Monthly Archives: November 2012

ದಿಕ್ಕೆಟ್ಟಿರುವ ಈ ಹೊತ್ತಿನಲ್ಲಿ ಜಗತ್ತಿನ ಅಂಕೆ ಹಿಡಿದವರ್‍ಯಾರು?

– ಮಹದೇವ ಹಡಪದ

ಚಳವಳಿಗಳು ಸತ್ತಿವೆಯೇ, ಮೊಟಕಾಗಿವೆಯೇ, ಸೊರಗಿವೆಯೇ, ಅಥವಾ ಇಂದಿನ ಈ ಕಾಲಗರ್ಭದಲ್ಲಿ ಎಲ್ಲ ರೀತಿಯಿಂದಲೂ ಅಸಮತೆಗಳಿದ್ದರೂ ಸಮಾನತೆ ಬಂದಿದೆ ಎಂದು ಭಾವಿಸಿಕೊಂಡು ಮನುಷ್ಯ ತೆಪ್ಪಗಾಗಿದ್ದಾನೆಯೇ? ಚಳವಳಿಗಳ ಸಾಂಘಿಕ ಶಕ್ತಿ, ಆಲೋಚನಾ ಕ್ರಮಗಳು ಬದಲಾಗಿವೆಯೇ? ಇರುವ ವ್ಯವಸ್ಥೆ ಹೇಗಿದೆಯೋ ಹಾಗೇ ಇರುವಾಗ ಜಗತ್ತು ಬದಲಾಗಿದೆ ಎಂಬ ಭ್ರಮೆ ಆಂತರಿಕ ಶತ್ರುವಾಗಿ ಪ್ರವೇಶ ಪಡೆದ ರೀತಿ ಯಾವ ಬಗೆಯದು? ಚಳವಳಿಗಳು ಸಮರ್ಥ ನಾಯಕತ್ವದ ಕೊರತೆಯಿಂದಾಗಿ ಹಿಮ್ಮುಖವಾದವೇನು? ಅಧಿಕಾರದ ದಾಹ ಸಾಮಾನ್ಯ ಕಾರ್‍ಯಕರ್ತನಲ್ಲೂ ಆಸೆಯ ಬೀಜ ಬಿತ್ತಿದವೋ?

ರಾಶಿ ಮಾಡುವ ರೈತ ಕಾಳುಗಳಲ್ಲಿನ ಕಸ-ಕಡ್ಡಿ ತೆಗೆಯಲು ಗಾಳಿಗೆ ರಾಶಿ ತೂರುತ್ತಾನೆ. ಆ ತೂರುವ ಕ್ರಿಯೆಗೆ ಒಂದೇ ದಿಕ್ಕಿಗೆ ಚಲಿಸುವ ಗಾಳಿ ಬರಬೇಕು. ಆಗ ಮಾತ್ರ ಹೊಟ್ಟು-ಕಾಳು ಬೇರೆ ಬೇರೆ ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ಆತ ದಿನಗಟ್ಟಲೇ ಗಂಟೆಗಟ್ಟಲೇ ಗಾಳಿಗೆದುರಾಗಿ ಕಾಯುತ್ತಾನೆ. ಸುತ್ತ ನಾಲ್ಕೂ ಕಡೆಗೆ ಬೀಸುವ ಹುಂಡಗಾಳಿಗೆ ಮೊರ ಹಿಡಿದು ತೂರಲು ಸಾಧ್ಯವಿಲ್ಲ ಹೇಗೋ ಹಾಗೇ… ಈ ಗೋಳೀಕರಣದ ವಿವಿಧ ಮಜಲಿನ ಮೈ-ಮಾಟಗಳಲ್ಲಿ ಹುಂಡಗಾಳಿಯ ಪರಿಣಾಮದಿಂದಾಗಿ ಸಾಮಾಜಿಕ ಸ್ವಾಸ್ತ್ಯ ಬಯಸುವ ಚಳವಳಿಗಳ ಅಸ್ತಿತ್ವವೂ ಗೊಂದಲಗೊಂಡಿದೆಯೇನೋ ಅನ್ನಿಸುತ್ತಿದೆ. ಚಳವಳಿಗಳ ಅಸ್ತಿತ್ವ ಒತ್ತಟ್ಟಿಗಿರಲಿ, ಅಧಿಕಾರದ ದಾರ್ಷ್ಟ್ಯ, ದುರಾಡಳಿತ, ಮತಾಂಧ ಯೋಜನೆಗಳನ್ನು, ಪಟ್ಟಭದ್ರ ಹಿತಾಸಕ್ತಿಗಳನ್ನು ಪ್ರಶ್ನಿಸುವ, ಧಿಕ್ಕರಿಸುವ ವೈಚಾರಿಕ ಮನಸ್ಸುಗಳು ಕೂಡ ಜಾಣಕುರುಡನ್ನು ಅಭಿನಯಿಸುತ್ತಿರುವುದು ಅಸಹ್ಯಕರವಾಗಿದೆ.

ಈಗ ನಾಡು-ನುಡಿ, ಸಂಸ್ಕೃತಿಗಳ ಕುರಿತಾಗಿ ಬೃಹತ್ತಾದ ಉತ್ಸವಗಳನ್ನು ಶಿಕ್ಷಣ ಸಂಸ್ಥೆಗಳು, ಮಠಗಳು, ಪ್ರಭಾವಿ ವ್ಯಕ್ತಿಗಳು ನಡೆಸುತ್ತಿದ್ದಾರೆ. ಅಲ್ಲೆಲ್ಲ ಚಳವಳಿಗಳು, ಸಾಮಾಜಿಕ ಸಮಸ್ಯೆಗಳನ್ನಲ್ಲದೆ ಮನುಷ್ಯನ ಬದುಕಿನ ತೀವ್ರತೆಯ ಕುರಿತಾಗಿ ದೀರ್ಘ ಚರ್ಚೆಗಳು, ಭಾಷಣಗಳು, ಠರಾವುಗಳು. ಹೀಗೆ ಮಾತಿನಲ್ಲೇ ಸಮಸ್ಯೆಗಳನ್ನು ಸೃಷ್ಟಿಸಿ ಪರಿಹಾರವನ್ನೂ ಕೊಟ್ಟುಬಿಡುವ ತಂತ್ರಗಾರಿಕೆಯೂ ಹುಂಡಗಾಳಿಗೆ ತೂರಿಬಿಡುವ ಕ್ರಿಯೆ ಆಗಿಬಿಟ್ಟಿದೆ. ಶಿವನ ಬೆವರ ಹನಿಯಿಂದ ಉದ್ಭವಿಸಿದ ವೀರಭದ್ರ,,, ದಕ್ಷಬ್ರಹ್ಮನ ಯಜ್ಞದ ಅಗ್ನಿ ನಾಶ ಮಾಡುವುದರೊಂದಿಗೆ ಆರಂಭವಾಗುವ ಪ್ರತಿಕ್ರಿಯಾತ್ಮಕ ಅಭಿಯಾನ ಇಂದಿನ ಕಾಲಘಟ್ಟದಲ್ಲಿ ಸಂಪೂರ್ಣ ನಿಂತೇ ಹೋಗಿದೆ ಅಂದರೆ, ಒಳಗೊಳ್ಳುವಿಕೆಯ ಕುಟಿಲ ನೀತಿಗೆ ಶಿವನ ಸಂಸ್ಕೃತಿ ಬಲಿಯಾಗಿದೆ ಅನ್ನುವುದು ನಿಶ್ಚಿತ. ಸಾಮಾಜಿಕ ವಾತಾವರಣದಲ್ಲಿ ಸಮಾನತೆ ಮಂತ್ರ ಒಂದು ಬೂಟಾಟಿಕೆಯ ತಂತ್ರವಾಗಿದೆ. ಸೋದರತೆಯೆಂಬುದು ಕೇವಲ ದೇಶಪ್ರೇಮದಲ್ಲಿ ಒಂದಾಗುವ, ಧರ್ಮಪ್ರೀತಿಯಲ್ಲಿ ಬೆಸೆದುಕೊಳ್ಳುವ ಹುಚ್ಚುಕಲ್ಪನೆಯ ಆದರ್ಶವಾಗಿ ಉಳಿದಿರುವಾಗ, ಭಾರತದಲ್ಲಿನ ಹಿಂದುಳಿದ ವರ್ಗದವರಿಗೆ ಪುರಾಣಗಳ, ದೇವದೇವರ ನಡುವಿನ ವ್ಯತ್ಯಾಸ ಉನ್ಮತ್ತ ಭಕ್ತಿಯ ಪರಾಕಾಷ್ಠೆ ಆಗಿದೆ. ಬ್ರಾಹ್ಮಣ್ಯದ (ಬ್ರಾಹ್ಮಣ್ಯ ಎಂಬುದು ಜಾತಿಯಲ್ಲ) ಕುಹಕ ನೀತಿ ಹುಟ್ಟುಹಾಕಿರುವ ಆದರ್ಶ ರಾಜ್ಯವೇ ಮಹಾತ್ಮರುಗಳ ಕನಸಿನ ರಾಜ್ಯ ಕಲ್ಪನೆಯೂ ಆಗಿದೆ. ಅಲ್ಲಿ ಈ ಯಾವ ಜನತಂತ್ರದ ಆಡಳಿತ, ಸುವ್ಯವಸ್ಥಿತ ಕಾನೂನು ಬೇಕಾಗುವುದಿಲ್ಲ. ಇವರ ಕಾಯ್ದೆಗಳನ್ನು ಮಾನ್ಯ ಮಾಡುವ ಸಚಿವಾಲಯಗಳು ಅಂದ್ರೆ ಮಠಗಳು.

ಇಂದು ಸಮಾಜ ಅನ್ನೋದು ಜಾತಿಯನ್ನಾಧರಿಸಿದ ಒಂದು ಕೋಮಿನ ಸಂಘಟನೆಯಾಗಿದೆ. ಲಿಂಗಾಯತ ಸಮಾಜ, ಬ್ರಾಹ್ಮಣ ಸಮಾಜ, ದಲಿತ ಸಮಾಜ, ಕುರುಬ ಸಮಾಜ, ಮುಸ್ಲಿಮ್ ಸಮಾಜ ಎಂಬ ವರ್ಗೀಕರಣಗಳು ಜನತಂತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಳಸಿಕೊಳ್ಳುತ್ತಿರುವ ಉಪಾಯಗಳಾಗಿವೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಮತ್ತೆ ಮತ್ತೆ ಪ್ರಾದೇಶಿಕ ಪಕ್ಷಗಳು ನೆಲಕಚ್ಚುತ್ತಿರುವುದಕ್ಕೆ ಈ ವರ್ಗೀಕರಣವೇ ಕಾರಣವಿರಬಹುದು. ಚಳವಳಿಗಳು ಹುಟ್ಟುಹಾಕಿದ್ದ ರಾಜಕೀಯ ತೀವ್ರತೆಯನ್ನು ಅರ್ಥೈಸಿಕೊಳ್ಳಬೇಕಾದ ಹೊತ್ತಿನಲ್ಲಿಯೇ ಜಾತಿಯಾಧಾರಿತ ಸಮಾಜ ಕಲ್ಪನೆಗಳು ನಾಯಕತ್ವದ ಗೊಂದಲವನ್ನೆಬ್ಬಿಸಿ, ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಚಳವಳಿಯ ಪ್ರಜ್ಞೆಗಳನ್ನು ನಾಶಗೊಳಿಸುತ್ತಿವೆ.

ಚಳವಳಿಗಳು ರೂಪಿಸಿದ್ದ ಪ್ರಜ್ಞೆ – ಜಾತಿ ಪ್ರಜ್ಞೆಯಾಗಿ ಬೆಳೆದಂತೆ ಮನುಷ್ಯ ನಿರ್ಮಿತ ಮೌಲ್ಯಗಳು ಹೆಚ್ಚು ಸಂಕೀರ್ಣಗೊಂಡವು. ಜ್ಞಾನದ ಆಕರಗಳು ಅಕ್ಷರವಂತರ ಕೈಗೆ ಸುಲಭದಲ್ಲಿ ಸಿಗುವಂತಾದ ಮೇಲೆ ಶೋಷಣೆಯ ರೂಪಗಳು ಹೊಸ ಮುಖವಾಡಗಳೊಂದಿಗೆ ಪ್ರತ್ಯಕ್ಷವಾದವು. ಅಂಬೇಡ್ಕರ್, ಲೋಹಿಯಾ ಮತ್ತು ಮಾರ್ಕ್ಸ, ಈ ಮೂವರ ಆಲೋಚನೆಗಳ ಪರಿಣಾಮದಿಂದಾಗಿ ಭಾರತದ ನಾಗರೀಕ ಸಮಾಜದಲ್ಲಿ ಮಹತ್ವದ ತಿರುವುಗಳನ್ನು ಕಾಣಲು ಸಾಧ್ಯವಾಯಿತು. ಮಾನವೀಯ ಹಕ್ಕುಗಳ ಹೋರಾಟದ ಪರ್ವ ಸ್ವಾತಂತ್ರ್ಯಪೂರ್ವದಲ್ಲಿಯೇ ಅಲ್ಲಲ್ಲಿ ಕೆಲ ನಾಯಕರುಗಳ, ಉದಾತ್ತ ರಾಜರುಗಳ, ಸಂತರ, ಸಮಾಜಸುಧಾರಕರ ನೇತೃತ್ವದಲ್ಲಿ ಆರಂಭವಾದರೂ, ಚಳವಳಿಯಾಗಿ ರೂಪಗೊಂಡದ್ದು ಈ ಮೂರು ಜನರ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಒಳನೋಟದ ತೀಕ್ಷ್ಣ ದೃಷ್ಟಿಕೋನದಲ್ಲಿಯೇ ಅನ್ನಬಹುದು. ಈ ಸಾಧ್ಯತೆಯನ್ನು ಮನಗಂಡ ನಂತರವೇ ಸ್ವಾತಂತ್ರ್ಯದ ಕುರಿತಾದ ಭ್ರಮೆಗಳು ಹಕ್ಕಿನ, ಹಕ್ಕು ಚಲಾವಣೆಯ, ಸಮಾಜ ಬದಲಾವಣೆಯ ಮತ್ತು ಅಭಿವೃದ್ಧಿಯ ಕುರಿತಾದ ಆಶಯಗಳಾಗಿ ಪರಿವರ್ತನೆಯಾದವು.

ಸ್ವಾತಂತ್ರ್ಯದ ಸುಳ್ಳಾಟವು ಸತ್ಯವಾಗುತ್ತ ಹೊರಟ ಹಾದಿಯಲ್ಲಿಯೇ ಸತ್ಯದ ಸಮರ್ಥಕರು ಗ್ರಾಮೀಣವಾಸಿಗಳನ್ನು ನೀವೇ ಹೆಚ್ಚು ಸುಖವಾಗಿರುವವರು ಎಂದು ನಂಬಿಸಲು ಪ್ರಯತ್ನಿಸಿದರು. ಹಳ್ಳಿಗಳ ಅಂತಃಸತ್ವವೇ ಭಾರತದ ಭವ್ಯ ಪರಂಪರೆಯೆಂದು ನಿರೂಪಿಸಲು ಪ್ರಯತ್ನಿಸಿದರು. ಅಲ್ಲಿನ ನ್ಯಾಯಾಲಯಗಳನ್ನು, ವರ್ಗವ್ಯವಸ್ಥೆಯನ್ನು, ಊರು-ಕೇರಿಗಳನ್ನು ಹೇಗಿವೆಯೋ ಹಾಗೆಯೇ ಉಳಿಸಿಕೊಳ್ಳಲು ಹವಣಿಸುವ ಸನಾತನ ಸಂಸ್ಕೃತಿ ಆರಾಧಕರು ರಾಜಕೀಯ ಸ್ವಾತಂತ್ರ್ಯವನ್ನು ಮಾತ್ರ ಹಂಬಲಿಸಿದರು. ತಂತ್ರಕ್ಕೆ ಪ್ರತಿ ತಂತ್ರ ಹಾಕುವ ಮನಸುಗಳು ಈ ದೇಶದ ಹುಚ್ಚು ಭಾವನಾವಾದ ಮತ್ತು ಹುಚ್ಚುಚ್ಚು ಆಧ್ಯಾತ್ಮವಾದಗಳೆರಡನ್ನೂ ಒಂದರೊಡನೊಂದನ್ನು ಹೊಸೆಯಲು ಪ್ರಾರಂಭಿಸಿದರು, (ಇವತ್ತು ಬಾಬಾಸಾಹೇಬರನ್ನು ಮೂರ್ತೀಕರಿಸುತ್ತಿರುವ ದಲಿತ ಸಮುದಾಯಗಳಲ್ಲಿ ಈ ಮೇಲಿನ ಉನ್ಮತ್ತ ವಾದಗಳೆರಡೂ ಇಲ್ಲವೆಂಬುದನ್ನೂ ಮತ್ತು ಆತ್ಮಸ್ಥೈರ್ಯದ ಸಂಕೇತವಾಗಿ ಮಾತ್ರ ಡಾ|| ಅಂಬೇಡ್ಕರ್‌ರು ಇದ್ದಾರೆಂಬುದನ್ನು ವ್ಯಾಕುಲಗೊಳ್ಳುತ್ತಿರುವ ಪ್ರಗತಿಶೀಲ ಮನಸ್ಸುಗಳು ಅರ್ಥಮಾಡಿಕೊಳ್ಳಬೇಕು.) ಆ ಹೊಸೆಯುವ ಕ್ರಮದಲ್ಲಿ ಸಣ್ಣಪುಟ್ಟ ಅಸ್ತಿತ್ವಗಳೆಲ್ಲ ಭಾರತೀಯ ಆಧುನಿಕ ದರ್ಶನಗಳಾಗಿ ಉಳಿದುಕೊಳ್ಳಬೇಕಿತ್ತು. ಆದರೆ ಭಾರತೀಯತೆ ಎಂಬ ಭಾವನಾವಾದವೂ ಆಧ್ಯಾತ್ಮವಾದವೂ ಏಕಮುಖಿ ಸಂಸ್ಕೃತಿಯಾಗಿ ರೂಪುಗೊಳ್ಳುವ ಧಾವಂತದಲ್ಲಿ ಸಾವಿರಾರು ತೊರೆಗಳನ್ನು ಅಖಂಡ ಹಿಂದುತ್ವದಲ್ಲಿ ವಿಲೀನಗೊಳಿಸಿಕೊಂಡಿತು.

ಕನ್ನಡ ಕರಾವಳಿ ಜಿಲ್ಲೆಗಳಲ್ಲಿ ರೂಪಗೊಳ್ಳುತ್ತಿರುವ ಸನಾತನಿಗಳ ಹೊಸ ಅವತಾರಗಳನ್ನು, ಸಂಪ್ರದಾಯ, ಪರಂಪರೆಗಳ ವಕ್ತಾರರಂತೆ ವಹಿಸಿಕೊಂಡು ಹೋಗುತ್ತಿದ್ದ ನೈತಿಕ ಪೋಲಿಸರನ್ನು ಬೆತ್ತಲೆಗೊಳಿಸಿದ್ದ ಒಬ್ಬ ವರದಿಗಾರನನ್ನು ಜೈಲು ಸೇರಿಸುವ ಹುಂಬುತನ ಪ್ರದರ್ಶಿಸಿರುವ ಪೋಲಿಸ್ ವ್ಯವಸ್ಥೆಯೂ ಡೊನೇಶನ್ ದೊರೆಗಳ, ಮೂಲಭೂತಿಗಳ, ಧರ್ಮಾಂಧರ ಕೈ ದಾಳವಾಗಿ ನಡೆದುಕೊಂಡಿದ್ದು ಪ್ರಜಾತಂತ್ರದಲ್ಲಿನ ವ್ಯಂಗ್ಯವನ್ನು ತೋರಿಸುತ್ತದೆ. ಹೋಮಸ್ಟೇ ದಾಳಿಯ ಕುರಿತಾಗಿ ವರದಿ ಮಾಡಿದ ಸರಳ ಕಾರಣಕ್ಕಾಗಿ ನವೀನ ಸೂರಿಂಜೆಯಂಥ ದಿಟ್ಟ ಪತ್ರಕರ್ತನನ್ನು ಬಂದಿಸಲಾರರು, ಆ ಕಪ್ಪು ಕನ್ನಡಕದ ಗಿಣಿರಾಮನ ವೈಚಾರಿಕ ವಾಗ್ದಾಳಿಗೆ ತಡಯೊಡ್ಡಲು ಜಾಮೀನು ರಹಿತ ವಾರೆಂಟಗಾಗಿ ಕರಾವಳಿ ಜಿಲ್ಲೆಯ ಬಿಳಿ ಆನೆಗಳೆಲ್ಲವೂ ಶ್ರಮವಹಿಸಿರುವ ಅನುಮಾನವೂ ಇದೆ. ಆ ನೆಲದ ಬಗ್ಗೆ ಮೋಹ ಇಟ್ಟುಕೊಂಡವರು, ಅಯ್ಯೋ ಹೀಗಾಗುತ್ತಿದೆ ನನ್ನ ತವರು ಎಂದು ಅಲವತ್ತುಕೊಳ್ಳುವವರು ಗಳಗಳನೇ ಅತ್ತುಬಿಟ್ಟರೆ ಮೈಯಲ್ಲ ದುರಹಂಕಾರ ತುಂಬಿಕೊಂಡಿರುವ ಮೃದು ಮನಸಿನ ಆಸಾಮಿಗಳು ಕ್ಷಣಹೊತ್ತು ತಲ್ಲಣಿಸಿ ಅದಕ್ಕೂ ನಮ್ಮಲ್ಲೊಂದು ಬೇರುಂಟೆಂದು, ಹೊಸ ವರಸೆಯೊಂದಿಗೆ ಕೋಮು ಸಂಘಟನೆಯ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಆ ಉತ್ಸವಗಳ ಅಂತರಾಳದಲ್ಲಿ ಕಾವು ಕುಳಿತಿರುವ ಹಕ್ಕಿಯ ಉದ್ಧೇಶ ಬದಲಾದರೂ ಮೊಟ್ಟೆಯಿಂದ ಮೂಡಿಬರುವ ಶಿಶುವಿನ ರೂಪ ಭಯಂಕರವಾಗಿರುತ್ತದೆ.

ಪೇಪರ್ ಟೈಗರ್‌ಗಳೂ, ಬಹುಸಂಖ್ಯಾತ ನೀರೋಗಳು ಮತ್ತು ಉತ್ತಮ ಪ್ರಜಾಪ್ರಭುತ್ವವೂ


-ಬಿ. ಶ್ರೀಪಾದ್ ಭಟ್


 

ನಮ್ಮ ಬಹುಪಾಲು ಮಾಧ್ಯಮಗಳು — ಅದರಲ್ಲೂ ಮುಖ್ಯವಾಗಿ ದೃಶ್ಯ ಮಾಧ್ಯಮಗಳು — ತಮ್ಮ ಇಳಿ ವಯಸ್ಸಿನಲ್ಲಿ ತೀರಿಕೊಂಡ ಫ್ಯಾಸಿಸ್ಟ್ ರಾಜಕಾರಣಿ ಬಾಳ ಠಾಕ್ರೆಯ ಸಾವನ್ನು ವೈಭವೀಕರಿಸಿದ ವೈಖರಿ ಅತ್ಯಂತ ಖಂಡನೀಯವಾದದ್ದು.

ಪೇಪರ್ ಟೈಗರ್ ಅನ್ನು ಹುಲಿಯನ್ನಾಗಿಸಿದ ಈ ಮಾಧ್ಯಮಗಳ ನೈತಿಕ ಅಧಃಪತನ ಹೇಸಿಗೆ ಮಾತ್ರ ಹುಟ್ಟಿಸಲು ಸಾಧ್ಯ. ಕನಿಷ್ಠ ಮಟ್ಟದ ಪತ್ರಿಕಾ ಮನೋಧರ್ಮದ ಸಂಯಮವನ್ನು ಕೈಬಿಟ್ಟ ಈ ದೃಶ್ಯ ಮಾಧ್ಯಮಗಳು ಮತ್ತು ಕೆಲವು ಮುದ್ರಣ ಮಾಧ್ಯಮಗಳು ಹಿಂಸಾಪ್ರವೃತ್ತಿಯ, ಕೋಮುವಾದದ ರಾಜಕಾರಣ ಮತ್ತು ಪ್ರವೃತ್ತಿಯನ್ನು ತಮ್ಮ ಉಸಿರಾಗಿಕೊಂಡ ರಾಜಕಾರಣಿ ಬಾಳ ಠಾಕ್ರೆ ಕಂಡಿದ್ದು ನುರಿತ, ಘರ್ಜಿಸುವ ಹುಲಿಯಾಗಿ!!

ಸದರಿ ರಾಜಕಾರಣಿಯ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಮುಂಬೈ ಅಕ್ಷರಶಃ ಬಂದ್ ಆಚರಿಸಿದ್ದು ಭಯದಿಂದ ಮಾತ್ರ ಎಂದು ಪ್ರಾಮಾಣಿಕವಾಗಿ ನುಡಿದ, ಅಲ್ಲದೆ ಭಗತ್‌ ಸಿಂಗ್‌ರಂತಹ ದೇಶಪ್ರೇಮಿಗಳಿಗೆ ಈ ಮಟ್ಟದ ಗೌರವ ಸಲ್ಲಬೇಕೇ ಹೊರತು ಬಾಳ ಠಾಕ್ರೆಯಂತಹವರಿಗಲ್ಲ ಎಂದು ಅತ್ಯಂತ ದಿಟ್ಟತನದಿಂದ ನುಡಿದ ಶಹೀನ್ ಮತ್ತು ಅದನ್ನು ಅನುಮೋದಿಸಿದ ರೇಣು ಅವರನ್ನು ಯಾವುದೇ ಪ್ರಚೋದನೆಯಿಲ್ಲದೆ ಬಂಧಿಸಿದ ಪೋಲೀಸರ ಕ್ರಮವನ್ನು ದೇಶದ ಪ್ರಜ್ಞಾವಂತರು ತೀವ್ರವಾಗಿ ಪ್ರತಿಭಟಿಸುತ್ತಿದ್ದರೆ ನಮ್ಮ ಬಹುಪಾಲು ದೃಶ್ಯ ಮಾಧ್ಯಮಗಳು ಮರೆ ಮೋಸದಿಂದ ವರ್ತಿಸಿದ್ದು ಪತ್ರಿಕಾ ಧರ್ಮವೇ? ಸಂಘ ಪರಿವಾರದ ಪಿತೂರಿಯಿಂದಾಗಿ ಬಂಧನಕ್ಕೊಳಗಾದ ಪತ್ರಕರ್ತ ನವೀನ್ ಸೂರಂಜೆಯ ಪರವಾಗಿ ನಿರಂತರ ಬೆಂಬಲವನ್ನು ವ್ಯಕ್ತಪಡಿಸುವ ಯಾವುದೇ ಕಾರ್ಯಕ್ರಮಗಳನ್ನು, ಚರ್ಚೆಗಳನ್ನು ಹಾಕಿಕೊಳ್ಳದ ಇವರ ಈ ವರ್ತನೆಗೆ ನಾವೆಲ್ಲ ಹೇಗೆ ಪ್ರತಿಕ್ರಯಿಸಬೇಕು? ನವೀನ್ ಸೂರಂಜೆಯ ಬಂಧನದ ಹಿಂದಿನ ಕುತಂತ್ರಗಳನ್ನು ಬಯಲುಗೊಳಿಸುತ್ತಲೇ ಆ ಮೂಲಕ ಇಡೀ ಕರಾವಳಿಯ ಕೋಮುವಾದದ, ಸ್ವಾರ್ಥದ ಕರಾಳ ಮುಖಗಳನ್ನು, ಅನುಕೂಲಸಿಂಧು ರಾಜಕೀಯದ ಒಡಂಬಡಿಕೆಗಳನ್ನು, ಅಲ್ಲಿನ ಸಮಾಜದಲ್ಲಿ ಅಂತರ್ಗತವಾಗಿ ಪ್ರವಹಿಸುತ್ತಿರುವ ದ್ವೇಷಮಯ ಸ್ವಭಾವಗಳನ್ನು ಚರ್ಚೆಗಳ ಮೂಲಕ, ಸಂವಾದಗಳ ಮೂಲಕ ಬಿಡಿ ಬಿಡಿಯಾಗಿ ಬಿಚ್ಚಿಡುವ ಅಪೂರ್ವ ಅವಕಾಶವನ್ನು ನಮ್ಮ ಮಾಧ್ಯಮಗಳು ಕಳೆದುಕೊಂಡಿದ್ದು ನಿಜಕ್ಕೂ ವಿಷಾದನೀಯ! ಕನಿಷ್ಠ ಮಟ್ಟದ ನೈತಿಕ ಪ್ರಜ್ಞೆ ಸಹ ಮರೆಯಾದಂತಹ ಈ ಕ್ಷಣಗಳನ್ನು ಸಹ್ಯವಾಗಿಸುವಂತೆ ವರ್ತಿಸಿಬೇಕಾದ ನಾವೆಲ್ಲ ಬಂಧಿತರಾದ ಅಮಾಯಕ ಯುವಕ, ಯುವತಿಯರಲ್ಲಿ ಸಿನಿಕತನ ಮತ್ತು ಭ್ರಮನಿರಸನವನ್ನು ಮಾತ್ರ ಹುಟ್ಟಿಸಲು ಸಾಧ್ಯ.

ಇತ್ತೀಚೆಗೆ ಉತ್ತರ ಪ್ರದೇಶದ ಫೈಜಾಬಾದ್‌ನಲ್ಲಿ ನಡೆದ ಕೋಮುಗಲಭೆಗಳು ಮಾಧ್ಯಮಗಳಿಂದ ನಿರ್ಲಕ್ಷಿತಗೊಂಡ ರೀತಿಯೂ ಸಹ ಗಾಬರಿ ಹುಟ್ಟಿಸುತ್ತದೆ. ದಸರಾ ಹಬ್ಬದ ವೇಳೆಯಲ್ಲಿ ಫೈಜಾಬಾದ್‌ನ ಪ್ರಸಿದ್ಧ ಕಾಳೀ ಮಂದಿರದಿಂದ ಕಾಳೀ, ಲಕ್ಷ್ಮಿ ಮತ್ತು ಸರಸ್ವತಿ ವಿಗ್ರಹಗಳು ಕಾಣೆಯಾದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಇದರ ಕುರಿತಾಗಿ ಸೂಕ್ಷ್ಮ ಮನಸ್ಸಿನ ಪತ್ರಕರ್ತ ಸಯೀದ್ ನಕ್ವಿ ವಿವರವಾಗಿ ಬರೆಯುತ್ತಾರೆ:

“ಯೋಗಿ ಆದಿತ್ಯಾನಂದ ಮತ್ತು ಆತನ ಸಹಚರರು ಕೋಮು ಭಾವನೆ ಕೆರಳಿಸುವ ಘೋಷಣೆಗಳನ್ನು ಕೂಗುತ್ತ ಒಂದು ವೇಳೆ ವಿಗ್ರಹಗಳು ದೊರಕದಿದ್ದರೆ ಇಡೀ ಭೂಮಂಡಲವೇ ಅಲ್ಲೋಲಕಲ್ಲೋಲವಾಗುತ್ತದೆಂದು ಫೂತ್ಕರಿಸುತ್ತ ಇಡೀ ಪಟ್ಟಣದಲ್ಲಿ ತಲ್ಲಣಗಳನ್ನು ಹುಟ್ಟುಹಾಕಿದರು. ಎಂದಿನಂತೆ ಪೋಲೀಸರು ಶೋಧನೆಗಾಗಿ ಮೊದಲು ಜಾಲಾಡಿದ್ದು ಅಜಮಗರ್‌ನ ಮುಸ್ಲಿಂರ ಮೊಹಲ್ಲಗಳ ಬಳಿ. ಅಲ್ಲಿನ ಮುಸ್ಲಿಂರ ಮನೆಗಳನ್ನು. ಆದರೆ ಕಡೆಗೆ ವಿಗ್ರಹಗಳು ದೊರಕಿದ್ದು ಕಾನ್ಪುರದ ನಾಲ್ಕು ಹಿಂದೂಗಳ ಮನೆಯಲ್ಲಿ ( ನಾಲ್ಕೂ ಮನೆಗಳು ವಿಭಿನ್ನ ಜಾತಿಗೆ ಸೇರಿದ್ದವು).

“ಮತ್ತೊಂದು ಘಟನೆಯಲ್ಲಿ ಮೊಹರಂನ ಸಂದರ್ಭದಲ್ಲಿ ಫೈಜಾಬಾದ್‌ನ ಬಳಿ ಇರುವ ಭದ್ರಾಸ ಟೌನ್‌ನಲ್ಲಿ ಇದ್ದಕ್ಕಿದ್ದ ಹಾಗೆ ಮುಸ್ಲಿಂರ ಗುಡಿಸಲುಗಳು ಬೆಂಕಿಗೆ ಆಹುತಿಯಾಗುತ್ತವೆ.ಈ ದುಷ್ಕೃತ್ಯವನ್ನು ಯಾವ ಮಟ್ಟದಲ್ಲಿ ಎಚ್ಚರಿಕೆಯಂದ ಕೈಗೊಂಡರೆಂದರೆ ಪಕ್ಕದ ಹಿಂದೂಗಳ ಗುಡಿಸಲಿಗೆ ಕೊಂಚವೂ ಬೆಂಕಿ ಸೋಂಕದಷ್ಟು. ಜೈ ಶ್ರೀರಾಂ ಎಂದು ಕೂಗುತ್ತ, ಕೈಯಲ್ಲಿ ತ್ರಿಶೂಲವನ್ನು ಝಳಪಿಸುತ್ತ ಧಾವಿಸಿದ ಗಲಭೆಕೋರರು ಬೆಂಕಿಗೆ ಆಹುತಿಯಾದ ಇಡೀ ಮುಸ್ಲಿಂರ ಗುಡಿಸಲನ್ನು ಸುತ್ತುವರೆದರು. ದೂರದಿಂದ ಪೋಲೀಸರ ಜೀಪು ಕಂಡು ಅಸಹಾಯಕ ಮುಸ್ಲಿಂ ಮಹಿಳೆಯರಲ್ಲಿ ಕೊಂಚ ಆಶಾಭಾವ ಮೂಡುತ್ತಿರುವಂತೆಯೇ ಅದು ಸಹ ಕ್ಷಣಿಕವಾಗಿತ್ತು. ಏಕೆಂದರೆ ಈ ತ್ರಿಶೂಲಧಾರಿಗಳು ಮತ್ತು ಪೋಲೀಸರ ನಡುವೆ ನಡೆದ ಗುಟ್ಟಿನ ಸಂಭಾಷಣೆಯ ಫಲವಾಗಿ ಬಂದಷ್ಟೇ ವೇಗದಿಂದ ಪೋಲೀಸ್ ಪಡೆ ಬೆಂಕಿಗೆ ಆಹುತಿಯಾದ ಘಟನೆಯ ಸ್ಥಳದ ಹತ್ತಿರಕ್ಕೂ ಸುಳಿಯದೆ ಬಂದ ದಾರಿಯಲ್ಲಿ ಮರಳಿತು.ಹಾಗಿದ್ದರೆ ಆ ತ್ರಿಶೂಲಧಾರಿ ಗಲಭೆಕೋರರು ಮತ್ತು ಪೋಲೀಸರ ನಡುವೆ ಸಂಭಾಷಣೆಯಾದರೂ ಏನು?

“ಫೈಜಾಬಾದ್‌ನಲ್ಲಿ ದಸರಾ ಹಬ್ಬದಂದು ದುರ್ಗ ಮಾತೆಯ ಮೆರವಣಿಗೆ 18ನೇ ಶತಮಾನದ ಐತಿಹಾಸಿಕ ಮಸೀದಿಯನ್ನು ಬಳಸಿ ಹಾದು ಹೋಗುತ್ತದೆ. ಈ ಮಸೀದಿಯು ಅಂದಿನಿಂದಲೂ ದುರ್ಗಾ ಮೆರವಣಿಗೆಯ ಸಂದರ್ಭದಲ್ಲಿ ದೇವಿಯನ್ನು ಪೂಜಿಸಲು ಹೂಗಳನ್ನು ಪೂರೈಸುತ್ತಿತ್ತು. ಹಿಂದೂ ಮಹಿಳೆಯರು ಈ ಮಸೀದಿಯ ಮೇಲೇರಿ ದುರ್ಗಾ ಮಾತೆಯ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದರು. ಅಷ್ಟರ ಮಟ್ಟಿಗೆ ಅಲ್ಲಿನ ಕೋಮು ಸೌಹಾರ್ದತೆ ಹೆಸರುವಾಸಿಯಾಗಿತ್ತು. ಆದರೆ ಹಿಂಸೆಗೆ ಬಲಿಯಾಗಿ ನಲುಗಿದ್ದ ಫೈಜಾಬಾದ್‌ನಲ್ಲಿ ಅಕ್ಟೋಬರ್ 24ರಂದು ಆದದ್ದೇ ಬೇರೆ. ಈ ಬಾರಿ ಹಿಂದೂ ಮಹಿಳೆಯರನ್ನು ದುರ್ಗಾ ಮಾತೆಯ ಮೆರವಣಿಗೆಯನ್ನು ವೀಕ್ಷಿಸಲು ಮನೆಯಿಂದ ಹೊರ ಬರದಂತೆ ದಿಗ್ಭಂದನ ವಿಧಿಸಿದ ಸಂಘಟಕರ ವರ್ತನೆ ಸಂಶಯವನ್ನು ಮೂಡಿಸಿತ್ತು. ಇದರ ಕುರಿತಾಗಿ ಪೋಲೀಸರಿಗೆ ದೂರನ್ನು ನೀಡಲಾಗಿದ್ದರೂ ಪೋಲೀಸರು ಅದನ್ನು ಕಡೆಗಣಿಸಿದ್ದರು. ಎಣೆಸಿದಂತೆಯೇ ನಡೆಯಿತು. ದುರ್ಗಾ ಮಾತೆಯ ಮೆರವಣಿಗೆಯ ಸಂದರ್ಭದಲ್ಲಿ ಸುಮಾರು 50 ಮುಸ್ಲಿಂರ ಅಂಗಡಿ, ಮುಂಗಟ್ಟುಗಳನ್ನು ಲೂಟಿ ಮಾಡಿ ಬೆಂಕಿಗೆ ಆಹುತಿ ಮಾಡಲಾಯಿತು.

“ಮೇಲಿನ ಎಲ್ಲ ಕೋಮು ಗಲಭೆಗಳು ಎಂದಿನಂತೆ ಹಿಂದು ಮತ್ತು ಮುಸ್ಲಿಂರ ನಡುವಿನ ನೇರವಾದ ಘರ್ಷಣೆಯಲ್ಲ. ಬದಲಾಗಿ ಪಾಸಿಸ್, ಲೋಹರ್, ಮಲ್ಲಾಹ್ ಉಪಪಂಗಡಗಳಿಗೆ ಸೇರಿದ ದಲಿತರನ್ನು ಇಡಿಯಾಗಿ ಮುಸ್ಲಿಂರ ವಿರುದ್ಧ ಗಲಭೆಗೆ ಬಳಸಿಕೊಳ್ಳಲಾಗಿತ್ತು. ಈ ಮೂಲಕ ಮುಸ್ಲಿಂ ಮತ್ತು ದಲಿತರ ಏಕೀಕರಣದ ಪ್ರಯತ್ನವನ್ನು ಅತ್ಯಂತ ಯಶಸ್ವಿಯಾಗಿ ಮೊಟಕುಗೊಳಿಸಲಾಯಿತು.

“ಇತ್ತೀಚೆಗೆ ಫೈಜಾಬಾದನಲ್ಲಿ ಮೊಳಗುತ್ತಿರುವ ಘೋಷಣೆಯೇ ಇದರ ಹಿಂದಿನ ಪಾತ್ರಧಾರಿಗಳನ್ನು ಬಯಲುಗೊಳಿಸುವುದಕ್ಕೆ ಪ್ರಮುಖ ಸಾಕ್ಷಿ. ಆ ಘೋಷಣೆಯೇನೆಂದರೆ “ಯುಪಿ ಅಬ್ ಗುಜರಾತ್ ಬನೇಗ; ಫೈಜಾಬಾದ್ ಶುರುವಾತ್ ಕರೇಗ.” (ಇನ್ನುಮುಂದೆ ಯುಪಿಯು ಗುಜರಾತನ ಮಾಡೆಲ್‌ನ್ನು ಅನುಸರಿಸುತ್ತದೆ; ಇದು ಫೈಜಾಬಾದನಿಂದಲೇ ಶುರುವಾಗುತ್ತದೆ.)

“ಇದೆಲ್ಲವೂ ನಡೆಯುತ್ತಿರುವುದು ಸೆಕ್ಯುಲರ್ ಪಕ್ಷವೆಂದು ಖ್ಯಾತಿ ಗಳಿಸಿದ ಸಮಾಜವಾದಿ ಪಕ್ಷ ಅಧಿಕಾರ ಹಿಡಿದಿರುವ ಉತ್ತರ ಪ್ರದೇಶದಲ್ಲಿ. ಯುವ ನೇತಾರ ಅಖಿಲೇಶ್‌ಸಿಂಗ್ ಯಾದವ್ ನೇತೃತ್ವದಲ್ಲಿ!!”

(ಕೃಪೆ : ಡೆಕ್ಕನ್ ಹೆರಾಲ್ಡ್, 24.11.2012)

ಮೇಲಿನ ಎಲ್ಲಾ ಘಟನೆಗಳಲ್ಲಿ ಮೂರು ಪ್ರಮುಖ ಅಂಶಗಳು ತೀವ್ರವಾಗಿವೆ. ಮೊದಲನೆಯದಾಗಿ ಮತ್ತೊಮ್ಮೆ ಕೋಮುವಾದದ ದುಷ್ಟ ಶಕ್ತಿಗಳು ಅಮಾಯಕ ಹಿಂದುಳಿದ ಮತ್ತು ದಲಿತ ಯುವಕರನ್ನು ಮುಂದಿಟ್ಟುಕೊಂಡು ವಿಜೃಂಬಿಸುತ್ತಿರುವುದು. ಈ ದುಷ್ಟ ಶಕ್ತಿಗಳಿಗೆ ಅಖಾಡವನ್ನು ಒದಗಿಸಿಕೊಡಲು ಸೂಕ್ತ ವೇದಿಕೆಯನ್ನು ಸಿದ್ಧಪಡಿಸಿಕೊಟ್ಟ ನಮ್ಮ ಪ್ರಜಾಪ್ರಭುತ್ವದ ಬೆನ್ನೆಲುಬಾದ ಪೋಲೀಸ್ ವ್ಯವಸ್ಥೆ. ಮತ್ತು ಈ ದಬ್ಬಾಳಿಕೆಯನ್ನು ಪ್ರತಿಭಟಿಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದ್ದರೂ ಮೂಕ ಪ್ರೇಕ್ಷಕರಂತೆ ತಣ್ಣಗೆ ಕುಳಿತಿರುವ ನಾಗರಿಕ ಸಮಾಜ ಮತ್ತು ಇದೇ ಉತ್ತಮ ಪ್ರಜಾಪ್ರಭುತ್ವದ ಪ್ರಮುಖ ಅಂಗವೆಂದು ಬೀಗುತ್ತಿರುವ ಪತ್ರಿಕಾರಂಗವು ತನ್ನ ಸತ್ಯಶೋಧನೆಯ ಪ್ರಾಮಾಣಿಕ ಮಾರ್ಗವನ್ನು ಕೈಬಿಟ್ಟ ರೀತಿ.

ನಮ್ಮ ಈ ಅತ್ಮವಂಚನೆಗೆ ಕೊನೆ ಇಲ್ಲವೇ?

ಬಿಡುಗಡೆಯಾಗದ ನವೀನ್ : ರಾಜ್ಯಪಾಲರಿಗೆ ಮನವಿ ಪತ್ರ

ಕೋರ್ಟಿನ ಭಾಷೆ ಮತ್ತು ಸರ್ಕಾರದ ಕಡತಗಳ ಭಾಷೆ ಅಷ್ಟು ಸುಲಭವಾಗಿ ಅರ್ಥವಾಗುವಂತಹುದಲ್ಲ. ಸೋಮವಾರ ನವೀನ್ ಸೂರಿಂಜೆಯವರ ಕೇಸಿಗೆ ಸಂಬಂಧಪಟ್ಟಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಎಲ್ಲರೂ ಅದು ಜಾಮೀನು ಮಂಜೂರಿಗೆ ಸಂಬಂಧಿಸಿದ್ದು ಎಂದು ಭಾವಿಸಿದ್ದರು. ನಾವೂ ಸಹ ಹಾಗೆಯೆ ವರದಿ ಮಾಡಿದ್ದೆವು. ಆದರೆ ಹೈಕೋರ್ಟ್ ಆದೇಶ ಹಾಗೆ ಇಲ್ಲ ಮತ್ತು ಸ್ಪಷ್ಟವಾಗಿಲ್ಲ ಎಂದು ಮಂಗಳೂರಿನ ಜೆ‌ಎಂ‌ಎಫ್‌ಸಿ ಬಾವಿಸಿದ ಕಾರಣ ಹೈಕೋರ್ಟ್ ಮತ್ತೆ ಸ್ಪಷ್ಟೀಕರಣ ನೀಡಬೇಕಾಯಿತು. ಇದೆಲ್ಲಾ ಆಗಿ ಈಗ ಮೊಕದ್ದಮೆ ಮಂಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ಇದೆ. ಇವತ್ತಿನ ವರದಿಗಳ ಪ್ರಕಾರ ಕೇಸು ಮಂಗಳವಾರಕ್ಕೆ ಹೋಗಿದೆ. ಈ ಕಗ್ಗಂಟು ಬಿಚ್ಚುತ್ತ ಹೋದಷ್ಟು ಹೆಚ್ಚು ಸಿಕ್ಕುಸಿಕ್ಕಾಗುತ್ತಿದೆ. ಯಾಕೆಂದರೆ ಅದನ್ನು ಹಾಗೆ ವ್ಯವಸ್ಥಿತವಾಗಿ, ಯೋಜನಾಬದ್ಧವಾಗಿ, ಹೊಸೆದು ಗಂಟು ಹಾಕಿದ್ದಾರೆ.

ಈ ನಡುವೆ ನವೀನ್ ಸೂರಿಂಜೆಯವರ ವಿರುದ್ಧ ಇರುವ ಆರೋಪಗಳನ್ನು ಕೈಬಿಡಬೇಕು ಮತ್ತು ಅವರ ಶೀಘ್ರ ಬಿಡುಗಡೆ ಆಗಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಡಗಳು ಬರುತ್ತಲೇ ಇವೆ. ನೆನ್ನೆ ಕೆಲವು ಸಾಹಿತಿಗಳ ಮತ್ತು ಪ್ರಗತಿಪರ ಸಂಘಟನೆಗಳ ಗುಂಪು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ. ಆ ಮನವಿ ಪತ್ರದ ಪೂರ್ಣ ಪಾಠ ಕೆಳಗಿದೆ.

ಮನವಿ

23-11-2012

ಸನ್ಮಾನ್ಯ ಶ್ರೀ ಎಚ್.ಆರ್ ಹಂಸರಾಜ್ ಭಾರದ್ವಾಜ್
ಮಾನ್ಯ ರಾಜ್ಯಪಾಲರು
ಕರ್ನಾಟಕ ಸರ್ಕಾರ
ಬೆಂಗಳೂರು

ಮಾನ್ಯರೇ,

ಈ ಕೆಳಗೆ ಸಹಿಮಾಡಿದ ನಾವು ಕಸ್ತೂರಿ ಚಾನೆಲ್‌ನ ಒಬ್ಬ ಜವಾಬ್ದಾರಿಯುತ ಪತ್ರಕರ್ತರಾದ ಶ್ರೀ ನವೀನ್ ಸೂರಿಂಜೆ ಯವರನ್ನು ಜುಲೈ 28 2012 ರಂದು ಮಂಗಳೂರಿನ ಹೋಂ ಸ್ಟೇ ಒಂದರಲ್ಲಿ ಹುಟ್ಟುಹಬ್ಬದ ಸಮಾರಂಭವನ್ನು ನಡೆಸುತ್ತಿದ್ದ ಯುವಕ ಯುವತಿಯರ ಮೇಲೆ ಗುಂಪೊಂದು ನಡೆಸಿದ ಧಾಳಿಯ ಸಂಬಂಧವಾಗಿ ನವೆಂಬರ್ 7 2012 ರಂದು ಮಂಗಳೂರಿನಲ್ಲಿ ಬಂಧಿಸಿದ ವಿಷಯವನ್ನು ತಮ್ಮ ಗಮನಕ್ಕೆ ಈ ಮೂಲಕ ತರಬಯಸುತ್ತೇವೆ. ಚಾರ್ಜಶೀಟ್ ಮತ್ತು ವಿಚಾರಣಾ ದಾಖಲೆಗಳಲ್ಲಿ ಕಾನೂನು ಬಾಹಿರ ಕೃತ್ಯ ನಡೆದ ಸಮಯದಲ್ಲಿ ಆ ಸ್ಥಳದಲ್ಲಿ ಶ್ರೀ ನವೀನ್ ಸೂರಿಂಜೆಯವರು ಹಾಜರಿದ್ದರು ಎಂದು ಉಲ್ಲೇಖಿಸಲಾಗಿದೆ.

ಶ್ರೀ ನವೀನ್ ಸೂರಿಂಜೆಯವರು ತಿಳಿಸಿರುವಂತೆ ವಸ್ತುಸ್ಥಿತಿ ಏನೆಂದರೆ ಅವರು ಯಾವುದೇ ರೀತಿಯಲ್ಲಿಯೂ ದುಷ್ಕೃತ್ಯವೆಸಗಿದ ವ್ಯಕ್ತಿಗಳ ಜೊತೆ ಸೇರಿಕೊಂಡಿಲ್ಲ. ಮಾಹಿತಿದಾರರೊಬ್ಬರಿಂದ ವಿಷಯ ತಿಳಿದು ಘಟನೆ ನಡೆದ ಸ್ಥಳಕ್ಕೆ ಒಬ್ಬ ಪತ್ರಕರ್ತರಾಗಿ ತಮ್ಮ ಉದ್ಯೋಗದ ಕರ್ತವ್ಯವನ್ನು ನಿರ್ವಹಿಸಲು ಧಾವಿಸಿದ್ದರು. ನಿಜವೆಂದರೆ ಒಬ್ಬ ಜವಾಬ್ದಾರಿಯುತ ಪತ್ರಕರ್ತರಾಗಿ ಅವರು ಘಟನೆಯನ್ನು ಚಿತ್ರೀಕರಿಸಿದ ಕಾರಣದಿಂದಲೇ ಸಾರ್ವಜನಿಕರ ಗಮನಕ್ಕೆ ಅಲ್ಲಿ ನಡೆದ ದುಷ್ಕೃತ್ಯ ಬರಲು ಸಾಧ್ಯವಾಗಿತ್ತು.

ನಂತರದ ದಿನಗಳಲ್ಲಿ ಮಾಧ್ಯಮಗಳು, ನವೀನ್ ಸೂರಿಂಜೆಯವರು ಮತ್ತು ಘಟನೆಯಲ್ಲಿ ಧಾಳಿಗೆ ಒಳಗಾದ ಯುವಕ ಯುವತಿಯರ ಹೇಳಿಕೆಗಳು ಪೋಲಿಸ ರ ಹೇಳಿಕೆಗೆ ವ್ಯತಿರಿಕ್ತವಾಗಿದೆ. ಡೆಕ್ಕನ್ ಹೆರಾಲ್ಡ್ (“Homestay attack took place in front of police” –Aug11, 2012) ಮತ್ತು ದಿ ಹಿಂದೂ (“Police were a few meters away” – July 30, 2012) ಪತ್ರಿಕೆಗಳ ಈ ಲೇಖನಗಳು ಯುವಕ ಯುವತಿಯರ ಮೇಲೆ ಗುಂಪು ದುಷ್ಕೃತ್ಯ ಎಸಗುವಾಗ ಆ ಘಟನಾ ಸ್ಥಳದಲ್ಲಿ ನಿಶ್ಚಯವಾಗಿಯೂ ಪೋಲಿಸರು ಹಾಜರಿದ್ದರು ಎಂದು ನಮೂದಿಸಿರುತ್ತಾರೆ.

ಆದ್ದರಿಂದ ಇದು ಪ್ರಜ್ಞಾಪೂರ್ವಕವಾಗಿ ಪತ್ರಿಕಾ ಸ್ವಾತಂತ್ರವನ್ನು ಹತ್ತಿಕ್ಕಲು ಪೋಲೀಸರು ಹೆಣೆದ ಸುಳ್ಳು ಆರೋಪವೆಂದು ನಾವು ಅಭಿಪ್ರಾಯ ಪಡುತ್ತೇವೆ.

ಒಬ್ಬ ಪ್ರಾಮಾಣಿಕ ಮತ್ತು ಜವಾಬ್ದಾರಿಯುತ ಪತ್ರಕರ್ತರಾಗಿ ಮತ್ತು ಸಭ್ಯ ನಾಗರೀಕರಾಗಿ ಶ್ರೀ ನವೀನ್ ಸೂರಿಂಜೆಯವರು ಹೋಂ ಸ್ಟೇ ಆವರಣದಲ್ಲಿ ನಡೆಯುತ್ತಿರುವ ಘಟನೆಯ ಬಗ್ಗೆ ತಮಗೆ ತಿಳಿದ ತಕ್ಷಣ ಪೋಲೀಸರ ಗಮನಕ್ಕೆ ತರಲು ನಡೆಸಿದ ಪ್ರಯತ್ನ ವಿಫಲವಾಯಿತೆಂದು ಘಟನೆ ನಡೆದ ಮಾರನೇದಿನ ನವೀನ್ ಸೂರಿಂಜೆ ಯವರು ನೀಡಿದ ಸಾರ್ವಜನಿಕ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ನವೀನ್ ಸೂರಿಂಜೆಯವರು ಮತ್ತು ಅವರ ಸಹೋದ್ಯೋಗಿಯವರು ಪಡೀಲ್ ವ್ಯಾಪ್ತಿಯ ಪೋಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅಲ್ಲಿಂದ ಯಾವುದೇ ಪ್ರತ್ಯುತ್ತರ ಬರಲಿಲ್ಲವೆಂದು ತಿಳಿಸಿದ್ದಾರೆ. ಪೋಲೀಸರು, ಸರ್ಕಾರ, ರಾಜ್ಯ ಮಹಿಳಾ ಆಯೋಗ ಮತ್ತು ನ್ಯಾಯಾಲಯಗಳು ಪ್ರಕರಣದ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿದ್ದೇ ಈ ವರದಿಗಾರರ ಚಿತ್ರೀಕರಣದ ಮೂಲಕವೇ.

ಅಲ್ಲದೇ ನಿನ್ನೆಯ ಪತ್ರಿಕೆಗಳಲ್ಲಿ ವರದಿಯಾದಂತೆ ವಿಚಾರಣಾದೀನ ಕೈದಿಗಳನ್ನು ನ್ಯಾಯಾಲಯದಿಂದ ವಿಶೇಷ ಅನುಮತಿ ಪಡೆದದ್ದಲ್ಲದೇ ಕೋಳ ತೊಡಿಸಿ ಕರೆತರಬಾರದೆಂಬ ದೇಶದ ಸರ್ವೋಚ್ಛ ನ್ಯಾಯಾಲಯ ದ ಆದೇಶವನ್ನೂ ಧಿಕ್ಕರಿಸಿ ಸೂರಿಂಜೆ ಮತ್ತು ಇತರ ರನ್ನು ಕೋಳ ತೊಡಿಸಿ ವಿಚಾರಣೆಗೆ ಮತ್ತು ಹಿಂದೆ ಸೆರೆಮನೆಗೆ ಕರೆದೊಯ್ಯಲಾಗಿದೆ. ವಾಸ್ತವದಲ್ಲಿ ಸೂರಿಂಜೆಯವರು ಸರ್ವೋಚ್ಛ ನ್ಯಾಯಾಲಯದ ಈ ಆದೇಶದ ಬಗ್ಗೆ ಪೋಲೀಸರ ಗಮನಕ್ಕೆ ತಂದರೂ ಅದನ್ನು ಪೋಲೀಸರು ಗಣನೆಗೆ ತೆಗೆದುಕೊಳ್ಳಲಿಲ್ಲ. ನ್ಯಾಯಾಲಯದಲ್ಲಿ ಹಾಜರು ಪಡಿಸುವಾಗ ಮಾತ್ರ ಕೈಕೋಳ ಸಡಿಲಿಸಲಾಗಿದೆ.

ಒಬ್ಬ ವ್ಯಕ್ತಿ ತಮ್ಮ ಕರ್ತವ್ಯವನ್ನು ಪಾಲಿಸಿದ್ದಕ್ಕೆ ಪೋಲೀಸರು ನೀಡಿದ ಈ ಕೊಡುಗೆಯ ಬಗ್ಗೆ ನಮಗೆ ಬೇಸರವಿದೆ. ಇದು ದೇಶದ ಪತ್ರಿಕಾ ಸ್ವಾತಂತ್ರದ ಮೇಲಿನ ದಾಳಿ ಎಂದು ನಾವು ಭಾವಿಸುತ್ತೇವೆ. ಪ್ರತಿಕಾ ಸ್ವಾತಂತ್ರವನ್ನು ಗೌರವಿಸುವ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ನಾವು ಈ ವಿಷಯದಲ್ಲಿ ತಮ್ಮ ಮಧ್ಯಪ್ರವೇಶವನ್ನು ಕೋರುತ್ತೇವೆ ಮತ್ತು..

  1. ನವೀನ್ ಸೂರಿಂಜೆ ಯವರು ಮತ್ತು ಇತರ ಪತ್ರಕರ್ತರ ಮೇಲೆ ಹೊರಿಸಿರುವ ಸುಳ್ಳು ಆರೋಪಗಳನ್ನು ಕೈ ಬಿಡಬೇಕು.
  2. ಶ್ರೀ.ನವೀನ್ ಸೂರೀಂಜೆಯವರ ಮೇಲೆ ಸುಳ್ಳು ಮೊಕದ್ದಮೆ ಹಾಕಿ ಅವರನ್ನೂ ದುಷ್ಕೃತ್ಯ ಎಸಗಿದವರ ಸಾಲಿಗೆ ಸೇರಿಸಿ ಚಾರ್ಜಷೀಟ್ ಹಾಕಿದ ಮತ್ತು ಸುಪ್ರೀಂ ಕೋರ್ಟ ನ ಆದೇಶವನ್ನು ಧಿಕ್ಕರಿಸಿ ಕೈಕೋಳ ಹಾಕಿದ ಪೋಲೀಸ್ ಅಧಿಕಾರಿಗಳನ್ನು ಶಿಕ್ಷಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ವಿನಂತಿಸುತ್ತೇವೆ.

ವಂದನೆಗಳೊಂದಿಗೆ,

ಡಾ.ಬರಗೂರು ರಾಮಚಂದ್ರಪ್ಪ, ಪ್ರೋ.ಜಿ.ಕೆ.ಗೋವಿಂದ ರಾವ್, ಪ್ರೋ.ಎಸ್.ಜಿ.ಸಿದ್ದರಾಮಯ್ಯ, ಶ್ರೀಮತಿ.ಬಿ,ಟಿ. ಲಲಿತಾನಾಯಕ್, ಟಿ.ಸುರೇಂದ್ರ ರಾವ್, ವಿಮಲಾ.ಕೆ.ಎಸ್.,  ಕೆ.ಎಸ್.ಲಕ್ಷ್ಮಿ.

ಪ್ರಜಾ ಸಮರ-10 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


ದಂಡಕಾರಣ್ಯವೆಂಬುದು ಇಂದು ಮಧ್ಯಭಾರತದ ನಾಲ್ಕು ರಾಜ್ಯಗಳ ನಡುವೆ ಹಂಚಿ ಹೋಗಿರುವ ಅರಣ್ಯವಾದರೂ ಇಂದಿಗೂ ಈ ಅರಣ್ಯದಲ್ಲಿ ವಾಸಿಸುವ ಎಪ್ಪತ್ತು ಲಕ್ಷ ಆದಿವಾಸಿ ಬುಡಕಟ್ಟು ಜನಾಂಗಗಳ ಪಾಲಿಗೆ ಒಂದೇ ತಾಯಿ ನೆಲವಾಗಿದೆ.

ಮಹಾರಾಷ್ಟ್ರದ ಗಡ್‌ಚಿರೋಲಿ, ಭಂಡಾರ, ಮಧ್ಯಪ್ರದೇಶದ ಬಾಳ್‌ಘಾಟ್, ರಾಜ್‌ನಂದನ್‌ಗಾವ್, ಛತ್ತೀಸ್ ಗಡದ ಕಂಕೇರ್, ಬಸ್ತಾರ್, ಒರಿಸ್ಸಾದ ದಂತೇವಾಡ, ಮಲ್ಕನ್ ಗಿರಿ ಎಂಬ ನಾಲ್ಕು ರಾಜ್ಯಗಳ ಎಂಟು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ದಂಡಕಾರಣ್ಯದ ಪ್ರಾಕೃತಿಕ ಸಂಪತ್ತು ಈಗ ಆದಿವಾಸಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ.

ಅರಣ್ಯದ ನಡುವೆ ಹರಿಯುವ ನದಿಗಳು, ಇಲ್ಲಿನ ಬಿದಿರು, ತೇಗ, ಹೊನ್ನೆ ಮರಗಳು, ಬೀಡಿ ತಯಾರಿಕೆಗೆ ಬಳಸಲಾಗುವ ತೆಂಡು ಮರದಎಲೆಗಳು, ಈ ನೆಲದ ಗರ್ಭದಡಿಯಲ್ಲಿ ಅಡಗಿರುವ ತಾಮ್ರ, ಕಲ್ಲಿದ್ದಲು, ಬಾಕ್ಷೈಟ್, ಗ್ರಾನೈಟ್ ಮತ್ತು ಮಾರ್ಬಲ್, ಲೈಮ್ ಸ್ಟೋನ್ ( ಸಿಮೆಂಟ್ ತಯಾರಿಕೆಗೆ ಬಳಸುವ ಸುಣ್ಣದ ಕಲ್ಲು) ಇವೆಲ್ಲವೂ ನಿರಂತರ ಲೂಟಿಯಾಗುತಿದ್ದು, ಇವುಗಳ ರಕ್ಷಕರಾಗಿ, ದಂಡಕಾರಣ್ಯದ ಮಕ್ಕಳಾಗಿ ಬದುಕಿದ್ದ ಗೊಂಡಾ ಮತ್ತು ಕೋಯಾ ಬುಡಕಟ್ಟು ಜನಾಂಗ ಸೇರಿದಂತೆ ಹಲವಾರು ಆದಿವಾಸಿಗಳು ಈಗ ತಮ್ಮ ಕಣ್ಣೆದುರುಗಿನ ದರೋಡೆಗೆ ಮೂಕ ಸಾಕ್ಷಿಗಳಾಗಿದ್ದಾರೆ. ದಂಡಕಾರಣ್ಯದ ನೈಸರ್ಗಿಕ ಸಂಪತ್ತು ಸ್ವಾತಂತ್ರ್ಯ ಪೂರ್ವದಲ್ಲಿ ಹೇಗಿತ್ತು ಎಂಬುದಕ್ಕೆ ಪ್ರಖ್ಯಾತ ಪಕ್ಷಿ ತಜ್ಞ ಸಲೀಂ ಅಲಿಯವರ ಆತ್ಮ ಕಥನ “The fall of a Sparrow” (ಒಂದು ಗುಬ್ಬಚ್ಚಿಯ ಪತನ) ಕೃತಿಯನ್ನು ನಾವು ಓದಬೇಕು. 1930ರ ದಶಕದಲ್ಲಿ ಈ ಪ್ರದೇಶಕ್ಕೆ ಪಕ್ಷಿಗಳ ಅಧ್ಯಯನಕ್ಕೆ ಹೋಗಿದ್ದ ಸಲೀಂ ಅಲಿಯವರು ಇಲ್ಲಿನ ಪಾಕೃತಿಕ ಸಂಪತ್ತು, ಬುಡಕಟ್ಟು ಜನಾಂಗ, ಅವರ ಸಂಸ್ಕೃತಿ ಎಲ್ಲವನ್ನೂ ವಿವರವಾಗಿ ಅಲ್ಲದಿದ್ದರೂ, ಸಾಂದರ್ಭಿಕವಾಗಿ ಪ್ರಸ್ತಾಪಿಸಿದ್ದಾರೆ.

ನಮ್ಮನ್ನಾಳುವ ಸರ್ಕಾರಗಳ ದಿವು ನಿರ್ಲಕ್ಷ್ಯ ಮತ್ತು ವಿಫಲತೆ ಹಾಗೂ ಜನಪ್ರತಿನಿಧಿಗಳ ಹಗಲು ದರೋಡೆಗೆ ಬೇಸತ್ತ ಇಲ್ಲಿನ ಆದಿವಾಸಿಗಳು ಮಾವೋವಾದಿ ನಕ್ಸಲರ ನೇತೃತ್ವದಲ್ಲಿ ಈಗ ತಮ್ಮದೇ ಆದ ಜನತಾ ಸರ್ಕಾರ ರಚಿಸಿಕೊಂಡು ಬದುಕಿತಿದ್ದಾರೆ. ದಂಡಕಾರಣ್ಯ ವ್ಯಾಪ್ತಿಯ 2,800 ಹಳ್ಳಿಗಳಲ್ಲಿ ಮಾವೋವಾದಿ ನಕ್ಷಲರ ನೇತೃತ್ವದ ಪರ್ಯಾಯ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಈ ಹಳ್ಳಿಗಳಿಗೆ ಯಾವೊಬ್ಬ ಜನಪ್ರತಿನಿಧಿ, ಸರ್ಕಾರಿ ನೌಕರ ಕಾಲಿಡಲಾಗದ ಪರಿಸ್ಥಿತಿ ಉದ್ಬವವಾಗಿದೆ. ತಮ್ಮ ಸುದೀರ್ಘ ಮೂರು ದಶಕಗಳ ಒಡನಾಟದಿಂದ ಮಾವೋವಾದಿ ನಕ್ಷಲರು ಇಲ್ಲಿನ ಜನರ ಪ್ರೀತಿ, ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರದೇಶಕ್ಕೆ ನೆರೆಯ ಆಂಧ್ರದಿಂದ 1980ರ ಜೂನ್ ತಿಂಗಳಿನಲ್ಲಿ ನಕ್ಸಲಿಯರು ಪ್ರಥಮ ಬಾರಿಗೆ ಕಾಲಿಟ್ಟರು. ಈ ಹಿಂದೆ ಪ್ರಸ್ತಾಪಿಸಿರುವ ಹಾಗೆ ಕೊಂಡಪಲ್ಲಿ ಸೀತಾರಾಮಯ್ಯನವರ ವೈದ್ಯೆ ಪುತ್ರಿಯಿಂದಾಗಿ ನಕ್ಸಲರು ದಂಡಕಾರಣ್ಯಕ್ಕೆ ಕಾಲಿಡಲು ಪ್ರೇರಣೆಯಾಯಿತು.

1980ರ ಏಪ್ರಿಲ್ 22ರಂದು, ಕೊಂಡಪಲ್ಲಿ ಸೀತಾರಾಮಯ್ಯ ಪ್ರಜಾಸಮರ ದಳವನ್ನು (ಸಿ.ಪಿ.ಐ. ಎಂ.ಎಲ್ ಬಣ) ವನ್ನು ಸ್ಥಾಪಿಸಿದ ನಂತರ ಉತ್ತರ ತೆಲಂಗಾಣ ಮತ್ತು ಅದಕ್ಕೆ ಹೊಂದಿಕೊಂಡಂತೆ ಇದ್ದ ಮಹಾರಾಷ್ರದ ಗಡ್‌ಚಿರೋಲಿ ಮತ್ತು ಬಸ್ತಾರ್ ವಲಯದ ( ಬಸ್ತಾರ್ ಈಗ ಛತ್ತೀಸ್‌ಘಡ ರಾಜ್ಯಕ್ಕೆ ಸೇರಿದೆ) ಆದಿವಾಸಿಗಳ ಪರವಾಗಿ ಹೋರಾಟ ನಡೆಸಲು ನಿರ್ಧರಿಸಿದರು. ಅಲ್ಲಿನ ಆದಿವಾಸಿಗಳು ಅರಣ್ಯ ಗುತ್ತಿಗೆದಾರರು ಮತ್ತು ಅರಣ್ಯಾಧಿಕಾರಿಗಳಿಂದ ತೀವ್ರವಾಗಿ ಶೋಷಣೆಗೆ ಒಳಗಾಗಿದ್ದರು. ಬೀಡಿ ತಯಾರಿಕೆ ಬಳಸಲಾಗುತಿದ್ದ ತಂಡು ಎಲೆಗಳ ಒಂದು ಕಟ್ಟಿಗೆ (ನೂರು ಎಲೆಗಳು) ಆದಿವಾಸಿಗಳಿಗೆ ಕೇವಲ 5 ಪೈಸೆ ನೀಡಲಾಗುತಿತ್ತು. ಪೇಪರ್ ತಯಾರಿಕೆಗೆ ಬಳಸುತಿದ್ದ ಮೂರು ಅಡಿ ಉದ್ದದ ಬಿದಿರಿನ ನೂರು ಬೊಂಬುಗಳ ಒಂದು ಕಟ್ಟಿಗೆ ಒಂದು ರೂಪಾಯಿಯನ್ನು ನೀಡಲಾಗುತಿತ್ತು. ಆದಿವಾಸಿಗಳಿಂದ ಪಡೆದ ತಂಡು ಎಲೆಗಳು ಮತ್ತು ಬಿದಿರು ಬೊಂಬುಗಳನ್ನು ಗುತ್ತಿಗೆದಾರರು ಶೇಕಡ ನೂರರಿಂದ ಇನ್ನೂರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತಿದ್ದರು. ದಿನಕ್ಕೆ ಒಮ್ಮೆ ಮಾತ್ರ ಉಪ್ಪು ಹಾಕಿದ ಜೋಳದ ಗಂಜಿ ಆದಿವಾಸಿಗಳ ಆಹಾರವಾಗಿತ್ತು. ಹಸಿವಾದಾಗಲೆಲ್ಲಾ ಅವರು ಅರಣ್ಯದಲ್ಲಿ ದೊರೆಯುವ ಹಣ್ಣು ಇಲ್ಲವೆ ಸೊಪ್ಪು, ಮತ್ತು ಗೆಡ್ಡೆಗಳನ್ನು ಆಯ್ದು ತಂದು ಬೇಯಿಸಿ ತಿನ್ನುವುದರ ಮೂಲಕ ತಮ್ಮ ಹಸಿವೆಯನ್ನು ನೀಗಿಸಿಕೊಳ್ಳುತಿದ್ದರು. ಈ ಬಡತನ ಮತ್ತು ಹಸಿವಿನ ನಡುವೆಯೂ ಗುತ್ತಿಗೆದಾರರು, ಸರ್ಕಾರಿ ನೌಕರರು ಇವರುಗಳ ಕಾಮ ತೃಷೆಗೆ ತಮ್ಮ ಹೆಣ್ಣು ಮಕ್ಕಳು ಬಲಿಯಾಗುತಿದ್ದಾಗ ಆದಿವಾಸಿಗಳು ಮೌನವಾಗಿ ಒಳಗೊಳೆಗೆ ಅತ್ತು ತಮ್ಮನ್ನು ತಾವೇ ಸಂತೈಸಿಕೊಳ್ಳುತಿದ್ದರು.

ಇದರ ನಡುವೆ ಕಾಡಿನ ಕಿರು ಉತ್ಪನ್ನಗಳ ಸಂಗ್ರಹಕ್ಕೆ ಅರಣ್ಯಕ್ಕೆ ಹೋದಾಗ ಅರಣ್ಯಾಧಿಕಾರಿಗಳಿಂದ ಕಿರುಕುಳ ಅನುಭವಿಸಬೇಕಾಗಿತ್ತು. ಹಲವು ವೇಳೆ ಕಾಡಿನ ನಡುವೆ ವಿರಳವಾದ ಪ್ರದೇಶದಲ್ಲಿ ಆದಿವಾಸಿಗಳು ಬೆಳೆದಿದ್ದ ಫಸಲನ್ನು ಆನೆಗಳಿಂದ ಧ್ವಂಸ ಮಾಡಿಸಿ ಕೈಗೆ ಬಂದ ಫಸಲು ಭಾಯಿಗೆ ಇಲ್ಲದಂತೆ ಮಾಡುತಿದ್ದರು. ಕಿರುಕುಳ ತಡೆಯಲು ಆದಿವಾಸಿಗಳು ಅಧಿಕಾರಿಗಳಿಗೆ ಕೋಳಿ, ಮೀನು ಇವುಗಳನ್ನು ಒದಗಿಸಬೇಕಾಗಿತ್ತು. ಕೆಲವು ವೇಳೆ ಈ ಮುಗ್ಧ ಜನತೆ ಸಂಗ್ರಹಿಸಿ ಇಟ್ಟಿದ್ದ ಮಸಾಲೆ ಪದಾರ್ಥಗಳು ( ಚಕ್ಕೆ ಲವಂಗ ಇತ್ಯಾದಿ) ಮತ್ತು ಹುಣಸೆ ಹಣ್ಣು ಇವುಗಳನ್ನು ಕೊಂಡೊಯ್ಯತಿದ್ದರು. ಮಧ್ಯ ಪ್ರದೇಶ ಸಕಾರವೊಂದೇ ಅರಣ್ಯದ ಕಿರು ಉತ್ಪನ್ನಗಳ ಗುತ್ತಿಗೆ ನೀಡುವುದರಿಂದ ವಾರ್ಷಿಕ 250 ಕೋಟಿ ಆದಾಯ ಪಡೆಯುತಿತ್ತು. ವಾಸ್ತವವಾಗಿ ದಂಡಕಾರಣ್ಯದ ಅರಣ್ಯದಲ್ಲಿ ಎರಡರಿಂದ ಮೂರು ಸಾವಿರ ಕೋಟಿ ಬೆಲೆ ಬಾಳುವ ಕಿರು ಉತ್ಪನ್ನಗಳು ಅರಣ್ಯ ಗುತ್ತಿಗೆ ಹೆಸರಿನಲ್ಲಿ ಲೂಟಿಯಾಗುತಿದ್ದವು. ಇವುಗಳಲ್ಲಿ ಸುಗಂಧ ತಯಾರಿಕೆಗೆ ಬಳಸಲಾಗುವ ಗಿಡಮೂಲಿಕೆಗಳು ಮತ್ತು ಸೋಪು ತಯಾರಿಕೆಗೆ ಬಳಸಲಾಗುತಿದ್ದ ಎಣ್ಣೆಯನ್ನು ಉತ್ಪತ್ತಿ ಮಾಡುತಿದ್ದ ಹಲವು ಜಾತಿಯ ಮರಗಳು ಗುತ್ತಿಗೆದಾರರ ಲಾಭಕೋರತನಕ್ಕೆ ಬಲಿಯಾದವು. ನಾಲ್ಕು ಸಾವಿರ ಚದುರ ಕಿಲೋಮೀಟರ್ ವ್ಯಾಪ್ತಿ ಪ್ರದೇಶದ 236 ಹಳ್ಳಿಗಳ 12 ಸಾವಿರ ಆದಿವಾಸಿಗಳಿಂದ 67 ವಿವಿಧ ಬಗೆಯ ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸಲಾಗುತಿತ್ತು.

ಇಂತಹ ಪರಿಸ್ಥಿತಿಯಲ್ಲಿ ನೆರೆಯ ಆಂಧ್ರದ ಉತ್ತರ ತೆಲಂಗಾಣದ ವಾರಂಗಲ್ ಕರೀಂನಗರ ಮತ್ತು ಅದಿಲಾಬಾದ್ ಹಾಗೂ ಕಮ್ಮಮ್ ಜಿಲ್ಲೆಗಳಿಂದ 1980ರ ಜೂನ್ ತಿಂಗಳಿನಲ್ಲಿ ಎರಡು ತಂಡಗಳಲ್ಲಿ ನಕ್ಸಲರು ಈ ಪ್ರದೇಶಕ್ಕೆ ಕಾಲಿಟ್ಟರು. ಒಂದು ತಂಡ ಬಸ್ತಾರ್ ವಲಯ ಪ್ರವೇಶಿಸಿದರೆ, ಇನ್ನುಂದು ಗಡ್‌ಚಿರೋಲಿ ಅರಣ್ಯ ಪ್ರದೇಶಕ್ಕೆ ಕಾಲಿಟ್ಟಿತು.

ಗಡ್ ಚಿರೋಲಿ ಅರಣ್ಯ ಪ್ರದೇಶಕ್ಕೆ ತನ್ನ ಸಹ ಕಾರ್ಯಕರ್ತರ ಜೊತೆ ಕಾಲಿಟ್ಟ ತಂಡದ ನಾಯಕ ಪೆದ್ದಿ ಶಂಕರ್ ಎಂಬ ದಲಿತ ಯುವಕ. ಈತನ ತಂದೆ ತೆಲಂಗಾಣ ಪ್ರಾಂತ್ಯದ ಸಿಂಗರೇಣಿ ಕಲ್ಲಿದ್ದಲು ಗಣಿಯಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತಿದ್ದ. ಕಲ್ಲಿದ್ದಲು ಗಣಿ ಕಾರ್ಮಿಕರ ಕೂಲಿ ದರ ಹೆಚ್ಚಳಕ್ಕಾಗಿ ನಕ್ಸಲರು ನಡೆಸಿದ ಹೋರಾಟದಿಂದ ಪ್ರಭಾವಿತನಾಗಿದ್ದ ಪೆದ್ದಿ ಶಂಕರ ಹೈಸ್ಕೂಲು ಶಿಕ್ಷಣ ಮುಗಿದ ಕೂಡಲೇ, ಪ್ರಜಾ ಸಮರಂ ಗ್ರೂಪ್ ನ ರ್‍ಯಾಡಿಕಲ್ ಯೂತ್ ಲೀಗ್ ಸಂಘಟನೆಯ ಸದಸ್ಯನಾಗಿ ಗುರುತಿಸಿಕೊಂಡು, ಖಾಸಾಗಿ ಬಸ್ ಒಂದರಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತಿದ್ದ.

ತನ್ನ ಹಳ್ಳಿಯಲ್ಲಿ ನಡೆದ ಒಂದು ಘಟನೆ ಅವನನ್ನು ಪೂರ್ಣಾವಧಿ ಮಾವೋವಾದಿ ನಕ್ಸಲನನ್ನಾಗಿ ಪರಿವರ್ತಿಸಿತು. ತನ್ನ ಹುಟ್ಟೂರಾದ ಅದಿಲಾಬಾದ್ ಜಿಲ್ಲೆಯ ಬೆಲಂಪಲ್ಲಿಯಲ್ಲಿ ತನ್ನ ಜಾತಿಗೆ ಸೇರಿದ ಇಬ್ಬರು ರೌಡಿಗಳು (ಕುಂಡೆಲ ಶಂಕರ ಮತ್ತು ದಸ್ತಗಿರಿ) ಊರ ಜನರು ಸೇರಿದಂತೆ ಮಹಿಳೆಯರಿಗೆ ಇನ್ನಿಲ್ಲದ ಕಿರುಕುಳ ನೀಡುತಿದ್ದರು. ಅವರ ವಿರುದ್ಧ ಮಾತನಾಡುವರೇ ಇಲ್ಲದ ಸ್ಥಿತಿಯಲ್ಲಿ ಪೆದ್ದಿ ಶಂಕರ ಮತ್ತು ಅವನ ಕಾಮ್ರೇಡ್ ಗೆಳೆಯರು ರೌಡಿಗಳಿಗೆ ಒಮ್ಮೆ ಎಚ್ಚರಿಕೆ ಕೊಟ್ಟಿದ್ದರು. ಆದರೂ ಸಹ ನಡುರಸ್ತೆಯಲ್ಲಿ ನಿಂತು ಮಹಿಳೆಯರನ್ನು ಅಶ್ಲೀಲ ಶಬ್ಧಗಳಿಂದ ಚುಡಾಯಿಸುವುದು ಮುಂದುವರಿದಾಗ, ಕೋಪಗೊಂಡ ಪೆದ್ದಿ ಶಂಕರ ತನ್ನ ಮಿತ್ರ ಗಜಲ್ಲ ಗಂಗಾರಾಮ್ ಜೊತೆ ಸೇರಿ ಹಾಡು ಹಗಲೇ ಇಬ್ಬರೂ ರೌಡಿಗಳನ್ನು ನಡುರಸ್ತೆಯಲ್ಲಿ ಕೊಚ್ಚಿ ಕೊಂದು ಬಿಸಾಕಿದ. ದಲಿತ ಯುವಕ ಪೆದ್ದಿಶಂಕರನ ಈ ಶೌರ್ಯ ಅವನ ಹುಟ್ಟೂರು ಸೇರಿದಂತೆ ಹಲವು ಹಳ್ಳಿಗಳಲ್ಲಿ ಪ್ರಶಂಸೆಗೆ ಪಾತ್ರವಾಯಿತು. ಈ ಘಟನೆಯ ನಂತರ ಸಿಂಗರೇಣಿ ಕಲ್ಲಿದ್ದಲು ಗಣಿಯಲ್ಲಿ ಮಹಿಳಾ ಕೂಲಿ ಕಾರ್ಮಿಕಳ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಕಂಪನಿಯನ್ನು ಮತ್ತು ಅಲ್ಲಿನ ಅಧಿಕಾರಿಗಳನ್ನು ಪ್ರತಿಭಟನೆಯ ಮೂಲಕ ಅಲುಗಾಡಿಸಿದ್ದ. ಅತ್ಯಾಚಾರವೆಸಗಿದ ಅಧಿಕಾರಿಯ ಮನೆಗೆ ನುಗ್ಗಿ ಇಡೀ ಮನೆಯನ್ನು ಧ್ವಂಸ ಮಾಡಿದ್ದ. ಇದಲ್ಲದೆ, 1978ರಲ್ಲಿ ಸಾವಿರಾರು ಅಡಿ ಆಳದ ಕಲ್ಲಿದ್ದಲ ಗಣಿಯಲ್ಲಿ ಸರಿಯಾದ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲದೆ ಅಮಾಯಕ ಅಶಿಕ್ಷಿತ ಕಾರ್ಮಿಕರು ದುಡಿಯುತ್ತಿರುವದನ್ನು ನೋಡಿದ್ದ ಶಂಕರ ಕಾರ್ಮಿಕರ ಮೂಲಭೂತ ಸೌಕರ್ಯಕ್ಕಾಗಿ ಕಂಪನಿಯ ವಿರುದ್ಧ ನಡೆಸಿದ ಬೃಹತ್ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸರ ಗೋಲಿಬಾರ್ ನಿಂದ ಇಬ್ಬರು ಕಾರ್ಮಿಕರು ಮೃತಪಟ್ಟರು. ಪೊಲೀಸರು ಪೆದ್ದಿ ಶಂಕರ್ ವಿರುದ್ಧ ಡಕಾಯಿತಿ, ಕೊಲೆ ಯತ್ನ ಮತ್ತು ಹಿಂಸೆಗೆ ಪ್ರಚೋದನೆ ನೀಡಿದ ಆರೋಪ ಮುಂತಾದ ಮೊಕದ್ದಮೆಗಳನ್ನು ದಾಖಲಿಸಿದರು. ಇದರಿಂದಾಗಿ ಪೆದ್ದಿ ಶಂಕರ್ ಅನಿವಾರ್ಯವಾಗಿ ಭೂಗತನಾಗುವುದರ ಮೂಲಕ ನಕ್ಸಲ್ ಹೋರಾಟಕ್ಕೆ ದುಮುಕಿ ಬಂದೂಕವನ್ನು ಕೈಗೆತ್ತಿಕೊಂಡಿದ್ದ.

1980ರ ಜೂನ್ ತಿಂಗಳಲ್ಲಿ ಗೋದಾವರಿ ನದಿಯನ್ನು ದಾಟಿ ಮಹರಾಷ್ಟ್ರದ ಚಂದ್ರಾಪುರ ಅರಣ್ಯ ಪ್ರವೇಶಿಸಿದ ಪೆದ್ದಿಶಂಕರ ಮತ್ತು ಅವನ ತಂಡ ಪ್ರಾರಂಭದಲ್ಲಿ ಮೂರು ಹಳ್ಳಿಗಳಲ್ಲಿ ವಾಸವಾಗಿದ್ದ ಸುಮಾರು 700 ಗೊಂಡಾ ಆದಿವಾಸಿಗಳ ಜೊತೆ ಅವರುಗಳ ಗೊಂಡಾ ಭಾಷೆಯಲ್ಲಿ ಮಾತನಾಡುತ್ತಾ, ಅರಣ್ಯ ಗುತ್ತಿಗೆದಾರರು ಮತ್ತು ಹಣದ ಲೇವಾದೇವಿದಾರರು ಹೇಗೆ ಸುಲಿಯುತಿದ್ದಾರೆ ಎಂಬುದನ್ನು ವಿವರಿಸಿ, ಅವರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದರು. ಆದಿವಾಸಿಗಳ ವಿಶ್ವಾಸ ಗಳಿಸಿದ ನಂತರ ಮೊಯಿನ್‌ಬಿನ್‌ಪೆಟ್ಟ, ಬೌರ ಮತ್ತು ಪೈಡ್‌ಗನ್ ಎಂಬ ಮೂರು ಹಳ್ಳಿಗಳಲ್ಲಿ ವಾಸಿಸುತ್ತಾ ಆದಿವಾಸಿಗಳನ್ನು ಹೋರಾಟಕ್ಕೆ ಅಣಿಗೊಳಿಸಿದರು. ದುರಾದೃಷ್ಟವಶಾತ್ ಅದೇ ವರ್ಷ ನವಂಬರ್ 2ರಂದು ಪೆದ್ದಿ ಶಂಕರ ಮಹಾರಾಷ್ಟ್ರ ಪೊಲೀಸರ ಗುಂಡಿಗೆ ಬಲಿಯಾಗಬೇಕಾಯಿತು. ಅಂದು ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯದಲ್ಲಿ ಮೊಯಿನ್‌ಬಿನ್‌ಪೆಟ್ಟ ಹಳ್ಳಿಗೆ ಶಂಕರ ಮತ್ತು ಅವನ ತಂಡ ಊಟಕ್ಕಾಗಿ ಬರುತ್ತಿರುವ ಬಗ್ಗೆ ಜಮೀನ್ದಾರನೊಬ್ಬನ ಸೇವಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಊಟ ಮುಗಿಸಿ ಶಂಕರ ಮತ್ತು ಅವನ ನಾಲ್ವರು ಸಂಗಾತಿಗಳು ಹೊರಡುತಿದ್ದಂತೆ ಶಂಕರನ ತಂಡಕ್ಕೆ ಪೊಲೀಸರು ಎದುರಾದರು. ಅವರಿಂದ ತಪ್ಪಿಸಿಕೊಂಡು ಓಡುತಿದ್ದಾಗ, ಪೊಲೀಸರು ಹಾರಿಸಿದ ಗುಂಡು ಪೆದ್ದಿಶಂಕರನ ಬೆನ್ನಿಗೆ ತಾಗಿ ಜೋಳದ ಹೊಲದಲ್ಲಿ ಮಕಾಡೆ ಬಿದ್ದುಬಿಟ್ಟ. ಉಳಿದ ನಾಲ್ವರು ಸಂಗಾತಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೂರು ದಿನಗಳ ಕಾಲ ಸ್ಥಳಿಯ ಶಾಲೆಯೊಂದರಲ್ಲಿ ಶಂಕರನ ಶವವನ್ನು ಆದಿವಾಸಿಗಳು ಸರಂಕ್ಷಿಸಿ ಕಾಯ್ದಿದ್ದರು. ನಂತರ ಮಹಾರಾಷ್ಟ್ರ ಪೊಲೀಸರು ತಮ್ಮ ವಶಕ್ಕೆ ಪಡೆದು ಅಂತ್ಯ ಸಂಸ್ಕಾರ ಮಾಡಲು ಮುಂದಾದಾಗ ಪ್ರತಿಭಟಿಸಿದ ಆದಿವಾಸಿಗಳು ಪೊಲೀಸರಿಂದ ಶಂಕರನ ಶವವನ್ನು ಮರಳಿ ಪಡೆದು ಶಂಕರನಿಗೆ ಗುಂಡೇಟು ಬಿದ್ದ ಜಾಗದಲ್ಲೇ ಅಂತ್ಯಸಂಸ್ಕಾರ ನೆರೆವೇರಿಸಿದರು. ಮಗನ ಸಾವಿನ ಸುದ್ಧಿ ತಂದೆಗೆ ಹತ್ತು ದಿನಗಳ ನಂತರ ತಿಳಿಯಿತು. ಅದಿಲಾಬಾದ್‌ನಿಂದ ಬಂದಿದ್ದ ಶಂಕರನ ತಂದೆ, ತನ್ನ ಮಗ ಪೊಲೀಸರ ಗುಂಡಿಗೆ ಬಲಿಯಾದ ಜೋಳದ ಹೊಲದ ಭೂಮಿಯಲ್ಲಿ ಶವಸಂಸ್ಕಾರ ಮಾಡಿದ್ದ ಪೂಜೆ ಸಲ್ಲಿಸಿ ಹಿಂತಿರುಗಿದ. ಮಹಾರಾಷ್ಟ್ರ ಸರ್ಕಾರ ಶಂಕರನ ಮೇಲೆ ಗುಂಡು ಹಾರಿಸಿದ ಪೊಲೀಸ್ ಪೇದೆ ಚಂದ್ರಿಕದೀಪ್ ರಾಯ್ ಎಂಬಾತನಿಗೆ ಐನೂರು ರೂಪಾಯಿ ಬಹುಮಾನ ಮತ್ತು ಆತನ ಜೊತೆಗಿದ್ದವರಿಗೆ ತಲಾ ನೂರು ಬಹುಮಾನ ಘೋಷಿಸಿತು.

ಆಂಧ್ರಪ್ರಧೇಶದಿಂದ ದಂಡಕಾರಣ್ಯ ವಲಯಕ್ಕೆ ತನ್ನ ಕಾರ್ಯಚಟುವಟಿಕೆ ವಿಸ್ತರಿಸಿದ ಪ್ರಜಾಸಮರಂ ಗುಂಪಿನ ಮೊದಲ ಬಲಿಯಾಗಿ ಪೆದ್ದಿ ಶಂಕರ ಪ್ರಾಣ ತೆತ್ತ ಘಟನೆ ಪರೋಕ್ಷವಾಗಿ ಗೊಂಡಾ ಆದಿವಾಸಿಗಳಲ್ಲಿ ನಕ್ಸಲರ ಬಗ್ಗೆ, ಅವರ ಬದ್ಧತೆ ಕುರಿತಂತೆ ವಿಶ್ವಾಸ ಮೂಡಲು ಕಾರಣವಾಯಿತು. ಪೆದ್ದಿಶಂಕರನ ಸಾವಿನಿಂದ ಮಹರಾಷ್ಟ್ರದಲ್ಲಿ ನಕ್ಸಲ್ ಚಳುವಳಿ ತಲೆಯೆತ್ತುವುದಿಲ್ಲ ಎಂದು ನಂಬಿದ್ದ ಪೊಲೀಸರ ಲೆಕ್ಕಾಚಾರವೆಲ್ಲಾ ಸಂಪೂರ್ಣ ತಲೆಕೆಳಗಾಯಿತು. ಮಹರಾಷ್ಟ್ರದ ನಕ್ಸಲ್ ಪೀಡಿತ ಜಿಲ್ಲೆಗಳ ಪೈಕಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಗಡ್‌ಚಿರೋಲಿ ಜಿಲ್ಲೆ ಇವತ್ತಿಗೂ ಮುಂಚೂಣಿಯಲ್ಲಿದೆ.

(ಮುಂದುವರೆಯುವುದು)

ಒಂದು ಗಲ್ಲು ಶಿಕ್ಷೆ

ಮೂಲ : ಜಾರ್ಜ್ ಆರ್ವೆಲ್
ಅನುವಾದ : ಬಿ.ಶ್ರೀಪಾದ ಭಟ್

ಮಳೆಯಲ್ಲಿ ತೊಯ್ದ ಬರ್ಮಾದ ಜೈಲಿನ ಆವರಣದ ಒಂದು ಬೆಳಗಿನ ಜಾವ. ಎತ್ತರದ ಜೈಲು ಗೋಡೆಗಳ ಮೇಲೆ ಸಣ್ಣದಾದ ಬೆಳಕು ನರ್ತಿಸುತ್ತಿತ್ತು. ಪ್ರಾಣಿಗಳ ಪಂಜರದಂತಿರುವ ಉಕ್ಕಿನ ಸರಳುಗಳ ಸಣ್ಣ ಸಣ್ಣ ಸೆಲ್‌ಗಳ ಮುಂದೆ ನಾವೆಲ್ಲ ಕಾಯುತ್ತಿದ್ದೆವು. ಆ ಉಕ್ಕಿನ ಸರಳುಗಳೊಳಗೆ ಮುಂದಿನ ಕೆಲವು ವಾರಗಳೊಳಗೆ ಗಲ್ಲು ಶಿಕ್ಷೆಗೆ ಗುರಿಯಾಗಲಿದ್ದ ಖೈದಿಗಳು ಜೈಲಿನ ಕಂಬಳಿಯನ್ನು ಹೊದ್ದು ಸಣ್ಣದಾದ ಹರಟೆಯಲ್ಲಿ ತೊಡಗಿದ್ದರು. ಕೃಶ ಕಾಯದ, ಸಣ್ಣ ಆಕೃತಿಯ, ಚಂಚಲ ಕಣ್ಣುಗಳ ಹಿಂದೂ ಖೈದಿಯೊಬ್ಬನನ್ನು ಆ ಉಕ್ಕಿನ ಸರಳುಗಳ ಸೆಲ್‌ನಿಂದ ಹೊರ ಕರೆತಂದರು.ಈ ಖೈದಿಯು ದಟ್ಟವಾದ ಹುರಿಮೀಸೆಯನ್ನು ಬೆಳೆಸಿದ್ದ. ಆದರೆ ಆತನ ಕೃಶ ಶರೀರಕ್ಕೆ ಸ್ವಲ್ಪವೂ ಹೊಂದಿಕೆಯಾಗದ ಈ ದಟ್ಟವಾದ ಹುರಿಮೀಸೆ ಆತನ ವ್ಯಕ್ತಿತ್ವಕ್ಕೆ ಚಲನಚಿತ್ರದ ಹಾಸ್ಯ ಪಾತ್ರಧಾರಿಯ ಸ್ವರೂಪವನ್ನು ನೀಡಿತ್ತು. ಆತನನ್ನು ಸುತ್ತುವರಿದ ಆರು ಭಾರತೀಯ ಕಾವಲುಗಾರರು ಈ ಖೈದಿಯನ್ನು ನೇಣುಗಂಬಕ್ಕೆ ಅಣಿಗೊಳಿಸುತ್ತಿದ್ದರು. ಅವರಲ್ಲಿ ಇಬ್ಬರು ಬಂದೂಕುಧಾರಿಗಳು ಆ ಖೈದಿಯನ್ನು ಸುತ್ತುವರೆದಿದ್ದರೆ ಉಳಿದ ಕಾವಲುಗಾರರು ಆತನ ಎರಡೂ ಕೈಗಳನ್ನು ಹಿಂದಕ್ಕೆ ಮಡಚಿ, ಆತನ ಮುಂಗೈಗಳಿಗೆ ಕೋಳವನ್ನು ತೊಡಿಸುತ್ತಿದ್ದರು. ಆ ಆರೂ ಮಂದಿ ಬಂದೂಕುಧಾರಿ ಕಾವಲುಗಾರರು ಆ ಖೈದಿಯ ಭುಜದ ಮೇಲೆ ಕೈ ಹಾಕಿ ಆತನ ಸುತ್ತಲೂ ಘೇರಾಯಿಸುತ್ತಾ ಆತ ತಮ್ಮ ಸುಪರ್ದಿಯೊಳಗಿದ್ದಾನೆಂಬ ಭರವಸೆಯಿಂದಿದ್ದರು. ಈ ದೃಶ್ಯವು ಕೈಗೆ ಸಿಕ್ಕ ಜೀವಂತ ಮೀನು ಮರಳಿ ನೀರಿಗೆ ಹಾರದಂತೆ ಅದನ್ನು ಕಾಯುತ್ತಿರುವಂತಿತ್ತು. ಆದರೆ ಯಾವುದೇ ಪ್ರತಿರೋಧ ತೋರದೆ ಆ ಗಲ್ಲು ಶಿಕ್ಷೆಗೆ ಗುರಿಯಾದ ಖೈದಿಯು ಅತ್ಯಂತ ನಿರ್ಲಿಪ್ತನಾಗಿ, ನಿಶ್ಚಲ ಸ್ಥಿತಿಯಲ್ಲಿ ನಿಂತಿದ್ದ. ಎಂಟು ಘಂಟೆಯೆಂದು ನೆನಪಿಸುವಂತೆ ಆ ತೇವವಾದ ಗಾಳಿಯಿಂದ ಕಹಳೆಯ ಶಬ್ದವೊಂದು ತೇಲಿಬಂತು. ತನ್ನ ಮೊನಚಾದ ಬಡಿಗೆಯಿಂದ ಸಣ್ಣ ಸಣ್ಣ ಬೆಣಚು ಕಲ್ಲುಗಳೊಂದಿಗೆ ಆಟವಾಡುತ್ತಿದ್ದ ಜೈಲಿನ ಸೂಪರಿಂಡೆಂಟ್ ಆ ಸೈರನ್‌ನ ಶಬ್ದಕ್ಕೆ ತಲೆಯೆತ್ತಿದ. ಸೇನೆಯ ವೈದ್ಯನಾಗಿದ್ದ ಈ ಜೈಲಿನ ಸೂಪರಿಂಡೆಂಟ್, “ಫ್ರಾನ್ಸಿಸ್, ಬೇಗನೇ ತಯಾರಾಗು! ಆಗಲೇ ಎಂಟು ಹೊಡೆಯಿತು. ಇಷ್ಟರಲ್ಲಾಗಲೇ ಈ ಖೈದಿಯು ಗಲ್ಲಿಗೇರಬೇಕಿತ್ತು.” ಎಂದು ಅಸಹನೆಯಿಂದ ಗೊಣಗುತ್ತಿದ್ದ. ಶ್ವೇತ ವಸ್ತ್ರವನ್ನು ಧರಿಸಿದ್ದ, ಕಪ್ಪನೆಯ ಮುಖ್ಯ ಜೈಲರ್ ಫ್ರಾನ್ಸಿಸ್ ತನ್ನ ಬಂಗಾರದ ಕನ್ನಡಕವನ್ನು ಸರಿಪಡಿಸಿಕೊಳ್ಳುತ್ತ, “ಆಯ್ತು ಸರ್! ಎಲ್ಲವನ್ನೂ ಸಮಾಧಾನಕರವಾಗಿ ಅಣಿಗೊಳಿಸಲಾಗಿದೆ. ಹ್ಯಾಂಗ್‌ಮನ್ ಸಹ ತಯಾರಿದ್ದಾನೆ. ನಾವಿನ್ನು ಶುರು ಮಾಡಬಹುದು,” ಎಂದು ಉತ್ತರಿಸಿದ.

“ಸರಿ ಹಾಗಾದರೆ. ಬೇಗ ನಡೆಯಿರಿ. ಗಲ್ಲಿಗೇರಿಸುವವರೆಗೂ ಉಳಿದ ಖೈದಿಗಳಿಗೆ ಬೆಳಗಿನ ಉಪಾಹಾರ ದೊರಕದು.”

ನಾವೆಲ್ಲರೂ ನಿಧಾನವಾಗಿ ನೇಣುಗಂಬದೆಡೆಗೆ ಹೆಜ್ಜೆ ಹಾಕತೊಡಗಿದೆವು. ಇಬ್ಬರು ಬಂದೂಕುಧಾರಿ ಕಾವಲುಗಾರರು ಆ ಖೈದಿಯ ಎರಡೂ ಕಡೆಗೆ ಸುತ್ತುವರೆದು ಎಚ್ಚರಿಕೆಯಿಂದ ಹೆಜ್ಜೆಯಿಡುತ್ತಿದ್ದರು. ನಾವೆಲ್ಲ ಇವರ ಹಿಂದೆ ಹೆಜ್ಜೆ ಹಾಕುತ್ತಿದ್ದೆವು. ಹಲವು ಮಾರು ದೂರ ಕ್ರಮಿಸುತ್ತಿದ್ದಂತೆಯೇ ಯಾವುದೇ ಆಜ್ಞೆ ಇಲ್ಲದೆ ನಮ್ಮ ಈ ಮೆರವಣಿಗೆ ಅನೀರೀಕ್ಷಿತವಾಗಿ ಸ್ಥಗಿತಗೊಂಡಿತು. ನಾವೆಲ್ಲ ನೋಡುತ್ತಿದ್ದಂತೆಯೇ ನಾಯಿಯೊಂದು ಬೊಗಳುತ್ತ ನಮ್ಮ ಮುಂದೆ ಪ್ರತ್ಯಕ್ಷವಾಯಿತು. ಇಷ್ಟೊಂದು ಜನರನ್ನು ಒಟ್ಟಿಗೆ ನೋಡಿ ಕ್ರೂರವಾಗಿ ದಿಟ್ಟಿಸುತ್ತ ನಮ್ಮ ಸುತ್ತಲೂ ಅಸಹನೆಯಿಂದ ಕುಪ್ಪಳಿಸತೊಡಗಿತು. ಕೆರಳಿದಂತಿದ್ದ ಈ ಕಂತ್ರಿ ನಾಯಿಯು ನಮ್ಮಲ್ಲೆರ ಊಹೆಗೂ ಮೀರಿ ಕೋಳಗಳಿಂದ ಬಂಧಿತನಾಗಿದ್ದ ಖೈದಿಯ ಮೇಲೆರೆಗಿ ಆತನ ಮುಖವನ್ನು ನೆಕ್ಕತೊಡಗಿತು. ದಿಗ್ಭ್ರಮೆಗೊಂಡ ನಾವೆಲ್ಲ ನಿಶ್ಚಲರಾಗಿ ನಿಂತಿದ್ದೆವು.

ಜೈಲಿನ ಸೂಪರಿಂಟೆಂಟ್ ಸಿಟ್ಟಿನಿಂದ ಕೂಗಾಡತೊಡಗಿದ. ಬಂದೂಕುಧಾರಿ ಕಾವಲುಗಾರನೊಬ್ಬ ಬೆಣಚು ಕಲ್ಲುಗಳನ್ನು ತೂರುತ್ತ ಕಂತ್ರಿ ನಾಯಿಯನ್ನು ಅಲ್ಲಿಂದ ಓಡಿಸಲು ಯತ್ನಿಸುತ್ತಿದ್ದ. ಇಡೀ ಸನ್ನಿವೇಶವನ್ನು ಈ ಕಂತ್ರಿ ನಾಯಿಯು ತನ್ನೆಡೆಗೆ ಸೆಳೆದುಕೊಂಡು ಕೆಲಕಾಲ ಅಸಂಗತತೆಯನ್ನು ಸೃಷ್ಟಿಸಿತ್ತು. ಆದರೆ ಇಡೀ ಸನ್ನಿವೇಶದ ಕೇಂದ್ರವಾಗಿದ್ದ ಖೈದಿ ಮಾತ್ರ ಇದಾವುದರಿಂದಲೂ ವಿಚಲಿತನಾಗದೆ ನಿರ್ವಿಕಾರದಿಂದಿದ್ದ. ಬಹುಶಃ ಈ ಘಟನೆಯೂ ಸಹ ಗಲ್ಲಿಗೇರಿಸುವ ಪ್ರಕ್ರಿಯೆಯ ಭಾಗವೆಂದು ಆತನಿಗೆ ಅನಿಸಿರಬಹುದೇನೊ. ಕಡೆಗೆ ಆ ಕಂತ್ರಿ ನಾಯಿಯ ಕೊರಳ ಪಟ್ಟಿಗೆ ಕಾಲರನ್ನೊಂದು ಬಿಗಿದು ಜೊತೆಗೆ ಎಳೆದೊಯ್ಯಲಾಯಿತು. ಇಷ್ಟಾದರೂ ಆ ಕಂತ್ರಿ ನಾಯಿಯು ಗುರುಗುಟ್ಟುತ್ತ, ನೆಗೆಯುತ್ತಾ, ಕುಣಿಯುತ್ತಲೇ ಇತ್ತು.

ನೇಣುಗಂಬ ಸುಮಾರು ನಲವತ್ತು ಮಾರು ದೂರದಲ್ಲಿತ್ತು. ಈ ಮೆರವಣಿಗೆಯನ್ನು ಹಿಂಬಾಲಿಸುತ್ತಿದ್ದ ನಾನು ನನ್ನ ಮುಂದೆ ನಡೆಯುತ್ತಿದ್ದ ಖೈದಿಯನ್ನು ಸೂಕ್ಷ್ಮವಾಗಿ ಗಮನಿಸಿದೆ. ತನ್ನ ಮೋಟುಗೈಯೊಂದಿಗೆ ಅಡ್ಡಾದಿಡ್ಡಿಯಾಗಿ ನಡೆಯುತ್ತಿದ್ದರೂ ಆತನ ಹೆಜ್ಜೆಯಲ್ಲಿ ಸ್ಥಿರತೆ ಇತ್ತು. ಮೊಣಕಾಲುಗಳು ಬಾಗಿದ್ದರೂ ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡುತ್ತಿದ್ದ. ನಡೆಯುವ ದಾರಿಯಲ್ಲಿ ಕೆಸರಿನ ಗುಂಡಿಗಳು, ಉಬ್ಬು ಬಂಡೆಗಳು ಎದುರಾದಾಗ ತನ್ನನ್ನು ಸುತ್ತುವರೆದಿದ್ದ ಬಂದೂಕಧಾರಿಗಳ ನಡುವೆಯೂ ಆ ಕೆಸರಿನ ಗುಂಡಿಗಳಲ್ಲಿ ಕಾಲಿಡದಂತೆ, ಉಬ್ಬು ಬಂಡೆಗಳನ್ನು ಎಡವದಂತೆ ಪಕ್ಕಕ್ಕೆ ಸರಿದು ನಾಜೂಕಾಗಿ ಮುನ್ನಡೆಯುತ್ತ್ತಿದ್ದ. ನಾನು ದಿಗ್ಭ್ರಮೆಗೊಂಡಿದ್ದೆ. ನೇಣುಗಂಬಕ್ಕೇರುತ್ತಿರುವ ವ್ಯಕ್ತಿ ತನ್ನ ಪಾದಗಳಿಗೆ ಕೆಸರು ಅಂಟಬಾರದೆಂದು, ಬಂಡೆಗಳನ್ನು ಎಡವಬಾರದೆಂದು ಎಚ್ಚರಿಕೆ ವಹಿಸುವ ದೃಶ್ಯವನ್ನು ಕಣ್ಣಾರೆ ಕಂಡಾಗ ಜೀವನವನ್ನು ತುಂಬಿಕೊಂಡಿರುವ ವ್ಯಕ್ತಿಯೊಬ್ಬನ ಜೀವವನ್ನು ಮೊಟುಕುಗೊಳಿಸುವ ನಮ್ಮ ಕೃತ್ಯದಲ್ಲಿ ಬಲು ದೊಡ್ಡ ದೋಷವಿದೆಯೆಂದು ನನ್ನ ಅಂತರಾತ್ಮ ಕೂಗುತ್ತಿತ್ತು. ಆ ಖೈದಿಯ ಕಣ್ಣುಗಳು ಬೆಣಚು ಕಲ್ಲುಗಳನ್ನು, ಕಂದು ಗೋಡೆಗಳನ್ನು ಗಮನಿಸುತ್ತಿದ್ದವು. ಆತನ ಮಿದುಳು ಕೆಸರಿನ ಗುಂಡಿಗಳನ್ನು ಕುರಿತಾಗಿ ಎಚ್ಚರಿಸುತ್ತಿತ್ತು. ಆತ ಮತ್ತು ನಾವೆಲ್ಲ ಒಟ್ಟಾಗಿ ಒಂದೇ ಜಗತ್ತಿನಲ್ಲಿ ನಡೆಯುತ್ತಿದ್ದೆವು, ಕೇಳುತ್ತಿದ್ದೆವು, ಗ್ರಹಿಸುತ್ತಿದ್ದೆವು. ಆದರೆ ಮುಂದಿನ ಕೆಲವು ನಿಮಿಷಗಳಲ್ಲಿ, ಒಂದೇ ಒಂದು ಕ್ಲಿಕ್ಕಿನಲ್ಲಿ ಒಂದು ಜೀವ ಕಡಿಮೆಯಾಗುತ್ತದೆ, ಒಂದು ಜಗತ್ತು ಕಡಿಮೆಯಾಗುತ್ತದೆ.

ಒಂದು ಸಣ್ಣ ಬಯಲಿನಲ್ಲಿ ನೇಣುಗಂಬವು ಪ್ರತ್ಯೇಕವಾಗಿ ನೆಲೆ ನಿಂತಿತ್ತು. ಮೇಲಿನ ಎರಡು ಉಕ್ಕಿನ ಕಂಬಗಳ ನಡುವೆ ಹಗ್ಗದ ಕುಣಿಕೆಯೊಂದು ನೇತಾಡುತ್ತಿತ್ತು. ನೇಣುಗಂಬದ ಬಳಿ ಕಾಯುತ್ತಿದ್ದ ಬಿಳಿಯ ಸಮವಸ್ತ್ರದಲ್ಲಿರುವ ಹ್ಯಾಂಗ್‌ಮನ್ ದಾಸ್ಯದ ವಿನಯದ ಮೂಲಕ ನಮ್ಮನ್ನು ಸ್ವಾಗತಿಸಿದ. ಜೈಲರ್ ಫ್ರಾನ್ಸಿಸ್‌ನ ಆದೇಶದಂತೆ ಬಂದೂಕುಧಾರಿ ಕಾವಲುಗಾರರು ಖೈದಿಯನ್ನು ಅಡ್ಡಾದಿಡ್ಡಿಯಾಗಿ ಮೇಲೆತ್ತಿ ನೇಣುಗಂಬದ ಬಳಿ ನಿಲ್ಲಿಸಿದರು. ನಂತರ ಹ್ಯಾಂಗ್‌ಮನ್ ಮೇಲೇರಿ ನೇಣಿನ ಕುಣಿಕೆಯನ್ನು ಖೈದಿಯ ಕೊರಳ ಸುತ್ತ ಬಿಗಿಗೊಳಸಿದ.

ನಾವು ಕೆಲ ಮಾರುಗಳ ದೂರದಲ್ಲಿ ನಿಂತು ಕಾಯುತ್ತಿದ್ದೆವು. ಬಂದೂಕುಧಾರಿ ಕಾವಲುಗಾರರು ನೇಣುಗಂಬದ ಸುತ್ತ ಒಂದು ವೃತ್ತವಾಗಿ ಸುತ್ತುವರೆದರು. ಕುಣಿಕೆಯು ತನ್ನ ಕೊರಳಿನ ಸುತ್ತ ಬಿಗಿಗೊಳ್ಳತೊಡಗಿದಾಗ ಖೈದಿಯು “ರಾಮ!ರಾಮ! ರಾಮ!” ಎಂದು ಎತ್ತರದ ಧ್ವನಿಯಲ್ಲಿ ನಿರಂತರವಾಗಿ ರೋಧಿಸಲಾರಂಬಿಸಿದ. ಆದರೆ ಧ್ವನಿಯಲ್ಲಿ, ರೋಧನೆಯಲ್ಲಿ ಭಯವಿರಲಿಲ್ಲ. ಸಹಾಯಕ್ಕಾಗಿ ಮೊರೆತವಿರಲಿಲ್ಲ. ಬದಲಾಗಿ ಒಂದು ಬಗೆಯ ಗಂಟೆಯ ನಾದದಂತಿತ್ತು. ಧ್ವನಿಯಲ್ಲಿ ಲಯಬದ್ಧತೆಯಿತ್ತು. ಈ ಧ್ವನಿಗೆ ಹತ್ತಿರದಲ್ಲಿದ್ದ ನಾಯಿಯು ಊಳಿಡುವಿಕೆಯ ಮೂಲಕ ಪ್ರತ್ಯುತ್ತರಿಸುತಿತ್ತು. ನೇಣುಗಂಬದ ಬಳಿ ನಿಂತಿದ್ದ ಹ್ಯಾಂಗ್‌ಮನ್ ಕಪ್ಪನೆಯ ಮುಸುಗನ್ನು ಹೊರತೆಗೆದು ಖೈದಿಯ ಮುಖದ ಮೇಲೆ ಹೊದಿಸಿದ. ಆ ಮುಸುಗನ್ನು ತೂರಿಕೊಂಡು “ರಾಮ! ರಾಮ! ರಾಮ!” ಶಬ್ದವು ಕೇಳಿಸುತ್ತಿತ್ತು.

ಹ್ಯಾಂಗ್‌ಮಾನ್ ನೇಣುಗಂಬದಿಂದ ಕೆಳಗಿಳಿದು ಬಂದು ಮೀಟುಗೋಲನ್ನು ಧೃಡವಾಗಿ ಬಳಸಿ ನಿಂತುಕೊಂಡ. ಖೈದಿಯಿಂದ ಎಲ್ಲಿಯೂ ತೊದಲದೆ ರೋದನೆ ಮುಂದುವರೆದಿತ್ತು. ಸೂಪರಿಂಡೆಂಟ್ ತನ್ನ ಬಡಿಗೆಯನ್ನು ನೆಲಕ್ಕೆ ತಟ್ಟುತ್ತ ಖೈದಿಯ ರೋದನವನ್ನು ಎಣಿಸುತ್ತಿದ್ದ. ಒಂದು, ಎರಡು…ಬಹುಶಃ ನೂರರವರೆಗೆ. ಅಲ್ಲಿರುವ ಪ್ರತಿಯೊಬ್ಬರ ಬಣ್ಣ ಬದಲಾಗುತ್ತಿತ್ತು.

ನಮ್ಮೆಲ್ಲರ ಮನಸಿನಲ್ಲಿ ತಲ್ಲಣಗಳುಂಟಾತೊಡಗಿತು. “ದಯವಿಟ್ಟು ಮುಗಿಸಿಬಿಡಿ! ಕೊನೆಗೊಳಸಿ ಜಿಗುಪ್ಸೆ ಹುಟ್ಟಿಸುವ ಈ ರೋದನೆಯನ್ನು!”

ಹಠಾತ್ತಾಗಿ ಸೂಪರಿಂಟೆಂಡೆಂಟ್ ತಲೆಯೆತ್ತಿ ತನ್ನ ಬಡಿಗೆಯನ್ನು ಗಾಳಿಯಲ್ಲಿ ಆಡಿಸುತ್ತ “ನಡೆಯಿರಿ” ಎಂದು ಆವೇಶದಿಂದ ಅಬ್ಬರಿಸಿದ.

ಅಗ ಝಣಗುಟ್ಟುವ ಮೌನ, ನಂತರ ನೀರವ ಮೌನ. ಖೈದಿಯು ಅಸ್ತಂಗತನಾಗಿದ್ದ, ಮತ್ತು ನೇಣಿನ ಕುಣಿಕೆಯು ಅಲ್ಲಿಯೇ ತಿರುಗುತ್ತಿತ್ತು. ನಾನು ನಾಯಿಯನ್ನು ಕಳಚಿದೆ. ಆಗ ಕೂಡಲೆ ನಾಯಿಯು ನಾಗಲೋಟದಿಂದ ನೇಣುಗಂಬದ ಹಿಂದಕ್ಕೆ ಓಡಿತು. ಅಲ್ಲಿ ನಿಂತು ಬೊಗಳಲಾರಂಬಿಸಿತು. ನಂತರ ಬಯಲಿನ ಮೂಲೆಗೆ ಹಿಮ್ಮೆಟ್ಟಿತು. ಅಲ್ಲಿನ ಕಸದ ನಡುವೆ ನಿಂತು ನಮ್ಮೆಡೆಗೆ ಭಯಭೀತನಾಗಿ ದೃಷ್ಟಿಸತೊಡಗಿತು. ನಾವೆಲ್ಲ ನೇಣುಗಂಬದ ಸುತ್ತ ಚಲಿಸುತ್ತ ಖೈದಿಯ ದೇಹವನ್ನು ಪರೀಕ್ಷಿಸತೊಡಗಿದೆವು. ಆ ಖೈದಿಯು ಬಂಡೆಗಲ್ಲಿನಂತೆ ನಿಧಾನವಾಗಿ ತಿರುಗುತ್ತಾ, ತನ್ನ ಕಾಲಬೆರಳನ್ನು ಕೆಳಮುಖವಾಗಿ ಗುರಿಯಿಡುತ್ತಾ ನೇತಾಡುತ್ತಿದ್ದ.

ಸೂಪರಿಂಡೆಂಟ್ ತನ್ನ ಬಡಗಿಯೊಂದಿಗೆ ನೇತಾಡುತ್ತಿದ್ದ ದೇಹದ ಬಳಿಗೆ ಸಾಗಿ, “ಆತ ಸರಿಯಾಗಿದ್ದಾನೆ” ಎಂದು ಉದ್ಗರಿಸಿ ನೇಣುಗಂಬದಿಂದ ಮರಳಿ ಹಿಂದಕ್ಕೆ ಬಂದು ನೀಳವಾಗಿ ಉಸಿರೆಳೆದುಕೊಂಡ. ಹಠಾತ್ತಾಗಿ ಆತನ ಮುಖದಿಂದ ವ್ಯಾಕುಲತೆ ಮರೆಯಾಯಿತು. ತನ್ನ ಕೈಗಡಿಯಾರವನ್ನು ನೋಡುತ್ತಾ ಗೊಣಗಿದ, “ಎಂಟು ನಿಮಿಷ ತಡವಾಯ್ತು. ಬೆಳಗಿನ ಜಾವಕ್ಕೆ ಇಷ್ಟು ಸಾಕು.”

ಕಾವಲುಗಾರರು ಬಂದೂಕುಗಳನ್ನು ಕಳಚಿಟ್ಟು ಅಲ್ಲಿಂದ ಹೊರನಡೆದರು. ತಾನು ದುರ್ವತನೆಯಿಂದ ನಡೆದುಕೊಂಡೆ ಎನ್ನುವ ಪಾಪಪ್ರಜ್ನೆಯಿಂದ ಕಂತ್ರಿ ನಾಯಿಯು ಅವರನ್ನು ಹಿಂಬಾಲಿಸಿತು.

ನಾವು ನೇಣುಗಂಬದ ಬಯಲಿನ ಜಾಗದಿಂದ ಹೊರನಡೆದು, ಕಾರಾಗೃಹದ ಸೆಲ್‌ಗಳನ್ನು ಮತ್ತು ಅದರೊಳಗೆ ಕಾಯುತ್ತಿರುವ ಖೈದಿಗಳನ್ನು ದಾಟಿಕೊಂಡು ಜೈಲಿನ ಮಧ್ಯಭಾಗಕ್ಕೆ ಬಂದು ತಲುಪಿದೆವು. ಅಷ್ಟರಲ್ಲಾಗಲೇ ಅಪರಾಧಿಗಳು ಕಾವಲುಗಾರರ ನಿರ್ದೇಶನದಡಿಯಲ್ಲಿ ತಮ್ಮ ಬೆಳಗಿನ ಉಪಹಾರವನ್ನು ಸೇವಿಸುತ್ತಿದ್ದರು. ಅವರ ಅಲ್ಯುಮೀನಿಯಂ ತಟ್ಟೆಗಳಿಗೆ ಅನ್ನ ಮತ್ತು ಸಾಂಬಾರನ್ನು ಬಡಿಸುತ್ತಿದ್ದರು. ಗಲ್ಲುಶಿಕ್ಷೆಯ ನಂತರ ಅಲ್ಲಿ ಒಂದು ಬಗೆಯ ಲವಲವಿಕೆಯ, ಮನೆಯ ವಾತಾವರಣ ನಿರ್ಮಾಣಗೊಂಡಿತ್ತು. ಕೆಲಸವನ್ನು ಮುಗಿಸಿದ ನಿರಾಳತೆಯ ಭಾವವನ್ನು ಪ್ರತಿಯೊಬ್ಬರ ಮುಖದಲ್ಲೂ ನೋಡಬಹುದಾಗಿತ್ತು.

ಅಲ್ಲಿ ನನ್ನ ಬಳಿ ಸುಳಿದಾಡುತ್ತಿದ್ದ ಹುಡುಗನೊಬ್ಬ ಮುಗುಳ್ನಗುತ್ತಾ, “ತನ್ನ ಕ್ಷಮಾದಾನದ ಅಪೀಲನ್ನು ವಜಾಗೊಳಿಸಿದ ಸುದ್ದಿಯನ್ನು ಕೇಳಿ ಅವನು (ನೇಣುಗಂಬಕ್ಕೇರಿದ ವ್ಯಕ್ತಿ) ತನ್ನ ಸೆಲ್ ಒಳಗೆ ಉಚ್ಚೆ ಹೊಯ್ದುಕೊಂಡದ್ದು ನಿಮಗೆ ಗೊತ್ತ ಸರ್? ದಯವಿಟ್ಟು ಈ ಸಿಗರೇಟನ್ನು ತೆಗೆದುಕೊಳ್ಳಿ. ಇದು ಯುರೋಪಿಯನ್ ಕ್ಲಾಸ್‌ದು ಸರ್. ಕೇವಲ ಎರಡು ರೂಪಾಯಿ ಮಾತ್ರ,” ಎಂದು ಗೋಗರೆಯತೊಡಗಿದ್ದ. ಆಗ ಎಲ್ಲರೂ ನಕ್ಕರು, ಯಾತಕ್ಕೆಂದು ಗೊತ್ತಿಲ್ಲದೆ.

ಸೂಪರಿಂಟೆಂಡೆಂಟ್ ಜೊತೆಗೆ ನಡೆಯುತ್ತ ಜೈಲರ್ ಪ್ರಾನ್ಸಿಸ್ ತೀವ್ರ ವಾಚಾಳಿತನದಿಂದ ಹೇಳುತ್ತಿದ್ದ, “ಎಲ್ಲವೂ ಸುಸೂತ್ರವಾಗಿ ನಡೆಯಿತು ಸರ್! ಇದು ಸರಳವಾಗಿ ಮುಗಿದುಹೋದ ಕಥೆ. ಕೆಲವೊಮ್ಮೆ ಏನಾಗುತ್ತಿತ್ತು ಗೊತ್ತೇ?ವೈದ್ಯನಾದವನು ನೇಣುಗಂಬದ ಕೆಳಕ್ಕೆ ತೆರಳಿ ನೇತಾಡುತ್ತಿದ್ದ ಖೈದಿಯ ಕಾಲುಗಳನ್ನು ಎಳೆದೆಳೆದು ಸತ್ತಿದ್ದಾನೆಂದು ಖಾತರಿಪಡಿಸಿಕೊಳ್ಳಬೇಕಾಗುತ್ತಿತ್ತು.ಇದು ಬಹಳ ಜಿಗುಪ್ಸೆ ಹುಟ್ಟಿಸುತ್ತಿತ್ತು ಸರ್.”

“ನಿಜಕ್ಕೂ ಹಾಗೆಯೇ? ಹಾಗಿದ್ದರೆ ಇದು ಬಹಳ ಕೆಡುಕಾದದ್ದು,” ಎಂದು ಸೂಪರಿಂಟೆಂಡೆಂಟ್ ಉತ್ತರಿಸಿದ.

“ಹಿಂದೊಮ್ಮೆ ಏನಾಯಿತೆಂದರೆ, ನೇಣುಗಂಬಕ್ಕೇರಬೇಕಾಗಿದ್ದ ಖೈದಿಯೊಬ್ಬ ತನ್ನ ಸೆಲ್‌ನ ಸರಳುಗಳನ್ನು ಬಿಗಿಯಾಗಿ ಹಿಡಿದುಕೊಂಡಿದ್ದ. ಅದರಿಂದ ಅವನನ್ನು ಬಿಡಿಸಲು ಆರು ಕಾವಲುಗಾರರು ಬೆವರಿಳಿಸಬೇಕಾಯಿತು. ನಾವು, ’ಸ್ನೇಹಿತನೇ, ನಿನ್ನ ಈ ವರ್ತನೆಯಿಂದ ನಮಗೆಲ್ಲ ಕೊಡುತ್ತಿರುವ ತೊಂದರೆಗಳನ್ನು ನೀನು ಅರ್ಥ ಮಾಡಿಕೊಳ್ಳಬೇಕು,’ ಎಂದು ಆ ಖೈದಿಗೆ ಹೇಳಿದೆವು. ಆದರೆ ಆತ ನಮ್ಮ ಮಾತನ್ನೇ ಕೇಳುವ ಸ್ಥಿತಿಯಲ್ಲಿರಲಿಲ್ಲ.”

ನಾನು ಗಹಗಹಿಸಿ ನಗುತ್ತಿರುವುದು ನನ್ನ ಗಮನಕ್ಕೆ ಬಂತು. ಎಲ್ಲರೂ ನಗುತ್ತಿದ್ದರು. ಸೂಪರಿಂಟೆಂಡೆಂಟ್, “ನನ್ನ ಬಳಿ ವಿದೇಶಿ ಮದ್ಯವಿದೆ. ಬನ್ನಿ,” ಎಂದು ಕರೆಯುತ್ತಿದ್ದ.

ನಾವೆಲ್ಲ ಕಾರಾಗೃಹದ ಹೆಬ್ಬಾಗಿಲನ್ನು ದಾಟಿಕೊಂಡು ಹೊರಗಿನ ಬಯಲಿಗೆ ಬರುತ್ತಿರುವಾಗ ನೇತಾಡುತ್ತಿರುವ ಅವನ ಕಾಲುಗಳನ್ನು ಎಳೆದು ಎಂದು ಉದ್ಗರಿಸುತ್ತ ಬರ್ಮಾದ ಮಾಜಿಸ್ಟ್ರೇಟ್ ಗಹಗಹಿಸಿ ನಗತೊಡಗಿದ. ನಾವೆಲ್ಲ ನಗತೊಡಗಿದೆವು. ಆ ಸಮಯದಲ್ಲಿ ಜೈಲರ್ ಫ್ರಾನ್ಸಿಸ್ ನೀಡಿದ ವಿವರ ನಿಜಕ್ಕೂ ತಮಾಶೆಯಾಗಿತ್ತು. ನಾವೆಲ್ಲ ನಗುತ್ತ, ನಲಿಯುತ್ತ ಕುಡಿಯುತ್ತಿದ್ದೆವು. ನೂರು ಮಾರು ದೂರದಲ್ಲಿ ಸತ್ತ ವ್ಯಕ್ತಿ ನೇತಾಡುತ್ತಿದ್ದ.

(1931ರಲ್ಲಿ ಜಾರ್ಜ್ ಅರ್ವೆಲ್ ಬರ್ಮಾ ಜೈಲಿನಲ್ಲಿ ಕ್ಲರ್ಕ್ ಆಗಿದ್ದಾಗ ನಡೆದ ಘಟನೆ.)