Daily Archives: December 6, 2012

ಪ್ರಜಾ ಸಮರ – 12 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಭಾರತದ ನೆಲದಲ್ಲಿ ತಮ್ಮದೇ ಆದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವ, ಈ ನೆಲದ ನಿಜ-ವಾರಸುದಾರರೆಂದು ಹೇಳಲಾಗುವ ಆದಿವಾಸಿಗಳ ಹಕ್ಕು ಕುರಿತಂತೆ ಈ ದೇಶದಲ್ಲಿ ಪ್ರಥಮ ಬಾರಿಗೆ ಧ್ವನಿ ಎತ್ತಿದ್ದು ಮಾವೋವಾದಿ ನಕ್ಸಲರ ಸಂಘಟನೆಯಲ್ಲ, ಇದೇ ನಕ್ಸಲ್ ವಿಚಾರಧಾರೆ ಕುಡಿಯೊಡೆದ ನೆಲವಾದ ಆಂಧ್ರ ಪ್ರದೇಶದ ಉತ್ತರ ತೆಲಂಗಾಣದ ಅಲ್ಲೂರಿ ಸೀತಾರಾಮರಾಜು ಎಂಬ ಒಬ್ಬ ಅಪ್ರತಿಮ ನಾಯಕ ಮತ್ತು ದೇಶಭಕ್ತ. ಇಂದಿನ ಬಸ್ತಾರ್ ಅರಣ್ಯ ಪ್ರದೇಶವೆಂದು ಕರೆಯುವ ಆಂಧ್ರ ಗಡಿ ಭಾಗದ ಅರಣ್ಯ ಸೇರಿದಂತೆ ಮಧ್ಯಪ್ರದೇಶ, ಒರಿಸ್ಸಾ, ಆಂಧ್ರದ ಗಡಿಭಾಗದ ಅರಣ್ಯದಲ್ಲಿ ವಾಸವಾಗಿರುವ ಚೆಂಚು ಎಂಬ ಬುಡಕಟ್ಟು ಜನಾಂಗದ ಪರವಾಗಿ 1920 ರ ದಶಕದಲ್ಲಿ ಬ್ರಿಟಿಷರ ವಿರುದ್ಧ ಪ್ರಥಮ ಬಾರಿಗೆ ಧ್ವನಿ ಎತ್ತಿ ಹೋರಾಡಿ ಅವರಿಂದ ಅಮಾನುಷವಾಗಿ ಹತ್ಯೆಯಾದ ಹುತಾತ್ಮ ಮತ್ತು ಸ್ವಾತಂತ್ರ್ಯ ಹೋರಾಟಗಾರ ಈ ಅಲ್ಲೂರಿ ಸೀತಾರಾಮರಾಜು.

ಭಾರತದ ಆದಿವಾಸಿಗಳು ತಮ್ಮ ಸಂಸ್ಕೃತಿ ಮತ್ತು ಬದುಕಿಗೆ ಧಕ್ಕೆ ಬಂದಾಗ ಬ್ರಿಟಿಷರು ಮಾತ್ರವಲ್ಲ, ಮರಾಠ ಸಾಮಂತರು, ನಿಜಾಮರು, ಮೊಗಲರು, ಹೀಗೆ ಎಲ್ಲರ ವಿರುದ್ದ ಯುದ್ದ ಸಾರಿದ ಘಟನೆಗಳು ಇತಿಹಾಸದಲ್ಲಿ ದಾಖಲಾಗಿವೆ. ಮಧ್ಯಪ್ರದೇಶದ ಗೊಂಡ ಆದಿವಾಸಿಗಳಿಗೆ ಅವರದೇ ಜನಾಂಗದ ಒಬ್ಬ ಸಾಮಂತನಿದ್ದ ಎಂಬುದಕ್ಕೆ ಮಹಾರಾಷ್ಟ್ರದ ಗೊಂಡಿಯ ಮತ್ತು ಮಧ್ಯಪ್ರದೇಶದ ಬಾಳ್‌ಘಾಟ್ ಜಿಲ್ಲೆಯ ನಡುವೆ ಅರಣ್ಯದ ಮಧ್ಯೆ ಇರುವ ಲಾಂಜಿ ಎಂಬ ಹಳ್ಳಿಯಲ್ಲಿ ಸಾಮಂತ ನಿರ್ಮಿಸಿದ್ದ ಮಣ್ಣಿನ ಕೋಟೆ ಈಗಲೂ ಅಸ್ತಿತ್ವದಲ್ಲಿದೆ. ಅಲ್ಲದೆ ಈ ಕೋಟೆಯ ಸಮೀಪವಿರುವ ಶಿವನ ದೇವಸ್ಥಾನಕ್ಕೆ ಸಾವಿರಾರು ಆದಿವಾಸಿಗಳು ಈಗಲೂ ಭೇಟಿ ನೀಡುತಿದ್ದಾರೆ. ಈಗ ಬಿಹಾರದ ರಾಂಚಿ ಜಿಲ್ಲೆಗೆ ಸೇರಿರುವ ಅರಣ್ಯದಲ್ಲಿ 1900 ರಲ್ಲಿ ಮುಂಡಾ ಎಂಬ ಆದಿವಾಸಿ ಜನಾಂಗದ ಬಿರ್‍ಸಾ ಮುಂಡಾ ಎಂಬ ನಾಯಕ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ಕೂಡ ಇತಿಹಾಸದಲ್ಲಿ ದಾಖಲಾಗಿದೆ. ಆದರೆ, ಆದಿವಾಸಿ ಜನಾಂಗಕ್ಕೆ ಸೇರದ ಅಂಧ್ರದ ಈ ಮೇಲ್ಜಾತಿಗೆ ಸೇರಿದ ಯುವಕ ನಡೆಸಿದ ಹೋರಾಟ ಮಾತ್ರ ಅವಿಸ್ಮರಣೀಯವಾದುದು.

ಬ್ರಿಟಿಷರ ಫಿರಂಗಿ, ಬಂದೂಕಗಳ ನಡುವೆ ಬಿಲ್ಲು ಬಾಣಗಳನ್ನು ಹಿಡಿದು ಚೆಂಚು ಎಂಬ ಬುಡಕಟ್ಟು ಜನಾಂಗವನ್ನು ಬೆನ್ನಿಗೆ ಕಟ್ಟಿಕೊಂಡು ಹೋರಾಡುತಿದ್ದ ಅಲ್ಲೂರಿ ಸೀತಾರಾಮರಾಜುವನ್ನು ಅಂತಿಮವಾಗಿ ಸೆರೆ ಹಿಡಿದ ಬ್ರಿಟೀಷರು ದರೋಡೆಕೋರ ಎಂಬ ಪಟ್ಟ ಕಟ್ಟಿದಾಗ, ಕೆಚ್ಚೆದೆಯಿಂದ ಕೆರಳಿ ನಿಂತ ಸಾಹಸಿ ಈತ, ಈ ದೇಶವನ್ನು ಕೊಳ್ಳೆ ಹೊಡೆಯಲು ಬಂದ ನೀವು ನಿಜವಾದ ದರೋಡೆಕೋರರು, ನಾನಲ್ಲ ಎಂದು ಮುಖಕ್ಕೆ ಬಾರಿಸಿದ ಹಾಗೆ ಹೇಳಿದ ಅಪ್ರತಿಮ ಧೈರ್ಯಶಾಲಿ.

1887 ರ ಜುಲೈ 4 ರಂದು ವಿಶಾಖಪಟ್ಟಣ ಜಿಲ್ಲೆಯ ಪಂಡುರಂಗಿ ಎಂಬ ಗ್ರಾಮದದಲ್ಲಿ ಜನಿಸಿದ ರಾಜುವಿನ ತಂದೆ ಆಗಿನ ಬ್ರಿಟಿಷ್ ಆಳ್ವಿಕೆಯ ಸರ್ಕಾರದಲ್ಲಿ ರಾಜಮಂಡ್ರಿ ಸರೆಮನೆಯಲ್ಲಿ ಪೋಟೊಗ್ರಾಪರ್ ಆಗಿ ಕೆಲಸಮಾಡುತಿದ್ದರು. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ಸೀತಾರಾಮರಾಜು ನಂತರ ತಂದೆಯ ಊರಾದ ಭೀಮಾವರಂ ಸಮೀಪದ ಮೊಗಳ್ಳು ಗ್ರಾಮದಲ್ಲಿ ಚಿಕ್ಕಪ್ಪನಾದ ರಾಮಚಂದ್ರ ರಾಜು ಎಂಬುವರ ಆಶ್ರಯದಲ್ಲಿ ಬೆಳೆಯಬೇಕಾಯಿತು. ಚಿಕ್ಕಪ್ಪ ಪಶ್ಚಿಮ ಗೋದಾವರಿ ಜಲ್ಲೆಯ ನರಸಾಪುರದಲ್ಲಿ ತಹಶಿಲ್ದಾರ್ ಆಗಿ ಕೆಲಸ ನಿರ್ವಹಿಸುತಿದ್ದರಿಂದ ಸೀತಾರಾಮು ರಾಜುವಿಗೆ ಅರ್ಥಿಕವಾಗಿ ನೆರವಾಗಿದ್ದರು. ಕಾಲೇಜು ಶಿಕ್ಷಣಕ್ಕಾಗಿ ತಾಯಿಯ ತವರೂರಾದ ವಿಶಾಖಪಟ್ಟಣಕ್ಕೆ ಬಂದ ಈತ ಅಲ್ಲಿ ಎ.ವಿ.ಎನ್. ಕಾಲೇಜಿಗೆ ದಾಖಲಾದನು. ೧೯೧೨-೧೩ರ ವೇಳೆಗೆ ಮೆಟ್ರಿಕ್ ಓದುತಿದ್ದಾಗಲೇ ಕ್ರಾಂತಿಕಾರಿ ವಿಚಾರಗಳಿಂದ ಪ್ರಭಾವಿತರಾಗಿದ್ದ ರಾಜು, ಭಾರತದ ಸ್ವಾತಂತ್ರಕ್ಕಾಗಿ ಹೋರಾಡಲು ಪಣ ತೊಟ್ಟಿದ್ದನು.

ಇದೇ ವೇಳೆಗೆ ಬ್ರಿಟಿಷರು ಆದಿವಾಸಿ ಬುಡಕಟ್ಟು ಜನಾಂಗಗಳ ವಿರುದ್ಧ ಜಾರಿಗೆ ತಂದ 1882ರ ಅರಣ್ಯ ಕಾಯ್ದೆಯ ಕಾನೂನು ಆತನ ಹೋರಾಟಕ್ಕೆ ವೇದಿಕೆಯಾಯಿತು. ಬ್ರಿಟಿಷರ ವಿರುದ್ಧ ಪ್ರತಿಭಟಿಸುವ ಸಲುವಾಗಿ ಶಿಕ್ಷಣ ತೊರೆದು ಆದಿವಾಸಿಗಳನ್ನು ಸಂಘಟಿಸುವುದರ ಮೂಲಕ ಅವರ ಪರ ಹೋರಾಟಕ್ಕೆ ಇಳಿದನು. ಅರಣ್ಯ ಕಾಯ್ದೆ ಪ್ರಕಾರ ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ಆದಿವಾಸಿಗಳು ತಮ್ಮ ಪೋಡುಗಳನ್ನು( ಹಳ್ಳಿ) ಬಿಟ್ಟು ಬೇರೊಂದೆಡೆ ವಲಸೆ ಹೋಗಬಾರದು. ಇದು ಆದಿವಾಸಿಗಳ ಸಹಜ ಬದುಕಿನ ಮೇಲೆ ನಿಯಂತ್ರಣ ಹೇರುವ ಕಾನೂನಾಗಿತ್ತು. ಕೃಷಿ ಚಟುವಟಿಕೆ ಮತ್ತು ಪ್ರಾಣಿಗಳ ಬೇಟೆ, ಅರಣ್ಯದ ಕಿರು ಉತ್ಪನ್ನಗಳನ್ನು ನಂಬಿ ಬದುಕುತಿದ್ದ ಈ ಜನರು ಬೇಸಾಯಕ್ಕಾಗಿ ಬೇರೆಡೆ ಹೋಗುವುದು ಅನಿವಾರ್ಯವಾಗಿತ್ತು. ಏಕೆಂದರೆ, ಅವರು ಒಂದು ಪ್ರದೇಶದಲ್ಲಿ ಒಮ್ಮೆ ಬೆಳೆ ತೆಗೆದ ನಂತರ ನಂತರ ಭೂಮಿಯನ್ನು ಹಲವಾರು ವರ್ಷಗಳ ಕಾಲ ಹಾಗೆಯೇ ಬಿಡುವುದು ವಾಡಿಕೆಯಾಗಿತ್ತು. ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳುವ ಮತ್ತು ನಿಸರ್ಗಕ್ಕೆ ಎರವಾಗದ ರೀತಿ ಇದ್ದ ಅವರ ದೇಶಿ ಜ್ಞಾನ ಆದಿವಾಸಿಗಳ ಬದುಕಿನೊಳಗೆ ಪರಂಪರಾನುಗತವಾಗಿ ಬೆಳೆದು ಬಂದಿತ್ತು. ಅಕ್ಷರ ಲೋಕದಿಂದ ವಂಚಿತರಾಗಿ, ನಾಗರೀಕತೆಯಿಂದ ದೂರವಾಗಿದ್ದ ಚಂಚು ಬುಡಕಟ್ಟು ಜನರ ಪರವಾಗಿ ಅಲ್ಲೂರಿ ಸೀತಾರಾಮರಾಜು ನಡೆಸಿದ ಹೋರಾಟ “ರಂಪ ದಂಗೆ” ಎಂದು ಆಂಧ್ರದ ಇತಿಹಾಸದಲ್ಲಿ ದಾಖಲಾಗಿದೆ.

ಬ್ರಿಟಿಷರ ಅಮಾನವೀಯವಾದ ಈ ಅರಣ್ಯ ಕಾನೂನಿನ ವಿರುದ್ಧ ಸಮರ ಸಾರುವ ಮುನ್ನ ಆದಿವಾಸಿಗಳನ್ನು ಸಂಘಟಿಸಿದ ರಾಮರಾಜು ಹೋರಾಟಕ್ಕೆ ಮುನ್ನ ಆದಿವಾಸಿಗಳಲ್ಲಿ ಮನೆ ಮಾಡಿಕೊಂಡಿದ್ದ ಹಲವು ಅನಿಷ್ಟ ಆಚರಣೆಗಳನ್ನು (ಭಾನಾಮತಿ, ನರಬಲಿಯಂತಹ ಪದ್ಧತಿಗಳು) ಹೋಗಲಾಡಿಸಿದ್ದ. ಆದಿವಾಸಿಗಳ ಸೇನೆಯೊಂದನ್ನು ಕಟ್ಟಿಕೊಂಡು ಬ್ರಿಟಿಷರ ಕಚೇರಿಗಳ ಮೇಲೆ ದಾಳಿನಡೆಸಿದ. ಅಲ್ಲೂರಿ ಸೀತಾರಾಮರಾಜು ರೂಪಿಸಿದ್ದ ಯೋಜನೆಗಳು ಆತನಿಗೆ ಯಶಸ್ಸು ತಂದುಕೊಟ್ಟವು. ಈತನ ಮಾರ್ಗದರ್ಶನದಲ್ಲಿ ತಯಾರಾದ ಆದಿವಾಸಿಗಳ ತಂಡ ಬ್ರಿಟಿಷರ ಕಚೇರಿ ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ಬಂದೂಕ ಮತ್ತು ಮದ್ದು ಗುಂಡುಗಳನ್ನು ದೋಚಿತು. ಇದಲ್ಲದೆ, ಇವರ ಮೇಲೆ ಕ್ರಮಕೈಗೊಳ್ಳಲು ಅರಣ್ಯಕ್ಕೆ ಬಂದ ಬಂದ ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ಹಾಕಿತು.

ಈ ಬೆಳವಣಿಗೆಯಿಂದ ವಿಚಲಿತವಾದ ಬ್ರಿಟಿಷ್ ಸರ್ಕಾರ 1922 ರಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಹೋರಾಡಿ ಅನುಭವ ಇದ್ದ ಅಸ್ಸಾಂ ರೈಫಲ್ ಸೇನೆಯನ್ನು ಆಂಧ್ರಕ್ಕೆ ಕರೆಸಿಕೊಂಡಿತು. ಸೇನೆಯು ಬಸ್ತರ್ ಪ್ರದೇಶದ ಗಡಿಭಾಗದ ಅರಣ್ಯಕ್ಕೆ ಆಗಮಿಸಿದಾಗ, ಅರಣ್ಯದಲ್ಲಿ ಭೂಗತನಾಗಿದ್ದುಕೊಂಡು ಹೋರಾಟ ನಡೆಸುತಿದ್ದ ಸೀತಾರಾಮ ರಾಜುವನ್ನು 1924 ರಲ್ಲಿ ಆಂದ್ರದ ಪೊಲೀಸ್ ಅಧಿಕಾರಿ ಜ್ಞಾನೇಶ್ವರ ರಾವ್ ಎಂಬಾತ ಸೆರೆ ಹಿಡಿದನು. ಅಲ್ಲೂರಿ ಸೀತಾರಾಮರಾಜುವನ್ನು ಮರಕ್ಕೆ ಕಟ್ಟಿ ಹಾಕಿದ ಬ್ರಿಟಿಷ್ ಅಧಿಕಾರಿಗಳು ಸಾವಿರಾರು ಆದಿವಾಸಿಗಳ ಎದುರಿನಲ್ಲಿ ಆತನ ಎದೆಗೆ ಗುಂಡಿಟ್ಟು ಕೊಂದು ಹಾಕಿದರು. ಸೀತಾಮರಾಜುನನ್ನು ಹಿಡಿದು ಕೊಟ್ಟ ಪೊಲೀಸ್ ಅಧಿಕಾರಿಗೆ ಬ್ರಿಟಿಷ್ ಸರ್ಕಾರ “ರಾವ್ ಬಹದ್ದೂರ್” ಎಂಬ ಬಿರುದು ನೀಡಿ ಗೌರವಿಸಿತು.

ಆದಿವಾಸಿಗಳ ಮತ್ತು ಉತ್ತರ ತೆಲಂಗಾಣದ ಜನರ ಬಾಯಲ್ಲಿ “ಮಾನ್ಯಂ ವೀರುಡು” (ಅರಣ್ಯದ ನಾಯಕ) ಎಂದು ಕರೆಸಿಕೊಳ್ಳು ಈ ಹುತಾತ್ಮನ ಬಗ್ಗೆ ಸ್ವಾತಂತ್ರ್ಯಾನಂತರ ಅಸ್ತಿತ್ವಕ್ಕೆ ಆಂಧ್ರ ಸರ್ಕಾರ ಒರಿಸ್ಸಾ, ಮಧ್ಯಪ್ರದೇಶ (ಇಂದಿನ ಛತ್ತೀಸ್‌ಗಡ್), ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಂತೆ ಇರುವ ಅರಣ್ಯ ಪ್ರದೇಶಕ್ಕೆ ಅಲ್ಲೂರಿ ಸೀತಾರಾಮರಾಜು ಅರಣ್ಯ ವಲಯ ಎಂದು ಘೋಷಿಸಿ ಗೌರವಿಸಿದೆ. ವಿಶಾಖಪಟ್ಟಣ ನಗರದ ಕಡಲ ತಡಿಯ ರಸ್ತೆಗೆ (ಬೀಚ್ ರೋಡ್) ಸೀತಾರಾಮರಾಜುವಿನ ಹೆಸರಿಟ್ಟು, ಪ್ರತಿಮೆಯನ್ನು ಸಹ ನಿಲ್ಲಿಸಲಾಗಿದೆ. ಭಾರತ ಸಕಾರ 1997 ರಲ್ಲಿ ಈತನ ಜನ್ಮಶತಾಬ್ಧಿಯ ಅಂಗವಾಗಿ ಅಂಚೆ ಚೀಟಿಯನ್ನು ಹೊರತಂದಿತ್ತು. ಈಗಿನ ತೆಲಗು ಚಿತ್ರರಂಗದ ಸೂಪರ್‍ಸ್ಟಾರ್‌ಗಳಲ್ಲಿ ಒಬ್ಬನಾಗಿರುವ ಯುವ ನಟ ಮಹೇಶ್ ಬಾಬುವಿನ ತಂದೆ, ಹಿರಿಯ ನಟ ಕೃಷ್ಣ 1980 ರಲ್ಲಿ ತಮ್ಮ ನೂರನೇ ಚಿತ್ರವಾಗಿ ಅಲ್ಲೂರಿ ಸೀತಾರಾಮರಾಜು ಚಿತ್ರವನ್ನು ನಿರ್ಮಿಸಿದ್ದರು. ಸ್ವತಃ ತಾವೇ ಸೀತರಾಮುವಿನ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಇವತ್ತಿಗೂ ತೆಲುಗು ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದು.

ಇಂತಹ ಸುಧೀರ್ಘ ಇತಿಹಾಸವಿರುವ ಬಸ್ತಾರ್ ಅರಣ್ಯ ವಲಯಕ್ಕೆ 1980ರ ದಶಕದಲ್ಲಿ ಆಂಧ್ರದ ಪೀಪಲ್ಸ್ ವಾರ್ ಗ್ರೂಪ್‌ನ ಕಾರ್ಯಕರ್ತರು ಪ್ರವೇಶ ಮಾಡುವ ಮುನ್ನವೇ 70ರ ದಶಕದಲ್ಲಿ ಇಲ್ಲಿನ ಆದಿವಾಸಿ ಜೊತೆ ಪಶ್ಚಿಮ ಬಂಗಾಳದ ನಕ್ಸಲ್ ಕಾರ್ಯಕರ್ತರು ಸಹ ಸಂಪರ್ಕ ಸಾಧಿಸಿದ್ದರು.

ಪಶ್ಚಿಮ ಬಂಗಾಳದಲ್ಲಿ ನಕ್ಸಲ್ ಚಳುವಳಿಯ ಕಿಚ್ಚು ಹತ್ತಿಸಿದ ಚಾರು ಮುಜಮದಾರ್ ಮಾರ್ಗದರ್ಶನದಲ್ಲಿ ಜೋಗು ರಾಯ್ ಎಂಬ ಸಿ.ಪಿ.ಐ.(ಎಂ.ಎಲ್.) ನಾಯಕ ಈ ಪ್ರದೇಶಕ್ಕೆ ಭೇಟಿ ನೀಡಿ “ಕ್ರಾಂತಿಕಾರಿ ಕಿಸಾನ್ ಮಜ್ದೂರ್ ಪಾರ್ಟಿ” ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದ. ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿ, ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಹೋಗಿದ್ದ ಆದಿವಾಸಿಗಳು ತಮ್ಮ ರಕ್ಷಣೆಗೆ ಬಂದ ನಕ್ಸಲ್ ಕಾರ್ಯಕರ್ತರನ್ನು ಸ್ವಾಗತಿಸಿದ್ದರು. ಪ್ರಥಮ ಬಾರಿಗೆ ಜಗದಾಲ್ ಪುರ್ (ಈಗ ಛತ್ತೀಸ್‌ಘಡದ ಒಂದು ಜಿಲ್ಲಾ ಕೇಂದ್ರ) ಪಟ್ಟಣದಲ್ಲಿ ಭಿತ್ತಿಪತ್ರಗಳು ಕಾಣಿಸಿಕೊಂಡಿದ್ದವು.

ಈ ಘಟನೆ ಹೊರತು ಪಡಿಸಿದರೆ, 1980 ರಲ್ಲಿ ಪೆದ್ದಿ ಶಂಕರ್ ಮಹರಾಷ್ಟ್ರದ ಗಡ್‌ಚಿರೋಲಿ ಅರಣ್ಯ ಪ್ರದೇಶಕ್ಕೆ ಕಾಲಿಟ್ಟ ಸಂದರ್ಭದಲ್ಲಿ ವೇಣು ಎಂಬ ಇನ್ನೊಬ್ಬ ಯುವಕ ಬಸ್ತಾರ್ ಅರಣ್ಯ ವಲಯ ಪ್ರವೇಶಿಸಿ ಆದಿವಾಸಿಗಳ ಜೊತೆ ಕಳಚಿ ಹೋಗಿದ್ದ ನಕ್ಸಲ್ ಸಂಬಂಧದ ಕೊಂಡಿಯನ್ನು ಮತ್ತೇ ಬೆಸೆದ. (ಈಗಿನ ಬಸ್ತಾರ್ ಅರಣ್ಯದ ನಕ್ಸಲರ ಹಿರಿಯ ನಾಯಕನಾಗಿ ವೇಣು ಕಾರ್ಯ ನಿರ್ವಹಿಸುತಿದ್ದಾನೆ.)

ಬಸ್ತಾರ್ ಅರಣ್ಯಕ್ಕೆ ದಕ್ಷಿಣದಿಂದ ಅಂಧ್ರದ ನಕ್ಸಲ್ ಸಂಘಟನೆ ಮತ್ತು ಪೂರ್ವದಿಂದ ಪಶ್ಚಿಮ ಬಂಗಾಳದ ನಕ್ಸಲರು ಪ್ರವೇಶಿಸುವ ಮುನ್ನ ಅನಕ್ಷರಸ್ತ ಆದಿವಾಸಿಗಳಿಗೆ ದಿಕ್ಕು, ದೆಸೆ, ಆಧಾರವಾಗಿ ಹಲವಾರು ಉದಾತ್ತ ಮನೋಭಾವದ ವ್ಯಕ್ತಿಗಳು ಕೆಲಸ ಮಾಡುತಿದ್ದರು. ಇವರುಗಳಲ್ಲಿ ಅಸ್ಪತ್ರೆ ಸ್ತಾಪಿಸಿದ ಬಾಬಾ ಅಮ್ಟೆ, ಶಿಕ್ಷಣಕ್ಕಾಗಿ ಹಳ್ಳಿಗಳಲ್ಲಿ ಶಾಲೆ ತೆರೆದ ಕೊಲ್ಕತ್ತ ನಗರದ ರಾಮಕೃಷ್ಣ ಮಿಷನ್ ಸಂಸ್ಥೆಯ ಪದಾಧಿಕಾರಿಗಳು, ಆರೋಗ್ಯ ಶಿಬಿರ ಏರ್ಪಡಿಸಿ, ಚಿಕಿತ್ಸೆ ನೀಡುತಿದ್ದ, ವೃತ್ತಿಯಲ್ಲಿ ವೈದ್ಯೆಯಾಗಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರ ಪುತ್ರಿ ಹಾಗೂ ಆಕೆಯ ಪತಿ ಮತ್ತು ಹಿಮಾಂಶುಕುಮಾರ್ ಮೊದಲಾದವರು ಮುಖ್ಯರಾಗಿದ್ದಾರೆ.

(ಮುಂದುವರೆಯುವುದು)