ಪಾಕಿಸ್ತಾನದ ಮಾಧ್ಯಮವೂ, ಭಗತ್‌ಸಿಂಗ್ ಎನ್ನುವ ಶಹೀದರೂ, ಮತ್ತು ನೂರುಲ್ ಅಮಿನ್ ಮೆಂಗಲ್ ಎನ್ನುವ ಲಾಹೋರ್‌ನ ಸರ್ಕಾರಿ ಅಧಿಕಾರಿಯೂ..

– ಬಿ.ಶ್ರೀಪಾದ ಭಟ್

28 ನೇ ಸೆಪ್ಟೆಂಬರ್ 2012 : ಲಾಹೋರ್ : ಪಾಕಿಸ್ತಾನದ ಡಾನ್ ದಿನಪತ್ರಿಕೆಯ ವರದಿ

ಹುತಾತ್ಮ ಭಗತ್ ಸಿಂಗ್‌ರ 105 ನೇ ಜನ್ಮ ದಿನಾಚರಣೆಯನ್ನು ಲಾಹೋರನ ಎರಡು ಪ್ರಮುಖ ಸ್ಥಳಗಳಲ್ಲಿ ಆಚರಿಸಲಾಯಿತು. ಸುಮಾರು 24 ರಾಜಕೀಯ ಹಾಗು ರಾಜಕೀಯೇತರ ಸಂಘಟನೆಗಳನ್ನೊಳಗೊಂಡ “ಭಗತ್ ಸಿಂಗ್ ಮೆಮೋರಿಯಲ್ ಸೊಸೈಟಿ”ಯು ಈ ವಿಶೇಷ ಸಮಾರಂಭಗಳನ್ನು ಆಯೋಜಿಸಿತ್ತು. ಮೊದಲು ಇದನ್ನು “ದಾಯಲ್ ಸಿಂಗ್ ಕಾಲೊನಿ”ಯಲ್ಲಿ Bhagat_Singh_1922ನಡೆಸಲಾಯಿತು. ಆ ಸಂದರ್ಭದಲ್ಲಿ ಅಜೋಕ ತಂಡವು ನಿರ್ವಾನ್ ನದೀಮ್ ನಿರ್ದೇಶಿಸಿದ ಭಗತ್ ಸಿಂಗ್ ಕುರಿತಾದ ಚಲನಚಿತ್ರವನ್ನು ಪ್ರದರ್ಶಿಸಿತು. ನಂತರದ ಭಾಷಣಗಳಲ್ಲಿ ಭಾಷಣಕಾರರು ಭಗತ್ ಸಿಂಗ್‌ನ ಹಿರಿಮೆಯನ್ನು, ಆತನ ಶೌರ್ಯವನ್ನು, ವ್ಯಕ್ತಿತ್ವವನ್ನು ಕುರಿತಾಗಿ ವಿವರವಾಗಿ ಚರ್ಚಿಸಿದರು. ಭಗತ್ ಸಿಂಗ್ ಹಳ್ಳಿಯಾದ ಪಿಂಗಕ್ಕೆ ಸೇರಿದ ಇಕ್ಬಾಲ್ ವಿರ್ಕರವರು ಭಗತ್ ಸಿಂಗ್ ವಾಸಿಸುತ್ತಿದ್ದ ಮನೆಯಲ್ಲಿಯೇ ತಾವು ವಾಸಿಸುತ್ತಿದ್ದೇವೆ ಎಂದು ಹೇಳಿದರು. ಭಗತ್ ಸಿಂಗ್ ತಂದೆಯವರು ಕಟ್ಟಿಸಿದ ಶಾಲೆಯು ಇಂದು ಅತ್ಯಂತ ದುರಾವಸ್ಥೆಯಲ್ಲಿದೆ ಎಂದು ವಿಷಾದಿಸಿದರು. ನಂತರ ಲೇಬರ್ ಪಕ್ಷದ ಫರೂಕ್ ತಾರೀಖ್ ಮಾತನಾಡಿದರು.

ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿದ ಸ್ಥಳವಾದ “ಶಾದ್ಮನ್ ಚೌಕ್‌”ನ ಬಳಿ ಮತ್ತೊಂದು ಸಮಾರಂಭವನ್ನು ಆಯೋಜಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿ ನೆರೆದಿದ್ದರು. ಈ ಸಂದರ್ಭದಲ್ಲಿ ಭಗತ್ ಸಿಂಗ್ ಮೆಮೋರಿಯಲ್ ಸೊಸೈಟಿಯು “ಶಾದ್ಮನ್ ಚೌಕ್” ಅನ್ನು “ಭಗತ್ ಸಿಂಗ್ ಚೌಕ್” ಎಂದು ಪುನರ್ ನಾಮಕರಣ ಮಾಡಬೇಕೆಂದು, ಪಿಂಗ ಗ್ರಾಮದಲ್ಲಿರುವ ಭಗತ್ ಸಿಂಗ್ ಅವರ ಮನೆಯನ್ನು “ಭಗತ್ ಸಿಂಗ್ ಲಿಬರೇಶನ್ ಮ್ಯೂಸಿಯಂ”ನ್ನಾಗಿ ಪರಿವರ್ತಿಸಬೇಕೆಂದು, ಸಾರ್ವಜನಿಕರಿಂದ ಚಂದಾ ಹಣವನ್ನೆತ್ತಿ ಭಗತ್ ಸಿಂಗ್ ತಂದೆಯವರು ಸ್ಥಾಪಿಸಿದ ಶಾಲೆಯನ್ನು ಜೀರ್ಣೋದ್ಧಾರ ಮಾಡಬೇಕೆಂದು ಗೊತ್ತುವಳಿಯನ್ನು ಮಂಡಿಸಿತು. ಅದರ ಎಲ್ಲ ಸದಸ್ಯರು ಮತ್ತು ನೆರೆದಿದ್ದ ಜನಸಮೂಹ ಈ ನಿಲುವಳಿಯನ್ನು ಸಂಪೂರ್ಣವಾಗಿ ಅನುಮೋದಿಸಿತು.

(ಕೃಪೆ: ಡಾನ್ ದಿನ ಪತ್ರಿಕೆ)

29 ನೇ ಸೆಪ್ಟೆಂಬರ್ 2012 : ಲಾಹೋರ್ : ಪಾಕಿಸ್ತಾನದ ಡಾನ್ ದಿನಪತ್ರಿಕೆಯ ವರದಿ

ಜಿಲ್ಲಾ ಸಂಯೋಜಕ ಅಧಿಕಾರಿ ನೂರುಲ್ ಅಮಿನ್ ಮೆಂಗಲ್ ಶನಿವಾರದಂದು ಲಾಹೋರ್‌ನ ನಗರ ಜಿಲ್ಲಾ ಸರ್ಕಾರದ ಅಧಿಕಾರಿಗಳಿಗೆ ನಿರ್ದೇಶನವೊಂದನ್ನು ನೀಡಿದರು. ಆ ನಿರ್ದೇಶನದ ಪ್ರಕಾರ ಲಾಹೋರ್‌ನ “ಶಾದ್ಮನ್ ಚೌಕ್” ಅನ್ನುShadman-Square-Bhagat-Singh-Chowk-Lahore “ಭಗತ್ ಸಿಂಗ್ ಚೌಕ್” ಎಂದು ಪುನರ್ ನಾಮಕರಣ ಮಾಡಬೇಕೆಂಬುದಾಗಿತ್ತು. ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಅಧಿಕಾರಿ ನೂರುಲ್ ಅಮಿನ್ ಮೆಂಗಲ್, “ಭಗತ್ ಸಿಂಗ್ ಯಾರೆಂದು ನಿಮಗೆ ಗೊತ್ತಿದೆ. ಭಗತ್ ಸಿಂಗ್ ಬ್ರಿಟೀಷರ ವಿರುದ್ಧ ಹೋರಾಡುತ್ತ, ಕ್ರಾತಿಕಾರಿ ಘೋಷಣೆಗಳನ್ನು ಕೂಗುತ್ತ ಈ ಚೌಕಿನಲ್ಲಿ (ಶಾದ್ಮನ್ ಚೌಕ್) ಹುತಾತ್ಮರಾದರು. ಪಾಕಿಸ್ತಾನದ ಸಂವಿಧಾನದ ಪ್ರಕಾರ ಪಾಕಿಸ್ತಾನದ ನಾಗರಿಕರು ಅಂದರೆ ಮುಸ್ಲಿಂರು, ಸಿಖ್ಖರು, ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಎಲ್ಲರೂ ಈ ಚೌಕನ್ನು ಭಗತ್‌ಸಿಂಗ್ ಹೆಸರಿನಲ್ಲಿ ನಾಮಕರಣ ಮಾಡುವುದನ್ನು ಗೌರವಿಸಬೇಕು, ಯಾರೂ ವಿರೋಧಿಸಬಾರದು, ಏಕೆಂದರೆ ಮೇಲಿನ ಎಲ್ಲ ನಾಗರಿಕರಿಗೆ ಸಂವಿಧಾನಬದ್ಧವಾದ ಆಧಿಕಾರವಿದೆ,” ಎಂದು ಹೇಳಿದರು. ನಂತರ ತಮ್ಮ ಆಧೀನ ಅಧಿಕಾರಿಗಳಿಗೆ ಈ ಕ್ಷಣಕ್ಕೆ ಜಾರಿಗೆ ಬರುವಂತೆ ಪತ್ರಿಕೆಗಳಿಗೆ ಇದರ ಕುರಿತಾಗಿ ಸುದ್ದಿಯನ್ನು ಬಿಡುಗಡೆ ಮಾಡಬೇಕೆಂದೂ, ಈ ಜಾಗದಲ್ಲಿ ಭಗತ್ ಸಿಂಗ್ ಅವರ ಹೆಸರಿನ ನಾಮಫಲಕವನ್ನು ಹಾಕಿಸಬೇಕೆಂದೂ ಆದೇಶಿಸಿದರು. ಮುಂದುವರೆದು ಭಗತ್ ಸಿಂಗ್ ಚೌಕ್ ಎಂದು ಪುನರ್ ನಾಮಕರಣ ಮಾಡುವುದರ ಮೂಲಕ ಹುತಾತ್ಮ ಭಗತ್ ಸಿಂಗ್‌ರ ಚಿರಸ್ಮರಣೆಯನ್ನು ಮಾಡಿದಂತಾಗುತ್ತದೆ ಮತ್ತು ಈ ಏಷ್ಯಾ ಖಂಡಕ್ಕೆ ಪಾಕಿಸ್ತಾನದ ಪರವಾಗಿ ಭಗತ್ ಸಿಂಗರ ಚೈತನ್ಯಕ್ಕೆ ಗೌರವಿಸಿದಂತಾಗುತ್ತದೆ ಎಂದರು ಮೆಂಗಲ್.

(ಕೃಪೆ: ಡಾನ್ ದಿನ ಪತ್ರಿಕೆ)

ಸಹಜವಾಗಿ ಇದರ ಕುರಿತಾಗಿ ಪರ, ವಿರೋಧ ಚರ್ಚೆಗಳು ನಡೆಯಿತು. ಇಂದಿಗೂ ಈ ವಿವಾದವು ಮುಂದುವರೆಯುತ್ತಿದೆ. dawnnewsಆದರೆ ಕುತೂಹಲ ಅಂಶವೆಂದರೆ ಲಾಹೋರ್‌ನ ಚೌಕವೊಂದಕ್ಕೆ ಹುತಾತ್ಮ ಭಗತ್ ಸಿಂಗ್‌ರ ಹೆಸರನ್ನು ಇಡಬೇಕೆಂಬುದರ ಪರವಾಗಿ ವಾದಿಸುವವರ ಪ್ರಮಾಣವೇ ಹೆಚ್ಚಾಗಿತ್ತು. ಇದರ ವಿರೋಧಿಸುವವರ ಶೇಕಡಾವಾರು ಸಂಖ್ಯೆ ಬಹಳ ಕಡಿಮೆಯಿತ್ತು. ಎಂದಿನಂತೆ ನಮ್ಮ ದೇಶೀಯ ಮಾಧ್ಯಮಗಳು ಇದಕ್ಕೆ ಹೆಚ್ಚಿನ ಒತ್ತನ್ನು ನೀಡಲಿಲ್ಲ. ಬಹುಶಃ ’ದ ಹಿಂದೂ’ ಪತ್ರಿಕೆಯಲ್ಲಿ ಮಾತ್ರ ಇದರ ಕುರಿತಾದ ವರದಿಯೊಂದು ಪ್ರಕಟವಾಯಿತು. ಎರಡನೇಯದಾಗಿ ಭಗತ್ ಸಿಂಗ್‌ರವರ 100 ನೇ ಜನ್ಮೋತ್ಸವದ ಅಂಗವಾಗಿ 2007 ರಲ್ಲಿ ಆಗಿನ ಸ್ವಾತಂತ್ರ್ಯ ಚಳುವಳಿ ಮತ್ತು ಶಹೀದ್ ಭಗತ್ ಸಿಂಗ್ ಕುರಿತಾಗಿ ಸರಣಿ ನಾಟಕೋತ್ಸವಗಳು ಜರಗಿದವು. ಅದು ಇಂದಿಗೂ ಚಾಲ್ತಿಯಲ್ಲಿದೆ. 2012 ರ ವರ್ಷವನ್ನು ಭಗತ್‌ಸಿಂಗ್‌ರವರ 105 ನೇ ಜನ್ಮಾಚರಣೆಯನ್ನಾಗಿ ಪಾಕಿಸ್ತಾನದಲ್ಲಿ ಆಚರಿಸಲಾಗುತ್ತಿದೆ.

ಅಕ್ಟೋಬರ್ 9, 2012 : ಲಾಹೋರ್ : ಪಾಕಿಸ್ತಾನದ ಡಾನ್ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ “ಆಶಾರ್ ರೆಹಮಾನ” ಅವರ ಸಂಪಾದಕೀಯದ ಸಾರಾಂಶ

ಪಾಕಿಸ್ತಾನದ ಸಮಸ್ತ ನಾಗರಿಕರಾದ ಮುಸ್ಲಿಂ, ಹಿಂದೂ, ಸಿಖ್, ಕ್ರಿಶ್ಚಿಯನ್ ಬಾಂಧವರಿಗೆ ಸಮಾನವಾದ ಹಕ್ಕುಗಳಿವೆ…” ಇದು ಖೈದ್ ಎ ಅಜಮ್‌ನ ಆಗಸ್ಟ್ 11 ರ ಘೋಷಣೆಯಲ್ಲ, ಬದಲಾಗಿ ಲಾಹೋರ್‌ನ ಜಿಲ್ಲಾ ಸಂಯೋಜಕ ಅಧಿಕಾರಿ ನೂರುಲ್ ಅಮಿನ್ ಮೆಂಗಲ್‌ರವರ ಉದ್ಘೋಷಣೆ. ಈ ಡಿಸಿಒ ಮೆಂಗೆಲ್ ಅವರ ಹೇಳಿಕೆ ನೇರವಾಗಿ ಅಲ್ಲಿನ ಸೇನೆಗೆ ಸಂಬಂಧಿಸಿತ್ತು. ಮೆಂಗಲ್ ಅವರು “ಭಗತ್ ಸಿಂಗ್ ಬ್ರಿಟೀಷ್ ಸೇನೆಯ ವಿರುದ್ಧ ಹೋರಾಡಿದ ಹೋರಾಟಗಾರ, ಕ್ರಾಂತಿಕಾರಿ” ಎಂದು ಹೇಳಿದರು. ಈ ವರ್ಷವು ನಾವು ಅಲಕ್ಷಿಸಿದಂತಹ ವ್ಯಕ್ತಿತ್ವಗಳನ್ನು ಮರಳಿ ನಮ್ಮದಾಗಿಸಿಕೊಳ್ಳುವ ವರ್ಷವಾಗಿದೆ. ಕೆಲವು ತಿಂಗಳುಗಳ ಹಿಂದೆ ಪಾಕಿಸ್ತಾನದ ರಾಜ್ಯವು ಸಾಹಿತಿ ಸಾದತ್ ಹಸನ್ ಮಂಟೋ ಅವರಿಗೆ ಗೌರವ ಸಮರ್ಪಣೆಯನ್ನು ಸಲ್ಲಿಸಿತು, ಈಗ ಲಾಹೋರನ ಅಧಿಕಾರಿಯೊಬ್ಬರು ಭಗತ್ ಸಿಂಗ್ ಹೆಸರನ್ನು ಇಲ್ಲಿನ ಚೌಕ ಒಂದಕ್ಕೆ ನಾಮಕರಣ ಮಾಡುತ್ತಿದ್ದಾರೆ. ಆದರೆ ಈ ಲಾಹೋರ್ ಪಟ್ಟಣವು ಇನ್ನೂ ಅನೇಕ ಮುಸ್ಲೀಮೇತರ ಹೀರೋಗಳನ್ನು ನೆನಸಿಕೊಳ್ಳಬೇಕಾಗಿದೆ. ಇಂದಿನ ಕಠಿಣವಾದ ಸಂಕೀರ್ಣ ಪರಿಸ್ಥಿತಿಯಲ್ಲಿ ಮೌಲ್ಯಗಳ, ಆತ್ಮಸಾಕ್ಷಿಯ ಪ್ರತಿಪಾದಕರು ಇತಿಹಾಸದ ನಾಯಕರ ನೆನಪಿಗಾಗಿ ದಾರಿಗಳ ಹುಡುಕಾಟದಲ್ಲಿದ್ದಾರೆ.

ಇತಿಹಾಸದ ಅಂಚಿನಲ್ಲೇ ಬದುಕಿದ್ದ ಆದರೆ ಆಧುನಿಕ ಲಾಹೋರಿನ ಪಿತಾಮಹನೆಂದೇ ಕರೆಯಲ್ಪಡುವ, “ಗಂಗಾರಾಮ್” ಅವರನ್ನು ಇತ್ತೀಚಿನ ದಿನಗಳಲ್ಲಿ ನೆನಪಿಸಿಕೊಳ್ಳುತ್ತ ಕೈಯಲ್ಲಿ ಹೂವಿನ ಗುಚ್ಚನ್ನು ಹಿಡಿದು ರಾವಿ ರಸ್ತೆಯಲ್ಲಿರುವ ಗಂಗಾರಾಮ್ ಅವರ ಮೆಮೋರಿಯಲ್ ಬಳಿ ಆಗಮಿಸುತ್ತಿರವ ಕೆಲವು ಜನರೇ ನಮಗೆ ಮುಂದಿನ ದಿನಗಳ ಭವಿಷ್ಯದ ನೆಮ್ಮದಿಯನ್ನು ಮೂಡಿಸುತ್ತಿದ್ದಾರೆ. … ಹಿಂದುಸ್ತಾನವನ್ನು ಆಳಿದ ಮುಸ್ಲಿಂ ರಾಜರುಗಳ ವೈಭವೋಪೇತ ರಾಜ್ಯಾಡಳಿತವನ್ನು ನೆನೆಪಿಸುವ ಅಸಂಖ್ಯಾತ ಕತೆಗಳ ತಳದಲ್ಲಿ ಹೂತು ಹೋಗಿರುವ “ಮಹಾರಾಜ ರಣಜಿತ ಸಿಂಗ್” ಇಂದು ಕೆಲವರ ಸಂಭಾಷಣೆಗಳಲ್ಲಿ, ಅಪರೂಪಕ್ಕೊಮ್ಮೆ ದಿನಪತ್ರಿಕೆಗಳ ಕಾಲಂನಲ್ಲಿ ಒಬ್ಬ ಸ್ವಯಂಅಡಳಿತ ಮತ್ತು ಪಾವಿತ್ರ್ಯವನ್ನು ಪ್ರತಿಪಾದಿಸಿದ ಆದರ್ಶ ಮಹಾರಾಜನಾಗಿ ಜೀವಂತವಾಗಿದ್ದಾರೆ. ಮುಸ್ಲಿಂರಲ್ಲೇ ದೋಷಪೂರಿತ ಮತ್ತು ದೋಷರಹಿತರೆಂದು ವರ್ಗೀಕರಿಸುತ್ತಿದ್ದಾರೆ. ಅಧಿಕಾರಕ್ಕಾಗಿ ನಡೆದ ಘರ್ಷಣೆಯಲ್ಲಿ ಸೋತಂತಹ, ತನ್ನ ಪ್ರಭಾವಶಾಲೀ ಸಹೋದರ ಔರಂಗಜೇಬ ಅವರ ನೆರಳಿನಿಂದ ಹೊರಬರಲು ಶ್ರಮಪಡುತ್ತಿದ್ದ, ಲಾಹೋರ್‌ನ ಪ್ರವಾದಿ ಮಿಯಾ ಮಿರ್ ಅವರ ಹತ್ತಿರದವರಾಗಿದ್ದ, ದಾರಾ ಶಿಕೋಹ ಅವರನ್ನು ಮುಸ್ಲಿಂ ದೊರೆಗಳಲ್ಲೇ ಕಲ್ಮಶರಹಿತ ದೊರೆಯೆಂದು, ಇಂದಿನ ಪಾಕಿಸ್ತಾನದ ಮೊದಲ ಕನಸುಗಾರನೆಂದು ಅನೇಕರು ಇಂದಿಗೂ ನೆನಪಿಸಿಕೊಳ್ಳ್ಳುತ್ತಾರೆ ಹಾಗೂ ಉಲ್ಲೇಖಿಸುತ್ತಾರೆ. ದಾರಾ ಶಿಕೋಹ ಅವರ ಸೌಮ್ಯವಾದಿ, ಆಧ್ಯಾತ್ಮದ ವ್ಯಕ್ತಿತ್ವವು ಬಹುಜನರಲ್ಲಿ ಅವರನ್ನು ಪ್ರೀತಿಯಿಂದ ನೆನಪಿಸಿಕೊಳ್ಳುವಂತೆ ಮಾಡಿದೆ.

ದೇಶ ವಿಭಜನೆಯ ನಂತರದ ಕಾಲಘಟ್ಟದಲ್ಲಿ ಸಿಖ್ ಸಮುದಾಯದ ಕುರಿತಾಗಿ ಚಾಲ್ತಿಯಲ್ಲಿದ್ದ ತಿರಸ್ಕಾರದ, ದ್ವೇಷದ ವಾತಾವರಣ ಬಹುಬೇಗ ತಿಳಿಯಾಗುತ್ತಿದೆ. ಬದಲಾಗಿ ಸಿಖ್ಖರನ್ನು ತಮ್ಮಿಂದ ಬೇರ್ಪಟ್ಟ ದಾಯಾದಿಗಳೆಂದೇ ವಾಘಾದ ಈ ಬದಿಯ ಜನ ಭಾವಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಅತಿಥಿ ಪ್ರವಾಸಗಾರರಾದ ಸರ್ದಾರರು ಮತ್ತು ಅವರ ಲಾಹೋರಿ ಅತಿಥೇಯರ ನಡುವಿನ ಸಂಬಂಧ ಮತ್ತಷ್ಟು ಬಲಗೊಂಡಿದೆ. ತನ್ನ ಕ್ರಾಂತಿಕಾರಿ ಚಿಂತನೆಗಳು, ಸ್ವಾತಂತ್ರ್ಯ ಹೋರಾಟಗಾರನಾಗಿ ತರುಣ ವಯಸ್ಸಿನಲ್ಲಿಯೇ ಹುತಾತ್ಮನಾದ ಭಗತ್ ಸಿಂಗ್‌ನ ಜನಪ್ರಿಯತೆಗೆ ಈ ಸರ್ದಾರ ಮತ್ತು ಲಾಹೋರಿಗಳ ನಡುವಿನ ಇತ್ತೀಚಿನ ಸೌಹಾರ್ದಯುತ ಸಂಬಂಧಗಳೂ ಸಹ ಕಾರಣವಿರಬಹುದು. ಆದರೂ ಭಗತ್ ಸಿಂಗ್ ಹೆಸರಿನ ಅಧಿಕೃತ ಸ್ಮಾರಕವು ನಿಜಕ್ಕೂ ಒಂದು ಮೈಲಿಗಲ್ಲು.

ಮತ್ತೊಂದು ವಿಶೇಷವೇನೆಂದರೆ ಈ ಭಗತ್ ಸಿಂಗ್ ಸ್ಮಾರಕದ ಪ್ರೇರಕ ಶಕ್ತಿಯಾದ ನೂರ್ ಅಮಿನ್ ಮೆಂಗಲ್ ಪಂಜಾಬ್ ಪ್ರಾಂತ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊತ್ತ ಮೊದಲ ಬಲೂಚಿಸ್ತಾನ ಮೂಲದ ಅಧಿಕಾರಿ. ಅಧಿಕಾರ ವಹಿಸಿಕೊಂಡ ಪ್ರಥಮ ದಿನಗಳಲ್ಲೇ ಪಂಜಾಬ್‌ನ ಹಣ್ಣಿನ ಬೀದಿಗಳಲ್ಲಿ ಮೇಲ್ವಿಚಾರಣೆ ನಡೆಸುತ್ತಿದ್ದಂತಹ ಸಂದರ್ಭದಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಈ ಬಲೂಚಿಸ್ತಾನದ ಅಧಿಕಾರಿ ಮೆಂಗಲ್ ಅಲ್ಲಿನ ಮೇಲ್ವಿಚಾರಕರಿಗೆ ಹೇಳಿದ್ದು ಎಲ್ಲಾ ಖುರ್ಚಿಗಳೂ ಒಂದೇ ಬಣ್ಣದ್ದಾಗಿದ್ದರೆ ಮಾತ್ರ ಈ ಹಣ್ಣಿನ ಬೀದಿಯ ಘನತೆ ಹೆಚ್ಚುತ್ತದೆ.

ಕಡೆಗೆ ಪ್ರಜಾಪ್ರಭುತ್ವದ ಫಲವು ಅಂಚಿನಲ್ಲಿರುವ ಜನರಿಗೆ ತಲುಪತೊಡಗಿದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಭವಿಷ್ಯವಿದೆ ಎಂದು ನಾವು ನಂಬಬಹುದು. ಏಕೆಂದರೆ ಬಹುಸಂಖ್ಯಾತರ ಆಸೆಗಳಿಗಾಗಿ ಪ್ರಜಾಪ್ರಭುತ್ವವು ರೂಪಿತಗೊಂಡಿರುವುದಿಲ್ಲ. ಬದಲಾಗಿ ಅಲ್ಪಸಂಖ್ಯಾತರಿಗೆ ಮಾತನಾಡುವ ಅವಕಾಶವನ್ನು ಕಲ್ಪಿಸಿಕೊಡಲು, ಅದರಲ್ಲೂ ನಿರ್ಭೀತಿಯಿಂದ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಪ್ರಜಾಪ್ರಭುತ್ವವು ರೂಪಿತಗೊಂಡಿರುತ್ತದೆ. ಅಲ್ಪಸಂಖ್ಯಾತರ ಭಾವನೆಗಳನ್ನು ಗೌರವಿಸುವುದಕ್ಕಾಗಿ ಪ್ರಜಾಪ್ರಭುತ್ವದಲ್ಲಿ ಅನುಕೂಲಕರ ಜಾಗವಿರಲೇಬೇಕು.

( ಕೃಪೆ: ಡಾನ್ ದಿನ ಪತ್ರಿಕೆ )

ಮೇಲಿನ ಮಾತುಗಳು, ನಿದರ್ಶನಗಳು ನಡೆಯುತ್ತಿರುವುದು ಪಕ್ಕದ ಮೂಲಭೂತವಾದಿ ದೇಶವೆಂದು ಕುಖ್ಯಾತಿ ಗಳಿಸಿದ ಪಾಕಿಸ್ತಾನದಲ್ಲಿ. Shadman-Square-Bhagat-Singh-Chowkಇದು ನಮ್ಮ ಘನ ದೇಶಪ್ರೇಮಿಗಳಿಗೆ, ಕೂಗುಮಾರಿ ಸಂಘ ಪರಿವಾರಕ್ಕೆ ಅರ್ಥವಾಗುತ್ತದೆಯೇ? ಖಂಡಿತವಾಗಿಯೂ ಇಲ್ಲ. ದಶಕಗಳಿಂದ ಮುಚ್ಚಿದ ಮನಸ್ಸಿನಿಂದ ಅಲ್ಪಸಂಖ್ಯಾತರ ವಿರುದ್ಧ ಭಾವಾವೇಶದ ಧ್ವನಿಯಿಂದ, ಧಾರ್ಮಿಕ ಸಂಕೇತಗಳನ್ನು ದುರ್ಬಳಕೆ ಮಾಡಿಕೊಂಡು ದ್ವೇಷದ ವಿಷಬೀಜ ಬಿತ್ತುತ್ತಿರುವ ಈ ಫ್ಯಾಸಿಸ್ಟ್ ಸಂಘ ಪರಿವಾರಕ್ಕೆ “ನೂರ್ ಅಮಿನ್ ಮೆಂಗಲ್” ಗೋಚರಿಸುವುದಿಲ್ಲ. ಏಕೆಂದರೆ 1925 ರಂದು ಸ್ವಾತಂತ್ರ್ಯ ಚಳುವಳಿ ತೀವ್ರವಾಗಿದ್ದಂತಹ ಸಂದರ್ಭದಲ್ಲಿ ನಾಗಪುರದಲ್ಲಿ ಯಾರೋ ಪುಂಡರು ಅಲ್ಲಾಹೋ ಅಕ್ಬರ್ ಎಂದು ಕೂಗುತ್ತ ಹಿಂದೂ ಡಾಕ್ಟರ್ ಮನೆಯ ಮೇಲೆ ದಾಳಿ ನಡೆಸಿದ್ದಾರೆ ಎಂದು ಪುಕಾರೆಬ್ಬಿಸಿ ಕೋಮುಗಲಭೆಗಳಿಗೆ ನಾಂದಿ ಹಾಡಿದ ಸಂಘಪರಿವಾರ 87 ವರ್ಷಗಳ ನಂತರವೂ ಇಂದಿಗೂ ಅನ್ಯ ಮತ ದ್ವೇಷದ ಮನಸ್ಥಿತಿಯಿಂದ ಹೊರ ಬಂದಿಲ್ಲ. ಅತ್ಯಂತ ಕ್ರೂರವಾಗಿ, ನೀಚತನದಿಂದ “ಮಿಯಾ ಮುಷರಫ್” ಎಂದು ವ್ಯಂಗವಾಗಿ ಮಾತನಾಡುತ್ತ ಜನರ ಭಾವನೆಗಳನ್ನು ಕೆರಳಿಸುತ್ತಿರುವ ಫ್ಯಾಸಿಸ್ಟ್ ಮುಖ್ಯಮಂತ್ರಿ ನರೇಂದ್ರ ಮೋದಿ ಇಂದಿಗೂ ಆರೆಸಸ್‌ನ ಅಚ್ಚುಮೆಚ್ಚಿನ ಸ್ವಯಂಸೇವಕ ಮತ್ತು ಮಾಧ್ಯಮಗಳ ಪ್ರಕಾರ ಭವಿಷ್ಯದ ಪ್ರಧಾನ ಮಂತ್ರಿ. ಕೋಮುವಾದಿ ಸಂಘಪರಿವಾರ ಮತ್ತು ಬಲಪಂಥೀಯ ಪತ್ರಕರ್ತರು ಮತ್ತು ಚಿಂತಕರು ಕೇವಲ ತಾವಷ್ಟೇ ಕೋಮುಭಾವನೆಗಳ ಗೂಡಾಗಿಲ್ಲ, ಜೊತೆಗೆ ಈ ದೇಶದ ಮಧ್ಯಮವರ್ಗವನ್ನು ಇದಕ್ಕೆ ಬಲಿಯಾಗಿಸಿದ್ದಾರೆ.

ಇನ್ನು ನಮ್ಮ ಕೃತಕ ಸೆಕ್ಯುಲರ್ ಚಿಂತನೆಗಳೂ ಸಹ ಅಷ್ಟೇ. ಬಿಜೆಪಿಯಲ್ಲಿರುವವರೆಗೂ ಆತ/ಅವಳು ಕೋಮುವಾದಿ. ಬಿಜೆಪಿ ತೊರೆದ ಮರುದಿನದಿಂದ ಅವರೆಲ್ಲ “ಸೆಕ್ಯುಲರ್”. ಆಗ ಕೆಜೆಪಿಗಳು, ಬಿಎಸ್‌ಆರ್‌ಗಳು ಜಾತ್ಯಾತೀತ ಪಕ್ಷವಾಗಿಬಿಡುತ್ತವೆ. ಇದೆಂತಹ ಹಿಪೋಕ್ರೆಸಿ ಎಂದು ಅಚ್ಚರಿ ಪಡುವಂತೇನಿಲ್ಲ. ಎಲ್ಲವೂ ಪ್ರಜ್ಞಾಪೂರ್ವಕವಾಗಿಯೇ ನಡೆಯುತ್ತಿರುತ್ತವೆ.

6 thoughts on “ಪಾಕಿಸ್ತಾನದ ಮಾಧ್ಯಮವೂ, ಭಗತ್‌ಸಿಂಗ್ ಎನ್ನುವ ಶಹೀದರೂ, ಮತ್ತು ನೂರುಲ್ ಅಮಿನ್ ಮೆಂಗಲ್ ಎನ್ನುವ ಲಾಹೋರ್‌ನ ಸರ್ಕಾರಿ ಅಧಿಕಾರಿಯೂ..

 1. ಪ್ರಜೆ

  ಲೇಖನದ ಕೊನೆಯ ಸಾಲುಗಳು ಅಕ್ಷರಶಃ ನಿಜ. ಇದೇ ನರೇಂದ್ರ ಮೋದಿ ಕಾಂಗ್ರೆಸ್​ನಲ್ಲಿದ್ದಿದ್ದರೆ `ಸೋ ಕಾಲ್ಡ್​ ಸೆಕ್ಯುಲರ್​ವಾದಿ`ಗಳಿಗೆ ವಿಲನ್​ನಂತೆ ಕಾಣಿಸುತ್ತಿರ್ಲಿಲ್ಲ. ಬೇಕಿದ್ದರೆ ಕಾಂಗ್ರೆಸ್​ ಸರ್ಕಾರ ಸಿಖ್​ ನರಮೇಧ ನಡೆಸಿದ ಸಂದರ್ಭ ಈ `ಚಿಂತಕರ` ಪ್ರತಿಕ್ರಿಯೆಗಳು ಹೇಗಿದ್ದವು ಅನ್ನೋದನ್ನ ನೆನಪಿಸಿಕೊಳ್ಳಿ. ಅರವಿಂದ ಕೇಜ್ರೀವಾಲನನ್ನು ಶತಾಯ ಗತಾಯ ವಿರೋಧಿಸುತ್ತಿದ್ದ ಮಂದಿ, ನರೇಂದ್ರ ಮೋದಿ ವಿರುದ್ಧ ಆತ ಆಪಾದನೆ ಮಾಡಿದ ತಕ್ಷಣ ಆತನ ನಿಲುವುಗಳನ್ನು ಅಪ್ಯಾಯತೆಯಿಂದ ಅನುಮೋದಿಸಿದ್ದು ಇಂಥದ್ದೇ ಮನೋಭಾವವಲ್ಲವೇ? ಮನಸ್ಸಿಗೆ ಹಾಕಿಕೊಂಡಿರೋ ಎಡ-ಬಲಗಳ ಕನ್ನಡಕಗಳನ್ನು ತೆಗೆದಿಟ್ಟು ನೋಡಿದರೆ ವಾಸ್ತವಗಳು ಸ್ಪಷ್ಟವಾದಾವು.

  Reply
 2. Naveen

  ಭಟ್ಟರಿಗೆ ಸಂಘ ಪರಿವಾರದ ಮೇಲೆ ಅಷ್ಟೇಕೆ ಕೋಪವೋ ಕಾಣೆ. ಕೋಪ ಇದ್ದರೂ ಪರವಾಗಿಲ್ಲ ಮೇಲಿನ ಲೇಖನ ಬರೆಯುವ ಮೊದಲು ಸ್ವಲ್ಪ ಗೂಗಲ್ ಸರ್ಚ್ ಮಾಡಿ ಬರೆದಿದ್ದರು ಸಾಕಾಗಿತ್ತು. ಏನು ಭಗತ್ ಸಿಂಘ್ರ ಹೆಸರನ್ನು ಲಾಹೋರಿನ ಸರ್ಕಲ್ಲಿಗೆ ಇಟ್ಟೆ ಬಿಟ್ಟರೇನೋ ಅನ್ನುವವರ ತರಹ ಬರೆದಿದ್ದರೆ ಅಲ್ಲಿ ನೋಡಿದ್ರೆ ವಿಷಯ ಕೋರ್ಟ್ ಮೆಟ್ಟಿಲೆರಿದ್ದು ವಿಷಯವನ್ನೇ ಕೈ ಬಿಡಲಾಗಿದೆ. ಸಂಘ ಪರಿವಾರವನ್ನು ಕೈ ಬಿಟ್ಟು ಪಾಕಿಸ್ತಾನದ ಪತ್ರಿಕೆಗಳು ಅಂತ ವಿಷಮ ಪರಿಸ್ಥಿತಿಯಲ್ಲಿಯೂ ಸ್ವಲ್ಪವೂ ರಾಜಿಯಾಗದೆ ಹೇಗೆ ಸರ್ಕಾರ ಹಾಗೂ ಮೂಲಭೂತವಾದಿಗಳನ್ನು ಕಠೋರ ಶಬ್ದಗಳಲ್ಲಿ ವಿಮರ್ಶಿಸುತ್ತಿವೆ ಅದೇ ಜಗತ್ತಿನ ಅತಿ ದೋಡ ಪ್ರಜಾಪ್ರಭುತ್ವವಾದ ನಮ್ಮ ದೇಶದಲ್ಲಿ ಹೇಗೆ ಆಳುವ ಪಕ್ಷದೊಂದಿಗೆ ರಾಜಿಯಾಗುತ್ತಿವೆ ಎಂದು ಹೇಳಿದ್ದರೆ ಚೆಕ್‌ನ್ನಾಗಿತ್ತು.

  Reply
 3. bhatmahesht

  ಧರ್ಮ ದ್ವೇಷದ ಆಧಾರದ ಮೇಲೆ ನಿರ್ಮಿತವಾಗಿ, ಇತಿಹಾಸವನ್ನು ತಿರುಚಿ, ಜನರಲ್ಲಿ ತೀವ್ರವಾದ ಮೂಲಭೂತವಾದವನ್ನು ಉಂಟುಮಾಡಿ , ದಶಕಗಳ ಕಾಲ ಅದರ ದುಷ್ಪರಿಣಾಮವನ್ನು ಅನುಭವಿಸಿ, ಪಾಡು ಪಟ್ಟು, ಅದರ ಮೂಲಕ ಕಲಿತ ಪಾಠವೇ ಇಂದು ಪಾಕಿಸ್ತಾನದ ಕೆಲವು ಜನರು ಭಗತ್ ಸಿಂಗರ ಸಾಧನೆಗಳನ್ನು ಧರ್ಮಾತೀತವಾಗಿ ಒಪ್ಪಿಕೊಳ್ಳಲು ಮುಂದುವರಿಯುತ್ತಿರುವುದು.

  Reply
 4. Shekhar (@angadiindu)

  ಸಂಘ ಪರಿವಾರವನ್ನು ಬಯ್ಯುವ ನೆಪದಲ್ಲಿ, ಮುಂಬೈ ದಾಳಿಗಳ ರೂವಾರಿ ಹಾಗೂ ಭಯೋತ್ಪಾದಕರೂ ಆದ ಹಫೀಜ್ ಸಯೀದ್ ಹಾಗೂ ದಾವೂದ್ ಇಬ್ರಾಹಿಂ ರನ್ನು ತನ್ನ ಹತ್ತಿರ ರಾಜ ಮರ್ಯಾದೆಯಿಂದ ಇಟ್ಟುಕೊಂಡು ಭಾರತಕ್ಕೆ ಚಳ್ಳೆ ಹಣ್ಣು ತಿನ್ನಿಸಿತ್ತಿರುವ ಪಾಕಿಸ್ತಾನದ ಬಗ್ಗೆ ಇಷ್ಟೇಕೆ ಪ್ರೀತಿ ?

  Reply
 5. omi

  “ಇದೆಂತಹ ಹಿಪೋಕ್ರೆಸಿ ಎಂದು ಅಚ್ಚರಿ ಪಡುವಂತೇನಿಲ್ಲ. ಎಲ್ಲವೂ ಪ್ರಜ್ಞಾಪೂರ್ವಕವಾಗಿಯೇ ನಡೆಯುತ್ತಿರುತ್ತವೆ”. gr8 lines 🙂

  Reply

Leave a Reply

Your email address will not be published.