ಸೆರೆಮನೆ ಸಂವೇದನೆ ಮತ್ತು ರಷ್ಯನ್ ಕವಿತೆ

– ರವಿ ಕೃಷ್ಣಾರೆಡ್ಡಿ

ಇಂದು ಬೆಂಗಳೂರಿನಲ್ಲಿ ಪ್ರಸಿದ್ಧ ಉರ್ದು ಕವಿ ಫೈಜ್ ಅಹ್ಮದ್ ಫೈಜ್ (ಈ ಕವಿಯ ಬಗ್ಗೆ ನಮ್ಮ ವರ್ತಮಾನದಲ್ಲಿ ಜಗದೀಶ್ ಕೊಪ್ಪರು ಬರೆದಿರುವ ಲೇಖನ ಇಲ್ಲಿದೆ) ನೆನಪಿನಲ್ಲಿ ಸಾಹಿತ್ಯ ಸಮಾನಾಸಕ್ತರ ಬಳಗವಾದ “ಪರಸ್ಪರ” ಮತ್ತು “ಗೌರಿ ಲಂಕೇಶ್” ಪತ್ರಿಕೆಯ ಸಹಭಾಗಿತ್ವದಲ್ಲಿ “ಸೆರೆಮನೆ ಸಂವೇದನೆ ಮತ್ತು ಸಾಹಿತ್ಯ” ಎಂಬ ವಿಚಾರದ ಮೇಲೆ ವಿಷಯಮಂಡನೆ ಮತ್ತು ಅನುವಾದಿತ ಕವಿತೆಗಳ ವಾಚನ ಕಾರ್ಯಕ್ರಮವಿತ್ತು. ಬೆಳಗ್ಗೆ ಹತ್ತೂವರೆಯಿಂದ ಸಂಜೆ ಐದೂವರೆಯವರೆಗೆ ನಡೆದ ಈ ಕಾರ್ಯಕ್ರಮ ಬಹಳ ಯಶಸ್ವಿಯಾಯಿತು.

ಅಂದ ಹಾಗೆ ತಮ್ಮ ಮಾತಿನ ಆರಂಭದಲ್ಲಿಯೇ ತಿಂಗಳಿನಿಂದಲೂ ಜೈಲುವಾಸಿಯಾಗಿರುವ ನವೀನ್ ಸೂರಿಂಜೆಯವರನ್ನು ಲೇಖಕ ರಹಮತ್ ತರೀಕೆರೆ ನೆನಪಿಸಿಕೊಂಡರು ಮತ್ತು ಅವರ ಭಾಷಣವನ್ನು ಸೂರಿಂಜೆ ಮತ್ತು ಅಂತಹವರಿಗೆ ಅರ್ಪಿಸಿದರು. ನನಗಂತೂ ಇಡೀ ದಿನ ನವೀನ್ ಸೂರಿಂಜೆ ಮತ್ತವರ ಕಾರಾಗೃಹವಾಸ ನೆನಪಾಗುತ್ತಲೇ ಇತ್ತು. ನಮ್ಮ ಈ ಸಮಾನಮನಸ್ಕ ಮತ್ತು ಸಹಪ್ರಯಾಣಿಕನನ್ನು ನನ್ನ ಕವನವಾಚನದ ಅವಧಿ ಬಂದಾಗ ನೆನಪಿಸಿಕೊಂಡೆ ಮಾತನಾರಂಭಿಸಿದೆ.

“ಪರಸ್ಪರ” ತಂಡದ ರಾಮಲಿಂಗಪ್ಪ ಟಿ. ಬೇಗೂರುರವರು ನನಗೆ ರಷ್ಯನ್ ಕವಿ ವ್ಲಾಡಿಮಿರ್ ಮಾಯಕೋವ್‌ಸ್ಕಿಯ “Order No.2 to the army of the arts” ಪದ್ಯವನ್ನು ಅನುವಾದಿಸಿಕೊಂಡು ಬಂದು ಓದಲು ಕೋರಿದ್ದರು. ನನಗೆ ಅಲ್ಲಿಯ ತನಕ ಈ ರಷ್ಯನ್ ಕವಿಯಾಗಲಿ ಅಥವ ಆ ಪದ್ಯವಾಗಲಿ ಗೊತ್ತಿರಲಿಲ್ಲ. ಈ ಕವಿಯ ಬಗ್ಗೆ ಹೆಚ್ಚಿನ ವಿವರಗಳು ಬೇಕಾದಲ್ಲಿ ವಿಕಿಪೀಡಿಯದ ಈ ಪುಟ ನೋಡಬಹುದು. ಸ್ಥೂಲವಾಗಿ ಹೇಳುವುದಾದರೆ, ತನ್ನ ಎಡಪಂಥೀಯ ರಾಜಕೀಯ ಚಟುವಟಿಕೆಗಳಿಗಾಗಿ 14-15 ವರ್ಷ ವಯಸ್ಸಿಗೇ ಮೂರು ಬಾರಿ ಬಂಧನಕ್ಕೊಳಗಾಗಿದ್ದ ವ್ಲಾಡಿಮಿರ್ ಮಾಯಕೋವ್‌ಸ್ಕಿ, ಹುಟ್ಟಿದ್ದು 1893ರಲ್ಲಿ. ಜೈಲಿನಲ್ಲಿ ಇದ್ದಾಗಲೆ ಪದ್ಯಗಳನ್ನು ಬರೆಯಲು ಆರಂಭಿಸಿದ್ದು. ಆದರೆ ಆಗ ಬರೆದ ಪದ್ಯಗಳನ್ನು ಜೈಲು ಅಧಿಕಾರಿಗಳು ವಶಪಡಿಸಿಕೊಂಡು ನಾಶ ಮಾಡುತ್ತಾರೆ. ಈತ ಜೈಲಿನಿಂದ ಹೊರಗೆ ಬಂದ ಒಂದೆರಡು ವರ್ಷಗಳಲ್ಲಿಯೇ ರಷ್ಯದಲ್ಲಿ ಕ್ರಾಂತಿಯಾಗಿ ಬೋಲ್ಷೆವಿಕ್ ಕಮ್ಯುನಿಸ್ಟರ ಆಡಳಿತವೂ ಬರುತ್ತದೆ. ಆ ದಿನಗಳಲ್ಲಿ ಈತ ಕವಿಯಾಗಿ ಪ್ರಸಿದ್ದನಾಗುತ್ತಾನೆ. ಆ ಸಮಯದಲ್ಲಿ ನಿರ್ಬಂಧಗಳಿಲ್ಲದೆ ದೇಶ-ವಿದೇಶಗಳನ್ನು ಸುತ್ತಲು ಅನುಮತಿಯಿದ್ದ ಕೆಲವೇ ಕೆಲವು ರಷ್ಯನ್ನರಲ್ಲಿ ಈತನೂ ಒಬ್ಬ. ರಷ್ಯಾದ ಕ್ರಾಂತಿಯ ಹತ್ತು-ಹದಿನೈದು ವರ್ಷಗಳಿಗೇ ಈತನಿಗೆ ಸ್ಟಾಲಿನ್ ಮತ್ತು ಆತನ ಆಡಳಿತದ ಬಗ್ಗೆ ಭ್ರಮನಿರಸನವಾಗುತ್ತದೆ. (ಬಹುಶಃ ಇದೇ ಕಾರಣಗಳಿಗಾಗಿ ಇರಬಹುದು–ಅದರ ಬಗ್ಗೆ ವಿಕಿಪೀಡಿಯದಲ್ಲಿ ಸ್ಪಷ್ಟತೆ ಇಲ್ಲ–) ತನ್ನ 36 ನೇ ವಯಸ್ಸಿಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ರಷ್ಯದಲ್ಲಿ ನಡೆದ 1917 ರ ಕಮ್ಯುನಿಸ್ಟ್ ಕ್ರಾಂತಿ ಎರಡು ಹಂತದ್ದು. ಮೊದಲ ಕ್ರಾಂತಿಯಾದ ಫೆಬ್ರವರಿಯಲ್ಲಿ ರಷ್ಯಾದ ದೊರೆಯನ್ನು ಉದಾರವಾದಿ ಮತ್ತು ಸೋಷಿಯಲಿಸ್ಟರ ಗುಂಪುಗಳ ಒಕ್ಕೂಟ ಪದಚ್ಯುತಿ ಮಾಡಿ ಹಂಗಾಮಿ ಸರ್ಕಾರವನ್ನು ಸ್ಥಾಪಿಸುತ್ತದೆ. ಅದೇ ವರ್ಷದ ಅಕ್ಟೋಬರ್‌ನಲ್ಲಿ ಮತ್ತೊಂದು ಕ್ರಾಂತಿಯಾಗಿ ಬೋಲ್ಷೆವಿಕರ ಮಾರ್ಕ್ಸಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ.

ಮೊದಲ ಫೆಬ್ರವರಿ ಕ್ರಾಂತಿಯ ಸಂದರ್ಭದಲ್ಲಿ ಆ ಕ್ರಾಂತಿಯಲ್ಲಿ ಪಾಲ್ಗೊಂಡ ಸೈನಿಕರನ್ನು ತಹಬಂದಿಗೆ ತರಲು ಮತ್ತು ಸೈನ್ಯದಲ್ಲಿ ಶಿಸ್ತು ಸ್ಥಾಪಿಸಲು ಹಂಗಾಮಿ ಸರ್ಕಾರ ಆದೇಶವೊಂದನ್ನು ಹೊರಡಿಸುತ್ತದೆ. ಅದೇ “ಸೋವಿಯತ್ ಆರ್ಡರ್ ನಂ. 1”.

ಈ ಹಿನ್ನೆಲೆಯಲ್ಲಿ ನಾವು ಈ ಕವಿತೆಯ ಶೀರ್ಷಿಕೆ “ಆರ್ಡರ್ ನಂ. 2” ಉತ್ಪತ್ತಿಯನ್ನು ಗ್ರಹಿಸಬೇಕು. ಮೊದಲ ಆದೇಶ ಸೈನಿಕರಿಗೆ, ಹಂಗಾಮಿ ಸರ್ಕಾರ ಹೊರಡಿಸಿದ್ದು. ಕವಿ ತನ್ನ ಈ ಕವಿತೆಯ ಮೂಲಕ ಕಲಾವಿದರ-ಸಾಹಿತಿಗಳ-ಚಿಂತಕರ ಗುಂಪಿಗೆ, ಅಂದರೆ “ಕಲೆಗಳ ಸೈನಿಕರಿಗೆ” ಎರಡನೇ ಆದೇಶ ಹೊರಡಿಸುತ್ತಾನೆ. ರಷ್ಯನ್‌ನಲ್ಲಿ ಇದ್ದ ಈ ಕವಿತೆ ಇಂಗ್ಲಿಷ್ ಮೂಲಕವೇ ನಮಗೆ ಬರಲು ಸಾಧ್ಯ. ಅದರ ಕನ್ನಡ ಅನುವಾದ ಕೆಳಗಿದೆ:

ಕಲಾಸೈನಿಕರ ಸೈನ್ಯಕ್ಕೆ ಎರಡನೇ ಆದೇಶ

– ವ್ಲಾಡಿಮಿರ್ ಮಾಯಕೋವ್‌ಸ್ಕಿ

ಇದು ನಿಮಗೆ –
ಆದಿಮನ ಕಾಲದಿಂದಲೂ
ನಿಮ್ಮ ಕಂಚಿನಕಂಠದಿಂದ
ರೋಮಿಯೋಗಳ ಜೂಲಿಯೆಟ್ಟರ ಗೀತಗಾಥಗಳನ್ನು ಹಾಡಿ
ರಂಗಸ್ಥಳಗಳೆಂಬ ಗುಹೆಗಳನ್ನು
ಅಲ್ಲಾಡಿಸಿದ ಹಾಡುಗಾರರಿಗೆ.

ಇದು ನಿಮಗೆ –
ಚಿತ್ರಕಾರರೆ,
ಕುದುರೆಗಳಷ್ಟು ಪೊಗದಸ್ತಾಗಿ ಬೆಳೆದವರೆ,
ರಷ್ಯಾದ ಮಿರಮಿರ ಮಿರುಗುವ ಮತ್ತು ಕೆನೆಯುವ ಸೌಂದರ್ಯ
ನಿಮ್ಮ ಚಿತ್ರ ಬಿಡಿಸುವ ಕೋಣೆಯಲ್ಲಿ ಅವಿತಿದೆ
ಮತ್ತು, ದಿನಕಳೆದಂತೆ, ಡ್ರಕೋನಿಯನ್ ಕಾನೂನುಗಳನ್ನು
ಹೂವು ಮತ್ತು ಬಿರಿದ ದೇಹಗಳ ಮೇಲೆ ಹೇರುತ್ತಿದೆ.

ಇದು ನಿಮಗೆ –
ಅನುಭಾವದ ಸೋಗು ಧರಿಸಿದವರಿಗೆ,
ಕಣ್ಣ ಹುಬ್ಬುಗಳೆಲ್ಲ ಸುಕ್ಕುಗಟ್ಟಿದ
ಅಲ್ಪಮತಿಯ ಕಾಲಜ್ಞಾನಿಗಳೆ,
ಕಲ್ಪನಾವಿಲಾಸಿಗಳೆ,
ಪ್ರಾಸದ ಜೇಡನಬಲೆಯಲ್ಲಿ ಸಿಲುಕಿ ಒದ್ದಾಡುತ್ತಿರುವ
ರಷ್ಯಾದ ನವ್ಯಕಾವ್ಯದ ಕವಿಪುಂಗವರೆ,
ಇದು ನಿಮಗೆ –
ಕೆದರಿದ ಕೂದಲಿನ ಬದಲಿಗೆ
ನಾಜೂಕಾಗಿ ಕೇಶಾಲಂಕಾರ ಮಾಡಿಕೊಂಡವರಿಗೆ,
ಗಟ್ಟಿ ಶೂಗಳಿಗೆ ಬದಲಾಗಿ ಮಿರುಗುವ ಶೂಗಳನ್ನು ಕೊಂಡವರಿಗೆ,
ನೀವು, ಶ್ರಮಿಕವರ್ಗದ ಕಲಾಮೀಮಾಂಸೆಯ ಬೂರ್ಷ್ವಾ ಬುದ್ಧಿಜೀವಿಗಳು,
ಪುಷ್ಕಿನ್ನನ ಮಾಸಿದ ಸಂಜೆಕೋಟಿಗೆ
ತೇಪೆ ಹಾಕುತ್ತಲೇ ಇರುವವರು.

ಇದು ನಿಮಗೆ –
ಹೊಗೆಸುರುಳಿಯೆಬ್ಬಿಸುವ ನರ್ತನಕಾರರು
ಬಹಿರಂಗವಾಗಿ ತಮ್ಮನೇ ಮಾರಿಕೊಳ್ಳುವವರು
ರಹಸ್ಯವಾಗಿ ಪಾಪ ಮಾಡುವವರು,
ಭವಿಷ್ಯದಲ್ಲಿ ತಾವೇ ವಿದ್ವಾಂಸರು ಹಾಗೂ
ತಮಗೆ ಮಿತಿಯಿಲ್ಲದ ರೇಷನ್‌ ಸಿಗುತ್ತದೆಂದು ಕಲ್ಪಿಸಿಕೊಂಡವರು,
ನಾನು ನಿಮಗೆ ಎಚ್ಚರಿಸ್ತಿದ್ದೀನಿ,
ನಾನು ಮೇಧಾವಿನೋ ಅಲ್ಲವೋ,
ಓತ್ಲಾ ಹೊಡೆಯುವುದನ್ನು ತ್ಯಜಿಸಿದವನು
ಟೆಲಿಗ್ರಾಫ್ ಕಚೇರಿಯಲ್ಲಿ ಕೆಲಸ ಮಾಡ್ತಿರೋನು,
ನಿಮಗೆ ಉಗಿದು ಬುದ್ದಿ ಹೇಳ್ತಿದ್ದೀನಿ,
ಅವರು ಬಂದೂಕಿನ ಬುಡದಿಂದ ನಿಮ್ಮನ್ನು ಗುದ್ದಿ ದಬ್ಬುವ ಮುನ್ನ
ಬಿಟ್ಟಾಕಿ ಆ ಆಲೋಚನೆಗಳನ್ನ॒.

ಬಿಟ್ಟಾಕಿ!
ಮರೆತುಬಿಡಿ.
ಉಗೀರಿ
ಪ್ರಾಸಗಳ ಮೇಲೆ,
ಪದ್ಯಗಳ ಮೇಲೆ,
ಗುಲಾಬಿ ಪೊದೆಯ ಮೇಲೆ,
ಕಲೆಯ ಶಸ್ತ್ರಾಗಾರದಿಂದ ಬಂದಿರುವ
ಅಂತಹ ತುಚ್ಛ ಭ್ರಮೆಗಳ ಮೇಲೆ
’ಓಹ್, ನಿರ್ಭಾಗ್ಯನು!
ಹೇಗೆ ಪ್ರೇಮಿಸಿದ,
ಏನೆಲ್ಲಾ ನೋವುಂಡನಲ್ಲಾ…’
ಅನ್ನೋದೆಲ್ಲಾ ಯಾರಿಗೆ ಬೇಕಾಗಿದೀಗ?
ನಮಗೆ ಬೇಕಾಗಿರೋರು
ಉದ್ದಕೂದಲಿನ ಉಪದೇಶಿಗಳಲ್ಲ;
ನಮಗೆ ಬೇಕಿರೋರು
ಒಳ್ಳೆಯ ಕಾರ್ಮಿಕರು.

(ಅಂದ ಹಾಗೆ, ಈ ವ್ಲಾಡಿಮಿರ್ ಮಾಯಕೋವ್‌ಸ್ಕಿ ಆಡುಭಾಷೆಯಲ್ಲಿ ಬರೆಯುತ್ತಿದ್ದವನು. ಆ ಮಾಹಿತಿಯ ಆಧಾರದ ಮೇಲೆ ಇಲ್ಲಿ ಕೆಲವು ಕಡೆ ಕಚ್ಚಾ ಎನ್ನಬಹುದಾದ ಆಡುಭಾಷೆಯ ಪದಗಳನ್ನು ಮತ್ತು ರೀತಿಯನ್ನು ಬಳಸಲಾಗಿದೆ.)

Leave a Reply

Your email address will not be published. Required fields are marked *