ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯ

– ತೇಜ ಸಚಿನ್ ಪೂಜಾರಿ

ಸೃಷ್ಠಿ ಹಾಗೂ ಲಯ ಭರತಖಂಡದ ಸಾಂಸ್ಕ್ರತಿಕ ಬದುಕಿನ ಎರಡು ಮಹತ್ವದ ಪಾರಂಪರಿಕ ಪರಿಭಾಷೆಗಳಾಗಿವೆ. ಇವೆರಡೂ ಕಾರ್ಯಗಳಿಗೆ ಅಧಿಪತಿ ಸ್ಥಾನದಲ್ಲಿ ಪ್ರತ್ಯೇಕ ದೈವ ನಿಯಾಮಕರಿದ್ದಾರೆ. ಪ್ರತ್ಯೇಕತೆಯ ಅಂಶವು ಇಲ್ಲಿನ ತಾತ್ವಿಕ ಅವಶ್ಯಕತೆಯೂ ಆಗಿದೆ. ಯಾಕೆಂದರೆ, ಸೃಷ್ಠಿಕರ್ತ ಹಾಗೂ ಲಯಕರ್ತ ಒಬ್ಬನೇ ಆದಲ್ಲಿ ಕೆಡುಕನ್ನು ಯಾಕೆ ಸೃಷ್ಠಿಸಬೇಕು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇಂತಹ ಕನಿಷ್ಠ ವೈಚಾರಿಕತೆಯ ಸಂಶಯ ಇಂದು ನಮ್ಮ ಕನ್ನಡ ವಾಹಿನಿಗಳ ಪ್ರಜ್ಞಾವಂತ ವೀಕ್ಷಕರಲ್ಲಿ ಸೃಷ್ಠಿಯಾಗುತ್ತಿದೆ. ಅವುಗಳು ಒಂದೆಡೆ ನಿತ್ಯಾನಂದ ರುಷಿಕುಮಾರರಂತಹ ಸ್ವಾಮಿಗಳ ಕಾಷಾಯ ವಸ್ತ್ರದ ಬಣ್ಣ ಬಯಲು ಮಾಡುತ್ತಿದ್ದರೆ ಇನ್ನೊಂದೆಡೆ ಅಂತಹದ್ದೇ ಕ್ರತ್ರಿಮ ಸ್ವಾಮೀಜಿಗಳನ್ನು ನಿರ್ಮಿಸುವ ಕೆಲಸವನ್ನು ಮಾಡುತ್ತಿವೆ. ಅನ್ಯಾಯದ ಲಯಕರ್ತನ ಸೋಗಿನಲ್ಲೇ ನಡೆಯುತ್ತಿರುವ ಸೃಷ್ಠಿಕರ್ತನ ಕಾರ್ಯಾಚರಣೆಗೆ ಪ್ರಾತಃಕಾಲದ ಹೊತ್ತು ಟಿ.ವಿ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವ ಜೋತಿಷ್ಯ ಸಮಾಲೋಚನೆಯ ಕಾರ್ಯಕ್ರಮಗಳು ವೇದಿಕೆಯಾಗಿ ಬಳಕೆಯಾಗುತ್ತಿವೆ. ‘ಮಹರ್ಷಿ ದರ್ಪಣ’, ‘ಓಂಕಾರ ಮಾತುಕತೆ’, ‘ಪ್ರಣವಂ’, ‘ಆಯುಷ್ಮಾನ್ ಭವ’, ‘ರಾಶಿಫಲ’, ಮೊದಲಾದ  ಜ್ಯೋತಿಷಿ ಕಾರ್ಯಕ್ರಮಗಳು ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯದ ಮಾಧ್ಯಮಗಳಾಗಿ ರೂಪುಗೊಳ್ಳುತ್ತಿವೆ.

***

“ಆತಂಕ” ಹಾಗೂ “ಬೆರಗು” ದೈವ ನಿರ್ಮಾಣ ಪ್ರಕ್ರಿಯೆಯ ಎರಡು ಪ್ರಮುಖ ಅಂಶಗಳು. “ಅಜ್ಞಾನ” ಅವುಗಳ ಕಾರ್ಯಾಚರಣೆಗೆ ವೇದಿಕೆ ಒದಗಿಸಿಕೊಡುತ್ತದೆ. ಹೀಗಾಗಿಯೇ ನಮ್ಮ ಹಿರೀಕರು ಗಾಳಿ, ಅಗ್ನಿ, ಬೆಳಕು, ಮಳೆ ಇವೇ ಮೊದಲಾದ ಸಹಜ ಪ್ರಾಕೃತಿಕ ಅಂಶಗಳ ಮರ್ಮ ಅರಿಯಲಾಗದೆ ಬೆರಗು ಪಟ್ಟು ಕ್ರಮೇಣ ಆತಂಕಿತರಾಗಿ ಅವುಗಳಿಗೆ ಅತಿಮಾನುಷ ದೈವಸ್ವರೂಪವನ್ನು ನೀಡಿದ್ದರು. ಇದು ಶತಶತಮಾನಗಳ ಹಿಂದಿನ ಕತೆ. ಆದರೆ ಇಂದೂ ಕೂಡಾ ಅದೇ ಅಂಶಗಳನ್ನು ಮುಂದಿಟ್ಟುಕೊಂಡು ಕನ್ನಡ ವಾಹಿನಿಗಳು ದೈವ ಸ್ವರೂಪಿ ಸ್ವಾಮೀಜಿಗಳನ್ನು ನಿರ್ಮಿಸ ಹೊರಟಿವೆ. ಇಲ್ಲಿ ಹೊಸ ಸೇರ್ಪಡೆ “ಪ್ರಲೋಭನೆ”ಯ ಅಂಶ. ನಮ್ಮ ಬೌಧ್ಧಿಕ ದಿವಾಳಿತನ ಹಾಗೂ ಕಾರ್ಪೊರೇಟ್ ಹಿತಾಸಕ್ತಿಗಳು ಟೆಲಿವಿಷನ್ ಚಾನೆಲ್‌ಗಳ ಇಂತಹ ಅಸಹ್ಯ ಹಾಗೂ ಸಮಾಜ ವಿರೋಧಿ ಕಾರ್ಯತಂತ್ರಗಳಿಗೆ ಅವಕಾಶ ಮಾಡಿಕೊಡುತ್ತಿವೆ.

***

ಆತಂಕ ಭಾವನೆಯ ನಿರ್ದಿಷ್ಟ ಗುಣ ವಿಶೇಷತೆಗಳನ್ನು ಕನ್ನಡ ಟೆಲಿವಿಷನ್ ಚಾನಲ್‌ಗಳು ತಮ್ಮ ಕುತ್ಸ್ತಿತ ಉದ್ದೇಶಗಳ ಈಡೇರಿಕೆಗೆ ಬಳಸಿಕೊಳ್ಳುತ್ತಿವೆ. ಪ್ರಸಾರ ಮಾಧ್ಯಮ ಕ್ಷೇತ್ರದಲ್ಲಿ “ಆತಂಕ ಸನ್ನಿವೇಶ” ಮಾರುಕಟ್ಟೆ ಮೌಲ್ಯವನ್ನು ಹೊಂದಿರುತ್ತದೆ. ಮನೋವೈಜ್ಞಾನಿಕ ನೆಲೆಯಲ್ಲಿ ಜನರನ್ನು ಅತಿಮಾನುಷತೆಯತ್ತ ನೂಕಬಲ್ಲ ಶಕ್ತಿಯು ಕೂಡಾ ಆತಂಕ ಭಾವಕ್ಕಿದೆ. ಇದೇ ಹಿನ್ನೆಲೆಯಲ್ಲಿ ಆತಂಕ ವಿಚಾರವನ್ನೇ ಬಂಡವಾಳ ಮಾಡಿಕೊಂಡು ಕನ್ನಡ ವಾಹಿನಿಗಳು ಕಾರ್ಯಾಚರಿಸುತ್ತಿವೆ. ನಾನಾ ನೆಲೆಯ ಹಾಗೂ ನಾನಾ ನಮೂನೆಯ ಬೀತಿ ಉಂಟುಮಾಡುವ ಸನ್ನಿವೇಶಗಳನ್ನು ಜನಮಾಸದಲ್ಲಿ ಸೃಷ್ಟಿಸಿ ಟಿ.ಆರ್.ಪಿ. ಸಾಧನೆಗೈಯಲು ಹೊಂಚುಹಾಕುತ್ತಿವೆ. ಒಂದೆಡೆ ನೆರೆ, ಬರ, ತ್ಸುನಾಮಿ, ಸೌರ ಮಾರುತಗಳು, ಸೂಪರ್‌ಮೂನ್, ಶುಕ್ರ ಸಂಕ್ರಮಣ, ಅಗ್ನಿಸ್ಪೋಟ ಮೊದಲಾದ ಸಹಜ ಪ್ರಾಕೃತಿಕ ವಿದ್ಯಮಾನಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಭಯ ಹುಟ್ಟಿಸುತ್ತಿವೆ. ಇನ್ನೊಂದೆಡೆ ಮಹಾಪ್ರಳಯ, ಭೂಪಥ ಬದಲಾವಣೆ, ಮನುಕುಲದ ನಾಶ ಮೊದಲಾದ ಮಿಥ್ಯೆಗಳು ಹಾಗೂ ಅವೈಜ್ಞಾನಿಕ ಪಂಚಾಂಗಗಳು ಮತ್ತು ಗ್ರಹಗತಿ ಆಧಾರಿತ ಸುಳ್ಳಿನ ಕಂತೆಗಳನ್ನೇ ಸತ್ಯವೆಂಬತೆ ಬಿಂಬಿಸುವ ಪ್ರಯತ್ನವನ್ನು ಮಾಡುತ್ತಿವೆ. ಜೊತೆಗೆ ಸಹಜವಾಗಿಯೇ ಆತಂಕ ಪಡಬೇಕಾಗಿರುವ ಹವಾಮಾನ ಬದಲಾವಣೆಗಳಂತ ವೈಜ್ಞಾನಿಕ ವಿಚಾರಗಳ ಸುತ್ತ ಇನ್ನಷ್ಟು ಅನಾವಶ್ಯಕ ಹಾಗೂ ಅವೈಜ್ಞಾನಿಕ ಆತಂಕಗಳನ್ನು ಸೃಷ್ಟಿಸಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ. ಈ ಮೂರು ನಮೂನೆಯ ಕಾರ್ಯಕ್ರಮಗಳ ತತ್‌ಕ್ಷಣದ ಉದ್ದೇಶ ಒಂದೇ ಆಗಿದೆ . ಅದು, “ಆತಂಕ ನಿರ್ಮಾಣ”.

ಇವುಗಳ ಜೊತೆಗೆ, ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗುವ ಇನ್ನೂ ಕೆಲವು ಕಾರ್ಯಕ್ರಮಗಳು ಜನಮನದಲ್ಲಿ ಬೆರಗನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ. ಆಕರ್ಷಕ ನಿರೂಪಣ ತಂತ್ರಗಳನ್ನು ಹೊಂದಿರುವ ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವ, ತರ್ಕದ ಗೋಜಿಗೆ ಹೋಗದ ಸಾಮಾನ್ಯ ಪ್ರೇಕ್ಷಕ “ಹೀಗೂ ಉಂಟೆ?” ಎಂಬ ಬೆರಗಿಗೆ ಖಂಡಿತ ಒಳಗಾಗುತ್ತಾನೆ. ಎಲ್ಲೋ ಒಂದು ಮೂಲೆಯಲ್ಲಿ ಇರೋ ಸೀಮಿತ ವ್ಯಾಪ್ತಿಯ ಗುಡಿ ದೇಗುಲಗಳು, ಧರ್ಮ ಜೀವಿಗಳು ಮತ್ತು ಕಾಗೆ, ಗೂಬೆ, ಹಲ್ಲಿ , ಹದ್ದು, ನಂದಿ, ಎಮ್ಮೆ ಮೊದಲಾದ ಪ್ರಾಣಿ ಪಕ್ಷಿಗಳು, ಹಾಗೆಯೇ ದೆವ್ವ ಭೂತ ಪಿಶಾಚದಂತಹ ಭ್ರಮೆಗಳು ಹಾಗೂ ಅಮಾವಾಸ್ಯೆ ಹುಣ್ಣಿಮೆಯಂತ ದಿನ ವಿಶೇಷತೆಗಳು- ಇವುಗಳಿಗೆ ಜನಪದೀಯ ನಂಬುಗೆಗಳು ಆರೋಪಿಸಿರುವ ಅತೀಂದ್ರಿಯ ಶಕ್ತಿಗಳನ್ನೇ ಕೇಂದ್ರವಾಗಿಟ್ಟು ಪ್ರೇಕ್ಷಕ ಸಮೂಹದಲ್ಲಿ “ಅಚ್ಚರಿ” ಉಂಟುಮಾಡುವ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಜೊತೆಗೆ ಜನ್ಮ “ಜನ್ಮಾಂತರ” ಸರಪಳಿಯ ಸತ್ಯಗಳನ್ನು ಹೆಕ್ಕಿ ತೆಗಿಯುತ್ತಿರುವಂತೆ ಬಿಂಬಿಸಲ್ಪಡುವ ಸಮ್ಮೋಹನ ಆಧಾರಿತ ಕಾರ್ಯಕ್ರಮಗಳು, ರಹಸ್ಯ-ನಿಗೂಢ ವಿಚಾರಗಳು ಜನರ ಮನದಲ್ಲಿ ವಾರಗಟ್ಟಲೆ ಗುಂಯಿಗುಡುವಂತೆ ಮಾಡುತ್ತಿವೆ.

ಆತಂಕ ಹಾಗೂ ಬೆರಗು ಸೃಷ್ಟಿಯ ಕಾರ್ಯಕ್ರಮಗಳ ಜೊತೆಜೊತೆಗೆ ವೀಕ್ಷಕರಿಗೆ ಪ್ರಲೋಭನೆ ಒಡ್ಡುವ ಕೆಲಸವನ್ನು ಕೂಡಾ ಕನ್ನಡವಾಹಿನಿಗಳು ಮಾಡುತ್ತಿವೆ. ಈಗಾಗಲೇ ಆಸ್ತಿತ್ವದಲ್ಲಿರುವ ಧರ್ಮ ಹಾಗೂ ಶಕುನ ಪರಂಪರೆಗಳಿಂದ ಅವುಗಳು ಪ್ರಲೋಭನಾ ಸಾಮಾಗ್ರಿಗಳನ್ನು ಪಡೆದುಕೊಳ್ಳುತ್ತಿವೆ. ಪ್ರಲೋಭನೆಯ ಅಂಶವು ಸಾಮಾನ್ಯವಾಗಿ ಅಸುರಕ್ಷಿತ ಭಾವ ವಾತಾವರಣದಲ್ಲಿ ಕಾರ್ಯಾಚರಿಸುತ್ತದೆ. ಅಂತೆಯೇ, ಜಾಗತಿಕರಣದ ಹಿನ್ನೆಲೆಯಲ್ಲಿ ಇಂದು ಸೃಪ್ಟಿಯಾಗಿರುವ ಅಸ್ಥಿರತೆ ಹಿಂಸೆ ಹಾಗೂ ಮೌಲ್ಯ ಕ್ಷಯದಂತ ಅಧಃಪತನದ ಪರಿವೇಶಗಳು ಪ್ರಲೊಭನೆಗೆ ಅವಕಾಶವೀಯುತ್ತಿವೆ. ಕನ್ನಡ ವಾಹಿನಿಗಳು ಇಂತಹ ವಿಷಮ ಪರಿಸ್ಥಿತಿಗಳ ಭರಪೂರ ಲಾಭ ಪಡೆಯುತ್ತಿವೆ. ತೀರ್ಥಕ್ಷೇತ್ರ ಪ್ರಯಾಣ, ವಾಹನ ಹಾಗೂ ದೂರವಾಣಿ ಸಂಖ್ಯಾವಿಶೇಷಗಳು, ವಾಸ್ತು ಬದಲಾವಣೆಗಳು, ಮಂತ್ರ ತಂತ್ರಗಳ ಆಚರಣೆ ಮೊದಲಾದ ಅವೈಜ್ಞಾನಿಕ ಹಾಗೂ ಸಮೂಹ ಸನ್ನಿಯ ಆಯ್ಕೆಗಳನ್ನು ನೀಡುತ್ತಾ ಒಳಿತಾಗುವ ಪ್ರಲೋಭನೆಯನ್ನು ಒಡ್ಡುತ್ತಿವೆ.

***

ಹೀಗೆ, ಕನ್ನಡ ದೂರದರ್ಶನ ಚಾನೆಲ್‌ಗಳು ಆತಂಕ, ಬೆರಗು ಹಾಗೂ ಪ್ರಲೋಭನೆಯ ಸಂಕೀರ್ಣ ವಾತಾವರಣವೊಂದನ್ನು ಸೃಷ್ಠಿಸಿ ಅಲ್ಲಿ ಭಾವಿ ಸ್ವಾಮೀಜಿಗಳ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡುತ್ತಿವೆ. ಅಧ್ಯಾತ್ಮಿಕ ಜಿಜ್ಞಾಸೆಗಳು ಹಾಗೂ ಸಾಧನೆಗಳ ಮುಖಾಂತರ ಗುರುಸ್ಥಾನ ಸಂಪಾದನೆ ಮಾಡುವ ಪರಂಪರೆಯು ಇಂದು ನಮ್ಮಲ್ಲಿ ಇಲ್ಲವಾಗಿದೆ. ಅದರ ಸ್ಥಾನದಲ್ಲಿ ಕೇವಲ ಬಾಹ್ಯ ಸೌಂದರ್ಯದ ನೆಲೆಯಲ್ಲಿ ಸ್ವಾಮಿತ್ವದ ಪ್ರಭಾವಳಿಯನ್ನು ದಕ್ಕಿಸಿಕೊಳ್ಳುವ ಹುನ್ನಾರುಗಳು ನಡೆಯುತ್ತಿವೆ. ವೈಚಾರಿಕತೆಯ ಪ್ರವರ್ತರಾಗಬೇಕಿದ್ದ ನಮ್ಮ ಟೆಲಿವಿಷನ್ ಚಾನಲ್‌ಗಳು ಇಂತಹ ಕುತಂತ್ರಗಳಲ್ಲಿ ಸ್ವಯಂಸ್ಫೂರ್ತಿಯಿಂದ ಭಾಗಿಯಾಗಿರುತ್ತಿರುವುದು ಸದ್ಯದ ಸಾಮಾಜಿಕ ಸಂದರ್ಭದ ದುರ್ದೈವವಾಗಿದೆ.

ಆಕರ್ಷಕ ವೇದಿಕೆ, ಗಮನ ಸೆಳೆಯುವ ನಿರೂಪಣೆ ಹಾಗೂ ನಿಖರ ಸಂಬೋಧನೆ; ಇವು ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯದ ತಂತ್ರ ವಿಶೇಷತೆಗಳಾಗಿವೆ. ಇವುಗಳು ಬಾಹ್ಯ ಸೌಂದರ್ಯದ ಬಹು ಸಾಮಾನ್ಯ ನೆಲೆಗಳನ್ನು ಪ್ರತಿನಿಧಿಸುತ್ತದೆ. ಜ್ಯೋತಿಷ್ಯ ಸಮಾಲೋಚನಯ ಕಾರ್ಯಕ್ರಮಗಳು ನಡೆಯುವ ರಂಗಮಂಟಪಗಳು ವೀಕ್ಷಕರ ಮನದಲ್ಲಿ ಭಕ್ತಿಭಾವಗಳನ್ನು ಸೃಷ್ಟಿಸುವಂತಿರುತ್ತವೆ. ಅಲಂಕೃತ ಶಿವಲಿಂಗ, ಗಣೇಶ ಮೊದಲಾದ ವಿಗ್ರಹಗಳು, ಗುರುಪೀಠ ಸ್ವರೂಪಿ ಆಸನಗಳು ಹಾಗೂ ಓಂಕಾರದಂತಹ ಬೃಹತ್ ಜಿಹ್ನೆಗಳು ವೇದಿಕೆಯ ಮುಖ್ಯ ಆಕರ್ಷಣೆಗಳಾಗಿರುತ್ತವೆ. ಕಾರ್ಯಕ್ರಮಗಳ ಕೇಂದ್ರ ಬಿಂದುಗಳಾದ ಜ್ಯೋತಿಷಿಗಳು ಕೂಡಾ ಕಾರ್ಯಕ್ರಮದ ಉದ್ದಕ್ಕೂ ಪುಲ್ ಕಾಸ್ಟೂಮ್‌ನಲ್ಲೇ ಇರುತ್ತಾರೆ. ಎಲ್ಲರೂ ಫ್ಯಾಶನ್ ನಾಮದಾರಿಗಳೇ. ಅತ್ಯಾಧುನಿಕ ಕಂಪ್ಯೂಟರ್ ಹಾಗೂ ಪಾರಂಪರಿಕ ತಾಳೆಗರಿ ಇವೆರಡನ್ನೂ ಏಕಕಾಲಕ್ಕೆ ಬಳಸುವಂತಹ ಚಾತುರ್ಯವನ್ನು ಮೆರೆಯುತ್ತಾರೆ. ನಗರಗಳ ವೀಕ್ಷಕರಲ್ಲಿ ನಂಬಿಕೆಯನ್ನು ಉಂಟುಮಾಡಲು ಇವು ಎರಡೂ ಬಹಳ ಮುಖ್ಯವಾದ ಸಾಧನಗಳಾಗಿವೆ. ಜೊತೆಗೆ ದೂರವಾಣಿಯಂತಹ ಆಧುನಿಕ ಸಂವಹನ ಮಾಧ್ಯಮಗಳನ್ನು ಬಳಸಿ ವೀಕ್ಷಕರ ಜೊತೆಗೆ ಸಂಬಂಧಗಳನ್ನು ಸ್ಥಾಪಿಸುವ ಪ್ರಯತ್ನಗಳೂ ನಡೆಯುತ್ತವೆ. ಇಂತಹ ಗುರು-ಶಿಷ್ಯ, ಸ್ವಾಮಿ-ಅನುಯಾಯಿ ಸಂಬಂಧಗಳು ಆಯಾ ಜ್ಯೋತಿಷಿಗಳು ಮುಂದೆ ಪಡೆಯಲಿರುವ ಅವಸ್ಥೆಯಲ್ಲಿ ನೆರವಿಗೆ ಬರುತ್ತವೆ.

ಅಷ್ಟೂ ಕಾರ್ಯಕ್ರಮಗಳನ್ನು ನಡೆಸಿಕೊಡುವ ನಿರೂಪಕರು ಸ್ತ್ರೀಯರೇ ಆಗಿದ್ದಾರೆ. ಎಲ್ಲಾ ವಾಹಿನಿಗಳು ಒಟ್ಟಾಗಿ ನಿರ್ಣಯಿಸಿವೆಯೋ ಏನೋ ಎಂಬಂತೆ ಭಾಸವಾಗುವ ಸಮವಸ್ತ್ರ ಸ್ವರೂಪಿ ವೇಷಭೂಷಣದೊಂದಿಗೇ ನಿರೂಪಕಿಯರು ಕಾರ್ಯಕ್ರಮಗಳಿಗಳಲ್ಲಿ ಹಾಜರಿರುತ್ತಾರೆ. ಜರತಾರಿ ಸೀರೆ, ಹಿಂದಕ್ಕೆ ಎಳೆದು ಕಟ್ಟಿದ ಕೂದಲು, ಮುಡಿಗೆ ಹೂವು, ಫಲಕದ ಸರ ಹಾಗೂ ಜುಮುಕಿ ಧರಿಸಿರುವ ಸಾಂಪ್ರದಾಯಿಕ ನಿಲುವು ಅವರದ್ದು. ಮಾತುಗಳೂ ಅಷ್ಟೇ ಆಕರ್ಷಕ.

ವಿಶಿಷ್ಟ ಸಂಭೋಧನಾ ತಂತ್ರಗಳು ಕೂಡಾ ಇಲ್ಲಿನ ಕಾರ್ಯಕ್ರಮಗಳ ವಿಶೇಷತೆಗಳಾಗಿವೆ. ಅಷ್ಟೂ ಕಾರ್ಯಕ್ರಮಗಳಲ್ಲಿ ಜ್ಯೋತಿಷಿಗಳನ್ನು ಸಂಬೋಧಿಸಲು “ಗುರೂಜಿ” ಎಂಬ ಪದ ಬಳಕೆಯಾಗುತ್ತಿದೆ. “ಗುರೂಜಿ” ಸಂಭೋಧನೆಗೆ ಇಲ್ಲಿ ವಿಶೇಷವಾದ ಹಿನ್ನೆಲೆ ಇದೆ. ಏಕೆಂದರೆ ಅಂತಹದ್ದೇ ಸ್ಥಾನ ವಿಶೇಷತೆಗಳನ್ನು ಪ್ರತಿನಿಧಿಸುತ್ತಿದ್ದ ಬಾಬಾ ಹಾಗೂ ಸ್ವಾಮಿಯಂತಹ ಪದಗಳು ಬ್ಲೇಡ್ ಮತ್ತು ಕಳ್ಳ ವಿಶೇಷಣಗಳಿಂದ ಕುಲಗೆಟ್ಟಿವೆ! ಮಾತ್ರವಲ್ಲದೆ, ಗುರೂಜಿ ಎಂಬ ಪದಕ್ಕೆ ಮಾರುಕಟ್ಟೆ ಮೌಲ್ಯವೂ ಇದೆ ಎಂಬ ಅಂಶ ಇಲ್ಲಿ ಉಲ್ಲೇಖನೀಯ. ಟೆಕ್‌ಗುರು, ಮಾನೇಜ್‌ಮೆಂಟ್ ಗುರು ಮೊದಲಾದ ಪರಿಭಾಷೆಗಳು ಇಂತಹ ಪ್ರವೃತ್ತಿಗಳನ್ನು ಪ್ರತಿನಿಧಿಸುತ್ತವೆ. ಹಿಗಾಗಿಯೇ ನಮ್ಮ ಟಿ.ವಿ. ಚಾನೆಲ್‌ಗಳು ಜ್ಯೋತಿಷಿಗಳನ್ನು ಗುರೂಜಿ ಎಂದೇ ಸಂಬೋಧಿಸುತ್ತವೆ ಮತ್ತು ವಿಕ್ಷಕರಿಗೂ ಹಾಗೇ ಮಾಡುವಂತೆ ಪ್ರಚೋದಿಸುತ್ತಿವೆ. ಉಳಿದಂತೆ ಪಾರಂಪರಿಕ ತೂಕದ ಪದಗಳಾದ ಮಹರ್ಷಿ, ಬ್ರಹ್ಮರ್ಷಿ ಮೊದಲಾದ ಪದಗಳನ್ನು ಕೂಡಾ ಅಲ್ಲಲ್ಲಿ ಬಳಸುತ್ತಿವೆ. ಇಂತಹ ಸಂಬೋಧನ ತಂತ್ರಗಳು ಆಯಾ ಸ್ವಾಮೀಜಿಗಳಿಗೆ ಒಂದು ವಿಶಿಷ್ಟವಾದ ಸ್ವಾಮಿತ್ವದ ಪ್ರಭಾವಳಿಯನ್ನು ದಯಪಾಲಿಸುತ್ತಿವೆ.

* * *

ಕನ್ನಡ ವಾಹಿನಿಗಳ ಇವಿಷ್ಟೂ ತಂತ್ರಗಳ ಸಫಲ ಕಾರ್ಯಚಾರಣೆಗೆ ವೇದಿಕೆಯನ್ನು ಒದಗಿಸುತ್ತಿರುವುದು ನಮ್ಮ ಬೌದ್ಧಿಕ ದಿವಾಳಿತನ ಹಾಗೂ ಕಾರ್ಪೊರೇಟ್ ಲಾಭಕೋರತನ. ಅಜ್ಞಾನದ ಆಧುನಿಕ ಸ್ವರೂಪವಾದ ಬೌದ್ಧಿಕ ದಾರಿದ್ರ್ಯವು ಸಮಾಜದಲ್ಲಿ ಮೌಢ್ಯಗಳ ರೂಪಣೆ ಹಾಗೂ ಪ್ರಸರಣ ಪ್ರಕ್ರಿಯೆಗೆ ಅವಕಾಶ ಮಾಡಿಕೊಡುತ್ತಿದೆ. ಜ್ಞಾನ ಪರಿಕರಗಳ ಸುಲಭ ಲಭ್ಯತೆ ಮತ್ತು ಶಿಕ್ಷಣದ ನಿಕಟ ಸಾರ್ವತ್ರಿಕತೆಯಂತಹ ಪೂರಕ ಪರಿವೇಶಗಳಿದ್ದರೂ ಕೂಡ ನಮ್ಮ ನಗರಗಳ ಜನರು “ಹೀಗೂ ಉಂಟೆ?” ಎಂಬ ಪ್ರಶ್ನೆಯಾಚೆಗೆ ಯೋಚಿಸುವ ಪ್ರಯತ್ನ ಮಾಡುತ್ತಿಲ್ಲ . ಇಂತಹ ವೈಚಾರಿಕ ಕೊರತೆಗೆ ಜೊತೆಯಾಗಿರುವುದು ಕಾರ್ಪೊರೇಟ್ ಹಿತಾಸಕ್ತಿಗಳು. ಜ್ಯೋತಿಷ್ಯದಂತಹ ಕಾರ್ಯಕ್ರಮಗಳು ಸಮಾಜದಲ್ಲಿ “ಯಥಾಸ್ಥಿತಿ”ಯನ್ನು ಉಳಿಸಿಕೊಳ್ಳಲು ನೆರವಾಗುವುದರ ಜೊತೆಗೆ ಮಾರುಕಟ್ಟೆ ಆಧಾರಿತ ಜಾಹಿರಾತು ತಂತ್ರಗಳಿಗೂ ಅವಕಾಶ ನೀಡುತ್ತಿವೆ. ಹೀಗಾಗಿಯೇ ಕಾರ್ಪೊರೇಟ್ ಶಕ್ತಿಗಳು ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯಕ್ರಮಗಳನ್ನು ತುಂಬು ಹೃದಯದಿಂದ ಪ್ರಾಯೋಜಿಸುತ್ತಿವೆ.

3 comments

  1. ಕನ್ನಡದಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಸುದ್ದಿವಾಹಿನಿಗಳು ಇರುವಂತೆ ಕಾಣುತ್ತದೆ. ಇದರ ಪರಿಣಾಮವಾಗಿ ಲಾಭಾಂಶ ಹಂಚಿಹೋಗಿ ಹೆಚ್ಚು ಲಾಭ ಗಳಿಸಲು ವಾಹಿನಿಗಳು ನಾನಾ ಕಸರತ್ತುಗಳನ್ನು ಮಾಡುತ್ತಿರುವಂತೆ ಕಾಣುತ್ತದೆ. ಇದರ ಪರಿಣಾಮವಾಗಿಯೇ ಬೆಳಗಿನ ಹೊತ್ತು ಕನ್ನಡ ಟಿವಿ ವಾಹಿನಿಗಳಲ್ಲಿ ಪ್ರಜ್ಞಾವಂತರು ನೋಡಲು ಸಾಧ್ಯವಾಗದಂಥ ಕಾರ್ಯಕ್ರಮಗಳು ಪೈಪೋಟಿಯ ಮೇಲೆ ಪ್ರಸಾರವಾಗುತ್ತವೆ. ಕಡಿಮೆ ಜನಸಂಖ್ಯೆ ಇರುವ ಒಂದು ಊರಿನಲ್ಲಿ ನಾಲ್ಕು ಅಂಗಡಿಗಳು ಇದ್ದರೆ ಚೆನ್ನಾಗಿ ವ್ಯಾಪಾರವಾಗಿ ಲಾಭ ಆಗುತ್ತದೆ. ಅದೇ ಊರಿನಲ್ಲಿ ನಾಲ್ಕರ ಬದಲು ಹದಿನಾರು ಅಂಗಡಿಗಳಿದ್ದರೆ ವ್ಯಾಪಾರ ಹಂಚಿ ಹೋಗಿ ಲಾಭಾಂಶ ಕಡಿಮೆಯಾಗುತ್ತದೆ. ಆಗ ಗಿರಾಕಿಗಳನ್ನು ಸೆಳೆಯಲು ಅಂಗಡಿಗಳು ನಾನಾ ಕಸರತ್ತು, ಮೋಸ, ವಂಚನೆ, ದಗಲಬಾಜಿ ವ್ಯವಹಾರ ಮಾಡಬೇಕಾಗುತ್ತದೆ, ಇಲ್ಲದಿದ್ದರೆ ಲಾಭ ಆಗುವುದಿಲ್ಲ. ಕನ್ನಡದ ಟಿವಿ ವಾಹಿನಿಗಳ ಅವಸ್ಥೆಯೂ ಇದೇ ರೀತಿ ಆಗಿದೆ. ಹೀಗಾಗಿ ಕನ್ನಡ ವಾಹಿನಿಗಳು ನಾನಾ ದಗಲಬಾಜಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಹೊಟ್ಟೆ ಹೊರೆಯುವುದು ಮಾತ್ರವಲ್ಲದೆ ಭೋಗ ಜೀವನದಲ್ಲಿಯೂ ಮುಳುಗಿರುವಂತೆ ಕಾಣುತ್ತದೆ. ಹೀಗಾಗಿ ಕನ್ನಡ ಟಿವಿ ವಾಹಿನಿಗಳಿಂದ ದೇಶ ಹಾಗೂ ನಾಡಿಗೆ ಉಪಕಾರವಾಗುವ ಕಾರ್ಯಕ್ರಮಗಳನ್ನು ನಿರೀಕ್ಷಿಸುವಂತೆ ಇಲ್ಲ.

  2. ತಮ್ಮ ಉತ್ತಮ ಲೇಖನದಲ್ಲಿ ತಾವು ಗಮನಿಸದಿರುವ ಒಂದು ಅಂಶವೆಂದರೆ ಈ ಛಾನಲ್ಲುಗಳು ನಿರ್ಮಿಸುತ್ತಿರುವ ಕೃತಿಮ ಸ್ವಾಮಿಗಳು ಹಾಗು ಇವರು ಬಯಲು ಮಾಡುತ್ತಿರುವ ಸ್ವಾಮಿಗಳು ಯಾವ ಸಾಮಾಜಿಕ ವರ್ಗಗಳಿಗೆ ಸೇರಿದವರು ಎಂಬುದು, ಏಕೆಂದರೆ ಈ ಕಾರ್ಯಕ್ರಮಗಳ ಹಿಂದೆ ತಾವು ಲೇಖನದಲ್ಲಿ ತಿಳಿಸಿರುವ ಉದ್ದೇಶ ಮಾತ್ರವೇ ಅಲ್ಲದೇ ಮತ್ತೊಮ್ಮೆ ಸಾಂಸ್ಕೃತಿಕ ಯಜಮಾನಿಕತೆಯನ್ನು ಸ್ಥಾಪಿಸುವ ಮೂಲಕ ಸಮಾಜದ ಮೇಲೆ ತಮ್ಮ ಹಿಡಿತವನ್ನು ಮರಳಿ ಪಡೆಯುವ ಹುನ್ನಾರವೂ ಇದೆ.

Leave a Reply

Your email address will not be published.