ಗಲ್ಲಿಗೇರಿಸಿಬಿಟ್ಟರೆ ಅತ್ಯಾಚಾರಗಳು ನಿಂತುಬಿಡುತ್ತವೆಯೇ? ಪರಿಹಾರಗಳೇನು?

ತೇಜ ಸಚಿನ್ ಪೂಜಾರಿ

ದೆಹಲಿಯಲ್ಲಿ ಇತ್ತೀಚೆಗೆ ನಡೆದ ಯುವತಿಯೊಬ್ಬಳ ಮಾನಭಂಗ ಪ್ರಕರಣವು ಜನಮಾನಸದಲ್ಲಿ ಆಕ್ರೋಶಭರಿತ ಪ್ರತಿಕ್ರಿಯೆಯನ್ನು ಸೃಷ್ಟಿಸಿದೆ. ಪ್ರಜಾಪ್ರಭುತ್ವದ ಹೃದಯಭಾಗದಲ್ಲೇ ನಡೆದ ನಿರ್ದಯ ಅತ್ಯಾಚಾರವು ನಮ್ಮ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳಿಗೆ ಕನ್ನಡಿ ಹಿಡಿಯುತ್ತದೆ. ಅತ್ಯಾಚಾರ ಘಟನೆಯು ಸಹಜವಾಗಿಯೇ ಯುವಸಮುದಾಯವನ್ನು ಕೆರಳಿಸಿದೆ. ದೆಹಲಿಯೂ ಸೇರಿದಂತೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ಪ್ರತಿಭಟನೆ-ಧರಣಿಗಳು ನಡೆಯುತ್ತಿವೆ. ಮಹಿಳಾ ಸಂಘಟನೆಗಳು ಏಕಸ್ವರದಲ್ಲಿ ಸ್ತ್ರೀ ಸುರಕ್ಷತೆಯ ಖಾತರಿಗೆ ಸರಕಾರಿ ವ್ಯವಸ್ಥೆಯನ್ನು ಒತ್ತಾಯಿಸುತ್ತಿವೆ. rape-illustrationಪ್ರತಿಕ್ರಿಯಾತ್ಮಕ ಅಭಿವ್ಯಕ್ತಿಯ ಇಂತಹ ಚಟುವಟಿಕೆಗಳು ಉತ್ತಮ ಬೆಳವಣಿಗೆಗಳೇ ಆಗಿವೆ. ಆದರೆ ಇದೇ ವೇಳೆಗೆ ಕೆಲವು ಸಂಘಟನೆಗಳು ಹಾಗೂ ವ್ಯಕ್ತಿಗಳು ಅತ್ಯಾಚಾರದಂತಹ ಅನಾಗರಿಕ ಹಾಗೂ ಪೈಶಾಚಿಕ ಕೃತ್ಯಗಳನ್ನು ತಡೆಯಲು, ಮರಣದಂಡನೆಯಂತಹ, ಅಷ್ಟೇ ಅನಾಗರಿಕ ಶಿಕ್ಷೆಯ ಜಾರಿಗೆ ಒತ್ತಾಯಿಸುತ್ತಿವೆ. ಘಟನಾ ಕ್ಷಣದ ಭಾವುಕತೆಯು ಸಹಜವಾಗಿಯೇ ಅಂತಹ ಬೇಡಿಕೆಗಳನ್ನು ಅಪೇಕ್ಷಿಸುತ್ತದೆ. ಆದರೆ ವಸ್ತುನಿಷ್ಠವಾದ ಅಧ್ಯಯನಗಳು ಅತ್ಯಾಚಾರದಂತಹ ಅಫರಾಧಗಳ ನಿಯಂತ್ರಣದಲ್ಲಿ ಮರಣದಂಡನೆ ಶಿಕ್ಷೆಯ ಸಾಫಲ್ಯವನ್ನು ಪ್ರಶ್ನಿಸುತ್ತವೆ.

ಇಂತಹ ವಿವೇಚನಾರಹಿತ ಬೇಡಿಕೆಗಳ ಹಿನ್ನೆಲೆಯಲ್ಲಿ ಹಲವು ನಾಗರಿಕ ಹಕ್ಕು ಸಂಘಟನೆಗಳು ಗಲ್ಲು ಶಿಕ್ಷೆಯ ಮುಂದುವರಿಕೆ ಹಾಗೂ ವಿಸ್ತರಣೆಗೆ ವಿರೋಧವನ್ನು ವ್ಯಕ್ತಪಡಿಸುತ್ತಿವೆ. ಮಹಿಳೆಯರ ಶ್ರೇಯಸ್ಸಿಗೆ ಪ್ರಾಮಾಣಿಕವಾಗಿ ದುಡಿಯುತ್ತಿರುವ ವಿವಿಧ ಮಹಿಳಾ ಒಕ್ಕೂಟಗಳು ಕೂಡಾ ಅತ್ಯಾಚಾರ ತಡೆಯಯಲು ಮರಣದಂಡನೆ ಒಂದು ಪರಿಹಾರ ಎಂಬ ವಾದವನ್ನು ತಳ್ಳಿ ಹಾಕಿವೆ. ಇವೆಲ್ಲಾ ಬೆಳವಣಿಗೆಗಳು ಮರಣದಂಡನೆ ಶಿಕ್ಷೆಯ ಒಟ್ಟಾರೆ ಆಶಯ ಹಾಗೂ ಸಾಫಲ್ಯ ಕುರಿತಾದ ಚರ್ಚೆ ಹಾಗೂ ಅಧ್ಯಯನಗಳಿಗೆ ಅವಕಾಶ ಮಾಡಿಕೊಟ್ಟಿವೆ.

***

ಮರಣದಂಡನೆ ಶಿಕ್ಷೆಯನ್ನು ಶೈಕ್ಷಣಿಕ ಹಾಗೂ ಆರ್ಥಿಕ ನೆಲೆಯಲ್ಲಿ ಮುಂದುವರೆದಿರುವ ರಾಷ್ಟ್ರಗಳು ರದ್ದುಪಡಿಸಿವೆ. ಜಪಾನ್, ಸಿಂಗಾಪುರ, ದಕ್ಷಿಣ ಕೊರಿಯಾ ಹಾಗೂ ಅಮೇರಿಕಾ ಮಾತ್ರವೇ ಇದಕ್ಕೆ ಹೊರತಾಗಿವೆ. ಐರೋಪ್ಯ ಒಕ್ಕೂಟವು ಮರಣದಂಡನೆ ಶಿಕ್ಷೆಯನ್ನು ನಿಷೇದಿಸಬೇಕೆಂದು ತನ್ನ ಸದಸ್ಯ ರಾಷ್ಟ್ರಗಳಿಗೆ ಕಟ್ಟಪ್ಪಣೆ ವಿಧಿಸಿದೆ. ಸಿಂಗಾಪುರ, ತೈವಾನ್, ಇಂಡೋನೇಷಿಯದಂತಹ ದೇಶಗಳು ಗಲ್ಲು ಶಿಕ್ಷೆಯ ಜಾರಿ ಕುರಿತಂತೆ ಸ್ವಯಂ ನಿಯಂತ್ರಣವನ್ನು ಹೇರಿಕೊಂಡಿವೆ. ನಮ್ಮಲ್ಲೂ ಕೂಡಾ ಸರ್ವೋಚ್ಚ ನ್ಯಾಯಾಲಯದ ಮುತುವರ್ಜಿಯ ಫಲವಾಗಿ ಕೇವಲ “ಅಪರೂಪದಲ್ಲಿ ಅಪರೂಪ”ದ ಪ್ರಕರಣಗಳಲ್ಲಿ ಮಾತ್ರವೇ ಗಲ್ಲು ಶಿಕ್ಷೆ ವಿಧಿಸಲಾಗುತ್ತಿದೆ. ಉಳಿದಂತೆ ಅಮೇರಿಕಾ ಹಾಗೂ ಚೀನಾ ದೇಶಗಳು ಹೆಚ್ಚಿನ ಸಂಖ್ಯೆಯಲ್ಲಿ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸುತ್ತಿವೆ.

“ಭಯಸೃಷ್ಟಿ” ಗಲ್ಲು ಶಿಕ್ಷೆಯ ಹಿನ್ನಲೆಯಲ್ಲಿ ಇರುವ ಸಾಮಾನ್ಯ ತರ್ಕವಾಗಿದೆ. ಅಂದರೆ ಕಠಿಣ ಶಿಕ್ಷೆಯ ಬೆದರಿಕೆಯನ್ನು ಒಡ್ಡುವ ಮೂಲಕ ಜನರನ್ನು ಅಂತಹ ಅಫರಾಧ ಕೃತ್ಯಗಳಲ್ಲಿ ತೊಡಗದಂತೆ ತಡೆಯುವುದಾಗಿದೆ. ಆದರೆ ಇಂತಹ ಬೆದರುಬೊಂಬೆ ತಂತ್ರದ ಸಾಫಲ್ಯವನ್ನು ವಸ್ತುನಿಷ್ಟವಾಗಿ ವಿಶ್ಲೇಷಿಸಿದಾಗ ಮರಣದಂಡನೆಯ ಭಯ ಅಫರಾದೀ ದುಷ್ಕೃತ್ಯಗಳನ್ನು ತಡೆಯುವಲ್ಲಿ ವಿಫಲವಾಗಿರುವ ಅಂಶವು ಸ್ಪಷ್ಟವಾಗಿ ಗೋಚರಿಸುತ್ತದೆ. ಗಲ್ಲು ಶಿಕ್ಷೆಯನ್ನು ರದ್ದು ಪಡಿಸಿರುವ ಐರೋಪ್ಯ ಸಮುದಾಯದ ರಾಷ್ಟ್ರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಪರಾಧ ಪ್ರಕರಣಗಳು ಕಠಿಣ ಪ್ರತೀಕಾರಾತ್ಮಕ ಶಿಕ್ಷೆಗಳಿರುವ ಭಾರತ ಹಾಗೂ ಗಲ್ಪ್ ದೇಶಗಳಲ್ಲಿ ದಾಖಲಾಗುತ್ತಿವೆ. ಮರಣದಂಡನೆಯ ಭೀತಿಯಿಂದ ಅಮೇರಿಕಾದಲ್ಲಿ ಗುಂಡಿನ ದಾಳಿಗಳು ನಿಂತಿವೆಯೆ? ಕ್ರೈಮ್ ದಾಖಲೆಗಳ ಪ್ರಕಾರ ಭಾರತದಲ್ಲಿ 1992 ನಂತರ ಹತ್ಯಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಇದೇ ಕಾಲಾವಧಿಯಲ್ಲಿ ಮರಣದಂಡನೆ ಪ್ರಕರಣಗಳೂ ಕೂಡಾ ಸರ್ವೋಚ್ಚ ನ್ಯಾಯಾಲಯದ ರೂಲಿಂಗ್ ಫಲವಾಗಿ ಕಡಿಮೆಯಾಗುತ್ತಿವೆ. 1995ರ ತರುವಾಯ ಭಾರತದಲ್ಲಿ ಕೇವಲ ಕೆಲವು ಗಲ್ಲು ಶಿಕ್ಷೆಗಳು ಜಾರಿಯಾಗಿವೆ. hang-ropeಹೀಗಾಗಿ ತೊಂಭತ್ತರ ದಶಕದ ನಂತರದಲ್ಲಿ ನಮ್ಮ ದೇಶದಲ್ಲಿ ಕಡಿಮೆಯಾಗುತ್ತಿರುವ ಹತ್ಯಾ ಪ್ರಕರಣಗಳಿಗೆ ಕಾರಣಗಳನ್ನು ಅದೇ ಅವಧಿಯಲ್ಲಿ ಕಂಡುಬಂದ ಆರ್ಥಿಕ ಪ್ರಗತಿಯಲ್ಲಿ ಕಾನೂನು ತಜ್ಞರು ಹುಡುಕಿದ್ದಾರೆ.

ನ್ಯಾಯಾಡಳಿತೆಯ ವೈಫಲ್ಯ ಕೂಡಾ ಹಲವು ಚಿಂತಕರನ್ನು ಮರಣದಂಡನೆ ಶಿಕ್ಷೆಗೆ ವಿರೋಧ ವ್ಯಕ್ತಪಡಿಸುವಂತೆ ಮಾಡಿದೆ. ನ್ಯಾಯಾಧೀಶ, ತನಿಖಾ ಸಂಸ್ಥೆ ಹಾಗೂ ಪ್ರಾಸಿಕ್ಯೂಷನ್‌ಗಳ ತಪ್ಪು ನಡೆಗಳು ಶಿಕ್ಷೆಯ ಸ್ವರೂಪವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿವೆ. ಅಮೇರಿಕಾದ ಅಪರಾಧ ತನಿಖಾ ಪ್ರಕ್ರಿಯೆಯಲ್ಲಿ ಡಿಎನ್ಎ ಬೆರಳಚ್ಚು ತಂತ್ರಜ್ಞಾನ ಜಾರಿಗೆ ಬಂದ ತರುವಾಯದಲ್ಲಿ (1990) ಸಾಂಪ್ರದಾಯಿಕ ತನಿಖೆ ಪ್ರಕ್ರಿಯೆಯಲ್ಲಿ ಆರೋಪ ಸಾಬೀತಾಗಿದ್ದ ಸುಮಾರು 300 ಆರೋಪಿಗಳು ದೋಷಮುಕ್ತಗೊಂಡಿದ್ದಾರೆ. ಅದರಲ್ಲಿ ಸುಮಾರು 17 ಪ್ರಕರಣಗಳು ಮರಣದಂಡನೆಯ ಶಿಕ್ಷೆಗೆ ಸಂಬಂಧಿಸಿದ್ದವು. ಇಂತಹ ಸುಳ್ಳು ಸಾಕ್ಷ, ಒತ್ತಾಯದ ತಪ್ಪೊಪ್ಪಿಗೆ ಹಾಗೂ ದೋಷಪೂರಿತ ಪೊರೆನ್ಸಿಕ್ ಮೊದಲಾದ ಕೊರತೆಗಳು ಕಾರಣಿಸುವ ಮರಣದಂಡನೆಯಂತಹ ಶಿಕ್ಷೆಗಳು ಅನಾಹುತಕಾರಿಯಾಗಿರುತ್ತವೆ. ಭಾರತದ ಸರ್ವೋಚ್ಚ ನ್ಯಾಯಾಲಯವೇ ಹದಿಮೂರು ಆರೋಪಿಗಳಿಗೆ ತಪ್ಪಾಗಿ, ಅಂದರೆ ಸುಪ್ರೀಂ ಕೋರ್ಟ್‌ನ ರೂಲಿಂಗನ್ನು ಮೀರಿ, ಗಲ್ಲು ಶಿಕ್ಷೆ ನೀಡಲಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಅವರಿಗೆ ವಿಧಿಸಿದ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಹಲವು ನಿವೃತ್ತ ನ್ಯಾಯಾಧೀಶರುಗಳು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.

ಇವುಗಳ ಜೊತೆಗೆ, ಸಮಾಜೋ ಆರ್ಥಿಕ ಅಂಶಗಳ ಅಧ್ಯಯನಗಳು ಕೂಡಾ ಮರಣದಂಡನೆ ಶಿಕ್ಷೆಯ ವಿಶ್ಲೇಷಣೆಯಲ್ಲಿ ಬಹಳ ಮಹತ್ವವನ್ನು ಪಡೆಯುತ್ತದೆ. ಇತಿಹಾಸದುದ್ದಕ್ಕೂ ನಿರ್ಗತಿಕ, ಬಡ ಹಾಗೂ ದುರ್ಬಲ ಜನಾಂಗಗಳೇ ರಾಜ್ಯವು ನೀಡುವ ಶಿಕ್ಷೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬಲಿಯಾಗಿವೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಒಂದು ಸಮಾಜೋ ಆರ್ಥಿಕ ಪ್ರಕ್ಷುಬ್ಧತೆಗಳು ವ್ಯಕ್ತಿಯನ್ನು ಸುಲಭವಾಗಿ ಅಪರಾಧ ಕೃತ್ಯಗಳತ್ತ ತಳ್ಳುತ್ತವೆ. ಹಸಿವು ಹಾಗೂ ಅಜ್ಞಾನ ಸಹಜವಾಗಿಯೇ ತರ್ಕದ ನೆರವನ್ನು ಪಡೆಯುವುದಿಲ್ಲ. ಹಿಗಾಗಿಯೇ ಕಸಬ್‌ನಂತಹ ಬಲಿಪಶುಗಳು ಇನ್ಯಾರದ್ದೋ ಹಿಂಸೆಯ ಆಟದಲ್ಲಿ ದಾಳವಾಗುತ್ತಾರೆ: ಮತ್ತು ರಾಜ್ಯವು ನೀಡುವ ಅಷ್ಟೂ ಶಿಕ್ಷೆಗಳಿಗೆ ಪಾತ್ರರಾಗುತ್ತಾರೆ. ಸೂತ್ರಧಾರ ಮಾತ್ರ ರಾಜ್ಯದ, ಸಮಾಜದ ಪೋಷಣೆಯಲ್ಲಿ ನಿಶ್ಚಿಂತನಾಗಿರುತ್ತಾನೆ. ಎರಡನೆಯದಾಗಿ, ತಮ್ಮ ಮೇಲಣ ಆರೋಪಗಳನ್ನು ಅಲ್ಲಗೆಳೆಯಲು ನಿರ್ಗತಿಕರಲ್ಲಿ ಸಂಪನ್ಮೂಲಗಳ ಕೊರತೆಯಿರುತ್ತದೆ. ಮನು ಶರ್ಮಾನಂತಹ ಹೈಪ್ರೊಫೈಲ್ ಆರೋಪಿಗಳ ರಕ್ಷಣೆಗೆ ಜೇಠ್ಮಲಾನಿಗಳಂತಹ ಘನ ವಕೀಲರ ದಂಡೇ ಇರುತ್ತದೆ. ಅದರೆ ಬಡ ಆರೋಪಿಗಳು ಸರಿಯಾದ ಡಿಫೆನ್ಸಿನ ಕೊರತೆಯಿಂದಾಗಿ ಅವರು ನಿರಪರಾಧಿಗಳಾಗಿದ್ದ ಪಕ್ಷದಲ್ಲಿ ಕೂಡಾ ಅಪರಾಧಿಗಳಾಗಿ ದೋಷಿತರಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ.

ಮರಣದಂಡನೆಯ ವಿಕಾಸವೂ ಕೂಡಾ ಆಯಾ ಯುಗದ ಮೌಲ್ಯಗಳನ್ನು ಅನುಸರಿಸಿಯೇ ನಡೆದಿದೆ. ಪ್ರಾಚೀನ ಹಾಗೂ ಮಧ್ಯಯಗದಲ್ಲಿ “ಬಹು ಯಾತನೆಯಿಂದ ಕೂಡಿದ ಸಾವು” ಮರಣದಂಡನೆಯ ತತ್ವವಾಗಿತ್ತು. ಹೀಗಾಗಿಯೇ ಅಂತ್ಯಕಾಲದಲ್ಲಿ ಅತೀವ ವೇದನೆಯನ್ನುಂಟು ಮಾಡುವ ಶಿಕ್ಷೆಗಳಾದ ಶಿಲುಬೆಗೇರಿಸುವುದು, ಸಮುದ್ರಕ್ಕೆ ತಳ್ಳುವುದು, ಅಂಗ ಛೇದನ, ಪ್ರಾಣಿಗಳಿಗೆ ಆಹಾರವಾಗಿ ನೀಡುವುದು ಇವೇ ಮೊದಲಾದವುಗಳನ್ನು ವಿವಿಧ ನಾಗರಿಕತೆಗಳು ಅನುಸರಿಸುತ್ತಿದ್ದವು. ಮುಂದೆ ಆಧುನಿಕ ಕಾಲಘಟ್ಟದಲ್ಲಿ ಪ್ರೆಂಚ್ ಕ್ರಾಂತಿಯ ತರುವಾಯ “ಯಾತನಾ ರಹಿತ ಜೀವ ಹರಣ” ಶಿಕ್ಷೆಗೆ ಹಲವು ದೇಶಗಳು ಮನಸ್ಸು ಮಾಡಿದವು. ಮಾನವತೆಯ ಬೌದ್ದಿಕತೆಯಲ್ಲಿ ಕಂಡುಬಂದ ಬೆಳವಣಿಗೆಗಳು ಅಂತಹ ಬದಲಾವಣೆಗೆ ಕಾರಣವಾಗಿದ್ದವು. ಹೀಗಾಗಿಯೇ ಗಿಲೊಟಿನ್ ಯಂತ್ರ, ಗಲ್ಲು, ವಿಷಕಾರಿ ಇಂಜೆಕ್ಷನ್ ಹಾಗೂ ಇಲೆಕ್ಟ್ರಿಕ್ ಕುರ್ಚಿಗಳು ಬಳಕೆಗೆ ಬಂದವು. ಅಂದಿನಿಂದ ಇಂದಿನವರೆಗೆ ನಮ್ಮ ಬೌದ್ಧಿಕತೆಯಲ್ಲಿ ಹಲವು ಅಭೂತಪೂರ್ವ ಉನ್ನತಿಗಳು ದಾಖಲಾಗಿವೆ. “ನಾಗರಿಕತೆ”ಯ ಅರ್ಥವೂ ಬಹುವಾಗಿ ವಿಸ್ತರಿಸಲ್ಪಟ್ಟಿದೆ. ಇಂತಹ ಪರಿವೇಶದಲ್ಲಿ ಮರಣದಂಡನೆ ಶಿಕ್ಷೆಯ ನಿಷೇಧ ಅದರ ವಿಕಾಸ ಹಾದಿಯ ಸಹಜ ತಾತ್ವಿಕ ಬೆಳವಣಿಗೆಯಾಗಿರುತ್ತದೆ.

ಅಪರಾಧವನ್ನು ನಾವು ಗ್ರಹಿಸುವ ರೀತಿಯಲ್ಲೂ ಭಿನ್ನತೆಗಳಿವೆ ಎಂಬ ಅಂಶ ಇಲ್ಲಿ ಉಲ್ಲೇಖನೀಯ. ಸರಬ್ಜಿತ್ ಸಿಂಗ್‌ಗೆ ಪಾಕಿಸ್ತಾನದಲ್ಲಿ ನೀಡಿರುವ ಶಿಕ್ಷೆಯನ್ನು ಮಾಫಿ ಮಾಡಬೇಕೆಂದು ನಾವು ಅಪೇಕ್ಷಿಸುತ್ತೇವೆ. ಅದೇ ನಾವು ಅಪ್ಜಲ್ ಗುರುಗೆ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಸರಬ್ಜಿತ್ ಸಿಂಗ್ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆಂದು ಪಾಕ್ ಹೇಳುತ್ತಿದೆ. ಜೊತೆಗೆ ಈಗಾಗಲೇ ಪಾಕ್ ಸೆರೆವಾಸದಿಂದ ಹೊರಬಂದು ಭಾರತ ಪ್ರವೇಶಿಸಿರುವ ಇನ್ನಿಬ್ಬರು ಕೈದಿಗಳು ತಾವು ರಾ ಗೂಡಾಚರರಾಗಿದ್ದ ವಿಚಾರವನ್ನು ಇಲ್ಲಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ ಅನ್ಸಾರ್ ಬರ್ನಿಯಂತಹ ಪಾಕ್ ಮಾನವ ಹಕ್ಕು ಹೋರಾಟಗಾರರು ಸರಬ್ಜಿತ್ ಬಿಡುಗಡೆಗೆ ಶ್ರಮಿಸುತ್ತಿದ್ದಾರೆ. ಇದು “ಕಟ್ಟುವ” ನೆಲೆ. ನಮ್ಮಲ್ಲೂ ವಿವಿಧ ಆರೋಪಗಳ ಅಡಿಯಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ರಾಜೀವ ಹಂತಕರು ಹಾಗೂ ಬಲ್ವಂತ್ ಸಿಂಗ್ ರೊಜನಾ ಅವರ ಮರಣದಂಡನೆ ರದ್ದತಿ ಕೋರಿ ಕ್ರಮವಾಗಿ ತಮಿಳುನಾಡು ಹಾಗೂ ಪಂಜಾಬ್ ರಾಜ್ಯಗಳಲ್ಲಿ ನಡೆದ ಒತ್ತಾಯದ ಅಭಿವ್ಯಕ್ತಿಗಳನ್ನು ನಾವು ಕಂಡಿದ್ದೇವೆ. ಅಲ್ಲದೆ ಸೈನಿಕರು ನಡೆಸುವ ಅತ್ಯಾಚಾರ ಕೊಲೆಗಳನ್ನು ಒಪ್ಪುತ್ತಾ ಅವರನ್ನು ಆರಾಧಿಸುವ ವರ್ಗಗಳೂ ನಮ್ಮಲ್ಲಿವೆ. ಹೀಗಾಗಿಯೇ ಮಣಿಪುರದ rape-and-murder-of-thangjam-manorama-protestsತಂಗಜಮ್ ಮನೋರಮಾ (2004) ಮತ್ತು ಕಾಶ್ಮೀರದ ಸೋಫಿಯಾದ ನೇಲೋಫರ್ ಹಾಗೂ ಅಸೀಯಾರ ಅತ್ಯಾಚಾರ ಹಾಗೂ ಹತ್ಯಾ ಪ್ರಕರಣಗಳು ಕಾಲಗರ್ಭದಲ್ಲಿ ಮೌನವಾಗಿ ಕುಳಿತಿವೆ. ಹಾಗೆಯೇ ಪ್ಯಾಲೆಸ್ತೈನಿನಲ್ಲಿ ತಮ್ಮ ದೇಶ ನಡೆಸುತ್ತಿರುವ ಅತ್ಯಾಚಾರಗಳನ್ನು ಸಮ್ಮತಿಸುವ ಇಸ್ರೇಲಿಗರಿದ್ದಾರೆ. ಇಂತಹ ಪೃವೃತ್ತಿಗಳು ನಮ್ಮೊಳಗೇ ಇರುವ ದೌರ್ಬಲ್ಯಗಳನ್ನು ಪ್ರತಿನಿಧಿಸುತ್ತವೆ. ಮರಣದಂಡನೆಯಂತಹ ಶಿಕ್ಷೆಗಳೂ ಕೂಡಾ ಇಂತಹದ್ದೇ ದೇಶ, ಜಾತಿ, ಜನಾಂಗ, ವೃತ್ತಿ ಮೊದಲಾದ ಮಾನದಂಡಗಳನ್ನು ಆಧರಿಸಿಯೇ ಸ್ವೀಕರಣೆ ಯಾ ನಿರಾಕರಣೆಯ ನೆಲೆಯನ್ನು ಪಡೆಯುತ್ತವೆ. ಇಂತಹ ಎಲ್ಲಾ ಮಿತಿಗಳನ್ನು ಮೀರಿ ವ್ಯಕ್ತಿ ಹಾಗೂ ರಾಜ್ಯ ಇವೆರಡರ ಹಿಂಸೆಗಳನ್ನೂ ಏಕಕಾಲಕ್ಕೆ ಧಿಕ್ಕರಿಸಿ ಸ್ವಚ್ಛ ಜೀವಪರ ಧೋರಣೆಯನ್ನು ರೂಡಿಸಿಕೊಂಡಾಗಲೇ ಮನುಕುಲದ ಶ್ರೇಯಸ್ಸು ಸಾಧಿತವಾಗುತ್ತದೆ.

***

ಮತ್ತೆ ಅತ್ಯಾಚಾರ ಪ್ರಕರಣಗಳತ್ತ ದೃಷ್ಠಿ ಹಾಯಿಸಿದಲ್ಲಿ ಸದ್ಯದ ಗಲ್ಲು ಶಿಕ್ಷೆಯ ಬೇಡಿಕೆಯು ತೀರಾ ಕ್ಷುಲ್ಲಕವಾಗಿ ಕಾಣುತ್ತದೆ. ಇದು ಪ್ರಸ್ತುತ ಸಮಸ್ಯೆಯ ಮೂಲ ಹಾಗೂ ಪರಿಹಾರ ಕಂಡುಹಿಡಿಯುವ ಪ್ರಕ್ರಿಯೆಯ ದಾರಿ ತಪ್ಪಿಸುತ್ತದೆ. ಇತ್ತೀಚೆಗೆ ಸಮಸ್ಯೆಗಳಿಗೆ ಕೇವಲ ವ್ಯವಸ್ಥಾತ್ಮಕ ನೆಲೆಯಲ್ಲಿ ಪರಿಹಾರಗಳನ್ನು ಹುಡುಕುವ ಪ್ರವೃತ್ತಿಗಳು ಹೆಚ್ಚುತ್ತಿವೆ. ‘ಭ್ರಷ್ಟಾಚಾರದ ನಿವಾರಣೆಗೆ ಜನಲೋಕಪಾಲ’, ‘ಅತ್ಯಾಚಾರ ತಡೆಗೆ ಗಲ್ಲು’ ಇಂತಹ ಏಕಸೂತ್ರದ ಸಿಸ್ಟಮಿಕ್ ಬದಲಾವಣೆಗಳೇ ಅಂತಿಮ ಪರಿಹಾರವೆಂಬಂತೆ ಪ್ರತಿಪಾದನೆಯಾಗುತ್ತಿವೆ. ಇಂತಹದ್ದೇ ಮನಃಸ್ಥಿತಿಗಳು ಇನ್ನೊಂದೆಡೆ ಅತ್ಯಾಚಾರ ತಡೆ ತಂತ್ರವಾಗಿ ಹೆಣ್ಣುಮಕ್ಕಳಿಗೆ ವಸ್ತ್ರಸಂಹಿತೆಯನ್ನು ಬೋಧಿಸುತ್ತಿವೆ.

ಮೊದಲ ಪರಿವರ್ತನೆ ಆಗಬೇಕಿರುವುದು ವ್ಯಕ್ತಿಯ ಮಟ್ಟದಲ್ಲೇ ಆಗಿದೆ. ಅತ್ಯಾಚಾರ ಪುರುಷನ ಆಹಂಕಾರದ, ದರ್ಪದ ಅಭಿವ್ಯಕ್ತಿಯೂ ಆಗಿದೆ. ಅಂತಹ ಹಿಂಸಾರತಿಯ ಭಾವನೆಗಳ ಜಾಗದಲ್ಲಿ ಸ್ತ್ರೀಯನ್ನು ಗೌರವಿಸುವ, ಆಕೆಯನ್ನು ಸಮಾನಳಾಗಿ ಕಾಣುವ ಚಿಂತನೆಗಳು ಹುಟ್ಟಿಕೊಳ್ಳಬೇಕಿದೆ. ಹೀಗಾದಲ್ಲಿ ಮಾತ್ರವೇ ಹೆಣ್ಣನ್ನು ಕೇವಲ ಭೋಗವಸ್ತುವಾಗಿ ಕಾಣುವ ಸಮಾಜದ ಮನೋಧರ್ಮದಲ್ಲಿ ಬದಲಾವಣೆ ಕಂಡುಬರುತ್ತದೆ. ಇದಕ್ಕೆ ಅವಶ್ಯವಿರುವುದು ಮುಕ್ತವಾದ ಸಾಮಾಜೀಕರಣ ಪ್ರಕ್ರಿಯೆ. ಪೃವೃತ್ತಿಗಳ ಸ್ಥಾನದಲ್ಲಿ ಸಂಸ್ಕ್ರತಿಯನ್ನು ಪ್ರತಿಷ್ಠಾಪಿಸುವ ಪ್ರಕ್ರಿಯೆಯಲ್ಲಿ ಧರ್ಮ ದಯನೀಯ ವೈಫಲ್ಯ ಕಂಡಿದೆ. ಹೀಗಾಗಿ ಸಾಮಾಜಿಕರಣದ ಹೊಸ ನೆಲೆಗಳ ಶೋಧ ನಡೆಯಬೇಕಿದೆ. ಮಾನವ ಹಕ್ಕುಗಳು, ಸಹಜ ನ್ಯಾಯ, ವೈಚಾರಿಕತೆ ಹಾಗೂ ವೈಜ್ಞಾನಿಕತೆಯ ನೆಲೆಯಲ್ಲಿ ನವ ಸಾಮಾಜಿಕರಣವು ರೂಪುಗೊಳ್ಳಬೇಕಾಗಿದೆ. ಇದಕ್ಕೆ ಪೂರಕವಾಗಿ ನಡೆಯಬೇಕಿರುವುದು ಪೋಲಿಸು ಹಾಗೂ ನ್ಯಾಯದಾನ ವ್ಯವಸ್ಥೆಯಲ್ಲಿ ಸುಧಾರಣೆಗಳು. ಆಗ ಮಾತ್ರವೇ ಅತ್ಯಾಚಾರದಂತಹ ಪಿಡುಗುಗಳಿಗೆ ಅಂತ್ಯ ಹಾಡಬಹುದಾಗಿದೆ.

Leave a Reply

Your email address will not be published. Required fields are marked *