ಮಡೆಸ್ನಾನದ ಮನಸ್ಸುಗಳು ಮಲಿನವಾಗಿವೆ


-ಚಿದಂಬರ ಬೈಕಂಪಾಡಿ


 

ಮಡೆ ಸ್ನಾನ ಈಗಾಗಲೇ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಕುಕ್ಕೆ ಕ್ಷೇತ್ರದಲ್ಲಿ ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಮಡೆಸ್ನಾನ ಪದ್ಧತಿಗೆ ಈಗ ಜಾಗತಿಕವಾದ ಪ್ರಚಾರ ಸಿಕ್ಕಿದೆ. ಜನರ ಖಾಸಗಿ ಬದುಕಿಗೆ ಸಂಬಂಧಿಸಿದ ಈ ಆಚರಣೆ ಸಾರ್ವತ್ರಿಕವಾಗಿ ಚರ್ಚೆಯಾಗುತ್ತಿರುವುದು ಬದಲಾದ ಕಾಲಘಟ್ಟದ ಮನಸ್ಥಿತಿ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಲೌಕಿಕ ಜಂಜಡ, ಕಷ್ಟ ಕೋಟಲೆಗಳನ್ನು ಮಡೆಸ್ನಾನ ಹರಕೆ ಹೊತ್ತುಕೊಂಡು ಅಲೌಕಿಕ ಶಕ್ತಿಯ ಮೂಲಕ ಪರಿಹರಿಸಿಕೊಳ್ಳುವುದು ಸಾಧ್ಯ ಎನ್ನುವ ಬಲವಾದ ನಂಬಿಕೆಯನ್ನು ಪೋಷಿಸಿಕೊಂಡು ಬರಲಾಗಿದೆ. ಈ ಹರಕೆ ಹೇಳಿಕೊಳ್ಳುವವರು ಕೆಳವರ್ಗದ made-snanaಜನರು ಅದರಲ್ಲೂ ಅನಕ್ಷರತೆ, ಬಡತನಗಳ ಸುಳಿಯಲ್ಲಿ ನಲುಗಿದವರು ಎನ್ನುವುದು ಮುಖ್ಯ. ಯಾವೆಲ್ಲಾ ಸಮಸ್ಯೆಗಳಿಗೆ ಈ ಹರಕೆ ಹೊರುತ್ತಾರೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆಗೆ ನಿಖರವಾಗಿ ಇಂಥ ಕಷ್ಟಗಳಿಗೇ ಎಂದೇನೂ ಹೇಳುವಂತಿಲ್ಲ. ಮಗಳಿಗೆ ಮದುವೆಯಾಗದಿದ್ದರೂ ಮಡೆಸ್ನಾನದ ಹರಕೆ, ಗುಣವಾಗದ ಕಾಯಿಲೆ ಎನ್ನುವುದು ಗೊತ್ತಾದರೂ ಇದೇ ಹರಕೆ, ಚರ್ಮ ರೋಗಗಳು ಗುಣವಾಗಲೆಂದು ಇದೇ ಹರಕೆ, ಉದ್ಯೋಗ ಸಿಗಲೆಂದೂ ಮಡೆಸ್ನಾನದ ಹರಕೆ ಹೀಗೆ ಪ್ರತಿಯೊಂದು ಕಷ್ಟಕ್ಕೂ ಮಡೆಸ್ನಾನದ ಹರಕೆ ಹೇಳಿಕೊಂಡರೆ ಪರಿಹಾರವಾಗುತ್ತದೆ ಎನ್ನಿಸಿದರೆ ಸಾಕು ಹರಕೆ ಹೊತ್ತುಕೊಳ್ಳುತ್ತಾರೆ. ತಮ್ಮ ಇಷ್ಟಾರ್ಥ ಸಿದ್ಧಿಸಿತು ಅಂತಾದರೆ ಹರಕೆ ತೀರಿಸುತ್ತಾರೆ, ಸಿದ್ಧಿಸದಿದ್ದರೆ ಹರಕೆ ತೀರಿಸಿದ ಮೇಲೆ ಸಿದ್ಧಿಸುತ್ತದೆ ಎನ್ನುವ ನಂಬಿಕೆಯಿಂದ ಮಡೆಸ್ನಾನ ಹರಕೆ ತೀರಿಸುವುದೂ ಇದೆ. ಆದ್ದರಿಂದ ಮಡೆಸ್ನಾನಕ್ಕೆ ಮಡೆಸ್ನಾನದ ಮೇಲಿನ ನಂಬಿಕೆಯೇ ಉತ್ತರ ಹೊರತು ಬೇರೇನೂ ಹೇಳುವಂತಿಲ್ಲ.

ಮಡೆಸ್ನಾನ ಹರಕೆಯಿಂದ ಸರ್ವರೋಗ ಗುಣವಾಗಿವೆ, ಬದುಕಿನಲ್ಲಿ ಕಷ್ಟಕೋಟಲೆಗಳೆಲ್ಲವೂ ಪರಿಹಾರವಾಗಿವೆ ಎನ್ನುವುದು ಯಾರೆಲ್ಲಾ ಹರಕೆ ಹೊತ್ತು, ಹರಕೆ ತೀರಿಸಿದ್ದಾರೆ ಅವರೇ ಹೇಳಬೇಕು. ಒಂದು ವೇಳೆ ಹೀಗಾಗಿದ್ದರೆ ನಿಜಕ್ಕೂ ಅದ್ಭುತ. ಈ ಜಗತ್ತಿನಲ್ಲಿ ಮನುಷ್ಯರಿಗೆ ಯಾವ ರೋಗರುಜಿನಗಳು ಬಾರದಂತೆ ತಡೆಗಟ್ಟುವ ಪದ್ಧತಿಯೆಂದು ಮಡೆಸ್ನಾನವನ್ನು ಜಾಗತೀಕರಣಗೊಳಿಸಬಹುದು. ಆಸ್ಪತ್ರೆಗಳು, ಔಷಧಿ, ವೈದ್ಯರು ಅನಗತ್ಯವೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವಂಥ ವ್ಯವಸ್ಥೆಗೂ ಮೊರೆ ಹೋಗಬಹುದು. ಈಗ ಇರುವ ವೈದ್ಯಕೀಯ ಕಾಲೇಜುಗಳನ್ನು ಮುಚ್ಚಿ ಮಡೆಸ್ನಾನದಂಥ ಪದ್ಧತಿಯನ್ನು ಹೇಗೆ ಆಚರಿಸಬೇಕು ಎನ್ನುವುದನ್ನು ಕಲಿಸಲು ಬಳಕೆ ಮಾಡಿಕೊಳ್ಳಬಹುದು. ದುರಂತವೆಂದರೆ ಮಡೆಸ್ನಾನ ಪದ್ಧತಿ ಬೇಕೆಂದು ಹೇಳುವ ಮನಸ್ಸುಗಳು ಮಡೆಸ್ನಾನ ಮಾಡಿ ಬದುಕು ರೂಪಿಸಿಕೊಂಡವುಗಳಲ್ಲ. ಮಡೆಸ್ನಾನ ಮಾಡುವುದನ್ನು ನೋಡಿಯೇ ಆನಂದಿಸಿದಂಥವು. ಎಂಜಲು ಎಲೆಗಳ ಮೇಲೆ ಉರುಳುತ್ತಿರುವಾಗ ಪಕ್ಕದಲ್ಲಿ ನಿಂತು ತಾವೇ ಉಂಡು ಬಿಸಾಡಿದ ಎಲೆಗಳು ಅದೆಷ್ಟು ಪವಿತ್ರವೆಂದು ಹೆಮ್ಮೆಪಟ್ಟುಕೊಂಡ ಮನಸ್ಸುಗಳು. ಈ ಪದ್ಧತಿ ಅನೂಚಾನವಾಗಿ ಆಚರಣೆಯಲ್ಲಿರಬೇಕು ಎಂದು ತುಡಿಯುವ ಮನಸ್ಸುಗಳು.

ಮಡೆಸ್ನಾನಕ್ಕೆ ದೈವೀಶಕ್ತಿಯನ್ನು ತುಂಬಿರುವ ಮನಸ್ಸುಗಳಿಗೆ ಯಾಕೆ ತಾವೂ ಈ ಪದ್ಧತಿಯನ್ನು ಆಚರಿಸಬೇಕು ಅನ್ನಿಸುವುದಿಲ್ಲ? ಬಡವರು, ಹಿಂದುಳಿದ ಸಮುದಾಯಗಳು ಮಾತ್ರ ಇದನ್ನು ಪೇಟೆಂಟ್ ಮಾಡಿಕೊಳ್ಳುವುದಕ್ಕೆ ಕಾರಣವೇನು? ಈ ಪ್ರಶ್ನೆಗಳಿಗೆ ಈ ಪದ್ಧತಿಯನ್ನು ಜೀವಂತವಾಗಿಡುವಂಥ ಮನಸ್ಸುಗಳು ಉತ್ತರ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ಅವರಿಗೆ ಪ್ರಶ್ನೆ ಕೇಳಿಯೇ ಗೊತ್ತು ಹೊರತು ಉತ್ತರ ಹೇಳುವ ಅನಿವಾರ್ಯತೆ ಬಂದಿಲ್ಲ. ಜೀತ ಮಾಡಿಸುವುದು, ಜಗಲಿಯ ಹೊರಗೆ ನಿಲ್ಲಿಸಿ ಅನ್ನ, ನೀರನ್ನು ತೆಂಗಿನ ಚಿಪ್ಪು, ಎಲೆಗಳಲ್ಲಿ ಕುಡಿಸಿ, madesnana-shivaram-beatenತಿನ್ನಿಸಿಯೇ ಗೊತ್ತು ಹೊರತು ಬೊಗಸೆಗೆ ನೀರು ಸುರಿಸಿಕೊಂಡು ಕುಡಿದ ನೋವು ಗೊತ್ತಿಲ್ಲ. ಹುಟ್ಟಿದ ಮಗುವಿಗೆ ನಾಮಕರಣ ಮಾಡಲು ರಾಮ, ಕೃಷ್ಣ, ಗೋವಿಂದ, ಹರಿಶ್ಚಂದ್ರ, ಸಾವಿತ್ರಿ, ಸೀತೆ, ರಾಧೆ ಎನ್ನುವ ಹೆಸರು ಹೇಳಿದ ಮನಸ್ಸುಗಳಲ್ಲ. ಕರಿಯ, ತಿಮ್ಮ, ಕೊರಗ, ನಿಂಗಿ ಮುಂತಾದ ಹೆಸರನ್ನೇ ಕರೆಯಲು ಹುಕುಂ ನೀಡಿದ ಮನಸ್ಸುಗಳು.

ಆದರೆ ಈಗ ಕಾಲ ಬದಲಾಗಿದೆ ಎನ್ನುವುದನ್ನು ಕರಿಯ, ತಿಮ್ಮ, ಕೊರಗ, ನಿಂಗಿಯ ಮೊಮ್ಮಕ್ಕಳು ಅರಿತಿದ್ದಾರೆ. ತನ್ನಜ್ಜ ಲಂಗೋಟಿಯಲ್ಲೇ ಕಾಲ ಕಳೆದರೂ ಅಪ್ಪ ಕೊನೆಗಾಲದಲ್ಲಿ ಪಂಚೆ ಹಾಕಿಕೊಳ್ಳುತ್ತಿದ್ದರು, ತಾನು ಪ್ಯಾಂಟ್ ಧರಿಸುತ್ತಿದ್ದೇನೆ, ಮಗನಿಗೆ ಮಾಡರ್ನ್ ಡ್ರೆಸ್ ಕೊಡಿಸುವುದು ಅದೆಷ್ಟು ಅನಿವಾರ್ಯ ಎನ್ನುವುದನ್ನು ಅರ್ಥಮಾಡಿಕೊಂಡಿದ್ದಾನೆ. ಆದ್ದರಿಂದಲೇ ಅವನಿಗೆ ಮಡೆಸ್ನಾನ ಹರಕೆ ಹೇಳುವುದರಲ್ಲಿ ನಂಬಿಕೆಯೂ ಇಲ್ಲ, ಅದು ಅವನಿಗೆ ಅನಿವಾರ್ಯವೂ ಆಗಿಲ್ಲ. ಒಂದು ಕಾಲದ ಅನಿವಾರ್ಯಭಾಗವಾಗಿ ಒಂದು ವರ್ಗ ಆಚರಿಸುತ್ತಿದ್ದ ಪದ್ಧತಿಯನ್ನೇ ಈಗಲೂ ಆಚರಿಸಬೇಕು ಎನ್ನುವುದು ನೀನು ಬದಲಾಗಬೇಡವೆಂದು ಕಟ್ಟಿ ಹಾಕುವಂಥ ಪ್ರಯತ್ನವೆಂದು ಯಾಕೆ ಭಾವಿಸಬಾರದು?

ಜಾಗತೀಕರಣ, ಉದಾರೀಕರಣವನ್ನು ಆವಾಹಿಸಿಕೊಂಡೇ ಬೆಳೆಯುತ್ತಿರುವಾಗ ಮತ್ತು ಅದು ಬದುಕಿನ ಅನಿವಾರ್ಯತೆಯಾಗಿರುವಾಗ ಆಚರಣೆಗಳು, ಪದ್ಧತಿಗಳು ಮಾತ್ರ ಯಾಕೆ ಇನ್ನೂ ಹೊಸತನ ಪಡೆದುಕೊಂಡಿಲ್ಲ? ಅಥವಾ ಹೊಸತನ ಪಡೆದುಕೊಳ್ಳಬಾರದು ಯಾಕೆ? ಮಡೆಸ್ನಾನ ಮಾಡದಿದ್ದರೆ
ಸಂಪ್ರದಾಯಕ್ಕೆ ಅಪಚಾರ ಮಾಡಿದಂತಾಗುತ್ತದೆ ಎನ್ನುವ ಮನಸ್ಸುಗಳಿಗೆ ತಾವೇ ಆ ಪದ್ಧತಿಯನ್ನು ಇನ್ನೂ ಶಾಸ್ತ್ರೋಕ್ತವಾಗಿ ಮಾಡಿದರೆ ಹೆಚ್ಚಿನ ಪುಣ್ಯ ಸಂಪಾದನೆ ಮಾಡಬಹುದಲ್ಲವೇ? ಹಣ, ಕೀರ್ತಿ ಬೇಕಾದರೆ ಇಂಥ ಪುಣ್ಯವನ್ನು ಯಾಕೆ ಬೇಡವೆನ್ನಬೇಕು?

ಬಹುಷ: ಕಾಲ ಅದೆಷ್ಟು ಬದಲಾಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಈ ಉದಾಹರಣೆ ಸರಿಯಾದೀತು. ಸಾಮಾನ್ಯವಾಗಿ ಕರಾವಳಿ ಭಾಗವನ್ನು ಮನಸ್ಸಿನಲ್ಲಿಟ್ಟು ಹೇಳುವುದಾದರೆ ಉತ್ತರಕ್ರಿಯೆಯಲ್ಲಿ ಪಿಂಡ ಬಿಡುವುದು, ಸಾರ್ವಜನಿಕರಿಗೆ ತಿಥಿ ಊಟ ಹಾಕುವುದು ಎಲ್ಲಾ ಕಡೆಗಳಂತೆಯೇ. ದೇಹತ್ಯಜಿಸಿದ ಆತ್ಮವನ್ನು ಉತ್ತರಕ್ರಿಯೆಯ ದಿನ ರಾತ್ರಿ ಮನೆಗೆ ಆಹ್ವಾನಿಸಿ ಮಾಂಸಾಹಾರ (ಇದು ಮಾಂಸಾಹಾರಿಗಳ ಕುಟುಂಬ) ಬಡಿಸಿ, ಮದ್ಯ ಸಹಿತ ಅವರ ಇಷ್ಟದ ತಿನಿಸುಗಳನ್ನು ಇಟ್ಟು ಎರಡು ನಿಮಿಷಗಳ ಕಾಲ ಮನೆಯವರೆಲ್ಲರೂ ಮನೆಯ ಬಾಗಿಲು ಭದ್ರಪಡಿಸಿಕೊಂಡು ಹೊರಗಿದ್ದು ನಂತರ ಬಾಗಿಲು ತೆರೆದು ಬಡಿಸಿದ್ದೆಲ್ಲವನ್ನೂ ಎಲ್ಲರಿಗೂ ಹಂಚಿ ಊಟ ಮಾಡುವ ಸಂಪ್ರದಾಯವಿದೆ.

ಈಗ ಯಾರಿಗೂ ಬಿಡುವಿಲ್ಲ, ಎಲ್ಲರಿಗೂ ಅರ್ಜೆಂಟ್, ಕೆಲಸದ ಒತ್ತಡ, ಆದರೆ ಸಂಪ್ರದಾಯವನ್ನು ಬಿಡುವಂತಿಲ್ಲ. ಆದರೆ ಬೇಕಾದಂತೆ ಬದಲಾವಣೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವರಿಗಿದೆ. ಸಂಜೆಯೊಳಗೆ ಫ್ಲೈಟ್ ಹತ್ತಬೇಕು, ರಾತ್ರಿಯೊಳಗೆ ದುಬೈ ವಿಮಾನವನ್ನು ಮುಂಬೈನಲ್ಲಿ ಹತ್ತಬೇಕು. ಆದರೆ ಹಿರಿ ಮಗ ತಾನೇ ಆಗಿರುವುದರಿಂದ ಉತ್ತರಕ್ರಿಯೆಗೆ ಇರಲೇಬೇಕು, ರಾತ್ರಿಯೂ ಇರುವುದು ಕಡ್ಡಾಯ. ಆದರೆ ತನ್ನ ಕೆಲಸ, ಮೀಟಿಂಗ್, ಫ್ಯಾಮಿಲಿ ಜೊತೆ ರಾತ್ರಿಗೆ ಇರಲೇ ಬೇಕು. ಅಂಥ ಸಂದರ್ಭದಲ್ಲಿ ರಾತ್ರಿಯ ಕಾರ್ಯಕ್ರಮವನ್ನು ಮಧ್ಯಾಹ್ನವೇ ಉತ್ತರ ಕ್ರಿಯೆ ಜೊತೆಗೇ ಕ್ಲಬ್ ಮಾಡುವುದು. ನಾನ್ ವೆಜ್, ವೆಜ್ ಎರಡೂ ಇರಬೇಕು, ಕ್ಯಾಟರಿಂಗ್ ವ್ಯವಸ್ಥೆ, ಕುಳಿತು ಉಣ್ಣಲು ಕಷ್ಟ, ಬಫೆ ಸಿಸ್ಟಮ್. ರಾತ್ರಿ ಮಾಡಬೇಕಾದ ಸಂಪ್ರದಾಯಗಳನ್ನು ಮಧ್ಯಾಹ್ನವೇ ಮಾಡಿಬಿಡುವುದು. ಇದರಿಂದ ಎಲ್ಲರಿಗೂ ಅನುಕೂಲ. ಇದು ನಿಧಾನವಾಗಿ ಜನಪ್ರಿಯವಾಗುತ್ತಿದೆ, ಇದಕ್ಕೇನೆನ್ನುತ್ತೀರಿ?

ಈ ಬದಲಾವಣೆಯನ್ನು ಒಪ್ಪಿಕೊಳ್ಳಬೇಕೇ, ಒಪ್ಪಿಕೊಳ್ಳಬಾರದೇ? ಅಥವಾ ಬದಲಾವಣೆಯೊಂದಿಗೆ made-snanaಸಂಪ್ರದಾಯದಲ್ಲೂ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವೇ? ಮಡೆಸ್ನಾನದ ವಿವಾದದ ನಂತರ ಪತ್ತೆ ಹಚ್ಚಲಾದ ಎಡೆಸ್ನಾನ ಈ ಬದಲಾವಣೆಯ ಉತ್ಪನ್ನವಾಗಿರಬಹುದೇ?

ಮಡೆಸ್ನಾನ ಪದ್ಧತಿಯ ಆಚರಣೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಂಭ್ರಮಿಸಿದರಂತೆ. ಪಟಾಕಿ ಸಿಡಿಸಿ ಸಂಭ್ರಮಿಸಿರುವುದಕ್ಕಿಂತಲೂ ಅಂಥ ಸಂಭ್ರಮಕ್ಕೆ ಕಾರಣವಾದ ಕಾಣದ ಮನಸ್ಸುಗಳ ಚಿತಾವಣೆಯನ್ನು ಅರ್ಥಮಾಡಿಕೊಳ್ಳಬೇಕು.

ಮಡೆಸ್ನಾನದ ಮನಸ್ಸುಗಳ ಮಲಿನತೆ ತೊಳೆಯಬೇಕು. ಅಂಥ ಪ್ರಕ್ರಿಯೆಗೆ ಈಗ ಕಾಲ ಪಕ್ವಗೊಂಡಿದೆ.

3 thoughts on “ಮಡೆಸ್ನಾನದ ಮನಸ್ಸುಗಳು ಮಲಿನವಾಗಿವೆ

  1. Jagadish G Chandra

    ಜಾಗತೀಕರಣ, ಉದಾರೀಕರಣವನ್ನು ಆವಾಹಿಸಿಕೊಂಡೇ ಬೆಳೆಯುತ್ತಿರುವಾಗ ಮತ್ತು ಅದು ಬದುಕಿನ ಅನಿವಾರ್ಯತೆಯಾಗಿರುವಾಗ ಆಚರಣೆಗಳು, ಪದ್ಧತಿಗಳು ಮಾತ್ರ ಯಾಕೆ ಇನ್ನೂ ಹೊಸತನ ಪಡೆದುಕೊಂಡಿಲ್ಲ? ಅಥವಾ ಹೊಸತನ ಪಡೆದುಕೊಳ್ಳಬಾರದು ಯಾಕೆ? ಮಡೆಸ್ನಾನ ಮಾಡದಿದ್ದರೆ ಸಂಪ್ರದಾಯಕ್ಕೆ ಅಪಚಾರ ಮಾಡಿದಂತಾಗುತ್ತದೆ ಎನ್ನುವ ಮನಸ್ಸುಗಳಿಗೆ ತಾವೇ ಆ ಪದ್ಧತಿಯನ್ನು ಇನ್ನೂ ಶಾಸ್ತ್ರೋಕ್ತವಾಗಿ ಮಾಡಿದರೆ ಹೆಚ್ಚಿನ ಪುಣ್ಯ ಸಂಪಾದನೆ ಮಾಡಬಹುದಲ್ಲವೇ? ಹಣ, ಕೀರ್ತಿ ಬೇಕಾದರೆ ಇಂಥ ಪುಣ್ಯವನ್ನು ಯಾಕೆ ಬೇಡವೆನ್ನಬೇಕು?
    ಚಾರಿತ್ರಿಕವಾಗಿ ಆಳುವ ವರ್ಗಗಳು ,ಜಾಗತಿಕವಾಗಿ ಮಾಡಿದ ಕೆಲಸಗಳಾದ, ಸಾಮಂತ ಶಾಹಿ ಪಳೆಯುಳಿಕೆಗಳ ಅನಿಷ್ಠಗಳನ್ನು ನಿರ್ಮೂಲನ ಮಾಡುವ ಕೆಲಸಗಳನ್ನು ಮಾಡಿ ಮುಗಿಸುಸ್ವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. Bಅದಲಾಗಿ ಆ ಅನಿಷ್ಠಗಳನ್ನೆ ತಮ್ಮ ರಾಜಕೀಯ ದಾಳಗಳನ್ನಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಇಂದು ಸಾಮಾಜಿಕ, ಆರ್ಥಿಕ ಹಾಗು ರಾಜಕೀಯ ಬದಲಾವಣೆಗಳನ್ನು ಈ ಕೊಳೆತು ನಾರುತ್ತಿರುವ ಬಂಡವಾಳಿ ವರ್ಗದಿಂದ ನಿರೀಕ್ಶಿಸುವುದು ವ್ಯರ್ಥ. ಈ ಕೆಲಸ ಕೂಡ ಪ್ರಗತಿಶೀಲ ದುಡಿಯುವವರ್ಗದ ಸಮಸಮಾಜ ನಿರ್ಮಾಣದ ಹೋರಾಟದ ಒಂದು ಅತ್ಯಂತ ಜರೂರಿ ಕರ್ತವ್ಯವಾಗಬೇಕಿದೆ.

    Reply
  2. mohammad irshad

    ಸಮಾಜದಲ್ಲಿ ಜನ ಸುಶಿಕ್ಷಿರರಾದರೂ, ಆಚಾರ ವಿಚಾರಗಳಲ್ಲಿ ಬದಲಾವಣೆ ಕಾಣುತ್ತಿದ್ದರೂ ಧಾರ್ಮಿಕ ನಂಬಿಕೆಗಳಿಂದ ಅವರನ್ನು ಹಸ್ತುಬದ್ದಿನಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೀತಾನೇ ಇದೆ. ಧಾರ್ಮಿಕ ಮೇಲ್ಪಂತಿಯನ್ನು ಕಾಪಾಡಿಕೊಳ್ಳುವ ದೃಷ್ಟಿಯಲ್ಲಿ ಕೆಲವೊಂದು ಆಚರಣೆಗಳ ಮೂಲಕ ಜನಸಾಮಾನ್ಯರನ್ನು ಮೌಡ್ಯ ನಂಬಿಕೆಯ ಗುಲಾಮರನ್ನಾಗಿ ಮಾಡುತ್ತಲೇ ಬಂದಿರುತ್ತಾರೆ ಈ ಮನಸ್ಥಿತಿಯ ಜನ. ಅಜಲು ಪದ್ದತಿ, ಮಡೆಸ್ನಾನ , ಮೊಹರಂ ದೇಹ ದಂಡನೆ ಜೊತೆಗೆ ಇನ್ನಿತರ ಆಚರಣೆಗಳು ಎಲ್ಲಾ ಧರ್ಮಗಳಲ್ಲೂ ಇನ್ನೂ ಜಾರಿಯಲ್ಲಿರುವುದು ವಿಪರ್ಯಾಸ. ಇಂಥಹಾ ನಂಬಿಕೆಗಳಿಗೆ ಕಟ್ಟುಬಿದ್ದವರಲ್ಲಿ ಸುಶಿಕ್ಷಿತರೂ ಇದ್ದಾರೆ. ಸಮಾಜ ಆಧುನಿಕತೆಯತ್ತ ಮುಖಮಾಡುತ್ತಿದ್ದರೂ ಈ ಎಲ್ಲಾ ನಂಬಿಕೆಗಳನ್ನು ಮೌಡ್ಯ ಅಂತ್ತ ಒಪ್ಪಿಕೊಳ್ಳುವ ಆಧುನಿಕ ಮನಸ್ಥಿತಿ ಜನರ ಕೊರತೆ ಇದೆ. ಹಿಂದಿನ ಕಾಲದಿಂದಲೂ ನಡೆದು ಬಂದ ಧಾರ್ಮಿಕ ಆಚರಣೆಗಳ ವಿರುದ್ಧ ಧ್ವನಿ ಎತ್ತಿದರೆ ದೇವರ ಅಪಕೃಪೆಗೆ ಪಾತ್ರರಾಗಬಹುದು ಎಂಬ ಭಯವೇ ಜನಸಾಮಾನ್ಯರನ್ನು ಮೌಡ್ಯತೆಯ ದಾಸರನ್ನಾಗಿ ಮಾಡುವುದು ಎಂದರೆ ತಪ್ಪಿಲ್ಲ. ಮೌಡ್ಯ ನಂಬಿಕೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದಕ್ಕಿಂತ ಅವರೇ ಸ್ವತಃ ಅರಿತುಕೊಳ್ಳುವಂತಾಗಬೇಕು…..

    Reply
  3. ಮಹೇಶ

    ಮಡೆ ಸ್ನಾನಕ್ಕಿಂತ ಮೊದಲು ಬ್ರಾಹ್ಮಣರ ಪ್ರತ್ಯೇಕ ಪಂಕ್ತಿಯನ್ನು ನಿಷೇಧಿಸುವ ಕಾಲ ಬಂದಿದೆ. ಬ್ರಾಹ್ಮಣರ ಪ್ರತ್ಯೇಕ ಪಂಕ್ತಿಯನ್ನು ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಕಾನೂನುಬದ್ಧವಾಗಿ ನಿಷೇಧಿಸಬೇಕಾಗಿದೆ.

    Reply

Leave a Reply to ಮಹೇಶ Cancel reply

Your email address will not be published. Required fields are marked *