Daily Archives: December 27, 2012

ಪ್ರಜಾ ಸಮರ – 15 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಬಡತನ, ಹಸಿವು, ನಿರುದ್ಯೋಗ, ಜಾತೀಯತೆ ಮತ್ತು ಭ್ರಷ್ಟಾಚಾರ, ಅರಾಜಕತೆ, ರಾಜಕೀಯ ಅಸ್ಥಿರತೆ ಇವೆಲ್ಲವುಗಳ ಒಟ್ಟು ಮೊತ್ತವೇ ಭಾರತದ ಬಿಹಾರ ರಾಜ್ಯ ಎನ್ನಲು ಯಾವುದೇ ಅಡ್ಡಿಯಿಲ್ಲ. ಕಳೆದ ಏಳು ವರ್ಷಗಳಿಂದ ನಿತೀಶ್ ಕುಮಾರ್ ಎಂಬ ಸಜ್ಜನ ಮತ್ತು ಭ್ರ್ರಷ್ಟಾಚಾರ ಮುಕ್ತ ರಾಜಕಾರಣಿಯ ಕೈಗೆ ಬಿಹಾರದ ಆಡಳಿತ ಸಿಕ್ಕ ಫಲವಾಗಿ ಇತ್ತೀಚೆಗೆ ಆ ರಾಜ್ಯ ಅಭಿವೃದ್ಧಿಯತ್ತ ಸಾಗಿದೆ. ಈ ಮೊದಲು ಬಿಹಾರದ ರಾಜ್ಯವನ್ನು ಅದೊಂದು ಸ್ಮಶಾನ ಎಂದು ಆರ್ಥಿಕ ಮತ್ತು ರಾಜಕೀಯ ಮತ್ತು ಸಾಮಾಜಿಕ ತಜ್ಞರು ವ್ಯಾಖ್ಯಾನಿಸಿದ್ದರು.

ಇಂದಿನ ವರ್ತಮಾನದ ಭಾರತದಲ್ಲಿ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಬಿಹಾರ್ ಮತ್ತು ಅದರಿಂದ ಬೇರ್ಪಟ್ಟು 2000 ದಲ್ಲಿ ನೂತನ ರಾಜ್ಯವಾಗಿ ಉದ್ಭವಿಸಿದ ಜಾರ್ಖಡ್ ರಾಜ್ಯಗಳು ಸಹ ಮುಂಚೂಣಿಯಲ್ಲಿವೆ.

ಬಿಹಾರ್ ರಾಜ್ಯಕ್ಕೆ ನಕ್ಸಲ್ ಚಳುವಳಿ ಹೊಸತೇನಲ್ಲ. ಪಶ್ಚಿಮ ಬಂಗಾಳದಲ್ಲಿ 1967 ರಲ್ಲಿ ಆರಂಭವಾದ ದಿನಗಳಲ್ಲೇ ಪಶ್ಚಿಮ ಬಂಗಾಳದ ಕೆಲವು ನಾಯಕರು ತಮ್ಮ ಹೋರಾಟವನ್ನು ಬಿಹಾರ ರಾಜ್ಯಕ್ಕೆ ವಿಸ್ತರಿಸಿದ್ದರು. ಈ ರಾಜ್ಯದಲ್ಲಿ ಅತಿ ಹೆಚ್ಚಿನ ಜನಸಂಖ್ಯೆಯಲ್ಲಿರುವ ದಲಿತರು ಮತ್ತು ಇತರೆ ಹಿಂದುಳಿದ ಜಾತಿಯ ಸಮುದಾಯಗಳಿಗೆ ನಕ್ಸಲಿಯರ ಹೋರಾಟ ಇವೊತ್ತಿಗೂ ಆಸರೆಯಾಗಿ ಮತ್ತು ರಕ್ಷಣೆಯಾಗಿ ನಿಂತಿದೆ. 1982 ರಲ್ಲಿ ಬಿಹಾರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿರುವ ವರದಿಯ ಪ್ರಕಾರ 14 ಜಿಲ್ಲೆಗಳ 857 ವಲಯಗಳು ನಕ್ಸಲ್ ಚಟುವಟಿಕೆಯ ಕೇಂದ್ರಗಳಾಗಿದ್ದವು. ಇತ್ತೀಚೆಗೆ ನಕ್ಸಲ್ ಚಟುವಟಿಕೆ ಇತರೆ ಜಿಲ್ಲೆಗಳಿಗೂ ವಿಸ್ತರಿಸಿದೆ.

ಮೂಲ ಕಮ್ಯೂನಿಷ್ಟ್ ಪಾರ್ಟಿ ಆಫ್ ಇಂಡಿಯ ಪಕ್ಷದಿಂದ ಸಿಡಿದು ಮಾವೋ-ಲೆನಿನ್‌ವಾದಿ ಕಮ್ಯುನಿಸ್ಟ್ ಪಕ್ಷವನ್ನು ಸಿ.ಪಿ.ಐ. (ಎಂ.ಎಲ್.) ಚಾರು ಮುಜುಂದಾರ್ ನೇತೃತ್ವದಲ್ಲಿ ರಚಿಸಿಕೊಂಡ ಸಂದರ್ಭದಲ್ಲಿ ಬಿಹಾರದಲ್ಲಿ ಕಾರ್ಯನಿರ್ವಹಿಸುತಿದ್ದ ನಕ್ಸಲಿಯರ ಬಳಗವನ್ನು ದಕ್ಷಿಣ್ ದೇಶ್ ತಂಡವೆಂದು ಕರೆಯಲಾಗುತ್ತಿತ್ತು. ಅಮೂಲ್ಯಸೇನ್ ಮತ್ತು ಕನಯ್ ಚಟರ್ಜಿ ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಜಂಗಲ್ ಮಹಲ್ ಎಂಬ ಅರಣ್ಯ ಪ್ರದೇಶದಲ್ಲಿದ್ದುಕೊಂಡು ಬಿಹಾರದ ಚಟುವಟಿಕೆಗಳನ್ನು ನಿಯಂತ್ರಿಸುತಿದ್ದರು. ಕನಾಯ್ ಚಟರ್ಜಿ ಬಿಹಾರದ ಔರಂಗಬಾದ್ ಮತ್ತು ಗಯಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ “ಬೆಂಗಾಲ್-ಬಿಹಾರ್ ಸ್ಪೆಷಲ್ ಏರಿಯಾ ಕಮಿಟಿ” ಎಂಬ ತಂಡವನ್ನು ಸ್ಥಾಪಿಸಿದನು. ನಂತರದ ದಿನಗಳಲ್ಲಿ ಈ ತಂಡ ತನ್ನ ಹೆಸರನ್ನು ಮಾವೋವಾದಿ ಕಮ್ಯೂನಿಷ್ಟ್ ಸೆಂಟರ್ (ಎಂ.ಸಿ.ಸಿ.) ಎಂದು ಬದಲಾಯಿಸಿಕೊಂಡಿತು. ಕನಾಯ್ ಚಟರ್ಜಿ ನಿಧನಾನಂತರ 1980 ರ ದಶಕದ ವೇಳೆಗೆ ಬಿಹಾರದ ನಾಯಕರಾಗಿ ಹೊರಹೊಮ್ಮಿದ್ದ ಶಿವಂಜಿ ಮತ್ತು ರಾಮಧರ್ ಸಿಂಗ್ ಇವರುಗಳ ನಡುವಿನ ಭಿನ್ನಾಭಿಪ್ರಾಯದಿಂದ ಸಂಘಟನೆಯಿಂದ ಹೊರಬಂದ ರಾಮಧರ್‌ಸಿಂಗ್ ಕನುಸನ್ಯಾಲ್ ನೇತೃತ್ವದ ಸಂಘಟನೆಗೆ ಸೇರ್ಪಡೆಯಾದ.

1980 ರ ದಿನಗಳಲ್ಲಿ ಬಿಹಾರದಲ್ಲಿ ಪ್ರಮೋದ್ ಮಿಶ್ರ ಮತ್ತು ಸಂಜಯ್ ದುಸದ್ ಎಂಬ ಇಬ್ಬರು ranvir-sena-violenceಉಗ್ರ ಸ್ವರೂಪದ ನಾಯಕರು ಮುಂಚೂಣಿಗೆ ಬಂದ ನಂತರ ಬಿಹಾರದಲ್ಲಿ ನಕ್ಸಲ್ ಚಟುವಟಿಕೆ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿತು. ಕೇವಲ ಎರಡು ವರ್ಷಗಳ ಅವಧಿಯಲ್ಲಿ ಐದು ಸಾವಿರ ಮಂದಿ ಪೂರ್ಣಾವಧಿ ಕಾರ್ಯಕರ್ತರು ಮತ್ತು ಹತ್ತು ಸಾವಿರ ಮಂದಿ ಬೆಂಬಲಿಗರು ನಕ್ಸಲ್ ಸಂಘಟನೆಯ ಜೊತೆ ಗುರುತಿಸಿಕೊಂಡಿದ್ದರು. ಇದೆ ವೇಳೆಗೆ ಬಿಹಾರದಲ್ಲಿ ಜಾತಿ ಕಲಹವೂ ಸಹ ಭುಗಿಲೆದ್ದಿತ್ತು. ರಜಪೂತರು ಮತ್ತು ಯಾದವರ ಸಮುದಾಯದ ನಡುವೆ ನಡೆದ ಜಾತಿ ಸಂಘರ್ಷ ಸಾಮೂಹಿಕ ಕಗ್ಗೊಲೆಯಲ್ಲಿ ಅಂತ್ಯಗೊಂಡಿತು. ಇದೇ ರೀತಿ ಕುಮ್ರಿ ಮತ್ತು ಭುಮಿಯಾರ್‌ಗಳು ದಲಿತ ಮತ್ತು ಹಿಂದುಳಿದ ಜಾತಿಗಳ ಮೇಲೆ ನಡೆಸಿದ ಅತ್ಯಾಚಾರ, ಕೊಲೆ ಇವೆಲ್ಲವೂ ಇಡೀ ಭಾರತ ಮಾತ್ರವಲ್ಲ, ಮನುಕುಲವೇ ನಾಚಿಕೆ ಪಡುವಂತಿತ್ತು. ಇಂತಹ ದ್ವೇಷದ ದಿನಗಳಲ್ಲಿ ದಲಿತರನ್ನು ಅಂತ್ಯಗೊಳಿಸುವುದೇ ನಮ್ಮ ಮುಖ್ಯ ಗುರಿ ಎಂದು ಬಹಿರಂಗವಾಗಿ ಘೋಷಿಸುವುದರ ಮೂಲಕ ಹುಟ್ಟಿಕೊಂಡ ರಣವೀರ ಸೇನೆ ಎಂಬ ಮೇಲ್ಜಾತಿ ವರ್ಗದ (ಭೂಮಿಯಾರ್ ಬ್ರಾಹ್ಮಣರ ಸಮುದಾಯದ) ದುಷ್ಟರ ಕೂಟ ಬಿಹಾರದಲ್ಲಿ ನಡೆಸಿದ ನರಮೇಧಗಳನ್ನು ಲೆಕ್ಕವಿಟ್ಟವರಿಲ್ಲ. ಇಂತಹ ವೇಳೆಯಲ್ಲಿ ಅನಾಥ ಸ್ಥಿತಿಯಲ್ಲಿದ್ದ ಬಿಹಾರದ ದಲಿತ ಮತ್ತು ಹಿಂದುಳಿದ ಜಾತಿಯ ಸಮುದಾಯಗಳ ಪಾಲಿಗೆ ಮಾವೋವಾದಿ ನಕ್ಸಲ್ ನಾಯಕರು ಮತ್ತು ಕಾರ್ಯಕರ್ತರು ರಕ್ಷಣೆಯಾಗಿ ನಿಂತರು.

ಬೇಲಾ ಭಾಟಿಯ ಎಂಬ ಸಮಾಜ ಶಾಸ್ತ್ರಜ್ಞೆ ಬಿಹಾರದ ಹಿಂಸೆ ಮತ್ತು ಅಲ್ಲಿನ ಜಾತಿ ಸಂಘರ್ಷ ಹಾಗೂ ನಕ್ಸಲ್ ಚಳುವಳಿ ಕುರಿತಂತೆ ನಡೆಸಿದ ಸಂಶೋಧನಾ ಪ್ರಬಂಧ “The Naxal Movement in Bihar” ಏಪ್ರಿಲ್ 5 ರ “Economic & political Weekly” ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮಡಿವಾಳ ಜಾತಿಗೆ ಸೇರಿದ ಯುವಕನೊಬ್ಬ ಪ್ರಥಮಬಾರಿಗೆ ಪದವಿ ಪಡೆದ ನಂತರ ಮೇಲ್ಜಾತಿ ಜನರಿಂದ ಅನುಭವಿಸಿದ ಅಪಮಾನಗಳು, ನಂತರದ ದಿನಗಳಲ್ಲಿ ಎಂ.ಎ. ಪದವಿ ಪಡೆದು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದಾಗ ಆತನಿಗೆ ಬರುತಿದ್ದ ಕೆಲಸದ ಆದೇಶಗಳು ತಲುಪದ ಹಾಗೆ ಅಂಚೆ ಕಛೇರಿಯಲ್ಲಿ ಸಂಚು ನಡೆಸಿ ಆತನ ಬದಕು ಮತ್ತು ಅನ್ನವನ್ನು ಕಸಿದ ಸಮಾಜದ ಕ್ರೌರ್ಯ ಎಲ್ಲವೂ ಇಲ್ಲಿ ದಾಖಲಾಗಿದೆ. ಅಂತಿಮವಾಗಿ ರಾಮ್ ಪ್ರವೇಶ್ ಬೈತ ಎಂಬ ಹೆಸರಿನ ಈ ಯುವಕ ನಕ್ಸಲ್ ಚಳುವಳಿ ಜೊತೆ ಗುರುತಿಸಿಕೊಂಡು ನಾಯಕನಾಗಿ ಬೆಳೆದನು. 2008 ರಲ್ಲಿ ಬಿಹಾರ ಪೊಲೀಸರಿಂದ ಬಂಧಿತನಾಗಿ ಈಗ ಜೈಲಿನಲ್ಲಿದ್ದಾನೆ. ಇದೇ ರೀತಿ ಜಗದೀಶ್ ಮಾತೊ ಎಂಬ ಯುವಕನೊರ್ವ ಜಮೀನ್ದಾರರ ಗೂಂಡಾ ಪಡೆಯ ವಿರುದ್ದ ಸಿಡಿದೆದ್ದು, ಮಾಜಿ ಡಕಾಯಿತ ರಾಮೇಶ್ವರ್ ಐಹಿರ್ ಎಂಬಾತನ ಜೊತೆಗೂಡಿ ನಕ್ಸಲ್ ಪಡೆ ಕಟ್ಟಿಕೊಂಡು ಭೋಜ್ ಪುರ್ ಜಿಲ್ಲೆಯಲ್ಲಿ ಹೋರಾಡುತಿದ್ದ ಸಂದರ್ಭದಲ್ಲಿ ಕ್ರಮವಾಗಿ 1972 ಮತ್ತು 1975 ರಲ್ಲಿ ಇಬ್ಬರೂ ಪೊಲೀಸರ ಗುಂಡಿಗೆ ಬಲಿಯಾದರು.

ಬಿಹಾರದಲ್ಲಿ ನಕ್ಸಲ್ ಚಳುವಳಿ 1970 ರ ದಶಕದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿತು. ಕಲ್ಯಾಣ್ ರಾಯ್ ಎಂಬಾತ ಹುಟ್ಟುಹಾಕಿದ ಎಂ.ಎಂ.ಜಿ. (ಮ್ಯಾನ್. ಮನಿ. ಗನ್.) ಸಂಘಟನೆ ಸಿಂಗಭೂಮಿ ಜಿಲ್ಲೆ ಮತ್ತು ಜೆಮ್‌ಶೆಡ್‌ಪುರ ಸಮೀಪದ ಅರಣ್ಯ ವಲಯದಲ್ಲಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತ್ತು. ಈ ಸಂಘಟನೆಯ ಇಪ್ಪತ್ತಕ್ಕೂ ಹೆಚ್ಚು ಕಾರ್ಯಕರ್ತರು ಪೊಲೀಸರ ಬಂಧನಕ್ಕೆ ಒಳಗಾದಾಗ ಅವರ ಜೊತೆ ಓರ್ವ ಬ್ರಿಟನ್ ಯುವತಿ ಸಹ ಸಿಕ್ಕಿ ಬಿದ್ದಿದ್ದಳು. ಶಿಕ್ಷಕಿಯಾಗಿದ್ದ ಆಕೆ ಕೊಲ್ಕತ್ತ ನಗರದಲ್ಲಿದ್ದಾಗ ತಾನು ಪ್ರೀತಿಸಿದ ಯುವಕ ಅಮಲೇಂದ್ರ ಸೇನ್ ಜೊತೆ ನಕ್ಸಲ್ ಸಂಘಟನೆ ಸೇರಿಕೊಂಡಿದ್ದಳು. ಹಜಾರಿಬಾಗ್ ಸೆರೆಮನೆಯಲ್ಲಿ ಐದು ವರ್ಷ ಶಿಕ್ಷೆ ಅನುಭವಿಸಿದ ನಂತರ ಆಕೆಯನ್ನು ಬಿಹಾರ ಸರ್ಕಾರ ಆಕೆಯ ತಾಯ್ನಾಡಿಗೆ ಗಡಿಪಾರು ಮಾಡಿತು. 1980 ರಲ್ಲಿ ಆಕೆ ಇಂಗ್ಲೆಂಡ್ ತಲುಪಿದ ನಂತರ ಬರೆದ “My years in an Indian prison” ಕೃತಿಯಲ್ಲಿ ಭಾರತದ ಸೆರೆಮನೆಗಳ ಸ್ಥಿತಿ ಗತಿ ಮತ್ತು ಅಲ್ಲಿನ ಖೈದಿಗಳನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವ ಬಗ್ಗೆ ವಿವರವಾಗಿ ದಾಖಲಿಸಿದ್ದಾಳೆ.

ಜಾತಿ ಮತ್ತು ಸಮಾಜದ ವೈರುದ್ಧಗಳ ಹಿನ್ನೆಯಲ್ಲಿ ಹುಟ್ಟಿಕೊಂಡ ನಕ್ಸಲ್ ಹೋರಾಟ ಬಿಹಾರದಲ್ಲಿ ಇವೊತ್ತಿಗೂ ಅದು ಜಾತಿಯ ಸಂಘರ್ಷವಾಗಿಯೇ ಮುಂದುವರಿದಿದೆ. 1980 ರ ದಶಕದಲ್ಲಿ ಚಾರು ಮುಜಂದಾರ್‌ನಿಂದ ಪ್ರೇರಿತನಾಗಿ ನಕ್ಸಲ್ ಪಡೆ ಸೇರಿದ್ದ ವಿನೋದ್ ಮಿಶ್ರಾ ಎಂಬ ದುರ್ಗಾಪುರದ ಇಂಜಿನಿಯರಿಂಗ್ ಕಾಲೇಜು ಪದವೀಧರ ಕಟ್ಟಿದ್ದ ಲಿಬರೇಶನ್ ಗ್ರೂಪ್ ಅಥವಾ ಎಂ.ಸಿ.ಸಿ. ನಕ್ಸಲ್ ಪಡೆ ಒಂದು ದಶಕದ ಕಾಲ ಬಿಹಾರದಲ್ಲಿ ಅಟ್ಟ ಹಾಸದಿಂದ ಮೆರೆಯುತಿದ್ದ ಜಮೀನ್ದಾರರು ಮತ್ತು ಮೇಲ್ಜಾತಿಯ ಜನರ ರಕ್ತದ ಹೊಳೆಯನ್ನೇ ಹರಿಸಿತು. ಇದಕ್ಕೆ ಪರೋಕ್ಷವಾಗಿ ಅಲ್ಲಿನ ಭುಮಿಯಾರ್ ಎಂಬ ಮೇಲ್ಜಾತಿಯ ಜನ ರಚಿಸಿಕೊಂಡ “ರಣಧೀರ್ ಸೇನಾ” ಎಂಬ ಪಡೆ ಕಾರಣವಾಗಿತ್ತು. ದಲಿತರನ್ನು ಕೊಂದು ಹಾಕುವುದೇ ನಮ್ಮ ಮುಖ್ಯ ಗುರಿ ಎಂದು ಅಧಿಕೃತವಾಗಿ ಘೋಷಿಸಿಕೊಂಡಿದ್ದ ರಣಧೀರ್ ಸೇನೆ ನಕ್ಸಲರನ್ನು ಹಿಂಸೆಗೆ ಪ್ರಚೋದಿಸಿತ್ತು. ಡಾ. ಬಿಂದೇಶ್ವರ್ ಸಿಂಗ್ ಎಂಬುವರು ಬರೆದಿರುವ “Rural violence in Bihar” (1987) ಎಂಬ ಕೃತಿ ಜಾತಿಯ ನೆಪದಲ್ಲಿ ಬಿಹಾರದ ನೆಲದಲ್ಲಿ ಹರಿದ ನೆತ್ತರಿನ ಇತಿಹಾಸದ ಚಿತ್ರಣವನ್ನು ನೀಡುತ್ತದೆ.

1986 ರ ಸೆಂಪ್ಟಂಬರ್ ನಲ್ಲಿ ಔರಂಗಾಬಾದ್ ಜಿಲ್ಲೆಯಲ್ಲಿ 11 ಮಂದಿ ರಜಪೂತರು, 87 ರ ಮೇ 11 ರಂದು ಅದೇ ಔರಂಗಾಬಾದ್ ಜಿಲ್ಲೆಯಲ್ಲಿ 42 ರಜಪೂತರು, 1991 ರ ಜನವರಿ ತಿಂಗಳಿನಲ್ಲಿ ಗಯಾ ಜಿಲ್ಲೆಯಲ್ಲಿ ಇಬ್ಬರು ಪೊಲೀಸರು ಮತ್ತು ಅದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಐವರು ಮುಸ್ಲಿಮರು (ಗಯಾ ಜಿಲ್ಲೆ) ಮತ್ತು ಮೇ ತಿಂಗಳಿನಲ್ಲಿ ಗಯಾ ಜಿಲ್ಲೆಯ ಬಿ.ಜೆ.ಪಿ. ಪಕ್ಷದ ಸಂಸದ ಹಾಗೂ ಡಿಸಂಬರ್ ತಿಂಗಳಿನಲ್ಲಿ ಮೂವರು ಭೂಮಿಯಾರ್ ಬ್ರಾಹ್ಮಣರು, ಮತ್ತೆ 1992 ರ ಪೆಬ್ರವರಿ ತಿಂಗಳಿನಲ್ಲಿ 37 ಮಂದಿ ಭೂಮಿಯಾರ್ ಬ್ರಾಹ್ಮಣರು ನಕ್ಸಲರ ಹಿಂಸೆಯಲ್ಲಿ ಹತರಾದರು. 1990 ರ ವರ್ಷವೊಂದರಲ್ಲೇ ಬಿಹಾರದಲ್ಲಿ 167 ಹಿಂಸಾತ್ಮಕ ಘಟನೆಗಳು ನಡೆದು 57 ಮಂದಿ ಪ್ರಾಣ ತೆತ್ತಿದ್ದಾರೆ.

ನಕ್ಸಲರ ಹಿಂಸೆಗೆ ಪ್ರತಿಯಾಗಿ ಮೇಲ್ಜಾತಿ ಸಮುದಾಯವಾದ ಭೂಮಿಯಾರ್ ಬ್ರಾಹ್ಮಣರು 1994 ರಲ್ಲಿ ಭೋಜ್ ಪುರ್ Brameshvar singಜಿಲ್ಲೆಯಲ್ಲಿ ಶಿವಸೇನೆಯ ಬಾಳ್‌ಥಾಕರೆ ಪ್ರತಿರೂಪದಂತಿದ್ದ ಬ್ರಹ್ಮೇಶ್ವರ್ ಸಿಂಗ್ ಎಂಬಾತನ ನೇತೃತ್ವದಲ್ಲಿ ಸ್ಥಾಪಿಸಿದ “ರಣವೀರ ಸೇನೆ” ನಿರಂತರವಾಗಿ ಐದು ವರ್ಷಗಳ ಕಾಲ ದಲಿತರನ್ನು ಕೊಲ್ಲುತ್ತಾ ಬಂದಿತು. 1995 ರಲ್ಲಿ ನಡೆದ ಬಿಹಾರದ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಐವತ್ತು ಮಂದಿ ಹಿಂದುಳಿದ ವರ್ಗದ ಜನ ಹತ್ಯೆಯಾದರು. 1996 ರಲ್ಲಿ ಭೋಜ್ ಪುರ್ ಜಿಲ್ಲೆಯ ಬತನಿತೂಲ ಎಂಬ ಹಳ್ಳಿಯಲ್ಲಿ ಹದಿನಾರು ಮಂದಿ ದಲಿತ ಮಹಿಳೆಯರು, ಆರು ಜನ ಮಕ್ಕಳು ಮತ್ತು ಮೂರು ಹಸುಗೂಸುಗಳು ರಣವೀರ ಸೇನೆಯ ಕಿಚ್ಚಿಗೆ ಬಲಿಯಾದರು. 1997 ರ ಡಿಸಂಬರ್ ತಿಂಗಳಿನಲ್ಲಿ ಮತ್ತೇ ನಡೆದ ನರಮೇಧದಲ್ಲಿ 61 ಮಂದಿ ದಲಿತರು ಬಲಿಯಾದರು. bathanitola_protestಇವರಲ್ಲಿ ಹದಿನಾರು ಮಂದಿ ಮಕ್ಕಳು, ಇಪ್ಪತ್ತೇಳು ಮಹಿಳೆಯರು, ಹದಿನೆಂಟು ಮಂದಿ ಪುರುಷರು, ಹಾಗೂ ಐದು ಮಂದಿ ಅಪ್ರಾಪ್ತ ಬಾಲಕಿಯರು ಸೇರಿದ್ದರು. 1999 ರ ಜನವರಿಯಲ್ಲಿ ಜಹನಾಬಾದ್ ಜಿಲ್ಲೆಯಲ್ಲಿ ಮತ್ತೇ 22 ಮಂದಿ ದಲಿತರ ಮಾರಣಹೋಮ ಜರುಗಿತು. ಬಿಹಾರ ಸರ್ಕಾರ ರಣವೀರ ಸೇನೆ ಸಂಘಟನೆಯ ಮೇಲೆ ನಿಷೇಧ ಹೇರಿದ ನಂತರವೂ ಸಹ ದಲಿತರ ಸಾಮೂಹಿಕ ಕಗ್ಗೊಲೆ ನಿಲ್ಲಲೇ ಇಲ್ಲ. ಅಂತಿಮವಾಗಿ ರಣವೀರ ಸೇನೆಯ ಸಂಸ್ಥಾಪಕ ಬ್ರಹ್ಮೇಶ್ವರಸಿಂಗ್‌ನನ್ನು ನಕ್ಸಲ್ ಬೆಂಬಲಿತ ದಲಿತರು ಇದೇ 2012 ರ ಜೂನ್ ಒಂದರಂದು ಭೋಜ್‌ಪುರ ಪಟ್ಟಣದಲ್ಲಿ ಗುಂಡಿಕ್ಕಿ ಹತ್ಯೆ ಮಾಡುವುದರ ಮೂಲಕ ದಲಿತರ ಸಾವಿಗೆ ಸೇಡು ತೀರಿಸಿಕೊಂಡರು. ಇಂತಹ ಹಿಂಸೆಯ ಚಟುವಟಿಕೆಯ ನಡುವೆ ವಿನೋದ್ ಮಿಶ್ರ ನಾಯಕತ್ವದ ಎಂ.ಸಿ.ಸಿ. ನಕ್ಸಲ್ ಪಡೆ ಬಿಹಾರದಲ್ಲಿ 3200 ಹೆಕ್ಟೇರ್ ಭೂಮಿಯನ್ನು ಜಮೀನ್ದಾರರಿಂದ ವಶಪಡಿಸಿಕೊಂಡು ದಲಿತ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡಿತ್ತು.

ಬಿಹಾರದ ಗಯಾ, ಸಿಂಗಭೂಮಿ, ಭೋಜ್‌ಪುರ, ನಳಂದ, ಜಹನಾಬಾದ್ ಔರಂಗಬಾದ್ ಜೆಮ್‌ಶೆಡ್‌ಪುರ ಜಿಲ್ಲೆ ಸೇರಿದಂತೆ ಕೇಂದ್ರ ಹಾಗೂ ದಕ್ಷಿಣ ಬಿಹಾರದಲ್ಲಿ ಏ.ಕೆ.47 ಬಂದೂಕ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ 15000 ನಕ್ಸಲರನ್ನು ಹೊಂದಿತ್ತು. ಬಿಹಾರದ ನಕ್ಷಲ್ ಹೋರಾಟಕ್ಕೆ ಗಡಿಯಾಚೆಗಿನ ನೆರೆಯ ನೇಪಾಳದ ಮಾವೋವಾದಿ ನಕ್ಸಲ್ ಸಂಘಟನೆ ಉಚಿತವಾಗಿ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿತು.

ಬಿಹಾರದ ಹಿಂದುಳಿದ ಮತ್ತು ದಲಿತರ ವಿಶ್ವಾಸ ಗಳಿಸಿದ್ದ ಎಂ.ಸಿ.ಸಿ. ನಕ್ಸಲ್ ಸಂಘಟನೆ ದಂಡಕಾರಣ್ಯದ ಮಾದರಿಯಲ್ಲಿ “ಕ್ರಾಂತಿಕಾರಿ ಕಿಸಾನ್ ಸಂಘಟನೆ”, “ಜನ್ ಸುರಕ್ಷಾ ಸಂಘಷ್ ಮಂರ್ಚ್”. “ಬುದ್ಧಿಜೀವಿ ಸಂಘ್”, ಮತ್ತು “ಕ್ರಾಂತಿಕಾರಿ ಚಾತ್ರ ಲೀಗ್” ಹಾಗೂ ಸಶಸ್ತ್ರ ಪಡೆಯಾದ “ಲಾಲ್ ರಕ್ಷಕ್ ದಳ್” ಎಂಬ ಅಂಗ ಘಟಕಗಳನ್ನು ಹೊಂದಿತ್ತು.

ಇದರ ಜೊತೆಗೆ 1982 ರಲ್ಲೇ ಚಾರು ಮುಜುಂದಾರ್‌ನ ಸಂಗಾತಿಗಳಲ್ಲಿ ಒಬ್ಬನಾಗಿದ್ದ ನಾಗಭೂಷಣ್ ಪಟ್ನಾಯಕ್ ನೇತೃತ್ವದಲ್ಲಿ ಆರಂಭಗೊಂಡಿದ್ದ ಇಂಡಿಯನ್ ಪೀಪಲ್ಸ್ ಫ್ರಂಟ್ ಎಂಬ ರಾಜಕೀಯ ಘಟಕವನ್ನು ಪುನಶ್ಚೇತನಗೊಳಿಸಿ ಬಿಹಾರದಲ್ಲಿ 1985 ರ ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿತ್ತಾದರೂ ಯಶಸ್ಸು ಕಾಣಲಿಲ್ಲ. ಆದre 1989 ರ ಚುನಾವಣೆಯಲ್ಲಿ ಇಂಡಿಯನ್ ಪೀಪಲ್ಸ್ ಫ್ರಂಟ್‌ನ ವತಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಏಳು ಮಂದಿ ಶಾಸಕರು ಮತ್ತು ಓರ್ವ ಸಂಸದನನ್ನು ಬಿಹಾರದ ಜನತೆ ಆಯ್ಕೆ ಮಾಡಿದ್ದರು. ನಂತರದ ದಿನಗಳಲ್ಲಿ ಎಂ.ಸಿ.ಸಿ. ಸಂಘಟನೆ ಜೊತೆ ಆಂಧ್ರ ಮೂಲದ ಅಪ್ಪಾಳಸೂರಿ ಮತ್ತು ಪಶ್ಚಿಮ ಬಂಗಾಳದ ಬೊವನಿರಾಯ್ ನೇತೃತ್ವದ ಸಿ.ಪಿ.ಐ. ( ಎಂ.ಎಲ್.) ಅಂದರೆ ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಗಳು ಸೇರ್ಪಡೆಯಾದ ನಂತರ ಕೆಲವು ನಾಯಕರು ರಾಜಕೀಯ ಚಟುವಟಿಕೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವದನ್ನು ಸ್ಥಗಿತಗೊಳಿಸಲಾಯಿತು. ಬಿಹಾರದಲ್ಲಿ ಮಾವೋ ಮತ್ತು ಲೆನಿನ್ ಪ್ರೇರಿತ ನಕ್ಸಲ್ ಚಟುವಟಿಕೆಯ ಜೊತೆ ಜೊತೆಯಲ್ಲಿ ಇದೇ ಮಾದರಿಯಲ್ಲಿ “ಮಜ್ದೂರ್ ಕಿಸಾನ್ ಸಂಗ್ರಾಮ್ ಸಮಿತಿ” ಎಂಬ ಸಂಘಟನೆ ದಲಿತ ಮತ್ತು ಭೂಹೀನರ ಪರವಾಗಿ ಹೋರಾಟ ನಡೆಸಿದ್ದು ಉಲ್ಲೇಖನಿಯವಾದದ್ದು.

ಜಯಪ್ರಕಾಶ್ ನಾರಾಯಣರ ಪಕ್ಕಾ ಅನುಯಾಯಿಗಳಲ್ಲಿ ಒಬ್ಬರಾಗಿದ್ದ ಡಾ.ವಿನಯ್ ಎಂಬುವರು 1979 ರಲ್ಲಿ ಜನತಾ ಪಕ್ಷದಿಂದ ಹೊರಬಂದು 1982 ರಲ್ಲಿ ಎಂ.ಕೆ.ಎಸ್.ಎಸ್. ಎಂಬ ಈ ಕ್ರಾಂತಿಕಾರಿ ಸಂಘಟನೆಯನ್ನು ಹುಟ್ಟು ಹಾಕಿದ್ದರು. ನಕ್ಸಲಿಯರಿಗಿಂತ ಭಿನ್ನವಾದ ಹಾದಿಯಲ್ಲಿ, ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ಹೋರಾಟ ನಡೆಸುವುದು ಡಾ. ವಿನಯ್ ಅವರ ಕನಸಾಗಿತ್ತು. ಕೃಷಿ ಕಾರ್ಮಿಕರಿಗೆ ಕನಿಷ್ಟ ಕೂಲಿ, ಮತ್ತು ಜಮೀನ್ದಾರರ ಶೋಷಣೆಯನ್ನು ತಪ್ಪಿಸುವುದು ಹಾಗೂ ದಲಿತರ ರಕ್ಷಣೆಯನ್ನು ಗುರಿಯಾಗಿಟ್ಟುಕೊಂಡಿತ್ತು. ಆದರೆ 1986 ರಲ್ಲಿ ಒಂಬತ್ತು ಹಿಂದುಳಿದ ಕುಟುಂಬಗಳ ನಡುವಿನ ವೈಷಮ್ಯ ಪರಸ್ಪರ ಕುಟುಂಬಗಳ ಸದಸ್ಯರ ಹತ್ಯೆಗೆ ಕಾರಣವಾಯಿತು. ಈ ಸಂದರ್ಭದಲ್ಲಿ 26 ಮಂದಿ ಎಂ.ಕೆ.ಎಸ್.ಎಸ್. ಕಾರ್ಯಕರ್ತರು ಪೊಲೀಸರ ಗುಂಡಿಗೆ ಬಲಿಯಾದರು. ಜೊತೆಗೆ ಸರ್ಕಾರ ಕೂಡ ಈ ಸಂಘಟನೆಯ ಮೇಲೆ ನಿಷೇಧ ಹೇರಿತು. ಇಂತಹ ಹಿನ್ನಡೆಯ ನಡುವೆ ಅಂತಿಮವಾಗಿ ವಿಧಿಯಿಲ್ಲದೆ ನಕ್ಸಲಿಯರ ಹಿಂಸೆಯ ಮಾರ್ಗವನ್ನು ಅನುಸರಿಸುತ್ತಿರುವ ಈ ಸಂಘಟನೆ ಸಧ್ಯ ಬಿಹಾರದಲ್ಲಿ 25 ಶಸ್ತ್ರ ಸಜ್ಜಿತ ಪಡೆಗಳು ಮತ್ತು ೩೦ಸಾವಿರ ಕಾರ್ಯಕರ್ತರನ್ನು ಹೊಂದಿದೆ. ಎಂ.ಕೆ.ಎಸ್.ಎಸ್. ಸಂಘಟನೆಯಲ್ಲೂ ಸಹ ಅತ್ಯಾಧುನಿಕ ಮಿಷಿನ್ ಗನ್, ಸ್ಟನ್ ಗನ್ ಮತ್ತು ಏ.ಕೆ.47 ಮತ್ತು ಏ.ಕೆ.56 ಬಂದೂಕಗಳಿರುವುದು ವಿಶೇಷವಾಗಿದೆ.

ಭಾರತದಲ್ಲಿ ಮಧ್ಯಭಾರತದ ದಂಡಕಾರಣ್ಯ ಹೊರತು ಪಡಿಸಿದರೆ ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ dalit_hostel_burntನಕ್ಸಲರ ಚಟುವಟಿಕೆ ತೀವ್ರಗೊಂಡಿದೆ. ಹಾಗಾಗಿ ಆಧುನಿಕ ಬಿಹಾರದ ಚರಿತ್ರೆ ಎಂದರೇ ಅದು ರಕ್ತ ಚರಿತ್ರೆ ಎಂಬಂತಾಗಿದೆ. ಲಂಡನ್ ನಗರದಲ್ಲಿರುವ ಗೋಲ್ಡ್‌ಸ್ಮಿತ್ ವಿಶ್ವ ವಿದ್ಯಾನಿಲಯದ ಸಮಾಜಶಾಸ್ತ್ರಜ್ಞೆ ಅಲ್ಪ ಶಾ (Alpa Shah) ಎಂಬಾಕೆ ಕಳೆದ ಇಪ್ಪತ್ತು ವರ್ಷಗಳಿಂದ ನೇಪಾಳ ಮತ್ತು ಬಿಹಾರದ ನಕ್ಸಲ್ ಚಟುವಟಿಕೆ ಕುರಿತು ಅಧ್ಯನ ನಡೆಸುತಿದ್ದಾರೆ. ಈಕೆ ಸಂಪಾದಿಸಿರುವ “Windows in to a Revolution” ಎಂಬ ಕೃತಿಯಲ್ಲಿ ಬಿಹಾರ ರಾಜ್ಯದ ಪ್ರತಿಯೊಂದು ದಲಿತ ಕುಟುಂಬದ ದುರಂತದ ಚಿತ್ರಣವಿದೆ. ಅಲ್ಲಿನ ಪ್ರತಿ ಕ್ಷಣದ ನಕ್ಸಲ್ ಚಟುವಟಿಕೆಗಳು ಮತ್ತು ಮೇಲ್ಜಾತಿಯ ಹಿಂಸೆ ಇವುಗಳಿಗೆ ಸಾಕ್ಷಿಯಾಗಿದ್ದ ಈ ತಜ್ಞೆ ದಾಖಲಿಸಿರುವ ಅಂಶಗಳು ನಕ್ಸಲಿಯರು ಮತ್ತು ಅವರ ಹಿಂಸೆ ಕುರಿತಂತೆ ನಮ್ಮ ಮರುಚಿಂತನೆಗೆ ದಿಕ್ಸೂಚಿಯಾಗಬಲ್ಲವು.

(ಮುಂದುವರಿಯುವುದು)