Daily Archives: December 24, 2012

ಮೊನ್ನೆ ತನ್ಕ ಕೋಮುವಾದಿ ಅನ್ನಿಸಿಕೊಂಡವ್ರು ಈಗ ಜಾತ್ಯತೀತರು!!

– ರಾಜೇಶ್. ಡಿ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಗೋ ಹತ್ಯೆ ನಿಷೇಧ ಕಾನೂನನ್ನು ಮತ್ತಷ್ಟು ಗಟ್ಟಿಗೊಳಿಸುವ ಮತ್ತು ಗೋಮಾಂಸವನ್ನು ಆಹಾರವನ್ನಾಗಿ ಸೇವಿಸುವವರ ಹೊಟ್ಟೆಗೆ ಕಲ್ಲು ಹಾಕುವ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿ ಒಪ್ಪಿಗೆ ಪಡೆದಿದ್ದರು.

ಅವರು ಈಗ ಬಿಜೆಪಿಯಲ್ಲಿಲ್ಲ. ಅವರ ಕೆಜೆಪಿ ಈಗ ಜಾತ್ಯತೀತ ಪಕ್ಷ. ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ನಮ್ಮ ಉದ್ದೇಶ ಎಂದು ಹೋದಕಡೆಯಲ್ಲೆಲ್ಲಾ ಹೇಳುತ್ತಿದ್ದಾರೆ. ಅವರ ಜೊತೆಗಿರುವ ಇತರೆ ನಾಯಕರೂ ಇದೇ ಮಾತನ್ನು ಹೇಳಲಾರಂಭಿಸಿದ್ದಾರೆ.

ವಿಚಿತ್ರ ನೋಡಿ, ಬಿಜೆಪಿ ಮುಖ್ಯಮಂತ್ರಿಯಾಗಿದ್ದಾಗ ಇವರನ್ನು ಇನ್ನಿಲ್ಲದೆ ಟೀಕೆ ಮಾಡುತ್ತಿದ್ದ ಚಂದ್ರಶೇಖರ ಪಾಟೀಲರು ಮತ್ತು ಆಗಾಗ ಸರಕಾರಕ್ಕೆ ಸಲಹೆ ಕೊಡುತ್ತಲೇ ತಾನು ಬಿಜೆಪಿ ಕಡುವಿರೋಧಿ ಎನ್ನುತ್ತಿದ್ದ ಯು.ಆರ್. ಅನಂತಮೂರ್ತಿಯವರು ಈಗ ಕೆಜೆಪಿ ಪ್ರಣಾಳಿಕೆಗೆ ಸಲಹೆಗಾರರು!!

ನಲವತ್ತು ವರ್ಷಗಳ ಕಾಲ ಯಡಿಯೂರಪ್ಪನವರು (ಅವರೇ ಹೇಳುವಂತೆ) ಹೋರಾಟ ಮಾಡಿಕೊಂಡು ರಾಜ್ಯದಲ್ಲಿ ಕಟ್ಟಿದ ಪಕ್ಷ ಬಿಜೆಪಿ. ಆಡಳಿತದಲ್ಲಿರುವಾಗ ಆಗಾಗ ಬಿಜೆಪಿಯ ಮಾರ್ಗದರ್ಶಕ ಸಂಸ್ಥೆಯಾದ ಆರ್.ಎಸ್.ಎಸ್ ನಿರ್ದೇಶನಗಳನ್ನು ತಪ್ಪದೇ ಪಾಲಿಸಿದರು. ಚಡ್ಡಿ ಹಾಕಿಕೊಂಡು ಡ್ರಿಲ್ ಮಾಡಿದರು. ಕಳೆದ ಸಾರಿ 2008ರಲ್ಲಿ ಬಿಜೆಪಿ ಚುನಾವಣೆಗೆ ಸ್ಪರ್ಧಿಸಿದಾಗ 224 ಕ್ಷೇತ್ರಗಳಲ್ಲಿ ಪಾರ್ಟಿ ಅಭ್ಯರ್ಥಿಯಾಗಿ ಒಬ್ಬೇ ಒಬ್ಬ ಅಲ್ಪಸಂಖ್ಯಾತ ಇರಲಿಲ್ಲ. ಒಂದು ಸಮುದಾಯವನ್ನು ದೂರ ಇಟ್ಟುಕೊಂಡೇ ಅಧಿಕಾರಕ್ಕೆ ಬರಬಹುದು ಎಂದು ನಂಬಿಕೊಂಡಿದ್ದ ಪಕ್ಷ ಅದು.

ಬಿಜೆಪಿ ಬಿಟ್ಟ ನಂತರ ಮಾನ್ಯ ಯಡಿಯೂರಪ್ಪನವರು ಏಕ್ ದಂ ಜಾತ್ಯತೀತರಾಗಿಬಿಟ್ಟರು. ಜಬ್ಬಾರ್ ಖಾನ್ ಹೊನ್ನಾಳಿ ಜೊತೆ ನಿಂತು ಪೋಸು ಕೊಡುತ್ತಾರೆ. ಅವರು ಬಿಜೆಪಿಯಲ್ಲಿ ಮುಂದುವರಿದಷ್ಟೂ ಕಾಲ ಹೊನ್ನಾಳಿ ಯಡಿಯೂರಪ್ಪನ ಜೊತೆ ಸೇರುವ ಸಾಧ್ಯತೆ ಇರಲಿಲ್ಲವೇನೋ. ಹಾಗಾದರೆ ಕೋಮುವಾದಿ ಜಾತ್ಯತೀರಾಗುವುದು ಅಷ್ಟು ಸುಲಭದ ಪರಿವರ್ತನೆಯೇ? ಜನಸಾಮಾನ್ಯರ ಪಾಲಿಗೆ ಹೋಗಲಿ, ಚಂಪಾ ಮತ್ತು ಅನಂತಮೂರ್ತಿಯಂತಹವರಿಗೆ ಆ ಪರಿವರ್ತನೆ ಅಷ್ಟು ಸಲೀಸು ಎನಿಸಿತೆ?

ಯಡಿಯೂರಪ್ಪ Yeddyurappa-Honnali-Khanಆರ್.ಎಸ್.ಎಸ್ ವಿಚಾರವಾಗಿ ಇನ್ನೂ ಗೊಂದಲದಲ್ಲಿದ್ದಾರೆ. ಬಹುಶಃ ಅದೇ ಕಾರಣಕ್ಕೆ ಗೋ ಹತ್ಯೆ ಮಸೂದೆ ವಿಚಾರವಾಗಿ ಎಲ್ಲಿಯೂ ಸ್ಪಷ್ಟವಾಗಿ ತಮ್ಮ ನಿಲುವು ಹೇಳಿಲ್ಲ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಮಸೂದೆಯನ್ನು ವಿರೋಧಿಸಿ ರಾಜ್ಯಪಾಲರಿಗೂ ಮನವಿ ಮಾಡಿದ್ದಾರೆ. ಆದರೆ ಇದುವರೆಗೂ ಕೆಜೆಪಿ ಆ ತರಹದ ಯಾವುದೇ ಚಟುವಟಿಕೆಗೆ ಕೈ ಹಾಕಿಲ್ಲ.

ಇವರ ಜೊತೆ ಗುರುತಿಸಿಕೊಂಡಿರುವ ಅಲ್ಪಸಂಖ್ಯಾತರು ಮತ್ತು ಗೋಮಾಂಸ ಸೇವಿಸುವ ಸಮುದಾಯದವರು ಅಷ್ಟೇ ಅಲ್ಲ, ಪ್ರಾಂಜಲ ಮನಸ್ಸಿನ ಪ್ರಗತಿಪರರು ಕೇಳಲೇ ಬೇಕಾದ ಪ್ರಶ್ನೆ: ಗೋ ಹತ್ಯೆ ನಿಷೇಧಿಸುವ ಮಸೂದೆಯ ಬಗ್ಗೆ ಕೆಜೆಪಿ ಪಕ್ಷದ ನಿಲುವೇನು?

(ಚಿತ್ರ ಕೃಪೆ: ದಿ ಹಿಂದು)