ಜೀವನದಿಗಳ ಸಾವಿನ ಕಥನ : ಹೊತ್ತಿಗೊದಗಿದ ಮಾತಾಗಿ ಮೂಡಿ ಬಂದ ಕೃತಿ

– ಡಾ. ಎಸ್.ಬಿ.ಜೋಗುರ

ಡಾ. ಎನ್. ಜಗದೀಶ್ ಕೊಪ್ಪ ಅವರ ಕೃತಿ “ಜೀವನದಿಗಳ ಸಾವಿನ ಕಥನ” ಒಂದು ಅಪರೂಪದ ಕೃತಿ. ಅಭಿವೃದ್ಧಿಯ ಜೊತೆಗೆ ಥಳುಕು ಹಾಕಿಕೊಂಡು ಮಾತನಾಡುವ ಅನೇಕ ಸ್ಥಾಪಿತ ಸಂಗತಿಗಳ ಚೌಕಟ್ಟಿನಾಚೆ ಬಂದು ಅವರು ಮೂರ್ತ ಭಂಜನೆ [ಮೂರ್ತಿ ಭಂಜನೆಯಲ್ಲ] ಯನ್ನು ಅತ್ಯಂತ ಸಮರ್ಪಕವಾಗಿ ಸಾಕ್ಷಿ ಸಮೇತ ಮಾಡಿರುವದಿದೆ. ಮೂಲತ: ಅರ್ಥಶಾಸ್ತ್ರದ ಅಧ್ಯಯನ ಶಿಸ್ತಿನಿಂದ ಬಂದಿರುವ ಕೊಪ್ಪ ಅವರು ಈ ಕೃತಿಯನ್ನು ಮಾನವಶಾಸ್ತ್ರ ಮತ್ತು ಭೂಗೋಳಶಾಸ್ತ್ರದ ಅಧ್ಯಯನ ಮಾಡುವವರಿಗೆ ಒಂದು ಉಲ್ಲೇಖ ಗ್ರಂಥವಾಗುವ ಹಾಗೆ ರಚಿಸಿದ್ದಾರೆ. ಈ ಜೀವನದಿಗಳ ಸಾವಿನ ಕಥನ ಒಂದು ಅಪೂರ್ವವಾದ ಮಾಹಿತಿ ಸಾಗರ. ಜಗತ್ತಿನಲ್ಲಿ ಮೊಟ್ಟ ಮೊದಲನೆಯ ಆಣೆಕಟ್ಟು ಸ್ಥಾಪನೆಯಾದ ಮಾಹಿತಿಯ ಜೊತೆಗೆ ಆದಿವಾಸಿ ಸಮುದಾಯದ ಅಪರೂಪದ ನೆಲೆಗಳನ್ನು ಈ ಬಗೆಯ ಅಭಿವೃದ್ಧಿಯ ಮೂಲಗಳು ಹೇಗೆ ಕರಗಿಸುತ್ತ ಬಂದಿವೆ ಎನ್ನುವದರ ಬಗ್ಗೆ ಅವರು ವಸ್ತುನಿಷ್ಟವಾಗಿ ವಿವರಿಸಿದ್ದಾರೆ.

’ಅಭಿವೃದ್ಧಿಯ ಅಂಧಯುಗ’ ಎನ್ನುವ ಲೇಖನದಲ್ಲಿ ಕೊಪ್ಪ ಬರೆಯುವ ಹಾಗೆ ಆಣೆಕಟ್ಟುಗಳ ನಿರ್ಮಾಣವಾದ ಮೇಲೆ, ನದಿಗಳ ನೈಜ ಹರಿವಿನ ವೇಗ ಕುಂಠಿತಗೊಂಡು ಅವುಗಳ ಇಕ್ಕೆಲಗಳ ಮುಖಜ ಭೂಮಿಯಲ್ಲಿ ಮಣ್ಣಿನ ಫ಼ಲವತ್ತತೆಗೆ ಧಕ್ಕೆಯುಂಟಾಯಿತು. ಅಲ್ಲದೇ ನದಿಗಳ ಮೀನುಗಾರಿಕೆಯನ್ನೇ ಕುಲಕಸುಬಾಗಿ ಬದುಕುತ್ತಿದ್ದ ಅಸಂಖ್ಯಾತ ಕುಟುಂಬಗಳು ತಮ್ಮ ವೃತ್ತಿ ಬದುಕಿನಿಂದ ವಂಚಿತವಾದವು. ಅಮೇರಿಕೆಯಲ್ಲಿ ನದಿಯ ಮಕ್ಕಳೆಂದು ಕರೆಯಲ್ಪಡುತ್ತಿದ್ದ , ಶತಮಾನದ ಹಿಂದೆ 1200 ಕುಟುಂಬಗಳಿದ್ದ ಕುಕುಪಾ ಜನಾಂಗ, ಈಗ ಬರೀ 40 ಕುಟುಂಬಗಳಿಗೆ ಇಳಿದಿದ್ದು, ಈ ಆದಿವಾಸಿಗಳು ಈಗ ಮೀನುಗಾರಿಕೆಯಿಂದ ವಂಚಿತರಾಗಿ ಗೆಡ್ದೆ ಗೆಣಸುಗಳನ್ನು ನಂಬಿ ಬದುಕುತ್ತಿದ್ದಾರೆ. [ಪುಟ-17] ಇದು ಕೇವಲ ಯಾವುದೋ ಒಂದು ರಾಷ್ಟ್ರ ಅಭಿವೃದ್ಧಿಯ ಹೆಸರಲ್ಲಿ ಅನುಭವಿಸಿದ ಧಾರುಣ ಪರಿಣಾಮವೆಂದು ಭಾವಿಸುವ ಅವಶ್ಯಕತೆಯಿಲ್ಲ. ನಮ್ಮ ನರ್ಮದಾ ಆಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿಯೂ ಉಂಟಾಗಿರಬಹುದಾದ ತೊಡಕುಗಳನ್ನು, ಈ ತೊಡಕಿಗೆ ಬಹುತೇಕವಾಗಿ ಆದಿವಾಸಿ ಜನಸಮುದಾಯಗಳು ಇಲ್ಲವೇ ಕೃಷಿ ಕುಟುಂಬಗಳು ಬಲಿಪಶುಗಳಾಗುವ ಚಿತ್ರಣವನ್ನು ಕೊಪ್ಪ ಅವರು ಜೀವನದಿಗಳ ಕಥನದಲ್ಲಿ ವಿವರಿಸಿದ್ದಾರೆ.

ವಿದ್ಯುತ್ ಉತ್ಪಾದನೆಯಲ್ಲಿ ಜಲವಿದ್ಯುತ್ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಆದರೆ ಜನಸಾಮಾನ್ಯನ ಅರಿವಿಗೆ ಬಾರದ ರೀತಿಯಲಿ ಅವು ಹೇಗೆ ಜಾಗತಿಕ ಪರಿಸರಕ್ಕೆ ಅಡ್ದಿಯಾಗುತ್ತಿವೆ ಎನ್ನುವದನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ. ಈಗಾಗಲೇ ಇಡೀ ವಿಶ್ವದಲ್ಲಿ ಜಾಗತಿಕ ತಾಪಮಾನದ ಕೂಗು ಎದ್ದಿದೆ. ಅದಕ್ಕೆ ಪೂರಕವಾಗಿ ಜಲವಿದ್ಯುತ್ ಆಗರಗಳು ಕೆಲಸ ಮಾಡುತ್ತವೆ. ಅದೇ ವೇಳೆಗೆ ಆಣೆಕಟ್ಟುಗಳನ್ನು ಪ್ರವಾಹ ನಿಯಂತ್ರಣದಲ್ಲಿ ನೆರವಾಗುವ ಹಾಗೆ ಕಟ್ಟದಿರುವ ಬಗ್ಗೆಯೂ ಅವರು ಬರೆಯುತ್ತಾರೆ. ಅವರು ಆ ದಿಶೆಯಲಿ ನಮ್ಮ ದೇಶದ ಓರಿಸ್ಸಾದ ಹಿರಾಕುಡ್ ಹಾಗೂ ಪಂಜಾಬನ ಬಾಕ್ರಾ ನಂಗಲ್ ಆಣೆಕಟ್ಟನ್ನು ಉದಾಹರಿಸಿದ್ದಾರೆ. [ಪುಟ-65]

ಸಾಮಾನ್ಯ ಜನರ ಮೂಗಿಗೆ ತುಪ್ಪ ಹಚ್ಚುವ ಕ್ರಿಯೆ ಆಣೆಕಟ್ಟುಗಳ ನಿರ್ಮಾಣದ ಸಂದರ್ಭದಲ್ಲಿ ನಡೆಯುತ್ತದೆ. ಸರ್ದಾರ್ ಸರೋವರ್ ಆಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಮಧ್ಯಪ್ರದೇಶ, ಗುಜರಾತ, ರಾಜಸ್ಥಾನದ ಜನರಿಗೆ ಮತ್ತು ಸುತ್ತಮುತ್ತಲಿನ ಹಳ್ಳಿಯ ಜನರಿಗೆ ನೀರು ಕುಡಿಸುವ ಬಗ್ಗೆ ಹಸಿ ಹಸಿ ಸುಳ್ಳುಗಳನ್ನು ಬಿತ್ತಿರುವ ಬಗ್ಗೆಯೂ ಅವರು ಸುಳ್ಳುಗಳ ಸರಮಾಲೆ ಎನ್ನುವ ಅಧ್ಯಾಯದಲ್ಲಿ ಚರ್ಚಿಸಿದ್ದಾರೆ. ಪೂರ್ಣಪ್ರಮಾಣದಲ್ಲಿ ಖಾಲಿಯಾಗಿರುವ 236 ಹಳ್ಳಿಗಳಿಗೂ ಕುಡಿಯುವ ನೀರನ್ನು ಪೂರೈಸಿರುವ ಬಗ್ಗೆ ಮಾಹಿತಿಗಳು ಅಲ್ಲಿದ್ದವು ಎನ್ನುವ ವ್ಯಂಗ್ಯವನ್ನು ಅವರು ಚರ್ಚಿಸಿದ್ದಾರೆ.

ಒಟ್ಟಾರೆ “ಜೀವನದಿಗಳ ಸಾವಿನ ಕಥನ” ಮನುಷ್ಯನ ಹಪಾಪಿತನಕ್ಕೆ ಹಿಡಿದ ಕನ್ನಡಿ. ಸತ್ಯವನ್ನು ಒಪ್ಪಿಕೊಳ್ಳುವ ಮನಸು ಮಾಡದಿದ್ದರೆ ಮುಂಬರುವ ದಿನಗಳಲ್ಲಿ ನಮ್ಮೆಲ್ಲರ ಮುಖ ಇನ್ನಷ್ಟು ಅಸಹ್ಯ, ವಿಕಾರವಾಗಿರುತ್ತದೆ. ಆಗ ನಮಗೆ ಕನ್ನಡಿಯ ಮುಂದೆ ನಿಲ್ಲುವ ಎದೆಗಾರಿಕೆ ಉಳಿದಿರುವದಿಲ್ಲ. ಪ್ರತಿಯೊಂದು ತಲೆಮಾರು ತಾನೇ ಕೊನೆ, ಮುಂದೆ ಮತ್ತೆ ಪೀಳಿಗೆಯಿಲ್ಲ ಎನ್ನುವಂತೆ ಬದುಕುವ ಕ್ರಮ ಸರಿಯಲ್ಲ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಕಾಲನ ಕ್ಷಮೆಯೇ ಇಲ್ಲ. ಬಂದದ್ದೆಲ್ಲಾ ಅನುಭವಿಸಬೇಕು ಎನ್ನುವ ಎಚ್ಚರವೂ ಈ ಕೃತಿಯ ಹಿಂದೆ ಅಡಕವಾಗಿದೆ. ಇಲ್ಲಿರುವ ಮಾಹಿತಿ ಅಪಾರ ಮತ್ತು ವಿರಳ. ಭೂಗೊಳಶಾಸ್ತ್ರ, ಮಾನವಶಾಸ್ತ್ರ, ಜೀವಪರಿಸರಶಾಸ್ತ್ರ ಮುಂತಾದ ಅಧ್ಯಯನ ಶಿಸ್ತುಗಳಿಗೆ ಜಗದೀಶ ಕೊಪ್ಪ ಅವರ ಈ “ಜೀವನದಿಗಳ ಸಾವಿನ ಕಥನ” ಒಂದು ಹೊತ್ತಿಗೊದಗಿದ ಮಾತಿನಂತೆ ಮೂಡಿಬಂದಿದೆ.


ಜೀವನದಿಗಳ ಸಾವಿನ ಕಥನ
ಲೇಖಕ : ಡಾ. ಎನ್. ಜಗದೀಶ್ ಕೊಪ್ಪ
ಪ್ರಕಾಶಕರು : ಪಲ್ಲವ ಪ್ರಕಾಶನ, ಚನ್ನಪಟ್ಟಣ, ವಯಾ: ಎಮ್ಮಿಗನೂರು, ಬಳ್ಳಾರಿ – 583113
ಬೆಲೆ : 100 ರುಪಾಯಿ.

One thought on “ಜೀವನದಿಗಳ ಸಾವಿನ ಕಥನ : ಹೊತ್ತಿಗೊದಗಿದ ಮಾತಾಗಿ ಮೂಡಿ ಬಂದ ಕೃತಿ

  1. Mallikarjuna Hosapalya

    ನನಗೊಂದು ಪ್ರತಿ ಬೇಕು, ನವಕರ್ನಾಟಕದಲ್ಲಿ ಸಿಗುವುದೇ?

    Reply

Leave a Reply

Your email address will not be published. Required fields are marked *