ಕೊನೆಗೂ ಉಳಿವ ಪ್ರಶ್ನೆ: ಬೆಕ್ಕಿಗೆ ಗಂಟೆ ಕಟ್ಟುವವರಾರು..?

-ಡಾ.ಎಸ್.ಬಿ.ಜೋಗುರ

ಉನ್ನತ ಶಿಕ್ಷಣದ ವಲಯದಲ್ಲಿ ಅನೇಕ ಬಗೆಯ ಹಳವಂಡಗಳಿವೆ. ಹಿಂದೊಮ್ಮೆ ಲಂಡನ್ ಮೂಲದ ಪತ್ರಿಕೆಯೊಂದು ವಿಶ್ವದ ಶ್ರೇಷ್ಟ 150 ವಿಶ್ವವಿದ್ಯಾಲಯಗಳನ್ನು ಪಟ್ಟಿ ಮಾಡಿದಾಗ ಅದರಲ್ಲಿ ನಮ್ಮ ದೇಶದ ಯಾವ ವಿಶ್ವವಿದ್ಯಾಲಯಗಳೂ ಆ ಪಟ್ಟಿಯೊಳಗಿರಲಿಲ್ಲ. ದಶಕದಿಂದೀಚಿಗೆ ಪರಿಸ್ಥಿತಿ ತೀರಾ ಸುಧಾರಣೆಯಾಗಿದೆ ಎಂದು ನನಗಂತೂ ಅನಿಸುವದಿಲ್ಲ. bangalore-university-logoಹಾಗೆ ಸಮೀಕ್ಷೆ ಮಾಡಿದ ಸಂದರ್ಭದಲ್ಲಿ ದೇಶದ IIT ಎನ್ನುವ ತಾಂತ್ರಿಕ ಸಂಸ್ಥೆ ಆ ಪ್ರತಿಷ್ಟಿತ 150 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿತ್ತು. ಆದರೆ ಅದು ವಿಶ್ವವಿದ್ಯಾಲಯವಲ್ಲ, ತಾಂತ್ರಿಕ ಸಂಸ್ಥೆ, ಹಾಗಾಗಿ ದೇಶದ ಯಾವ ವಿಶ್ವವಿದ್ಯಾಲಯಗಳೂ ಅಲ್ಲಿಲ್ಲ ಎಂದು ಹೇಳಲಾಗಿತ್ತು. ಈಗೀಗ IIT ಮತ್ತು IIM ದಂತಹ ಪ್ರತಿಷ್ಟಿತ ಸಂಸ್ಥೆಗಳಲ್ಲೂ ಅದ್ವಾನಗಳು ಆರಂಭವಾಗಿವೆ. ಅಷ್ಟಕ್ಕೂ ಸದ್ಯದ ಸಂದರ್ಭದಲ್ಲಿ ಉನ್ನತ ಶಿಕ್ಷಣದ ವಲಯದಲ್ಲಿ ಗುಣಮಟ್ಟದ ಬಗ್ಗೆ ಮಾತನಾಡುವ ಅವಶ್ಯಕತೆಯೇ ಇಲ್ಲ, ಏನಿದ್ದರೂ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣದ ಬಗ್ಗೆ ಮಾತ್ರ ಮಾತನಾಡಬಹುದು. ಈ ಪ್ರತಿಷ್ಟಿತ IIT JEE ಪ್ರವೇಶ ಪರೀಕ್ಷೆಗೆ ಪ್ರತಿ ವರ್ಷ 4.5 ಲಕ್ಷ ವಿದ್ಯಾರ್ಥಿಗಳು ಕುಳಿತುಕೊಳ್ಳುವದಿದೆ. ಇದರಲ್ಲಿ ಲಕ್ಷಗಟ್ಟಲೆ ತೇರ್ಗಡೆಯಾದರೂ ಆಯ್ಕೆ ಮಾಡಿಕೊಳ್ಳುವ ಸೀಟುಗಳ ಸಂಖ್ಯೆ ಕೇವಲ 10 ಸಾವಿರ ಮಾತ್ರ. ಹೀಗೆ ಪೂರ್ಣ ಪ್ರಮಾಣದ ಮೆರಿಟ್ ಆಧಾರದ ಮೇಲೆ ತೇರ್ಗಡೆಯಾದ 10 ಸಾವಿರ ವಿದ್ಯಾರ್ಥಿಗಳಿಗೆ ಪ್ರವೇಶಾತಿಯ ಕಾರ್ಡುಗಳನ್ನು ನೀಡಲಾಗುತ್ತದೆ. ಕೌನ್ಸ್‌ಲಿಂಗ್ ಸಂದರ್ಭದಲ್ಲಿ, ತೇರ್ಗಡೆಯಾದ ವಿದ್ಯಾರ್ಥಿಗಳು ತಮಗೆ ಸಿಗಬಹುದಾದ ಸ್ಥಳ ಮತ್ತು ಕಾಲೇಜನ್ನು ಆಯ್ಕೆ ಮಾಡಬಹುದಾಗಿದೆ. ಹೀಗೆ ಆಯ್ಕೆ ಮಾಡಿ ಪ್ರವೇಶಾತಿ ಪಡೆಯುವ ವೇಳೆಯಲ್ಲಿ IIT ಯಂಥಾ ಸಂಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ಎರಡು ಖೊಟ್ಟಿ ಪ್ರವೇಶಾತಿ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ 2012 ರ ಪ್ರವೇಶ ಪರೀಕ್ಷೆಯನ್ನು ಸಂಘಟಿಸಿದ ಜಿ.ಬಿ.ರೆಡ್ಡಿ ಹೇಳಿರುವದಿದೆ. IITಬಾಲಿವುಡ್ ಸಿನೇಮಾ ಒಂದರ ಪ್ರಭಾವ ಇಲ್ಲಿ ಕೆಲಸ ಮಾಡಿರುವದಿದೆ ಎನ್ನುವದನ್ನೂ ಅವರು ಹೇಳಿದ್ದಾರೆ. IIT ಸಂಸ್ಥೆ ಜರುಗಿಸುವ JEE ಪರೀಕ್ಷೆಯಲ್ಲಿ ಮೆರಿಟ್ ಆಧಾರದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಯಿಬ್ಬರು ತಮ್ಮ ಪ್ರವೇಶಾತಿಯ ಕಾರ್ಡುಗಳನ್ನು ಒಬ್ಬ ಹುಡುಗಿ, ಒಬ್ಬ ಹುಡುಗನಿಗೆ ಮಾರಾಟ ಮಾಡಿದ್ದಾರೆ. ಅದನ್ನು ಕೊಂಡ ಶ್ರೀಮಂತರ ಆ ಸಂತಾನ ರಾಜಾರೋಷವಾಗಿ ತಮ್ಮ ಫೋಟೊ ಅಂಟಿಸಿಕೊಂಡು, ನಕಲಿ ಪ್ರವೇಶಾತಿ ಕಾರ್ಡ್‌ಗಳನ್ನಿಟ್ಟುಕೊಂಡು ಇನ್ನೇನು ಪ್ರವೇಶ ಪಡೆಯುವದಷ್ಟೆ ಬಾಕಿ, ಬಯೋ ಮೆಟ್ರಿಕ್ ವಿಧಾನದಲ್ಲಿ ಬೆರಳೊತ್ತುವಾಗ ಮ್ಯಾಚ್ ಆಗದೇ ಸಿಕ್ಕಿಬಿದ್ದಿರುವದಿದೆ. ಈ ಇಬ್ಬರೂ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಅವರ ಮೇಲೆ ಎಫ಼್.ಆಯ್.ಆರ್. ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ. ಇದು ಸಿಕ್ಕ ಬಿದ್ದವರ ಕಥೆಯಾಯಿತು. ಸಿಗದೇ ಅಚಾನಕ್ ಆಗಿ ನುಸುಳಿ ಹೋದವರೂ ಇರಬಹುದು. ಹತ್ತು ಸಾವಿರ ವಿದ್ಯಾರ್ಥಿಗಳಲ್ಲಿ ಈ ತರಹ ಫ಼್ರಾಡ್ ಮಾಡಿ ಪ್ರವೇಶ ಪಡೆದವರು ಇಲ್ಲವೇ ಇಲ್ಲ ಎಂದು ಹೆಳುವದಾದರೂ ಹೇಗೆ..?

ಕೆಲ ಚಲನಚಿತ್ರಗಳು ನಮ್ಮ ಯುವಕರನ್ನು ದಾರಿ ತಪ್ಪಿದ ಮಕ್ಕಳನ್ನಾಗಿ ಮಾರ್ಪಡಿಸುವಲ್ಲಿ ರೆಡಿಮೇಡ್ ಸೂತ್ರಗಳನ್ನು ಹೆಣೆದು ಕೊಡುವದಿದೆ. ಕೊಲೆ- ಸುಲಿಗೆ, ಬ್ಯಾಂಕ್ ದರೋಡೆ, ಅತ್ಯಾಚಾರ, ಕ್ಯಾಂಪಸಗಳಲ್ಲಿ ಕುಚೋದ್ಯಗಳು ಇಂಥಾ ಎಲ್ಲವನ್ನು ಜನಪ್ರಿಯ ನಾಯಕ ನಟ-ನಟಿಯರ ಮೂಲಕ ಮಾಡಿಸಿ ತೋರಿಸುವದರಿಂದ ಸರಿ-ತಪ್ಪುಗಳ ತಿಳುವಳಿಕೆಯಿರದ ಯುವಕರು ಸಿನೇಮಾ ಮತ್ತು ವಾಸ್ತವದ ನಡುವೆ ಅಂತರ ಅರಿಯದೇ ಎಡವಿ ಬೀಳುವ ಸಾಧ್ಯತೆಗಳು ಹೆಚ್ಚು. ಕೇವಲ IIT ಮಾತ್ರವಲ್ಲ, ಅದರಷ್ಟೇ ಪ್ರತಿಷ್ಟಿತವಾದ IIM ಎನ್ನುವ ಇನ್ನೊಂದು ಶೈಕ್ಷಣಿಕ ಸಂಸ್ಥೆಯಿದೆ. IIM_Ahmadabadಅಲ್ಲಿಯೂ ಈಗೀಗ ಕೆಲ ಕಿರಾತಕ ವಿದ್ಯಾರ್ಥಿಗಳು ತಮ್ಮ ವಾಂಛಲ್ಯಗಳನ್ನು ಬಯಲುಗೊಳಿಸುತ್ತಿದ್ದಾರೆ. ತೀರಾ ಇತ್ತೀಚಿಗೆ ಇಂಧೋರನ IIM ಹಾಸ್ಟೇಲ್ ಗಳಲ್ಲಿ ರೂಮಲ್ಲಿ ಕುಳಿತು ಡ್ರಗ್ಸ್ ತೆಗೆದುಕೊಳ್ಳುವಾಗ ಅಲ್ಲಿಯ ಅಧಿಕಾರಿಗಳು ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿರುವದಿದೆ. ಇದು ಇದೇ ವರ್ಷದಲ್ಲಿ ನಡೆದ ಎರಡನೆಯ ಘಟನೆ. ಮೊದಲನೆಯದು ವರ್ಷದ ಆರಂಭದಲ್ಲಿ, ಫ಼ೆಬ್ರುವರಿ ತಿಂಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಹೀಗೆಯೇ ಡ್ರಗ್ಸ್ ತೆಗೆದುಕೊಳ್ಳುವಾಗ ಅವರನ್ನು ಹಿಡಿದು ಆ ಸಂಸ್ಥೆಯಿಂದಲೇ ಅವರನ್ನು ಹೊರಹಾಕಲಾಗಿತ್ತು. ಹೀಗೆ ಸಿಕ್ಕು ಬಿದ್ದ ವಿದ್ಯಾರ್ಥಿಗಳ ಹೇಳಿಕೆಗಳು ಕ್ಷಮೆ ಇಲ್ಲವೇ ತಪ್ಪೊಪ್ಪಿಗೆಯಿಂದ ಕೂಡಿರದೇ ಟೆನ್ಸನ್ ರಿಲೀಫ಼್ ಗಾಗಿ ಹಾಗೆ ಡ್ರಗ್ಸ್ ತೆಗೆದುಕೊಳ್ಳಲಾಗಿತ್ತು ಎನ್ನುವ ಭಂಡತನದ ಸಮಜಾಯಿಷಿಯನ್ನು ನೀಡುವದನ್ನು ನೋಡಿದರೆ ಇಂದಿನ ಯುವಕರು ಸಾಗುತ್ತಿರುವ ದಾರಿಯನ್ನು ನೆನೆದು ತುಂಬಾ ಬೇಸರವೆನಿಸುತ್ತದೆ.

ಕೆಲ ಸಿನೇಮಾಗಳು ಈಗೀಗ ತೀರಾ ವಿಕೃತವಾದದ್ದನ್ನೇ ಬಿಕರಿ ಮಾಡುತ್ತಿವೆ. ಜನ ಅದನ್ನೇ ಬಯಸುತ್ತಾರೆ ಎಂದು ಹೇಳುತ್ತಲೇ ಆ ಬಗೆಯ ಚಲನಚಿತ್ರಗಳು ಸೆನ್ಸಾರ್ ಆಗಿ ಬಿಡುಗಡೆಯಾಗುತ್ತಿವೆ. ಜನ ಅಥವಾ ಪ್ರೇಕ್ಷಕ ಎನ್ನುವ ಪದವೇ ಒಂದು ಬಗೆಯ ಸಮೂಹ ಸನ್ನಿ. ಅಲ್ಲಿ ತಾರ್ಕಿಕತೆಗೆ ಅವಕಾಶವಿರುವದಿಲ್ಲ. ಒಂದು ಬಗೆಯ ವಿಕ್ಷಿಪ಼ತೆಯನ್ನು ಇಷ್ಟ ಪಡುವ ಹಾಗೆ ನಾವು ನಮ್ಮ ಪ್ರೇಕ್ಷಕರನ್ನು ರೂಪಿಸುತ್ತಿದ್ದೇವೆ ಎಂದು ನಮಗನಿಸುವದಿಲ್ಲವೇ..? cinema-filmಯುವಕರ ಮೇಲೆ ಪ್ರಭಾವ ಬೀರುವಲ್ಲಿ ಸಿನೇಮಾ ಈಗಲೂ ಮುಂಚೂಣಿಯಲ್ಲಿದೆ. ಅಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎರಡೂ ಇವೆ. ಆದರೆ ಅಲ್ಲಿಯ ಆಯ್ಕೆ ತಿರಸ್ಕಾರದ ಪ್ರಶ್ನೆ ಬಂದಾಗ ಆಯಾ ಪ್ರೇಕ್ಷಕನ ವಯಸ್ಸು, ಮನೋಭಾವ, ಬುದ್ಧಿಮತ್ತೆಯನ್ನು ಅದು ಅವಲಂಬಿಸಿರುತ್ತದೆ. ಈ ಮೇಲಿನ ಎರಡೂ ಸಂಸ್ಥೆಗಳಲ್ಲಿ ನಡೆದ ಅವಾಂತರಗಳಿಗೆ ಇತ್ತೀಚಿಗೆ ಬಿಡುಗಡೆಯಾಗಿ ಸೂಪರ್ ಡ್ಯುಪರ್ ಅನ್ನೋ ಪಟ್ಟವನ್ನು ಹೊತ್ತು ನಿಂತ ಬಾಲಿವುಡ್ ಸಿನೇಮಾಗಳೇ ಕಾರಣ ಎನ್ನುವದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಕೇವಲ ಈ ಎರಡು ಘಟನೆಗಳು ಮಾತ್ರವಲ್ಲ, ದೇಹಲಿಯಲ್ಲಿ ಈಚೆಗೆ ನಡೆದ ಇನ್ನೂಂದು ಘಟನೆಯೂ ಬಾಲಿವುಡ್ ಸಿನೇಮಾ ಒಂದನ್ನು ಹೋಲುತ್ತದೆ.

ಆ ಹುಡುಗ ಮೊದಲು ಒಂದು ಮನೆಯಲ್ಲಿ ಬಾಡಿಗೆಗಿದ್ದ. ಮನೆಯ ಮಾಲಿಕರು ಅವನ ಕಿರಾತಕತನವನ್ನು ಕಂಡು ಖಾಲಿ ಮಾಡಿಸಿದ್ದರು. ಅವನಿಗೊಬ್ಬ ಟಪೋರಿ ಗೆಳೆಯನಿದ್ದ. ಆ ದಿನ ರಾತ್ರಿ ಇಬ್ಬರೂ ಕುಡಿದು ಸಾಗುವಾಗ ತಾನು ಮೊದಲು ಬಾಡಿಗೆಗಿದ್ದ ಮನೆ ಎದುರಾಯಿತು. ಆ ಮನೆಯಲ್ಲಿ ತಾಯಿ, ಮಗಳು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದರು. ಈ ಕಿರಾತಕ ಮನೆಯ ಬಾಗಿಲ ಬಳಿ ಬಂದವನೇ ಆ ಮನೆಯ ಮೆಟ್ಟಿಲಿನ ಮೇಲೆ ಮೂತ್ರಿ ಮಾಡತೊಡಗಿದ. ಆಗ 17 ವರ್ಷದ ಆ ಮಗಳು ಅದನ್ನು ಪ್ರತಿರೋಧಿಸಿದಳು. ಈ ಧೂರ್ತ ನಶೆಯೊಳಗಿದ್ದ. ತನ್ನ ಬಳಿಯಿರುವ ಪಿಸ್ತೂಲಿನಿಂದ ಎರಡು ಗುಂಡನ್ನು ಆ ಬಾಲಕಿಯ ಮೇಲೆ ಸಿನೇಮಾದ ಸಾಹಸದ ಸನ್ನಿವೇಶ ಒಂದರಲ್ಲಿ ಹಾರಿಸುವಂತೆ ಹಾರಿಸಿಯೇ ಬಿಟ್ಟ. ಆ ಹುಡುಗಿ ಅಲ್ಲಿಯೇ ಕುಸಿದು ಬಿದ್ದಳು. ಆಕೆಯ ತಾಯಿಯ ಮೇಲೆಯೂ ಇವನು ಗುಂಡು ಹಾರಿಸಿದ. ಅವಳೀಗ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. violenceಇದೆಲ್ಲಾ ಏನು? ತೀರಾ ಕಚಡಾ ಕೆಲಸ ಮಾಡುತ್ತಿರುವವನಿಗೂ ತಾನು ಮಾಡುತ್ತಿರುವದೇ ಸರಿ ಎನ್ನುವ ಭಂಡತನ ಬೆಳೆಯುವಲ್ಲಿ ನಮ್ಮ ಸಾಮಾಜಿಕ ಪರಿಸರ ಅವರಿಗೆ ಪೂರಕವಾಗಿ ಕೆಲಸ ಮಾಡುತ್ತಿದೆಯೇನೋ ಎಂದೆನಿಸುವದಿಲ್ಲವೇ?

ಈಗೀಗ ನಗರ ಪ್ರದೇಶಗಳಲ್ಲಿ ಜರುಗುವ ಅಪರಾಧಗಳ ಸ್ವರೂಪ ಮತ್ತು ಅದರಲ್ಲಿ ತೊಡಗಿರುವವರ ವಯೋಮಿತಿಯನ್ನು ನೋಡಿದಾಗ ಭವಿಷ್ಯದ ನಿರ್ಣಾಯಕ ಸಂಗತಿಯಾಗಬೇಕಾದ ವಯಸ್ಸೊಂದು ಹೀಗೆ ನಿರ್ನಾಮದ ಕೆಲಸಗಳಲ್ಲಿ ತೊಡಗುವದನ್ನು ಗಮನಿಸಿದರೆ ಅವರು ಸಾಗುತ್ತಿರುವ ದಾರಿಯ ಭೀಕರತೆಯ ಅರಿವಾಗದೇ ಇರದು. ಬಹುತೇಕ ಅಪರಾಧಿಗಳು 15-24 ವರ್ಷ ವಯೋಮಿತಿಯ ಒಳಗಿನವರೇ ಹೆಚ್ಚು. ಅಂದರೆ ಯುವಕರು. ಅದು ಸುಪಾರಿ ಕೊಲೆಯಿರಲಿ, ಬ್ಯಾಂಕ್ ಲೂಟಿಯಾಗಿರಲಿ, ಮಹಿಳೆಯ ಕತ್ತಿನ ಚೈನಾಗಿರಲಿ, ಡ್ರಗ್ಸ್ ಮಾರಾಟ, ಸೇವನೆಯಾಗಿರಲಿ ಇಲ್ಲೆಲ್ಲಾ ಇದ್ದದ್ದು ಯುವಕರೇ…ಇದು ಸರಿಯಲ್ಲ. ಇದಕ್ಕೆ ಕುಟುಂಬ, ಶಾಲೆ-ಕಾಲೇಜು, ಮಠ-ಮಂದಿರಗಳು, ಮಾಧ್ಯಮಗಳು, ಎಲ್ಲರೂ ಹೊಣೆಗಾರರು.

ಕೊನೆಗೂ ಉಳಿವ ಪ್ರಶ್ನೆ ಬೆಕ್ಕಿಗೆ ಗಂಟೆ ಕಟ್ಟುವವರಾರು..?

Leave a Reply

Your email address will not be published. Required fields are marked *