Daily Archives: December 26, 2012

Karnataka High Court

ನವೀನ್ ಸೂರಿಂಜೆಗೆ ಹೈಕೋರ್ಟ್‌ನಲ್ಲೂ ಜಾಮೀನು ನಿರಾಕರಣೆ…

– ರವಿ ಕೃಷ್ಣಾರೆಡ್ಡಿ

ಎರಡು ವಾರದ ಹಿಂದೆ (12/12/12) ಹೈಕೋರ್ಟ್‌ನಲ್ಲಿ ನವೀನ್ ಸೂರಿಂಜೆಯವರ ಜಾಮೀನು ಅರ್ಜಿ ಕುರಿತಾದ ವಾದ-ಪ್ರತಿವಾದ ನಡೆದು ನ್ಯಾಯಾಧೀಶರು ಅದರ ಕುರಿತ ತೀರ್ಪನ್ನು ಮೀಸಲಿಟ್ಟಿದ್ದರು. ಮುಂದಿನ ಎರಡು ದಿನಗಳಲ್ಲಿ ತೀರ್ಪು ಪ್ರಕಟವಾಗಲಿಲ್ಲ. ಅದಾದ ನಂತರ ಕೋರ್ಟ್‌ಗೆ ಚಳಿಗಾಲದ ರಜೆ. ಇಂದು ರಜಾ ಪೀಠ ಆದೇಶ ಹೊರಡಿಸಿತು: “ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದೆ.” ನಾನು ಕೋರ್ಟ್‌ನಿಂದ ಹೊರಗೆ ಬಂದ ವಕೀಲರನ್ನು ನ್ಯಾಯಾಧೀಶರು ವಜಾಕ್ಕೆ ಕೊಟ್ಟಿರುವ ಕಾರಣಗಳನ್ನು ಕೇಳಿದೆ. ಅದಕ್ಕೆ ವಕೀಲರು ಪೋಲಿಸರು ಚಾರ್ಜ್‌ಷೀಟ್‌ನಲ್ಲಿ ಕೊಟ್ಟಿರುವ ಕಾರಣಗಳನ್ನೇ ಹೇಳುತ್ತಾ ಹೋದರು.

ಈಗ ಬಹುಶಃ ಮುಂದಿನ ದಾರಿ ದೆಹಲಿಯ ಸುಪ್ರೀಂ ಕೋರ್ಟ್.

ನಾನು ಸುಮಾರು ವರ್ಷದ ಹಿಂದೆ (2011 ರ ನವೆಂಬರ್‌ನಲ್ಲಿ) ಸಚಿವ ಸೋಮಣ್ಣನವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ ಸಮಯದಿಂದ ಕೋರ್ಟ್‌ ಕಲಾಪಗಳನ್ನು ಹತ್ತಿರದಿಂದ ನೋಡುತ್ತ ಬರುತ್ತಿದ್ದೇನೆ. ಕೋರ್ಟ್‌ಗಳ ಸ್ವಾತಂತ್ಯ, ಅಧಿಕಾರ, ಪ್ರಭಾವ, ಇವೆಲ್ಲವುಗಳ ಬಗ್ಗೆ ಕೆಲವು ನ್ಯಾಯಾಲಯಗಳ ಕಾರ್ಯವೈಖರಿ ನೋಡಿ ಭಯಮಿಶ್ರಿತ ಗೌರವ ಮೂಡಿತ್ತು. ಹಲವು ನ್ಯಾಯಾಧೀಶರ ಪ್ರಾಮಾಣಿಕತೆ ಮತ್ತು ಧೈರ್ಯವನ್ನು ನೋಡಿ ಹೆಮ್ಮೆ ಸಹ ಪಡುತ್ತಿದ್ದೆ.

ಆದರೆ, ನವೀನ್ ಸೂರಿಂಜೆ ಬಂಧನವಾದಂದಿನಿಂದ ಕೋರ್ಟ್‌ಗಳ ಕಲಾಪವನ್ನು ಇನ್ನೂ ಹೆಚ್ಚಿನ ಕುತೂಹಲದಿಂದ ಗಮನಿಸುತ್ತಿದ್ದೇನೆ. ಪರಿಣಾಮವಾಗಿ ಕೋರ್ಟ್‌ಗಳ ಬಗ್ಗೆ ಅನುಮಾನ ಮತ್ತು ಅಸಮಾಧಾನ ಹೆಚ್ಚಾಗಿದೆ. ನಮ್ಮ ಹಲವು ಅಥವ ಅನೇಕ ನ್ಯಾಯಾಧೀಶರುಗಳು ಹೊರಗಿನ ಶಕ್ತಿಗಳ ಹಸ್ತಕ್ಷೇಪ, ಪ್ರಭಾವ, ಕಣ್ಸನ್ನೆಗಳಿಗೆ ಹೊರತಾಗಿಲ್ಲ ಎಂದು ಅರಿವಾಗುತ್ತಿದೆ. ಈ ನ್ಯಾಯಾಧೀಶರುಗಳೂ ಸಹ ನಮ್ಮ ಸಮಕಾಲೀನ ಸಮಾಜದ ಉತ್ಪನ್ನಗಳೇ ಅಲ್ಲವೇ? ಅವರೂ ಸಹ ವಕೀಲರಾಗಿ ಕಾರ್ಯನಿರ್ವಹಿಸಿ ನಂತರ ನ್ಯಾಯಾಧೀಶರಾದವರು. ನಮ್ಮ ಇಡೀ ಸಮಾಜ ಅನೈತಿಕತೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಅದಕ್ಷತೆ, ಅಪ್ರಾಮಾಣಿಕತೆಯಿಂದ ನರಳುತ್ತಿರುವಾಗ ನಮ್ಮ ಸಮಾಜದಿಂದಲೇ ಬಂದಂತಹ ಎಲ್ಲಾ ನ್ಯಾಯಾಧೀಶರುಗಳೂ ಅದಕ್ಕೆ ಹೊರತಾಗಿರುತ್ತಾರೆ ಎಂದು ಹೇಳುವುದು ಅಸಮಂಜಸ ಮತ್ತು ಅವಾಸ್ತವಿಕ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಅಲ್ಲೊಬ್ಬರು ಇಲ್ಲೊಬ್ಬರು ಪ್ರಾಮಾಣಿಕರಿರುವಂತೆ ಇಲ್ಲೂ ಇದ್ದಾರೆ, ಅಷ್ಟೇ.

ಎರಡು ದಿನಗಳ ಹಿಂದೆ ಹಿರಿಯ ವಕೀಲರೊಬ್ಬರು ಹೇಳುತ್ತಿದ್ದ ವಿಚಾರ ಕೇಳಿ ನನ್ನ ಗಾಬರಿ ಇನ್ನೂ ಹೆಚ್ಚಾಗಿದೆ. ನಿಮಗೆ ಗೊತ್ತಿಲ್ಲದಿರಬಹುದು, ನ್ಯಾಯಾಧೀಶರಾಗಿದ್ದ ಕೆಲವರು ಆ ಸಂಬಳಕ್ಕಿಂತ ವಕೀಲ ವೃತ್ತಿಯಲ್ಲಿಯೇ ಹೆಚ್ಚು ದುಡಿಯಬಹುದು ಎಂದು ಕೆಲಸಕ್ಕೆ ರಾಜೀನಾಮೆ ನೀಡಿ ಮತ್ತೆ ವಕೀಲರಾಗಿದ್ದಾರೆ. ಮತ್ತು ರಾಜ್ಯದ ಹಲವು ಕಡೆ ಹಿರಿಯ ವಕೀಲರ ಜೂನಿಯರ್‌ಗಳಾಗಿದ್ದವರು ಇಂದು ನ್ಯಾಯಾಧೀಶರಾಗಿದ್ದಾರೆ. ಮತ್ತು ಇಲ್ಲಿ ಎಂತಹ ಗುಲಾಮಿತನ ಇದೆ ಎಂದರೆ ಕೆಲವೊಮ್ಮೆ ನ್ಯಾಯಾಧೀಶರ ಸೀನಿಯರ್ ಆಗಿದ್ದ ವಕೀಲರು ಕೋರ್ಟ್‌ ಹಾಲ್‌ನ ಒಳಗೆ ಪ್ರವೇಶಿಸಿದ ತಕ್ಷಣ ತಾನು ನ್ಯಾಯಾಧೀಶ ಎನ್ನುವುದನ್ನು ಮರೆತು ಅಭ್ಯಾಸಬಲದಿಂದ ನ್ಯಾಯಾಧೀಶರೇ ಎದ್ದು ನಿಂತದ್ದಿದೆಯಂತೆ. ಇಂದು ಭೇಟಿಯಾದ ವಕೀಲರೊಬ್ಬರು ಹೇಳುತ್ತಿದ್ದರು: “ನ್ಯಾಯಾಧೀಶರುಗಳನ್ನು ಅವರು ಪ್ರಾಕ್ಟಿಸ್ ಮಾಡುತ್ತಿದ್ದ ಜಾಗದಿಂದ ಐನೂರು-ಸಾವಿರ ಕಿ.ಮೀ.ಗಳ ದೂರಕ್ಕೆ ವರ್ಗಾಯಿಸಿ ಬಿಡಬೇಕು. ಆಗಲಾದರೂ ಈ ಗುಲಾಮಿತನ ಮತ್ತು ಕೆಲವು ವಕೀಲರುಗಳು ಬಕೆಟ್ ಹಿಡಿಯುವುದು ನಿಲ್ಲಬಹುದು.” ವಕೀಲರಲ್ಲಿಯೂ ನ್ಯಾಯಾಂಗದ ಪಕ್ಷಪಾತಿತನ ಅಥವ ಅದಕ್ಷತೆಯ ವಿರುದ್ಧದ ಕೂಗು ಹೆಚ್ಚಾಗುತ್ತಿದೆ.

ನ್ಯಾಯಾಧೀಶರೂ ಹೇಗೆ ಪ್ರಭಾವಕ್ಕೊಳಗಾಗುತ್ತಾರೆ ಮತ್ತು ಹೇಗೆ ಮಾಡಬಹುದು ಎನ್ನುವುದಕ್ಕೆ ನೀವು ರಾಜ್ಯದ ಹಿರಿಯ ವಕೀಲರಾದ ಸಿ.ಎಚ್. ಹನುಮಂತರಾಯರ chhanumantaraya“ವಕೀಲರೊಬ್ಬರ ವಗೈರೆಗಳು” ಪುಸ್ತಕ ನೋಡಬಹುದು.

ಮತ್ತು ನ್ಯಾಯಾಧೀಶರ ಮೇಲೆಯೂ ಎಂತಹ ಗುರುತರ ಆರೋಪಗಳು ಮತ್ತು ಸಂಶಯಗಳಿವೆ ಎನ್ನುವುದಕ್ಕೆ ನೀವು ನಮ್ಮ ವರ್ತಮಾನ.ಕಾಮ್‌ನಲ್ಲಿ ಪ್ರಕಟವಾದ ನ್ಯಾ. ಬನ್ನೂರುಮಠರ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನ ಪ್ರತಿಯನ್ನು ನೋಡಬೇಕು. ಇದು ನಮ್ಮಲ್ಲಿ ಪ್ರಕಟವಾದ ಮಾರನೆಯ ದಿನವೇ ಈ ಪತ್ರವನ್ನೇ ಆಧಾರವಾಗಿಟ್ಟುಕೊಂಡು “ಡೆಕ್ಕನ್ ಕ್ರಾನಿಕಲ್” ಪತ್ರಿಕೆಯಲ್ಲಿಯೂ “Is this why Governor rejected Bannurmath for Ayukta post?” ಎಂಬ ಮುಖಪುಟ ವರದಿ ಪ್ರಕಟವಾಯಿತು. ಕರ್ನಾಟಕದ ಇನ್ಯಾವ ಘನತೆವೆತ್ತ ಮಾಧ್ಯಮ ಸಂಸ್ಥೆಯೂ ಈ ವಿಚಾರದ ಬಗ್ಗೆ ಮಾತನಾಡುವ, ಪ್ರಸ್ತಾಪಿಸುವ, ಕನಿಷ್ಟ ಪಕ್ಷ ಅದರ ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸುವ ಧೈರ್ಯವನ್ನೇ ಮಾಡಲಿಲ್ಲ. ಆದರೂ, ನಮ್ಮಲ್ಲಿ ಮತ್ತು ಡೆಕ್ಕನ್ ಕ್ರಾನಿಕಲ್‌ನಲ್ಲಿ ಈ ವಿಷಯ ಪ್ರಸ್ತಾಪವಾದ ಒಂದೇ ವಾರಕ್ಕೆ ಬನ್ನೂರುಮಠರು ಲೋಕಾಯುಕ್ತ ಹುದ್ದೆಯಿಂದ ಹಿಂದೆ ಸರಿದರು.

ಬರಲಿರುವ ದಿನಗಳಲ್ಲಿ ಭಾರತದಲ್ಲಿ ನ್ಯಾಯಕ್ಕಾಗಿ ಸಂಘರ್ಷ ಹೆಚ್ಚಾಗಲಿದೆ. ಇತ್ತೀಚಿಗೆ ದೆಹಲಿಯಲ್ಲಾಗುತ್ತಿರುವ ಪ್ರತಿಭಟನೆಗಳನ್ನೇ ಗಮನಿಸಿ. ನ್ಯಾಯ ಮತ್ತು ಆದರ್ಶಗಳಿಗಾಗಿ ತಮ್ಮ ವೃತ್ತಿ ಮತ್ತು ಖಾಸಗಿ ಬದುಕನ್ನು ಕಳೆದುಕೊಂಡು ಹೋರಾಟಕ್ಕೆ ಮತ್ತು ಸ್ವಯಂಪ್ರೇರಣೆಯಿಂದ ನ್ಯಾಯದ ಪರವಾಗಿ ಜೈಲಿಗೆ ಹೋಗುವವರ ಸಂಖ್ಯೆಯೂ ಹೆಚ್ಚಾಗಲಿದೆ. ಅದರ ನೇರ ಪ್ರಭಾವ ನಮ್ಮ ನ್ಯಾಯಾಂಗದ ಮೇಲೆಯೂ ಬೀಳಲಿದೆ. ನ್ಯಾಯಾಂಗ ವ್ಯವಸ್ಥೆಯ ಸುಧಾರಣೆ ಎಲ್ಲಕ್ಕಿಂತ ಮೊದಲು ಆರಂಭವಾಗಬೇಕಿದೆ. ನಮ್ಮ ಶಾಸಕಾಂಗ ಮತ್ತು ಕಾರ್ಯಾಂಗಗಳಂತೂ ಪೂರ್ತಿ ಭ್ರಷ್ಟವೂ, ನೆಚ್ಚಿಕೊಳ್ಳಲಾಗದಷ್ಟು ಅದಕ್ಷವೂ, ಅಪ್ರಾಮಾಣಿಕವೂ ಆಗಿವೆ. ಉಳಿದಿರುವ ಊರುಗೋಲು ನ್ಯಾಯಾಂಗವೊಂದೇ. “ನ್ಯಾಯಾಂಗ ನಿಂದನೆ” ಎಂಬ ಬೆದರು ಬೊಂಬೆಗೆ ಭಯಪಡಲು ನಿರಾಕರಿಸಿ ನಮ್ಮ ಈ ದೇಶದ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲು ನಾವೆಲ್ಲ ಪಣ ತೊಡಬೇಕಿದೆ. ಇಷ್ಟಕ್ಕೂ ನಾವು ಹೊರಗಿದ್ದು ಅಸಹಾಯಕತೆ ಮತ್ತು ಖಿನ್ನತೆ ಅನುಭವಿಸುವುದಕ್ಕಿಂತ ನ್ಯಾಯಕ್ಕಾಗಿ ಧ್ವನಿಯೆತ್ತಿದ ಕಾರಣಕ್ಕೆ ಜೈಲಿನ ಒಳಗೆ ಇರುವುದೇ ನಮ್ಮ ಮಾನಸಿಕ ಆರೋಗ್ಯ ಮತ್ತು ನೈತಿಕತೆ ದೃಷ್ಟಿಯಿಂದ ಉತ್ತಮವಾದದ್ದು ಎನ್ನಿಸುತ್ತದೆ.

ವಾಪಸು ನವೀನ್ ಸೂರಿಂಜೆ ವಿಷಯಕ್ಕೆ ಬರುವುದಾದರೆ, ನವೀನ್ ಸೂರಿಂಜೆ ಈಗ ಮಂಗಳೂರಿನ ಸರ್ಕಾರಿ ಆಸ್ಪತ್ರೆಯ ಜೈಲ್ ವಾರ್ಡ್‌ನಲ್ಲಿದ್ದಾರೆ. naveen-soorinjeಮಂಗಳೂರಿನಲ್ಲಿ ಕಳೆದ ಎರಡು-ಮೂರು ವಾರಗಳಿಂದ ಹರಡುತ್ತಿರುವ ಚಿಕನ್‌ಪಾಕ್ಸ್ ಅಥವ ಸಿಡುಬು ಜ್ವರ, ನವೀನ್ ಸೂರಿಂಜೆ ಇದ್ದ ಜೈಲ್ ಸೆಲ್‌ನ ಸಹಬಂಧಿಗಳಿಗೂ ಹರಡಿ, ಅದು ಹೀಗೆರಡು ದಿನಗಳ ಹಿಂದೆ ನವೀನ್‌ಗೂ ಹಬ್ಬಿ ಅವರು ಈಗ ಆಸ್ಪತ್ರೆಯ ಜೈಲ್ ವಾರ್ಡ್‌ನಲ್ಲಿ ಐಸೋಲೇಷನ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರಂತೆ.

ಒಂದು ವ್ಯವಸ್ಥೆ ಮತ್ತೂ ಉತ್ತಮವಾಗಿ ಬದಲಾಗಬೇಕಾದರೆ ಅಮಾಯಕರ, ನಿರಪರಾಧಿಗಳ, ನ್ಯಾಯಪರರ ಶೋಷಣೆ ಮತ್ತು ಬಲಿದಾನ ಬೇಕೇ ಬೇಕು ಎನ್ನುವುದು ಒಂದು ಸಮಾಜದ ಸಮಕಾಲೀನ ಸ್ಥಿತಿಯ ಘೋರ ನೀಚತನವನ್ನು ತೋರಿಸುತ್ತದೆ.

ವಿದ್ಯಮಾನಗಳಾಗಿ ಬದಲಾಗುತ್ತಿರುವ ಗತಕಾಲದ ದೌರ್ಜ್ಯನ್ಯಗಳು ಮತ್ತು ಸೋತು ಹೋದ ಆಧುನಿಕ ಇಂಡಿಯಾ

– ಬಿ. ಶ್ರೀಪಾದ ಭಟ್

ದೆಹಲಿಯಲ್ಲಿ ಒಂಟಿ ಮಹಿಳೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ವಿವರಗಳು ದೇಶದ ಪ್ರಜ್ಞಾವಂತರು ನಾಚಿಕೆಯಿಂದ, ಅವಮಾನದಿಂದ, ಹೇಸಿಗೆಯಿಂದ ತಲೆತಗ್ಗಿಸುವಂತೆ ಮಾಡಿದೆ. ತನ್ನ ಪ್ರಜೆಗಳಿಗೆ ಕನಿಷ್ಠ ಮಟ್ಟದ ಭದ್ರತೆಯನ್ನು, ಘನತೆಯ ಬದುಕನ್ನು, ತಲೆ ಎತ್ತಿ ಜೀವಿಸುವ ಅವಕಾಶಗಳನ್ನು ಒದಗಿಸಲಾಗದಿದ್ದರೆ, ಕಲ್ಪಿಸಿಕೊಡಲಾಗದಿದ್ದರೆ ಇದು ದೇಶವೊಂದರ ಸೋಲು. ಹೀನಾಯ ಸೋಲು.

ವಿವಿಧ ರಾಜ್ಯಗಳಲ್ಲಿ ಸ್ವಾತಂತ್ರ್ಯಾನಂತರ ಇಂತಹ ಸಾವಿರಾರು ಅತ್ಯಚಾರಗಳು ನಡೆದಿವೆ, ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಇಂಡಿಯಾ ದೇಶವು ನೂರಾರು ಬಾರಿ ಸೋತಿದೆ. ದೇಶವೊಂದರ ನಾಗರೀಕತೆಯ ಬೇಜವಬ್ದಾರಿತನ ಮತ್ತು ನಿಷ್ಕ್ರಿಯತೆ, ಜವಬ್ದಾರಿಯುತ ರಾಜಕೀಯ ಪಕ್ಷಗಳ ಭೌದ್ಧಿಕ ದಿವಾಳಿತನ ಮತ್ತು ಭ್ರಷ್ಟಾಚಾರಗಳ ಕಾರಣದಿಂದ ನಾಡೊಂದು ತನ್ನೊಡಲೊಳಗೆ ಬಚ್ಚಿಟ್ಟುಕೊಂಡ ಅನೇಕ ವೈರುಧ್ಯಗಳನ್ನು ಅತ್ಯಂತ ಕ್ರೂರವಾಗಿ ಹಿಂಸೆಯ ರೂಪದಲ್ಲಿ, ದೌರ್ಜನ್ಯದ ಸ್ವರೂಪದಲ್ಲಿ, ಹಲ್ಲೆಗಳ ಸ್ವರೂಪದಲ್ಲಿ, ಅತ್ಯಾಚಾರಗಳ ರೂಪದಲ್ಲಿ ನಿರಂತರವಾಗಿ ಹೊರಹಾಕುತ್ತಿರುತ್ತವೆ.

ಇದು ಈ ಹಿಂದೆಯೂ ಅನೇಕ ಬಾರಿ ಜರುಗಿದೆ. ಭಾಗಲ್ಪುರ, ಬೆಲ್ಚಿ, ಕಂಬಾಲಪಲ್ಲಿಯಲ್ಲಿ ನಡೆದ ದಲಿತರ rape-illustrationಮಾರಣ ಹೋಮಗಳಿರಬಹುದು,ಮೀನಾಕ್ಷಿಪುರಂನಲ್ಲಿ, ಗುಜರಾತ್‌ನಲ್ಲಿ, ಮುಂಬೈನಲ್ಲಿ ಕೋಮುವಾದಿಗಳಿಂದ ಅಮಾನುಷ ದೌರ್ಜನ್ಯ, ಅತ್ಯಾಚಾರಕ್ಕೀಡಾದ ಮುಸ್ಲಿಂರರಿಬಹುದು, ಶೋಷಣೆಗೆ ಒಳಗಾಗಿ ಸಾವನ್ನಪ್ಪಿದ ಬೆಂಡಿಗೇರಿ, ಬದನವಾಳು, ಖೈರ್ಲಾಂಜೆಯ ಅಸಹಾಯಕ ದಲಿತ ಕುಟುಂಬಗಳಿರಬಹುದು, ಇಂದಿರಾಗಾಂಧಿಯವರ ಹತ್ಯೆಯ ನಂತರ ಅಮಾನುಷವಾಗಿ ಕ್ರೌರ್ಯಕ್ಕೆ ಬಲಿಯಾಗಿ ಸಾವನ್ನಪ್ಪಿದ ಸಾವಿರಾರು ಸಿಖ್ಖರಿರಬಹುದು,ಇನ್ನೂ ನೂರಾರು ಇದೇ ತರಹದ ದೌರ್ಜನ್ಯಗಳಿರಬಹುದು, ಘಟನೆಗಳು ನಡೆದಂತಹ ಸಂದರ್ಭದಲ್ಲಿ ಅತ್ಯಾಚಾರಗಳಾಗಿ, ಅಮಾನುಷ ಹಲ್ಲೆಗಳಾಗಿ, ಕೊಲೆಗಳಾಗಿ ಪರಿಗಣಿಸಲ್ಪಡುವ ಈ ಘಟನೆಗಳು ವರ್ಷಗಳು ಗತಿಸುತ್ತಾ ಹೋದ ಹಾಗೆ, ಬದಲಾದ ಕಾಲಘಟ್ಟದಲ್ಲಿ ಕಾಲಕ್ರಮೇಣ ವಿದ್ಯಮಾನಗಳಾಗಿ (phenomenon) ಬದಲಾಗುತ್ತವೆ. ಇದಕ್ಕೆ ಮನುಷ್ಯನ ಸಹಜ ಮರೆವಿನ ಕಾರಣವನ್ನು ನೀಡಿ ಸಮಜಾಯಿಷಿ ಕೊಡುವ ನಮ್ಮ ಆತ್ಮವಂಚನೆಗೆ ಏನು ಶಿಕ್ಷೆಯಿದೆ? ಇದನ್ನು ಸಮಾಜ ವಿಜ್ಞಾನಿಗಳು, ಅಂಥ್ರೋಪಾಲಜಿಷ್ಟರು ಆಳವಾದ ಅಧ್ಯಯನ ನಡೆಸಿದಂತೆ ಕಾಣುತ್ತಿಲ್ಲ. ಅಥವಾ ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕೆ ಎನ್ನುವುದೇನಾರೂ ನಿಜವೇ?

ಇಂದು ದೆಹಲಿ ಅತ್ಯಾಚಾರದ ವಿರುದ್ಧ ಸಹಜವಾಗಿಯೇ ಮತ್ತು ನ್ಯಾಯವಾಗಿಯೇ ಅತ್ಯುಗ್ರವಾಗಿ ಪ್ರತಿಭಟಿಸುತ್ತಿರುವ ನಮ್ಮ ಮಧ್ಯಮವರ್ಗದ ನಾಗರೀಕರು ದಲಿತರ, ಮುಸ್ಲಿಂರ ವಿರುದ್ಧ ಹತ್ಯಾಕಾಂಡ ನಡೆದಾಗ ಎಲ್ಲಿದ್ದರು, ಏಕೆ ಮೌನವಾಗಿದ್ದರು ಎಂದು ಪ್ರಶ್ನೆಗಳನ್ನು ಪ್ರಜ್ಞಾವಂತರು ಸಾವಿರಾರು ಸಲ ಪ್ರಶ್ನಿಸಿ ಸ್ವತಃ ಸಿನಿಕರಾಗುತ್ತಿದ್ದಾರೆ ಮತ್ತು ಈ ಮೌಲಿಕ ಹಾಗೂ ಜೀವಪರ ಪ್ರಶ್ನೆಗಳನ್ನೆತ್ತಿದ್ದಕ್ಕೆ ಗೇಲಿಗೊಳಗಾಗುತ್ತಿದ್ದಾರೆ. ಇದಕ್ಕೆ ಮೂಲಭೂತ ಕಾರಣ ನಮ್ಮ ಮಧ್ಯಮ ವರ್ಗದ ನಾಗರಿಕರು ಮುಸ್ಲಿಂ, ದಲಿತ, ಮೀಸಲಾತಿ, ಅಂಬೇಡ್ಕರ್ ತರಹದ ಹೆಸರುಗಳನ್ನೇ ದ್ವೇಷಿಸುತ್ತಿರುವುದು, ಅವರ ಇರುವಿಕೆಯನ್ನೇ ಅಲ್ಲಗೆಳೆಯುತ್ತಿರುವುದು ಮತ್ತು ಇವರ ಈ ಮೂಲಭೂತ ಮನಸ್ಥಿತಿಯೇ ಸಹ ಮೇಲಿನ ಕ್ರೌರ್ಯದ ಪುನಾವರ್ತನೆಗಳಿಗೆ ಕಾರಣ. dalit-attackಹಾಗಿದ್ದರೆ ಬಹುಶಃ ಮೂಲಭೂತವಾಗಿ ಮನುಷ್ಯ ಮತ್ತು ವ್ಯವಸ್ಥೆ ತಮ್ಮ ಬದುಕನ್ನು ನಿರಂತರವಾಗಿ ಪವಿತ್ರೀಕರಣಗೊಳಿಸಕೊಂಡಿದ್ದರ ಕುರಿತಾಗಿ ನಾವು ಅಧ್ಯಯನ ನಡೆಸಬೇಕಾಗುತ್ತದೆ. ಈ ಪವಿತ್ರೀಕರಣದ ಪರಿಕಲ್ಪನೆಯೇ ವೈಯುಕ್ತಿಕ ನೆಲೆಯಲ್ಲಿ ಸೀಮಿತ ಪರಿಣಾಮವನ್ನು ಬೀರಿದರೆ ಸಾರ್ವಜನಿಕವಾಗಿ ಇದರಿಂದುಂಟಾಗುವ ದುಷ್ಪರಿಣಾಮಗಳು ಊಹೆಗೂ ನಿಲುಕದ್ದು. ಆಗ ಇಡೀ ರಾಷ್ಟ್ರವೇ ಹಿಂಸಾತ್ಮಕದ ಮುಖವನ್ನು ಧರಿಸುತ್ತದೆ.

2002 ರಲ್ಲಿ ಮುಸ್ಲಿಂರ ವಿರುದ್ಧ ಗುಜರಾತ್‌ನಲ್ಲಾಗಿರಬಹುದು, 1984 ರಲ್ಲಿ ಸಿಖ್ಖರ ವಿರುದ್ಧ ಉತ್ತರ ಭಾರತದಾದ್ಯಾಂತ ಜರುಗಿದ್ದಿರಬಹುದು, ಸಾವಿರಾರು ವರ್ಷಗಳಿಂದ ಈ ಪವಿತ್ರ ಭಾರತದಲ್ಲಿ ಅಸ್ಪೃಶ್ಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಶೋಷಣೆಗಳಿರಬಹುದು. ಇದಕ್ಕೆ ಜ್ವಲಂತ ಉದಾಹರಣೆ 2002 ರಲ್ಲಿ ಫ್ಯಾಸಿಸ್ಟ್ ಮುಖ್ಯಮಂತ್ರಿ ನರೇಂದ್ರ ಮೋದಿಯ ನೇತೃತ್ವದಲ್ಲಿ ಪವಿತ್ರೀಕರಣದ ಹೆಸರಿನಲ್ಲಿ ಸಂಘಪರಿವಾರವು ನಡೆಸಿದ ಮುಸ್ಲಿಂರ ಹತ್ಯಾಕಾಂಡದ ಹಿಂಸಾಚಾರವು ಹತ್ತು ವರ್ಷಗಳ ನಂತರ ಇಂದು ಯಾವಾಗಲೋ ಆಗಿ ಹೋದ ವಿದ್ಯಮಾನವಾಗಿ ಬಿಂಬಿತವಾಗುತ್ತಿದೆ. ಈ ರೀತಿ ಬಿಂಬಿಸಲು ಪತ್ರಕರ್ತರು, ಮಾಧ್ಯಮಗಳು ಮತ್ತು ಇಂಡಿಯಾದ ಮಧ್ಯಮವರ್ಗ ಪ್ರತಿಸ್ಪರ್ಧಿಗಳಂತೆ ಸ್ಪರ್ಧೆಯಲ್ಲಿ ತೊಡಗಿದ್ದಾರೆ. 2007 ರಲ್ಲಿ ಈ ಮೋದಿ ಎರಡನೇ ಬಾರಿ ಗೆದ್ದಾಗ ಅದನ್ನು ವಿವರಿಸಲು ಸ್ವಲ್ಪವಾದರೂ ಕಸಿವಿಸಿಗೊಂಡ ಮೇಲಿನ ನಾಗರಿಕರು 2012 ರಲ್ಲಿ ಮೋದಿ ಮೂರನೇ ಬಾರಿ ಗೆದ್ದ ಮೇಲಂತೂ ಇದನ್ನು ಹ್ಯಾಟ್ರಿಕ್ ಎಂದು ಸಂಭ್ರಮಿಸುತ್ತಿವೆ. ಈ ಬಾರಿ ಹಿಂದಿನಂತೆ ಸಂಕೋಚವಾಗಲೀ, ಕಸಿವಿಸಿಯಾಗಲೀ ಇಲ್ಲ. ಎಲ್ಲರ ಬಳಿಯೂ ಸಿದ್ಧ ಉತ್ತರಗಳಿವೆ. ಅಭಿವೃದ್ಧಿ, ಕಾಸ್ಮೋಪಲಿಟನ್ ಕಲ್ಚರ್, ಸಂಪೂರ್ಣ ಕೈಗಾರೀಕರಣ ಮತ್ತು ಇಡೀ ರಾಜ್ಯವೇ ವಾಣಿಜ್ಯೀಕರಣಗೊಂಡಿರುವುದು ಇವೆಲ್ಲವನ್ನೂ ಉದಾಹರಿಸುತ್ತಾ ನೋಡಿ ಮಿಂಚುತ್ತಿದೆ ಗುಜರಾತ್ ಎಂದು ಸಂಭ್ರಮಿಸುತ್ತಿರುವ ಈ ಮಾಧ್ಯಮಗಳು, ಪತ್ರಕರ್ತರು ಮತ್ತು ಮಧ್ಯಮ ವರ್ಗ ಈ ತ್ರಿಮೂರ್ತಿಗಳ ಶೂನ್ಯ ಚಿಂತನೆಗಳ ಅಬ್ಬರಕ್ಕೆ ಅಳಿದುಳಿದ ಅಲ್ಪಸಂಖ್ಯಾತ ಪ್ರಜ್ಞಾವಂತರೆನಿಸಿಕೊಂಡವರು ಕೀಳರಿಮೆಯಿಂದ ನರಳುತ್ತಿರುವುದು ತಮಾಷೆಯಾಗಿದೆ. ಈ ಶೂನ್ಯ ಚಿಂತಕರ ಪ್ರಕಾರ ರಾಜ್ಯದ ಕೆಲವು ನಗರಗಳು ರಮ್ಯವಾಗಿದ್ದು, ಸುಂದರವಾಗಿದ್ದರೆ ಸಾಕು!! ನೋಡಿ ನೋಡಿ ಅಲ್ಲಿನ ವೈಭವವನ್ನು ಎಂದು ಮೈಮರೆಯಲೂ ಹಿಂಜರಿಯರು!!

ಆದರೆ ಗುಜರಾತ್ ಎನ್ನುವ ರಾಜ್ಯದ ಕಳೆದ ನೂರು ವರ್ಷಗಳ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಚರಿತ್ರೆಯನ್ನು ವಿವರವಾಗಿ ಬಿಡಿಸಿಟ್ಟಿದ್ದರೆ ಇಂದು ಈ ಹ್ಯಾಟ್ರಿಕ್ ವೀರ ಮೋದಿಯ ಉನ್ನತೀಕರಣಕ್ಕೆ ಬ್ರೇಕ್ ಸಿಗುತ್ತಿತ್ತು. ಕಳೆದ ನೂರು ವರ್ಷಗಳಿಂದ ಗುಜಾರಾತ್ ರಾಜ್ಯವು ವಾಣಿಜ್ಯೀಕರಣದ ಅನೇಕ ಗುಣಗಳನ್ನು ತನ್ನೊಡಲೊಳಗಿಟ್ಟುಕೊಂಡಿದೆ. ಅಲ್ಲಿನ ಬಹುಪಾಲು ಪಟ್ಟಣಗಳು ಹಲವಾರು ದಶಕಗಳಿಂದ ಕೈಗಾರೀಕರಣ ಮತ್ತು ವಾಣಿಜ್ಯ ಚಟುವಟಿಕೆಗಳಿಂದ ಸದಾ ಮುನ್ಚೂಣಿಯಲ್ಲಿದ್ದಿದ್ದನ್ನು ಬಹುಪಾಲು ಮಾಧ್ಯಮಗಳು ಮುಚ್ಚಿಟ್ಟವು. ಅನಾಯಕತ್ವ ಮತ್ತು ಮೋದಿಯ ಸಿಂಡ್ರೋಮ್‌ನಿಂದಾಗಿ ಅಪಾರ ಕೀಳರಿಮೆಯಿಂದ ನರಳುತ್ತಿರುವ, ನೈತಿಕವಾಗಿ ದಿವಾಳಿ ಹೊಂದಿದ ಕಾಂಗ್ರೆಸ್ ಪಕ್ಷವು ಇದರ ಕುರಿತಾಗಿ ಯಾವುದೇ ಬಗೆಯ ವರದಿಗಳನ್ನು ತಯಾರಿಸಲಿಲ್ಲ, ಆಧುನಿಕ ಕಮ್ಯುನಿಕೇಶನ್ನಿನ ತಂತ್ರಜ್ಞಾನವನ್ನು ಬಳಸಿಕೊಂಡು ಅನೇಕ ವಾಸ್ತವಾಂಶಗಳನ್ನು ಅಲ್ಲಿನ ಜನತೆಯ ಮುಂದಿಡಲೂ ಸಂಪೂರ್ಣವಾಗಿ ಸೋತಿತು ಈ ಕಾಂಗ್ರೆಸ್. ಒಂದು ಕಾಲದ ತಮ್ಮ ನಾಯಕರಾದ ಮಾಧವ ಸಿಂಗ್ ಸೋಳಂಕಿಯವರ ಆಡಳಿತದ ಮಾದರಿಗಳೂ ಮೋದಿಗಿಂತಲೂ ಮುಂದಿತ್ತೆನ್ನುವುದನ್ನು ಈ ಬೌದ್ಧಿಕವಾಗಿ ಭ್ರಷ್ಟಗೊಂಡ ಕಾಂಗ್ರೆಸ್ ಗುಜರಾತ್ ನಾಗರಿಕರಿಗೆ ವಿವರಿಸಲು ಸೋತಿತು.

ಮತ್ತೊಂದು ಪ್ರಮುಖವಾಗಿ ಅಲ್ಲಿನ ಜಾತಿಗಳ ಸಮೀಕರಣಗಳನ್ನು ಮೋದಿ ಅತ್ಯಂತ ಚಾಣಾಕ್ಷತೆಯಿಂದ ತನ್ನ Narendra_Modiಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದನ್ನು ನಮ್ಮ ದಿನೇಶ್ ಅಮೀನ್ ಮಟ್ಟು ಅವರು ಇದರ ಕುರಿತಾಗಿ ಪ್ರಜಾವಾಣಿಯಲ್ಲಿ ಅತ್ಯಂತ ವಿವರವಾಗಿ ಬರೆದಿದ್ದನ್ನು ಬಿಟ್ಟರೆ ಬೇರೆ ಯಾವ ಮಾಧ್ಯಮಗಳೂ ವಿವರವಾಗಿ ಬರೆದಂತಿಲ್ಲ. ಒಂದು ವೇಳೆ ಬೇರೆ ಮಾಧ್ಯಮಗಳು ಚರ್ಚಿಸಿದ್ದರೆ ಇದು ನನ್ನ ಓದಿನ ಮಿತಿಯಿರಬಹುದು. ಅದೇ ಗುಜರಾತ್‌ನ ಸೌರಾಷ್ಟ್ರದ ಭಾಗವು ಬರಗಾಲಕ್ಕೆ ತುತ್ತಾಗಿ, ಆಡಳಿತಾರೂಢ ಪಕ್ಷದ ನಿರ್ಲಕ್ಷದಿಂದಾಗಿ ಅದು ಕ್ರಮೇಣ ವಿದರ್ಭದ ಮಾದರಿಯಲ್ಲಿ ವಿನಾಶವಾಗುತ್ತಿರುವುದನ್ನು ಸಹ ಪ್ರಜಾವಾಣಿಯ ವರದಿಗಾರರ ಹೊರತಾಗಿ, ಮತ್ತು ಕೆಲವು ಆಂಗ್ಲ ಮಾಧ್ಯಮಗಳ ಹೊರತಾಗಿ (ದ ಹಿಂದೂ, ತೆಹೆಲ್ಕ) ಇತರ ಬಹುಪಾಲು ಮಾಧ್ಯಮಗಳು ವಿವರವಾಗಿ ಚರ್ಚಿಸಿದಂತಿಲ್ಲ. ಒಂದು ವೇಳೆ ಚರ್ಚಿಸಿದ್ದರೆ ಇದೂ ಕೂಡ ನನ್ನ ಓದಿನ ಮಿತಿಯಿರಬಹುದು.

ಇಡೀ ಗುಜರಾತನಲ್ಲಿ ಒಂದು ಕಣ್ಣನ್ನು ಕಿತ್ತು ಮತ್ತೊಂದು ಕಣ್ಣಿಗೆ ಜೋಡಿಸುವ ಸಿದ್ಧಾಂತಡಿಯಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಕೃಷಿ ವಲಯವನ್ನು ಹೆಚ್ಚೂ ಕಡಿಮೆ ನಿಶ್ಯೇಷಗೊಳಸಿ ಅಲ್ಲಿನ ಇಂಚಿಂಚೂ ಕೃಷಿ ಭೂಮಿಯನ್ನು ಕೈಗಾರಿಕೆಯ ವಲಯವನ್ನಾಗಿ ಬದಲಾಯಿಸುತ್ತಿರವುದು, ಗುಜರಾತಿನಲ್ಲಿ ನದಿಯೆನ್ನುವುದು ರೈತರಿಗೆ ಬಾಳಸಂಜೀವಿನಿಯೆನ್ನುವ ಜೀವಮಂತ್ರ ಕಣ್ಮರೆಯಾಗಿ ಇಂದು ಅದು ಕೈಗಾರೀಕರಣಕ್ಕೆ ಅಕ್ಷಯವಾಗಿ ಬಳಕೆಯಾಗುತ್ತಿದೆ. ಇದು ವ್ಯವಸ್ಥೆಯಲ್ಲಿ ಒಂದು ಬಗೆಯಲ್ಲಿ ಅಸಮಾನತೆಯನ್ನೇ ಸೃಷ್ಟಿಸುತ್ತಿರುವುದರ ಕುರಿತಾಗಿ ಯಾರೊಬ್ಬರೂ ಮಾತನಾಡುತ್ತಿಲ್ಲ. ಬೇರೆ ರಾಜ್ಯಗಳಲ್ಲಿ ಈ ಎಸ್‌ಇಝೆಡ್ ವಿರುದ್ಧ, ಕೃಷಿ ಭೂಮಿಯ ವಶೀಕರಣದ ವಿರುದ್ಧ ನಡೆಯುವ ರೈತರ ಹೋರಾಟಗಳನ್ನು ಯಶಸ್ವಿಯಾಗಿ ವರದಿ ಮಾಡುವ ಬಹುಪಾಲು ಮಾಧ್ಯಮಗಳು ಪ್ರತಿಭಟಿಸಲೂ ದನಿಯಿಲ್ಲದಷ್ಟು ನಿಶ್ಯಕ್ತರಾಗಿರುವ ಗುಜರಾತಿನ ಕೃಷಿಕರು ಮೋದಿಯ ಆಡಳಿತದಲ್ಲಿ ನಾಮಾವಶೇಷವಾಗುತ್ತಿರುವುದನ್ನು ಯಾವ ಮಾಧ್ಯಮಗಳೂ ವಿವರವಾಗಿ ಚರ್ಚಿಸಿಲ್ಲ. ನಮ್ಮ ಕಣ್ಣೆದುರಿಗೇ ಇಡೀ ಗುಜರಾತ್ ರಾಜ್ಯ ಕಾರ್ಪೋರೇಟಿಸಂನ ಸುಳಿಯಲ್ಲಿ ಸಿಲುಕಿಕೊಂಡು ಮಹಾತ್ಮ ಗಾಂಧಿ ಮತ್ತು ಸಬರಮತಿ ಆಶ್ರಮಗಳು ಹೆಚ್ಚೂ ಕಡಿಮೆ ಶೂನ್ಯವಾಗುತ್ತಿರುವುದರನ್ನು ಯಾರೊಬ್ಬರೂ ಚರ್ಚಿಸುತ್ತಿಲ್ಲ. ಈ ಮೋದಿಯು ಬಹಿರಂಗವಾಗಿ ಉದ್ಯಮಿಗಳೊಂದಿಗೆ ಗುರುತಿಸಿಕೊಳ್ಳುವುದನ್ನು,ಸಂವಿಧಾನಕ್ಕೆ ವಿರೋಧವಾಗಿ ಬಂಡವಾಳಶಾಹಿಗಳೊಂದಿಗೆ ಬಹಿರಂಗವಾಗಿ ಅನೈತಿಕವಾಗಿ ಒಡನಾಡುತ್ತಿರುವುದನ್ನು ಸಚ್ಚಾರಿತ್ರ್ಯದ ಹಿನ್ನಲೆಯಲ್ಲಿ, ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಮೋದಿಯನ್ನು ಪ್ರಶ್ನಿಸದೆ ಅತನನ್ನು ಚಾಣಾಕ್ಷನೆಂಬಂತೆ ಹೊಗಳುತ್ತಿವೆ. ಬೇರೆ ರಾಜ್ಯಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳ ಈ ನಡೆಗಳನ್ನು ಬಂಡವಾಳಶಾಹಿಗಳೊಂದಿಗಿನ ಅನೈತಿಕ ಮೈತ್ರಿಯೆಂದು ಪರಿಗಣಿತವಾದರೆ ಗುಜರಾತಿನಲ್ಲಿ, ಮೋದಿಯ ವಿಷಯದಲ್ಲಿ ಇದು ಅಭಿವೃದ್ದಿಯಾಗಿ ಬಿಂಬಿತವಾಗುತ್ತದೆ. ಅಲ್ಲಿ ಮಕ್ಕಳ ಅಪೌಷ್ಟಿಕತೆಯ ಕತೆಗಳು ರಾರಾಜಿಸುತ್ತಿದ್ದರೂ ಅದನ್ನು ತೆರೆಮರೆಗೆ ಸರಿಸಲಾಗುತ್ತದೆ. ಅಲ್ಪಸಂಖ್ಯಾತ ಹೆಣ್ಣುಮಕ್ಕಳ ಮೇಲಿನ ನಿರಂತರ ಲೈಂಗಿಕ ದೌರ್ಜನ್ಯಗಳು ಬೆಳಕಿಗೆ ಬರುತ್ತಿಲ್ಲ. ಗೊತ್ತಿದ್ದರೂ ಯಾರೊಬ್ಬರೂ ವಿರೋಧಿಸುತ್ತಿಲ್ಲ. ಅಲ್ಲಿನ ಖ್ಯಾತ ಗಾಂಧಿವಾದಿ ಚುನ್ನಿಭಾಯಿ ವೈದ್ಯ ಅತ್ಯಂತ ಮಾರ್ಮಿಕವಾಗಿ ಹೇಳುತ್ತಾರೆ: “1.5 ಕೋಟಿ ಖರ್ಚು ಮಾಡಿ ಗಾಂಧಿ ಮಂದಿರವನ್ನು ಕಟ್ಟುವ ಆರೆಸಸ್‌ನ ನರೇಂದ್ರ ಮೋದಿ ತಾನು ಗಾಂಧಿ ಹಂತಕ ಗೋಡ್ಸೆಯ ಕುರಿತಾಗಿ ಯಾವ ಅಭಿಪ್ರಾಯವನ್ನು ಹೊಂದಿದ್ದೇನೆಂದು ಜನತೆಗೆ ತಿಳಿಸಲಿ.”

ಇದೆಲ್ಲಕ್ಕಿಂತಲೂ ಮುಖ್ಯವಾಗಿ 2002 ರ ನಂತರ ಜಾತಿಗಳನ್ನು, ಕೋಮುಗಳನ್ನು ಕ್ರೋಢೀಕರಿಸಿ ಯಶಸ್ವಿಯಾಗಿ ಒಡೆದು ಬಹುಸಂಖ್ಯಾತರಿಗೆ ಪವಿತ್ರೀಕರಣದ ಹೆಸರಿನಲ್ಲಿ ಆತ್ಮಬಲವನ್ನು ತಂದುಕೊಡುತ್ತ, ಅಲ್ಪಸಂಖ್ಯಾತರಿಗೆ ಅದೇ ಪವಿತ್ರೀಕರಣದ ಔನ್ಯತ್ಯವನ್ನು ಪದೇ ಪದೇ ನೆನಪಿಸುತ್ತಾ ಸದಾ ಭಯದ ವಾತಾವರಣವನ್ನು ನಿರ್ಮಿಸಿದ ಮೋದಿಯ ಫ್ಯಾಸಿಸ್ಟ್‌ನ ಉಗ್ರ ಮುಖವನ್ನು ಬಹುಪಾಲು ಮಾಧ್ಯಮಗಳು ದಿಟ್ಟ ಆಡಳಿತಾತ್ಮಕ ನಡೆಯನ್ನಾಗಿ ಕಂಡಿದ್ದು ಪ್ರಜಾಪ್ರಭುತ್ವದ ಬಲು ದೊಡ್ಡ ಸೋಲು. ಇಂದು ಮುಸ್ಲಿಂಮರಿಗೆ ನೀವು ಸಾಂದರ್ಭಿಕವಾಗಿ, ಬದಲಾದ ವ್ಯವಸ್ಥೆಯೊಂದಿಗೆ ಸಹಜವಾಗಿ ಹೊಂದಿಕೊಳ್ಳುತ್ತ (ಎಷ್ಟು ಸರಳವಾಗಿ ಹೇಳಿಬಿಡುತ್ತೇವೆ ನೋಡಿ!!) ಮುನ್ನಡೆಯಿರಿ ಎಂದು ಬೇರೆ ಈ ಮಾಧ್ಯಮಗಳು ಅಮಾನವೀಯವಾಗಿ ತಾಕೀತು ಮಾಡುತ್ತಿವೆ. 6 ಕೋಟಿ ಗುಜಾರಾತಿನವರೆಲ್ಲರೂ ಒಂದೇ ಎಂದು ಬೊಗಳೆ ಬಿಡುವ ಈ ಮೋದಿ ಮತ್ತು ಬಿಜೆಪಿ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಚುನಾವಣೆಯ ಕಣಕ್ಕಿಳಿಸಲಿಲ್ಲ. ಟಿಕೀಟು ನೀಡಲಿಲ್ಲ. ಇದರ ಹಿಂದೆ ಕೆಲಸ ಮಾಡುತ್ತಿರುವ ಮತಾಂಧ ಫ್ಯಾಸಿಸಂ ಮನಸ್ಸನ್ನು ಎಳೆಎಳೆಯಾಗಿ ಬಿಡಿಸಿಡಬೇಕಾದ ಮಾಧ್ಯಮಗಳು ಇದನ್ನು ಸಂಪೂರ್ಣವಾಗಿ ಕೈ ಬಿಟ್ಟು ಮೋದಿಯನ್ನು ಕೇವಲ ರಾಜಕೀಯ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ವೈಭವೀಕರಿಸಿದ್ದು ದುರಂತವೇ ಸರಿ.

ಚುನಾವಣಾ ರಾಜಕಾರಣದ ನೆಲೆಯಲ್ಲಿ ಮಾತ್ರ ಮೋದಿಯನ್ನು ವಿಶ್ಲೇಷಿಸಿದರೆ ಅಲ್ಲಿ ಮೋದಿಯನ್ನು ಹಿಂದಿಕ್ಕುವವರಾರೂ ಇಲ್ಲ. ಅನುಮಾನವೇ ಇಲ್ಲ. ಆದರೆ ರಾಜಕೀಯ ವಿಶ್ಲೇಣೆಯೆಂದರೆ ಇಷ್ಟು ಮಾತ್ರವೇ? ರಾಜ್ಯದ ಗಾರ್ಡಿಯನ್ ಆಗಿ ಅಧಿಕಾರ ವಹಿಸಿಕೊಂಡಂತಹ ಚಾಣಾಕ್ಷ ರಾಜಕಾರಣಿ ತನ್ನ ಉದ್ದೇಶಗಳ ಸಾಧನೆಗೋಸ್ಕರ ಅನುಕೂಲವಂತ ಕಾವಲುಭಟರನ್ನು ನೇಮಿಸಿಕೊಂಡು, ಪ್ರಜಾಪ್ರಭುತ್ವದ ಮೂಲ ತತ್ವಗಳನ್ನೇ ಅಣಕಿಸುವಂತೆ ರಾಜ್ಯಭಾರ ನಡೆಸುತ್ತಾ, ಭಿನ್ನಾಭಿಪ್ರಾಯಗಳನ್ನು ಸಂಪೂರ್ಣವಾಗಿ ಹತ್ತಿಕ್ಕುತ್ತ ಪ್ರಜೆಗಳನ್ನು ಸದಾ ಭಯದ ನೆರಳಿನಲ್ಲಿಡುತ್ತಾ ಆಡಳಿತವನ್ನು ನಡೆಸಿದರೆ ಆ ಮಾದರಿಯ ರಾಜ್ಯಾಡಳಿತವನ್ನು ನೂರಾರು ವರ್ಷಗಳ ಹಿಂದಿನ ಕಾಲದ ಫ್ಯಾಸಿಸ್ಟ್ ಮಾದರಿಯ ರಾಜ್ಯಾಡಳಿತವೆಂದೇ ಕರೆಯಲಾಗುತ್ತದೆ. ಆದರೆ 2012 ರಲ್ಲಿ ಇಂದು ಮೋದಿಯು ಅದನ್ನೇ ನೆನಪಿಸುವಂತೆ ಆಡಳಿತ ನಡೆಸುತ್ತಿದ್ದರೂ ಭಾರತದ ಬಹುಸಂಖ್ಯಾತ ಪ್ರಜೆಗಳು ಆತನ ಅದ್ಭುತ ಭಾಷಣದ ಕಲೆಗೆ ಅದರ ತಲೆದೂಗಿಸುವ ದೈಹಿಕ ಭಾಷೆಗೆ ಮಾರುಹೋಗಿದ್ದು, ಕೃತಕ ಅಭಿವೃಧ್ಧಿಯನ್ನು ವಿಂಗಡಿಸಲಾಗದೇ ಸೋತಿದ್ದು, ಕುಟಿಲ ರಾಜನೀತಿಯ ಯಶಸ್ಸನ್ನೇ ಒಂದು ಮಾದರಿಯನ್ನಾಗಿ ಜಗತ್ತಿಗೆ ಒತ್ತಿ ಒತ್ತಿ ಹೇಳುತ್ತಿರುವುದು,

ಮೋದಿಯ 2002 ರ ಹತ್ಯಾಕಾಂಡವು ಹತ್ತು ವರ್ಷಗಳ ನಂತರ ಇವರೆಲ್ಲರ ಕಣ್ಣಲ್ಲಿ ಒಂದು ಆಗಿ ಹೋದ ವಿದ್ಯಮಾನವಾಗಿರುವುದು ಆಧುನಿಕ ಇಂಡಿಯಾದ ಒಟ್ಟಾರೆ ದಮನ ನೀತಿಯ ತತ್ವಗಳನ್ನು ಬಯಲುಗೊಳಿಸುತ್ತದೆ.