Daily Archives: December 5, 2012

ಇತಿಹಾಸದ ಪುಟಗಳು ಮತ್ತು ಯಾವುದೇ ನಿರ್ದಿಷ್ಟ ಅಜೆಂಡಾಗಳಿಲ್ಲದ ಇಂದಿನ ದಿನಗಳು

– ಬಿ. ಶ್ರೀಪಾದ ಭಟ್

ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಇಂಡಿಯಾ ದೇಶದ ಸರ್ಕಾರವು 1990ರಲ್ಲಿ ಮರಣೋತ್ತರವಾಗಿ ‘ಭಾರತರತ್ನ’ ಪ್ರಶಸ್ತಿ ನೀಡಿ ಗೌರವಿಸಿತು. ಅಂದರೆ ಬಾಬಾಸಾಹೇಬರು ನಿಧನರಾಗಿ 34 ವರ್ಷಗಳ ನಂತರ. ಇದು ಸ್ವಾತಂತ್ರ ನಂತರದಲ್ಲಿ ಸುಮಾರು 52 ವರ್ಷಗಳಷ್ಟು ಕಾಲ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಯನ್ನು ಆಕ್ರಮಿಸಿದ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಬರಡುತನವನ್ನು, ಹಗೆತನದ ರಾಜಕಾರಣದ ಕರಾಳ ನೆನಪುಗಳನ್ನು ಬಿಚ್ಚಿಡುತ್ತದೆ.

ಸ್ವಾಂತಂತ್ರ ಹೋರಾಟದ ಸಂದರ್ಭದಲ್ಲಿ ಈ ದೇಶದ ಅಸ್ಪೃಶ್ಯ ಸಮುದಾಯಕ್ಕೆ ಜಾತೀಯತೆಯ ಕಬಂಧಬಾಹುಗಳಿಂದ ಮೊದಲು ಸ್ವಾತಂತ್ರ ಸಿಗಬೇಕು ಎಂದು ಘೋಷಿಸಿದ ಅಂಬೇಡ್ಕರ್ ತಳ ಸಮುದಾಯಗಳ, ಶೋಷಿತ ವರ್ಗಗಳ ಸ್ನೇಹಿತರೂ, ಮಾರ್ಗದರ್ಶಿಗಳೂ, ಪ್ರಶ್ನಾತೀತ ನಾಯಕರೂ ಆಗಿದ್ದರು. ಚಿಂತಕ ಡಿ.ಆರ್.ನಾಗರಾಜ್ ಹೇಳಿದಂತೆ ಮಾರ್ಕ್ಸ್ ಚಿಂತನೆ ಕಾರ್ಮಿಕ ವರ್ಗದ ಜತೆಗೆ ಹೇಗೆ ಬಿಡಿಸಲಾಗದ ಸಂಬಂಧವನ್ನು ಸ್ಥಾಪಿಸಿಕೊಂಡಿದೆಯೋ ಹಾಗೆ ಅಂಬೇಡ್ಕರ್ ಚಿಂತನೆ ಅಸ್ಪೃಶ್ಯರ ಅಥವಾ ದಲಿತರ ಬದುಕಿನ ಜೊತೆಗೆ ಅನಿವಾರ್ಯ ಸಂಬಂಧವನ್ನು ಹೊಂದಿದೆ. ಆದರೆ ಅಂಬೇಡ್ಕರ್ ಅವರನ್ನು ದಲಿತ ಸಮುದಾಯದ ನಾಯಕರೆಂದು ಒಪ್ಪಿಕೊಳ್ಳಲು ಕಾಂಗ್ರೆಸ್‌ನ ಮಡಿವಂತಿಕೆಯ ಕೊಳುಕುತನದ ಮನಸ್ಸಿಗೆ ಸಾಧ್ಯವಾಗಲೇ ಇಲ್ಲ.

1930 ರ ದಶಕದಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳು ಮತ್ತು ಪ್ರತ್ಯೇಕ ಮತದಾನದ ಹಕ್ಕಿಗಾಗಿ ನಿರಂತರವಾಗಿ ಏಕಾಂಗಿಯಾಗಿ ಹೋರಾಡಿದ ಅಂಬೇಡ್ಕರ್ ಅವರ ಮನೋಸ್ಥೈರ್ಯವನ್ನು ಬಾಪೂಜಿಯವರ ಉಪವಾಸ ಸತ್ಯಾಗ್ರಹವನ್ನು ಬಳಸಿಕೊಂಡು ಮಣಿಸಿದ ಕಾಂಗ್ರೆಸ್ ಪಕ್ಷ ಅಂದಿನಿಂದ ಬಾಬಾಸಾಹೇಬರು ಜೀವಂತವಾಗಿರುವವರೆಗೂ ಅವರ ಪ್ರಸ್ತುತತೆಯನ್ನೇ ನಿರ್ಲಕ್ಷಿಸಿದರು. ಕಾಂಗ್ರೆಸ್‌ನ ಎಲೈಟ್ ಗುಂಪಿನ ಒಳಗಿನ ಪ್ರವೇಶಕ್ಕೆ ದಲಿತರಾದ ಅಂಬೇಡ್ಕರ್ ಅವರಿಗೆ ಅವಕಾಶವಿರಲಿಲ್ಲ. ಬದಲಾಗಿ ಈ ಕಾಂಗ್ರೆಸ್ ಎಲೈಟ್ ಗುಂಪು ಅಂಬೇಡ್ಕರ್ ಅವರನ್ನು ಬ್ರಿಟೀಷರ ಏಜೆಂಟರೆಂದು ಮೂದಲಿಸಿದರು. “ಹರಿಜನೋದ್ಧಾರ”ದ ಪರಿಕಲ್ಪನೆಯ ಮೂಲಕ ಸಮಾನತೆಯನ್ನು ಸಾಧಿಸುವ ಗಾಂಧೀಜಿಯವರ ಪ್ರಾಮಾಣಿಕತೆ ಮತ್ತು ಮುಗ್ಧತೆಯಿಂದ ನಂಬಿದ ಚಿಂತನೆಗಳನ್ನು ಆತ್ಮಸಾಕ್ಷಿಯಿಂದ ವಿಮರ್ಶಿಸುವ ಗೋಜಿಗೆ ಹೋಗದೆ ಅದನ್ನೇ ತಮ್ಮ ಅಜೆಂಡವನ್ನಾಗಿ ಮಾಡಿಕೊಂಡ ಕಾಂಗ್ರೆಸ್‌ನ ಎಲೈಟ್ ಗುಂಪು ವ್ಯವಸ್ಥಿತವಾಗಿ ಅಂಬೇಡ್ಕರ್ ಅವರನ್ನು ಭಾರತದ ರಾಜಕಾರಣದಲ್ಲಿ ಅಕ್ಷರಶಃ ಏಕಾಂಗಿಯನ್ನಾಗಿ ಮಾಡಿಬಿಟ್ಟರು.

ತಮ್ಮ ಆತ್ಮಚರಿತ್ರೆಯಲ್ಲಿ ಇದರ ಕುರಿತಾಗಿ ಅತ್ಯಂತ ಮಾರ್ಮಿಕವಾಗಿ ಬರೆಯುವ ನಾಮದೇವ ನಿಮ್ಗಾಡೆಯವರು, “ವಾರ್ಧಾದ ಆಶ್ರಮದಲ್ಲಿ ಬ್ರಾಹ್ಮಣನೊಬ್ಬನ ಕೈಯಲ್ಲಿ ಕಸಗುಡಿಸುವ ಮೂಲಕ ಕೆಳಜಾತಿಯವರಿಗೆ ನೋಡಿ ನಿಮ್ಮ ಕಸ ಗುಡಿಸುವ ಕೆಲಸವೂ ಶ್ರೇಷ್ಠವಾದದ್ದು ಎಂದು ಗಾಂಧಿ ಹೇಳುತ್ತಾರೆ. ಆ ಮೂಲಕ ಪರೋಕ್ಷವಾಗಿ ಬ್ರಾಹ್ಮಣ್ಯದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತಾರೆ. ಆದರೆ ಬಾಬಾ ಸಾಹೇಬರು ಪ್ರತಿಪಾದಿಸುವುದು ಕಸಗುಡಿಸುವವನು ಆ ಕಾಯಕದಿಂದ ಮೇಲಕ್ಕೇರಿ ಶ್ರೇಣೀಕೃತ ವ್ಯವಸ್ಥೆಯ ಮೆಟ್ಟಿಲುಗಳ ಮೇಲಕ್ಕೇರುತ್ತ ಅತ್ಯುತ್ತಮವಾದ ಹುದ್ದೆಯನ್ನು ಅಲಂಕರಿಸಬೇಕೆಂಬುದಾಗಿತ್ತು. ಇದು ಗಾಂಧಿಯವರಿಗೆ ಅರ್ಥವಾಗಲೇ ಇಲ್ಲ,” ಎಂದು ವಿವರಿಸುತ್ತಾರೆ. ಈ ಸರಳ ಚಿಂತನೆಗಳು ಕಾಂಗ್ರೆಸ್‌ನ ಎಲೈಟ್ ಗುಂಪಿಗೆ ಅರ್ಥವಾದರೂ ಅದನ್ನು ಮರೆಮಾಚಿ ಅಂಬೇಡ್ಕರ್ ಅವರಿಗೆ ಪರ್ಯಾಯವಾಗಿ ನಾಯಕನೊಬ್ಬನ ಹುಡುಕಾಟದಲ್ಲಿ ತೊಡಗಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಆಗಲೇ ಬಾಬು ರಾಜೇಂದ್ರ ಪ್ರಸಾದ್ ಅವರ ಮೂಲಕ ಬಿಹಾರದ ತರುಣ ಜಗಜೀವನ ರಾಂ ಅವರನ್ನು ದಲಿತ ನಾಯಕರನ್ನಾಗಿ ರೂಪಿಸುವ ತಂತ್ರ ಹೆಣೆಯುತ್ತಾರೆ ಕಾಂಗ್ರೆಸ್ ನಾಯಕರು.

ಅಂದು ಕಾಂಗ್ರೆಸ್‌ನ ಸ್ವಾರ್ಥದ ಈ ಕಾರ್ಯದ ಫಲವಾಗಿ ಇಂದು ಇಡೀ ದಲಿತ ಸಮುದಾಯ ಪರಸ್ಪರ ಕಚ್ಚಾಡುತ್ತ ಇಡೀ ದಲಿತ ಸಂಘಟನೆಯೇ ದಿಕ್ಕುತಪ್ಪಿ ಕಕ್ಕಾಬಿಕ್ಕಿಯಾಗಿ ನಿಂತಿರುವುದಕ್ಕೆ ನಾವೆಲ್ಲ ಸಾಕ್ಷಿಯಾಗಬೇಕಾಗಿದೆ. ಈ ದುರಂತ ಇಂದು ಯಾವ ಮಟ್ಟಕ್ಕೆ ಬಂದು ತಲುಪಿದೆಯೆಂದರೆ ದಲಿತ ಸಮುದಾಯದ ಬಲ ಮತ್ತು ಎಡ ಗುಂಪುಗಳು ಅಂಬೇಡ್ಕರ್ ಮತ್ತು ಜಗಜೀವನರಾಂ ಬಣಗಳಾಗಿ ಛಿದ್ರಛಿದ್ರವಾಗಿರುವುದು. ಇಡೀ ತಳ ಸಮುದಾಯವನ್ನೇ ಕತ್ತಲ ಕೂಪದಿಂದ ಮೇಲೆಕ್ಕೆತ್ತಿ ಬೆಳಕಿನ ದಾರಿಗೆ ತಂದು ನಿಲ್ಲಿಸಿದ ಬಾಬಾಸಾಹೇಬರು ಇಂಡಿಯಾದ ಸಾಂಸ್ಕೃತಿಕ ವೈಫಲ್ಯ, ರಾಜಕೀಯ ವೈಫಲ್ಯ, ಸಾಮಾಜಿಕ ವೈಫಲ್ಯಗಳ ಫಲವಾಗಿ ಕ್ರಮೇಣವಾಗಿ ಅಸ್ಪೃಶ್ಯರ ಒಂದು ಗುಂಪಿನ ನಾಯಕರಾಗಿ ರೂಪಗೊಂಡ ಮಾದರಿ ಇತಿಹಾಸದ ಅತ್ಯಂತ ಕ್ರೌರ್ಯದ ಅಧ್ಯಾಯಗಳು. ಬಾಬು ಜಗಜೀವನರಾಂ ಅವರನ್ನು ಅಂಬೇಡ್ಕರ್‌ವಾದಿಯಾಗಿಯೇ ಅರ್ಥೈಸಬೇಕಾದಂತಹ ಸಂದರ್ಭದಲ್ಲಿ ಅವರನ್ನು ಬಾಬಾಸಾಹೇಬರ ಪರ್ಯಾಯ ನಾಯಕರನ್ನಾಗಿ ರೂಪಿಸಿ ಬಾಬು ಜಗಜೀವನರಾಂ ಅವರು ರಾಜಕಾರಣದ ಚಕ್ರವ್ಯೂಹದ ದಾಳಗಳಲ್ಲಿ ಹಾದಿ ತಪ್ಪುವಂತೆ ಮಾಡಿದ ಕಾಂಗ್ರೆಸ್‌ನ ನೀಚತನ ಕ್ಷಮಿಸಲು ಸಾಧ್ಯವೇ? ಆದರೆ ಕಾಂಗ್ರೆಸ್‌ನ ಈ ಕುಟಿಲ ತಂತ್ರಗಳು ಫಲಕಾರಿಯಾಗಲಿಲ್ಲ ಎಂಬುದು ಸಮಾಧಾನಕರ ಸಂಗತಿ. ಆದರೂ ದಲಿತರು ಗುಂಪುಗಳಾಗಿ ಒಡೆದದ್ದಕ್ಕೆ ಕಾಂಗ್ರೆಸ್ ಸಂಪೂರ್ಣ ಹೊಣೆ ಹೊರಬೇಕು.

ಅಂಬೇಡ್ಕರ್ ಅವರನ್ನು ಹೀಯಾಳಿಸುವುದಕ್ಕಾಗಿಯೇ, ಅವಮಾನಿಸುವುದಕ್ಕಾಗಿಯೇ ಅಂದಕಾಲತ್ತಿಲ್‌ನ ಪತ್ರಕರ್ತರಾದ ಬಲಪಂಥೀಯ ರಾಜಕಾರಣಿ ಅರುಣ್ ಶೌರಿಯವರು 1997ರಲ್ಲಿ “Worshipping False Gods” ಎನ್ನುವ ಪುಸ್ತಕವನ್ನು ಪ್ರಕಟಿಸುತ್ತಾರೆ. ಬಾಬು ಜಗಜೀವನರಾಂ ಅವರ ಪತ್ನಿಯಾದ ಇಂದ್ರಾಣಿ ದೇವಿಯವರು ತಮ್ಮ ಡೈರಿಯಲ್ಲಿ “ಅಂಬೇಡ್ಕರ್ ಅವರ ಸಮಜಾಯಿಶಿ” ಎನ್ನುವ ಪ್ಯಾರದಲ್ಲಿ ಸ್ವಾತಂತ್ರದ ನಂತರ ರಚಿತಗೊಂಡ ಸರ್ಕಾರದಲ್ಲಿ ತಮಗೆ ಮಂತ್ರಿ ಪದವಿ ದೊರಕಿಸಲು ಗಾಂಧಿಯವರಲ್ಲಿ ಶಿಫಾರಸ್ಸು ಮಾಡಬೇಕೆಂದು ಅಂಬೇಡ್ಕರ್ ಅವರು ತಮ್ಮ ಮನೆಗೆ ಬಂದು ಬಾಬು ಜಗಜೀವನ ರಾಂ ಅವರನ್ನು ಕೇಳಿಕೊಂಡಿದ್ದರು ಎಂದು ಬರೆದಿದ್ದರು. ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಅರುಣ್ ಶೌರಿಯವರು ತಮ್ಮ ಪುಸ್ತಕದಲ್ಲಿ ಅಂಬೇಡ್ಕರ್ ಅವರ ತೇಜೋವಧೆ ಮಾಡಿದ್ದನ್ನು ಹುಸಿಯೆಂದು ಸಾಬೀತುಗೊಳಿಸಲು ನಂತರದ ವರ್ಷಗಳಲ್ಲಿ ಅಕಾಡೆಮಿಕ್ ವಲಯದಿಂದ ಯಾವುದೇ ಬುದ್ಧಿಜೀವಿಗಳು ಮುಂದಾಗದಿದ್ದದು ಒಂದು ದುರಂತವೇ ಸರಿ. ಇಂದಿಗೂ ವರ್ಣಾಶ್ರಮದ ಆರಾಧಕರು, ಸನಾತನವಾದಿ ಅಕ್ಷರಸ್ಥರು ತಮ್ಮ ವಾದ ಮಂಡನೆಗೆ ಬಳಸಿಕೊಳ್ಳುವುದು ಅರುಣ್ ಶೌರಿಯವರ ಪುಸ್ತಕವನ್ನು.

ಅಂಬೇಡ್ಕರ್ ಅವರ ನಿರಂತರ ಹೋರಾಟದ ಫಲವಾಗಿಯೇ ಚುನಾವಣೆಯಲ್ಲಿ ದಲಿತರಿಗಾಗಿ ಮೀಸಲಾತಿ ಕ್ಷೇತ್ರಗಳನ್ನು ರಚಿಸಲಾಯಿತು. ನಂತರವಷ್ಟೇ 1937ರಲ್ಲಿ ಪ್ರಥಮ ಬಾರಿಗೆ ಮೂವತ್ತರ ಹರೆಯದ ರಾಜಕಾರಣಿ ಬಾಬು ಜಗಜೀವನ ರಾಂ ಅವರು ಅಂಬೇಡ್ಕರ್ ಅವರ ಪರಿಶ್ರಮದ ಫಲವಾದ ರಚಿತಗೊಂಡ ಮೀಸಲಾತಿ ಕ್ಷೇತ್ರದಲ್ಲಿ ಸ್ಪಧಿಸಿ ಜಯಗಳಿಸಿ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸುತ್ತಾರೆ. ಅದರೆ ಸ್ವತಂತ್ರ ಭಾರತದ ಸಕ್ರಿಯ ರಾಜಕಾರಣದ ಚುನಾವಣಾ ರಾಜಕೀಯದಲ್ಲಿ ಅಸ್ಪೃಶ್ಯ ಸಮುದಾಯದ ಧೀಮಂತ ನಾಯಕರಾಗಿ ಅಂಬೇಡ್ಕರ್ ಅವರು ನಿರಂತರ ಸೋಲನ್ನು ಅನುಭವಿಸಿದರೆ ಕಾಂಗ್ರೆಸ್‌ನ ಹರಿಜನ ಮುಖವಾಗಿ ಬಾಬು ಜಗಜೀವನ ರಾಂ ಅವರು ಸತತ ಗೆಲುವನ್ನು ಸಾಧಿಸುತ್ತಾರೆ. ಇತಿಹಾಸದ ಈ ವ್ಯಂಗ್ಯಕ್ಕೆ ವ್ಯಾಖ್ಯಾನವೇ ಇಲ್ಲ!!

ಆದರೆ ಕಾಂಗ್ರೆಸ್ ಮಾದರಿಯ ಹುಂಡಾ ರಾಜಕೀಯ ಅತ್ಯಂತ ಸೀಮಿತ ವ್ಯಾಪ್ತಿಯುಳ್ಳದ್ದು ಮತ್ತು ಕಾಂಗ್ರೆಸ್‌ನ ಈ ಒಡೆದು ಆಳುವ ರಾಜಕಾರಣಕ್ಕೆ ಬಲಿಯಾದ ಸಜ್ಜನರಿಗೆ ವರ್ತಮಾನದಲ್ಲಿ ಸ್ಥಾನಮಾನಗಳು ಸಿಗುವುದಾದರೂ ಭವಿಷ್ಯದಲ್ಲಿ ಅವರ ಖ್ಯಾತಿ ಮುಸುಕಾಗುತ್ತಾ ಕಡೆಗೆ ಎಲ್ಲಿಯೂ ಸಲ್ಲದವರಾಗಿ ಬಿಡುತ್ತಾರೆ ಎನ್ನುವುದಕ್ಕೆ ಬಾಬು ಜಗಜೀವನ ರಾಂ ಅವರೇ ಸಾಕ್ಷಿ. ಇಂದು ಅವರ ಮಗಳಾದ ಮೀರಾ ಕುಮಾರ ಹೊರತಾಗಿ ಪ್ರಸ್ತುತ ಸಮಕಾಲೀನ ರಾಜಕಾರಣದಲ್ಲಾಗಲೀ, ಸಾಂಸ್ಕೃತಿಕ ಕ್ಷೇತ್ರದಲ್ಲಾಗಲೀ ಜಗಜೀವನರಾಂ ಅವರ ನೆನಪನ್ನು ಹುಟ್ಟಿಸುವಂತಹ ವಾರಸುದಾರರಾಗಲೀ, ಪಕ್ಷವಾಗಲೀ, ಸಂಘಟನೆಗಳಾಗಲಿ ಇಲ್ಲ!!

ಕಾಂಗ್ರೆಸ್ ರಾಜಕಾರಣದ ಸಂಪ್ರದಾಯವಾದಿ ಪಟ್ಟುಗಳನ್ನು ತಿರಸ್ಕರಿಸಿ ಹಿಂದೂತ್ವದ ಪುರೋಹಿತಶಾಹಿ ಸನಾತನವಾದಿ ಪರಂಪರೆಗೆ ಸೆಡ್ಡು ಹೊಡೆದು ತಳ ಸಮುದಾಯಕ್ಕೆ ಸಂಪೂರ್ಣವಾಗಿ ಪರ್ಯಾಯ ಸಾಂಸ್ಕೃತಿಕ ಮಾದರಿಗಳನ್ನು, ಸಾಮಾಜಿಕ ಹೊಸ ಬಗೆಯ ಆಯಾಮಗಳನ್ನು ಸೃಷ್ಟಿಸಿದ ಅಂಬೇಡ್ಕರ್ ಆ ಕಾರಣಕ್ಕಾಗಿಯೇ ಇಂದಿಗೂ ಅತ್ಯಂತ ಪ್ರಸ್ತುತ ನಾಯಕಾಗುತ್ತಾರೆ, ಆದರೆ ಕಾಂಗ್ರೆಸ್‌ನ ನೆರಳಲ್ಲೇ ಬೆಳೆದ, ಜಾತೀಯತೆಗೆ ಹಿಂದೂ ಧರ್ಮ ಕಾರಣವಲ್ಲ, ಬದಲಾಗಿ ನಾವು ವ್ಯಕ್ತಿಗತವಾಗಿ ಬದಲಾಗಬೇಕು ಎಂದು ಆಶಿಸಿದ ಬಾಬು ಜಗಜೀವನರಾಂ ಎಂದಿಗೂ ಬ್ರಾಹ್ಮಣ್ಯದ ಶಕ್ತಿಗಳನ್ನು ಎದುರು ಹಾಕಿಕೊಳ್ಳಲೇ ಇಲ್ಲ ಎಂದು ರಾಜಕೀಯ ಚಿಂತಕರು ವ್ಯಾಖ್ಯಾನಿಸುತ್ತಾರೆ.್

ಇದು ನಿಜವಿರಲೂಬಹುದೇನೊ. ಏಕೆಂದರೆ ಮೇಲ್ಜಾತಿಗಳು ಹಾಗೂ ಬಲಿಷ್ಠ ಶೂದ್ರ ಜಾತಿಗಳೇ ಪ್ರಧಾನವಾಗಿದ್ದ ಬಿಹಾರನ ಸಾಸಾರಂ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗುತ್ತಿದ್ದ ಜಗಜೀವನ ರಾಂ ಮೇಲ್ಜಾತಿಗಳ ಧಾರ್ಮಿಕ ಯಜಮಾನ್ಯವನ್ನು ಎಂದೂ ಪ್ರಶ್ನಿಸುತ್ತಿರಲಿಲ್ಲ. ಕಟ್ಟಾ ಗಾಂಧಿವಾದಿಯಾಗಿದ್ದ ಜಗಜೀವನ ರಾಂ ಅವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಆ ಪ್ರತಿಮೆಯನ್ನು ನೀರಿನಿಂದ ತೊಳೆದ ಕಮಲಾಪತಿ ತ್ರಿಪಾಠಿಯವರ ಸಂವಿಧಾನ ವಿರೋಧಿ ಕ್ರಮವನ್ನು ಬಾಬುರವರು ತೀವ್ರವಾಗಿ ಖಂಡಿಸಲೇ ಇಲ್ಲ ಮತ್ತು ಪ್ರಶ್ನಿಸಲೂ ಇಲ್ಲ ಎಂದು ವಿಶ್ಲೇಷಕರು ವ್ಯಾಖ್ಯಾನಿಸುತ್ತಾರೆ. ಆದರೆ ಅಂಬೇಡ್ಕರ್ ಅವರು ನಿರಂತರವಾಗಿ ಪ್ರತಿಪಾದಿಸಿದ ಶಿಕ್ಷಣ, ಸಂಘಟನೆ, ಪ್ರತಿಭಟನೆಯ ಮೂಲ ಉದ್ದೇಶವೇ ಅಸ್ಪೃಶ್ಯರಿಗೆ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲೇರುವ ಸಾಧನಗಳು ಎಂಬುದನ್ನು ಕಡೆಗಣಿಸಿದದ್ದು ಜಗಜೀವನ ರಾಂ ಅವರ ಸೋಲೆನ್ನಬಹುದೇ? ತಾವು ಕಾಂಗ್ರೆಸ್‌ನ ದಾಳವಾಗಿರುವುದನ್ನು ಮೌನವಾಗಿ ಸಹಿಸಿಕೊಂಡಿದ್ದು ಬಾಬುರವರ ಸೀಮಿತತೆಯನ್ನು ಸೂಚಿಸುತ್ತದೆಯೇ? ನಾನು ಹಿಂದೂ ಅಲ್ಲ ಅಂದು ಘೋಷಿಸಿದ ಅಂಬೇಡ್ಕರ್‌ರನ್ನು, ಅವರ ಚಿಂತನೆಗಳನ್ನು ಕ್ರಮೇಣ ಮೂಲೆಗುಂಪು ಮಾಡಲು ಮೇಲ್ಜಾತಿ ಶಕ್ತಿಗಳು ಜಗಜೀವನ ರಾಂ ಅವರನ್ನು ಹರಿಜನರನ್ನಾಗಿ ಉಪಯೋಗಿಸಿಕೊಂಡರೆಂದು ಇತಿಹಾಸಕಾರರು ವಿಶ್ಲೇಶಿಸುತ್ತಾರೆ. ಆದರೆ ಇದೆಲ್ಲವೂ ಅರ್ಧಸತ್ಯ. ಕಡೆಗೊಮ್ಮೆ ಈ ದೇಶದಲ್ಲಿ ಚಮ್ಮಾರನಿಗೆ ಪ್ರಧಾನ ಮಂತ್ರಿಯಾಗುವ ಅವಕಾಶವೇ ಇಲ್ಲ ಎಂದು ಅಸಹಾಯಕತೆಯಿಂದ, ಗದ್ಗದಿತರಾಗಿ ನುಡಿಯುತ್ತಾರೆ ಜಗಜೀವನ ರಾಂ.

ಕಾಂಗ್ರೆಸ್‌ನ ನೆರಳಿನಲ್ಲಿ ಮತ್ತು ನಂತರ ಎಪ್ಪತ್ತರ ದಶಕದಲ್ಲಿ ಜನತಾ ಪರಿವಾರದ ನೆರಳಿನಲ್ಲಿ ರಾಜಕೀಯವನ್ನು ನಡೆಸಿದರೂ ಬಾಬು ಜಗಜೀವನ ರಾಂ ಅವರು ವಿವಿಧ ಸರ್ಕಾರಗಳಲ್ಲಿ ರೈಲ್ವೇ, ವ್ಯವಸಾಯ, ಸಹಕಾರ ಖಾತೆಗಳ ಮಂತ್ರಿಗಳಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದರು. ತಾವು ಜವಬ್ದಾರಿ ವಹಿಸಿಕೊಂಡ ಇಲಾಖೆಗಳಲ್ಲಿ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೆ ತಂದ ಜಗಜೀವನ ರಾಂ ಅವರು ಅತ್ಯಂತ ಯಶಸ್ವೀ ಮಂತ್ರಿಗಳಾಗಿ ಪ್ರಸಿದ್ಧಿಯಾಗಿದ್ದರು. ಬಾಬು ಅವರನ್ನು ರೈಲ್ವೇ ಖಾತೆಯ ಪಿತಾಮಹರೆಂದು ಕರೆಯುತ್ತಿದ್ದರು. ಫ್ರೊ.ಜೋಗನ್ ಶಂಕರ್ ಹೇಳುವಂತೆ ಭಾರತದಲ್ಲಿ ಕೂಲಿ ಕಾರ್ಮಿಕರ ಸಂಘಟನೆಯ ಬೀಜ ಬಿತ್ತಿದ್ದು ಬಾಬು ಜಗಜೀವನ ರಾಂ. ಪ್ರಧಾನಮಂತ್ರಿಗಳಾಗುವ ಎಲ್ಲಾ ಅರ್ಹತೆಗಳಿದ್ದರೂ ಕಾಂಗ್ರೆಸ್‌ನ ಕುಟಿಲ ರಾಜಕಾರಣದ ಫಲವಾಗಿ ಐವತ್ತರ ದಶಕದಲ್ಲಿ ಅಂಬೇಡ್ಕರ್‌ರಂತೆ ಎಪ್ಪತ್ತರ ದಶಕದ ಕೊನೆ ಕೊನೆಗೆ ಏಕಾಂಗಿ ರಾಜಕಾರಣಿಯಾಗಿ ಸೋತುಹೋದರು.

ಇಂದು ಒಳ ಮೀಸಲಾತಿಯ ಪರ ಮತ್ತು ವಿರೋಧವಾಗಿ ನಡೆಯುತ್ತಿರುವ ಹೋರಾಟಗಳಿಗೆ ಮೇಲಿನ ಇತಿಹಾಸದ ಘಟನೆಗಳು ಸಾಕ್ಷೀಪ್ರಜ್ಞೆಯಾಗಿ ನಿಲ್ಲಬೇಕು. ಏಕೆಂದರೆ ಒಳ ಮೀಸಲಾತಿಯು ಇಂದು ಅನಿವಾರ್ಯ. ಇದು ವಿಕೇಂದ್ರಿಕರಣದ ಮುಂದುವರೆದ ಪ್ರಕ್ರಿಯೆ. ಸದಾಶಿವ ಆಯೋಗವು ಈ ಒಳ ಮೀಸಲಾತಿಯನ್ನು ಬೆಂಬಲಿಸಿದೆ ಎನ್ನುವ ಪತ್ರಿಕೆಗಳ ವರದಿಯನ್ನಾಧರಿಸಿ ಸದಾಶಿವ ಆಯೋಗದ ಜಾರಿಗಾಗಿ ಒತ್ತಾಯಿಸಿ ಒಂದು ಗುಂಪಿನ ಅನೇಕ ದಲಿತ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಆದರೆ ಯಾರೊಬ್ಬರೂ ಸದಾಶಿವ ಆಯೋಗವನ್ನು ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಚರ್ಚಿಸಿ ವಿಧಾನಸಭೆಯಲ್ಲಿ ಮಂಡಿಸಬೇಕೆಂದು ಒತ್ತಾಯಿಸುತ್ತಿಲ್ಲ. ಇದೇ ಸದಾಶಿವ ಆಯೋಗವನ್ನು ವಿರೋಧಿಸಿ ಲಂಬಾಣಿಗಳು ಮತ್ತು ಬೋವಿ ಜನಾಂಗದವರು ವಿರೋಧಿಸುತ್ತಿದ್ದಾರೆ. ಇವರಿಗೆ ದಲಿತ ಸಮುದಾಯದ ಬಲಗೈ ಗುಂಪು ಬೆಂಬಲಿಸುತ್ತಿದ್ದಾರೆಂದು ಮಾತಿದೆ. ಹಿಂದೊಮ್ಮೆ ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರನ್ನು ಸೋಲಿಸುವುದಕ್ಕಾಗಿ ಹೆಣೆದ ವಿವಿಧ ಕುತಂತ್ರಗಳನ್ನೇ ಇಂದಿನ ಎಲ್ಲಾ ರಾಜಕೀಯ ಪಕ್ಷಗಳ ಸಿದ್ಧಾಂತಗಳೂ ಅನುಸರಿಸುತ್ತಿವೆ.

ಯಾವುದೇ ನಿರ್ದಿಷ್ಟ ಅಜೆಂಡಾಗಳಿಲ್ಲದೆ, ಖಚಿತ ಕಾರ್ಯಸೂಚಿಗಳಿಲ್ಲದೆ ಕೇವಲ ಪ್ರತಿಕ್ರಿಯಾತ್ಮಕವಾಗಿ ಹೋರಾಡುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪ್ರಗತಿಪರ ಗುಂಪುಗಳನ್ನು, ದಲಿತ ಸಂಘಟನೆಗಳನ್ನು ದಾರಿ ತಪ್ಪಿಸಲು ಮತ್ತು ತಮ್ಮೊಳಗೆ ಕಚ್ಚಾಡಿಕೊಳ್ಳುವಂತೆ ಅನುವಾಗಲು ಸದಾಶಿವ ಆಯೋಗವನ್ನು ದಾಳವಾಗಿ ಸರ್ಕಾರವು ಬಳಸಿಕೊಂಡಿರಬಹುದೇ?

ಕಡೆಯದಾಗಿ, ಸವರ್ಣೀಯ ಬಲಿಷ್ಠ ಜಾತಿಗಳು ಒಗ್ಗಟ್ಟಾಗಿ ಸಂಘಟಿತರಾಗುತ್ತಿದ್ದರೆ ಪರಿಶಿಷ್ಟ ಪಂಗಡದವರು ತಮ್ಮೊಳಗಿನ ಅಸಮಾನತೆಯಿಂದಾಗಿ, ಅಪನಂಬಿಕೆಯಿಂದಾಗಿ ಬೇರ್ಪಡುತ್ತಿರುವುದು ಬಲು ದೊಡ್ಡ ದುರಂತ. ಈ ವಿಘಟನೆಗಳಿಗೆ ಅಂಬೇಡ್ಕರ್ ಮತ್ತು ಜಗಜೀವನ ರಾಂ ಅವರನ್ನು ಕಾರಣವಾಗಿಟ್ಟುಕೊಂಡು ಇತಿಹಾಸದ ಆಧ್ಯಾಯಗಳು ತಪ್ಪು ಕಾರಣಗಳಿಗಾಗಿ ಬಳಕೆಯಾಗುತ್ತಿರುವುದು ಪ್ರಜಾಪ್ರಭುತ್ವದ, ಪ್ರಗತಿಪರ ಚಳುವಳಿಗಳ ಬಲು ದೊಡ್ಡ ಸೋಲೇ ಸರಿ.