ಮಂಗನ ಬ್ಯಾಟೆ : ಗುತ್ತಿ ಮತ್ತು ಮಂದಣ್ಣರ ವಾರಸುದಾರ ಸಿದ್ದಯ್ಯ

– ರವಿ ಕೃಷ್ಣಾರೆಡ್ಡಿ

ಪರಿಸರವಾದಿ ಮತ್ತು ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಗಡೆಯವರ “ಮಂಗನ ಬ್ಯಾಟೆ” ಓದುಗರಲ್ಲಿ ವಿಸ್ಮಯ, ಬೆರಗು ಹುಟ್ಟಿಸಿ ಓದಿನ ಸಂತೋಷ ಕೊಡುವಂತಹ ಪುಸ್ತಕ. ಇದನ್ನು ಓದುತ್ತಿದ್ದರೆ ಕಾನೂರು ಹೆಗ್ಗಡತಿಯ ಪುಟ್ಟಣ್ಣ ಮತ್ತು ಕೆಲಸತಪ್ಪಿಸಿ ಹೊಂಡತೊಣಕುವ ಮಾಂಸಬಾಕ ಬೈರನಿಂದ ಹಿಡಿದು ಮಲೆಗಳಲ್ಲಿ ಮದುಮಗಳಿನ ಐತ ಮತ್ತು ಗುತ್ತಿಯರೆಲ್ಲ ನೆನಪಾಗುತ್ತಾರೆ. ಹಾಗೆಯೇ, ತೇಜಸ್ವಿಯರ ಮಂದಣ್ಣ, ಜೇನ್ನೊಣಗಳು, ಏಡಿಗಳೂ ನೆನಪಾಗುತ್ತವೆ. ಆಪಾರ ಎನ್ನಬಹುದಾದ ವಿಷಯಗಳೂ, ವಿವರಗಳೂ, ಉಪಕತೆಗಳೂ, ಹಾಸ್ಯಪ್ರಸಂಗಗಳೂ, ಈ ಕಥನದಲ್ಲಿವೆ.

ಶಿವಮೊಗ್ಗ-ಚಿಕ್ಕಮಗಳೂರಿನ ಮಲೆನಾಡು ಮತ್ತು ಅಲ್ಲಿನ ಜೀವನ ಕುವೆಂಪು, ತೇಜಸ್ವಿ, ಕಡಿದಾಳು ಶಾಮಣ್ಣನವರಿಂದಾಗಿ ಮಲೆನಾಡಿನವರಲ್ಲದ ಕನ್ನಡಿಗರಿಗೆ ಅಪರಿಚಿತವೇನಲ್ಲ. ಆದರೆ, ಅವರಲ್ಲಿಯೂ ತಪ್ಪಿಸಿಕೊಂಡ ಮತ್ತೊಂದು ಮಲೆನಾಡಿನ ಚಿತ್ರಣ ಮತ್ತು ವರ್ತಮಾನದ ಸಂದರ್ಭ “ಮಂಗನ ಬ್ಯಾಟೆ”ಯಲ್ಲಿದೆ.

ಇದು ವಿಠಲ್ ಹೆಗ್ಗಡೆಯವರು ಕಂಡ ಹಲವು ವಾಸ್ತವ ಚಿತ್ರಗಳನ್ನಾಧರಿಸಿದ ಕಾದಂಬರಿಯಂತಿದೆ. ಆದರೆ ಇದನ್ನು ಕಾದಂಬರಿ ಎನ್ನುವ ಹಾಗಿಲ್ಲ. ಸಂಪೂರ್ಣವಾಗಿ ನೋಡಿದ್ದನ್ನಷ್ಟೇ, ಕೇಳಿದ್ದನ್ನಷ್ಟೇ ಹೇಳುತ್ತದೆ ಎನ್ನುವ ಹಾಗೂ ಇಲ್ಲ. ಏಕೆಂದರೆ ಹಲವು ವ್ಯಕ್ತಿ, ಸಂದರ್ಭ, ಘಟನೆಗಳನ್ನು ನೋಡಿ, ಕೇಳಿ, ಅನುಭವಿಸಿ ಮತ್ತು ಅದಕ್ಕೆ ತಮ್ಮ ಸೃಜನಶೀಲತೆಯನ್ನು ಬೆರೆಸಿ ಇದನ್ನು ಕಥನವನ್ನಾಗಿಸಿದ್ದಾರೆ. ಮತ್ತು ತಮ್ಮ ಈ ಕೃತಿಯಿಂದಾಗಿ ಕನ್ನಡ ಓದುಗರ ಹೃದಯಕ್ಕೆ ಮತ್ತು ಮನಸ್ಸಿಗೆ ವಿಠಲ್ ಹೆಗ್ಗಡೆಯವರು ಪ್ರೀತಿಯಿಂದ ಪ್ರವೇಶಿಸಿದ್ದಾರೆ.

ನೊಬೆಲ್ ಪ್ರಶಸ್ತಿ ಪಡೆದಿರುವ ಅಮೆರಿಕದ ಅರ್ಥಶಾಸ್ತ್ರಜ್ಞ ಪಾಲ್ ಕ್ರುಗ್‌ಮನ್ ಅಮೆರಿಕದಲ್ಲಿಯ ಆರ್ಥಿಕ ಅಸಮಾನತೆ ಮತ್ತು ಅಲ್ಲಿಯ ಕೆಳಮಧ್ಯಮ ಮತ್ತು ಬಡ ವರ್ಗದವರಿಗೆ ಸರ್ಕಾರ ಮತ್ತು ಸಮಾಜ ನೀಡಲೇಬೇಕಿರುವ ಆರೋಗ್ಯಸೇವೆಯ ಬಗ್ಗೆ “The Conscience of a Liberal” ಎಂಬ ಪುಸ್ತಕವನು 2007ರಲ್ಲಿ ಬರೆದಿದ್ದರು. ಅಲ್ಲಿಯ ಡೆಮೊಕ್ರಾಟ್ ಪಕ್ಷದ ಪ್ರಗತಿಪರರಿಗೆ ಮತ್ತು 2008 ರಲ್ಲಿ ಒಬಾಮ ಮಾತನಾಡುತ್ತಿದ್ದ ಆರೋಗ್ಯಸೇವೆಯ ಅವಶ್ಯಕತೆ ಮತ್ತು ಆತ ಅಲ್ಲಿ ತದನಂತರ ತಂದ ಸುಧಾರಣೆಗಳಿಗೆ ಆ ಪುಸ್ತಕ ಒಂದು ಪ್ರೇರಣೆ ಮತ್ತು ಆಕರ ಗ್ರಂಥ ಎನ್ನುವುದು ನನ್ನ ಅಭಿಪ್ರಾಯ. ಹಾಗೆಯೇ, ಅಮೆರಿಕದ ಇತ್ತೀಚಿನ ದಿನಗಳ ಪ್ರಸಿದ್ಧ ಬರಹಗಾರ ಮತ್ತು ಕಾದಂಬರಿಕಾರ ಜೊನಾಥನ್ ಫ್ರಾನ್‌ಜೆನ್‌ನ “Freedom” ಕಾದಂಬರಿಯೂ ಅಮೆರಿಕದಲ್ಲಿನ ಪರಿಸರ ಕಾಳಜಿ, ಅದರ ಅಗತ್ಯತೆ, ಅದರಲ್ಲಿ ನಾಗರಿಕರ ನೈತಿಕ ಜವಾಬ್ದಾರಿ ಮತ್ತು ನಾಗರಿಕರಾಗಿ ನಾವು ತಾಳಬೇಕಾದ ನಿಲುವು ಇತ್ಯಾದಿಗಳ ಬಗ್ಗೆ ಹಿನ್ನೆಲೆಯಲ್ಲಿ ನಮ್ಮನ್ನು ಪ್ರಭಾವಿಸುತ್ತದೆ ಮತ್ತು ಬಹುಶಃ ಮುಂದಿನ ದಿನಗಳ ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಪ್ರಸ್ತುತವೂ ಆಗಲಿದೆ. ಆ ರೀತಿಯಲ್ಲಿ “ಮಂಗನ ಬ್ಯಾಟೆ” ನಮ್ಮಮಲೆನಾಡಿನ ವರ್ತಮಾನದ ಬಗ್ಗೆ ಮತ್ತು ಒಟ್ಟಾರೆ ನಮ್ಮ ಪರಿಸರ, ನಮ್ಮ ಯೋಜನೆಗಳು, ಕಾನೂನುಗಳು, ನಡಾವಳಿಗಳ ಬಗ್ಗೆ ಕನ್ನಡ ಭಾಷಿಕರ ಆಲೋಚನೆಗಳನ್ನು ಬರುವ ದಿನಗಳಲ್ಲಿ ಪ್ರಭಾವಿಸಲಿದೆ ಎಂಬ ವಿಶ್ವಾಸ ನನ್ನದು. (ಆದರೆ ಸಂವೇದನಾಹೀನತೆಯಿಂದ ನರಳುತ್ತಿರುವ ನಮ್ಮ ಈ ಸಮಾಜ ನಿಜಕ್ಕೂ ಸ್ಪಂದಿಸುತ್ತದೆಯೇ ಎನ್ನುವ ಅವಿಶ್ವಾಸವೂ ಇದೆ.)

ಮತ್ತು, ತನ್ನ ಮದುವೆ ಊಟಕ್ಕೆ ಬೇಕಾಗುವ ಮಾಂಸಕ್ಕೆ ಮಂಗನ ಬ್ಯಾಟೆಯಲ್ಲಿ ತೊಡಗುವ ತುಂಡುಗಂಬಳಿ ಸಿದ್ದ ಉರುಫ್ ಆದಿವಾಸಿ ಸಿದ್ದಯ್ಯ ಮತ್ತು ಸಸ್ಯಾಹಾರಿಯಾದರೂ ಶಿಕಾರಿ ಮಾಡುವ ಹುಲಿಕೊಂದ ಧೀರ ಗೋವಿಂದಯ್ಯ ಇನ್ನುಮುಂದೆ ಐತ, ಗುತ್ತಿ, ಮುಕುಂದಯ್ಯ, ಪುಟ್ಟಣ್ಣ, ಮಂದಣ್ಣರಂತೆ ನಮ್ಮ ನೆನಪುಗಳಲ್ಲಿ ಉಳಿಯುವ ನಮ್ಮ ಆಪ್ತರು. ಪರಿಚಯಿಸಿಕೊಳ್ಳಲು ನಿಧಾನಿಸಬೇಡಿ. ಅವರ ಪರಿಚಯದೊಂದಿಗೆ ನಮ್ಮ ರಾಜಕೀಯ, ಸಾಮಾಜಿಕ, ಆರ್ಥಿಕ ಅಭಿಪ್ರಾಯಗಳನ್ನು ಕಟ್ಟಿಕೊಳ್ಳಲು ಮತ್ತು ಗಟ್ಟಿಗೊಳಿಸಿಕೊಳ್ಳಲು ಸಾಧ್ಯವಿದೆ.

***

ಪುಸ್ತಕ : ಮಂಗನ ಬ್ಯಾಟೆ
ಲೇಖಕ : ಕಲ್ಕುಳಿ ವಿಠಲ್ ಹೆಗ್ಗಡೆ
ಪ್ರಕಾಶನ : ಲಂಕೇಶ್ ಪ್ರಕಾಶನ, ನಂ. 9, ಪೂರ್ವ ಆಂಜನೇಯ ದೇವಸ್ಥಾನ ರಸ್ತೆ, ಬಸವನಗುಡಿ, ಬೆಂಗಳೂರು – 560004
ಪುಟಗಳು : 276
ಬೆಲೆ : ರೂ. 250

Leave a Reply

Your email address will not be published. Required fields are marked *