃಹ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮಾರ್ಕಂಡೇಯ ಕಟ್ಜು ಅವರಿಗೆ ಹಾಗೂ ಬಿಜೆಪಿಯಾ ಎಲ್ ಕೆ ಅಡ್ವಾಣಿ ಅವರಿಗೆ ಕಳುಹಿಸಿದ್ದೇನೆ. ನವೀನರ ಬಂಧನ ಕುರಿತು Tehelka.com, ಖ್ಯಾತ ಪತ್ರಕರ್ತ ಸಾಯಿನಾಥರ Indigatogether.org ನಲ್ಲಿ ಬಂದ ಲೇಖನಗಳನ್ನು ಮಿಂಚಂಚೆ ಮೂಲಕ ಜೀ ನ್ಯೂಸ್, ಎನ್ಡಿಟಿವಿ, ಸಹಾರ ಸಮಯ್, ಪಿ-7 ನ್ಯೂಸ್, ಸಿಎನ್ನೆನ್ ಐಬಿಎನ್ ಹಿಂದಿ ಹಾಗೂ ಇಂಗ್ಲಿಷ್ ನ್ಯೂಸ್ ವಾಹಿನಿಗಳಿಗೆ ಕಳುಹಿಸಿ ಇಂಥ ಅನೈತಿಕ ಹಾಗೂ ಸಂವಿಧಾನಬಾಹಿರ, ಕಾನೂನುಬಾಹಿರ ಬಂಧನದ ಬಗ್ಗೆ ಜನಜಾಗೃತಿ ಮೂಡಿಸುವಂತೆ ಆಗ್ರಹಿಸಿದ್ದೇನೆ. ಯಾವುದಾದರೂ ವಾಹಿನಿಗೆ ನ್ಯಾಯದ ಪರ ನಿಲ್ಲಬೇಕೆಂಬ ತುಡಿತ ಹಾಗೂ ಮನುಷ್ಯತ್ವ ಇದೆಯೋ ಎಂದು ನೋಡೋಣ.

    Reply
  2. anand prasad

    ಮಂಗಳೂರಿನ ನ್ಯಾಯಾಲಯ ಆರೋಪಿ ಪರ ವಕೀಲರ ವಾದ ಆಲಿಸದೇ ಪೋಲೀಸರ ವಾದ ಮಾತ್ರ ಆಲಿಸಿ ಏಕಪಕ್ಷೀಯ ತೀರ್ಪು ನೀಡಿದಂತೆ ಕಂಡುಬರುತ್ತದೆ. ಇಲ್ಲದೆ ಹೋದರೆ ಪೋಲೀಸರ ಮಾತನ್ನು ಮಾತ್ರ ನಂಬಿ ಆರೋಪಿ ತಲೆ ತಪ್ಪಿಸಿಕೊಂಡಿದ್ದಾನೆ ಹೀಗಾಗಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಲು ಸಾಧ್ಯವಿಲ್ಲ. ಇಂಥ ತೀರ್ಪುಗಳು ಹಿಂದೆ ಬ್ರಿಟಿಷರ ಆಳ್ವಿಕೆ ಇದ್ದಾಗ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಭಾರತೀಯರ ವಿರುದ್ಧ ಬರುತ್ತಿದ್ದವು. ನ್ಯಾಯ ವ್ಯವಸ್ಥೆ ಎಂಬುದು ಪಟ್ಟಭದ್ರ ಹಿತಾಸಕ್ತಿಗಳ ಕಡೆಗೆ ಇದ್ದರೆ ಇಂಥ ತೀರ್ಪು ಬರಲು ಸಾಧ್ಯ. ನ್ಯಾಯಾಲಯಗಳು ಈ ರೀತಿ ಕುರುಡಾಗಿ ವರ್ತಿಸಿದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗಲಿದೆ.

    Reply
  3. balu

    last three lines , really shocking , yes ,innocent caught with the system , how and when can he/she comes out !! thank you sir will hope , killers , thughs are freely walking in front of us , but …….sorry for the situation

    Reply
  4. Deepak

    ನಮ್ಮ ದೇಶದಲ್ಲಿ ಸುಧಾರಣೆ ಆಗುವುದಿದ್ದರೆ ಮೊದಲು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ನ್ಯಾಂಯಾಂಗದಲ್ಲಿ ಆಗಬೇಕು. ಆ ನಂತರ ಆಡಳಿತ ವರ್ಗ ನಂತರ ರಾಜಕೀಯದಲ್ಲಿ. ರಾಜಕಾರಣಿಗಳಿಗೆ ಕೊನೆಯ ಪಕ್ಷ ಮತದಾರರು ಬೇಸತ್ತು ಚುನಾವಣೆಯಲ್ಲಿ ಮನೆಗೆ ದಾರಿ ತೋರಬಹುದು, ಆದರೆ ಈ ನ್ಯಾಯಾಂಗವನ್ನು ಪ್ರಶ್ನಿಸುವವರು ಮತ್ತು ಎದುರಿಹಾಕಿಕೊಳ್ಳುವವರು ಯಾರೂ ಇಲ್ಲ – ಸಂಸತ್ತು ಕೂಡ ನ್ಯಾಯಾಂಗವನ್ನು ಪ್ರಶ್ನಿಸಲು ಹಿಂದೆ ಮುಂದೆ ನೋಡುತ್ತದೆ. ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಪ್ರಜಾಪ್ರಭುತ್ವದ ಎಲ್ಲಾ ಅಂಗಗಳನ್ನು ಮೀರಿಸುವಂತಿದೆ. ರೆಡ್ಡಿಧ್ವಯರ ಬೇಲ್ ಡೀಲ್‍ಗಿಂತ ಮತ್ತೊಂದು ಉದಾಹರಣೆ ನಮಗೆ ಬೇಕಾಗಿಲ್ಲ. ಸಾಮಾನ್ಯ ಮನುಷ್ಯನಿಗೆ ಇರುವ ಕೊನೆ ಆಸರೆ ನ್ಯಾಯಾಂಗ, ಅದೇ ವ್ಯವಸ್ಥೆಯೊಂದಿಗೆ ಕೈಜೋಡಿಸಿದರೆ, ಪ್ರಜಾಪ್ರಭುತ್ವಕ್ಕೆ ಮತ್ತೊಂದು ಶತ್ರು ಇನ್ನೊಂದಿಲ್ಲ. ಇದು ಅಪಾಯದ ಮಟ್ಟ ಮೀರುವ ಮುನ್ನ ಲಗಾಮು ಹಾಕುವುದು ಒಳಿತು.

    Reply
  5. anand prasad

    ನ್ಯಾಯಾಂಗ ಸುಧಾರಣೆ ಮಾಡುವ ಅಧಿಕಾರ ಸಂಸತ್ತಿಗೆ ಮಾತ್ರ ಸಂವಿಧಾನದ ಪ್ರಕಾರ ಇದೆ. ಇದನ್ನು ಮಾಡಬೇಕಾದರೆ ಪ್ರಜ್ಞಾವಂತ ಜನ ಮಾತ್ರ ಸಂಸತ್ತಿಗೆ ಹೋಗಬೇಕಾಗುತ್ತದೆ. ಅಂದರೆ ನ್ಯಾಯಾಂಗದ ರಿಪೇರಿ ಮಾಡುವ ಜವಾಬ್ದಾರಿ ಶಾಸಕಾಂಗದ ಮೇಲೆ ಇದೆ. ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಪ್ರಜ್ಞಾವಂತರು ಸಂಸತ್ತಿಗೆ ಹೋಗುವ ಸಾಧ್ಯತೆ ಬಹಳ ಕಡಿಮೆ ಇದೆ. ಹೊಸ ರಾಜಕೀಯ ವ್ಯವಸ್ಥೆ ಬರದ ಹೊರತು ನ್ಯಾಯಾಂಗ ಸುಧಾರಣೆಯಾಗಲಿ , ಕಾರ್ಯಾಂಗ ಸುಧಾರಣೆಯಾಗಲೀ, ಚುನಾವಣಾ ಸುಧಾರಣೆಯಾಗಲೀ ನಡೆಯುವ ಸಂಭವ ಕಂಡುಬರುತ್ತಿಲ್ಲ. ಮತದಾನ ಮಾಡುವ 67% ಮತದಾರರು ಜಾಗೃತರಾದಾಗ ಮಾತ್ರ ಇದು ಸಾಧ್ಯ

    Reply

Leave a Reply

Your email address will not be published. Required fields are marked *