ಭ್ರಷ್ಟಾಚಾರ ಮಾಡಿ ಜೈಲು ಸೇರುವುದು ಅಪಮಾನವಲ್ಲವಾದರೆ…


-ಚಿದಂಬರ ಬೈಕಂಪಾಡಿ


 

ಜನ ನಿದ್ದೆಯ ಮಂಪರಿಗೆ ಜಾರುವ ಹೊತ್ತಲ್ಲಿ ಕಾವೇರಿ ತಮಿಳುನಾಡಿನತ್ತ ಧುಮ್ಮಿಕ್ಕಿ ಹರಿಯತೊಡಗಿದಳು. ಅವಳು ಈಗಲೂ ಹರಿಯುತ್ತಿದ್ದಾಳೆ. ಕಾವೇರಿಯನ್ನೇ ನಂಬಿ ಬದುಕುತ್ತಿರುವ ಜನ ಮುಂಜಾನೆ ಬೀದಿಗೆ ಇಳಿದಿದ್ದಾರೆ. ರಸ್ತೆ ತಡೆ, ಧರಣಿ, ಪ್ರತಿಭಟನೆ ಮುಂತಾದ ಪ್ರಲಾಪಗಳು ನಡೆಯುತ್ತಿವೆ. ಅತ್ತ ದೆಹಲಿಯ ಕರ್ನಾಟಕ ಭವನದಲ್ಲಿ ಅದೇ ಹೊತ್ತಿಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕರ್ನಾಟಕದಿಂದ ಸಂಸತ್ತಿಗೆ ಆರಿಸಿ ಹೋಗಿರುವ ಕಾವೇರಿ ನೀರು ಕುಡಿದೇ ಬೆಳೆದವರೊಂದಿಗೆ ಸಭೆ ನಡೆಸುತ್ತಿದ್ದರು. ಇದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಅಧಿಕಾರದ ಅನಿವಾರ್ಯತೆ. ಕಾವೇರಿ ನೀರು ಹರಿಸಿಕೊಂಡಿರುವುದು ತಮಿಳುನಾಡಿನ ಮುಖ್ಯಮಂತ್ರಿ ಓರ್ವ ಹೆಣ್ಣು ಮಗಳು ಕನ್ನಡತಿ ಜಯಲಲಿತಾ ಅವರ ರಾಜಕೀಯ ಪ್ರಬುದ್ಧತೆ ಮತ್ತು ಇಚ್ಛಾಶಕ್ತಿಯ ಅನಾವರಣ. ಹಾಗಾದರೆ ನಾವು, ನಮ್ಮ ಮುಖ್ಯಮಂತ್ರಿ, ನಮ್ಮ ಮಂತ್ರಿಗಳು, ಸಂಸದರು, ಶಾಸಕರು?

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಗುರುವಾರ ಸಂಜೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಧರಣಿ ನಿರತ ಕಾವೇರಿ ಪ್ರದೇಶದ ಶಾಸಕರ ಒತ್ತಡಕ್ಕೆ ಮಣಿದು ನೀಡಿದ ಹೇಳಿಕೆಯಲ್ಲೇ ತಮಿಳುನಾಡಿಗೆ ಕಾವೇರಿ ಹರಿದು ಹೋಗುವ ಎಳೆಗಳಿದ್ದವು. ತಮಿಳುನಾಡಿಗೆ ಕಾವೇರಿ ಹರಿಸದಿದ್ದರೆ ರೈತರ ಹಿತಕ್ಕೆ ಧಕ್ಕೆಯಾಗುತ್ತದೆ, ಹಿಂದೆಯೂ ಹೀಗೆಯೇ ಆಗಿತ್ತು ಎನ್ನುವ ಅವರ ಮಾತುಗಳನ್ನು ಅರ್ಥಮಾಡಿಕೊಂಡವರಿಗೆ ಜಗದೀಶ್ ಶೆಟ್ಟರ್ ರೈತರ ಹೆಸರಲ್ಲಿ ತಮ್ಮ ಹಿತ ಕಾಪಾಡಿಕೊಳ್ಳುತ್ತಾರೆ ಎನ್ನುವುದು ಸ್ಪಷ್ಟವಾಗಿತ್ತು, ಅದು ಹಾಗೆಯೇ ಆಯಿತು. ನಿಜಕ್ಕೂ ಜಗದೀಶ್ ಶೆಟ್ಟರ್ ತಮಿಳುನಾಡಿಗೆ ಕಾವೇರಿ ಹರಿಸಿ ತಪ್ಪು ಮಾಡಿದರು ಎನ್ನುವವರು ಅಧಿಕಾರವಿಲ್ಲದವರು. ಅಧಿಕಾರದಲ್ಲಿದ್ದಾಗ ಅದನ್ನು ಉಳಿಸಿಕೊಳ್ಳುವ ಅನಿವಾರ್ಯತೆಯೇ ಮುಖ್ಯವಾಗುತ್ತದೆ, ಈ ಮಾತಿಗೆ ಶೆಟ್ಟರ್ ಕೂಡಾ ಹೊರತಲ್ಲ ಎನ್ನುವುದು ಸಾಬೀತಾಗಿದೆ.

ಸುಪ್ರೀಂಕೋರ್ಟ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶ ನೀಡಿದಾಗ ಅದನ್ನು ಪಾಲಿಸಬೇಕೇ, ಬೇಡವೇ, ಎನ್ನುವ ಗೊಂದಲ ಮೂಡಿತ್ತು. ಕೋರ್ಟ್ ಆದೇಶ ಪಾಲನೆ ಮಾಡಿದರೆ ಮಾತ್ರ ಮತ್ತೆ ನಮ್ಮ ವಾದ ಮಂಡಿಸಲು ಅವಕಾಶವಾಗುತ್ತದೆ ಎನ್ನುವ ಕಾನೂನು ಪಂಡಿತರ ಸಲಹೆ ಸಮಯೋಚಿತವೇ ಆಗಿತ್ತು. ಆದೇಶವನ್ನು ಪಾಲನೆ ಮಾಡಿ ನಂತರ ತಮ್ಮ ಸಂಕಷ್ಟವನ್ನು ಮತ್ತೊಮ್ಮೆ ಕೋರ್ಟ್ ಮುಂದೆ ಹೇಳಿಕೊಳ್ಳಲು ಅನುವಾಗುತ್ತದೆ, ಇಲ್ಲವಾದರೆ ಮೊದಲು ಆದೇಶ ಪಾಲಿಸಿ, ನಂತರ ನಿಮ್ಮ ವಾದ ಮಂಡಿಸಿ ಎನ್ನುವ ಮಾತನ್ನು ಕೋರ್ಟ್ ಹೇಳುತ್ತದೆ, ಹಿಂದೆಯೂ ಹೇಳಿದೆ. ಕಾನೂನು, ಕೋರ್ಟ್ ತನ್ನ ಪರಿಧಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಅದನ್ನು ನಿರ್ವಹಿಸುವುದು ಅದರ ಜವಾಬ್ದಾರಿ. ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಬರಲು ಕಾರಣವಾದ ಅಂಶಗಳು ಕೂಡಾ ಅನೇಕ ಇವೆ, ಅದಕ್ಕೂ ಇತಿಹಾಸವಿದೆ.

ಆದರೆ ಪ್ರಸ್ತುತ ಸಂದರ್ಭದಲ್ಲಿ ಸರ್ಕಾರ ನಡೆದುಕೊಂಡ ರೀತಿ ಜನಮೆಚ್ಚುವಂಥದ್ದಲ್ಲ, ಇದನ್ನು ಜನ ನಿರೀಕ್ಷೆ ಮಾಡಿರಲಿಲ್ಲ. ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸರ್ವಪಕ್ಷಗಳ ಸಭೆ ನಡೆಸಿದಾಗಲೂ ಕಾವೇರಿ ನೀರು ಹರಿಸಲು ಯಾರೂ ಸಹಮತ ವ್ಯಕ್ತಪಡಿಸಿರಲಿಲ್ಲ. ನೀರು ಹರಿಸಬಾರದು ಎನ್ನುವುದೇ ಮುಖ್ಯವಾಗಿತ್ತು. ಈ ಕಾರಣದಿಂದಲೇ ವಿಧಾನ ಸಭೆಯ ಕಲಾಪ ಬೆಳಿಗ್ಗೆ ನಡೆಯಲಿಲ್ಲ. ಮಧ್ಯಾಹ್ನದ ನಂತರ ವಿಧಾನ ಸಭೆಯ ಕಲಾಪ ಆರಂಭವಾದಾಗ ಕಾವೇರಿ ಪ್ರದೇಶದ ಶಾಸಕರು ಪ್ರತಿಭಟನೆ ಮಾಡಿದ ನಂತರವೇ ಮುಖ್ಯಮಂತ್ರಿ ಸದನಕ್ಕೆ ಹಾಜರಾಗಿ ಶುಕ್ರವಾರ ಸಂಸದರ ನಿಯೋಗವನ್ನು ಪ್ರಧಾನಿ ಬಳಿಗೆ ಕೊಡೊಯ್ಯುವ ಭರವಸೆ ನೀಡಿದರು. ಜೊತೆಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ನಿರ್ಧಾರ ತೆಗೆದುಕೊಳ್ಳುವ ವಚನ ನೀಡಿದ್ದರು ವಿಧಾನ ಸಭೆಗೆ. ಹೊರಗೆ ಬಂದು ಕಾವೇರಿಗೆ ಹರಿಯಲು ಹೇಳಿ ದೆಹಲಿ ವಿಮಾನ ಹತ್ತಿದರು. ಯಾಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೀಗೆ ಮಾಡಿದರು?

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಮೂಲಕ ಕೋರ್ಟ್ ಆದೇಶವನ್ನು ಪಾಲನೆ ಮಾಡಿದೆ, ಕಾನೂನಿಗೆ ತಲೆ ಬಾಗಿದೆ ಎನ್ನುವ ಸಂತೃಪ್ತಿ ಹೆಮ್ಮೆ ಮುಖ್ಯಮಂತ್ರಿಯವರಿಗೆ ಇರಬಹುದು. ಆದರೆ ಕನ್ನಡಿಗರ ಆಶಯಕ್ಕೆ, ಅವರ ನಿರೀಕ್ಷೆಗೆ ವಿರುದ್ಧವಾಗಿ ನಡೆದುಕೊಂಡರು ಎನ್ನುವ ಕಳಂಕ ಅವರ ಮೈಗೆ ಅಂಟಿಕೊಂಡದ್ದೂ ಸತ್ಯ. ರಾಜಕೀಯದಲ್ಲಿ ಸಜ್ಜನಿಕೆಗೆ ಹೆಸರಾದ ಜಗದೀಶ್ ಶೆಟ್ಟರ್ ಹೀಗೇಕೆ ಮಾಡಿದರು ಎನ್ನುವುದಕ್ಕಿಂತಲೂ ಅವರಿಗೆ ಹಾಗೆ ಮಾಡುವ ಅನಿವಾರ್ಯತೆ ಇತ್ತು ಎನ್ನುವುದೇ ಲೇಸು.

ಒಂದು ವೇಳೆ ಕೋರ್ಟ್ ಆದೇಶದಂತೆ ನೀರು ಹರಿಸದೇ ಇದ್ದಿದ್ದರೆ ಕಾನೂನಿಗೆ ಅಗೌರವ ಸೂಚಿಸಿದಂತಾಗುತ್ತಿತ್ತು. ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಿತ್ತು, ಅಧಿಕಾರ ಕಳೆದುಕೊಳ್ಳುವ ಭೀತಿಯಿತ್ತು. ರಾಜಕೀಯದಲ್ಲಿ ಸಾಕಷ್ಟು ಹಾದಿ ಕ್ರಮಿಸಿರುವ ಜಗದೀಶ್ ಶೆಟ್ಟರ್ ಯೋಚಿಸುವ ವಿಧಾನದಲ್ಲಿ ಸೋತರು ಅನ್ನಿಸುತ್ತದೆ. ಯಾಕೆಂದರೆ ಈಗಲೂ ಅವರ ಸರ್ಕಾರ ಸುಭದ್ರವಾಗಿಲ್ಲ. ಅವರು ಅದೆಷ್ಟು ದಿನ ಇದೇ ಅಧಿಕಾರದಲ್ಲಿರುತ್ತಾರೆ ಎನ್ನುವುದು ನಮಗಿಂತಲೂ ಅವರಿಗೇ ಚೆನ್ನಾಗಿ ಗೊತ್ತು. ಭ್ರಷ್ಟಾಚಾರ ಮಾಡಿ ಜೈಲು ಸೇರುವುದು ಅಪಮಾನವಲ್ಲ ಎನ್ನುವುದಾದರೆ ಜನರಿಗಾಗಿ ಅಧಿಕಾರ ಕಳೆದುಕೊಳ್ಳುವುದು, ನ್ಯಾಯಾಂಗ ನಿಂದನೆಗೆ ಗುರಿಯಾಗುವುದು ಅಪಮಾನವೆಂದು ಯಾಕೆ ಭಾವಿಸಬೇಕು?

ಇಷ್ಟಕ್ಕೂ ಕಾವೇರಿ ನೀರು ಹರಿಸಿದ್ದರಿಂದ ಜಗದೀಶ್ ಶೆಟ್ಟರ್ ಕುರ್ಚಿ ಭದ್ರವಾಗಲಿಲ್ಲ ಅಥವಾ ಅವರಿಗಿರುವ ಅಧಿಕಾರದ ಅವಧಿ ವಿಸ್ತರಣೆಯಾಗಲಿಲ್ಲ. ಕಳಂಕ ರಹಿತವಾಗಿ ರಾಜಕೀಯ ನಡೆಸಿ ಸಂಭಾವಿತ ರಾಜಕಾರಣಿಯೆಂದೇ ಗುರುತಿಸಿಕೊಂಡಿದ್ದ ಜಗದೀಶ್ ಶೆಟ್ಟರ್ ವಿಧಾನ ಮಂಡಲದ ಕಲಾಪ ನಡೆಯುತ್ತಿರುವಾಗಲೇ ಎಡವಿದ್ದು ಮಾತ್ರ ವಿಪರ್ಯಾಸ.

ಕಾವೇರಿ ನೀರು ಹರಿಸಿರುವುದನ್ನು ಸಮರ್ಥನೆ ಮಾಡಿಕೊಳ್ಳಲು ಅನೇಕ ಕಾರಣಗಳಿವೆ ನಿಜ. ಈ ಕಾರಣಗಳು ಜನರ ವಿಶ್ವಾಸವನ್ನು ಕಟ್ಟಿಕೊಡುವುದಿಲ್ಲ ಅಥವಾ ಹರಿದುಹೋದ ನೀರನ್ನು ಮರಳಿ ಪಡೆಯಲು ನೆರವಾಗುವುದಿಲ್ಲ. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಚಾಣಾಕ್ಷ ನಡೆಗಳನ್ನು ಕಡುವಿರೋಧಿಯೂ ಮೆಚ್ಚಿದರೆ ತಪ್ಪಲ್ಲ. ಅವರೂ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಕಾವೇರಿ ಹರಿಸಿಕೊಂಡಿದ್ದರೂ ಅಲ್ಲಿನ ಜನ ಅವರಿಗೆ ಅವರಿಗೆ ಅಧಿಕಾರವನ್ನು ಗಟ್ಟಿಗೊಳಿಸಬಹುದು. ಆದರೆ ಜಗದೀಶ್ ಶೆಟ್ಟರ್ ಕಾನೂನಿನ ಹೆದರಿ ಜನರ ಹಿತಾಸಕ್ತಿಯನ್ನು ನಿರ್ಲಕ್ಷ್ಯ ಮಾಡಿದರು ಎನ್ನುವ ಅಪವಾದ ಅಳಿಸಿಹೋಗದು.

ಈಗ ತಮಿಳುನಾಡು ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ತಡವಾಗಿ ನೀರು ಬಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಶೆಟ್ಟರ್ ಈಗ ಎರಡು ತಪ್ಪು ಮಾಡಿದಂತಾಗಿದೆ. ನೀರು ಬಿಡಬಾರದೆಂದು ಜನರು, ಜನಪ್ರತಿನಿಧಿಗಳು ಒಕ್ಕೊರಲಿನಿಂದ ಒತ್ತಾಯ ಮಾಡಿದರೂ ನೀರು ಹರಿಸಿದರು, ಜೊತೆಗೆ ತಮಿಳುನಾಡಿನ ವಾದವನ್ನು ಗಮನಿಸಿದರೆ ತಡವಾಗಿ ನೀರು ಬಿಟ್ಟು ಕೋರ್ಟ್ ಆದೇಶ ಪಾಲನೆಯಲ್ಲಿ ವಿಳಂಬ ಮಾಡಿದರು. ಈ ಎರಡೂ ತಪ್ಪುಗಳ ಹೊರೆ ಹೊರುವ ಬದಲು ಸುಪ್ರೀಂ ಆದೇಶ ಹೊರಬಿದ್ದ ತಕ್ಷಣವೇ ನೀರು ಹರಿಸಿದ್ದರೆ ನ್ಯಾಯಾಂಗ ನಿಂದನೆಯಿಂದ ಪಾರಾಗುತ್ತಿದ್ದರು, ಕೇವಲ ನೀರು ಬಿಟ್ಟ ತಪ್ಪಿಗೆ ಗುರಿಯಾಗುತ್ತಿದ್ದರು.

ನಿರೀಕ್ಷೆಯಂತೆಯೇ ವಿಧಾನ ಮಂಡಲದಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ, ತಮ್ಮ ರಾಜಕೀಯ ಶಕ್ತಿಯನ್ನು ಹೆಚ್ಚಿಸಿಕೊಂಡಿವೆ. ಕಲಾಪ ಕಾವೇರಿ ನೀರಿನಲ್ಲಿ ಕೊಚ್ಚಿಹೋಯಿತು, ನೀರೂ ಹರಿದು ಹೋಯಿತು, ಕಳಂಕ ಮಾತ್ರ ಉಳಿಯಿತು.

2 thoughts on “ಭ್ರಷ್ಟಾಚಾರ ಮಾಡಿ ಜೈಲು ಸೇರುವುದು ಅಪಮಾನವಲ್ಲವಾದರೆ…

 1. shra.de.parswanatha

  ಸುಪ್ರೀಂ ಕೋರ್ಟ್ ನಲ್ಲಿ ಪ್ರತ್ಯೇಕವಾದ ತಮಿಳುನಾಡು ಪೀಠ ಇದೆಯೇನೋ ಎಂದು ಅನುಮಾನ ಮೂಡಿಸುವಂತೆ ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ ತೀರ್ಮಾನಗಳು ಬರುತ್ತಿವೆ.

  Reply
 2. ನವೀನ್

  ಈ ಸರ್ಕಾರ ಆದಷ್ಟು ಬೇಗ ತೊಲಗಲಿ ಅನ್ನುವ ತಮ್ಮ ಧಾವಂತ ಅರ್ಥವಾಗತ್ತೆ. ಆದರೆ ಒಮ್ಮೆ ಯೋಚಿಸಿ ನೋಡಿ. ಸುಪ್ರೆಂ ಕೋರ್ಟ್ ಆದೇಶ ಏನಾದ್ರು ಧಿಕ್ಕರಿಸಿದ್ರೆ ಏನಾಗ್ತಿತ್ತು? ಮೊದಲು ಅಧಿಕಾರದಿಂದ ಇಳಿಯಬೇಕಾಗ್ತಿತ್ತು. ಇಳಿದರೂ ಅದೂ ಯಾವ ಪುರುಷಾರ್ಥಕ್ಕಾಗಿ? ಹಳೆ ಮೈಸೂರಿನ ಜನ ಬಿಜೆಪಿಗೆ ಓಟು ಹಾಕುವದು ಅಷ್ಟರಲ್ಲೇ ಇದೆ!! ಸುಮ್ನೆ ಆರು ತಿಂಗಳು ತಿನ್ನೋದನ್ನು ಬಿಟ್ಟು ಅಧಿಕಾರದಿಂದ ಇಳಿಯಬೇಕಾ?

  ಇನ್ನೂ ವಾಸ್ತವ. ನೀರು ಬಿಡದಿದ್ದರೆ ಕೋರ್ಟ್ ಆದೇಶ ಧಿಕ್ಕರಿಸಿದರೆ ನ್ಯಾಯಪೀಠಕ್ಕೆ ನಮ್ಮ ಮೇಲೆ ಸಿಟ್ಟು ಬರಲ್ವಾ? ಅದರ ದೂರಗಾಮಿ ಪರಿಣಾಮಗಳೇನು? ಮುಂದೆ ಕರ್ನಾಟಕವೆಂದರೆ ಮೊಂಡುತನ ಮಾಡುವ ಸದಾ ಕೋರ್ಟ್ ಅನ್ನು ಧಿಕ್ಕರಿಸುವ ಪಾರ್ಟಿ ಎಂದು ಕೋರ್ಟ್ ಗೆ ಈಗಾಗಲೇ ಅನ್ನಿಸಿಬಿಟ್ಟಿದೆ. ಅದು ಇನ್ನೂ ಹೆಚಗಬೇಕಾ??

  Reply

Leave a Reply

Your email address will not be published.