ಬಿ.ಜೆ.ಪಿ. ಮತ್ತು ಕೆ.ಜೆ.ಪಿ. : ಆಪರೇಶನ್ ಪತನ ಆರಂಭ


– ಡಾ.ಎನ್.ಜಗದೀಶ್ ಕೊಪ್ಪ


 

ಕರ್ನಾಟಕದ ಜನತೆ ಆಸೆಯಿಂದ ನಿರೀಕ್ಷಿಸುತಿದ್ದ ಬಿ.ಜೆ.ಪಿ. ಸರ್ಕಾರದ ಪತನಕ್ಕೆ ಹಾವೇರಿಯಲ್ಲಿ ನಡೆದ ಕೆ.ಜೆ.ಪಿ. ಸಮಾವೇಶದ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಾಂದಿ ಹಾಡಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಿಂದ ಈ ಬಿ.ಜೆ.ಪಿ. ಸರ್ಕಾರ ಮತ್ತು ಅದರ ನಾಯಕರು, ಸಚಿವರು, ಶಾಸಕರು ಕಟ್ಟಿದ ವೇಷ, ಆಡಿದ ನಾಟಕ ಇವುಗಳನ್ನು ನೋಡಿದ ಕರ್ನಾಟಕದ ಜನತೆ ಕೇವಲ ರೋಸಿಹೋಗಿರಲಿಲ್ಲ, ದಂಗುಬಡಿದುಹೋಗಿದ್ದರು.

ಎರಡು ದಶಕದ ಹಿಂದಿನ ಕಥೆ ನಿಮಗೆ ಬೇಡ, ಇದು ಕೇವಲ ಆರು ವರ್ಷದ ಹಿಂದಿನ ಮಾತು. ಮಲ್ಲೇಶ್ವರಂನಲ್ಲಿದ್ದ ಬಿ.ಜೆ.ಪಿ. ಕಚೇರಿಯಲ್ಲಿ ಖಾಲಿದೋಸೆ ತಿಂದು, ಬೈಟು ಕಾಫಿ ಕುಡಿದು, ಚರ್ಚೆಯ ಮೂಲಕ ಪಕ್ಷವನ್ನು ಮುನ್ನೆಡೆಸುತಿದ್ದ ಬಿ.ಜೆ.ಪಿ. ನಾಯಕರು ಮತ್ತು ಬೆಂಗಳೂರು, ಮೈಸೂರು, ಮಂಗಳೂರು ನಗರಗಳ ಬ್ರಾಹ್ಮಣರ ಮನೆಗಳಲ್ಲಿ ವಾರಾನ್ನ ತಿಂದು ಬದುಕುತಿದ್ದ ಆರ್.ಎಸ್.ಎಸ್. ಸಂಸ್ಥೆಯ ಬೃಹಸ್ಪತಿಗಳು ಕೇವಲ ನಾಲ್ಕೂವರೆ ವರ್ಷಗಳ ಬಿ.ಜೆ.ಪಿ. ಸರ್ಕಾರದ ಆಡಳಿತದಲ್ಲಿ ಎಷ್ಟರ ಮಟ್ಟಿಗೆ ಆರ್ಥಿಕವಾಗಿ ಕೊಬ್ಬಿಹೋಗಿದ್ದಾರೆಂದರೇ, ಇವರ ಒಂದು ಗಂಟೆಯ ಚರ್ಚೆಗೆ ಐಷಾರಾಮಿ ಹೋಟೇಲುಗಳು ಮತ್ತು ರಿಸಾರ್ಟ್‌ಗಳು ಈಗ ಬಳಕೆಯಾಗುತ್ತಿವೆ.

ಹನ್ನೆರೆಡು ವರ್ಷ ಅನ್ನ ಕಾಣದೆ ಹಸಿವಿನಿಂದ ಬರಗೆಟ್ಟಿದ್ದ ವ್ಯಕ್ತಿಯೊಬ್ಬ ಅನ್ನವನ್ನು ತಿನ್ನುವ ಹಾಗೇ ಈ ನಾಡಿನ ಯಾವುದೇ ಸಂಪತ್ತನ್ನೂ ಬಿಡದೇ ಲೂಟಿಮಾಡಿದ ಪಕ್ಷ ಎಂಬುದು ಕರ್ನಾಟಕದಲ್ಲಿ ಇರುವುದಾದರೇ ಅದು ಬಿ.ಜೆ.ಪಿ. ಪಕ್ಷ ಮಾತ್ರ. ಇವರ ಭೂದಾಹಕ್ಕೆ ಬಲಿಯಾದ ಸರ್ಕಾರದ ಭೂಮಿಗಳು, ಸೈಟುಗಳು ಇವುಗಳ ಸಂಖ್ಯೆಗೆ ಲೆಕ್ಕವಿಲ್ಲ.

ಯಡಿಯೂರಪ್ಪನವರ ಬಗ್ಗೆ ನಮ್ಮ ತಕರಾರುಗಳು ಏನೇ ಇರಲಿ ಅವರನ್ನು ನಾವು ಒಂದು ವಿಷಯದಲ್ಲಿ ಅಭಿನಂದಿಸಲೇಬೇಕು. ತಾವು ಒಬ್ಬರೇ ಕರ್ನಾಟಕವನ್ನು ಲೂಟಿಮಾಡಿ ತಿನ್ನಲಿಲ್ಲ, ಬದಲಾಗಿ ತಮ್ಮ ಎಂಜಲನ್ನು ಯಾವುದೇ ಭೇಧ ಭಾವ ಮಾಡದೇ ಮಠಾಧೀಶರ ಬಾಯಿಗೆ ಮತ್ತು ಆರ್.ಎಸ್.ಎಸ್. ಗರ್ಭಗುಡಿಯ ಪೂಜಾರಿಗಳ ಬಾಯಿಗೆ ಒರೆಸಿ ತಮ್ಮ ಜೊತೆ ಅವರನ್ನೂ ಕುಲಗೆಡಿಸಿದರು. ಅದಕ್ಕಾಗಿ ಅವರು ಸದಾ ವೇದಿಕೆಗಳಲ್ಲಿ “ಸರ್ವರಿಗೆ ಸಮ ಬಾಳು, ಸರ್ವರಿಗೆ ಸಮಪಾಲು” ಎಂದು ಹೇಳುತ್ತಾ ಇರುವುದನ್ನು ನೀವು ಗಮನಿಸಿರಬಹುದು.

ಶಿಸ್ತು ಮತ್ತು ನೈತಿಕತೆಗೆ ಹೆಸರಾಗಿದ್ದ ರಾಷ್ಟ್ರೀಯ ಪಕ್ಷವಾದ ಬಿ.ಜೆ.ಪಿ. ಪಕ್ಷ ಇಂತಹ ದಯನೀಯವಾದ ಪತನದ ಅಂಚಿಗೆ ತಲುಪಿರುವ ಈ ದಿನಗಳಲ್ಲಿ ಅದರ ನಾಯಕರು ಮತ್ತು ಕಾರ್ಯಕರ್ತರು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳುವುದು ಒಳಿತು. ಆದರೇ, ಪಕ್ಷವಾಗಲಿ, ಅದರ ನಾಯಕರಾಗಲಿ ಈಗ ಆ ಸ್ಥಿತಿಯಲ್ಲಿ ಇಲ್ಲ. ಏಕೆಂದರೇ, ಆಪರೇಶನ್ ಕಮಲ ಎಂಬ ಹೆಸರಿನ ಅನೈತಿಕತೆಯ ಮಾರ್ಗದಲ್ಲಿ ನಡೆದು ಬಂದಿರುವ ಪಕ್ಷ ನೈತಿಕವಾಗಿ ದಿವಾಳಿಯೆದ್ದು ಹೋಗಿದೆ. ಪಕ್ಷದ ನಾಯಕರು ಎಂತಹ ಭಂಡತನವನ್ನು ಮೈಗೂಡಿಸಿಕೊಂಡಿದ್ದಾರೆ ಎಂದರೇ, ರಸ್ತೆಯ ಬದಿಯಲ್ಲಿ ಮಗು ಮಾಡಿದ ಹೇಸಿಗೆಯನ್ನು ಸಹ ಇವರು “ಆಪರೇಷನ್ ಐಸ್‌ಕ್ರೀಮ್” ಎಂದು ಹೆಸರಿಸಿ ಅದನ್ನು ತಾವೂ ತಿಂದು; ಜನತೆಗೂ ತಿನ್ನಿಸಬಲ್ಲರು.

ಕರ್ನಾಟಕ ಕಂಡ ಒಬ್ಬ ಹುಂಬ ಮತ್ತು ಭಂಡ ರಾಜಕಾರಣಿ ಯಡಿಯೂರಪ್ಪ ತನ್ನ ಎಪ್ಪತ್ತನೇ ವಯಸ್ಸಿನಲ್ಲಿ ಕರ್ನಾಟಕ ಜನತಾ ಪಕ್ಷ ಹುಟ್ಟು ಹಾಕಿ, ಬಿ.ಜೆ.ಪಿ. ಪಕ್ಷದ ಪತನಕ್ಕೆ ಕೈ ಹಾಕುವುದರ ಜೊತೆ ಜೊತೆಯಲ್ಲಿ ತಮ್ಮ ನಾಶಕ್ಕೆ ತಾವೇ ಮುಂದಾಗಿದ್ದಾರೆ.

ಒಂದೂವರೆ ಸಾವಿರ ಬಸ್‌ಗಳು, ಎಂಟು ಸಾವಿರ ಮಿನಿ ಬಸ್ ಮತ್ತು ಟೆಂಪೊ ಇವುಗಳ ಮೂಲಕ ಸಾವಿರ ಸಾವಿರ ಹಣ ನೀಡಿ ಕರೆಸಿಕೊಂಡ ಬಾಡಿಗೆ ಜನರ ಮುಂದೆ ವೀರಾವೇಶದಿಂದ ಮಾತನಾಡುವ, ಕಣ್ಣೀರು ಸುರಿಸುವ ಯಡಿಯೂರಪ್ಪ ಅರಿಯಬೇಕಾದ ವಾಸ್ತವ ಸತ್ಯ ಒಂದಿದೆ. ಸಮಾವೇಶಕ್ಕೆ ಬಂದ ಅಥವಾ ಬರುವ ಜನಗಳೆಲ್ಲಾ ಪಕ್ಷದ ಮತಗಳಾಗಿ ಪರಿವರ್ತನೆಯಾಗುವುದಿಲ್ಲ. ಹೊಲ ಗದ್ದೆಗಳಲ್ಲಿ ಬಿಸಿಲಿನಲ್ಲಿ ಕೂಲಿ ಮಾಡುವ ಬದಲು, ಐನೂರು ರೂಪಾಯಿಗಾಗಿ ಸಮಾವೇಶಕ್ಕೆ ಬಂದು ಭಾಷಣ ಕೇಳುವ ಜನತೆಯ ಒಂದು ವರ್ಗ ಕರ್ನಾಟಕದಲ್ಲಿ ಇತ್ತೀಚೆಗೆ ಸೃಷ್ಟಿಯಾಗಿದೆ.

ಸತ್ಯ ಹರಿಶ್ಚಂದ್ರನಂತೆ, ಹುತಾತ್ಮನಂತೆ ಮಾತನಾಡುವ ಯಡಿಯೂರಪ್ಪ ಹಾವೇರಿಯ ಸಮಾವೇಶಕ್ಕೆ ಖರ್ಚು ಮಾಡಿದ ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ಕರ್ನಾಟಕದ ಜನತೆಗೆ ಮಾಹಿತಿ ನೀಡಬೇಕಿದೆ. ಕನ್ನಡದ ಎಲ್ಲಾ ಪತ್ರಿಕೆಗಳಿಗೆ ನಾಲ್ಕು ಪುಟಗಳ ವಿಶೇಷ ಪುರವಣಿಗೆಗೆ ಜಾಹಿರಾತು ಮೂಲಕ ತಲಾ 20 ಲಕ್ಷದಿಂದ 40 ಲಕ್ಷದ ವರೆಗೆ ಹಣ ನೀಡಿದವರು ಯಾರು? ಕೇವಲ ಒಂದು ದಿನದ ಹಾವೇರಿಯ ಸಮಾವೇಶಕ್ಕೆ 15 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಯಡಿಯೂರಪ್ಪ ಒಮ್ಮೆ ತಣ್ಣಗೆ ಕುಳಿತು ಕರ್ನಾಟಕದ ರಾಜಕೀಯ ಇತಿಹಾಸವನ್ನು ಓದುವುದು ಒಳಿತು. ಜೊತೆಗೆ ತಾನು ಸಾಗಿ ಬಂದ ಬದುಕಿನ ಹಾದಿಯನ್ನೂ ತಿರುಗಿ ನೋಡಬೇಕಿದೆ.

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೋಕಿನ ಬೂಕನಕೆರೆ ಗ್ರಾಮದಲ್ಲಿ ಜನಿಸಿದ ಯಡಿಯೂರಪ್ಪ ನಿಂಬೆ ಹಣ್ಣು ಮಾರುತ್ತಾ, ಕಷ್ಟದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದವರು. ನಂತರ ಪಿ.ಯು.ಸಿ. ಓದುವ ಸಂದರ್ಭದಲ್ಲಿ ಕಡು ಬಡತನದ ಕಾರಣಕ್ಕಾಗಿ ಶಿಕ್ಷಣಕ್ಕೆ ತಿಲಾಂಜಲಿ ಇತ್ತು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಾಸ್ತ್ರಿ ಎಂಬುವರ ಅಕ್ಕಿ ಗಿರಣಿಯಲ್ಲಿ ಗುಮಾಸ್ತನಾಗಿ ಬದುಕು ಕಂಡುಕೊಂಡವರು. ಶಾಸ್ರಿಯವರ ಪುತ್ರಿ ಮೈತ್ರಾ ದೇವಿಯವರನ್ನು ವಿವಾಹವಾಗುವುದರ ಮೂಲಕ ಪುರಸಭೆಯ ಸದಸ್ಯನಾಗಿ ರಾಜಕೀಯ ಪ್ರವೇಶ ಮಾಡಿದ ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗುವವರೆಗೂ ಹುಟ್ಟು ಹೋರಾಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಆದರೆ, ಅವರು ಮುಖ್ಯಮಂತ್ರಿ ಸ್ಥಾನದ ಹುದ್ದೆಗೆ ಏರಿದ ಕೂಡಲೇ ತಾನೊಬ್ಬ ಜಾತಿವಾದಿ, ಧನದಾಹಿ, ಕಡು ಭ್ರಷ್ಟ ಎಂಬುದನ್ನು ಯಾವ ಮುಚ್ಚು ಮರೆಯಿಲ್ಲದೆ ಹೊರಜಗತ್ತಿಗೆ ತಮ್ಮನ್ನು ತಾವೇ ಅನಾವರಣಗೊಳಿಸಿಕೊಂಡರು.

ಮೋಹಿನಿ ಭಸ್ಮಾಸುರನಂತೆ ತಮ್ಮ ತಲೆಯ ಮೇಲೆ ತಾವೇ ಕೈಇಟ್ಟು ಕೊಂಡು ನಾಶವಾಗಲು ಹೊರಟಿರುವ ಯಡಿಯೂರಪ್ಪ ಕೆ.ಜೆ.ಪಿ. ಪಕ್ಷ ಕಟ್ಟುವುದರ ಮೂಲಕ ಆಟವಾಡಲು ಹೊರಟಂತಿಲ್ಲ. ಬದಲಾಗಿ ಅವರು ಆಟ ಕೆಡಿಸಲು ಹೊರಟಂತಿದೆ. 1980ರ ದಶಕದಲ್ಲಿ ಇಂತಹದ್ದೇ ಆಟವಾಡಲು ಹೊರಟ ದೇವರಾಜು ಅರಸು ರಾಜಕೀಯದಲ್ಲಿ ಇನ್ನಿಲ್ಲದಂತೆ ಮಣ್ಣು ಮುಕ್ಕಿದ್ದರು.

1975 ರ ಜುಲೈ ತಿಂಗಳಿನಲ್ಲಿ ದೇಶಾದ್ಯಂತ ಜಾರಿಗೆ ತಂದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸರ್ವಾಧಿಕಾರಿಣಿಯಂತೆ ಮೆರೆದ ಇಂದಿರಾಗಾಂಧಿ 1978 ರ ಚುನಾವಣೆಯಲ್ಲಿ ಸೋತು ದೆಹಲಿಯ ತಿಹಾರ್ ಜೈಲುಪಾಲಾಗಿದ್ದರು. ಆ ಸಂದರ್ಭದಲ್ಲಿ ಅಸ್ತಿತ್ವಕ್ಕೆ ಬಂದ ಜನತಾ ಸರ್ಕಾರ ಮುರಾರ್ಜಿ ದೇಸಾಯಿ ಎಂಬ ಜಿಗುಟು ಸ್ವಭಾವದ ನಾಯಕನನ್ನು ಪ್ರಧಾನಿಯನ್ನಾಗಿ ಮಾಡಿತ್ತು. ಗೃಹ ಮಂತ್ರಿಯಾಗಿದ್ದ ಚರಣ ಸಿಂಗ್‌ರ ಅಧಿಕಾರದ ದಾಹ ಮತ್ತು ಇಂದಿರಾಗಾಂಧಿಯನ್ನು ರಾಯ್ ಬರೇಲಿ ಕ್ರೇತ್ರದಿಂದ ಸೋಲಿಸಿ, ಕೇಂದ್ರ ಸಚಿವ ಸಂಪುಟದಲ್ಲಿ ಸಚಿವನಾಗಿದ್ದ ರಾಜ್ ನಾರಾಯಣ್ ಎಂಬ ಹಗಲು ಹನುಮಂತರಾಯ ಉರುಪ್ ರಾಜಕೀಯ ಬಫೂನ್ ಇವರ ಚಿತಾವಣೆಯಿಂದಾಗಿ ಕೇವಲ ಒಂದೂವರೆ ವರ್ಷದಲ್ಲಿ ಜನತಾ ಸರ್ಕಾರ ಪತನಗೊಡು ಜಯಪ್ರಕಾಶ್ ನಾರಾಯಣರ ಕನಸು ನುಚ್ಚು ನೂರಾಯಿತು. ಜೊತೆಗೆ ದೇಶದಲ್ಲಿ ಮತ್ತೇ ಚುನಾವಣೆ ಎದುರಾಯಿತು.‍

ಕೇಂದ್ರದಲ್ಲಿ ಜನತಾ ಸರ್ಕಾರವಿದ್ದಾಗ, ಇಡೀ ಭಾರತದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೇಸ್ ಅಧಿಕಾರ ಕಳೆದುಕೊಂಡಿತ್ತು. ಆದರೇ ಕರ್ನಾಟಕದಲ್ಲಿ ಅರಸು ನೇತೃತ್ವದ ಕಾಂಗ್ರೇಸ್ ಪಕ್ಷ ಮಾತ್ರ ಅಧಿಕಾರದಲ್ಲಿತ್ತು. ಪಕ್ಷದ ಪ್ರಭಾವವಿಲ್ಲದೇ ಹಿಂದುಳಿದ ವರ್ಗದ ಏಳಿಗೆ ಮತ್ತು ಅಭಿವೃದ್ಧಿಯ ಮೂಲಕ ಹೆಸರಾಗಿದ್ದ ಅರಸು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಸಂಸತ್ತಿನ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೇಸ್ ಪಕ್ಷಕ್ಕೆ ಮತ್ತೇ ಚುನಾವಣೆ ಎದುರಾದಾಗ ಇಡೀ ರಾಷ್ಟ್ರದ ಅಷ್ಟು ಕ್ರೇತ್ರಗಳ ಅಭ್ಯರ್ಥಿಗಳಿಗೆ ಹಣ ಪೂರೈಸುವ ಹೊಣೆ ಅರಸು ಹೆಗಲಿಗೆ ಬಿತ್ತು. ಹಿಂದುಳಿದವರ ಆಶಾಕಿರಣವಾಗಿ, ಹೊರ ಹೊಮ್ಮಿದ್ದ ಅರಸು ಮೊಯ್ಲಿ, ಖರ್ಗೆ, ಧರ್ಮಸಿಂಗ್, ಬಂಗಾರಪ್ಪ, ಬಸವಲಿಂಗಪ್ಪ, ಮುಂತಾದ ನಾಯಕರನ್ನು ಹುಟ್ಟುಹಾಕಿದ್ದರು. ಜನ ಸಾಮಾನ್ಯರ ಬಾಯಲ್ಲಿ ದೊರೆ ಎಂದು ಪ್ರೀತಿಯಿಂದ ಕರೆಸಿಕೊಳ್ಳುತಿದ್ದ ಅರಸು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶದ ಬಾಗಿಲನ್ನು ಮುಕ್ತವಾಗಿ ತೆರೆದಿಟ್ಟರು.

ಒಂದು ಅಘಾತಕಾರಿ ಸೋಲಿನ ನಂತರ ಮತ್ತೇ ಕೇಂದ್ರದಲ್ಲಿ ಇಂದಿರಾಗಾಂಧಿಯ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಹಜವಾಗಿ ತನ್ನಿಂದಾಗಿ ಪಕ್ಷ ಅಧಿಕಾರಕ್ಕೆ ಬಂತು ಎಂಬ ಅಹಂ ಮತ್ತು ಹೆಮ್ಮೆ ಅರಸುರವರಲ್ಲಿ ಬೆಳೆಯತೊಡಗಿದವು. ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಕಾಂಗ್ರೇಸ್ ಪಕ್ಷದಲ್ಲಿ ತಾನೊಬ್ಬಳು ಮಾತ್ರ ಪ್ರಶ್ನಾತೀತ ನಾಯಕಿ ಎಂಬಂತಿದ್ದ ಇಂದಿರಾ ಗಾಂಧಿಗೆ ದೇವರಾಜು ಅರಸುರವರ ನಡುವಳಿಕೆ ಹಿಡಿಸಲಿಲ್ಲ. ಅಷ್ಟರ ವೇಳೆಗೆ ಅರಸು ಸಂಪುಟದಲ್ಲಿ ಇದ್ದುಕೊಂಡು ಇಂದಿರಾ ಪುತ್ರ ಸಂಜಯಗಾಂಧಿ ಮೂಲಕ ಕೇಂದ್ರಕ್ಕೆ ಹತ್ತಿರವಾಗಿದ್ದ ಗುಂಡೂರಾವ್ ಮತ್ತು ಎಪ್.ಎಂ.ಖಾನ್ ನಡೆಸಿದ ಗುಪ್ತ ರಾಜಕೀಯ ಚಟುವಟಿಕೆಯ ಫಲವಾಗಿ ಅರಸು ಕರ್ನಾಟಕದಲ್ಲಿ ಮುಖ್ಯಮಂತ್ರಿಯ ಅಧಿಕಾರ ಕಳೆದುಕೊಳ್ಳಬೇಕಾಯಿತು.

ಸ್ವಾಭಿಮಾನಿಯಾದ ಅರಸು ಇದೇ ಯಡಿಯೂರಪ್ಪನವರ ಮಾದರಿಯಲ್ಲಿ ಕರ್ನಾಟಕ ಮಾತ್ರವಲ್ಲದೆ ಹಸು ಮತ್ತು ಕರು ಚಿಹ್ನೆಯ ಪ್ರತ್ಯೇಕ ಕಾಂಗ್ರೆಸ್ ಪಕ್ಷವನ್ನು ಹುಟ್ಟುಹಾಕಿದರು. ಅಧಿಕಾರದ ಕನಸು ಕಂಡು ಸಾರ್ವತ್ರಿಕ ಚುನಾವಣೆಯಲ್ಲಿ ಹೀನಾಯ ಸೋಲು ಕಾಣುವುದರ ಮೂಲಕ ತಾವು ರಾಜಕೀಯದಲ್ಲಿ ಸಂಪಾದಿಸಿದ್ದ ಎಲ್ಲಾ ಸಂಪತ್ತನ್ನು ಕಳೆದುಕೊಂಡರು. ಅವರ ಕೊನೆಯ ದಿನಗಳಲ್ಲಿ ಅರಸು ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಎನ್.ಹುಚ್ಚಮಾಸ್ತಿಗೌಡ ಮಾತ್ರ ಸದಾ ಜೊತೆಗಿರುತಿದ್ದರು.

ಅರಸು ಬಾಲಬ್ರೂಯಿ ಭವನದ ನಿವಾಸದಲ್ಲಿ ಬೆನ್ನು ಪಣಿ ಎಂಬ ಕಾಯಿಲೆ ಮತ್ತು ಮಧುಮೇಹ ರೋಗಕ್ಕೆ ತುತ್ತಾಗಿ, ಉಪ್ಪು ಬೆರಸಿದ ರಾಗಿ ಗಂಜಿ ಕುಡಿಯುತ್ತಾ ಮಲಗಿದ್ದಾಗ ಅವರಿಂದ ರಾಜಕೀಯವಾಗಿ ಬೆಳದ ಒಬ್ಬ ನಾಯಕನೂ ಅವರತ್ತ ತಿರುಗಿ ನೋಡಲಿಲ್ಲ. ಅವರ ಆರ್ಥಿಕ ಪರಿಸ್ಥಿತಿ ಎಷ್ಟರ ಮಟ್ಟಿಗೆ ಹದಗೆಟ್ಟಿತ್ತೆಂದರೇ, ಅವರು ಸೇದುತಿದ್ದ ಪೈಪಿಗೆ ವಿದೇಶಿ ಮೂಲದ ವರ್ಜಿನಿಯಾ ತಂಬಾಕು ತುಂಬಿಸಿಕೊಳ್ಳಲು ಅವರ ಬಳಿ ಹಣವಿರಲಿಲ್ಲ. ಇದು ನಮ್ಮ ಕಣ್ಣೆದುರು ಬೆಳೆದು, ಬಾಗಿ, ಮಣ್ಣಲ್ಲಿ ಮಣ್ಣಾಗಿ ಹೋದ ರಾಜಕೀಯ ಧೀಮಂತ ನಾಯಕನೊಬ್ಬನ ದುರಂತ ಕಥನ.

ಮನುಷ್ಯನ ಮಾಂಸದ ರುಚಿ ನೋಡಿದ ಹುಲಿಯಂತೆ ಮುಖ್ಯಮಂತ್ರಿ ಗಾದಿಯ ರುಚಿ ನೋಡಿರುವ ಯಡಿಯೂರಪ್ಪ ಅಧಿಕಾರಕ್ಕಾಗಿ ಮತ್ತು ಸಂಪತ್ತಿನ ಲೂಟಿಗಾಗಿ ಹಗಲಿರುಳು ಹಂಬಲಿಸುತಿದ್ದಾರೆ. ಮುಖ್ಯಮಂತ್ರಿಯ ಕುರ್ಚಿಗಾಗಿ ಯಡಿಯೂರಪ್ಪ ಆಡುತ್ತಿರುವ ರಾಜಕೀಯ ನಾಟಕದ ಹಿಂದೆ ಹಲವಾರು ಹುನ್ನಾರಗಳಿವೆ. ತನ್ನ ಅವಧಿಯ ಭ್ರಷ್ಟಾಚಾರದಿಂದಾಗಿ ಸಿ.ಬಿ.ಐ. ಕುಣಿಕೆಗೆ ಕೊರಳೊಡ್ಡಿರುವ ಯಡಿಯೂರಪ್ಪ ಅದರಿಂದ ಪಾರಾಗಲು ತಾನೂ ಒಂದಿಷ್ಟು ಶಾಸಕರನ್ನು ಜೊತೆಗಿಟ್ಟುಕೊಂಡು ಕಾಂಗ್ರೇಸ್ ಪಕ್ಷದ ಜೊತೆ ಚೌಕಾಸಿ ಕುದುರಿಸಬೇಕಿದೆ. ಏಕೆಂದರೇ, ಸೋಮಾರಿತನ ಮತ್ತು ಗುಲಾಮಗಿರಿತನ ಎರಡನ್ನೂ ಪಕ್ಷದ ಪ್ರಣಾಳಿಕೆಯಂತೆ ಮಾಡಿಕೊಂಡಿರುವ ಕಾಂಗ್ರೇಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ಆಸಕ್ತಿ ಇದ್ದಂತಿಲ್ಲ. ಈ ಅವಕಾಶ ಉಪಯೋಗಿಸಿಕೊಳ್ಳಲು ಸಿದ್ಧರಾಗಿರುವ ಯಡಿಯೂರಪ್ಪ ಹೊಸ ಪಕ್ಷವನ್ನು ಹುಟ್ಟು ಹಾಕುವುದರ ಮೂಲಕ ತನಗೆ ರಾಜಕೀಯವಾಗಿ ಜನ್ಮ ನೀಡಿದ ಬಿ.ಜೆ.ಪಿ. ಪಕ್ಷದ ಕುತ್ತಿಗೆ ಹಿಸುಕಲು ಮುಂದಾಗಿದ್ದಾರೆ. ಇಂತಹ ಒಂದು ಸಾವನ್ನು ಕರ್ನಾಟಕದ ಪ್ರಜ್ಞಾವಂತ ಜನತೆ ಸಹ ಆಸೆಯಿಂದ ಎದುರು ನೋಡುತ್ತಿದ್ದಾರೆ.

Leave a Reply

Your email address will not be published. Required fields are marked *