Monthly Archives: December 2012

ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯ

– ತೇಜ ಸಚಿನ್ ಪೂಜಾರಿ

ಸೃಷ್ಠಿ ಹಾಗೂ ಲಯ ಭರತಖಂಡದ ಸಾಂಸ್ಕ್ರತಿಕ ಬದುಕಿನ ಎರಡು ಮಹತ್ವದ ಪಾರಂಪರಿಕ ಪರಿಭಾಷೆಗಳಾಗಿವೆ. ಇವೆರಡೂ ಕಾರ್ಯಗಳಿಗೆ ಅಧಿಪತಿ ಸ್ಥಾನದಲ್ಲಿ ಪ್ರತ್ಯೇಕ ದೈವ ನಿಯಾಮಕರಿದ್ದಾರೆ. ಪ್ರತ್ಯೇಕತೆಯ ಅಂಶವು ಇಲ್ಲಿನ ತಾತ್ವಿಕ ಅವಶ್ಯಕತೆಯೂ ಆಗಿದೆ. ಯಾಕೆಂದರೆ, ಸೃಷ್ಠಿಕರ್ತ ಹಾಗೂ ಲಯಕರ್ತ ಒಬ್ಬನೇ ಆದಲ್ಲಿ ಕೆಡುಕನ್ನು ಯಾಕೆ ಸೃಷ್ಠಿಸಬೇಕು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇಂತಹ ಕನಿಷ್ಠ ವೈಚಾರಿಕತೆಯ ಸಂಶಯ ಇಂದು ನಮ್ಮ ಕನ್ನಡ ವಾಹಿನಿಗಳ ಪ್ರಜ್ಞಾವಂತ ವೀಕ್ಷಕರಲ್ಲಿ ಸೃಷ್ಠಿಯಾಗುತ್ತಿದೆ. ಅವುಗಳು ಒಂದೆಡೆ ನಿತ್ಯಾನಂದ ರುಷಿಕುಮಾರರಂತಹ ಸ್ವಾಮಿಗಳ ಕಾಷಾಯ ವಸ್ತ್ರದ ಬಣ್ಣ ಬಯಲು ಮಾಡುತ್ತಿದ್ದರೆ ಇನ್ನೊಂದೆಡೆ ಅಂತಹದ್ದೇ ಕ್ರತ್ರಿಮ ಸ್ವಾಮೀಜಿಗಳನ್ನು ನಿರ್ಮಿಸುವ ಕೆಲಸವನ್ನು ಮಾಡುತ್ತಿವೆ. ಅನ್ಯಾಯದ ಲಯಕರ್ತನ ಸೋಗಿನಲ್ಲೇ ನಡೆಯುತ್ತಿರುವ ಸೃಷ್ಠಿಕರ್ತನ ಕಾರ್ಯಾಚರಣೆಗೆ ಪ್ರಾತಃಕಾಲದ ಹೊತ್ತು ಟಿ.ವಿ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವ ಜೋತಿಷ್ಯ ಸಮಾಲೋಚನೆಯ ಕಾರ್ಯಕ್ರಮಗಳು ವೇದಿಕೆಯಾಗಿ ಬಳಕೆಯಾಗುತ್ತಿವೆ. ‘ಮಹರ್ಷಿ ದರ್ಪಣ’, ‘ಓಂಕಾರ ಮಾತುಕತೆ’, ‘ಪ್ರಣವಂ’, ‘ಆಯುಷ್ಮಾನ್ ಭವ’, ‘ರಾಶಿಫಲ’, ಮೊದಲಾದ  ಜ್ಯೋತಿಷಿ ಕಾರ್ಯಕ್ರಮಗಳು ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯದ ಮಾಧ್ಯಮಗಳಾಗಿ ರೂಪುಗೊಳ್ಳುತ್ತಿವೆ.

***

“ಆತಂಕ” ಹಾಗೂ “ಬೆರಗು” ದೈವ ನಿರ್ಮಾಣ ಪ್ರಕ್ರಿಯೆಯ ಎರಡು ಪ್ರಮುಖ ಅಂಶಗಳು. “ಅಜ್ಞಾನ” ಅವುಗಳ ಕಾರ್ಯಾಚರಣೆಗೆ ವೇದಿಕೆ ಒದಗಿಸಿಕೊಡುತ್ತದೆ. ಹೀಗಾಗಿಯೇ ನಮ್ಮ ಹಿರೀಕರು ಗಾಳಿ, ಅಗ್ನಿ, ಬೆಳಕು, ಮಳೆ ಇವೇ ಮೊದಲಾದ ಸಹಜ ಪ್ರಾಕೃತಿಕ ಅಂಶಗಳ ಮರ್ಮ ಅರಿಯಲಾಗದೆ ಬೆರಗು ಪಟ್ಟು ಕ್ರಮೇಣ ಆತಂಕಿತರಾಗಿ ಅವುಗಳಿಗೆ ಅತಿಮಾನುಷ ದೈವಸ್ವರೂಪವನ್ನು ನೀಡಿದ್ದರು. ಇದು ಶತಶತಮಾನಗಳ ಹಿಂದಿನ ಕತೆ. ಆದರೆ ಇಂದೂ ಕೂಡಾ ಅದೇ ಅಂಶಗಳನ್ನು ಮುಂದಿಟ್ಟುಕೊಂಡು ಕನ್ನಡ ವಾಹಿನಿಗಳು ದೈವ ಸ್ವರೂಪಿ ಸ್ವಾಮೀಜಿಗಳನ್ನು ನಿರ್ಮಿಸ ಹೊರಟಿವೆ. ಇಲ್ಲಿ ಹೊಸ ಸೇರ್ಪಡೆ “ಪ್ರಲೋಭನೆ”ಯ ಅಂಶ. ನಮ್ಮ ಬೌಧ್ಧಿಕ ದಿವಾಳಿತನ ಹಾಗೂ ಕಾರ್ಪೊರೇಟ್ ಹಿತಾಸಕ್ತಿಗಳು ಟೆಲಿವಿಷನ್ ಚಾನೆಲ್‌ಗಳ ಇಂತಹ ಅಸಹ್ಯ ಹಾಗೂ ಸಮಾಜ ವಿರೋಧಿ ಕಾರ್ಯತಂತ್ರಗಳಿಗೆ ಅವಕಾಶ ಮಾಡಿಕೊಡುತ್ತಿವೆ.

***

ಆತಂಕ ಭಾವನೆಯ ನಿರ್ದಿಷ್ಟ ಗುಣ ವಿಶೇಷತೆಗಳನ್ನು ಕನ್ನಡ ಟೆಲಿವಿಷನ್ ಚಾನಲ್‌ಗಳು ತಮ್ಮ ಕುತ್ಸ್ತಿತ ಉದ್ದೇಶಗಳ ಈಡೇರಿಕೆಗೆ ಬಳಸಿಕೊಳ್ಳುತ್ತಿವೆ. ಪ್ರಸಾರ ಮಾಧ್ಯಮ ಕ್ಷೇತ್ರದಲ್ಲಿ “ಆತಂಕ ಸನ್ನಿವೇಶ” ಮಾರುಕಟ್ಟೆ ಮೌಲ್ಯವನ್ನು ಹೊಂದಿರುತ್ತದೆ. ಮನೋವೈಜ್ಞಾನಿಕ ನೆಲೆಯಲ್ಲಿ ಜನರನ್ನು ಅತಿಮಾನುಷತೆಯತ್ತ ನೂಕಬಲ್ಲ ಶಕ್ತಿಯು ಕೂಡಾ ಆತಂಕ ಭಾವಕ್ಕಿದೆ. ಇದೇ ಹಿನ್ನೆಲೆಯಲ್ಲಿ ಆತಂಕ ವಿಚಾರವನ್ನೇ ಬಂಡವಾಳ ಮಾಡಿಕೊಂಡು ಕನ್ನಡ ವಾಹಿನಿಗಳು ಕಾರ್ಯಾಚರಿಸುತ್ತಿವೆ. ನಾನಾ ನೆಲೆಯ ಹಾಗೂ ನಾನಾ ನಮೂನೆಯ ಬೀತಿ ಉಂಟುಮಾಡುವ ಸನ್ನಿವೇಶಗಳನ್ನು ಜನಮಾಸದಲ್ಲಿ ಸೃಷ್ಟಿಸಿ ಟಿ.ಆರ್.ಪಿ. ಸಾಧನೆಗೈಯಲು ಹೊಂಚುಹಾಕುತ್ತಿವೆ. ಒಂದೆಡೆ ನೆರೆ, ಬರ, ತ್ಸುನಾಮಿ, ಸೌರ ಮಾರುತಗಳು, ಸೂಪರ್‌ಮೂನ್, ಶುಕ್ರ ಸಂಕ್ರಮಣ, ಅಗ್ನಿಸ್ಪೋಟ ಮೊದಲಾದ ಸಹಜ ಪ್ರಾಕೃತಿಕ ವಿದ್ಯಮಾನಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಭಯ ಹುಟ್ಟಿಸುತ್ತಿವೆ. ಇನ್ನೊಂದೆಡೆ ಮಹಾಪ್ರಳಯ, ಭೂಪಥ ಬದಲಾವಣೆ, ಮನುಕುಲದ ನಾಶ ಮೊದಲಾದ ಮಿಥ್ಯೆಗಳು ಹಾಗೂ ಅವೈಜ್ಞಾನಿಕ ಪಂಚಾಂಗಗಳು ಮತ್ತು ಗ್ರಹಗತಿ ಆಧಾರಿತ ಸುಳ್ಳಿನ ಕಂತೆಗಳನ್ನೇ ಸತ್ಯವೆಂಬತೆ ಬಿಂಬಿಸುವ ಪ್ರಯತ್ನವನ್ನು ಮಾಡುತ್ತಿವೆ. ಜೊತೆಗೆ ಸಹಜವಾಗಿಯೇ ಆತಂಕ ಪಡಬೇಕಾಗಿರುವ ಹವಾಮಾನ ಬದಲಾವಣೆಗಳಂತ ವೈಜ್ಞಾನಿಕ ವಿಚಾರಗಳ ಸುತ್ತ ಇನ್ನಷ್ಟು ಅನಾವಶ್ಯಕ ಹಾಗೂ ಅವೈಜ್ಞಾನಿಕ ಆತಂಕಗಳನ್ನು ಸೃಷ್ಟಿಸಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ. ಈ ಮೂರು ನಮೂನೆಯ ಕಾರ್ಯಕ್ರಮಗಳ ತತ್‌ಕ್ಷಣದ ಉದ್ದೇಶ ಒಂದೇ ಆಗಿದೆ . ಅದು, “ಆತಂಕ ನಿರ್ಮಾಣ”.

ಇವುಗಳ ಜೊತೆಗೆ, ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗುವ ಇನ್ನೂ ಕೆಲವು ಕಾರ್ಯಕ್ರಮಗಳು ಜನಮನದಲ್ಲಿ ಬೆರಗನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ. ಆಕರ್ಷಕ ನಿರೂಪಣ ತಂತ್ರಗಳನ್ನು ಹೊಂದಿರುವ ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವ, ತರ್ಕದ ಗೋಜಿಗೆ ಹೋಗದ ಸಾಮಾನ್ಯ ಪ್ರೇಕ್ಷಕ “ಹೀಗೂ ಉಂಟೆ?” ಎಂಬ ಬೆರಗಿಗೆ ಖಂಡಿತ ಒಳಗಾಗುತ್ತಾನೆ. ಎಲ್ಲೋ ಒಂದು ಮೂಲೆಯಲ್ಲಿ ಇರೋ ಸೀಮಿತ ವ್ಯಾಪ್ತಿಯ ಗುಡಿ ದೇಗುಲಗಳು, ಧರ್ಮ ಜೀವಿಗಳು ಮತ್ತು ಕಾಗೆ, ಗೂಬೆ, ಹಲ್ಲಿ , ಹದ್ದು, ನಂದಿ, ಎಮ್ಮೆ ಮೊದಲಾದ ಪ್ರಾಣಿ ಪಕ್ಷಿಗಳು, ಹಾಗೆಯೇ ದೆವ್ವ ಭೂತ ಪಿಶಾಚದಂತಹ ಭ್ರಮೆಗಳು ಹಾಗೂ ಅಮಾವಾಸ್ಯೆ ಹುಣ್ಣಿಮೆಯಂತ ದಿನ ವಿಶೇಷತೆಗಳು- ಇವುಗಳಿಗೆ ಜನಪದೀಯ ನಂಬುಗೆಗಳು ಆರೋಪಿಸಿರುವ ಅತೀಂದ್ರಿಯ ಶಕ್ತಿಗಳನ್ನೇ ಕೇಂದ್ರವಾಗಿಟ್ಟು ಪ್ರೇಕ್ಷಕ ಸಮೂಹದಲ್ಲಿ “ಅಚ್ಚರಿ” ಉಂಟುಮಾಡುವ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಜೊತೆಗೆ ಜನ್ಮ “ಜನ್ಮಾಂತರ” ಸರಪಳಿಯ ಸತ್ಯಗಳನ್ನು ಹೆಕ್ಕಿ ತೆಗಿಯುತ್ತಿರುವಂತೆ ಬಿಂಬಿಸಲ್ಪಡುವ ಸಮ್ಮೋಹನ ಆಧಾರಿತ ಕಾರ್ಯಕ್ರಮಗಳು, ರಹಸ್ಯ-ನಿಗೂಢ ವಿಚಾರಗಳು ಜನರ ಮನದಲ್ಲಿ ವಾರಗಟ್ಟಲೆ ಗುಂಯಿಗುಡುವಂತೆ ಮಾಡುತ್ತಿವೆ.

ಆತಂಕ ಹಾಗೂ ಬೆರಗು ಸೃಷ್ಟಿಯ ಕಾರ್ಯಕ್ರಮಗಳ ಜೊತೆಜೊತೆಗೆ ವೀಕ್ಷಕರಿಗೆ ಪ್ರಲೋಭನೆ ಒಡ್ಡುವ ಕೆಲಸವನ್ನು ಕೂಡಾ ಕನ್ನಡವಾಹಿನಿಗಳು ಮಾಡುತ್ತಿವೆ. ಈಗಾಗಲೇ ಆಸ್ತಿತ್ವದಲ್ಲಿರುವ ಧರ್ಮ ಹಾಗೂ ಶಕುನ ಪರಂಪರೆಗಳಿಂದ ಅವುಗಳು ಪ್ರಲೋಭನಾ ಸಾಮಾಗ್ರಿಗಳನ್ನು ಪಡೆದುಕೊಳ್ಳುತ್ತಿವೆ. ಪ್ರಲೋಭನೆಯ ಅಂಶವು ಸಾಮಾನ್ಯವಾಗಿ ಅಸುರಕ್ಷಿತ ಭಾವ ವಾತಾವರಣದಲ್ಲಿ ಕಾರ್ಯಾಚರಿಸುತ್ತದೆ. ಅಂತೆಯೇ, ಜಾಗತಿಕರಣದ ಹಿನ್ನೆಲೆಯಲ್ಲಿ ಇಂದು ಸೃಪ್ಟಿಯಾಗಿರುವ ಅಸ್ಥಿರತೆ ಹಿಂಸೆ ಹಾಗೂ ಮೌಲ್ಯ ಕ್ಷಯದಂತ ಅಧಃಪತನದ ಪರಿವೇಶಗಳು ಪ್ರಲೊಭನೆಗೆ ಅವಕಾಶವೀಯುತ್ತಿವೆ. ಕನ್ನಡ ವಾಹಿನಿಗಳು ಇಂತಹ ವಿಷಮ ಪರಿಸ್ಥಿತಿಗಳ ಭರಪೂರ ಲಾಭ ಪಡೆಯುತ್ತಿವೆ. ತೀರ್ಥಕ್ಷೇತ್ರ ಪ್ರಯಾಣ, ವಾಹನ ಹಾಗೂ ದೂರವಾಣಿ ಸಂಖ್ಯಾವಿಶೇಷಗಳು, ವಾಸ್ತು ಬದಲಾವಣೆಗಳು, ಮಂತ್ರ ತಂತ್ರಗಳ ಆಚರಣೆ ಮೊದಲಾದ ಅವೈಜ್ಞಾನಿಕ ಹಾಗೂ ಸಮೂಹ ಸನ್ನಿಯ ಆಯ್ಕೆಗಳನ್ನು ನೀಡುತ್ತಾ ಒಳಿತಾಗುವ ಪ್ರಲೋಭನೆಯನ್ನು ಒಡ್ಡುತ್ತಿವೆ.

***

ಹೀಗೆ, ಕನ್ನಡ ದೂರದರ್ಶನ ಚಾನೆಲ್‌ಗಳು ಆತಂಕ, ಬೆರಗು ಹಾಗೂ ಪ್ರಲೋಭನೆಯ ಸಂಕೀರ್ಣ ವಾತಾವರಣವೊಂದನ್ನು ಸೃಷ್ಠಿಸಿ ಅಲ್ಲಿ ಭಾವಿ ಸ್ವಾಮೀಜಿಗಳ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡುತ್ತಿವೆ. ಅಧ್ಯಾತ್ಮಿಕ ಜಿಜ್ಞಾಸೆಗಳು ಹಾಗೂ ಸಾಧನೆಗಳ ಮುಖಾಂತರ ಗುರುಸ್ಥಾನ ಸಂಪಾದನೆ ಮಾಡುವ ಪರಂಪರೆಯು ಇಂದು ನಮ್ಮಲ್ಲಿ ಇಲ್ಲವಾಗಿದೆ. ಅದರ ಸ್ಥಾನದಲ್ಲಿ ಕೇವಲ ಬಾಹ್ಯ ಸೌಂದರ್ಯದ ನೆಲೆಯಲ್ಲಿ ಸ್ವಾಮಿತ್ವದ ಪ್ರಭಾವಳಿಯನ್ನು ದಕ್ಕಿಸಿಕೊಳ್ಳುವ ಹುನ್ನಾರುಗಳು ನಡೆಯುತ್ತಿವೆ. ವೈಚಾರಿಕತೆಯ ಪ್ರವರ್ತರಾಗಬೇಕಿದ್ದ ನಮ್ಮ ಟೆಲಿವಿಷನ್ ಚಾನಲ್‌ಗಳು ಇಂತಹ ಕುತಂತ್ರಗಳಲ್ಲಿ ಸ್ವಯಂಸ್ಫೂರ್ತಿಯಿಂದ ಭಾಗಿಯಾಗಿರುತ್ತಿರುವುದು ಸದ್ಯದ ಸಾಮಾಜಿಕ ಸಂದರ್ಭದ ದುರ್ದೈವವಾಗಿದೆ.

ಆಕರ್ಷಕ ವೇದಿಕೆ, ಗಮನ ಸೆಳೆಯುವ ನಿರೂಪಣೆ ಹಾಗೂ ನಿಖರ ಸಂಬೋಧನೆ; ಇವು ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯದ ತಂತ್ರ ವಿಶೇಷತೆಗಳಾಗಿವೆ. ಇವುಗಳು ಬಾಹ್ಯ ಸೌಂದರ್ಯದ ಬಹು ಸಾಮಾನ್ಯ ನೆಲೆಗಳನ್ನು ಪ್ರತಿನಿಧಿಸುತ್ತದೆ. ಜ್ಯೋತಿಷ್ಯ ಸಮಾಲೋಚನಯ ಕಾರ್ಯಕ್ರಮಗಳು ನಡೆಯುವ ರಂಗಮಂಟಪಗಳು ವೀಕ್ಷಕರ ಮನದಲ್ಲಿ ಭಕ್ತಿಭಾವಗಳನ್ನು ಸೃಷ್ಟಿಸುವಂತಿರುತ್ತವೆ. ಅಲಂಕೃತ ಶಿವಲಿಂಗ, ಗಣೇಶ ಮೊದಲಾದ ವಿಗ್ರಹಗಳು, ಗುರುಪೀಠ ಸ್ವರೂಪಿ ಆಸನಗಳು ಹಾಗೂ ಓಂಕಾರದಂತಹ ಬೃಹತ್ ಜಿಹ್ನೆಗಳು ವೇದಿಕೆಯ ಮುಖ್ಯ ಆಕರ್ಷಣೆಗಳಾಗಿರುತ್ತವೆ. ಕಾರ್ಯಕ್ರಮಗಳ ಕೇಂದ್ರ ಬಿಂದುಗಳಾದ ಜ್ಯೋತಿಷಿಗಳು ಕೂಡಾ ಕಾರ್ಯಕ್ರಮದ ಉದ್ದಕ್ಕೂ ಪುಲ್ ಕಾಸ್ಟೂಮ್‌ನಲ್ಲೇ ಇರುತ್ತಾರೆ. ಎಲ್ಲರೂ ಫ್ಯಾಶನ್ ನಾಮದಾರಿಗಳೇ. ಅತ್ಯಾಧುನಿಕ ಕಂಪ್ಯೂಟರ್ ಹಾಗೂ ಪಾರಂಪರಿಕ ತಾಳೆಗರಿ ಇವೆರಡನ್ನೂ ಏಕಕಾಲಕ್ಕೆ ಬಳಸುವಂತಹ ಚಾತುರ್ಯವನ್ನು ಮೆರೆಯುತ್ತಾರೆ. ನಗರಗಳ ವೀಕ್ಷಕರಲ್ಲಿ ನಂಬಿಕೆಯನ್ನು ಉಂಟುಮಾಡಲು ಇವು ಎರಡೂ ಬಹಳ ಮುಖ್ಯವಾದ ಸಾಧನಗಳಾಗಿವೆ. ಜೊತೆಗೆ ದೂರವಾಣಿಯಂತಹ ಆಧುನಿಕ ಸಂವಹನ ಮಾಧ್ಯಮಗಳನ್ನು ಬಳಸಿ ವೀಕ್ಷಕರ ಜೊತೆಗೆ ಸಂಬಂಧಗಳನ್ನು ಸ್ಥಾಪಿಸುವ ಪ್ರಯತ್ನಗಳೂ ನಡೆಯುತ್ತವೆ. ಇಂತಹ ಗುರು-ಶಿಷ್ಯ, ಸ್ವಾಮಿ-ಅನುಯಾಯಿ ಸಂಬಂಧಗಳು ಆಯಾ ಜ್ಯೋತಿಷಿಗಳು ಮುಂದೆ ಪಡೆಯಲಿರುವ ಅವಸ್ಥೆಯಲ್ಲಿ ನೆರವಿಗೆ ಬರುತ್ತವೆ.

ಅಷ್ಟೂ ಕಾರ್ಯಕ್ರಮಗಳನ್ನು ನಡೆಸಿಕೊಡುವ ನಿರೂಪಕರು ಸ್ತ್ರೀಯರೇ ಆಗಿದ್ದಾರೆ. ಎಲ್ಲಾ ವಾಹಿನಿಗಳು ಒಟ್ಟಾಗಿ ನಿರ್ಣಯಿಸಿವೆಯೋ ಏನೋ ಎಂಬಂತೆ ಭಾಸವಾಗುವ ಸಮವಸ್ತ್ರ ಸ್ವರೂಪಿ ವೇಷಭೂಷಣದೊಂದಿಗೇ ನಿರೂಪಕಿಯರು ಕಾರ್ಯಕ್ರಮಗಳಿಗಳಲ್ಲಿ ಹಾಜರಿರುತ್ತಾರೆ. ಜರತಾರಿ ಸೀರೆ, ಹಿಂದಕ್ಕೆ ಎಳೆದು ಕಟ್ಟಿದ ಕೂದಲು, ಮುಡಿಗೆ ಹೂವು, ಫಲಕದ ಸರ ಹಾಗೂ ಜುಮುಕಿ ಧರಿಸಿರುವ ಸಾಂಪ್ರದಾಯಿಕ ನಿಲುವು ಅವರದ್ದು. ಮಾತುಗಳೂ ಅಷ್ಟೇ ಆಕರ್ಷಕ.

ವಿಶಿಷ್ಟ ಸಂಭೋಧನಾ ತಂತ್ರಗಳು ಕೂಡಾ ಇಲ್ಲಿನ ಕಾರ್ಯಕ್ರಮಗಳ ವಿಶೇಷತೆಗಳಾಗಿವೆ. ಅಷ್ಟೂ ಕಾರ್ಯಕ್ರಮಗಳಲ್ಲಿ ಜ್ಯೋತಿಷಿಗಳನ್ನು ಸಂಬೋಧಿಸಲು “ಗುರೂಜಿ” ಎಂಬ ಪದ ಬಳಕೆಯಾಗುತ್ತಿದೆ. “ಗುರೂಜಿ” ಸಂಭೋಧನೆಗೆ ಇಲ್ಲಿ ವಿಶೇಷವಾದ ಹಿನ್ನೆಲೆ ಇದೆ. ಏಕೆಂದರೆ ಅಂತಹದ್ದೇ ಸ್ಥಾನ ವಿಶೇಷತೆಗಳನ್ನು ಪ್ರತಿನಿಧಿಸುತ್ತಿದ್ದ ಬಾಬಾ ಹಾಗೂ ಸ್ವಾಮಿಯಂತಹ ಪದಗಳು ಬ್ಲೇಡ್ ಮತ್ತು ಕಳ್ಳ ವಿಶೇಷಣಗಳಿಂದ ಕುಲಗೆಟ್ಟಿವೆ! ಮಾತ್ರವಲ್ಲದೆ, ಗುರೂಜಿ ಎಂಬ ಪದಕ್ಕೆ ಮಾರುಕಟ್ಟೆ ಮೌಲ್ಯವೂ ಇದೆ ಎಂಬ ಅಂಶ ಇಲ್ಲಿ ಉಲ್ಲೇಖನೀಯ. ಟೆಕ್‌ಗುರು, ಮಾನೇಜ್‌ಮೆಂಟ್ ಗುರು ಮೊದಲಾದ ಪರಿಭಾಷೆಗಳು ಇಂತಹ ಪ್ರವೃತ್ತಿಗಳನ್ನು ಪ್ರತಿನಿಧಿಸುತ್ತವೆ. ಹಿಗಾಗಿಯೇ ನಮ್ಮ ಟಿ.ವಿ. ಚಾನೆಲ್‌ಗಳು ಜ್ಯೋತಿಷಿಗಳನ್ನು ಗುರೂಜಿ ಎಂದೇ ಸಂಬೋಧಿಸುತ್ತವೆ ಮತ್ತು ವಿಕ್ಷಕರಿಗೂ ಹಾಗೇ ಮಾಡುವಂತೆ ಪ್ರಚೋದಿಸುತ್ತಿವೆ. ಉಳಿದಂತೆ ಪಾರಂಪರಿಕ ತೂಕದ ಪದಗಳಾದ ಮಹರ್ಷಿ, ಬ್ರಹ್ಮರ್ಷಿ ಮೊದಲಾದ ಪದಗಳನ್ನು ಕೂಡಾ ಅಲ್ಲಲ್ಲಿ ಬಳಸುತ್ತಿವೆ. ಇಂತಹ ಸಂಬೋಧನ ತಂತ್ರಗಳು ಆಯಾ ಸ್ವಾಮೀಜಿಗಳಿಗೆ ಒಂದು ವಿಶಿಷ್ಟವಾದ ಸ್ವಾಮಿತ್ವದ ಪ್ರಭಾವಳಿಯನ್ನು ದಯಪಾಲಿಸುತ್ತಿವೆ.

* * *

ಕನ್ನಡ ವಾಹಿನಿಗಳ ಇವಿಷ್ಟೂ ತಂತ್ರಗಳ ಸಫಲ ಕಾರ್ಯಚಾರಣೆಗೆ ವೇದಿಕೆಯನ್ನು ಒದಗಿಸುತ್ತಿರುವುದು ನಮ್ಮ ಬೌದ್ಧಿಕ ದಿವಾಳಿತನ ಹಾಗೂ ಕಾರ್ಪೊರೇಟ್ ಲಾಭಕೋರತನ. ಅಜ್ಞಾನದ ಆಧುನಿಕ ಸ್ವರೂಪವಾದ ಬೌದ್ಧಿಕ ದಾರಿದ್ರ್ಯವು ಸಮಾಜದಲ್ಲಿ ಮೌಢ್ಯಗಳ ರೂಪಣೆ ಹಾಗೂ ಪ್ರಸರಣ ಪ್ರಕ್ರಿಯೆಗೆ ಅವಕಾಶ ಮಾಡಿಕೊಡುತ್ತಿದೆ. ಜ್ಞಾನ ಪರಿಕರಗಳ ಸುಲಭ ಲಭ್ಯತೆ ಮತ್ತು ಶಿಕ್ಷಣದ ನಿಕಟ ಸಾರ್ವತ್ರಿಕತೆಯಂತಹ ಪೂರಕ ಪರಿವೇಶಗಳಿದ್ದರೂ ಕೂಡ ನಮ್ಮ ನಗರಗಳ ಜನರು “ಹೀಗೂ ಉಂಟೆ?” ಎಂಬ ಪ್ರಶ್ನೆಯಾಚೆಗೆ ಯೋಚಿಸುವ ಪ್ರಯತ್ನ ಮಾಡುತ್ತಿಲ್ಲ . ಇಂತಹ ವೈಚಾರಿಕ ಕೊರತೆಗೆ ಜೊತೆಯಾಗಿರುವುದು ಕಾರ್ಪೊರೇಟ್ ಹಿತಾಸಕ್ತಿಗಳು. ಜ್ಯೋತಿಷ್ಯದಂತಹ ಕಾರ್ಯಕ್ರಮಗಳು ಸಮಾಜದಲ್ಲಿ “ಯಥಾಸ್ಥಿತಿ”ಯನ್ನು ಉಳಿಸಿಕೊಳ್ಳಲು ನೆರವಾಗುವುದರ ಜೊತೆಗೆ ಮಾರುಕಟ್ಟೆ ಆಧಾರಿತ ಜಾಹಿರಾತು ತಂತ್ರಗಳಿಗೂ ಅವಕಾಶ ನೀಡುತ್ತಿವೆ. ಹೀಗಾಗಿಯೇ ಕಾರ್ಪೊರೇಟ್ ಶಕ್ತಿಗಳು ಕನ್ನಡ ವಾಹಿನಿಗಳ ಸ್ವಾಮಿನಿರ್ಮಾಣ ಕಾರ್ಯಕ್ರಮಗಳನ್ನು ತುಂಬು ಹೃದಯದಿಂದ ಪ್ರಾಯೋಜಿಸುತ್ತಿವೆ.

ಸಣ್ಣಕತೆ : ಮಾಧವ ಕರುಣಾ ವಿಲಾಸ

– ಪರಶುರಾಮ್ ಕಲಾಲ್

ಎಸ್ಸೆಸ್ಸೆಲ್ಸಿ ಓದಿ ಮುಂದೆ ಓದಲಾಗದೇ ಹಳ್ಳಿಯಲ್ಲೇ ಪೆಟ್ಟಿಗೆ ಅಂಗಡಿ ತೆರೆದ ಮಾಧವನಿಗೆ ಗಳಗನಾಥರ ‘ಮಾಧವ ಕರುಣ ವಿಲಾಸ’ ಕಾದಂಬರಿ ಎಷ್ಟು ಹುಚ್ಚು ಹಿಡಿಸಿತು ಎಂದರೆ, ಅದನ್ನು ಎಷ್ಟು ಸಾರಿ ಓದಿದ್ದಾನೆಯೋ ಅವನಿಗೆ ಗೊತ್ತಿಲ್ಲ. ಪ್ರತಿಬಾರಿ ಓದಿದಾಗಲೂ ಹೊಸ ಸತ್ಯ ಕಂಡವನಂತೆ ರೋಮಾಂಚನ ಸುಖ ಅನುಭವಿಸುತ್ತಿದ್ದ. ಹಂಪಿಗೆ ಅಲೆದಾಡಿ, ಅಲ್ಲಿಯ ಕಲ್ಲುಬಂಡೆಗಳು, ಗೋಪುರಗಳು, ಮಂಟಪಗಳ, ಮೂಗು, ಮುಖ ಮುರಿದ ಕೊಂಡ ಮೂರ್ತಿಗಳನ್ನು ನೋಡಿ, ‘ವೈಭವದ ನಾಡೇ ಹೇಗಾಗಿ ಹೋದಿ’ ಎಂದು ಮಮ್ಮುಲ ಮರಗುವ, ಗೋಳಾಡುವ ಪರಿಪಾಠ ಬೆಳೆಸಿಕೊಂಡಿದ್ದ.

ಕೊಲಮಿಸಾಬ್ ಗಣೇಶ್ ಬೀಡಿ ಕಟ್ಟು ಒಯ್ಯುವಾಗ ಆತನಿಗೆ ವಿಜಯನಗರದ ಬಗ್ಗೆ ಹೇಳಿ ಮಾತಿನ ಮೊನೆಯಿಂದ ಚುಚ್ಚುತ್ತಿದ್ದ. ಕೊಲಮಿಸಾಬ್‌ಗೆ ಇದ್ಯಾವದೂ ಅರ್ಥವಾಗುತ್ತಿದ್ದಿಲ್ಲ. “ಬುದ್ಧಿವಂತ ಇದ್ದಿಯಾ ಮಾಧವಪ್ಪ. ನೀನು ಇನ್ನೂ ಓದಬೇಕಿತ್ತು” ಎಂದು ಮೆಚ್ಚುಗೆ ಸೂಚಿಸಿದಾಗ ಸೂಜಿ ಚುಚ್ಚಿದ ಬಲೂನಿನಂತೆ ಪೆಚ್ಚಾಗುವ ಸರದಿ ಮಾಧವನದಾಗಿರುತ್ತಿತ್ತು. ಯಾರಾದರೂ ಗಿರಾಕಿಗಳು ‘ಏನು ಪುಸ್ತಕ ಅದು’ ಅಂತ ಕೇಳಿದರೆ ಸಾಕು, ಹಂಪಿಯನ್ನು ಸೇರಿಸಿಕೊಂಡು ತನಗೆ ತೋಚಿದಂತೆ ಇತಿಹಾಸ, ಪುರಾಣ ಎಲ್ಲವನ್ನೂ ಬಡಬಡಿಸುತ್ತಿದ್ದ. ಎಲ್ಲಾ ಕೇಳಿದ ಗಿರಾಕಿಗಳು “ಏನು ಬಿಡಪ್ಪಾ, ಎಂತೆಂತವರೇ ಬಿದ್ದು ಹೋದರು. ಹಾಳುಪಟ್ನ ಆಯಿತು, ನಡೆಬೇಕಾಗಿದ್ದು ನಡೀತು, ಯಾರ ತಪ್ಪಸೋದಕ್ಕೆ ಆಗುತ್ತೇ? ಕಥೆ ಹೇಳಿಕೊಂತ, ಚಿಲ್ಲರೆ ಪರಪಾಟು ಮಾಡಿಕೊಂಡಿಯಾ ಹುಷಾರಪ್ಪ” ಎಂದು ಹೇಳಿ ಹೋದಾಗ ಈ ಜನರಿಗೆ ಎಂದು ಬುದ್ಧಿ ಬರುತ್ತೋ ಎಂದು ಹಣೆ ಹಣೆ ಬಡಿದುಕೊಂಡು ವ್ಯಥೆ ಪಟ್ಟುಕೊಳ್ಳುತ್ತಿದ್ದ.

ರಕ್ಷಾ ಬಂಧನಕ್ಕೆ ರಾಖಿ ಕಟ್ಟಲು ಬಂದ ಯುವಕರು ಇವನ ಮಾಧವ ಕರುಣಾ ವಿಲಾಸ ಪುಸ್ತಕವನ್ನು ನೋಡಿ, ಆಗಾಗ ನಡೆಯುವ ಬೈಠಕ್‌ಗೆ ಬರಲು ಹೇಳಿ ಹೋದಾಗ ಮಾಧವನಿಗಂತೂ ಬಲು ಖುಷಿಯಾಗಿತ್ತು. ಒಂದು ಪಥ ಸಂಚಲನದಲ್ಲಿ ಚೆಡ್ಡಿ ಟೋಪಿ ಹಾಕಿಕೊಂಡು ಅದೇ ವೇಷದಲ್ಲಿ ಹಳ್ಳಿಗೆ ಬಂದಾಗ ’ಏನು ಮಾಧವಪ್ಪ ಇದು, ಚೆಡ್ಡಿ ಹಾಕಿದ್ದಿಯಾ, ಹುಷಾರಪ್ಪ, ಒಳಗಿನದೆಲ್ಲಾ ಹೊರಗೆ ಕಂಡು ಬಿಟ್ಟೀತು,’ ಎಂದು ಕಡೇ ಅಗಸಿಯಲ್ಲಿ ಕುಳಿತಿದ್ದ ಗಾಳೆಪ್ಪ ತಮಾಷೆ ಮಾಡಿದಾಗ ಅಲ್ಲಿದ್ದ ಪಟಾಲಂ ಖೊಳ್ಳು ಅಂತಾ ನಕ್ಕು ಮಾಧವ ಅಪಮಾನದಿಂದ ಕುಗ್ಗಿ ಹೋಗುವಂತೆ ಮಾಡಿ ಬಿಟ್ಟಿದ್ದ. ತಕ್ಷಣವೇ ಮನೆಗೆ ಹೋಗಿ ಚೆಡ್ಡಿ ಬಿಚ್ಚಿಟ್ಟು, ಇನ್ನೂ ಮುಂದೆ ಹಳ್ಳಿಯಲ್ಲಿ ಎಂದೂ ಚೆಡ್ಡಿ ಧರಿಸದೇ, ಪಟ್ಟಣಕ್ಕೆ ಪಥ ಸಂಚಲನಕ್ಕೆ ಹೋದಾಗ ಅಲ್ಲಿಯೇ ಧರಿಸಿ, ನಂತರ ಕಳಚಿ ತನ್ನ ಮಾಮೂಲು ಬಟ್ಟೆ ಹಾಕಿಕೊಂಡು ಬರಲು ನಿರ್ಧರಿಸಿದ್ದ.

ಹೈಸ್ಕೂಲ್ ಮೆಟ್ಟಿಲು ಏರುವ ಮೊದಲೇ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿದ್ದ ಗೆಳೆಯ ಹನುಮ ಗಾರೆ ಕೆಲಸದವನಾಗಿ ಮನೆ ಕಟ್ಟಲು ಹೋಗುತ್ತಿದ್ದ. ಆಗಾಗ ಅಂಗಡಿಯ ಬಳಿ ಹರಟೆ ಹೊಡೆಯತ್ತಿದ್ದ. ಒಮ್ಮೆ ಮಾತಿನ ನಡುವೆ, ’ಅದೇ ಕಡ್ಡಿರಾಂಪುರ ಬಳಿ ಹಂಪಿ ಗೋರಿಗಳಿದ್ದಾವಲ್ಲ ಮಾಧವ, ಒಂದು ಗೋರಿ ಎಬ್ಬಿಸಿ ಹಂಡೆ ಕಿತ್ತಿಕೊಂಡು ಹೋಗಿದ್ದಾರೆ. ಅದರಲ್ಲಿ ಹಂಡೆ ತುಂಬಾ ಬಂಗಾರ ಇತ್ತಂತೆ,’ ಎಂದು ಹೇಳಿ ಮಾಧವನ ತಲೆಯಲ್ಲಿ ಹುಳ ಬಿಟ್ಟ.

ಮರುದಿನ ಕಡ್ಡಿರಾಂಪುರದ ಗೋರಿ ಸಮೀಪವೇ ಮುಕ್ಕಾಲು ಏಕರೆ ನೀರಾವರಿ ಭೂಮಿ ಹೊಂದಿದ್ದ ಪರಮೇಶಿ ಕೂಡಾ ಅದು, ಇದು ಮಾತನಾಡುತ್ತಾ ಮಾಧವ ಗೋರಿಯ ಪ್ರಸ್ತಾಪ ಮಾಡುತ್ತಿದ್ದಂತೆ ’ರಾತ್ರಿ ಯಾವ ಸೂಳೆ ಮಕ್ಕಳು ಏನು ಕಥೆಯೋ ಬಂದು, ಗೋರಿ ಅಗೆದು ಏನೋ ತಗೊಂಡು ಹೋಗಿದ್ದಾರೆ. ಅಲ್ಲಿ ಹಂಡೇವು ಸಿಕ್ಕಿರಬೇಕು,’ ಎಂದ. ಅದು ಹಂಡೇವು ಅಂತಾ ಹೇಗೆ ಹೇಳುತ್ತಿಯಾ ಅಂತಾ ಮಾಧವ ಪತ್ತೆದಾರಿಕೆ ಮಾತು ಹೊಗೆದ. ಏ…ಅಷ್ಟು ಗೊತ್ತಾಗುವುದಿಲ್ಲವೇ ಹಂಡೇವು ಆಕಾರದಲ್ಲಿ ಕುಣಿ ಇದೆ. ಹಂಡೇವು ಕಿತ್ತಿಕೊಂಡು ಹೋಗಿದ್ದಾರೆ ಅನ್ನೋದಕ್ಕೆ ಇನ್ನೇನು ಬೇಕು ಎಂದ. ಇದು ನಿನ್ನೆಮೊನ್ನೆಯ ಮಾತಲ್ಲ, ಅಮವಾಸ್ಯೆ ಬಂತು ಅಂದರೆ ಸಾಕು, ಒಂದು ಗೋರಿ ಅಗೆದು ಹಂಡೆವು ಕಿತ್ತಿ ಒಯ್ಯುತ್ತಾರೆ. ಎಲ್ಲಾ ಗೋರಿಗಳನ್ನು, ಗುಡಿಗಳನ್ನು ಅಗೆದು ಗುಂಡಾಂತರ ಮಾಡಿದ್ದಾರೆ. ಅಲ್ಲಿ ರಂಗೋಲಿ, ಹಾಕಿ ಕುಂಕುಮ ಭಂಡಾರ ಚೆಲ್ಲಿದ್ದಾರೆ. ಅಂಜನಾ ಹಾಕಿ ನೋಡಿರಬೇಕು ಎಂದ. ಏ..ಅದೆಲ್ಲಾ ಸುಳ್ಳು ಮೂಢನಂಬಿಕೆ ಎಂದು ವಾದಿಸಿದರೂ ಅವತ್ತು ರಾತ್ರಿ ನಿದ್ದೆಯೇ ಬರಲಿಲ್ಲ. ಎದ್ದು ಕುಳಿತು ಮಾಧವ ಕರುಣ ವಿಲಾಸ ಕಾದಂಬರಿಯನ್ನು ಮತ್ತೇ ತಿರುವಿ ಹಾಕಿದ. ದೇವಿ ಕೊಳ್ಳದ ಬಳಿ ವಿಜಯನಗರ ಸಾಮ್ರಾಜ್ಯದ ಸಂಪತ್ತು ಬಚ್ಚಿಟ್ಟ ವಿವರಗಳನ್ನು ಮತ್ತೇ ಮತ್ತೇ ಓದಿದ. ಹಂಪಿಯಲ್ಲಿ ಈಗಲೂ ಸಾಕಷ್ಟು ನಿಧಿಯನ್ನು ಗುಪ್ತ ಸ್ಥಳದಲ್ಲಿ ಹೂತಿದ್ದಾರೆ. ಈ ದೇವಿಕೊಳ್ಳ ಎಲ್ಲಿದೆ? ಅದನ್ನು ಪತ್ತೆ ಹಚ್ಚಬೇಕೆಂಬ ಗುಪ್ತ ಆಸೆಯೊಂದು ಚಿಗರೊಡೆಯಿತು. ಮರುದಿನ ಅಂಗಡಿ ತೆರೆಯದೇ ಸೈಕಲ್ ತಳ್ಳಿಕೊಂಡು ಹಂಪಿಗೆ ಹೊರಟು ಬಿಟ್ಟ. ಹಂಪಿಯ ಬೆಟ್ಟ, ಗುಡ್ಡ ಸುತ್ತು ಹಾಕಿದರೂ ದೇವಿಕೊಳ್ಳ ಪತ್ತೆಯಾಗಲಿಲ್ಲ. ದೇವಿಕೊಳ್ಳ ಎಲ್ಲಿ ಬರುತ್ತೇ ಎಂದು ಯಾರನ್ನೂ ಕೇಳಿದರೂ ಯಾರು ಸರಿಯಾಗಿ ಉತ್ತರವೇ ಕೊಡಲಿಲ್ಲ. ಹೊಟ್ಟೆ ಹಸಿದು, ಬಿಸಿಲು ಹೊಡೆತ ತಾಳಲಾರದೇ ಪೆಚ್ಚುಮೊರೆಯಿಂದ ಊರಕಡೆ ಸೈಕಲ್ ತಿರುಗಿಸಿದ.

ಹಂಪಿ ಹೇಮಕೂಟದ ಮೇಲೆ ಇದ್ದ ಗುಹೆಯಲ್ಲಿ ಶಿವರಾಮ ಅವಧೂತರ ಶಿಷ್ಯ ಶಿವಶರಣಪ್ಪ ಅವರಿಂದ ಗುರುಬೋಧೆ ತೆಗೆದುಕೊಂಡು ಕೆಲವು ದಿನ ಹಂಪಿಯಲ್ಲಿಯೇ ಇದ್ದ ಅವಟುಗಾಲು ಭರಮಪ್ಪನಿಗೆ ಈ ಬಗ್ಗೆ ಖಂಡಿತ ಮಾಹಿತಿ ಇರುತ್ತೆ ಅಂತಾ ಅನ್ನಿಸಿತು. ಸಾಧುಗಳನ್ನು, ಇಂತಹ ಭಕ್ತರನ್ನು ನಾವು ಉಪೇಕ್ಷೆ ಮಾಡಿದ್ದೀವಿ. ಇದು ತಪ್ಪು ಎಂದು ಪೇಚಾಡಿಕೊಂಡ. ಕಣ್ಣಿನ ರೆಪ್ಪೆಯ ಮೇಲೆ ವಿಭೂತಿ, ಮೈ ತುಂಬಾ ವಿಭೂತಿ ಬಳಿದುಕೊಂಡಿರುವ ಅವುಟುಗಾಲು ಭರಮಪ್ಪ ಕಣ್ಣು ಮುಚ್ಚಿ ತೆರೆದರೆ ವಿಚಿತ್ರವಾಗಿ ಕಾಣುತ್ತಿದ್ದ. ಮಾತನಾಡುವಾಗ ಮಾತಿಗೊಮ್ಮೆ ಶಿವ ಶಿವ ಎನ್ನುತ್ತಿದ್ದ. ಯಾರನ್ನು ಸಂಬೋಧಿಸಿದರೂ ಶಿವ ಎಂದೇ ಮಾತನಾಡುತ್ತಿದ್ದ. ಮಕ್ಕಳನ್ನು ಶಿವ ಅಂತಹ ಮಾತನಾಡಿಸಿ ಕಿಸಿ ಕಿಸಿ ನಗುವಿಗೆ ಕಾರಣವಾಗಿದ್ದ. ಕೆಂಪು ಮಡಿವಸ್ತ್ರವನ್ನು ಯಾವಾಗಲೂ ಹಾಕಿಕೊಂಡು, ಊರ ಹೊರಗಿದ್ದ ಗುಡಿಸಲು ಮಠದೊಳಗೆ ಇರುತ್ತಿದ್ದ. ಅಲ್ಲಿಗೆ ಸಾಧುಗಳು ಬಂದು ಹೋಗುತ್ತಿದ್ದರು. ಇತನನ್ನು ಹುಡುಕಿಕೊಂಡು ಆ ಮಠಕ್ಕೆ ಹೋದಾಗ ಕೆಲವು ಸಾಧುಗಳೊಂದಿಗೆ ಗಾಂಜಾ ಸೇವನೆಯಲ್ಲಿದ್ದ ಅವುಟುಗಾಲು ಭರಮಪ್ಪ ಮಾಧವನನ್ನು ನೋಡಿ, ಕಣ್ಣಿನಲ್ಲಿ ಕುಳಿತುಕೊಳ್ಳಲು ಹೇಳಿದ. ಮಾಧವ ಒಂದೆಡೆ ಕುಳಿತ. ಶಿವಾ ಶಿವಾ ಎನ್ನುತ್ತಾ ಗಾಂಜಾ ಚಿಲುಮೆಯನ್ನು ಇನ್ನೊಬ್ಬ ಸಾಧುಗೆ ಹಸ್ತಾಂತರಿಸುವುದು. ಆತ ಜೋರಾಗಿ ಚಿಲುಮೆ ಎಳೆದು, ಮತ್ತೊಬ್ಬ ಸಾಧುವಿಗೆ ದಾಟಿಸಿದ. ಆ ಸಾಧು ಚಿಲುಮೆ ಹಿಡಿದುಕೊಂಡು ಜೋರಾಗಿ ಎಳೆದುಕೊಂಡು ಹೊಗೆ ಬಿಡದೇ ಮುಗುಮ್ಮಾಗಿ ಅವುಟುಗಾಲು ಭರಮಪ್ಪಗೆ ನೀಡಿದ. ಹೀಗೆ ಕೋ ಆಟ ನಡೆಯುತ್ತಿತ್ತು. ಗಾಂಜಾ ಚಿಲುಮೆ ಕೊಡುವಾಗ ಎರಡೂ ಕೈಯಿಂದ ಅದನ್ನು ಅರ್ಪಿಸುವ ರೀತಿಯಲ್ಲಿಯೆ ಒಂದು ರಿಚ್ಯುಯಲ್ ಇತ್ತು. ಏನು ಮಾಧವಪ್ಪ ದೂರ ಬಂದಿ ಎಂದು ಭರಮಪ್ಪನೇ ಮಾತು ಆರಂಭಿಸಿದ. ಮಾಧವ ಹೇಗೆ ಪ್ರಾರಂಭಿಸಬೇಕೆಂದು ಗೊತ್ತಾಗದೇ ತಡವರಿಸಿದ. ಕೊನೆಗೆ ಹೇಗೋ ಮಾಡಿ ಹಂಪಿಯ ದೇವಿಕೊಳ್ಳದ ವಿವರ ನೀಡಿ, ಇದು ಎಲ್ಲಿ ಬರುತ್ತೆ ಅಂದ. ಹಂಪಿಯ ದೇವಿಕೊಳ್ಳ ಗೊತ್ತಿಲ್ಲವೇ ನಿನಗೆ ಎಂತಹ ದಡ್ಡನಪ್ಪ ನೀನು ಎಂದು ಒಮ್ಮೆ ಮಾಧವ ಪೆಚ್ಚಾಗುವಂತೆ ನಕ್ಕ ಅವುಟುಗಾಲು ಭರಮಪ್ಪ ’ನೋಡು ಮಾಧವ ಮತಂಗ ಪರ್ವತದ ಹಿಂದುಗಡೆ ಹತ್ತುಕೈ ತಾಯಮ್ಮ ಇದ್ದಾಳಲ್ಲ, ಅದೇ ದೇವಿಕೊಳ್ಳ,’ ಎಂದ. ಇವರ ಮಾತುಗಳನ್ನೇ ಆಲಿಸುತ್ತಿದ್ದ ಕಾವಿ ಬಟ್ಟೆಯನ್ನು ಧರಿಸಿದ್ದ ಉದ್ದನೆಯ ಗಡ್ಡದಾರಿ, ಕುಳ್ಳಗೆ ಇದ್ದ ಸಾಧು ಮಹಾರಾಜ್ ಅದಲ್ಲ ದೇವಿಕೊಳ್ಳ ಎಂದ. ಇದು ಪ್ರತಿ ಸವಾಲು ಹಾಕಿದಂತಾಗಿ ಅವುಟುಗಾಲು ಭರಮಪ್ಪ ಹಾಗಾದರೆ ಹೇಳು ಸ್ವಾಮಿ ಯಾವುದು ದೇವಿಕೊಳ್ಳ ಎಂದು ಪಟ್ಟು ಹಿಡಿದ. ಕುಳ್ಳ ಸಾಧು ಈ ಪ್ರಶ್ನೆಗೆ ಉತ್ತರ ಕೊಡದೇ ಚಿಲುಮೆ ಇಸಿದುಕೊಂಡು ಮತ್ತೊಮ್ಮೆ ಜೋರಾಗಿ ಎಳೆದುಕೊಂಡು ಆಕಾಶಕ್ಕೆ ಮುಖ ಮಾಡಿ ಹೊಗೆ ಬಿಟ್ಟ. ತಡವಾಗಿ ಹೊಗೆ ಬಿಟ್ಟಿದ್ದರಿಂದ ಕೆಮ್ಮ ತೊಡಗಿದ. ಮತ್ತೊಬ್ಬ ಸಾಧು ಮಹರಾಜ್ ಆತ ಕಣ್ಣುಮುಚ್ಚಿಯೇ ಕುಳಿತಿದ್ದ. ಸುಧಾರಿಸಿಕೊಂಡ ಕುಳ್ಳ ಸಾಧು ನಿಧಾನವಾಗಿ ಹೇಳಿದ ’ಪಟ್ಟದ ಯಲ್ಲಮ್ಮ ಇದ್ದಾಳಲ್ಲ ಅದೇ ದೇವಿಕೊಳ್ಳ,’ ಎಂದ.

ನಾನು ಎಷ್ಟು ವರ್ಷ ಹಂಪಿಯಲ್ಲಿದ್ದೀನಿ..ನಮ್ಮ ಗುರುಗಳೇ ದೇವಿಕೊಳ್ಳ ಎಂದು ಹತ್ತುಕೈ ತಾಯಮ್ಮನ ಹತ್ತಿರ ಕರೆದುಕೊಂಡು ಹೋಗಿ ದೇವಿಯ ದರ್ಶನ ಮಾಡಿಸಿದ್ದಾರೆಂದು ಅವುಟುಗಾಲು ಭರಮಪ್ಪ ರಗಳೆ ತೆಗೆದ. ಇದಕ್ಕೆ ಸಿಡಿಮಿಡಿಗೊಂಡ ಕುಳ್ಳ ಸಾಧು ಎದ್ದು ನಿಂತು, ’ಏ..ಮೂಢ..ನನ್ನ ಏನೆಂದುಕೊಂಡಿದ್ದಿಯಾ? ಒಮ್ಮೆ ನನ್ನೆದರು ಉಗ್ರವಾಗಿ ನಿಂತಳು. ನನ್ನದು ಏನು ಹರಕೊಳ್ಳಕೇ ಆಗಲಿಲ್ಲ, ಹೆದರಿಸಬೇಕೆಂದಳು ಲೌಡಿ ಅವಳಿಗೆ ಆಗಲೇ ಇಲ್ಲ,’ ಎಂದು ಅಶ್ಲೀಲವಾಗಿ ಕೈ ತೋರಿಸಿ ಮಾತನಾಡತೊಡಗಿದ. ಮಾಧವನಿಗೆ ಗಾಭರಿಯಾಗಿ ಹೊಯಿತು. ಈ ಜಾಗ ಖಾಲಿ ಮಾಡಬೇಕು ಅನ್ನಿಸಿ ಚಡಪಡಿಸತೊಡಗಿದೆ. ಆ ಕುಳ್ಳ ಸಾಧು ಕೆಳಗೆ ಕುಳಿತು ಮತ್ತೇ ಗಾಂಜಾ ಚಿಲುಮೆ ಸೇದ ತೊಡಗಿದ. ಮಾಧವನಿಗೆ ಇರಬೇಕೋ ಹೋಗಬೇಕೋ ಗೊತ್ತಾಗದೇ ಚಡಪಡಿಸತೊಡಗಿದ. ಕಣ್ಣುಮುಚ್ಚಿಯೇ ಕುಳಿತಿದ್ದ ಇನ್ನೊಬ್ಬ ಸಾಧು ಮಹಾರಾಜ್ ಮಾತ್ರ ಇದ್ದಕ್ಕಿದ್ದಂತೆ ಎಚ್ಚರಗೊಂಡ ಅವನು ದೇವಿಕೊಳ್ಳ ಎಲ್ಲಿದೆ ಗೊತ್ತಾ ಮುಟ್ಟಾಳರಾ…ಎಂದ. ಮಾಧವ ಆಶ್ಚರ್ಯಚಕಿತನಾಗಿ ಆ ಸಾಧುವಿನ ಕಡೆ ದೃಷ್ಠಿ ಬೀರಿದ. ಉಳಿದಿಬ್ಬರೂ ಇದು ಕೇಳಿಸಿಲ್ಲ ಎನ್ನುವಂತೆ ತಮ್ಮ ಪಾಡಿಗೆ ಚಿಲುಮೆ ತುಂಬಿಸುವ ಕೆಲಸದಲ್ಲಿ ನಿರತರಾಗಿದ್ದರು. ನಮ್ಮ ದೇಹನೇ ದೇವಿಕೊಳ್ಳ ಅಂದ. ಇಬ್ಬರು ಚಿಲುಮೆಗೆ ಗಾಂಜಾ ತುಂಬುವ ಕೆಲಸದಲ್ಲಿ ತಲ್ಲೀನರಾಗಿದ್ದರೂ ಈ ಮಾತಿಗೆ ಆಶ್ಚರ್ಯ ವ್ಯಕ್ತ ಪಡಿಸಲೇ ಇಲ್ಲ. ನಮ್ಮ ಗುರುಗಳಾದ ಶಿವಶರಣಪ್ಪ ತಾತ ಒಂದು ಸಲ ವಿಚಿತ್ರವೊಂದು ತೋರಿಸಿದ ಎಂದು ಅವುಟುಗಾಲು ಭರಮಪ್ಪ ತನ್ನ ಗುರುವಿನ ಕಥಾನಕ ಆರಂಭಿಸಿದ. ’ಳಗಿನದು ಸ್ವಚ್ಛ ಮಾಡಿಕೋ ಬೇಕು ಮೊದಲು ಅಂದರು.’ ಒಳಗಿನದು ಅಂದರೆ ಏನು? ಎಂದು ಮಾಧವನಿಗೆ ಪ್ರಶ್ನೆ ಎಸೆದ. ಮಾಧವನಿಗೆ ಸಾಕುಬೇಕಾಯಿತು. ಗಾಂಜಾ ಸೇವನೆಯ ಧೂಮ, ಅದು ಎಬ್ಬಿಸುವ ವಿನ್ಯಾssssಸ, ವಿಚಿತ್ರ ಪರಿಮಳ ಉಸಿರುಕಟ್ಟಿಸುವ ವಾತಾವರಣ ತಂದಿಟ್ಟು ತಪ್ಪಿಸಿಕೊಳ್ಳುವ ಭರದಲ್ಲಿ ಆತ್ಮಶುದ್ಧಿ ಅಂತಾ ಅರ್ಥ ಅಂದು ಬಿಟ್ಟ. ಈ ಮಾತು ಕೇಳುತ್ತಲೇ ಕುಳ್ಳ ಸಾಧು ಕೊಕ್ಕೊಕ್ಕೊ ನಕ್ಕು ಬಿಟ್ಟ.

ಅವುಟುಗಾಲು ಭರಮಪ್ಪ ಮಾತ್ರ ತನ್ನದೇ ಗುಂಗಿನಲ್ಲಿ ಕಥಾನಕ ಮುಂದುವರೆಸಿದ. ’ಒಮ್ಮೆ ಶಿವಶರಣಪ್ಪತಾತ, ಮಡಿಪಂಜೆಯ ಅಂಚು ತೆಗೆದುಕೊಂಡು ನಿಧಾನವಾಗಿ ನುಂಗುತ್ತಾ ಹೋದ, ಎಷ್ಟು ನುಂಗಿದ ಅಂದರೆ ಅದರ ಅಂಚು ಮಾತ್ರ ಉಳಿಯಿತು. ಜೋರಾಗಿ ಹೂಂಕರಿಸಿ, ಆ ಮಡಿಪಂಜೆಯ ಅಂಚನ್ನು ಕುಂಡಿಯಿಂದ ಹೊರ ತೆಗೆದ. ಬಾಯಿಯಲ್ಲಿ ಅಂಚು ಮತ್ತು ಕುಂಡಿಯಲ್ಲಿ ಅಂಚು ಎರಡು ಕೈಯಿಂದ ಹಿಡಿದುಕೊಂಡು ಹಿಂದೆ ಮುಂದೆ ಮಾಡುತ್ತಾ ಹೋದ. ಒಳಗಿನದೆಲ್ಲಾ ಸ್ವಚ್ಛ ಮಾಡಿ ಹೊರ ತೆಗೆದು ಹಾಕಿದ,’ ಎಂದ. ಮಾಧವನಿಗೆ ತಲೆ ಕೆಟ್ಟು ಹೊಯಿತು. ಒಳಗಿನದನ್ನು ಸ್ವಚ್ಛ ಮಾಡಿಕೊಂಡ ನಮ್ಮ ಶಿವಶರಣಪ್ಪ ತಾತಾ, ಚಿಲುಮೆ ಸೇದುತ್ತಾ ಹೋದರೆ ಹೊಗೆ ಕುಂಡಿಯಿಂದ ಹೊರಗೆ ಬರುತ್ತಿತ್ತು. ಎಲ್ಲಾ ನವರಂಧ್ರಗಳಲ್ಲಿ ಹೊಗೆ ಚಿಮ್ಮಿಸುವ ಅವರ ಮಹಿಮೆ ದೊಡ್ಡದು ಎಂದು ಅವಟುಗಾಲು ಭರಮಪ್ಪ ಆ ಧೂಮ ವಿಲಾಸವನ್ನು ಬಣ್ಣಿಸತೊಡಗಿದ. ಯಾವ ಮಾಯದಿಂದಲೂ ಎನ್ನುವಂತೆ ಮಾಧವ ಅಲ್ಲಿಂದ ಕಣ್ಮರೆಯಾಗಿ ಬಿಟ್ಟ. ಇದಾಗಿ ಸ್ವಲ್ಪದಿನಗಳ ಕಾಲ ಮಾಧವನಿಗೆ ಏನು ಮಾಡಬೇಕು ತೋಚದೇ ಅವುಟುಗಾಲು ಭರಮಪ್ಪ, ಕುಳ್ಳ ಸಾಧು ಹೇಳಿದ ಪ್ರದೇಶಗಳನ್ನು ಒಂದಿಷ್ಟು ನೋಡಿ ಬಿಡುವುದು ಸರಿ ಎಂಬ ನಿರ್ಧಾರಕ್ಕೆ ಬಂದು ಹಂಪಿ ಕಡೆ ಸೈಕಲ್ ಹೊರಳಿಸಿದ.

ಮಾತಂಗ ಪರ್ವತದ ಹಿಂದುಗಡೆ ಹತ್ತುಕೈಯ ತಾಯಮ್ಮ ಉಗ್ರವಾಗಿ ಕಂಡರೂ ಕಾದಂಬರಿಯಲ್ಲಿ ವರ್ಣಿತಗೊಂಡಿರುವ ದೇವಿ ಹಾಗೂ ದೇವಿಕೊಳ್ಳ ಇದಲ್ಲ ಅನ್ನಿಸಿತು. ಕಮಲ್ ಮಹಲ್ ಸಮೀಪ ದೊಡ್ಡ ಅರಳಿಮರದ ಕೆಳಗೆ ಇರುವ ಪಟ್ಟಣದ ಯಲ್ಲಮ್ಮನನ್ನು ನೋಡಿದ. ಸಮಾಧಾನ ಆಗಲಿಲ್ಲ.

ಗೆಳೆಯ ಹನುಮ, ಪರಮೇಶಿ ಇಬ್ಬರನ್ನು ಒಂದು ದಿನ ಕೂಡಿಸಿ, ಮಾಧವ ಕರುಣಾ ವಿಲಾಸ ಕಾದಂಬರಿಯನ್ನು ವರ್ಣಿಸಿ, ದೇವಿಕೊಳ್ಳದಲ್ಲಿ ಗುಪ್ತನಿಧಿ ಇದೆ. ಅದನ್ನು ಹೇಗಾದರೂ ಮಾಡಿ ಹುಡುಕೋಣ ಅಂತಾ ಆಸೆ ಹುಟ್ಟಿಸಿದ. ಈ ಪುಸ್ತಕ ಎಲ್ಲಿ ಸಿಕ್ಕಿತು ಮಾರಾಯ ಅಂತಾ ಆ ಕಾದಂಬರಿಯನ್ನು ಕೈಯಲ್ಲಿ ಹಿಡಿದು, ಯಾವುದೋ ಪುರಾತನ ಕಾಲದ ಅಮೂಲ್ಯ ಗ್ರಂಥ ಇದು ಎನ್ನುವಂತೆ ನೋಡಿದ ಹನುಮ, ಇದನ್ನು ಪೂರ್ತಿ ಓದಿದ್ದಿಯಾ ಎಂದ. ಪೂರ್ತಿನಾ ಎಷ್ಟು ಸಾರಿ ಓದಿದ್ದೇನೋ ಗೊತ್ತಿಲ್ಲ ಎಂದ ಮಾಧವ. ನೀಲಿ ಹೊತ್ತಿಗೆ ಏನು ಮಾರಾಯ ಇದು. ನೀಲಿ ಹೊತ್ತಿಗೆಯನ್ನು ಒಂದು ತಪ್ಪಿಲ್ಲದೇ ಓದಬೇಕಂತೆ ತಪ್ಪಿದರೆ ವಿಷ ಕಾರಿ ಸತ್ತು ಹೋಗುತ್ತಾರಂತೆ ನಮ್ಮ ದೊಡ್ಡಪ್ಪ ಹೇಳುತ್ತಿದ್ದ ಎಂದ. ಹನುಮ ನಾನು ಮಾತ್ರ ಓದೋದಿಲ್ಲ ಎಂದು ಪಟಕ್ಕನೆ ಮಾಧವನ ಕೈಯಲ್ಲಿ ಪುಸ್ತಕ ಇಟ್ಟು ಬಿಟ್ಟ. ಪರಮೇಶಿ ಮಾತ್ರ ದೇವಿಕೊಳ್ಳದ ಬಗ್ಗೆನೇ ಯೋಚಿಸುತ್ತಿದ್ದ ಎನ್ನುವಂತೆ ಎಲ್ಲಿ ಅಂತಾ ಹುಡುಕುವುದು. ಪುಸ್ತಕದಲ್ಲಿ ನಕ್ಷೆ ಇರುತ್ತೆ, ಸರಿಯಾಗಿ ನೋಡಿ ಹೇಳು ಅಂದ. ಇದು ಕಾದಂಬರಿ ಅಂತಾ ಹೇಳಿ ಮನವರಿಕೆ ಮಾಡಿಕೊಡುವಲ್ಲಿ ಸುಸ್ತಾದ ಮಾಧವ.

ಮೂರು ಜನ ಹಂಪಿಗೆ ವಾರವಿಡಿ ಓಡಾಡಿದರೂ ದೇವಿಕೊಳ್ಳ ಪತ್ತೆ ಆಗಲಿಲ್ಲ. ಸೋತು ಮಂಟಪದಲ್ಲಿ ಕುಳಿತಾಗ ಎಷ್ಟು ಜನ ಗೋರಿ ಅಗೆದು, ಹಂಡೇವು ಕಿತ್ತುಕೊಂಡು ಹೋಗಿದ್ದಾರೆ. ನಾವು ಅದನ್ನೇ ಯಾಕೇ ಮಾಡಬಾರದು ಎಂದು ಹನುಮ ಹೇಳಿದಾಗ ಮಾಧವನಿಗೂ, ಪರಮೇಶಿಗೂ ಇದು ಸರಿ ಎನಿಸಿತು. ಮಾಧವ ಕರುಣ ವಿಲಾಸವನ್ನು ಮತ್ತೊಮ್ಮೆ ಇಡೀದಿನ ಕುಳಿತು ತಿರುವಿ ಹಾಕಿದ ಮಾಧವ. ಹಿಂದೂ ಸಾಮ್ರಾಜ್ಯ ಉಳಿಸಿಕೊಳ್ಳಲೆಂದೇ ಸ್ಥಾಪಿತವಾಗಿರುವ ಮಹಾ ಸಾಮ್ರಾಜ್ಯದಲ್ಲಿ ಮ್ಲೇಂಛರು ಇಲ್ಲಿರಲಿಕ್ಕೆ ಸಾಧ್ಯವೇ ಇಲ್ಲ. ಮತ್ತೇ ಯಾಕೇ ಇಷ್ಟೊಂದು ಗೋರಿಗಳು? ತಲೆ ಕೆಡಿಸಿಕೊಂಡ. ಕಡ್ಡಿರಾಂಪುರ ಎನ್ನುವುದು ಮೊದಲು ರಾಮಪುರವಾಗಿತ್ತು ಎಂದು ಇತಿಹಾಸ ಪ್ರಾಧ್ಯಾಪಕ ವಿಚಾರ ಸಂಕಿರಣದಲ್ಲಿ ಹೇಳಿದ್ದು ನೆನಪಾಯಿತು. ಹಾಗಾದರೆ ರಾಮನ ಗುಡಿ ಎಲ್ಲಿಗೆ ಹೊಯಿತು? ಅದನ್ನು ಮ್ಲೇಂಚರು ನಾಶ ಮಾಡಿ ಗೋರಿ ನಿರ್ಮಿಸಿದರೇ? ನೂರಾರು ಯೋಚನೆಗಳು ಕಾಡಲಾರಂಭಿಸಿದವು. ಮುತ್ತುರತ್ನಗಳನ್ನು ಬಳ್ಳದಿಂದ ಮಾರಾಟ ಮಾಡುತ್ತಿರುವ ವಿಜಯನಗರ ಸಾಮ್ರಾಜ್ಯ ಕಣ್ಮುಂದೆ ಬಂತು. ಬಂಗಾರದ ಹಂಡೇವು ಪಡೆದು ಕೆಲವರು ದೊಡ್ಡ ಶ್ರೀಮಂತರಾದ ಕಥೆ ನೆನಪಾಯಿತು. ಇದೆಲ್ಲಾ ಸುಳ್ಳು ಇರಲಿಕ್ಕೆ ಸಾಧ್ಯವೇ ಇಲ್ಲ ಎಂಬ ಗುಪ್ತನಿಧಿಯ ಆಸೆ ಮಾತ್ರ ಬೆಳೆಯುತ್ತಲೇ ಹೊಯಿತು. ಅವತ್ತು ರಾತ್ರಿ ಕನಸಿನಲ್ಲಿ ವಿದ್ಯಾರಣ್ಯರು ಬಂದು ಮಾಧವ ಏನಾದರೂ ಮಾಡು, ನಿನ್ನಿಂದ ಎಲ್ಲಾ ಸಾಧ್ಯ ಎಂದು ಹೇಳಿದಂತೆ ಆಯಿತು. ಅವರು ವಿದ್ಯಾರಣ್ಯರೋ ಅಥವಾ ಗಳಗನಾಥರೋ ಗೊತ್ತಾಗಲಿಲ್ಲ. ತಲೆಯ ಮೇಲೆ ಪುಸ್ತಕ ಹೊತ್ತು ಮಾರಾಟ ಮಾಡಿದ ಗಳಗನಾಥರ ಕಥೆ ಗೊತ್ತಿತ್ತು. ಕನಸಲ್ಲಿ ಬಂದ ಯತಿಯ ತಲೆಯ ಮೇಲೆಯೂ ಪುಸ್ತಕ ಇದ್ದವು.

ದೇವಸ್ಥಾನ ಒಡೆದು ಅಲ್ಲಿ ನಿಧಿ ಇದ್ದರೆ ಮ್ಲೇಂಚರು ತೆಗೆದುಕೊಂಡು ಹೋಗುತ್ತಾರೆ. ಇದು ಗೊತ್ತಿದ್ದರಿಂದ ನಮ್ಮ ಹಿರಿಯರು ಜಾಣತನ ಮಾಡಿ, ಮ್ಲೇಂಚರು ಪೂಜಿಸುವ ಗೋರಿ ನಿರ್ಮಿಸಿ, ಅದರಲ್ಲಿ ನಿಧಿ ಬಚ್ಚಿಟ್ಟಿರಬೇಕು ಎಂಬ ಅಪೂರ್ವ ಸತ್ಯವನ್ನು ಇತಿಹಾಸ ಸಂಶೋಧಕನಂತೆ ಕಂಡುಕೊಂಡ ಮಾಧವ ಪುಳಕಿತನಾಗಿ ಬಿಟ್ಟ. ತಡ ಮಾಡದೇ ಗೆಳೆಯ ಹನುಮ, ಪರಮೇಶಿಯನ್ನು ಕೂಡಿಸಿಕೊಂಡು ತಾನು ಕಂಡು ಹಿಡಿದ ಸತ್ಯವನ್ನು ಒಂದಿಷ್ಟು ರಂಜಕವಾಗಿಯೇ ಹೇಳಿದ.

ಅಬ್ಬಾ ಅದಕ್ಕೆ ಅಷ್ಟೊಂದು ಗೋರಿಗಳಿವೆ ಎಂದು ಇಬ್ಬರೂ ಉದ್ಗಾರ ತೆಗೆದು ಮಾಧವನದು ತಲೆ ಅಂದರೆ ತಲೆ ಎಂದು ಕೊಂಡಾಡಿದರು. ಬರುವ ಅಮವಾಸ್ಯೆ ದಿನ ರಾತ್ರಿ ಹೋಗಿ ಗೋರಿ ಅಗೆದು ಹಂಡೇವು ತೆಗೆದುಕೊಂಡು ಬರೋಣ ಅಂತಾ ಮಾಧವ ಹೇಳಿದಾಗ, ಪರಮೇಶಿ ಆಯಿತು ಎಂದು ಹನುಮನ ಮುಖ ನೋಡಿದ. ಹನುಮ, ’ನೋಡು ಮಾಧವ, ಅಮವಾಸ್ಯೆಯ ದಿನ ಗೋರಿ ಅಗೆಯುವುದು ಅಪಾಯ. ಅಲ್ಲಿ ದೆವ್ವಗಳಿರುತ್ತವೆ. ಅಲ್ಲಿ ಎಷ್ಟೊಂದು ಗೋರಿಗಳಿವೆ. ಎಲ್ಲಾ ದೆವ್ವಗಳು ಕಲೆ ಬಿದ್ದರೆ ನಾವು ರಕ್ತಕಾರಿ ಸಾಯಬೇಕಾಗುತ್ತದೆ,’ ಎಂದ.

ಗೋರಿಗಳಲ್ಲ ಅವು, ಮ್ಲೇಂಚರನ್ನು ಹಾದಿ ತಪ್ಪಿಸಲು ಹಿರಿಯರು ಮಾಡಿದ ಪ್ಲಾನ್ ಅದು ಎಂದು ಮಾಧವ ಎಂದು ಎಷ್ಟೇ ಹೇಳಿದರೂ ಹನುಮ ಅದರೂ ಅವು ಗೋರಿಗಳು ತಾನೇ ಎಂದು ಹನುಮ ಪಟ್ಟು ಹಿಡಿದ.

ಹನುಮನ ಹಠ ಹೆಚ್ಚಾಗುತ್ತಿದ್ದಂತೆ ಮಾಧವನಿಗೂ ಒಳಗೆ ತಳಮಳ ಶುರುವಾಯಿತು. ಹೌದು ಅವು ಗೋರಿಗಳೇ ಆಗಿದ್ದರೆ ಪ್ರೇತಾತ್ಮಗಳು ಇದ್ದೇ ಇರುತ್ತವೆ ಎನ್ನಿಸಿ ಒಂದುಕ್ಷಣ ಭಯಭೀತನಾದ. ಸತ್ತಮೇಲೆ ಶವವನ್ನು ಸುಟ್ಟು ಗಂಗೆಯಲ್ಲಿ ಉಳಿದ ಆಸ್ತಿಗಳನ್ನು, ಬೂದಿಯನ್ನು ಚೆಲ್ಲಿ ಪ್ರೇತಾತ್ಮಕ್ಕೆ ಶಾಂತಿ ಮಾಡದೇ ಊಳುವ ಮೂಲಕ ಪ್ರೇತಾತ್ಮಗಳನ್ನು ಸುಡುಗಾಡಿನಲ್ಲಿ ಉಳಿಸುತ್ತಾರಲ್ಲ ಈ ಜನ ಅಂತಾ ಸಿಟ್ಟು ಬಂತು.

ಪರಮೇಶಿ ಮಾತ್ರ ಮಾಧವ ಗಾಳೆಮ್ಮನಗುಡಿ ಬಳಿ ಒಬ್ಬ ಪೂಜಾರಿ ಇದ್ದಾನೆ. ಆತ ಮಾಟ, ಮಂತ್ರ ಮಾಡುತ್ತಾನೆ. ಆತನಿಗೆ ಈ ವಿಷಯ ತಿಳಿಸಿ, ಮಾಟ, ಮಂತ್ರ ಮಾಡಿಸಿಕೊಂಡು ಹೋದರೆ ಹೇಗೆ ಎಂದ? ಮಾಧವನಿಗೂ ಅದು ಸರಿ ಅನ್ನಿಸಿತು. ಹನುಮನ ಮುಖ ನೋಡಿದ. ಹನುಮ ಅದಕ್ಕೆ ಒಪ್ಪಿಗೆ ಸೂಚಿಸಿ ತಲೆಯಾಡಿಸಿದ.

ಆದರೆ ಗೋರಿ ಅಗೆದು ಹಂಡೇವು ತರುವುದು ಆತನಿಗೆ ಹೇಳುವುದು ಹೇಗೆ? ಆತನೂ ಪಾಲು ಕೇಳುತ್ತಾನೆ. ಆ ಮೇಲೆ ಬೇರೆಯವರಿಗೆ ಇದನ್ನು ಹೇಳಿದರೆ ನಮ್ಮ ಕಥೆ ಮುಗಿದು ಹೋಗುತ್ತದೆ ಎಂದು ಪರಮೇಶಿಯೇ ಅನುಮಾನ ವ್ಯಕ್ತ ಪಡಿಸಿದ. ಪಾಲು ಎಂಬ ಶಬ್ದ ಬೀಳುತ್ತಿದ್ದಂತೆ ಹನುಮ ಪಾಲು ಹೇಗೆ ಅಂತಾ ಇಲ್ಲಿಯೇ ತೀರ್ಮಾನ ಆಗಿ ಬಿಡಬೇಕು. ಗೆಳಯರ ನಡುವೆ ಜಗಳ ಆಗಬಾರದು. ತಾಮ್ರದ ದುಡ್ಡು ತಾಯಿಮಕ್ಕಳನ್ನು ಕೆಡಿಸಿತಂತೆ ಎಂದ. ನೀವೇ ತೀರ್ಮಾನ ಮಾಡಿ, ನೀವು ಹೇಳಿದಂತೆ ಆಗಲಿ ಎಂದ ಮಾಧವ ಗೆಳೆಯರ ಮೇಲೆ ಹೊತ್ತು ಹಾಕಿಬಿಟ್ಟ.

ಹನುಮ, ಪರಮೇಶಿ ಇಬ್ಬರೂ ಮಾತನಾಡಿಕೊಂಡು ತಮ್ಮ ತೀರ್ಮಾನ ಪ್ರಕಟಿಸಿದರು. ಮೂವರಿಗೆ ಸಮಪಾಲು, ಮಾಧವ ತುಂಬಾ ಕಷ್ಟಪಟ್ಟಿದ್ದಕ್ಕೆ ಮೂರು ಪಾಲು ಮಾಡಿದ ನಂತರ ಬಂಗಾರದ ಗಟ್ಟಿಗಳನ್ನು ಎರಡರಂತೆ ತಲಾ ಇಬ್ಬರು ಮಾಧವನಿಗೆ ಕೊಡಬೇಕು ಎಂದರು. ಮಾಧವನಿಗೆ ಅವರ ತೀರ್ಮಾನ ತುಂಬಾ ಖುಷಿ ಕೊಟ್ಟರೂ ತೋರಿಸಿಕೊಳ್ಳದೇ ನೀವು ಹೇಳಿದಂತೆ ಆಯಿತು ಎಂದ.

ಪೂಜಾರ ಕಾಳಪ್ಪನ ಬಳಿ ಹೋಗಿ ’ನಾವು ಒಂದು ಒಳ್ಳೆಯ ಕೆಲಸಕ್ಕೆ ಅಮವಾಸ್ಯೆ ದಿನ ಹೋಗುತ್ತಿದ್ದೇವೆ. ದೆವ್ವಗಳು ನಮ್ಮ ತಂಟೆಗೆ ಬರಬಾರದು. ನಾವು ಹಿಡಿದ ಕೆಲಸ ಆಗಬೇಕ” ಅಂತಹ ಹೇಳೋಣ. ಮಾಟ ಮಾಡಿಸಿಕೊಂಡು ಬರೋಣ ಎಂಬ ಅಂತಿಮ ತೀರ್ಮಾನ ಚರ್ಚೆಯ ನಂತರ ಹೊರಬಿತ್ತು.

ಇವರು ಹೋದಾಗ ಪೂಜಾರ ಕಾಳಪ್ಪ ಪೂಜೆಯಲ್ಲಿದ್ದ. ಹುತ್ತದ ಮುಂದೆ ದೇವಿಮೂರ್ತಿ ಕುಂಕುಮ, ಭಂಡಾರ ಪೂಸಿಕೊಂಡು ಕೆಂಪಗೆ ಕುಳಿತಿದ್ದಳು. ಕುಂಬಳಕಾಯಿ ಹೊಡೆದು, ಅದರಲ್ಲಿ ಕುಂಕುಮ ಹಾಕಿ ಎರಡೂ ಬದಿ ಇಡಲಾಗಿತ್ತು. ಕೂದಲು ಚೆಲ್ಲು ಹೊಡೆದು ಹಣೆ ತುಂಬಾ ಕುಂಕುಮ ಬಳಿದುಕೊಂಡು ಬರೀ ಮೈಯಲ್ಲಿ ಪೂಜಾರ್ ಕಾಳಪ್ಪ ಕುಳಿತಿದ್ದ.

ಆತನ ಕಪ್ಪು ಕೃಶವಾದ ಮೈ ಹೊಳೆಯತ್ತಿತ್ತು. ದೊಡ್ಡ ದೀಪ ಉರಿಯುತ್ತಿತ್ತು. ಏನು ಬಂದಿದ್ದು ಅಂತಾ ಹನುಮ, ಪರಮೇಶಿಯತ್ತ ನೋಡಿದ. ಮಾಧವನನ್ನು ನೋಡಿ ಒಂದುಕ್ಷಣ ಆಶ್ಚರ್ಯವಾದರೂ ತೋರಿಸಿಕೊಳ್ಳದೇ ತಲೆ ಹಾಕಿದ. ಹನುಮನೇ ಬಾಯಿ ಬಿಟ್ಟ. ನಾವು ಅಮವಾಸ್ಯೆ ದಿನ ಒಂದು ಕೆಲಸಕ್ಕೆ ಹೋಗುತ್ತಿದ್ದೇವೆ. ದೆವ್ವಗಳು ಅಡ್ಡಮಾಡಬಾರದು. ಅದಕ್ಕೆ ಶಾಂತಿ ಮಾಡಬೇಕು ಅಂದ.

ಕವಡೆ ತೆಗೆದು ಹಾಕುತ್ತಾ ಮೂವರ ಮುಖವನ್ನು ನೋಡಿದ ಪೂಜಾರಿ ಕಾಳಪ್ಪ ಒಮ್ಮೆ ಎಲ್ಲಾ ಕವಡೆಗಳನ್ನು ಕೈಯಲ್ಲಿ ತೆಗೆದುಕೊಂಡು ಕಣ್ಣುಮುಚ್ಚಿಕೊಂಡು ಮುಖ ಮೇಲಕ್ಕೆ ಎತ್ತಿದ. ಯಾವದೋ ಮಂತ್ರ ಹೇಳುತ್ತಾ ನೆಲದ ಮೇಲೆ ಕವಡೆ ಚೆಲ್ಲಿದ. ದಿಕ್ಕಾಪಾಲಾಗಿ ಕವಡೆ ಬಿದ್ದವು. ಲೆಕ್ಕ ಹಾಕಿದ. ನೀವು ಎಲ್ಲಿಗೆ ಹೋಗುತ್ತೀರಿ ಎಂದು ಗೊತ್ತಾಯಿತು ಎಂದ. ಮೂವರು ಕೆಲಸ ಕೆಟ್ಟಿತು ಎನ್ನುವಂತೆ ಮುಖ ಮಾಡಿಕೊಂಡರು. ಹೋಗಿ ಬನ್ನಿ ಜಯ ಆಗುತ್ತೆ ಎಂದಾಗ ಸಮಾಧಾನದ ನಿಟ್ಟಿಸಿರು ಬಿಟ್ಟರು.

ಮಂತ್ರಿಸಿದ ಮೂರು ನಿಂಬೆಹಣ್ಣು, ಕುಂಕುಮ, ಭಂಡಾರ ನೀಡಿ, ಕಟ್ಟಿಕೊಳ್ಳಲು ತಾಯಿತ ನೀಡಿದ. ಮೊದಲು ಯಾವ ಕಡೆ ಕೆಲಸ ಮಾಡುತ್ತೀರೋ ಅದರ ಸುತ್ತ ಮೂರು ಸುತ್ತು ಹಾಕಬೇಕು. ಗಂಗಿದಿಕ್ಕಿನಿಂದ ಕೆಲಸ ಆರಂಭಿಸಬೇಕು. ದೆವ್ವಗಳು ಅಡ್ಡ ಮಾಡುವುದಿಲ್ಲ ಎಂದ. ಪರಮೇಶಿ ಕಣ್ಸನ್ನೆ ಮಾಡಲು ಮಾಧವ ನೂರರ ಎರಡು ನೋಟುಗಳನ್ನು ಪೂಜಾರ ಕಾಳಪ್ಪನಿಗೆ ಕೊಡಲು ಹೋದ. ದೇವಿಯ ಮುಂದೆ ಇಡು. ನಾನು ಹಣ ಮುಟ್ಟುವುದಿಲ್ಲ ಎಂದು ಪೂಜಾರ ಕಾಳಪ್ಪ ಹೇಳಿದ.

ಮಾಧವ ಉಡುದಾರದಲ್ಲಿ ತಾಯಿತ ಕಟ್ಟಿಕೊಂಡ. ಉಳಿದಿಬ್ಬರೂ ಕೊರಳಲ್ಲಿಯೇ ಈಗಾಗಲೇ ಇರುವ ತಾಯಿತದ ಜತೆ ಇದನ್ನು ಸೇರಿಸಿಕೊಂಡರು. ಅಮವಾಸ್ಯೆಯ ಹಿಂದಿನ ದಿನವೇ ಪರಮೇಶಿಯ ಕಬ್ಬಿನ ಗದ್ದೆಯಲ್ಲಿ ಹಾರೆ, ಸಲುಕೆ ಇಟ್ಟು ಬಚ್ಚಿಡಬೇಕು. ಯಾವ ಗೋರಿ ಅಂತಹ ಮೂವರು ಹೋಗಿ ಗುರುತು ಮಾಡಿ ಬರಬೇಕು ಎಂದುಕೊಂಡಿದ್ದರಿಂದ ಅದು ನಡೆದು ಹೋಗಿತ್ತು.

ಅಮವಾಸ್ಯೆ ಗಾಢ ಕತ್ತಲು, ಮೂವರು ಗೋರಿ ಬಳಿ ತೆರಳಿದರು. ಬ್ಯಾಟರಿ ಬೆಳಕು ಕಂಡು ಯಾರಾದರೂ ನೋಡಿಯಾರು ಎಂದು ಮೇಲುಗಡೆ ಬಟ್ಟೆ ಸುತ್ತಿದ್ದರು. ಆ ಮಬ್ಬು ಬೆಳಕಿನಲ್ಲಿ ಗುರುತು ಮಾಡಿದ ಗೋರಿಯ ಸುತ್ತ ಮೂವರೂ ಪ್ರದಕ್ಷಿಣೆ ಹಾಕಿದರು. ಪೂಜಾರಿ ಕಾಳಪ್ಪ ಹೇಳಿದಂತೆ ಪೂಜೆ ಸಲ್ಲಿಸಿದರು. ಹನುಮನೇ ಹಾರೆ ಹಿಡಿದು, ಗೋರಿಯ ಬುಡಕ್ಕೆ ಹಾರೆ ಹಾಕಿ ಮೀಟಿದ. ಕಲ್ಲು ಜಣ್ ಅಂತಹ ಸಪ್ಪಳ ಮಾಡಿತೆ ಹೊರತು ಜಪ್ಪಯ್ಯ ಅನ್ನಲಿಲ್ಲ. ಪರಮೇಶಿಯು ಸಾಹಸಕ್ಕೆ ಇಳಿದ. ಹನುಮನ ಜೊತೆ ಹಾರೆ ಹಿಡಿದು ಇಬ್ಬರೂ ಕಷ್ಟಪಟ್ಟ ನಂತರ ಕಲ್ಲು ಸ್ವಲ್ಪ ಅಲುಗಾಡಿತು. ಮಾಧವನಿಗೆ ಇಂತಹ ಕೆಲಸ ಮಾಡಿ ಗೊತ್ತಿಲ್ಲವಾದ್ದರಿಂದ ಸಲಹೆ ನೀಡುತ್ತಿದ್ದ. ಇಬ್ಬರೂ ಹೇಗೂ ಮಾಡಿ ಬಂಡೆ ಸ್ವಲ್ಪ ಎತ್ತಿದರು. ಒಡನೆ ಮಾಧವ ಅದರಡಿ ಕಲ್ಲು ಸರಿಸಿದ. ಬೆವತು ನೀರು ನೀರಾಗಿದ್ದ ಇಬ್ಬರೂ ಸ್ವಲ್ಪ ದಣಿವಾರಿಸಿಕೊಂಡರು. ಬಂಡೆ ಸ್ವಲ್ಪ ಮೇಲೆದ್ದಿದ್ದು ಅವರಿಗೆ ಇಮ್ಮಡಿ ಉತ್ಸಾಹ ನೀಡಿತ್ತು. ಇಬ್ಬರೂ ಕಲ್ಲಿಗೆ ಹೊಂದಿಕೊಂಡಿದ್ದ ಮಣ್ಣನ್ನು ಬೇರ್ಪಡಿಸಿ, ಅದನ್ನು ಇನ್ನೂ ಸ್ವಲ್ಪ ಎತ್ತಿ ಬಂಡೆ ಉರುಳಿಸುವದರಲ್ಲಿ ಅಂತೂ ಯಶಸ್ವಿಯಾದರು. ಮೂವರಿಗೂ ಕುತೂಹಲ. ಬ್ಯಾಟರಿ ಹಾಕಿ ನೋಡಿದರೂ ಅದರಡಿ ಏನೋ ಕಾಣಿಸುತ್ತಿಲ್ಲ. ಸಣ್ಣ ಕುಣಿಯಿದ್ದಂತೆ ತೋರುತ್ತದೆ. ಹನುಮ ಕುಣಿಯಲ್ಲಿ ಇಳಿದು ಕೈಯಿಂದ ಸವರಾಡಿ ನೋಡಿದ. ಏನೋ ಕಾಣಿಸುತ್ತಿಲ್ಲ. ಕೆಲವು ಬೆಣಚು ಕಲ್ಲು, ಎಲುಬುಗಳು ಸಿಕ್ಕವು, ಅವುಗಳನ್ನೆಲ್ಲಾ ಸಲುಕೆಯಿಂದ ಎತ್ತಿ ಹೊರ ಹಾಕಿದರು. ಹಾರೆಯಿಂದ ಕುಣಿ ತೋಡುತ್ತಾ ಹೋದಂತೆ ಎಲುಬಿನ ರಾಶಿಗಳಿಂದ ಕೂಡಿದ ಮಣ್ಣು. ರಾಶಿ ರಾಶಿ ಹೊರಗೆ ಹಾಕಿದರು. ಕೊನೆಗೆ ಜಣ್ ಅಂತ ಸಪ್ಪಳ ಕೇಳುತ್ತಿದ್ದಂತೆ ಹಂಡೇವು ಸಿಕ್ಕಿತು ಎಂದು ಮೂವರು ಖುಷಿಯಾದರು. ನಿಧಾನ ಎಂದ ಮಾಧವ. ಹಂಡೇವು ತೂತು ಮಾಡಿ ಬಿಟ್ಟಿಯಾ ಅಂದ ಪರಮೇಶಿ. ಬ್ಯಾಟರಿ ಹಾಕಿ ನೋಡಿದರೆ ಅದೊಂದು ತಲೆಬುರುಡೆ ಇವರನ್ನು ನೋಡಿ ಅಣಕಿಸಿದಂತೆ ಕಾಣಿತು. ಹನುಮ ಅದನ್ನು ಕೈಯಲ್ಲಿ ಹಿಡಿದು, ಎತ್ತಿ ತೋರಿಸಿದ. ಅದರ ಕಣ್ಣು, ಮೂಗಿನಲ್ಲಿ ಹೊಗೆ ಬಂದ ಹಾಗೇ ಕಾಣಿತು. ಚಿಲುಮೆಯಿಂದ ಬಂದ ಧೂಮದಂತೆ, ಶಿವಶರಣಪ್ಪ ತಾತನ ನವರಂಧ್ರಗಳ ಮೂಲಕ ಹೊಗೆ ಬಂದಂತೆ ಕಂಡು ಮಾಧವ ಬೆಕ್ಕಸಬೆರಗಾಗಿ ಕುಸಿದು ಕುಳಿತ.

ಮಾಧವ ಅಂಗಡಿಯಲ್ಲಿದ್ದಾಗ ತಿಪ್ಪಯ್ಯ ಬೀಡಿ ತೆಗೆದುಕೊಂಡು ಪುಸ್ಸು ಪುಸ್ಸು ಹೊಗೆ ಬಿಡುತ್ತಾ, ’ಮಾಧವ ಗೋರಿ ಅಗೆದು ಯಾರೊ ಹಂಡೇವು ಕಿತ್ತಿಕೊಂಡು ಹೋಗಿದ್ದಾರೆ ಮಹರಾಯ’ ಎಂದ. ಅವನು ವರ್ಣಿಸುತ್ತಿರುವುದು ನಾವು ಅಗೆದ ಗೋರಿಯೇ ಆಗಿದೆ ಎಂದು ಗೊತ್ತಾಗಿ ಮಾಧವ ಅವನನ್ನೇ ನೋಡಿದ. ಅವನು ಹೇಳುತ್ತಿರುವುದು ಕಿವಿಯ ಮೇಲೆ ಬೀಳುತ್ತಲೇ ಇದ್ದರೂ ಅವನ ಗಮನವೆಲ್ಲಾ ಅವನ ಬಾಯಿಂದ, ಮೂಗಿನಿಂದ ಹೊರ ಹೋಗುತ್ತಿರುವ ಧೂಮವನ್ನೇ ನೋಡುತ್ತಿತ್ತು.