ಭೂಪಾಲ್ ದುರಂತದ ವಾಸ್ತವ ಮತ್ತು ವರ್ತಮಾನ

-ಅರುಣ್ ಜೋಳದಕೂಡ್ಲಿಗಿ

ಇಂದು ಭೂಪಾಲ್ ದುರಂತದ ದಿನ. ಈ ದುರಂತದ ಕಾರಣಕರ್ತರಿಗೆ 2010 ರಲ್ಲಿ ಬಂದ ನ್ಯಾಯಾಲಯದ ತೀರ್ಪು ಮತ್ತು ಅದರ ಹಿಂದಣ ಹುನ್ನಾರವನ್ನು ನಾವಿಂದು ನೆನೆಯಬೇಕಿದೆ. ಇದು ಅಮೇರಿಕಾ ಜಗತ್ತನ್ನು ತನ್ನ ತಾಳಕ್ಕೆ ತಕ್ಕಂತೆ ಆಡಿಸುವ ಆಟದ ಮುಖವಾಗಿಯೂ ಕಾಣುತ್ತದೆ.

ಜಗತ್ತು ಕಂಡ ಭೀಕರ ಭೂಪಾಲ್ ಕೈಗಾರಿಕಾ ದುರಂತ ಸಂಭವಿಸಿ ಇಲ್ಲಿಗೆ 28 ವರ್ಷಗಳು ಸಂಭವಿಸಿದವು. 1984 ಡಿಸೆಂಬರ್ 2-3 ರಲ್ಲಿ ನಡೆದ ಭೂಪಾಲ್ ಅನಿಲ ದುರಂತ ಅಂದು ಜಗತ್ತನ್ನೇ ತಲ್ಲಣಗೊಳಿಸಿತ್ತು. 25 ಸಾವಿರಕ್ಕೂ ಹೆಚ್ಚು ಜೀವಗಳು ಉಸಿರು ನಿಲ್ಲಿಸಿದ್ದವು. ಅದು ಎಲ್ಲರ ಉಸಿರು ಕಟ್ಟಿಸಿತ್ತು. ಈಗಲೂ ಈ ದುರಂತವನ್ನು ನೆನಪಿಸಿಕೊಂಡರೆ ಮಾನವೀಯತೆ ಇರುವ ಯಾರಿಗಾದರೂ ಉಸಿರು ಕಟ್ಟುತ್ತದೆ. ಇದರ ಪರಿಣಾಮವನ್ನು ಈಗ ಹುಟ್ಟುವ ಮಕ್ಕಳೂ ಸಹ ಅನುಭವಿಸುತ್ತಿದ್ದಾರೆ.

ಈ ದುರಂತಕ್ಕೆ ಸಂಬಂದಿಸಿದ ತೀರ್ಪು 26 ವರ್ಷಗಳ ನಂತರ ಒಂದು ವರ್ಷದ ಹಿಂದಷ್ಟೆ ಹೊರ ಬಿದ್ದಿತು. ಈ ತೀರ್ಪು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತು. ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಭಾರತ ಘಟಕದ ಮಾಜಿ ಅಧ್ಯಕ್ಷ ಕೇಶುಭ್ ಮಹಿಂದ್ರಾ ಅವರನ್ನು ಸೇರಿ ಎಂಟು ಮಂದಿ ಆರೋಪಿಗಳಿಗೆ ಸ್ಥಳೀಯ ನ್ಯಾಯಾಲಯ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು.

ವೀರಪ್ಪ ಮೊಯಿಲಿ ಮೊದಲಾದ ಕಾನೂನು ತಜ್ಞರು ಈ ತೀರ್ಪನ್ನು ನ್ಯಾಯದ ಸಮಾಧಿ ಎಂದು ಟೀಕಿಸಿದ್ದರು. ಸಂತ್ರಸ್ಥರ ಕುಟುಂಬದವರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಆಕ್ರೋಶಭರಿತರಾಗಿ ನ್ಯಾಯಾಲಯಗಳ ಮುಂದೆ ಪ್ರತಿಭಟನೆ ನಡೆಸಿದರು. ಇದನ್ನು ಪ್ರಶ್ನಿಸಿ ಹೈಕೋರ್ಟಿಗೂ ಮೊರೆ ಹೋಗಿದ್ದಾರೆ. ಭೂಪಾಲ ಅನಿಲ ದುರಂತದ ಸಂತ್ರಸ್ತರು ನ್ಯಾಯಕ್ಕಾಗಿ ಈಗಲೂ ಕಾಯುತ್ತಿದ್ದಾರೆ. 2011 ಜೂನ್‌ನಲ್ಲಿ ಬಂದ ತೀರ್ಪಿನ ಹಿಂದೆ ಅದೆಷ್ಟೋ ಅಮೆರಿಕ ಪ್ರಾಯೋಜಿತ ಎನ್.ಜಿ.ಒ. ವರದಿಗಳ ಪರೋಕ್ಷ ಬೆಂಬಲವಿದೆ. ಅಂತಹ ಒಂದು ವರದಿಯು ಮಂಡನೆಯಾದ ಅನುಭವದ ಕೆಲವು ಟಿಪ್ಪಣಿಗಳಿವು.

2004 ರಲ್ಲಿ ಭೂಪಾಲ್ ಅನಿಲ ದುರಂತ ನಡೆದು 20 ವರ್ಷಗಳಾಗಿದ್ದವು. ಇದರ ನೆನಪಿಗಾಗಿ ಒಂದು ಎನ್.ಜಿ.ಒ. ಸತತ ಹತ್ತು ವರ್ಷಗಳ ಕಾಲ ಸಂಶೋಧನೆ ನಡೆಸಿ ಸಿದ್ದಪಡಿಸಿದ ಒಂದು ವರದಿಯನ್ನು 2005 ರಲ್ಲಿ ಬಿಡುಗಡೆ ಮಾಡಿತು. ಆ ಕಾರ್ಯಕ್ರಮಕ್ಕೆ ಕರ್ನಾಟಕದ ಎನ್.ಜಿ.ಒ.ಗಳ ಕೆಲವು ಸದಸ್ಯರು, ಕೆಲವು ಆಸಕ್ತರು ಭೂಪಾಲ್ ಗೆ ತೆರಳಿದ್ದರು. ನಾನಾಗ ಹಂಪಿ ವಿವಿಯಲ್ಲಿ ಎಂ.ಎ. ಓದುತ್ತಿದ್ದೆ. ಇದರಲ್ಲಿ ಮರಿಯಮ್ಮನಹಳ್ಳಿಯ ಕನ್ನಡ ಉಪನ್ಯಾಸಕ ಸೋಮೇಶ್, ಗೆಳೆಯ ಚಂದ್ರಪ್ಪ ಸೊಬಟಿ ಮತ್ತು ನನ್ನನ್ನು ಒಳಗೊಂಡಂತೆ ಮೂರು ಜನ ಭೂಪಾಲ್‌ಗೆ ತೆರಳಿದ್ದೆವು. ಹೈದರಾಬಾದ್ ಕರ್ನಾಟಕದ ಮಹಿಳೆಯರ ಅಭಿವೃದ್ದಿಗಾಗಿ ಕೆಲಸಮಾಡುತ್ತೇವೆ ಎಂದು ಹೇಳಿಕೊಳ್ಳುವ ಸಖಿ ಎನ್ನುವ ಎನ್.ಜಿ.ಒ.ದ ಸಂಯೋಜಕಿಯಾದ ಡಾ. ಭಾಗ್ಯಲಕ್ಷ್ಮಿಯವರು ನಮ್ಮನ್ನು ಕಳುಹಿಸಿಕೊಟ್ಟಿದ್ದರು. ನಾವು ಆ ಎನ್.ಜಿ.ಒ.ದಲ್ಲಿ ಕೆಲಸ ಮಾಡದಿದ್ದರೂ ಆಸಕ್ತರಾಗಿ ಭಾಗವಹಿಸಲು ಹೋಗಿದ್ದೆವು. ಅದಕ್ಕಿಂತ ಮುಖ್ಯವಾಗಿ ಉಚಿತವಾಗಿ  ಭೂಪಾಲ್‌ಗೆ ಹೋಗುವ ಅವಕಾಶವೊಂದು ಸಿಕ್ಕ ಸಂಭ್ರಮದಲ್ಲಿ ಹೋಗಿದ್ದೆವು ಎನ್ನುವುದೇ ಸರಿ.

ಇದೊಂದು ಅಂತರಾಷ್ಟ್ರೀಯ ಸೆಮಿನಾರ್. ಬೇರೆ ಬೇರೆ ದೇಶದಿಂದ ಅನೇಕ ಪರಿಸರ ತಜ್ಞರು, ವಕೀಲರು, ಡಾಕ್ಟರುಗಳು, ಕೆಲವು ಸ್ಥಳೀಯ ನಾಯಕರು, ಭಾರತದ ಬೇರೆ ಬೇರೆ ರಾಜ್ಯಗಳಿಂದ ಎನ್.ಜಿ.ಒ.ಗಳ ಪ್ರತಿನಿಧಿಗಳು ಭೂಪಾಲ್‌ಗೆ ಬಂದಿದ್ದರು. ಈ ಸೆಮಿನಾರ್‌ಗೆ ಧನ ಸಹಾಯ ಮಾಡಿದ್ದು ಅಮೆರಿಕಾ ದೇಶ. ಇಲ್ಲಿ ಭಾಗವಹಿಸಿದ ಹಲವು ತಜ್ಞರಲ್ಲಿ ಅಮೆರಿಕಾದವರೂ ಇದ್ದರು. ಯಾವ ದೇಶವು ಅನಿಲ ದುರಂತಕ್ಕೆ ಕಾರಣವಾಗಿತ್ತೋ ಅದೇ ದೇಶ ಈ ದುರಂತದ ಬಗ್ಗೆ ಅಧ್ಯಯನ ಮಾಡಲು ಅಪಾರ ಹಣ ವ್ಯಯ ಮಾಡಿತ್ತು. ಇದರ ಮರ್ಮ ಏನೆಂದು ನನಗಾಗ ಅರ್ಥವಾಗಿರಲಿಲ್ಲ.

ಈ ಸೆಮಿನಾರಿನಲ್ಲಿ ಅಳಿದುಳಿದ ಸಂತ್ರಸ್ಥರು, ದುರಂತದಲ್ಲಿ ಸಾವಿಗೀಡಾದವರ ಕುಟುಂಬದವರು ಮತ್ತು ಮುನ್ಸಿಪಾಲ್ ಕಾರ್ಪೋರೇಷನ್‌ನಲ್ಲಿ ವಾಸಿತ ಜನರು ಭಾಗವಸಿದ್ದರು. ಈ ಸೆಮಿನಾರ್ ಹಾಲ್‌ನ ಎದುರು ಐವತ್ತಕ್ಕೂ ಹೆಚ್ಚಿನ ಗಾಲಿ ಕುರ್ಚಿಗಳ ಸೈಕಲ್ ನಿಂತಿದ್ದವು. ಇವು ಭೂಪಾಲ್ ದುರಂತದ ಮೂಕ ಸಾಕ್ಷಿಗಳೇನೋ ಎನ್ನುವಂತಿತ್ತು. ಕಾರಣ ಅನಿಲ ದುರಂತದ ಪರಿಣಾಮವಾಗಿ ಅಂಗವಿಕಲರಾದವರ ತಳ್ಳು ಗಾಡಿಗಳವು. ಅಂತೆಯೇ ಅನೇಕ ಕುರುಡರೂ, ದೀರ್ಘಕಾಲೀನ ರೋಗ ಪೀಡಿತರಾದ ಜನರೂ ಆ ಸೆಮಿನಾರಿನಲ್ಲಿ ಕೂತು, ಇಂಗ್ಲೀಷಿನಲ್ಲಿ ಮಂಡನೆಯಾಗುತ್ತಿದ್ದ ಸಂಶೋಧನ ವರದಿಯನ್ನು ಅರ್ಥವಾಗದಿದ್ದರೂ ಸುಮ್ಮನೆ ಕೇಳುತ್ತಿದ್ದರು.

ಇದೊಂದು ವ್ಯವಸ್ಥೆಯ ವೈರುಧ್ಯದಂತೆ ಕಾಣುತ್ತಿತ್ತು. ನಂತರ ಈ ಭಾಷಣದ ಅನುವಾದವನ್ನು ರೇಡಿಯೋ ಅಲೆಗಳ ಮೂಲಕ ಪ್ರಸಾರ ಮಾಡಲಾಯಿತು. ಅದನ್ನು ಕೇಳಲು ಎಲ್ಲರಿಗೂ ಒಂದೊಂದು ಪುಟ್ಟ ರೇಡಿಯೋಗಳನ್ನು ಇಯರ್ ಫೋನ್‌ಗಳನ್ನು ವಿತರಿಸಲಾಯಿತು. ಮಂಡನೆಯಾಗುತ್ತಿರುವ ವಿಷಯಕ್ಕೂ ಆ ಅನುವಾದಕ್ಕೂ ಸಂಬಂಧವೇ ಇಲ್ಲ ಎನ್ನುವಂತಹ ಕೆಟ್ಟ ಅನುವಾದವನ್ನು ಜನರು ಕೇಳುತ್ತಾ ಕೂತರು. ಕೂತವರ ಗಮನವೆಲ್ಲಾ ಸೆಮಿನಾರಿನಲ್ಲಿ ಹಂಚಲಾಗುತ್ತಿದ್ದ ತಿಂಡಿ, ಟಿ, ಊಟದ ಕಡೆಗೇ ಇತ್ತು. ಕಾರಣ ದೈನಂದಿನ ಕಷ್ಟಗಳನ್ನು ಮರೆತು ಒಂದೆರಡು ದಿನ ಹೊಟ್ಟೆತುಂಬಾ ಒಳ್ಳೆಯ ಊಟ ಮಾಡಬಹುದು, ಒಂದಿಷ್ಟು ಹಣ ಸಿಗುತ್ತದೆಯೆಂಬ ಅನಿವಾರ್ಯತೆಯಿಂದ ಜನರು ಅಲ್ಲಿಗೆ ಬಂದಿದ್ದರು. ಆದರೆ ಆ ಎನ್.ಜಿ.ಒ. ಈ ವರದಿಯನ್ನು ಸಿದ್ದಪಡಿಸಲು ಅನಿಲ ದುರಂತದ ಸಂತ್ರಸ್ಥರೇ ಸಹಕಾರ ನೀಡಿದ್ದಾರೆಂದೂ, ಈ ವರದಿಯ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯವಿದೆಯೆಂದೂ ಹೇಳುವಲ್ಲಿ ಹೆಮ್ಮೆ ಪಡುತ್ತಿತ್ತು.

ಇಲ್ಲಿ ಮಂಡನೆಯಾದ ವರದಿಯು ಒಳಗೊಂಡ ವಿಷಯದ ಸಂಕ್ಷಿಪ್ತ ವಿವರ ಹೀಗಿದ್ದವು: ಇಡೀ ವರದಿಯು ಭೊಪಾಲ್ ಅನಿಲ ದುರಂತದ ನಂತರದ ಬೆಳವಣಿಗೆಯನ್ನು ಗಮನಹರಿಸಿತ್ತು. ಅಮೆರಿಕಾವು ಪರಿಹಾರವನ್ನು ನೀಡಿದ್ದು, ಭೂಪಾಲ್‌ನಲ್ಲಿ ಆ ಪರಿಹಾರ ನಿಧಿಯ ದುರ್ಬಳಕೆಯಾದದ್ದನ್ನು ಅಂಕಿ ಅಂಶಗಳ ಸಮೇತ ವಿವರಿಸಲಾಯಿತು. ಇಲ್ಲಿನ ಆರೋಗ್ಯ ಇಲಾಖೆಯ ಬೇಜವಬ್ದಾರಿ ನಡವಳಿಕೆಯಿಂದಾಗಿ ಜನರು ಈಗಲೂ ಅದರ ಪರಿಣಾಮವನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ಎತ್ತಿ ತೋರಿಸುತ್ತಿತ್ತು. ಈ ಅಪರಾಧವನ್ನು ಮಾಡಿದವರನ್ನು ಗುರುತಿಸಿ ಶಿಕ್ಷಿಸುವಂತೆಯೂ ಸೂಚಿಸಲಾಗಿತ್ತು. ಇದು ಮಧ್ಯಪ್ರದೇಶ ಸರಕಾರದ ವೈಫಲ್ಯವನ್ನು ಬಿಂಬಿಸುವಂತಿತ್ತು. ಆ ಕಾರಣವನ್ನು ಮುಂದು ಮಾಡಿ ಇಡೀ ದುರಂತಕ್ಕೆ ಕಾರಣವಾದ ಅಮೆರಿಕಾವನ್ನು ತಪ್ಪಿತಸ್ಥ ಭಾವನೆಯಿಂದ ದೂರ ಮಾಡುವ ಸೂಕ್ಷ್ಮಗಳು ಇದ್ದವು. ಇದೊಂದು ಆಕಸ್ಮಿಕವಾಗಿ ಘಟಿಸಿದ ಘಟನೆಯೆಂತಲೂ ಇದಕ್ಕಾಗಿ ಅಮೆರಿಕಾ ದೇಶವು ಸಾಕಷ್ಟು ಅನುಕಂಪವನ್ನು ವ್ಯಕ್ತಪಡಿಸಿದೆಯೆಂತಲೂ, ಅದಕ್ಕೆ ಪೂರಕವಾಗಿ ಸಾಕಷ್ಟು ಪರಿಹಾರವನ್ನು ನೀಡಿದೆಯೆಂತಲೂ ಈ ವರದಿಯಲ್ಲಿ ಬಿಂಬಿತವಾಗಿದ್ದವು. ಒಟ್ಟು ಭೂಪಾಲ್ ಅನಿಲ ದುಂರಂತದಲ್ಲಿ ಭಾರತದ್ದೇ ತಪ್ಪಿದೆ ಎನ್ನುವುದನ್ನು ಅಂಕಿ ಅಂಶಗಳ ಮೂಲಕ ಸಾಬೀತು ಪಡಿಸುವಂತಿತ್ತು. ಈ ತಿಳುವಳಿಕೆಯನ್ನು ಜನರಲ್ಲಿ ಬಿತ್ತಲು ಈ ಎನ್.ಜಿ.ಒ. ಹತ್ತು ವರ್ಷಗಳ ಕಾಲ ಈ ಭಾಗದಲ್ಲಿ ಕೆಲಸ ಮಾಡಿತ್ತು. ಅದು ಅಲ್ಲಿನ ಕೆಲ ಜನರಲ್ಲಿ ಬಲವಾಗಿ ಬೇರೂರಿಸುವಲ್ಲಿ ಸಫಲವೂ ಆಗಿತ್ತು. ಬಹುಶಃ ಅಂತಹ ವರದಿಗಳ ಬೆಂಬಲದಿಂದಾಗಿಯೇ ಭೂಪಾಲ್ ದುರಂತಕ್ಕೆ ಕಾರಣವಾದವರಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಗಿರಲಿಕ್ಕೆ ಸಾದ್ಯವಿದೆ.

ಅನಿಲ ದುರಂತಕ್ಕೆ ಬಲಿಯಾದವರ ಪರವಾಗಿ ಸತ್ಯು ಎಂಬುವವರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಅವರು ವೃತ್ತಿಯಲ್ಲಿ ಎಂಜಿನಿಯರ್ ಆದರೂ ಸಮಾಜ ಸೇವೆಗೆ ತಮ್ಮನ್ನು ಒಪ್ಪಿಸಿಕೊಂಡವರಾಗಿದ್ದರು. ಅವರು ಈ ವರದಿಯನ್ನು ತಾತ್ವಿಕವಾಗಿ ವಿರೋಧಿಸಿದರು. ಈ ವರದಿಯು ಅನಿಲ ದುರಂತದ ಸಮಸ್ಯೆಯ ಗಂಭೀರತೆಯನ್ನು ಲಘುವಾಗಿಸುತ್ತದೆ, ಇದು ಮುಂದೆ ನ್ಯಾಯಾಲಯದ ತೀರ್ಪಿನ ವೇಳೆಯಲ್ಲಿ ಈ ವರದಿಯನ್ನು ಸಾಕ್ಷ್ಯ ಎಂದು ಪರಿಗಣಿಸಿದರೆ ಇದಕ್ಕೆ ಕಾರಣವಾದವರಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತದೆ ಎಂದು ನುಡಿದಿದ್ದರು. ಆದರೆ ಇಡೀ ಸೆಮಿನಾರಿನಲ್ಲಿ ಅವರ ಅಭಿಪ್ರಾಯವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಯಿತು. ಸೆಮಿನಾರಿಗಾಗಿ ಐವತ್ತು ಲಕ್ಷಕ್ಕೂ ಹೆಚ್ಚು ಖರ್ಚಾಗಿರಬಹುದು. ಏಕೆಂದರೆ ಸೆಮಿನಾರಿಗೆ ಬಂದವರಿಗೆ ರಾಜಾತಿಥ್ಯವನ್ನು ನೀಡಲಾಗಿತ್ತು. ಸೆಮಿನಾರ್ ಮುಗಿದ ನಂತರ ಅನಿಲ ದುರಂತವಾದ ಮುನ್ಸಿಪಾಲ್ ಕಾರ್ಪೋರೇಷನ್‌ನ ವಾರ್ಡಗಳ ಭಾಗಕ್ಕೆ ನಮ್ಮನ್ನು ಕರೆದೊಯ್ದಿದ್ದರು. ಅದು ಅತ್ಯಂತ ದಾರಿದ್ರ್ಯ ಬಡತನ ತಾಂಡವಾಡುತ್ತಿದ್ದ ಒಂದು ಸ್ಲಮ್‌ನಂತಿತ್ತು. ದೈಹಿಕ ಅಂಗವೈಕಲ್ಯದ ಲಕ್ಷಣಗಳು ಕಾಣುವ ಜನರೇ ಬಹುವಾಗಿ ಕಾಣಿಸಿಕೊಂಡರು.

ಅಲ್ಲಿನ ಮಕ್ಕಳೆಲ್ಲಾ ತಮ್ಮನ್ನು ನೋಡಲು ಬಂದವರ ಹತ್ತಿರ ಹಸಿದ ಮುಖಹೊತ್ತು ಬಂದರು. ಸೆಮಿನಾರ್ ಆಯೋಜಕರು ಅವರಿಗೆ ಬಿಸ್ಕತ್ತು ಮುಂತಾದ ತಿಂಡಿ ಪದಾರ್ಥಗಳನ್ನು ನೀಡಿದರು. ನಮಗೆ ಆ ಏರಿಯಾದಲ್ಲಿ ಸುತ್ತಾಡಿ ಜನರನ್ನು ಮಾತನಾಡಿಸಬೇಕೆಂಬ ಆಸೆ ಇದ್ದರೂ ಸೆಮಿನಾರ್ ಆಯೋಜಕರು ಅದಕ್ಕೆ ಅವಕಾಶ ಕೊಡಲಿಲ್ಲ. ಪ್ರವೇಶ ನಿಷಿದ್ಧವಾದ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯ ಕಾಂಪೊಂಡಿನೊಳಗೆ ಯಥೇಚ್ಚ ಕುರುಚಲು ಗಿಡಗಳು ಬೆಳೆದು ಸ್ಮಶಾನದಂತೆ ಗೋಚರಿಸುತ್ತಿತ್ತು. ಅನಿಲ ದುರಂತದ ನೆನಪನ್ನು ತರುವ ಸ್ಮಾರಕವೊಂದರ ಕಲಾಕೃತಿ ಮುಗಿಲ ಕಡೆ ಮುಖ ಮಾಡಿ ರೋಧಿಸುತ್ತಿತ್ತು. ಅತ್ಯಂತ ಯಶಸ್ವಿಯಾಗಿ ಸೆಮಿನಾರ್ ನಡೆದುದಕ್ಕೆ ರಾತ್ರಿ ಎನ್.ಜಿ.ಒ. ಸಂಯೋಜಕರುಗಳು ಪಾರ್ಟಿಯನ್ನು ಆಯೋಜಿಸಿದ್ದರು. ಕೆಲವರು ಕುಡಿದ ಮತ್ತಿನಲ್ಲಿ ಅನಿಲ ದುರಂತದಿಂದ ಮಡಿದವರನ್ನು ನೆನೆದು ಅಳುತ್ತಿರುವ ದೃಶ್ಯಗಳು ಮಸುಕು ಮಸುಕಾಗಿ ಕಾಣುತ್ತಿದ್ದವು. ಈಗ ಮಂಡನೆಯಾದ ನ್ಯಾಯಾಲಯದ ತೀರ್ಪಿನ ಹಿಂದೆ ಈ ವರದಿಯ ಪರೋಕ್ಷ ಪ್ರಭಾವ ಇರುವ ಸಾಧ್ಯತೆ ಇದೆ. ಆಗ ಸಂಸ್ಥೆಯ ಸಂಯೋಜಕರುಗಳು ಬಹುಶಃ ಈ ತೀರ್ಪನ್ನು ವಿಜಯದ ಸಂಕೇತವನ್ನಾಗಿ ಆಚರಿಸಿರಬಹುದೇನೋ?

ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿಯೂ ಕಾರ್ಯ ನಿರ್ವಹಿಸುತ್ತಿರುವ ಕೆಲವು ಎನ್.ಜಿ.ಒ. ಅಧ್ಯಯನಗಳ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

Leave a Reply

Your email address will not be published.