Daily Archives: December 8, 2012

ಪೊಲೀಸರೇ, ನಿಮ್ಮ ಎದೆಯಲ್ಲಿ ಮಾನವೀಯತೆ ಇರಲಿ…

– ಜಿ.ಮಹಂತೇಶ್‌ ಭದ್ರಾವತಿ

ಈ ಘಟನೆ ನಡೆದು ಹತ್ತಿರತ್ತಿರ 15 ದಿವಸ ಕಳೆದು ಹೋಗಿದೆ. ತುಮಕೂರಿನ ಗುಬ್ಬಿ ಗೇಟ್ ಬಳಿ ಬೆಳ್ಳಂಬೆಳಗ್ಗೆ ಬೆಂಗಳೂರಿನತ್ತ ಬರುತ್ತಿದ್ದ ಕಾರೊಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆಯಿತು. ಅರೆ ಮಂಪರಿನಲ್ಲಿ ಕಾರು ಓಡಿಸುತ್ತಿದ್ದ ಚಾಲಕ ಕ್ಷಣಾರ್ಧದಲ್ಲಿ ಸಾವನ್ನಪ್ಪಿದ. ಕಾರಿನ ಹಿಂಬದಿ ನಿದ್ರೆಗೆ ಜಾರಿದ್ದ ವಯಸ್ಕರೊಬ್ಬರು, ಅವರ ಪತ್ನಿ ಮತ್ತು ಅವರ ಮಗಳು ಗಂಭೀರವಾಗಿ ಗಾಯಗೊಂಡರು. ಈ ಮೂವರನ್ನು ಆಸ್ಪತ್ರೆಗೆ ಸೇರಿಸಿದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಯಸ್ಕರು ಸಾವನ್ನಪ್ಪಿದರು. ಇನ್ನು, ತಲೆಗೆ ಗಂಭೀರವಾಗಿ ಹೊಡೆತ ಬಿದ್ದಿದ್ದ ಮಗಳು ಮತ್ತು ಪ್ರಾಣಾಪಾಯವಿಲ್ಲದಿದ್ದರೂ ತೀವ್ರವಾಗಿ ಗಾಯಗೊಂಡಿದ್ದ ಪತ್ನಿಯನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆ ತರಲಾಯಿತು. ಮಗಳು, ಒಂದಷ್ಟು ದಿವಸ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಜೀವಭಯವೇನೂ ಇಲ್ಲದಿದ್ದರೂ ಅವರಿಗೆ ನೆನಪಿನ ಶಕ್ತಿ ಎಂದಿನಂತೆ ಬರಲು ಹಾಗೂ ಈ ಹಿಂದಿನ ಜೀವನಕ್ಕೆ ಮರಳಲು ಸಾಕಷ್ಟು ಸಮಯ ಬೇಕಾದೀತು. ಹಾಗೆಯೇ ವಯಸ್ಕರ ಪತ್ನಿ ಅದೃಷ್ಟವಶಾತ್ ಪಾರಾದರು. ಇದಿಷ್ಟು ಘಟನೆ ನಡೆದ ನಂತರ ಆದ ಮನುಷ್ಯ ಜೀವಕ್ಕೆ ಸಂಬಂಧಿಸಿದ ಬೆಳವಣಿಗೆಗಳು.

ಆದರೆ, ದುರ್ಘಟನೆ ನಡೆದ ಸಂದರ್ಭದಲ್ಲಿ ಎಂಥವರೇ ಇದ್ದರೂ ತಕ್ಷಣ ಅವರು ಮಾನವೀಯತೆಯಿಂದ ವರ್ತಿಸಬೇಕು ಮತ್ತು ಪೊಲೀಸರಂತೂ ಜವಾಬ್ದಾರಿಯಿಂದ ಮತ್ತು ಪ್ರಾಮಾಣಿಕತೆಯಿಂದ ನಡೆದುಕೊಳ್ಳಬೇಕು. ಅಪಘಾತ ಸಂಭವಿಸಿದ ಸ್ವಲ್ಪ ಹೊತ್ತಿನಲ್ಲೇ ತುಮಕೂರು ಜಿಲ್ಲೆಯ ಸ್ಥಳೀಯ ಪೊಲೀಸರು ಸ್ಥಳಕ್ಕೆ ಹಾಜರಾಗಿದ್ದಾರೆ. ಅವರು ಮೊದಲು ಏನು ಮಾಡಬೇಕಿತ್ತೆಂದರೆ, ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸುವ ಜತೆಯಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಗಾಯಗೊಂಡವರ ಬಳಿ ಇದ್ದ ನಗ-ನಾಣ್ಯಗಳನ್ನ ಜೋಪಾನವಾಗಿ ಎತ್ತಿಟ್ಟು, ನಂತರ ಅದನ್ನು ಸಂಬಂಧಿಸಿದವರಿಗೆ ಮರಳಿಸಬೇಕಿತ್ತು.

ಆದರೆ ಅಲ್ಲಿಯ ಪೊಲೀಸರು ಮೊದಲು ಮಾಡಿದ್ದೇನೆಂದರೇ, ನುಜ್ಜುಗುಜ್ಜಾಗಿದ್ದ ಕಾರನ್ನು ತಡಕಾಡಿದ್ದಾರೆ. ಕಾರಿನಲ್ಲಿ ಇದ್ದ ಜೋಳದ ಚೀಲವನ್ನು ಎತ್ತಿ ತಮ್ಮ ಬೈಕ್‌ಗೆ ಹಾಕುವಂತೆ ಸ್ಥಳದಲ್ಲಿದ್ದವರಿಗೆ ಸೂಚಿಸಿ ಅದನ್ನು ಎತ್ತೊಯ್ದಿದಾರೆ. ನಂತರ, ಅದೇ ಕಾರಿನ ಒಳಗಡೆ ಇದ್ದ ಹತ್ತಿರಹತ್ತಿರ ಅರ್ಧ ಕೆ.ಜಿ. ತೂಕದ ಬಂಗಾರದ ಒಡವೆಗಳನ್ನು ಮೆಲ್ಲಗೆ ಎತ್ತಿಟ್ಟುಕೊಂಡು, ಅಲ್ಲೇನೂ ನಗ-ನಾಣ್ಯಗಳು ಇರಲಿಲ್ಲ ಎಂದು ಮಹಜರು ಬರೆದುಕೊಂಡು, ಒಡವೆಗಳನ್ನು ತಮ್ಮ ಕಿಸೆಗಿಳಿಸಿಕೊಂಡು ಹೋಗಿದ್ದಾರೆ. ಗಾಯಗೊಂಡಿದ್ದ ವಯಸ್ಕ ಪುರುಷರು ತುರ್ತು ಅಪಘಾತ ಚಿಕಿತ್ಸಾ ಘಟಕದಲ್ಲಿ ಮರಣ ಹೊಂದಿದ ನಂತರ ಅವರ ಕೊರಳಲಿದ್ದ ಚಿನ್ನದ ಸರವೂ ಮಾಯವಾಗಿದೆ. ನಗ-ನಾಣ್ಯಗಳಿಗೆ ಸಂಬಂಧಿಸಿದಂತೆ ಪೋಲಿಸರು ಅಪಘಾತಕ್ಕೀಡಾದವರ ಸಂಬಂಧಿಕರಿಗೆ ಎರಡು-ಮೂರು ದಿನವಾದರೂ ಏನನ್ನೂ ತಿಳಿಸಿಲ್ಲ.

ಆಸ್ಪತ್ರೆ ಓಡಾಟ ಮತ್ತು ದುಃಖದ ಮಡುವಿನಲ್ಲಿದ್ದ ಗಾಯಾಳುಗಳ ಸಂಬಂಧಿಕರು ಇದರ ಬಗ್ಗೆ ಆ ಕ್ಷಣದಲ್ಲಿ ಯೋಚಿಸಲೂ ಹೋಗಿರಲಿಲ್ಲ ಮತ್ತು ಅವರಿಗೆ ವ್ಯವಧಾನವೂ ಇರಲಿಲ್ಲ. ಅವರೆಲ್ಲರಿಗೂ ಇದ್ದ ಒಂದೇ ಚಿಂತೆ ಸಾವು-ಬದುಕಿನ ನಡುವೆ ಇದ್ದವರನ್ನು ಉಳಿಸಿಕೊಳ್ಳುವುದು ಮತ್ತು ಅವರು ಬೇಗನೆ ಚೇತರಿಸಿಕೊಳ್ಳುವಂತೆ ನೋಡಿಕೊಳ್ಳುವುದು. ಹಾಗಾಗಿ ಗಾಯಾಳುಗಳು ಆಸ್ಪತ್ರೆಯಿಂದ ಮನೆಗೆ ಮರಳಿದ ನಂತರ ನಗ-ನಾಣ್ಯಗಳ ಬಗ್ಗೆ ಯೋಚಿಸಿ, ಸಂಬಂಧಿಸಿದ ಠಾಣೆಗೆ ತೆರಳಿ, ಈ ವಿಷಯದ ಬಗ್ಗೆ ಅವರು ಅಲ್ಲಿ ಮಾತನಾಡಿದರು. ಆದರೆ, ಅಲ್ಲಿಯ ಪೊಲೀಸರು ಇದಕ್ಕೆ ಸರಿಯಾಗಿ ಪ್ರತಿಕ್ರಿಯಿಸದೇ, ಮಹಜರು ಮಾಡಿದ ಸಂದರ್ಭದಲ್ಲಿ ಯಾವ ಆಭರಣಗಳೂ ಇರಲಿಲ್ಲ ಎಂದು ಶುದ್ಧ ಒರಟುತನವನ್ನು ಪ್ರದರ್ಶಿಸಿ ಇವರನ್ನೇ ಗದರಿದರು. ಇದರಿಂದ ಅವಮಾನಿತರಾದ ಮತ್ತು ಬೇಸರಗೊಂಡ ಸಂಬಂಧಿಕರು ಪೊಲೀಸರ ಅಮಾನವೀಯ ವರ್ತನೆಯನ್ನ ಶಪಿಸಿ ಹಿಂದಿರುಗಿದರು. ಆದರೆ, ಅವರು ತುಮಕೂರಿನಿಂದ ಬೆಂಗಳೂರಿಗೆ ವಾಪಸ್ ಬರುವ ಮಾರ್ಗದಲ್ಲಿ ಅವರಿಗೆ ಬಂದ ಫೋನ್ ಕರೆಯೊಂದು, ಅಲ್ಲಿದ್ದ ಬಂಗಾರದ ಆಭರಣಗಳನ್ನ ಯಾರ್‍ಯಾರು ಕದ್ದೊಯ್ದರು… ಜೋಳದ ಚೀಲ ಯಾರ ಬೈಕೇರಿತು ಎನ್ನುವುದನ್ನು ಕಣ್ಣಿಗೆ ಕಟ್ಟಿದಂತೆ ಹೇಳಿದರು. ಹೀಗೆ ಹೇಳಿದಾತ ಒಬ್ಬ ಸ್ವೀಪರ್. ಸಿಕ್ಕ ಈ ಸಣ್ಣ ಸುಳಿವನ್ನು ಆಧರಿಸಿ, ಅದರ ಬೆನ್ನತ್ತಿ ಹೋದ ಸಂಬಂಧಿಕರು, ಉನ್ನತ ಪೊಲೀಸ್ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿ ತಮ್ಮ ಅಳಲನ್ನು ವ್ಯಕ್ತಪಡಿಸಿದರು.

ಯಾವಾಗ ಉನ್ನತ ಪೊಲೀಸ್ ಅಧಿಕಾರಿಗಳು ಚಾಟಿ ಬೀಸಿದರೋ, ಬಂಗಾರದ ಆಭರಣಗಳನ್ನು ಕದ್ದೊಯ್ದಿದ್ದ ಪೊಲೀಸರು ಬೆವರಿದರು. ಇದರ ಮಧ್ಯೆಯೇ ಸಾಕ್ಷಿದಾರನನ್ನೇ ಬೆದರಿಸಿ ದೂರು ನಿಲ್ಲದಂತೆ ಮಾಡುವ ಅವರ ಪ್ರಯತ್ನವೂ ವಿಫಲವಾಯಿತು. ಕಡೆಗೆ ಪರೋಕ್ಷವಾಗಿ ತಪ್ಪೊಪ್ಪಿಕೊಂಡ ಪೊಲೀಸರು, ಬಂಗಾರದ ಆಭರಣಗಳನ್ನು ವಾಪಸ್ ಕೊಡುವ ಬದಲಿಗೆ ಒಂದಷ್ಟು ಲಕ್ಷಗಳನ್ನು ಕೊಟ್ಟು ಕೈ ತೊಳೆದುಕೊಳ್ಳಲು ಸಂಬಂಧಿಕರ ಮನೆಗೆ ಧಾವಿಸಿ ಬಂದು, ’ನೀವು ಸಹಕರಿಸದಿದ್ದರೆ ಶಂಕಿತ ಪೊಲೀಸ್ ಕುಟುಂಬಗಳ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರನ್ನು ಅವಲಂಬಿಸಿದವರ ಗತಿಯನ್ನು ಊಹಿಸಲಿಕ್ಕಾಗದು,’ ಎಂದೆಲ್ಲಾ ಮನ ಕರಗುವಂತೆ ಬೇಡಿಕೊಂಡರು.

ಅಂದ ಹಾಗೇ, ಈ ನಾಲ್ಕೈದು ಲಕ್ಷ ಹಣವನ್ನು ಪೊಲೀಸರು ತಮ್ಮ ಸ್ವಂತ ಜೇಬಿನಿಂದಾದರೂ ಏಕೆ ಕೊಡುತ್ತಾರೆ? ಹಾಗಾಗಿ, ನಗದು ಮೊತ್ತವನ್ನು ವಾಪಸ್ ಕೊಡಲು ಮುಂದೆ ಬಂದಿರುವುದು ಕೂಡ ಅವರು ಆಭರಣಗಳನ್ನು ಕದ್ದೊಯ್ದಿದ್ದನ್ನು ಒಪ್ಪಿಕೊಂಡಂತೆ ಅಲ್ಲವೇ?

ಏನಾಗಿದೆ ನಮ್ಮ ಸಮಾಜಕ್ಕೆ ಮತ್ತು ಪೊಲೀಸ್ ವ್ಯವಸ್ಥೆಗೆ? ಪೊಲೀಸರು ಮಾನವೀಯತೆಯನ್ನೇ ಕಳೆದುಕೊಂಡಿದ್ದಾರೆಯೇ? ಎಲ್ಲಾ ಪೊಲೀಸರೂ ಹೀಗೆಯೇ ಅಥವ ಇದರಲ್ಲಿ ಸಂಬಂಧಪಟ್ಟ ಠಾಣೆಯ ಎಲ್ಲರೂ ಭಾಗಿ ಎಂದು ಹೇಳಲಾಗುವುದಿಲ್ಲ. ಆದರೆ, ಅಪಘಾತ ಸಂಭವಿಸಿದ ತಕ್ಷಣ ಸಂಬಂಧಿಸಿದವರಿಗೆ ತುರ್ತು ಚಿಕಿತ್ಸೆ ಕೊಡಿಸಿ, ಸಾಂತ್ವನ ಹೇಳಿ, ಮಾನವೀಯತೆ, ಕಳಕಳಿ ವ್ಯಕ್ತಪಡಿಸಬೇಕಿದ್ದವರೇ ಅಮಾನವೀಯವಾಗಿ ಮತ್ತು ದರೋಡೆಕೋರರಂತೆ ವರ್ತಿಸಿದ್ದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗದಿರುವುದಿಲ್ಲ. ಪೊಲೀಸರ ಮೇಲೆ ಸಾಕಷ್ಟು ಒತ್ತಡಗಳಿವೆ, ಜವಾಬ್ದಾರಿಗಳಿವೆ, ಒಂದು ಜಿಲ್ಲೆಯ, ನಗರದ, ರಾಜ್ಯದ ಭದ್ರತೆಯ ಹೊಣೆಗಾರಿಕೆಯೂ ಅವರ ಮೇಲಿದೆ. ಎಲ್ಲವೂ ಸರಿ. ಆದರೆ, ಈ ಎಲ್ಲ ಹೊಣೆಗಾರಿಕೆಗಳ ಮಧ್ಯೆಯೇ ಮಾನವೀಯತೆ, ಕಳಕಳಿ, ಪ್ರಾಮಾಣಿಕತೆ, ಪಾಪಪ್ರಜ್ಞೆಯೂ ಅವರಲ್ಲಿ ಇರಬೇಕಲ್ಲವೇ?

ಮತ್ತೆ ಮತ್ತೆ ಇಲ್ಲಿ ಏಳುವ ಪ್ರಶ್ನೆ ಏನೆಂದರೇ, ಪೊಲೀಸರೇ ಇಷ್ಟು ಅಮಾನವೀಯವಾಗಿ ನಡೆದುಕೊಂಡು ಮತ್ತು ಕಳ್ಳರಂತೆ ಮತ್ತು ಸಮಾಜಘಾತುಕರಂತೆ ಅಪಘಾತಕ್ಕೀಡಾದ ಜನರ ವಸ್ತುಗಳನ್ನೇ ಕದ್ದೊಯ್ದರೆ, ಜನಸಾಮಾನ್ಯರನ್ನು ಇಂತಹ ವಂಚಕರಿಂದ ಮತ್ತು ಬೆಂಕಿಬಿದ್ದ ಮನೆಯಲ್ಲಿ ಗಳಹಿಡಿಯುವ ಪಾಪಿಗಳಿಂದ ಕಾಯುವವರ್‍ಯಾರು?

ಪೊಲೀಸರ ವರ್ತನೆಗೆ ಇದೊಂದು ಸಣ್ಣ ಉದಾಹರಣೆಯಷ್ಟೇ. ಅನಗತ್ಯ ಬಲಪ್ರದರ್ಶನದ ಲಾಠಿ ಚಾರ್ಜ್, ರೈತರ ಮನೆ ಜಫ್ತಿ ಮಾಡುವಾಗ ನಡೆದುಕೊಳ್ಳುವ ರೀತಿ, ಕಳ್ಳತನದ ಮತ್ತು ಕೊಲೆಯ ಪ್ರಕರಣಗಳು ನ್ಯಾಯವಾಗಿ ದಾಖಲಾಗದೇ ಇರುವುದು, ಕಳ್ಳರಲ್ಲದವರನ್ನು ಕಳ್ಳರನ್ನಾಗಿಸಿವುದು, ಅಮಾಯಕರನ್ನು ಕೊಲೆಗಾರನೆಂದು ಬಂಧಿಸುವುದು, ಸಾಕ್ಷಿಗಳನ್ನೇ ಆರೋಪಿಗಳನ್ನಾಗಿಸುವುದು, ಇಂತಹ ಉದಾಹರಣೆಗಳಿಗೇನೂ ನಮ್ಮಲ್ಲಿ ಕೊರತೆ ಇಲ್ಲ. ಪೊಲೀಸ್ ವ್ಯವಸ್ಥೆಯಲ್ಲಿ ಪೊಲೀಸ್ ಪೇದೆಗಳಾದಿಯಾಗಿ ಇಲಾಖೆಯ ಎಲ್ಲಾ ಸಿಬ್ಬಂದಿಗೆ ಘನತೆಯುಕ್ತ ಜೀವನ ನಡೆಸಲು ಸಾಕಾಗುವಷ್ಟು ಸಂಬಳ ನೀಡುತ್ತಿದ್ದರೂ ಲಂಚಕ್ಕೆ ಕೈಯೊಡ್ಡುವ ಪರಿಪಾಠವೇನೂ ನಿಂತಿಲ್ಲ. ಹಾಗೆಯೇ, ಅಮಾಯಕರನ್ನು ಲಾಕಪ್‌ಗಳಿಗೆ ತಳ್ಳಿ, ಅಪರಾಧಿಗಳನ್ನ ಹಿಡಿದು ತಂದಿದ್ದೇವೆ ಎಂದು ಕರ್ತವ್ಯ ಪಾಲನೆಯ ಪದಕ ಎದೆಗೆ ನೇತು ಹಾಕಿಕೊಂಡಿರುವ ಪ್ರಕರಣಗಳಿಗೂ ನಮ್ಮಲ್ಲಿ ಕೊರತೆ ಇಲ್ಲ.

ಮೇಲಿನ ಘಟನೆಯಲ್ಲಿ ದುರ್ಮರಣಕ್ಕೀಡಾದ ಸಂಬಂಧಿಕರು ತಿಳಿವಳಿಕೆಯುಳ್ಳವರಾಗಿದ್ದರಿಂದ ಮತ್ತು ಅವರಿಗೂ ಒಂದಷ್ಟು ಪ್ರಭಾವಿಗಳು ಪರಿಚಯವಿದ್ದವರಾಗಿದ್ದರಿಂದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದರು ಮತ್ತು ಅವರಿಗೆ ಅರೆನ್ಯಾಯವಾದರೂ ದಕ್ಕಿತು. ಆದರೇ, ಅದೇ ಸ್ಥಳದಲ್ಲಿ ಒಬ್ಬ ಸಾಮಾನ್ಯ ನಾಗರಿಕನಿದ್ದಿದ್ದರೆ, ಆತ ಬೆಂಗಳೂರಿನ ಪೊಲೀಸ್ ಕಚೇರಿ ಇರಲಿ, ಸ್ಥಳೀಯ ಪೊಲೀಸ್ ಠಾಣೆಗೆ ಹೋಗಲೇ ಹಿಂದೇಟು ಹಾಕುತ್ತಿದ್ದ ಎನ್ನುವುದೂ ಕೂಡ ಇವತ್ತಿನ ನಿಷ್ಠುರ ಸತ್ಯ.

ಇನ್ನು, ಪೊಲೀಸರೇ ತಮ್ಮ ಉನ್ನತಾಧಿಕಾರಿಗಳ ಸಮ್ಮುಖದಲ್ಲಿ ತಪ್ಪೊಪ್ಪಿಕೊಂಡು ಹಣ ಹಿಂದಿರುಗಿಸುತ್ತಿರುವುದು ಬಹುಶಃ ಇದೇ ಮೊದಲಿರಬೇಕು.

ತುಮಕೂರಿನ ಗುಬ್ಬಿ-ಗೇಟ್ ಬಳಿ ಸಂಭವಿಸಿದ ಈ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರ ವರ್ತನೆ ಕುರಿತು ರಾಜ್ಯದ ಗೃಹಮಂತ್ರಿಗಳು ಮತ್ತು ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಯೋಚಿಸುವ ಮತ್ತು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಹಾಗೆಯೇ, ಇಂತಹ ದುರಾಚಾರದ ನಡವಳಿಕೆಗಳಲ್ಲಿ ಮತ್ತು ಸಮಾಜದಲ್ಲಿ ಕುಂದುತ್ತಿರುವ ಮಾನವೀಯ ಮೌಲ್ಯಗಳಲ್ಲಿ ತಮ್ಮ ಪಾತ್ರವೇನಿದೆ ಎಂದು ನಾಗರಿಕರೂ ಗಂಭೀರವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳಬೇಕಾಗಿರುವುದೂ ಇಂದಿನ ತುರ್ತಾಗಿದೆ.