Daily Archives: December 12, 2012

ಆಮ್ ಆದ್ಮಿ ಪಕ್ಷ – ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಾಕಿರಣ

– ಆನಂದ ಪ್ರಸಾದ್

ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಪ್ರಮುಖ ಪಾತ್ರವಹಿಸಿದ್ದ ಅರವಿಂದ್ ಕೇಜರಿವಾಲ್  ನೇತೃತ್ವದ ತಂಡ ನವೆಂಬರ್ 26ರಂದು ಆಮ್ ಆದ್ಮಿ ಹೆಸರಿನ ರಾಜಕೀಯ ಪಕ್ಷವನ್ನು ಹುಟ್ಟುಹಾಕಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ. ಈ ಪಕ್ಷವು ಈವರೆಗಿನ ಭಾರತದ ರಾಜಕೀಯ ಪಕ್ಷಗಳಲ್ಲಿ ಕಂಡುಬರದ ಕೆಲವು ಮಹತ್ವದ ಪ್ರಜಾಸತ್ತಾತ್ಮಕ ಅಂಶಗಳನ್ನು ಒಳಗೊಂಡಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುವಲ್ಲಿ ಮಹತ್ತರ ಪಾತ್ರವಹಿಸುವ ಲಕ್ಷಣಗಳನ್ನು ಹೊಂದಿರುವಂತೆ ಕಾಣುತ್ತದೆ. ಆಮ್ ಆದ್ಮಿ ಪಕ್ಷದಲ್ಲಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳ ಆಯ್ಕೆಗೆ ಸೂಕ್ತವೆನಿಸುವ ಅಭ್ಯರ್ಥಿಗಳ ಹೆಸರನ್ನ ಜನರೇ ಸೂಚಿಸಬಹುದು. ಪಕ್ಷದ ವತಿಯಿಂದ ನಿಲ್ಲಬಯಸುವ ಎಲ್ಲ ಅಭ್ಯರ್ಥಿಗಳು ಉಮೇದುವಾರಿಕೆ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಈ ಅರ್ಜಿಯಲ್ಲಿ ಅಭ್ಯರ್ಥಿಯ ಹಾಗೂ ಕುಟುಂಬದ ಸಂಪೂರ್ಣ ಆದಾಯ ಮೂಲ ಹಾಗೂ ಸಂಪತ್ತಿನ ವಿವರ, ಅಭ್ಯರ್ಥಿ ಯಾವುದಾದರೂ ಕ್ರಿಮಿನಲ್ ಕೇಸನ್ನು ಹಿಂದೆ ಅಥವಾ ಪ್ರಸಕ್ತ ಎದುರಿಸುತ್ತಿದ್ದಾನೆಯೋ ಎಂಬ ಬಗ್ಗೆ ಹಾಗೂ ಅಭ್ಯರ್ಥಿಯ ಪ್ರಸಕ್ತ ಹಾಗೂ ಹಿಂದಿನ ಸಮಾಜಸೇವಾ ಕಾರ್ಯಗಳ ವಿವರವನ್ನು ಕಡ್ಡಾಯವಾಗಿ ನೀಡಬೇಕಾಗಿರುತ್ತದೆ. ಬಂದ ಎಲ್ಲಾ ಅರ್ಜಿಗಳನ್ನು  ವಿಧಾನಸಭೆ ಚುನಾವಣೆಗಾದರೆ ರಾಜ್ಯ ಕಾರ್ಯಕಾರಿ ಸಮಿತಿಗೆ ಹಾಗೂ ಲೋಕಸಭಾ ಚುನಾವಣೆಗಾದರೆ ಕೇಂದ್ರ ಕಾರ್ಯಕಾರಿ ಸಮಿತಿಗೆ ಪರಿಶೀಲನೆಗೆ ಕೊಡಲಾಗುತ್ತದೆ.  ಸಮಿತಿಗಳು ಇದನ್ನು ವಿವರವಾಗಿ ಪರಿಶೀಲಿಸಿ ವಿವರಗಳ ಸತ್ಯಾಸತ್ಯತೆಯನ್ನು ತಿಳಿಯುವ ಕಾರ್ಯ ಮಾಡುತ್ತದೆ. ಪರಿಶೀಲನೆಯ ವೇಳೆ ಪ್ರಧಾನವಾಗಿ ಅಭ್ಯರ್ಥಿಯು ಸಲ್ಲಿಸಿದ ವಿವರಗಳು ಹಾಗೂ ಅಭ್ಯರ್ಥಿಯ ಬಗ್ಗೆ ಜನತೆಯ ಅಭಿಪ್ರಾಯ ಏನು ಎಂಬ ಬಗ್ಗೆ ಪರಿಶೀಲಿಸಲಾಗುವುದು. ಅಭ್ಯರ್ಥಿಯ ಹಾಗೂ ಆತನ ಕುಟುಂಬದ ಆದಾಯ ಮೂಲದ ಬಗ್ಗೆ ಜನರ ಅಭಿಪ್ರಾಯ ತಿಳಿಯಲಾಗುವುದು ಹಾಗೂ ಅಭ್ಯರ್ಥಿಯ ಮೇಲೆ ಯಾವುದಾದರೂ ಭ್ರಷ್ಟಾಚಾರದ ಅಪಾದನೆಗಳು ಇವೆಯೋ ಎಂಬ ಬಗ್ಗೆ ಜನರಿಂದ ಮಾಹಿತಿ ಪಡೆದುಕೊಳ್ಳಲಾಗುವುದು. ಅಭ್ಯರ್ಥಿಯು ಹಿಂದೆ ಯಾವುದಾದರೂ ಮೂಲಭೂತವಾದಿ ಚಟುವಟಿಕೆಗಳಲ್ಲಿ ತೊಡಗಿದ್ದನೇ ಹಾಗೂ ಮೂಲಭೂತವಾದಿ ಸಿದ್ಧಾಂತಗಳ ಬೆಂಬಲಿಗನೇ ಎಂಬ ಬಗ್ಗೆ ಪರಿಶೀಲಿಸಲಾಗುವುದು. ಅದೇ ರೀತಿ ಅಭ್ಯರ್ಥಿ ಎಲ್ಲ ಮತ, ಧರ್ಮ, ಜಾತಿಗಳನ್ನು, ಪಂಗಡಗಳನ್ನು ಗೌರವಿಸುವ ಗುಣ ಹೊಂದಿರುವನೇ ಎಂಬ ಬಗ್ಗೆಯೂ ಪರಿಶೀಲಿಸಿ ಸಮರ್ಪಕ ಗುಣ ಹೊಂದಿರದ ಅಭ್ಯರ್ಥಿಗಳನ್ನು ತಿರಸ್ಕರಿಸಿ ಉಳಿದ ಅಭ್ಯರ್ಥಿಗಳ ಪಟ್ಟಿ ಹಾಗೂ ಅವರ ವಿವರಗಳನ್ನು ಪಾರ್ಟಿ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುವುದು. ಹೀಗೆ ಪ್ರಕಟಿಸಿದ  ಅಭ್ಯರ್ಥಿಯ ಬಗ್ಗೆ ಜನತೆಯು ಪರಿಶೀಲಿಸಿ ಏನಾದರೂ ದೂರುಗಳಿದ್ದಲ್ಲಿ ಪಾರ್ಟಿ ವೆಬ್‍ಸೈಟಿನಲ್ಲಿ ಅಥವಾ ಪಾರ್ಟಿಯ ಸ್ಥಳೀಯ ಕಚೇರಿಯಲ್ಲಿ ಆಧಾರ ಸಹಿತ ದಾಖಲಿಸಬಹುದು. ಈ ರೀತಿ ಜನತೆಯಿಂದ ಅಭ್ಯರ್ಥಿಗಳ ವಿರುದ್ಧ ಬಂದ ದೂರುಗಳನ್ನು ಆಯ್ಕೆ ಸಮಿತಿಯ ಮುಂದೆ ಇಟ್ಟು ಅವರು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ದೂರುಗಳು ಸರಿಯೆಂದು ಕಂಡುಬಂದರೆ ಸಂಬಂಧಿತ ಅಭ್ಯರ್ಥಿಯನ್ನು ತಿರಸ್ಕರಿಸಿ ಉಳಿದ ಅಭ್ಯರ್ಥಿಗಳ ಎರಡನೆಯ ಪಟ್ಟಿಯನ್ನು ತಯಾರಿಸಲಾಗುವುದು. ನಂತರ ಸಂಬಂಧಿತ ಅಭ್ಯರ್ಥಿಗಳನ್ನು ಒಂದು ದಿನದ ಸಮಾವೇಶಕ್ಕೆ ಕರೆದು ಅಲ್ಲಿ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಚುನಾವಣೆಯ ಮೂಲಕ ಒಂದು ಚುನಾವಣಾ ಕ್ಷೇತ್ರಕ್ಕೆ ಪಕ್ಷದ ಸ್ಪರ್ಧಿಯನ್ನು ಅಂತಿಮವಾಗಿ ಆರಿಸಲಾಗುವುದು. ಈ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿದ್ದು ಬೇಡದ, ಕೆಟ್ಟ ದಾಖಲೆಗಳಿರುವ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲದಂತೆ ತಡೆಯುವ ಒಂದು ಅವಕಾಶವನ್ನು ಜನರಿಗೆ ನೀಡುವುದು. ಇಂಥ ಆಯ್ಕೆ ಪ್ರಕ್ರಿಯೆ ಸದ್ಯಕ್ಕೆ ಯಾವುದೇ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷಗಳಲ್ಲಿ ಇಲ್ಲ. ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳನ್ನು ಆರಂಭದ ಹಂತದಲ್ಲಿಯೇ ಸೋಸುವ ಈ ಪ್ರಕ್ರಿಯೆಯಿಂದ ಅನಪೇಕ್ಷಿತ, ಭ್ರಷ್ಟ, ಕ್ರಿಮಿನಲ್ ಹಿನ್ನೆಲೆಯ, ಜಾತಿವಾದಿ, ಕೋಮುವಾದಿ, ಮೂಲಭೂತವಾದಿ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸದಂತೆ ದೂರ ಇಡುವುದು. ಇದರಿಂದ ಶಾಸನ ಸಭೆಗಳಿಗೆ ಯೋಗ್ಯ ವ್ಯಕ್ತಿಗಳು ಹೋಗುವ ಸಾಧ್ಯತೆ ಹೆಚ್ಚಾಗುತ್ತದೆ.

ಜನಲೋಕಪಾಲ್ ಮಸೂದೆಯನ್ನು ಜಾರಿಗೊಳಿಸುವುದು ಪಕ್ಷದ ಪ್ರಧಾನ ಗುರಿಯಾಗಿದೆ. ಪಕ್ಷದಲ್ಲಿ ವಂಶಪಾರಂಪರ್ಯವನ್ನು ತಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ಯಾವುದೇ ಹೈಕಮಾಂಡ್ ಎಂಬ ವ್ಯವಸ್ಥೆ ಇಲ್ಲ. ಒಂದೇ ಕುಟುಂಬದ ಎರಡು ವ್ಯಕ್ತಿಗಳು ಚುನಾವಣೆಗೆ ನಿಲ್ಲದಂತೆ ನಿಯಮ ರೂಪಿಸಿರುವುದು ಇಂಥ ಉತ್ತಮ ಅಂಶವಾಗಿದೆ. ಆಮ್ ಆದ್ಮಿ ಪಕ್ಷವು ಕೆಂಪು ದೀಪದ ಗೂಟದ ಕಾರು, ಚುನಾಯಿತ ಪ್ರತಿನಿಧಿಗಳಿಗೆ ಭದ್ರತಾ ವ್ಯವಸ್ಥೆ, ವೈಭವೋಪೇತ ಬಂಗಲೆಗಳಲ್ಲಿ ವಾಸ ಮೊದಲಾದ ಆಡಂಬರ, ಐಶಾರಾಮಗಳನ್ನು ನಿರಾಕರಿಸುತ್ತೇನೆ ಎಂದು ತನ್ನ ಅಭ್ಯರ್ಥಿಗಳಿಂದ ಚುನಾವಣೆಗೆ ಸ್ಪರ್ಧಿಸುವ ಹಂತದಲ್ಲೇ ಲಿಖಿತ ಒಪ್ಪಿಗೆ ಪಡೆದುಕೊಳ್ಳುವ ವ್ಯವಸ್ಥೆ ಹೊಂದಿರುವ ಕಾರಣ ಜನಪ್ರತಿನಿಧಿಗಳ ಭೋಗ ಜೀವನಕ್ಕೆ ಕಡಿವಾಣ ಹಾಕುವ ಉತ್ತಮ ವ್ಯವಸ್ಥೆ ಹೊಂದಿದೆ. ಪಕ್ಷವು ಮತದಾನದ ವೇಳೆ ಚುನಾವಣೆಗೆ ನಿಂತವರಲ್ಲಿ ಯೋಗ್ಯ ಅಭ್ಯರ್ಥಿ ಇಲ್ಲದೆ ಇದ್ದರೆ ಯಾರಿಗೂ ಮತ ನೀಡದಿರುವ ಹಾಗೂ ಯೋಗ್ಯ ಅಭ್ಯರ್ಥಿ ಇಲ್ಲ ಎಂಬ ಆಯ್ಕೆಯನ್ನು ಮತದಾರರಿಗೆ ನೀಡಲು ಯೋಜಿಸಿದೆ. ಈ ರೀತಿ ಒಂದು ಕ್ಷೇತ್ರದಲ್ಲಿ 50% ಹೆಚ್ಚಿನ ‘ಯಾರಿಗೂ ಇಲ್ಲ’ ಮತಗಳು ಚಲಾವಣೆ ಆದರೆ ಆ ಕ್ಷೇತ್ರದಲ್ಲಿ ಪ್ರಸಕ್ತ ನಿಂತ ಎಲ್ಲ ರಾಜಕೀಯ ಪಕ್ಷಗಳಿಗೆ ಹಾಗೂ ಅಭ್ಯರ್ಥಿಗಳಿಗೆ ಪುನಃ ನಡೆಯುವ ಚುನಾವಣೆಗೆ ಸ್ಪರ್ಧಿಸಲಾಗದಂತೆ ಚುನಾವಣಾ ತಿದ್ದುಪಡಿ ತರಲು ಆಸಕ್ತಿ ಹೊಂದಿದೆ. ಇದರಿಂದ ಯೋಗ್ಯ ಅಭ್ಯರ್ಥಿಗಳು ಚುನಾವಣೆಗಳಲ್ಲಿ ಆರಿಸಿ ಸಂಸತ್ತಿಗೆ ಹಾಗೂ ವಿಧಾನಸಭೆಗಳಿಗೆ ಹೋಗಲು ಸಾಧ್ಯವಾಗಲಿದೆ. ಅದೇ ರೀತಿ ಚುನಾಯಿತ ಪ್ರತಿನಿಧಿಗಳು ಜನತೆಗೆ ಸ್ಪಂದಿಸದೇ ಇದ್ದರೆ ಅಂಥವರನ್ನು ವಾಪಾಸ್ ಕರೆಸಿಕೊಂಡು ಪುನಃ ಚುನಾವಣೆ ನಡೆಸಿ ಯೋಗ್ಯರನ್ನು ಆರಿಸುವ ಅವಕಾಶವನ್ನು ಜನರಿಗೆ ನೀಡಲು ಅವಕಾಶವಾಗುವ ವ್ಯವಸ್ಥೆ ಜಾರಿಗೆ ತರಲು ತನ್ನ ಪಕ್ಷದಲ್ಲಿ ಒಲವು ತೋರಿಸಿದೆ. ಇಂಥ ವ್ಯವಸ್ಥೆ ಮಾಡಿದರೆ ಜನ ಕೆಲಸ ಮಾಡದ ಹಾಗೂ ಜನತೆಗೆ ಸ್ಪಂದಿಸದ ಪ್ರತಿನಿಧಿಗಳನ್ನು 5 ವರ್ಷ ಸಹಿಸಿಕೊಂಡು ಇರಬೇಕಾಗಿಲ್ಲ.  ಅದೇ ರೀತಿ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳಲ್ಲಿ ಸುಧಾರಣೆ ತರುವ ಉದ್ಧೇಶ ಹೊಂದಿದೆ. ಜನರಿಗೆ ಅನುಕೂಲಕರವಲ್ಲದ, ಜನರಿಗೆ ಕಿರುಕುಳ ಕೊಡುವ ಕಾನೂನುಗಳನ್ನು ತೆಗೆದು ಹಾಕುವ ಹಾಗೂ ಜನರಿಗೆ ಅವಶ್ಯಕವಾದ ಕಾನೂನುಗಳನ್ನು ರೂಪಿಸುವ ವ್ಯವಸ್ಥೆ ಮಾಡಲಿದೆ. ಪಕ್ಷದ ಒಳಗೆ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಆಂತರಿಕ ಲೋಕಪಾಲ್ ವ್ಯವಸ್ಥೆ ಹೊಂದಿರುವುದರಿಂದ ಇದು ಪಕ್ಷವು ನೈತಿಕ ಅಧಃಪತನ ಹೊಂದದಂತೆ ರಕ್ಷಣೆ ನೀಡಲಿದೆ. ಇಂಥ ಒಂದು ವ್ಯವಸ್ಥೆಯೂ ಪ್ರಜಾಪ್ರಭುತ್ವವನ್ನು ಬಲಪಡಿಸುವುದರಲ್ಲಿ ಸಂದೇಹವಿಲ್ಲ.ಪಕ್ಷದ ಬಗ್ಗೆ ಜನರು ಸೂಕ್ತ ಸಲಹೆ ಸೂಚನೆಗಳನ್ನು ಕೊಡಲು, ಪ್ರಶ್ನೆಗಳಿದ್ದರೆ ಕೇಳಲು, ಯಾವುದಾದರೂ ದಾಖಲೆಗಳಿದ್ದರೆ ಅದನ್ನು ಪಕ್ಷದ ಗಮನಕ್ಕೆ ತರಲು ಪಕ್ಷದ ವೆಬ್ ಸೈಟಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ದೇಶಾದ್ಯಂತ ಹಾಗೋ ವಿಶ್ವದ ಯಾವುದೇ ಭಾಗದಿಂದಲಾದರೂ ಜನರು ಪಕ್ಷ ತೆಗೆದುಕೊಳ್ಳಬೇಕಾದ ನಿಲುವುಗಳ ಬಗ್ಗೆ ಗಮನ ಸೆಳೆಯಬಹುದು. ಆಮ್ ಆದ್ಮಿ ಪಕ್ಷವು ಈ ರೀತಿ ಬೇರೆ ಪಕ್ಷಗಳಲ್ಲಿ ಇಲ್ಲದ ಮಹತ್ವದ ಅಂಶಗಳನ್ನು ಹೊಂದಿರುವುದು ಮತ್ತು ಕಾಲ ಕಾಲಕ್ಕೆ ಅವಶ್ಯಕವಾದ ಸುಧಾರಣೆಗಳನ್ನು ಪಕ್ಷದಲ್ಲಿ ತರಲು ಒಲವು ಹೊಂದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಅಂಶವಾಗಿದೆ. ಆಮ್ ಆದ್ಮಿ ಪಕ್ಷವು ಚುನಾವಣೆಗಳಲ್ಲಿ ಸ್ಪರ್ಧಿಸಲು ಹಾಗೂ ಪಕ್ಷದ ಚಟುವಟಿಕೆಗಳನ್ನು ನಡೆಸಲು ಬೇಕಾಗುವ ಹಣವನ್ನು ಪಾರದರ್ಶಕವಾಗಿ ಜನರಿಂದಲೇ ಸಂಗ್ರಹಿಸಲಿದೆ. ಸಂಗ್ರಹಿಸಿದ ಹಣ ಹಾಗೂ ಖರ್ಚುವೆಚ್ಚಗಳನ್ನು ಪಾರ್ಟಿ ವೆಬ್‌ಸೈಟಿನಲ್ಲಿ ಪ್ರಕಟಿಸುವ ಹಾಗೂ ಎಲ್ಲರೂ ನೋಡಲು ಅವಕಾಶ ಕಲ್ಪಿಸಿದೆ. ಪಕ್ಷಕ್ಕೆ ದೇಣಿಗೆ ಕೊಡುವವರ ಹಿನ್ನೆಲೆಯನ್ನು ಗಮನಿಸಿ ಮೋಸದ, ಭ್ರಷ್ಟಾಚಾರದ ಹಣವನ್ನು ಸ್ವೀಕರಿಸದೆ ಇರುವ ಮಹತ್ವದ ಅಂಶವನ್ನು ಪಕ್ಷ ಹೊಂದಿರುವುದು ಉತ್ತಮ ಆಲೋಚನೆಯಾಗಿದೆ.

ಅರವಿಂದ ಕೇಜರಿವಾಲ್ ಖರಗಪುರ ಐಐಟಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪಧವೀಧರ. ಆರಂಭದಲ್ಲಿ  ಜಮ್‍‌ಷೆಡ್ಪುರದ ಟಾಟಾ ಸ್ಟೀಲ್ ಕಂಪನಿಯಲ್ಲಿ ಕೆಲಸ ಮಾಡಿದ ಕೇಜರಿವಾಲ್ 1992 ರಲ್ಲಿ ಅದನ್ನು ತೊರೆದು ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಪಾಸು ಮಾಡಿ ಭಾರತೀಯ ರೆವೆನ್ಯೂ ಸೇವೆಯನ್ನು ಸೇರಿದರು. 2006ರಲ್ಲಿ ಆದಾಯ ತೆರಿಗೆ ಇಲಾಖೆಯ ಜಾಯಿಂಟ್ ಕಮಿಷನರ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದರು. ಮದರ್ ತೆರೇಸಾ ಮಿಷನರೀಸ್ ಆಫ್ ಚ್ಯಾರಿಟಿ, ರಾಮಕೃಷ್ಣ ಮಿಶನ್, ನೆಹರೂ ಯುವ ಕೇಂದ್ರ ಮೊದಲಾದವುಗಳ ಜೊತೆ ಸಮಾಜ ಸೇವೆಯಲ್ಲಿಯೂ ಕೆಲ ಕಾಲ ತೊಡಗಿಸಿಕೊಂಡಿದ್ದರು. 2006ರಲ್ಲಿ ಉದಯೋನ್ಮುಖ ನಾಯಕತ್ವಕ್ಕಾಗಿ ಪ್ರತಿಷ್ಠಿತ ರಮೋನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದರು. ಈ ಪ್ರಶಸ್ತಿಯ ಹಣವನ್ನು ಬಳಸಿ ಅವರು ಪಬ್ಲಿಕ್ ಕಾಸ್ ಫೌಂಡೇಶನ್ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಹುಟ್ಟುಹಾಕಿದರು. ಅರುಣಾ ರಾಯ್ ಜೊತೆ ಸೇರಿ ಮಾಹಿತಿ ಹಕ್ಕು ಕಾಯಿದೆಗಾಗಿ ಕೆಲಸ ಮಾಡಿದರು. ತದನಂತರ ಜನಲೋಕಪಾಲ್ ಕಾಯಿದೆ ಜಾರಿಗಾಗಿ ಚಳುವಳಿಯಲ್ಲಿ ಅಣ್ಣಾ ಹಜಾರೆ ಜೊತೆಗೂಡಿ ಹೋರಾಡಿದರು. ಪ್ರಸಕ್ತ ಸರ್ಕಾರಗಳು ಹಾಗೂ ಪ್ರಸಕ್ತ ರಾಜಕೀಯ ವ್ಯವಸ್ಥೆಯು ಚಳುವಳಿಗಳಿಗೆ ಮಣಿಯದಿರುವುದನ್ನು ಮನಗಂಡು ರಾಜಕೀಯ ಹೋರಾಟದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜನತೆಯ ಆಶೋತ್ತರಗಳ ಪರವಾಗಿ ಕೆಲಸ ಮಾಡುವ ವ್ಯವಸ್ಥೆಯಾಗಿ ಪರಿವರ್ತಿಸುವ ಕನಸಿನೊಂದಿಗೆ ರಾಜಕೀಯ ರಂಗಕ್ಕೆ ಇಳಿದಿದ್ದಾರೆ. ಇದನ್ನು ಅವಶ್ಯವಾಗಿ ಸ್ವಾತಂತ್ರ್ಯಾನಂತರ ರೂಪಿಸಬೇಕಾಗಿತ್ತು. ಆದರೆ ಸ್ವಾತಂತ್ರ್ಯಾನಂತರ ಪ್ರತಿಭಾವಂತರು ರಾಜಕೀಯ ರಂಗವನ್ನು ಪ್ರವೇಶಿಸದೇ ಇರುವ ಕಾರಣ ದೇಶದ ರಾಜಕೀಯ ರಂಗ ಕಲುಷಿತಗೊಂಡಿದೆ. ಪ್ರಸಕ್ತ ದೇಶದ ಬಹುತೇಕ ಪ್ರತಿಭಾವಂತರು ಉನ್ನತ ವಿದ್ಯಾಭ್ಯಾಸ ಪಡೆದು ವಿದೇಶಗಳಿಗೆ ತೆರಳಿ ಹಣ ಮಾಡುವ ಹಾಗೂ ಭೋಗಜೀವನದಲ್ಲಿ ಮುಳುಗುವ ಅಥವಾ ದೇಶದಲ್ಲಿ ಇದ್ದುಕೊಂಡೇ ಇನ್ನಷ್ಟು, ಮತ್ತಷ್ಟು ಹಣ ಮಾಡುವ ಹುಚ್ಚಿನಲ್ಲಿಯೇ ಮುಳುಗಿರುವ ಕಾರಣ ದೇಶದ ಬಗ್ಗೆ ಚಿಂತನೆ ನಡೆಸುವವರು ವಿರಳವಾಗಿರುವುದೇ ನಮ್ಮ ವ್ಯವಸ್ಥೆಯ ಅಧಃಪತನಕ್ಕೆ ಕಾರಣವಾಗಿದೆ. ಇಂಥ ಹಿನ್ನೆಲೆಯಲ್ಲಿ ಕೇಜರಿವಾಲ್ ಹಾಗೂ ಸಂಗಡಿಗರು ಹೊಸ ಚಿಂತನೆಯೊಂದಿಗೆ ರಾಜಕೀಯಕ್ಕೆ ಇಳಿದಿರುವುದು ಸ್ವಾಗತಾರ್ಹ. ಇಂಥ ಚಿಂತನೆ ಸ್ವಾತಂತ್ರ್ಯಾನಂತರ ಇದೀಗ ಪ್ರಥಮ ಬಾರಿಗೆ ದೇಶದಲ್ಲಿ ಕಂಡುಬರುತ್ತಾ ಇದೆ. 1975ರ ತುರ್ತು ಪರಿಸ್ಥಿತಿಯಲ್ಲಿ ಹುಟ್ಟಿಕೊಂಡ ಜೆಪಿಯವರ ಸಂಪೂರ್ಣ ಕ್ರಾಂತಿಯು ರಾಜಕೀಯದಲ್ಲಿ ಧರ್ಮವನ್ನು ಬೆರೆಸುವ ಮೂಲಕ ಸಂವಿಧಾನವನ್ನು ಬುಡಮೇಲು ಮಾಡುವ ಕೇಸರಿ ಶಕ್ತಿಗಳನ್ನು ಜೊತೆಗೆ ಸೇರಿಸಿಕೊಂಡ ಕಾರಣ ವಿಫಲವಾಯಿತು. ಧರ್ಮವನ್ನು ಹಾಗೂ ಮೂಲಭೂತವಾದವನ್ನು ರಾಜಕೀಯದ ಜೊತೆ ಬೆರೆಸುವ ಶಕ್ತಿಗಳು ದೇಶದ ರಾಜಕೀಯ ತೀವ್ರ ಹದಗೆಡಲು ಹಾಗೂ ಸಂವಿಧಾನಿಕ ಮೌಲ್ಯಗಳನ್ನು ಗಾಳಿಗೆ ತೂರಲು ಪ್ರಧಾನ ಕಾರಣವಾಗಿವೆ. ಇಂಥ ಮೂಲಭೂತವಾದಿ, ಪ್ರತಿಗಾಮಿ ಶಕ್ತಿಗಳು ಮೇಲುಗೈ ಪಡೆದರೆ ಪಾಕಿಸ್ತಾನದಲ್ಲಿ ಉಂಟಾದಂತೆ ಸರ್ವಾಧಿಕಾರ ಹಾಗೂ ಫ್ಯಾಸಿಸಂ ದೇಶದಲ್ಲಿ ವ್ಯಾಪಿಸಬಹುದು. ಈ ಹಿನ್ನೆಲೆಯಲ್ಲಿ ಎಲ್ಲ ಚಿಂತಕರೂ ಧರ್ಮ ಹಾಗೂ ಮೂಲಭೂತವಾದಗಳನ್ನು ರಾಜಕೀಯದಲ್ಲಿ ಬೆರೆಸುವುದನ್ನು ವಿರೋಧಿಸುತ್ತಾರೆ. ಕೇಜರಿವಾಲ್ ಹಾಗೂ ಸಂಗಡಿಗರು ಮೂಲಭೂತವಾದಿ ಸಿದ್ಧಾಂತಗಳನ್ನು ಹೊಂದಿರುವ ಶಕ್ತಿಗಳನ್ನು ದೂರ ಇಡಲು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಹಂತದಲ್ಲಿಯೇ ಸೂಕ್ತ ಜಾಲರಿಯನ್ನು ರೂಪಿಸಿರುವುದು ಅತೀ ಅಗತ್ಯವಾದ ಪ್ರಜಾಪ್ರಭುತ್ವದ ಬೆಳವಣಿಗೆಗೆ ಪೂರಕವಾದ ಅತ್ಯುತ್ತಮವಾದ ಉಪಾಯವಾಗಿದೆ.

ಕೇಜರಿವಾಲರು ಅಧಿಕಾರದ ಆಸೆಗಾಗಿ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿ ಲೋಕಪಾಲಕ್ಕಾಗಿ ನಡೆದ ಆಂದೋಲನವನ್ನು ಒಡೆದುಹಾಕಿದ್ದಾರೆ ಎಂದು ಅಣ್ಣಾ ಹಜಾರೆ ಆಪಾದಿಸುತ್ತಿರುವುದು ಸಮಂಜಸವೆಂದು ಕಂಡು ಬರುವುದಿಲ್ಲ. ಅಣ್ಣ ಹಜಾರೆ ಮತ್ತು ಅವರ ಕೆಲವು ಹಿಂಬಾಲಕರು ಧಾರ್ಮಿಕ ಮೂಲಭೂತವಾದಿ ಶಕ್ತಿಗಳ ಕಡೆಗೆ ಒಲವು ಹೊಂದಿರುವುದೇ ಚಳುವಳಿ ಒಡೆಯಲು ಪ್ರಧಾನ ಕಾರಣವಾಗಿ ಕಂಡುಬರುತ್ತದೆ. ದೇಶದಲ್ಲಿ ಮೋದಿ ನೇತೃತ್ವದಲ್ಲಿ ಮೂಲಭೂತವಾದಿ ಶಕ್ತಿಗಳನ್ನು ಅಧಿಕಾರಕ್ಕೆ ತರಬೇಕೆಂಬ ಹಂಬಲವನ್ನು ರಾಜಕೀಯವಾಗಿ ಮುಗ್ಢರಾದ ಅಣ್ಣಾ ಹಜಾರೆಯವರಲ್ಲಿ ಕೆಲವರು ತುಂಬಿರುವಂತೆ ಕಾಣುತ್ತದೆ. ಹೀಗಾಗಿ ಕೇಜರಿವಾಲ್ ಅಧಿಕಾರದ ಆಸೆಯಿಂದ ರಾಜಕೀಯಕ್ಕೆ ಧುಮುಕಿದ್ದಾರೆ ಎಂದು ಯಾರೋ ಅಣ್ಣಾ ಹಜಾರೆ ಮೂಲಕ ಹೇಳಿಸುತ್ತಿರುವಂತೆ ಕಂಡುಬರುತ್ತದೆ. ಕೇಜರಿವಾಲರ ಹಿನ್ನೆಲೆ, ಚಿಂತನೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂಬ ತುಡಿತ ನೋಡುವಾಗ ಅವರಲ್ಲಿ ಅಧಿಕಾರದ ಆಸೆ ಇದೆ ಎಂದು ಕಂಡು ಬರುವುದಿಲ್ಲ.

ಕಾಂಗ್ರೆಸ್ ವಿರುದ್ಧ ಕೇಜರಿವಾಲರು ಭ್ರಷ್ಟಾಚಾರದ ಅಪಾದನೆ ಮಾಡಿದಾಗ, ಗಡ್ಕರಿ ವಿರುದ್ಧ ಭ್ರಷ್ಟಾಚಾರದ ಆಪಾದನೆ  ಮಾಡಿದಾಗ ಕೇಜರಿವಾಲ್ ಜೊತೆಗಿದ್ದ ಮಾಧ್ಯಮಗಳು ಅವರು ಮೋದಿಯ ವಿರುದ್ಧ ಭ್ರಷ್ಟಾಚಾರದ ಆಪಾದನೆ ಮಾಡಿದಾಗ ಕೇಜರಿವಾಲರಿಂದ ದೂರ ನಿಂತವು. ಇದು ಮಾಧ್ಯಮಗಳು ಯಾವ ರೀತಿ  ಮೂಲಭೂತವಾದಿ ಉನ್ಮಾದವನ್ನು ಬೆಂಬಲಿಸುವ ಹುನ್ನಾರ ಹೊಂದಿವೆ ಎಂಬುದನ್ನು ತೋರಿಸುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಮೋದಿಯುಗದ ಧಾರ್ಮಿಕ ಉನ್ಮಾದವನ್ನು ದೇಶಾದ್ಯಂತ ಹಬ್ಬಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಫ್ಯಾಸಿಸ್ಟ್ ವ್ಯವಸ್ಥೆಯಾಗಿ ಮಾರ್ಪಡಿಸಲು ದೇಶದ ಇಲೆಕ್ಟ್ರಾನಿಕ್ ಮಾಧ್ಯಮಗಳು ಮುಂಚೂಣಿಯಲ್ಲಿ ನಿಂತಿರುವುದನ್ನು ಇದು ತೋರಿಸುತ್ತದೆ. ಮೋದಿ ಪ್ರಧಾನಿಯಾದರೆ ಸಿಬಿಐ ಸ್ವತಂತ್ರವಾಗುವ ಅಥವಾ ಸಶಕ್ತ ಲೋಕಪಾಲ್ ವ್ಯವಸ್ಥೆ ಬರುವ ಸಾಧ್ಯತೆ ಇಲ್ಲ.  ಸಿಬಿಐ ಸ್ವತಂತ್ರವಾಗಿ ಕಾರ್ಯನಿರ್ವಹಿಸಿದರೆ ಧರ್ಮದ ಹೆಸರಿನಲ್ಲಿ ಹಿಂಸಾಕಾಂಡ ಹುಟ್ಟುಹಾಕಿದ, ಹಾಕುತ್ತಿರುವ ಮೂಲಭೂತವಾದಿ ಶಕ್ತಿಗಳು ಜೈಲಿಗೆ ಹೋಗಬೇಕಾಗಿ ಬರುವುದರಲ್ಲಿ ಸಂದೇಹವಿಲ್ಲ. ಸಂವಿಧಾನ ಪ್ರಕಾರ ಸಿಬಿಐ ಕಾರ್ಯನಿರ್ವಹಿಸಿದರೆ ಧಾರ್ಮಿಕ ಉನ್ಮಾದ ಹಬ್ಬಿಸಿ ಇಂದು ಮಹಾನಾಯಕರೆಂದು ಮಾಧ್ಯಮಗಳಿಂದ ಕರೆಸಿಕೊಳ್ಳುವ ಹೆಚ್ಚಿನ ಕೇಸರಿ ನಾಯಕರು ಜೈಲಿಗೆ ಹೋಗಬೇಕಾಗಿ ಬರಬಹುದು. ಹೀಗಾಗಿ ಕೇಸರಿ ನೇತೃತ್ವದ ಶಕ್ತಿಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಿಬಿಐ ಸ್ವತಂತ್ರ ಸಂಸ್ಥೆಯಾದೀತು ಎಂದು ಯಾರಾದರೂ ಭಾವಿಸಿದರೆ ಅದು ಅಸಂಭವನೀಯ ಎಂದು ಮೇಲ್ನೋಟಕ್ಕೇ ಕಂಡುಬರುತ್ತದೆ.ದೇಶದಲ್ಲಿ ಇಂದು ಚಳುವಳಿಗಳ ಮೂಲಕ ಜನರಿಗೆ ಬೇಕಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತರುವಷ್ಟು ಆಡಳಿತ ನಡೆಸುವವರು ಸಂವೇದನಾಶೀಲರಾಗಿಲ್ಲ. ಹೀಗಾಗಿ ಕೇಜರಿವಾಲರು ಆರಿಸಿಕೊಂಡಿರುವ ಮಾರ್ಗ ಸರಿಯಾಗಿದೆ. ಜನರು ಎಚ್ಚೆತ್ತುಕೊಂಡರೆ ಈ ಮಾರ್ಗದಲ್ಲಿ ಬದಲಾವಣೆ ತರುವುದು ಸಾಧ್ಯ. ನಮ್ಮ ಜನರಲ್ಲಿಯೂ ಕೂಡ ಭ್ರಷ್ಟಾಚಾರವನ್ನು ಬೆಂಬಲಿಸುವವರ ಸಂಖ್ಯೆ ದೊಡ್ಡದಾಗಿಯೇ ಇದೆ. ನಕಲಿ ಪಡಿತರ ಚೀಟಿ, ನಕಲಿ ಅಡುಗೆ ಅನಿಲ ಖಾತೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಇರುವುದು ಇದನ್ನೇ ಸೂಚಿಸುತ್ತದೆ.  ನಕಲಿ ಪಡಿತರ ಚೀಟಿ, ನಕಲಿ ಅಡುಗೆ ಅನಿಲ ಖಾತೆ ಹೊಂದಲು ಯಾರೂ ಒತ್ತಾಯ ಮಾಡುವ ಪರಿಸ್ಥಿತಿ ಇಲ್ಲ ಅಥವಾ ಅಂಥ ಅನಿವಾರ್ಯತೆ ಇಲ್ಲದಿರುವಾಗಲೂ ಜನ ಇಂಥದನ್ನು ಮಾಡುತ್ತಾರೆ ಎಂದರೆ ನಮ್ಮ ಜನರಲ್ಲಿ ಭ್ರಷ್ಟ ವ್ಯವಸ್ಥೆಯನ್ನು ಇಷ್ಟಪಡುವವರು ದೊಡ್ಡ ಸಂಖ್ಯೆಯಲ್ಲಿಯೇ ಇದ್ದಾರೆ ಎಂದು ಹೇಳಬಹುದು. ಹೀಗಾಗಿ ಕೇಜರಿವಾಲರು ರಾಜಕೀಯವಾಗಿ ಯಶಸ್ವಿಯಾಗುವ ಸಂಭವನೀಯತೆ ನಿಕಟ ಭವಿಷ್ಯದಲ್ಲಿ ಇಲ್ಲದೆ ಹೋಗಬಹುದಾದರೂ ಇಂಥ ಒಂದು ಧ್ಯೇಯವನ್ನು ನಿರಂತರ ಮುಂದುವರಿಸಿಕೊಂಡು ಹೋದರೆ ನಿಧಾನವಾಗಿಯಾದರೂ ಯಶಸ್ವಿಯಾಗಲು ಸಾಧ್ಯ.  ಚಳುವಳಿಗಳಿಗೆ ತಮ್ಮ ಹೊಟ್ಟೆಪಾಡಿನ ಕೆಲಸ ಬಿಟ್ಟು ನಿರಂತರವಾಗಿ ಹೋಗಲು ಜನತೆಗೆ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಿಂದಲೂ ಕೇಜರಿವಾಲರು ರಾಜಕೀಯಕ್ಕೆ ಇಳಿದಿರುವುದು ಸಮರ್ಪಕವಾದ ಮಾರ್ಗವೇ ಆಗಿದೆ. ಈ ಮಾರ್ಗದಲ್ಲಿ ಬದಲಾವಣೆ ತರಬೇಕಾದರೆ ಜನರು ತಮ್ಮ ಹೊಟ್ಟೆಪಾಡಿನ ಕೆಲಸ ಬಿಟ್ಟು ನಿರಂತರ ಚಳುವಳಿ, ಧರಣಿ ಎಂದು ಅಲೆಯಬೇಕಾಗಿಲ್ಲ. ಅವರು ಮಾಡಬೇಕಾಗಿರುವುದು ಯೋಗ್ಯ ಪಕ್ಷಕ್ಕೆ ಹಾಗೂ ಯೋಗ್ಯ ಅಭ್ಯರ್ಥಿಗಳಿಗೆ ಮತ ನೀಡುವ ಒಂದು ಸರಳ ಕೆಲಸ ಮಾತ್ರ. ಇನ್ನೊಂದು ನಿಟ್ಟಿನಿಂದಲೂ ರಾಜಕೀಯ ವ್ಯವಸ್ಥೆಯ ಮೂಲಕ ಒಳಗಿನಿಂದಲೇ ಬದಲಾವಣೆ ತರಲು ಜನರ ಮುಂದೆ ತೆರಳುವುದು ಪ್ರಜಾಪ್ರಭುತ್ವದಲ್ಲಿ ಸರಿಯಾದ ಮಾರ್ಗವೂ ಹೌದು. ಇದು ಪ್ರಜಾಪ್ರಭುತ್ವದ ಆರೋಗ್ಯವನ್ನು ಕಾಪಾಡಲು ಅಗತ್ಯವೂ ಹೌದು. ಚಳುವಳಿ ಎಂದು ಕೆಲವು ಗುಂಪುಗಳು ತಮಗೆ ಬೇಕಾದ ವಿಷಯಗಳನ್ನು ಎತ್ತಿಕೊಂಡು ಸಂಸತ್ತಿನ ಮೇಲೆ ಒತ್ತಡ ಹೇರುತ್ತಾ ಹೋದರೆ ಮುಂದೆ ಜಾತ್ಯತೀತ ಸಂವಿಧಾನವನ್ನು ಕೇಸರಿ ಸಂವಿಧಾನವಾಗಿ ಪರಿವರ್ತನೆ ಮಾಡಬೇಕು ಎಂದು ಕೆಲವರ ಬೇಡಿಕೆ ಚಳುವಳಿ ಬರಬಹುದು. ಈಗ ಇರುವ ವ್ಯವಸ್ಥೆಯಲ್ಲಿ ಇಂಥ ಬೇಡಿಕೆಯನ್ನು 2/3 ಬಹುಮತ ಇಲ್ಲದೆ ಪಾಸು ಮಾಡಿಕೊಳ್ಳುವುದು ಅಸಾಧ್ಯ. ಸಂಸತ್ತಿನ ಮೇಲೆ ಹೊರಗಿನಿಂದ ಒತ್ತಡ ಹಾಕಿ ಕೆಲವು ಗುಂಪುಗಳು ಚಳುವಳಿ ಮಾಡಿ ಬೇಡಿಕೆ ಈಡೇರಿಸಿಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮರ್ಪಕವಾದ ಮಾರ್ಗವೂ ಅಲ್ಲ.

ಕೇಜರಿವಾಲರ ಆಮ್ ಆದ್ಮಿ ಪಕ್ಷವನ್ನು ಹೊರತುಪಡಿಸಿದರೆ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರಬೇಕೆಂಬ ತುಡಿತದೊಂದಿಗೆ ಹುಟ್ಟಿಕೊಂಡ ಇನ್ನೊಂದು ಪಕ್ಷ ಜಯಪ್ರಕಾಶ್ ನಾರಾಯಣರ ಲೋಕಸತ್ತಾ ಪಕ್ಷವಾಗಿದೆ. ಈ ಪಕ್ಷವು 2006ರಲ್ಲಿಯೇ ಉದಯವಾಗಿದ್ದರೂ ಇದರ ಬಗ್ಗೆ ಮಾಧ್ಯಮಗಳು ಗಮನವನ್ನೇ ಹರಿಸಿಲ್ಲ. ಹೀಗಾಗಿ ಇದರ ಬಗ್ಗೆ ಇಷ್ಟರವರೆಗೆ ಯಾರಿಗೂ ತಿಳುವಳಿಕೆ ಇರಲಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಕೇಜರಿವಾಲರ ಪಕ್ಷಕ್ಕೆ ತಕ್ಕಷ್ಟು ಪ್ರಚಾರ ಸಿಕ್ಕಿದೆ. ಇದು ಕೇಜರಿವಾಲರು ಆರಿಸಿಕೊಂಡ ಉಪಾಯಗಳಿಂದ ಇರಬಹುದು. ಲೋಕಸತ್ತಾ ಪಕ್ಷದ ಧ್ಯೇಯಗಳೂ ಆಮ್ ಆದ್ಮಿ ಪಕ್ಷದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಕಾರಾತ್ಮಕ ಮೂಲಭೂತ ಬದಲಾವಣೆ ತಂದು ಜನರ ಕೈಗೆ ಅಧಿಕಾರ ನೀಡುವುದೇ ಆಗಿದೆ. ಹೀಗಾಗಿ ಈ ಎರಡೂ ಪಕ್ಷಗಳು ಜೊತೆಗೂಡಿ ಕೆಲಸ ಮಾಡುವುದು ಒಳ್ಳೆಯದು.