ಜೆಡಿ(ಎಸ್): ಪ್ರಜಾಪ್ರಭುತ್ವ ಮೌಲ್ಯಗಳಿಗಾಗಿ ಹುಟ್ಟಿಕೊಂಡ ಪಕ್ಷದ ದುಸ್ಥಿತಿ ಇದು.

– ಶಿವರಾಜ್

ಜಮೀರ್ ಅಹ್ಮದ್ ಖಾನ್ 2006 ರ ಆರಂಭದಲ್ಲಿ ತನ್ನ ಬಸ್‌ನ ಡ್ರೈವರ್ ಸೀಟ್‌ನಲ್ಲಿ ಕುಳಿತು ಜೆಡಿಎಸ್ ಶಾಸಕರನ್ನು ರಾಜಭವನಕ್ಕೆ ಕರೆದೊಯ್ದರು. ಆಗ ಆ ಪಕ್ಷದ ನಾಯಕ, ಪ್ರಥಮ ಬಾರಿಗೆ ಎಂ.ಎಲ್.ಎ. ಆಗಿ ಆಯ್ಕೆಯಾಗಿದ್ದ ಎಚ್.ಡಿ.ಕುಮಾರಸ್ವಾಮಿ. ಆ ಬಸ್ ಪ್ರಯಾಣದಿಂದ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂತು. ಅಷ್ಟೇ ಅಲ್ಲ, ಅದೇ ಪ್ರಯಾಣ ಜೆಡಿಎಸ್‌ನ ಅವನತಿಗೂ ಮುನ್ನುಡಿ ಹಾಕಿತು. ಅಂತಹದೊಂದು ರಿಸ್ಕ್ ತೆಗೆದುಕೊಂಡಿದ್ದರಿಂದಾಗಿಯೇ 20 ತಿಂಗಳ ಮುಖ್ಯಮಂತ್ರಿ ಪಟ್ಟಕ್ಕಾಗಿ ಮತ್ತು ಅಧಿಕಾರಕ್ಕಾಗಿ ಕೋಮುವಾದಿ ಪಕ್ಷದೊಂದಿಗೆ ಕೈ ಜೋಡಿಸಿದರು ಎಂಬ ಅಪವಾದವನ್ನು ಆಹ್ವಾನಿಸಿಕೊಂಡಿದ್ದು ಈ ಸೋ ಕಾಲ್ಡ್ ಜಾತ್ಯತೀತ ಪಕ್ಷ.

ಜೆಡಿಎಸ್ ಮತ್ತು ಜೆಡಿಯು ಮೂಲತಃ ಜನತಾ ದಳದಿಂದ ಟಿಸಿಲೊಡೆದು ಹುಟ್ಟಿಕೊಂಡ ಪಕ್ಷಗಳು. ಮೂಲ ಪಕ್ಷಕ್ಕೆ ಪ್ರಜಾಪ್ರಭುತ್ವ ಮೌಲ್ಯಗಳಿಗಾಗಿ ಹೋರಾಡಿದ ಹಿನ್ನೆಲೆ ಇದೆ. ಈ ಹೊತ್ತು ಜೆಡಿಎಸ್ ಚುಕ್ಕಾಣಿ ಹಿಡಿದ ಯಾರಲ್ಲೂ ಈ ಚಳವಳಿಯ ಕುರುಹುಗಳು ಒಂದು ಮಿಲಿಗ್ರಾಂನಷ್ಟೂ ಕಾಣುತ್ತಿಲ್ಲ. ಪಕ್ಷದ ಈ ಹೊತ್ತಿನ ವ್ಯಕ್ತಿತ್ವವನ್ನು ಮತ್ತದೇ ಜಮೀರ್ ಅಹ್ಮದ್ ಖಾನ್ ವ್ಯಕ್ತಿತ್ವದ ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳಬಹುದು. ಖಾನ್ ಒಬ್ಬ ವ್ಯಾಪಾರಿ. ಬಸ್ ಓಡಿಸುವುದು ಅವರ ದಂಧೆ. ರಾಜಕೀಯಕ್ಕೆ ಧುಮುಕ್ಕಿದ್ದು ಇಂಥದೇ ವ್ಯಾಪಾರೀ ಉದ್ದೇಶಗಳಿಂದ. ಒಬ್ಬ ರಾಜಕಾರಣಿಗೆ ಅಗತ್ಯವಾದ ಜನಪ್ರಿಯ ಕಾರ್ಯಕ್ರಮಗಳನ್ನು ಆಯೋಜಿಸುವುದು ಅವರಿಗೆ ಗೊತ್ತು. ಆಗಾಗ ಸಾಮೂಹಿಕ ವಿವಾಹ ಏರ್ಪಡಿಸಿ ನವ ದಂಪತಿಗಳನ್ನು ಹನಿಮೂನ್‌ಗೂ ಕಳುಹಿಸುವಷ್ಟರ ಮಟ್ಟಿಗೆ ಅವರು ಜನಾನುರಾಗಿ. ಇಂದು ಜೆಡಿಎಸ್ ಸೂತ್ರ ಹಿಡಿದಿರುವ ಬಹುತೇಕರು ಹೆಚ್ಚುಕಮ್ಮಿ ಇಂತಹದೇ ಮನಸ್ಥಿತಿಯವರು.

ಈ ಪಕ್ಷದವರು ಸಿದ್ಧಾಂತ, ಹೋರಾಟಗಳ ಬಗ್ಗೆ ಆಗಾಗ ಮಾತನಾಡುತ್ತಾರೆ. ಆದರೆ ಅದು ಕುಮಾರಸ್ವಾಮಿ ಒಂದು ದಿನದ ಉಪವಾಸ ಮಾಡುವುದಷ್ಟಕ್ಕೇ ಸೀಮಿತ. ಆಗೊಮ್ಮೆ ಈಗೊಮ್ಮೆ ದೇವೇಗೌಡರನ್ನು ಮುಖ್ಯಮಂತ್ರಿ ಮನೆ ಮುಂದೆ ಮತ್ತು ರೇವಣ್ಣರನ್ನು ಹಾಸನದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಎಂದು ಕೂರಿಸುವುದೂ ಉಂಟು. ಆ ಪ್ರತಿಭಟನೆಗಳ ಹಿಡನ್ ಬೇಡಿಕೆಗಳು ಕೇವಲ ಲೋಕೋಪಯೋಗಿ ಮತ್ತಿತರೆ ಇಲಾಖೆಗಳಲ್ಲಿ ಪೆಂಡಿಗ್ ಉಳಿದಿರುವ ಬಿಲ್‌ಗಳ ಕ್ಲಿಯರೆನ್ಸ್‌ಗೆಂದು ವಿಧಾನಸೌಧದ ಕಂಬಕಂಬಗಳಿಗೂ ಗೊತ್ತು.

ಸೆಕ್ಯುಲರ್ ಪದದ ಅರ್ಥವನ್ನೇ ನಿಘಂಟುವಿನಲ್ಲಿ ಹುಡುಕಲಾಗದೇ ಹೋದವರು, ಈ ಸೆಕ್ಯುಲರ್ ಪಾರ್ಟಿಯ ಇಂದಿನ ನೇತಾರರು! ಈ ಪಕ್ಷದ ಮುಂಚೂಣಿ ನಾಯಕರಿಗೂ ಆದರ್ಶದ ಮಾತನಾಡುವ ಸಮಾಜಮುಖಿ ಬುದ್ಧಿಜೀವಿಗಳಿಗೂ ಆಗಿ ಬರೋಲ್ಲ. ಯಾರಾದ್ರೂ ತತ್ವ, ಸಿದ್ಧಾಂತ, ಹೋರಾಟ, ಜಾತ್ಯತೀತತೆ, ಎಂದು ಮಾತನಾಡುತ್ತಿದ್ದರೆ ಇಂಡಿಯಾದ ನಂಬರ್ ಒನ್ ಇಂಗ್ಲಿಷ್ ಪತ್ರಿಕೆಯ ವರದಿಗಾರರಂತೆ ‘ಬುಲ್ ಷಿಟ್’ ಎಂದು ಎದ್ದು ಹೋಗುತ್ತಾರೆ. ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಕಾಂಗ್ರೆಸ್ ಮತ್ತು ಕೋಮುವಾದಿಗಳ ಕೂಟವಾದ ಬಿಜೆಪಿಗೆ ಪರ್ಯಾಯವಾಗಿ ಜನತಾದಳ ಬೆಳೆಯುತ್ತದೆ ಎಂದು ಈ ಪಕ್ಷವನ್ನು ಬೆಂಬಲಿಸಿದ ಬಹುತೇಕರಿಗೆ ಇಂದು ಅಪಾರವಾದ ನಿರಾಶೆಯಾಗಿದೆ.

***

ಹಾಸನದಂತಹ ಭದ್ರಕೋಟೆಯಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಕಳೆದುಕೊಳ್ಳುತ್ತಿದೆ ಎಂದರೆ ಅದನ್ನು ನಂಬಲೇಬೇಕು. ಪಕ್ಷದ ಹುಟ್ಟಿನಿಂದ ಅದರೊಟ್ಟಿಗೇ ಇದ್ದು ಅಷ್ಟೋ ಇಷ್ಟೋ ಅಧಿಕಾರ ಅನುಭವಿಸಿದ ತಪ್ಪಿಗೆ, ಈಗಲೂ ಪಕ್ಷದ ನಾಯಕರ ಮಕ್ಕಳು, ಮೊಮ್ಮಕ್ಕಳಿಂದ ಮೂದಲಿಕೆಗೆ ಈಡಾಗಬೇಕಾದ ಪರಿಸ್ಥಿತಿ ಅಲ್ಲಿಯ ಕೆಲ ಹಿರಿಯ ರಾಜಕಾರಣಿಗಳದ್ದು. ಮಹಿಳಾ ಸ್ವಸಹಾಯ ಸಂಘದವರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳನ್ನು ಉದ್ಘಾಟಿಸಿ ಅಲ್ಲಿದ್ದ ಶಾಲಾ ಮಕ್ಕಳ ಚಡ್ಡಿಗಳನ್ನು ತೋರಿಸುತ್ತಾ ಹೊಳೆನರಸೀಪುರದ ಶಾಸಕ, “ರೀ ಪಟೇಲ್ರೇ, ಈ ಚಡ್ಡಿ ನಿಮಗೆ ಆಗುತ್ತೇನ್ರಿ…ಆಗೋಹಾಗಿದ್ರೆ ತಗೊಳ್ರಿ..” ಎಂದು ವಯಸ್ಸಿನಲ್ಲಿ ತನಗಿಂತ ಹಿರಿಯ ನಾಯಕನನ್ನು ಲೇವಡಿ ಮಾಡುತ್ತ ಕೇಳುತ್ತಾರೆ. ಅದನ್ನು ಕೇಳಿಸಿಕೊಂಡ ಸಂಘದ ಮಹಿಳೆಯರು ಮುಖಕ್ಕೆ ಸೆರಗು ಅಡ್ಡ ಮಾಡಿಕೊಂಡು ಮುಸಿ ಮುಸಿ ನಗುತ್ತಾರೆ. ಆ ಹಿರಿಯ ನಾಯಕ ಇಂತಹ ಮುಜುಗರ ಸಹಿಸಿಕೊಳ್ಳಬೇಕು.

“ಇವರಿಬ್ಬರಿಗೂ ಯಾವ ಕಾಯಿಲೆಯೂ ಬರೋಲ್ಲ, ಯಾಕೆ ಗೊತ್ತಾ? ಹಾಸನದ ಎಲ್ಲಾ ನಾಟಿಕೋಳಿಗಳನ್ನು ಇವರೇ ಹೊಡ್ಕೊಂಡು ತಿಂದುಬಿಟ್ಟವರೆ..” ಎಂದು ಬಹಿರಂಗವಾಗಿ ಪತ್ರಿಕಾಗೋಷ್ಟಿಯಲ್ಲಿ ಹಾಸ್ಯಲೇಪಿಸಿ ಆರೋಪ ಮಾಡಿದರೆ ಅನ್ನಿಸಿಕೊಂಡವರು ತುಟಿ ಬಿಚ್ಚದೆ ಸುಮ್ಮನಿರಬೇಕು. ಕಾರಣ ‘ದೊಡ್ಡವರ ದಯೆಯಿಂದ’ ಅಧಿಕಾರ ಸಿಕ್ಕಿದೆ. ಅವರ ಮಕ್ಕಳು ಹೀಗೆಲ್ಲಾ ಮಾತನಾಡಿದರೆ ಸಹಿಸಿಕೊಳ್ಳಲೇಬೇಕು.

ಈಗ ಮೂರನೇ ಪೀಳಿಗೆಯಿಂದಲೂ ಮಾತು ಕೇಳಬೇಕು. “ಯಾವನ್ರೀ ಅದು? ನಾನು ನಾಳೆ ಬೆಳಗ್ಗೆ ಇಲ್ಲಿಗೆ ಬರೋದ್ರೊಳಗೆ ಅವರ ಯಾವ ಕಟೌಟ್‌ಗಳೂ ಬೇಲೂರಲ್ಲಿ ಎಲ್ಲಿಯೂ ಇರಬಾರದು..” ಆದೇಶಿಸುತ್ತಾನೆ 22 ರ ಎಂಜಿನಿಯರಿಂಗ್ ವಿದ್ಯಾರ್ಥಿ. ಆ ಹುಡುಗ ಮಾತನಾಡುತ್ತಿರುವುದು ಮಾಜಿ ಸಂಸದರ ಬಗ್ಗೆ. ಭಿಕ್ಷುಕನೇ ಆದರೂ ಎದುರಿಗೆ ಬಂದಾಗ ಅವನ ವಯಸ್ಸಿಗಾದರೂ ಮರ್ಯಾದೆ ಕೊಟ್ಟು ಏಕವಚನದಲ್ಲಿ ಮಾತನಾಡಿಸಬಾರದು ಎಂದು ಸಾಮಾನ್ಯವಾಗಿ ಅಪ್ಪ-ಅಮ್ಮ ಹೇಳಿಕೊಟ್ಟಿರ್ತಾರೆ. ಆದರೆ ಈ ಹುಡುಗನಿಗೆ ಅಂತಹದೊಂದು ಪಾಠವೇ ಆದಂತಿಲ್ಲ. ನಗರದ ಪ್ರಥಮ ಪ್ರಜೆ ಎದುರಿಗೆ ಬರ್ತಾರೆ. ಈ ಹುಡುಗ ಚಿಕ್ಕವನಿದ್ದಾಗ ಚಾಕೊಲೇಟ್ ಕೊಡಿಸಿ, ಆಡಿಸಿ ಬೆಳೆಸಿದ ಹೆಮ್ಮೆ ಆ ಪ್ರಥಮ ಪ್ರಜೆಗೆ ಇದೆ. ಆದರೆ 22ರ ಹರೆಯದ ನವಪ್ರಜೆ, ”ಏನೋ…. ಬಾರೋ ಇಲ್ಲಿ..” ಎಂದು ಕರೆಯುತ್ತಾನೆ.

ಒಂದು ಪಾರ್ಟಿ ಒಂದು ಕುಟುಂಬಕ್ಕೆ ಸೀಮಿತವಾದರೆ ಆಗುವ ಸಹಜ ಪರಿಣಾಮಗಳೇನು ಎಂದು ಊಹಿಸಲು ಈ ಮೇಲಿನ ಉದಾಹರಣೆಗಳು ಸಾಕು.

***

ದೇವೇಗೌಡರು ಇತ್ತೀಚೆಗೆ ಒಂದು ಹಳ್ಳಿಯಲ್ಲಿ ಹೇಳಿದ ಮಾತು ಮಾಧ್ಯಮಗಳಲ್ಲಿ ಅರ್ಹ ಪ್ರಾತಿನಿಧ್ಯ ಪಡೆಯಲಿಲ್ಲ. “ನನ್ನ ರಾಜಕೀಯ ಜೀವನದ ಕೊನೆಗಾಲದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ತನ್ನ ಕುಟುಂಬದಲ್ಲಿ ಎದುರಿಸಿದ ಪರಿಸ್ಥಿತಿಯನ್ನು ಎದುರಿಸಲು ನಾನು ಸಿದ್ಧನಿಲ್ಲ..” ಎಂದರು ಗೌಡರು. ರೇವಣ್ಣ ಪತ್ನಿ ಭವಾನಿಯವರನ್ನು ಪಕ್ಷ ಬೇಲೂರಿನಿಂದ ಕಣಕ್ಕೆ ಇಳಿಸುತ್ತದೆ ಎಂದು ಹಬ್ಬಿದ್ದ ಸುದ್ದಿಯ ಬಗ್ಗೆ ಗೌಡರಿಂದ ಸ್ಪಷ್ಟನೆ ಕೇಳಿದಾಗ ಅವರು ಹೇಳಿದ ಮಾತಿದು.

ಎಲ್ಲರಿಗೂ ಗೊತ್ತಿರುವಂತೆ ಕರುಣಾನಿಧಿಯವರು ತಮ್ಮ ಕುಟುಂಬದಲ್ಲಿ ಎದುರಿಸಿದ ಪರಿಸ್ಥಿತಿ – ಅಳಗಿರಿ ಮತ್ತು ಸ್ಟಾಲಿನ್ ನಡುವೆ ಪಟ್ಟಕ್ಕಾಗಿ ನಡೆದ ಸಮರ. ಭವಾನಿ ರೇವಣ್ಣರನ್ನು ಚುನಾವಣೆಗೆ ನಿಲ್ಲಿಸುತ್ತೀರಾ ಎನ್ನುವ ಪ್ರಶ್ನೆಗೂ ಕರುಣಾನಿಧಿ ಕುಟುಂಬದ ಹೋಲಿಕೆಗೂ ಎಲ್ಲಿಂದೆಲ್ಲಿಯ ಸಂಬಂಧ?

ಸಂಬಂಧ ಇದೆ. ಅವರ ಮಾತಿನ ಹಿನ್ನೆಲೆಯಲ್ಲಿಯೇ ಗ್ರಹಿಸಬಹುದಾದ ಬಹು ಮುಖ್ಯ ಸಂಗತಿ ಎಂದರೆ ಕುಮಾರಸ್ವಾಮಿ ಮತ್ತು ರೇವಣ್ಣ ಕುಟುಂಬಗಳ ನಡುವೆ ಹೊಗೆಯಾಡುತ್ತಿರುವ ಅಸಮಾಧಾನ. ಕುಮಾರಸ್ವಾಮಿ ಮೊದಲ ಬಾರಿ ಎಂ.ಎಲ್.ಎ. ಆದಾಗಲೇ ಮುಖ್ಯಮಂತ್ರಿಯಾದರು. ಪಕ್ಷದ ರಾಜ್ಯಾಧ್ಯಕ್ಷ. ಅಷ್ಟೇ ಅಲ್ಲ ಜನರಿಂದ ದೂರವೇ ಉಳಿದಿದ್ದ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕಿ. ಆದರೆ ಬಹಳ ವರ್ಷಗಳಿಂದಲೂ ಜನಸಂಪರ್ಕ ಸಾಧಿಸಿಕೊಂಡು, ಚುನಾವಣೆ ನಿರ್ವಹಿಸಿದ ಅನುಭವ ಹೊಂದಿರುವ ಭವಾನಿಯವರಿಗೆ ಸ್ಪರ್ಧಿಸುವ ಅವಕಾಶವೇ ಸಿಗಲಿಲ್ಲ. ಪ್ರತಿ ಚುನಾವಣೆ ಸಂದರ್ಭದಲ್ಲೂ ಕೆ.ಆರ್. ನಗರ, ಕೆ.ಆರ್. ಪೇಟೆ, ಹಾಸನ, ಬೇಲೂರು…ಹೀಗೆ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಸುದ್ದಿ ಹಬ್ಬುತ್ತದೆ ಮತ್ತು ಹಾಗೇ ತಣ್ಣಗಾಗುತ್ತದೆ.

ಭವಾನಿ ರೇವಣ್ಣ ಮತ್ತು ಅನಿತಾ ಕುಮಾರಸ್ವಾಮಿ ನಡುವೆ ಸಾಮರಸ್ಯದ ಕೊರತೆ ಇದೆ ಎಂಬುದಂತೂ ಅನೇಕರಿಗೆ ಸ್ಪಷ್ಟವಾಗಿ ಗೊತ್ತು. ಅನಿತಾ ಅವರ ಒಡೆತನದಲ್ಲಿರುವ ಕಸ್ತೂರಿ ನ್ಯೂಸ್ ಚಾನೆಲ್‌ನಲ್ಲಿ ರೇವಣ್ಣನವರ ಸುದ್ದಿಗಳು ಅಷ್ಟಾಗಿ ಕಾಣುವುದಿಲ್ಲವಲ್ಲ ಏಕೆ‍ ಎಂದು ಯಾರಲ್ಲಾದರೂ ಪ್ರಶ್ನೆ ಮೂಡಿದ್ದರೆ, ಅದಕ್ಕೆ ಕಾರಣಗಳಿವೆ, ಸ್ಪಷ್ಟ ನಿರ್ದೇಶನಗಳಿವೆ.

ಇತ್ತೀಚೆಗೆ, ಬಹುಷಃ ಮೊದಲ ಬಾರಿಗೆ, ಭವಾನಿ ರೇವಣ್ಣ ಹಾಸನ ಮೂಲದ ‘ಜನತಾ ಮಾಧ್ಯಮ’ ಪತ್ರಿಕೆಗೆ ಸಂದರ್ಶನ ನೀಡಿ, “ನನಗೆ ಬೇಲೂರು ಮತ್ತು ಹಾಸನ ಕ್ಷೇತ್ರಗಳಿಂದ ವಿಧಾನಸಭೆಗೆ ಸ್ಪರ್ಧಿಸುವಂತೆ ಜನರಿಂದ ಒತ್ತಡ ಬರುತ್ತಿದೆ” ಎಂದಿದ್ದರು. “ನಾವೇ ರಾಜಕಾರಣಕ್ಕೆ ಕರೆತಂದು ಗೆಲ್ಲಿಸಿರುವ ಕಾರಣ ಸಾ.ರ. ಮಹೇಶ್‌ರಿಗೆ ತೊಂದರೆ ಮಾಡಬಾರದು‍ ಎಂಬ ಉದ್ದೇಶದಿಂದ ಕೆ.ಆರ್. ನಗರವನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ” ಎಂದು ಸ್ಪಷ್ಟಪಡಿಸಿದ್ದರು. ಈ ಬೆಳವಣಿಗೆಗಳ ನಂತರ ಭವಾನಿ ಪುತ್ರ ಪ್ರಜ್ವಲ್ ಬೇಲೂರಿಗೆ ಭೇಟಿ ನೀಡಿ, ಅವರ ತಾಯಿ ಬೇಲೂರಿನಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿ ಎಂಬ ಸುದ್ದಿಗೆ ಮತ್ತಷ್ಟು ಇಂಬು ಕೊಟ್ಟಿದ್ದರು. ಆದರೆ ದೇವೇಗೌಡರು ಭವಾನಿಯವರ ಸ್ಪರ್ಧೆ ಬಗ್ಗೆ ಉತ್ಸುಕರಾಗಿಲ್ಲ.

ಭವಾನಿಯವರು ಸ್ಪರ್ಧಿಸಲು ಆಸಕ್ತಿ ತೋರಿಸುವುದರ ಹಿನ್ನೆಲೆಯಲ್ಲಿ ದೇವೇಗೌಡರಿಗೆ ಕರುಣಾನಿಧಿ ಕುಟುಂಬ ನೆನಪಾಗುತ್ತದೆ. ಅರ್ಥಾತ್ ಭವಾನಿ ಟಿಕೆಟ್ ಕೇಳುತ್ತಾರೆಂದರೆ ದೇವೇಗೌಡರು ಇಬ್ಬರು ಪುತ್ರರ ಕುಟುಂಬಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ ಎಂದೇ ಗ್ರಹಿಸುತ್ತಾರೆ. ಆ ಕಾರಣಕ್ಕಾಗಿಯೇ ಅವರು ಭವಾನಿ ಸ್ಪರ್ಧಿಸುವ ಸಾಧ್ಯತೆಯನ್ನು ನಿರಾಕರಿಸುತ್ತಾರೆ.

ವಿಚಿತ್ರ ನೋಡಿ, ಒಂದು ಪಕ್ಷದ ಸ್ಥಿತಿಗತಿ ಬಗ್ಗೆ ಚರ್ಚಿಸಲು ಹೊರಟರೆ ಚರ್ಚೆಯ ಹಾದಿ ಮತ್ತೆ ಮತ್ತೆ ಅದೇ ಕುಟುಂಬದ ಸುತ್ತ ಲಾಗ ಹೊಡೆಯುತ್ತೆ. ಇದು ಒಂದು ಪಕ್ಷದ ಸೋಲೂ ಹೌದು. ಇದಕ್ಕೆ ಪಕ್ಷದ ಒಟ್ಟು ಚೌಕಟ್ಟು ಕುಟುಂಬಕ್ಕೆ ಸೀಮಿತವಾಗಿರುವುದೇ ಕಾರಣ. ಒಬ್ಬ ಎಂ.ಸಿ. ನಾಣಯ್ಯ, ಪಿಜಿಆರ್ ಸಿಂಧ್ಯಾ, ಬಸವರಾಜ ಹೊರಟ್ಟಿ.. ಇವರಾರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚೆಗೆ ಬರುವುದೇ ಇಲ್ಲ. ಯಾಕೆ ಗೊತ್ತೆ? ಇವರ್ಯಾರೂ ಕುಮಾರಸ್ವಾಮಿ ಜೊತೆ ಅವರ ಗೆಸ್ಟ್ ಹೌಸ್‌ನಲ್ಲಿ ಜರುಗುವ ಸಭೆಗಳಿಗೆ ಹಾಜರಾಗುವುದಿಲ್ಲ. ಅತ್ತ ರೇವಣ್ಣರ ಜೊತೆ ಮಹಿಳಾ ಸಂಘದವರ ಉತ್ಪನ್ನಗಳ ಪ್ರದರ್ಶನ ಉದ್ಘಾಟನೆಯಲ್ಲೂ ಪಾಲ್ಗೊಳ್ಳುವುದಿಲ್ಲ.

ಉದಾತ್ತ ಸಿದ್ಧಾಂತಗಳ ಹಿನ್ನೆಲೆಯಲ್ಲಿ ರೂಪ ಪಡೆದುಕೊಂಡ ಪಕ್ಷವೊಂದು ಹೀಗೆ ಒಂದು ಕುಟುಂಬಕ್ಕೆ ಸೀಮಿತವಾಗಿರುವುದು ದುರಂತ. “ಕರಾವಳಿಯಲ್ಲಿ, ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಇನ್ನಿಲ್ಲದ ಬೆಂಬಲ ವ್ಯಕ್ತವಾಗುತ್ತಿದೆ. ನಾವು 100 ಪರ್ಸೆಂಟ್ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದೇ ಬರುತ್ತೇವೆ..” ಎಂದು ಕುಮಾರಸ್ವಾಮಿ ಟಿವಿ ಸ್ಟುಡಿಯೋದಲ್ಲಿ ಕುಳಿತು ಹೇಳುತ್ತಿದ್ದರೆ, ತಕ್ಷಣ ರಿಮೋಟ್‌ಗೆ ತಡಕಾಡುತ್ತೇವೆ. ಪಕ್ಷದ ಒಳಗಿನವರೂ ಆಪ್ತ ಸಮಾಲೋಚನೆ ಸಂದರ್ಭಗಳಲ್ಲಿ ಸ್ಪಷ್ಟವಾಗಿ ಹೇಳುವ ಮಾತು, “ನಮಗೇನಿಲ್ಲಪ್ಪ, ಯಾರೇ ಹೆಚ್ಚು ಸೀಟು ಗೆಲ್ಲಲಿ, ಆದರೆ ಅಧಿಕಾರಕ್ಕೆ ಬರಲು ನಮ್ಮ ಸಹಕಾರ ಅವರಿಗೆ ಅನಿವಾರ್ಯ ಆಗುವಷ್ಟು ಸೀಟುಗಳು ನಮಗೆ ಬಂದ್ರೆ ಸಾಕು. ಅಷ್ಟಕ್ಕಾಗಿ ಹೊಡೆದಾಡಬೇಕು..”

ಇದೇ ಪಕ್ಷದಲ್ಲಿ ಹಲವು ವರ್ಷಗಳಿಂದ ಇದ್ದು ಎರಡು-ಮೂರು ಬಾರಿ ಶಾಸಕರಾದವರು ಈಗ ಗಂಭೀರವಾಗಿ ಯೋಚಿಸುತ್ತಿದ್ದಾರೆ. ಈ ಬಾರಿ ಅವರ ಪಕ್ಷ ಅಧಿಕಾರಕ್ಕೆ ಯಾವ ರೀತಿಯಲ್ಲೂ ಬರೋಕೆ ಸಾಧ್ಯ ಆಗದೇ ಹೋದರೆ, ಭವಿಷ್ಯವೇನು ಎಂಬುದು ಅವರ ಚಿಂತೆ. ಗೆಲ್ಲುವ ಕುದುರೆ ಯಾವುದೋ ಅದರ ಬಾಲಕ್ಕೆ ಜೋತು ಬಿದ್ದರೆ, ಕನಿಷ್ಠ ಪಕ್ಷ ಮಂಡಳಿ, ಕಾರ್ಪೋರೇಶನ್ ಆದರೂ ಸಿಗುತ್ತೆ ಎಂದು ಯೋಚಿಸಿದರೆ ಅದು ಸಹಜ.

5 thoughts on “ಜೆಡಿ(ಎಸ್): ಪ್ರಜಾಪ್ರಭುತ್ವ ಮೌಲ್ಯಗಳಿಗಾಗಿ ಹುಟ್ಟಿಕೊಂಡ ಪಕ್ಷದ ದುಸ್ಥಿತಿ ಇದು.

  1. Anand

    ಸದ್ಯಕ್ಕೆ ರಾಜ್ಯದಲ್ಲಿರುವ ಐದು ಪಕ್ಷಗಳಲ್ಲಿ ರಾಜ್ಯವನ್ನು ಉದ್ಧಾರ ಮಾಡುವಂತಹ ಗುಣ/ಶಕ್ತಿಗಳು ಒಂದರಲ್ಲೂ ಕಾಣುತ್ತಿಲ್ಲ. ಆಪೂರ್ವವಾಗಿ ದೊರೆಯುತ್ತಿರುವ ಇಂತಹ ಅವಕಾಶವನ್ನು ಜೆಡಿಎಸ್ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

    Reply
  2. sriram

    ಬಿ ಜೆ ಪಿ ಯವರು ಎಲ್ಲಾದರು ಹಾಳಗಿ ಹೋಗಲಿ ಎಂದು ಕುಮಾರಸ್ವಾಮಿ ಕಳೆದೆ ೪.೫ ವರ್ಷಗಳಿಂದ ಜನಪರ ಹೋರಾಟಗಳನ್ನು ತೊಡಗಿಸ್ಕೊಂಡು ಬಂದಿದ್ದರೆ ಮುಂದಿನ ಚುನಾವಣೆಯಲ್ಲಿ ಜೆ ಡಿ ಎಸ್ ಅಧಿಕಾರದತ್ತ ಅಥವಾ ಕನಿಷ್ಠ ರಾಜ್ಯ ಸರ್ಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸುತಿತ್ತು

    Reply

Leave a Reply

Your email address will not be published. Required fields are marked *