Daily Archives: December 20, 2012

ಪ್ರಜಾ ಸಮರ – 14 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಮಧ್ಯಭಾರತದ ಕೆಲವು ಸರ್ಕಾರಗಳು ಅಭಿವೃದ್ಧಿಯ ನೆಪದಲ್ಲಿ ಅಮಾಯಕರನ್ನು ಶೋಷಿಸುತ್ತಾ ಇರುವ ಇತಿಹಾಸವನ್ನು ಅರಿಯಬೇಕಾದರೆ ನೀವು ದಂಡಕಾರಣ್ಯ, ದಂತೇವಾಡ, ಬಸ್ತಾರ್ ಅರಣ್ಯ ಪ್ರದೇಶಕ್ಕೆ ಹೋಗಬೇಕು. ಹೊರಜಗತ್ತಿನ ಪಾಲಿಗೆ ಶಾಂತಿ ಮಂತ್ರ ಜಪಿಸುತ್ತಾ ಮುಖವಾಡ ಹೊತ್ತು ನಿಂತಿರುವ ಈ ಸರ್ಕಾರಗಳ ದ್ವಂದ್ವ ನೀತಿ, ನಾಚಿಕೆ ಮತ್ತು ನೈತಿಕತೆಯಿಲ್ಲದ ನಡುವಳಿಕೆ ಎಲ್ಲವೂ ಅಲ್ಲಿ ನಿಮ್ಮೆದುರು ಅನಾವರಣಗೊಳ್ಳುತ್ತವೆ.

ಕಣ್ಣೆದುರಿಗೆ ಕಾಣುತ್ತಿರುವ ಒಂದು ಜ್ವಲಂತ ಸಮಸ್ಯೆಯನ್ನು ಕಳೆದ ಮೂರು ದಶಕಗಳಿಂದ ಪರಿಹರಿಸಲಾಗದ ಸರ್ಕಾರದ ವೈಫಲ್ಯಗಳು ಮತ್ತು ಗುಪ್ತವಾಗಿ ಹಿಂಸೆಯ ಹಾದಿ ತುಳಿದಿರುವ ಸರ್ಕಾರದ ನೀತಿಗಳು ನಾಗರಿಕ ಜಗತ್ತಿಗೆ ಅಸಹ್ಯ ಮೂಡಿಸುತ್ತವೆ. ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳು ಬಡವರು ಎಂದು ವಾಖ್ಯಾನ ಮಾಡುವ ನಮ್ಮ ಪ್ರದಾನ ಮಂತ್ರಿಗೆ, ಅವರು ಅಪಾರ ಖನಿಜ ಸಂಪತ್ತು ಇರುವ ಅರಣ್ಯದ ಭೂಮಿಗೆ ನಿಜವಾದ ವಾರಸುದಾರರು ಎಂಬ ಕನಿಷ್ಟ ತಿಳುವಳಿಕೆ ಇಲ್ಲ. ನಕ್ಸಲರ ಸಮಸ್ಯೆಯ ಮೂಲವನ್ನು ಗ್ರಹಿಸಲು ವಿಫಲವಾಗಿರುವ, ಸಿಕ್ಕಿದಷ್ಟು ದೋಚಲು ದಲ್ಲಾಳಿಗಳಂತೆ ನಿಂತಿರುವ ಈ ದೇಶದ ಸರ್ಕಾರಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ?

ನಕ್ಸಲರ ಚಟುವಟಿಕೆ ತಡೆಯಲು, ಆದಿವಾಸಿಗಳ, ಬಡ ಕೂಲಿಗಾರರ, ರೈತರ ಅಭಿವೃದ್ದಿಯನ್ನು ಮಾನದಂಡವಾಗಿಟ್ಟುಕೊಳ್ಳಲು ವಿಫಲವಾಗಿರುವ ಸರ್ಕಾರಗಳು ಹಿಂಸೆಯ ಹಾದಿಯನ್ನು ತುಳಿದಿರುವುದು ವರ್ತಮಾನ ಭಾರತದ ದುರಂತ.

ದಂತೇವಾಡ ಮತ್ತು ಬಸ್ತರ್ ಅರಣ್ಯ ಪ್ರದೇಶದಲ್ಲಿ ಗಿರಿಜನರ ಅಭಿವೃದ್ಧಿಯನ್ನು ತಮ್ಮ ಉಸಿರಾಗಿಸಿಕೊಂಡು ದುಡಿಯುತ್ತಿರುವB.D. Sharma ಗಾಂಧಿವಾದಿ ಹಾಗೂ ವನವಾಸಿ ಚೇತನ ಆಶ್ರಮ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ದುಡಿಯುತ್ತಿರುವ ಹಿಮಾಂಶು ಕುಮಾರ್ ಮತ್ತು ಬಸ್ತರ್ ಪ್ರದೇಶದಲ್ಲಿ ನಾಲ್ಕು ದಶಕಗಳ ಕಾಲ ಜಿಲ್ಲಾಧಿಕಾರಿಯಾಗಿ ದುಡಿದು ನಿವೃತ್ತರಾಗಿ ಈಗ ಗಿರಿಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಹಿರಿಯ ನಿವೃತ್ತ ಐ.ಎ.ಎಸ್. ಅಧಿಕಾರಿ himamsu kumarಬಿ.ಡಿ.ಶರ್ಮ ಇವರನ್ನು ಮಾತನಾಡಿಸಿದರೆ ಸಾಕು ಸರ್ಕಾರಗಳ ಹಲವಾರು ಮುಖವಾಡಗಳು ಅನಾವರಣಗೊಳ್ಳುತ್ತವೆ.

ಮಾವೋವಾದಿ ನಕ್ಷಲರು ಇಟಲಿ ಪ್ರಜೆಗಳನ್ನ, ಒರಿಸ್ಸಾದ ಶಾಸಕನನ್ನ, ಮತ್ತು ಮಲ್ಕನ್ ಗಿರಿ ಜಿಲ್ಲಾಧಿಕಾರಿಯನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಮಧ್ಯಬಾರತದ ರಾಜ್ಯ ಸರ್ಕಾರಗಳು ಇದೇ ಶರ್ಮ ಎದುರು ಮಂಡಿಯೂರಿ ಕುಳಿತು ಬಿಡುಗಡೆಗಾಗಿ ಪ್ರಾರ್ಥಿಸುತ್ತವೆ. ಇಡೀ ದಂಡಕಾರಣ್ಯದಲ್ಲಿ ಎಲ್ಲಿ ಬೇಕಾದರಲ್ಲಿ ಬರಿಗೈಲಿ ತಿರುಗಬಲ್ಲ ನೈತಿಕತೆ ಮತ್ತು ಗೌರವವನ್ನು ಶರ್ಮ ಹೊಂದಿದ್ದಾರೆ. ಇವರನ್ನು ಕಂಡ ಮಾವೋವಾದಿ ನಕ್ಸಲರು ಬಂದೂಕ ಕೆಳಗಿಟ್ಟು ತಮ್ಮ ಎರಡು ಕೈಯೆತ್ತಿ ನಮಸ್ಕರಿಸುತ್ತಾರೆ. ಇವೊತ್ತಿಗೂ ನಾನೊಬ್ಬ ನಿವೃತ್ತ ಐ.ಎ.ಎಸ್. ಅಧಿಕಾರಿ ಎಂಬ ಅಹಂಕಾರವಿಲ್ಲದೆ, ಖಾದಿ ಜುಬ್ಬಾ, ಪೈಜಾಮ ಧರಿಸಿ, ಒಂದು ಕೈಚೀಲವನ್ನು ಹೆಗಲಿಗೆ ನೇತುಹಾಕಿಕೊಂಡು, ಸಾಧಾರಣ ಹವಾಯಿ ಚಪ್ಪಲಿಗಳನ್ನು ಧರಿಸಿ ಪ್ರೈಮರಿ ಶಾಲೆಯ ನಿವೃತ್ತ ಶಿಕ್ಷರಂತೆ ಇವರು ತಮ್ಮ ನಿವೃತ್ತಿ ವೇತನದ ಹಣವನ್ನು ಆದಿವಾಸಿ ಮಕ್ಕಳ ಶಿಕ್ಷಣಕ್ಕಾಗಿ ವಿನಿಯೋಗಿಸಿ ಅಪ್ಪಟ ಗಾಂಧಿವಾದಿಗಳಾಗಿ ಬದುಕುತ್ತಿದ್ದಾರೆ.

ತಮ್ಮ ಸೇವಾವಧಿಯಲ್ಲಿ ಅವರು ಕೇಂದ್ರ ಸರ್ಕಾರಕ್ಕೆ ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಸಲ್ಲಿಸಿದ ವರದಿಗಳು ಧೂಳು ತಿನ್ನುತ್ತಿವೆ. ಆದರೆ ಹಿಂದೆ ಅರಣ್ಯವಾಸಿಗಳಿಗೆ ಅಧಿಕಾರಿಯಾಗಿ ಸಲ್ಲಿಸಲಾಗದ ಸೇವೆಯನ್ನು ಈಗ ಗಾಂಧಿವಾದಿಯಾಗಿ ಅಲ್ಲಿದ್ದುಕೊಂಡು ಸಲ್ಲಿಸುತಿದ್ದಾರೆ.

ಅವರ ಎದೆಯೊಳಗೆ ನಮ್ಮನ್ನಾಳುವ ಸರ್ಕಾರಗಳು ಮತ್ತು ಜನಪ್ರತಿನಿಧಿಗಳ ಬಗ್ಗೆ ಆಕ್ರೋಶ ಮಡುವುಗಟ್ಟಿದೆ. 1996 ರಲ್ಲಿ ಆದಿವಾಸಿಗಳ ಅಭಿವೃದ್ಧಿಗಾಗಿ ಸಲ್ಲಿಸಿದ ಬುರಿಯ ವರದಿಯನ್ನು ಕಣ್ಣೆತ್ತಿ ನೋಡದ ಕೇಂದ್ರ ಸರ್ಕಾರದ ಬಗ್ಗೆ ಅವರಿಗೆ ಬೇಸರವಿದೆ. ಆದಿವಾಸಿಗಳ ಬೇಡಿಕೆಯಾದ ಜಲ್, ಜಂಗಲ್, ಜಮೀನ್ ( ನೀರು, ಅರಣ್ಯ, ಭೂಮಿ) ಇವುಗಳ ಮೇಲಿನ ಹಕ್ಕನ್ನು ವರ್ಗಾಯಿಸುವವರೆಗೂ ನಕ್ಸಲ್ ಸಮಸ್ಯೆ ಬಗೆಹರಿಯುದಿಲ್ಲ ಎಂಬುದು ಬಿ.ಡಿ.ಶರ್ಮರವರ ಧೃಡವಾದ ನಿಲುವು. ಕೇಂದ್ರದ ಬುಡಕಟ್ಟು ಜನಾಂಗದ ಅಭಿವೃದ್ಧಿಯ ಮಂಡಲಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಕ್ಸಲ್ ಪೀMavo Indiaಡಿತ ಜಿಲ್ಲೆಗಳ ಆದಿವಾಸಿಗಳ ಅಭಿವೃಧ್ಧಿಗಾಗಿ ಕೇಂದ್ರ ಸರ್ಕಾರ 10000 ಕೋಟಿ ಹಣವನ್ನು ಮೀಸಲಿಟ್ಟು, ಗ್ರಾಮಪಂಚಾಯತ್ ಮಾದರಿಯಲ್ಲಿ ಆದಿವಾಸಿ ಹಳ್ಳಿಗಳನ್ನು ಸಬಲಿಕರಣಗೊಳಿಸಬೇಕೆಂದು ಸಲಹೆ ನೀಡಿದ್ದರು. ಜೊತೆಗೆ 2006 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಜಾರಿಗೆ ಬಂದ ಅರಣ್ಯ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಆದಿವಾಸಿಗಳಿಗೆ ವರ್ಗಾಯಿಸಿ ಉತ್ಪನ್ನಗಳಿಂದ ಬರುವ ಆದಾಯವನ್ನು ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಮುಂತಾದ ಯೋಜನೆಗಳಿಗೆ ವಿನಿಯೋಗಿಬೇಕೆಂದು ಶರ್ಮ ಒತ್ತಾಯಿಸಿದ್ದರು.

ಸರ್ಕಾರಗಳು ಮತ್ತು ಪೋಲಿಸರು ಇಂತಹ ಅತ್ಯಮೂಲ್ಯ ಸಲಹೆಗಳನ್ನು ಬದಿಗಿತ್ತು, ತಮ್ಮ ವಿವೇಚನಾ ರಹಿತ ನಡುವಳಿಕೆ ಮುಖಾಂತರ ಹಿಂಸೆ ಮತ್ತು ರಕ್ತಪಾತಕ್ಕೆ ಕಾರಣರಾಗಿದ್ದಾರೆ. ದಶಕದ ಹಿಂದೆ ದಂಡಕಾರಣ್ಯದಲ್ಲಿ ಕೇವಲ ಐದು ಸಾವಿರ ಇದ್ದ ಮಾವೋವಾದಿ ನಕ್ಸಲಿಯರ ಸಂಖ್ಯೆ ಈಗ ಒಂದು ಲಕ್ಷ ದಾಟಿದೆ. ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ವಿವೇಕ ಯಾರಿಗೂ ಇದ್ದಂತಿಲ್ಲ.

2005 ರಲ್ಲಿ ನಕ್ಸಲರನ್ನು ನಿಗ್ರಹಿಸುವ ಸಲುವಾಗಿ ಆದಿವಾಸಿಗಳನ್ನು ಎತ್ತಿಕಟ್ಟುವ ಯೋಜನೆಯಾದ “ಸಲ್ವ ಜುಡಂ” (ಶಾಂತಿ ಅಂದೋಲನ) ಹೆಸರಿನಲ್ಲಿ ಅಮಾಯಕ ಆದಿವಾಸಿ ಯುವಕರಿಗೆ ಬಂದೂಕ ಕೊಟ್ಟು ನಕ್ಸಲರನ್ನು ಮಟ್ಟ ಹಾಕಲು ಹೇಳಲಾಯಿತು. Salwa Judumಇದಕ್ಕೊಂದು ಸುಧೀರ್ಘ ಇತಿಹಾಸವಿದೆ. ನಕ್ಸಲರಿಂದ ಘಾಸಿಗೊಂಡಿದ್ದ ಜಮೀನ್ದಾರರುಗಳಲ್ಲಿ ಒಬ್ಬನಾಗಿದ್ದ ಮಹೇಂದ್ರಕುಮಾರ್ ಎಂಬ ಕ್ರಿಮಿನಲ್ ವ್ಯಕ್ತಿ ಇದನ್ನು 1990 ರ ದಶಕದಲ್ಲಿ ಹುಟ್ಟುಹಾಕಿದ್ದ. 2005 ರಲ್ಲಿ ಆತನೇ ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಸದನಾಗಿ ಆಯ್ಕೆಯಾದ ಮೇಲೆ ಈ ಸಂಘಟನೆಗೆ ಮರುಜೀವ ಬಂತು. ನಕ್ಸಲರಿಗೆ ಸಹಾಯ ಮಾಡುತಿದ್ದಾರೆ ಎಂಬ ಒಂದೇ ಕಾರಣದಿಂದ ಹಳ್ಳಿಗಳಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿಕೊಂಡು ಬಂದು ಸರ್ಕಾರಿ ಕಟ್ಟಡಗಳಲ್ಲಿ ಕೂಡಿಹಾಕಲಾಯಿತು. ಆದಿವಾಸಿಗಳ ಜಾನುವಾರುಗಳು, ಕುರಿ, ಕೋಳಿ, ಮೇಕೆ ಎಲ್ಲವೂ ನಿಗ್ರಹ ಪಡೆಯ ಸೈನಿಕರು ಮತ್ತು ಪೊಲೀಸರ ಪಾಲಾದವು. ಕೂಡಿ ಹಾಕಿರುವ ಶಿಬಿರಗಳಿಂದ ಮತ್ತೆ ಅರಣ್ಯಕ್ಕೆ ಓಡಿ ಹೋಗುವ ಆದಿವಾಸಿಗಳನ್ನು ನಕ್ಸಲ್ ಬೆಂಬಲಿಗರು ಎಂಬ ಹಣೆ ಪಟ್ಟಿ ಕಟ್ಟಿ ಗುಂಡಿಟ್ಟು ಕೊಲ್ಲಲಾಯಿತು. ಈ ರೀತಿ ನಕಲಿ ಕಾರ್ಯಾಚರಣೆಯಲ್ಲಿ ಛತ್ತೀಸ್ ಗಡ ರಾಜ್ಯದ ಬಸ್ತರ್ ಅರಣ್ಯ ಪ್ರದೇಶದಲ್ಲಿ ಇನ್ನೂರಕ್ಕೂ ಹೆಚ್ಚು ಆದಿವಾಸಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅರಣ್ಯ ತೊರೆದು ಶಿಬಿರಕ್ಕೆ ಬರಲು ಒಪ್ಪದ ಆದಿವಾಸಿಗಳ ಹಳ್ಳಿಗಳನ್ನು ಸುಟ್ಟು ಭಸ್ಮ ಮಾಡಲಾಗಿದೆ. ಇಂತಹ ಅನ್ಯಾಯದ ವಿರುದ್ದ ದನಿಯೆತ್ತಿದ ನಾಗರೀಕ ಹಕ್ಕುಗಳ ಸಂಘಟನೆಯ ಉಪಾಧ್ಯಕ್ಷರಾಗಿದ್ದ ಮಕ್ಕಳ ತಜ್ಞ ಡಾ. ಬಿಯಾಂಕ ಸೇನ್‌ರ ಮೇಲೆ ಸುಳ್ಳು ಆಪಾದನೆ ಹೊರಿಸಿ ಛತ್ತಿಸ್ ಗಡ ಸರ್ಕಾರ ಜೀವಾವಧಿ ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾಗಿತ್ತು.

ದೆಹಲಿಯ ಜವಹರಲಾಲ್ ವಿ.ವಿ.ಯಲ್ಲಿ ಪ್ರಾಧ್ಯಪಕರಾಗಿದ್ದ ಬಿಯಾಂಕ ಸೇನ್ ತಮ್ಮ ಪತ್ನಿ ಇಲಿನಾ ಸೇನ್ ಜೊತೆ ಬಸ್ತರ್ ಮತ್ತು ದಂತೆವಾಡ ಅರಣ್ಯ ವಲಯದಲ್ಲಿ ಆದಿವಾಸಿ ಮಕ್ಕಳಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿದ್ದರು. ಬಿಯಾಂಕ ಸೇನ್ ತಮ್ಮ ಈ ಸೇವೆಗಾಗಿ ಗಾಂಧಿ ಶಾಂತಿ ಪುರಸ್ಕಾರವು ಸೇರಿದಂತೆ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಂಘಟನೆಯ ಪ್ರಶಸ್ತಿಯ ಜೊತೆಗೆ ಹನ್ನೆರಡಕ್ಕೂ ಹೆಚ್ಚು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಆಳುವ ಸರ್ಕಾರದ ದಮನ ನೀತಿಯನ್ನು ಹೊರಜಗತ್ತಿಗೆ ಎತ್ತಿ ತೋರಿಸಿದ ಒಂದೇ ಒಂದು ಕಾರಣಕ್ಕೆ ಅವರನ್ನು ಛತ್ತೀಸ್‌ ಗಡ ಸರ್ಕಾರ ಕ್ರಿಮಿನಲ್ ಅಪರಾಧಿಯಂತೆ ಚಿತ್ರಿಸಿ 18 ತಿಂಗಳುಗಳ ಕಾಲ ಜೈಲಿಗೆ ತಳ್ಳಿತ್ತು. (ಜೈಲಿನಲ್ಲಿದ್ದ ಹಿರಿಯ ಮಾವೋವಾದಿ ನಾಯಕ ನಾರಾಯಣ್ ಸನ್ಯಾಲ್ ಎಂಬುವರನ್ನು ಬೇಟಿ ಮಾಡಿದ ಸಂದರ್ಭದಲ್ಲಿ ಡಾ.ಸೇನ್‌ರವರು ಸನ್ಯಾಲ್‌ರಿಂದ ಒಂದು ಸಂದೇಶವನ್ನು ನಕ್ಸಲಿಯರಿಗೆ ತಲುಪಸಿದರು ಎಂಬ ಆರೋಪ.) ಜಗತ್ತಿನ ಪ್ರಸಿದ್ದ ಚಿಂತಕರಲ್ಲಿ ಒಬ್ಬರಾದ ನೋಮ್ ಚಾಮ್‌ಸ್ಕಿ ಸೇರಿದಂತೆ ವಿಶ್ವಸಂಸ್ಥೆಯ ಅಧ್ಯಕ್ಷ ಬಾನ್ ಕಿ ಮೂನ್ ಮುಂತಾದವರು Binayak_Senಬಿಯಾಂಕ ಸೇನ್ ಬಂಧನದ ವಿರುದ್ದ ಧ್ವನಿ ಎತ್ತಿದ ಮೇಲೆ ಸುಪ್ರೀಂ ಕೋರ್ಟ್‌ನಿಂದ ಅವರ ಬಿಡುಗಡೆಯಾಯಿತು. ಇವರು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್ ಆರು ವರ್ಷಗಳಿಂದ ಜೈಲಿನಲ್ಲಿದ್ದ ನಾರಾಯಣ್ ಸನ್ಯಾಲ್‌ರ ವಯಸ್ಸನ್ನು ಗಮನಿಸಿ (78 ವರ್ಷಗಳು) ಅವರ ಮೇಲಿನ ಮೊಕದ್ದಮೆಗಳನ್ನು ಪಕ್ಕಕ್ಕೆ ಸರಿಸಿ ಬಿಡುಗಡೆ ಮಾಡಿತು. (ಗಮನಿಸಿ, ನಕ್ಸಲ್ ಚಳುವಳಿ ಸಂಸ್ಥಾಪಕರಲ್ಲಿ ಒಬ್ಬರಾದ ಕನು ಸನ್ಯಾಲ್ ಬೇರೆ.)

ಇಂತಹದ್ದೇ ಇನ್ನೊಂದು ನೋವಿನ ಕಥೆ ವನವಾಸಿ ಚೇತನ ಆಶ್ರಮ ಸ್ಥಾಪಿಸಿದ ಗಾಂಧಿವಾದಿ ಹಿಮಾಂಶು ಕುಮಾರ್‌ರವರದು. ಅವರ ಆಶ್ರಮವನ್ನು ಸಹ ಸಲ್ವ ಜುಡಂ ಕಾರ್ಯಕರ್ತರ ಮೂಲಕ ಬೆಂಕಿ ಹಚ್ಚಿ ಸುಟ್ಟು ಹಾಕಲಾಯಿತು. ಹಿಮಾಂಶು ಕುಮಾರ್ ಸೇರಿದಂತೆ ಅರಣ್ಯದ ಹಳ್ಳಿಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಕ್ಸಲರ ಕಿರುಕುಳಕ್ಕೆ ಒಳಗಾಗದ ಶಿಕ್ಷಕರು, ಅರೋಗ್ಯ ಇಲಾಖೆಯ ಸೇವಕರು ಇವರ ಮೇಲೆ ನಕ್ಸಲ್ ಮಾಹಿತಿದಾರರು ಮತ್ತು ಬೆಂಬಲಿಗರು ಎಂದು ಆರೋಪಿಸಿ ಕಿರುಕುಳ ನೀಡಲಾಯಿತು. ಏಕೆಂದರೆ ಪೊಲೀಸರು ಮತ್ತು ನಿಗ್ರಹ ಪಡೆಯ ಸೈನಿಕರು ಅರಣ್ಯದಲ್ಲಿ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇವರು ನೆಮ್ಮದಿಯಿಂದ ಓಡಾಡುವುದು ಅನುಮಾನಕ್ಕೆ ಕಾರಣವಾಗಿತ್ತು. ಇಂತಹ ಅವಿವೇಕದ ನಡುವಳಿಕೆಗಳಿಂದಾಗಿ ಸರ್ಕಾರಗಳು ಏಕಕಾಲದಲ್ಲಿ ನಕ್ಸಲರು ಮತ್ತು ನಾಗರಿಕ ಜಗತ್ತಿನ ಪ್ರಜ್ಞಾವಂತರ ವಿರುದ್ದ ಹೋರಾಡಬೇಕಾಗಿದೆ. ಸರ್ಕಾರಗಳು ಮತ್ತು ನಕ್ಸಲ್ ನಿಗ್ರಹ ಪಡೆಗಳು ಹಾಗೂ ಸಲ್ವ ಜುಡಂ ರಾಕ್ಷಸಿ ಕೃತ್ಯವನ್ನು ನೀವು ಹಿಮಾಂಶು ಕುಮಾರ್ ಮುಂಬೈನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯ ವರದಿಯಲ್ಲಿ ಕಾಣಬಹುದು. ಇದರ ಸಂಪೂರ್ಣ ವರದಿ 2009 ನವಂಬರ್ 21 ರ “ಎಕಾನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ” ಪತ್ರಿಕೆಯಲ್ಲಿ ಪ್ರಕಟವಾಗಿದೆ.

2009 ರಲ್ಲಿ ಏಳುಸಾವಿರ ಅಕ್ರಮ ಗಣಿಗಾರಿಕೆ ಬಗ್ಗೆ ದೂರು ದಾಖಲಾಗಿದ್ದರೂ ಸರ್ಕಾರಗಳು ಇವುಗಳ ಬಗ್ಗೆ ಆಸಕ್ತಿ ವಹಿಸಿಲ್ಲ. ದಂತೆವಾಡ ಮತ್ತು ಬಸ್ತಾರ್ ಅರಣ್ಯದಲ್ಲಿ 2223 ಪ್ರಕರಣಗಳು ದಾಖಲಾಗಿವೆ. ಇಲ್ಲಿನ ಅನ್ಯಾಯ ಮತ್ತು ಅಕ್ರಮಗಳ ವಿರುದ್ದ ನಾಗರಿಕ ಹಕ್ಕುಗಳ ಸಮಿತಿ ಸುಪ್ರೀಂ ಕೋರ್ಟ್‌ನಲ್ಲಿ ದೂರು ದಾಖಲಿಸಿದಾಗ ಅಂತಿಮವಾಗಿ 2011 ರ ಜುಲೈ 5 ರಂದು ನ್ಯಾಯಾಲಯ ಮಹತ್ವದ ತೀರ್ಪು ನೀಡಿ ಸಲ್ವ ಜುಡಂ ಅನ್ನು ವಿಸರ್ಜಿಸಿ, ಶಿಬಿರಗಳಲ್ಲಿ ಕೂಡಿ ಹಾಕಿರುವ ಆದಿವಾಸಿಗಳನ್ನು ಅವರವರ ಹಳ್ಳಿಗಳಿಗೆ ಕಳಿಸಬೇಕೆಂದು ಮಧ್ಯಭಾರತದ ರಾಜ್ಯಗಳಿಗೆ ಆದೇಶಿಸಿತು.

ಸಲ್ವ ಜುಡಂ ಹುಟ್ಟು ಹಾಕಿದ್ದರಿಂದ ಕುಪಿತರಾದ ನಕ್ಸಲರಿಂದ ಸತತ ಐದು ವರ್ಷಗಳ ಕಾಲ ಈ ಅರಣ್ಯದಲ್ಲಿ ಪೊಲೀಸರ ಮಾರಣ ಹೋಮವೇ ನಡೆದು ಹೋಯಿತು. ಇವುಗಳಲ್ಲಿ 2006 ಜುಲೈ 17 ರಂದು ಪೊಲೀಸ್ ಕ್ಯಾಂಪ್ ಮೇಲೆ ನಡೆಸಿದ ದಾಳಿಯಲ್ಲಿ 150 ಪೊಲೀಸರು ಹತರಾಗಿದ್ದರು. 2007 ಮಾರ್ಚ್ 17 ರಂದು ದಂತೆವಾಡದ ವಿದ್ಯಾರ್ಥಿ ನಿಲಯದಲ್ಲಿ ಬಿಡಾರ ಹೂಡಿದ್ದ 80 ಪೊಲಿಸರ ಪೈಕಿ ಅಧಿಕಾರಿಗಳು ಸೇರಿದಂತೆ 55 ಮಂದಿ ಪೊಲೀಸರು ಮಾವೋವಾದಿಗಳ ಗುಂಡಿಗೆ ಬಲಿಯಾಗಿದ್ದರು. ಸಮಸ್ಯೆಯ ಆಳಕ್ಕೆ ಇಳಿಯದ ನಮ್ಮನ್ನಾಳುವ ಜನಪ್ರತಿನಿಧಿಗಳ ಮೂರ್ಖತನದ ನಿರ್ಧಾರಗಳಿಂದಾಗಿ ಇಂತಹ ಹಿಂಸೆ ಮತ್ತು ರಕ್ತಪಾತಕ್ಕೆ ನಾಗರಿಕ ಜಗತ್ತು ಮೌನವಾಗಿ ಸಾಕ್ಷಿಯಾಗಬೇಕಾಗಿದೆ.

(ಮುಂದುವರಿಯುವುದು)