Daily Archives: January 1, 2013

2013 – ಕರ್ನಾಟಕದಲ್ಲಿ ಮೌಲ್ಯಗಳು ಪಾತಾಳದ ತಳ ಕಾಣಲಿರುವ ವರ್ಷ…

ಸ್ನೇಹಿತರೇ,

2012 ಮುಗಿಯಿತು.

ಪ್ರಳಯವಾಗಲಿಲ್ಲ. ಆದರೆ ದೇಶ ಕೊನೆಯ ದಿನಗಳಲ್ಲಿ ಆಕ್ರೋಶ ಮತ್ತು ಹತಾಶೆಯಿಂದ ನಿಟ್ಟುಸಿರು ಬಿಟ್ಟಿತು.

ಕರ್ನಾಟಕದಲ್ಲಿ ನಾವು–ನಮ್ಮ ವರ್ತಮಾನ ಬಳಗ–ಕಳೆದ ಎರಡು ತಿಂಗಳಿನಿಂದ ಅಸಹಾಯಕತೆಯಿಂದ ನರಳಿತು. ನಿರಪರಾಧಿಯಾಗಿರುವ ಗೆಳೆಯ ನವೀನ್ ಸೂರಿಂಜೆ ಸುಮಾರು ಎರಡು ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಆಯಕಟ್ಟಿನ ಜಾಗಗಳಲ್ಲಿ ಅದಕ್ಷರೂ, ಭ್ರಷ್ಟರೂ, ರಾಕ್ಷಸರೂ, ಹಿಂಸಾವಿನೋದಿಗಳೂ ತುಂಬಿದ್ದಾರೆ. ಯಾವ ರೀತಿಯಿಂದಲೂ ಸರಿಪಡಿಸಲಾಗದ, ಪರಿಹಾರ ನೀಡಲಾಗದ ಅನ್ಯಾಯ ನಡೆಯುತ್ತಲೇ ಇದೆ. ಎಲ್ಲಕ್ಕಿಂತ ಕ್ರೂರವಾದದ್ದೇನೆಂದರೆ ಇದಕ್ಕೆ ಸಂಬಂಧಪಟ್ಟವರ–ಅಂದರೆ ಸೂರಿಂಜೆಯ ವರ್ಗಕ್ಕೆ ಸೇರಿದ ಬಹುಪಾಲು ಪತ್ರಕರ್ತರ–ಔದಾಸೀನ್ಯ ಅಥವ ಅಸಡ್ಡೆ.

ವರ್ತಮಾನ.ಕಾಮ್‌ನ ವಿಚಾರಕ್ಕೆ ಹೇಳುವುದಾದರೆ, ಕೊನೆಯ ಎರಡು ತಿಂಗಳಿನಲ್ಲಿ ನಮ್ಮ ಬರಹಗಳ ಸಂಖ್ಯೆ ಸ್ವಲ್ಪ ಇಳಿದಿದೆ. ಕಾರಣಗಳು ಹಲವು. ನಾನು ರಾಜಕೀಯ ಪಕ್ಷವೊಂದರ ಕಾರ್ಯಕರ್ತನಾದ ಸಮಯದಿಂದ ಓಡಾಟ ಮತ್ತು ಆ ವಿಚಾರದ ಕೆಲಸಗಳು ಹೆಚ್ಚಾದವು. ಹಾಗಾಗಿ ಹೊಸ ಲೇಖಕರನ್ನು ಪರಿಚಯಿಸುವ ಕೆಲಸಗಳು ಕಮ್ಮಿಯಾದವು. ನಮ್ಮ ಬಳಗದ ಕೆಲವು ಸ್ನೇಹಿತರಿಗೂ ಮೂಮೂಲಿ ಸಾಂಸಾರಿಕ, ಔದ್ಯೋಗಿಕ ತಾಪತ್ರಯಗಳು ಇದ್ದದ್ದೇ. ಹಾಕಿಕೊಂಡ ಕೆಲವು ಯೋಜನೆಗಳನ್ನು ಕಾರ್ಯರೂಪಕ್ಕೆ ಇಳಿಸಲಾಗಲಿಲ್ಲ. ನಮ್ಮ ವೆಬ್‌ಸೈಟ್‌ಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯೊಬ್ಬರು ಅನಿರೀಕ್ಷಿತವಾಗಿ ಕೆಲಸ ಬಿಡಬೇಕಾಗಿ ಬಂದದ್ದರಿಂದ ನನಗೆ ಪ್ರತಿದಿನ ಕನಿಷ್ಟ ಒಂದು ಗಂಟೆ ಕೆಲಸ ಹೆಚ್ಚಾಯಿತು. ನನ್ನ ಸಾಫ್ಟ್‌ವೇರ್ ಉದ್ಯೋಗ, ರಾಜಕಾರಣ, ಸಾಮಾಜಿಕ ಚಟುವಟಿಕೆಗಳು, ಸಾಂಸಾರಿಕ ಜವಾಬ್ದಾರಿಗಳು, ಕೈಕೊಡುತ್ತಿದ್ದ ಆರೋಗ್ಯ, ಸುಮಾರು ನಾಲ್ಕೈದು ಸಾವಿರ ಕಿ.ಮಿ.ಗಳ ಪ್ರವಾಸ, ಹೆಚ್ಚಿದ ವೆಬ್‌ಸೈಟ್ ನಿರ್ವಹಣೆ, ಖಿನ್ನತೆ ಮೂಡಿಸಿದ ಸೂರಿಂಜೆ ಬಂಧನ; ಇವೆಲ್ಲವೂ ಕಳೆದ ಎರಡು-ಮೂರು ತಿಂಗಳಿನಿಂದ ವರ್ತಮಾನ.ಕಾಮ್‌ ಮೇಲೂ ಪ್ರಭಾವ ಬೀರಿದ ಅಂಶಗಳು.

ಆದರೂ, ಈ ಒಂದು ವರ್ಷದಲ್ಲಿ ವರ್ತಮಾನ.ಕಾಮ್ ಕರ್ನಾಟಕದಲ್ಲಿ ಗಟ್ಟಿಯಾಗಿ ಬೇರೂರಿದೆ. ಇಲ್ಲಿ ಪ್ರಕಟವಾಗುವ ಲೇಖನಗಳನ್ನು ನಾಡಿನ ಅನೇಕ ಸಣ್ಣ, ಸ್ಥಳೀಯ ಪತ್ರಿಕೆಗಳು ಮುದ್ರಿಸುತ್ತಿವೆ. ನಮ್ಮಲ್ಲಿ ಎತ್ತಲ್ಪಡುವ ವಿಚಾರಗಳು ಲಕ್ಷಾಂತರ ಸಂಖ್ಯೆಯಲ್ಲಲ್ಲದಿದ್ದರೂ ಸಾವಿರಗಳ ಸಂಖ್ಯೆಯಲ್ಲಿ ರಾಜ್ಯಾದ್ಯಂತ ಓದುಗರನ್ನು ಮುಟ್ಟುತ್ತಿವೆ. ಬೇರೆ ಯಾವುದೇ ಪತ್ರಿಕೆ ಅಥವ ಮಾಧ್ಯಮ ಸಂಸ್ಥೆಗಳು ಎತ್ತಲು ನಿರಾಕರಿಸುವ ಅಥವ ಭಯಪಡುವ ವಿಚಾರಗಳನ್ನು ನಾವು ನಿರ್ಭಯವಾಗಿ ಕರ್ನಾಟಕದ ಮುಂದಿಡುತ್ತಿದ್ದೇವೆ. ಈ ವೆಬ್‌ಸೈಟ್ ನಿರ್ವಹಣೆಗೆ ಕಳೆದ ವರ್ಷ ಸುಮಾರು ಐವತ್ತು ಸಾವಿರ ರೂಪಾಯಿಗಳ ಖರ್ಚು ಬಂದಿರಬಹುದು. ಕಳೆದ ಎರಡು ತಿಂಗಳಿನಿಂದ ಬಹುತೇಕ ಎಲ್ಲಾ ಕೆಲಸಗಳನ್ನು ನಾನೇ ಮಾಡುತ್ತಿರುವುದರಿಂದ ಈಗ ಅದೂ ಇಲ್ಲ. ಆದರೆ, ನಮ್ಮ ಲೇಖಕ ಬಳಗದ ಬೆಂಬಲದಿಂದ ಮತ್ತು ಅವರ ಶ್ರಮ, ಅಧ್ಯಯನ, ಪ್ರಾಮಾಣಿಕತೆ, ಬದ್ಧತೆ, ಧೈರ್ಯದ ಕಾರಣದಿಂದ ನಾವು ಸಾಧಿಸಿರುವುದು ಕಮ್ಮಿಯೇನಲ್ಲ. ಇದಕ್ಕೆ ಕಾರಣವಾದ ನಮ್ಮ ಎಲ್ಲಾ ಲೇಖಕರಿಗೂ, ಶರಣು.

ಮತ್ತು, ವರ್ತಮಾನ.ಕಾಮ್‌ನ ಕಾರಣದಿಂದಾಗಿ ನನಗೆ ಸಿಕ್ಕಿರುವ ಹೊಸ ಸ್ನೇಹಿತರ ಸಂಖ್ಯೆಯೂ ಚಿಕ್ಕದಿಲ್ಲ. ನಮ್ಮ ಬಳಗದ ಸ್ನೇಹಿತರ ಮತ್ತು ಸಮಾನ ಮನಸ್ಕರ ಬಳಗ ಬೆಳೆದಿದೆ. ಬೆಳೆಯುತ್ತಿದೆ.

ವೈಯಕ್ತಿಕವಾಗಿ ಹೇಳುವುದಾದರೆ, ನಾನು 2011 ರಲ್ಲಿ ದಾಖಲಿಸಿದ್ದ ಯಡ್ಡಯೂರಪ್ಪ ಮತ್ತು ಸಚಿವ ಸೋಮಣ್ಣನವರ ಮೇಲಿನ ಮೊಕದ್ದಮೆ 2012 ರಲ್ಲಿ ಒಂದು ಘಟ್ಟಕ್ಕೆ ಬಂತು. ಲೋಕಾಯುಕ್ತ ಪೋಲಿಸರು ಸಲ್ಲಿಸಿದ ಬಿ-ರಿಪೋರ್ಟ್ ಅನ್ನು ತಿರಸ್ಕರಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ನಾನು ಸಲ್ಲಿಸಿರುವ ಆರೋಪಪಟ್ಟಿ ಮತ್ತು ಲೋಕಾಯುಕ್ತ ಪೋಲಿಸರು ಕಲೆಹಾಕಿರುವ ದಾಖಲೆಗಳ ಆಧಾರದ ಮೇಲೆ ವಾದ ಮತ್ತು ವಿಚಾರಣೆ ನಡೆಸುವಂತೆ ಸರ್ಕಾರಿ ವಕೀಲರಿಗೆ ಆದೇಶಿಸಿತು. ನನಗೆ ಧಾರವಾಡದ ಹಿರೇಮಠರು, ಶಿವಮೊಗ್ಗದ ಸಿರಾಜಿನ್ ಬಾಷಾ ಮತ್ತು ಬಾಲರಾಜರು ಹೇಗೆ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಮೇಲ್ಪಂಕ್ತಿ ಹಾಕಿದ್ದರೋ ಹಾಗೆಯೇ ನನ್ನ ಪ್ರಯತ್ನವೂ ಒಂದಷ್ಟು ಜನರಿಗೆ ಮೇಲ್ಪಂಕ್ತಿಯಾಗಿದೆ ಎಂಬ ತೃಪ್ತಿಯಿದೆ. ನ್ಯಾಯಕ್ಕಾಗಿ ಮತ್ತು ಉತ್ತಮ ವ್ಯವಸ್ಥೆಗಾಗಿ ನೋವು, ಸೋಲು, ಕಿರುಕುಳ, ಅಪಪ್ರಚಾರಕ್ಕೆ ಸಿದ್ಧರಾಗುವವರ, ಪರಿಸ್ಥಿತಿ ಬಂದರೆ ಸೆರೆಮನೆಗೂ ಸ್ವಯಂಪ್ರೇರಣೆಯಿಂದ ಹೋಗುವವರ ಸಂಖ್ಯೆ ಹೆಚ್ಚಾಗಬೇಕಿದೆ.

ಇನ್ನು, 2010 ರಲ್ಲಿಯೇ ಸಿದ್ಧಪಡಿಸಿದ್ದ “ಭೂಮಿ ಹುಟ್ಟಿದ್ದು ಹೇಗೆ” ಎಂಬ ಸಾಕ್ಷ್ಯಚಿತ್ರ ಕಳೆದ ವರ್ಷ ವರ್ತಮಾನ.ಕಾಮ್ ಮೂಲಕ ಬಹುಜನರ ಗಮನಕ್ಕೆ ಬಂದಿತು. 45 ನಿಮಿಷಗಳ ಈ ಸಾಕ್ಷ್ಯಚಿತ್ರ ಯೂಟ್ಯೂಬ್‌ ಒಂದರಲ್ಲಿಯೇ ಇಲ್ಲಿಯವರೆಗೆ 3800 ಸಲ ವೀಕ್ಷಿಸಲ್ಪಟ್ಟಿದೆ. ರಾಜ್ಯದ ಅನೇಕ ಕಡೆ ಇದನ್ನು ಮೆಚ್ಚಿಕೊಂಡವರು ತಮ್ಮ ಸ್ನೇಹಿತರಿಗೆ, ನೆಂಟರಿಗೆ, ವಿದ್ಯಾರ್ಥಿಗಳಿಗೆ ಉಚಿತವಾಗಿ ಕಾಪಿ ಮಾಡಿ ಹಂಚುತ್ತಿದ್ದಾರೆ. ನನಗೆ ಸಿಕ್ಕಿರುವ ಮಾಹಿತಿಗಳ ಆಧಾರದ ಮೇಲೆ ಹೇಳುವುದಾದರೆ, ಇದನ್ನು ಈಗಾಗಲೆ ಹತ್ತಿಪ್ಪತ್ತು ಸಾವಿರ ಜನ ವೀಕ್ಷಿಸಿದ್ದಾರೆ. ಹಾಗೆಯೇ ನನ್ನ “ಏನೇ ಆಗಲಿ ಒಳ್ಳೆಯದನ್ನೇ ಮಾಡಿ, ಮಾಡುತ್ತಲೇ ಇರಿ…anyway-partial-coverಅನುವಾದಿತ ಪುಸ್ತಕವೂ ಪ್ರತಿದಿನ ಹೊಸ ಓದುಗರನ್ನು ಮುಟ್ಟುತ್ತಲೇ ಇದೆ. ಅದನ್ನು ಓದಿದ ಜನ ಅದರ ಬಗ್ಗೆ ಪ್ರೀತಿಯ ಮಾತುಗಳನ್ನು ಆಡುತ್ತಲೇ ಇದ್ದಾರೆ. ಅನೇಕ ಜನ ಅದನ್ನು ತಮ್ಮ ಇಷ್ಟಪಾತ್ರರಿಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ. ಹಾಗೆಯೇ, ಯಾರೂ ಪ್ರಕಾಶಿಸಲು ಧೈರ್ಯ ಮಾಡದೇ ಹೋದ “ದೇಶವಿದೇನಹಾ, ಕಾಲವಿದೇನಹಾ” ಪುಸ್ತಕವನ್ನು ಪ್ರಕಟಿಸಿದ್ದು. ಇದರಿಂದ ಒಂದು ರೀತಿಯಲ್ಲಿ ಕೆಲವು ಶತ್ರುಗಳನ್ನು ವಿನಾ ಸೃಷ್ಟಿಸಿಕೊಂಡಂತೆ ಕಂಡರೂ, ಅದು ವಿಷಾದವಿಲ್ಲದೆ ಮಾಡಿದ ನೈತಿಕವಾಗಿ ಸರಿಕಂಡ ಕೆಲಸವೇ.

ಕಳೆದ ವರ್ಷ ಇನ್ನೂ ಒಂದೆರಡು ಕೆಲಸಗಳಾಗಬೇಕಿತ್ತು: “ಭೂಮಿ ಹುಟ್ಟಿದ್ದು ಹೇಗೆ?” ಮಾದರಿಯಲ್ಲಿಯೇ ಜೀವವಿಕಾಸಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಸಾಕ್ಷ್ಯಚಿತ್ರ ಮಾಡಬೇಕೆಂಬ ಯೋಜನೆ ಆರಂಭವೇ ಆಗಲಿಲ್ಲ. ಹಾಗೆಯೇ, ನಾನು “ವಿಕ್ರಾಂತ ಕರ್ನಾಟಕ“ಕ್ಕೆ ಬರೆದಿದ್ದ ಎಲ್ಲಾ ಲೇಖನಗಳನ್ನು ಮತ್ತು ಅಂಕಣ ಬರಹಗಳನ್ನು ಒಟ್ಟು ಮಾಡಿ ಎರಡು ಪುಸ್ತಕಗಳಾಗಿ ಪ್ರಕಟಿಸಬೇಕೆಂಬ ಯೋಜನೆಯೂ ಮುಗಿಯಲಿಲ್ಲ. ಸುಮ್ಮನೆ ಮುಂದಕ್ಕೆ ತಳ್ಳಿ ಪ್ರಯೋಜನವಿಲ್ಲ. ಸಮಸ್ಯೆ ಏನೆಂದರೆ, ಮಾಡಲೇಬೇಕೆಂಬ ತುರ್ತೂ ಇಲ್ಲದಿರುವುದು.

ಬಹುಶಃ ಈ ವರ್ಷ ನಾನು ಪೂರ್ಣಪ್ರಮಾಣದ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತನಾಗುವ ದಿಸೆಯಲ್ಲಿದ್ದೇನೆ. ಒಂದೆರಡು ವರ್ಷ ನನ್ನ ಜೀವನೋಪಾಯದ ಉದ್ಯೋಗದಿಂದ ಬಿಡುವು ತೆಗೆದುಕೊಂಡು ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ಇತ್ತೀಚೆಗೆ ಬಹಳ ಅನ್ನಿಸುತ್ತಿದೆ. ಇಂತಹ ಕೆಲವೊಂದು ವಿಚಾರಗಳನ್ನು ಬಿಟ್ಟು ಮಿಕ್ಕೆಲ್ಲದರ ಮೇಲೂ ವೈರಾಗ್ಯ ಹೆಚ್ಚುತ್ತಿದೆ.

ಇನ್ನು ರಾಜ್ಯದ ರಾಜಕೀಯದ ಬಗ್ಗೆ ಹೇಳುವುದಾದರೆ, ಕಳೆದ ವರ್ಷ ಇದೇ ಸಮಯದಲ್ಲಿ ಬರೆದ ಬರಹದಲ್ಲಿ “ಈ ವರ್ಷದ ಅಂತ್ಯದ ಒಳಗೆ ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ಆಗುತ್ತದೆ, ಇಲ್ಲದಿದ್ದರೆ ರಾಷ್ಟ್ರಪತಿ ಆಡಳಿತ ಬರುತ್ತದೆ.” ಎಂದು ಬರೆದಿದ್ದೆ. ಅವೆರಡೂ ಆಗಲಿಲ್ಲ. ಆದರೆ ಇತ್ತೀಚಿನ ದಿನಗಳ ವಿದ್ಯಮಾನ ಗಮನಿಸುತ್ತಿದ್ದರೆ ಅವಧಿಗೆ ಮುಂಚೆಯೇ ಚುನಾವಣೆ ನಡೆಯಬಹುದು, ಮತ್ತು ಅದೂ ರಾಷ್ಟ್ರಪತಿ ಆಳ್ವಿಕೆಯಲ್ಲಿ ಎನ್ನುವ ಸೂಚನೆಗಳು ಕಾಣಿಸುತ್ತಿವೆ. ರಾಜ್ಯದಲ್ಲಿ ಇಷ್ಟೆಲ್ಲಾ ಭ್ರಷ್ಟಾಚಾರ ಮತ್ತು ಅನಾಚಾರಗಳು ನಡೆದಿದ್ದರೂ, ಮುಂದಿನ ವಿಧಾನಸಭೆ ಈಗಿರುವ ವಿಧಾನಸಭೆಗಿಂತ ಕೆಟ್ಟದ್ದಾಗಿಯೇ ಇರುತ್ತದೆ. ಹಾಲಿ ಶಾಸಕರಿಗಿಂತ ಹೆಚ್ಚು ಭ್ರಷ್ಟರೂ, ಅವಿವೇಕಿಗಳೂ, ಕೌಟುಂಬಿಕ ರಾಜಕಾರಣದ ವಾರಸುದಾರರು, ಇಂತಹವರೇ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಾಗಿ ಆರಿಸಿಬರಲಿದ್ದಾರೆ.

ಆದರೆ, ಬರಲಿರುವ ಹೊಸ ಶಾಸಕರಿಗೆ ಅಧಿಕಾರ ಸುಖ ನೀಡುವುದಿಲ್ಲ. ಈಗಾಗಲೆ ಆಹಾರ ಪದಾರ್ಥಗಳ ಬೆಲೆಯೇರಿಕೆ ಎಲ್ಲರನ್ನೂ ತಟ್ಟುತ್ತಿದೆ. ಬಡವರಿಗೆ ಮತ್ತು ಕೆಳಮಧ್ಯಮವರ್ಗದವರಿಗೆ ಜೀವನ ದುರ್ಭರವಾಗಲಿದೆ. ಕಾವೇರಿ ಸಮಸ್ಯೆ ರಾಜಕಾರಣಿಗಳ ತಲೆದಂಡ ಕೇಳಲಿದೆ. ಬರಗಾಲ 2013 ರಲ್ಲೂ ಮುಂದುವರೆಯಲಿದೆ. ಕುಡಿಯುವ ನೀರಿನ ಹಾಹಾಕಾರ ಜನಪ್ರತಿನಿಧಿಗಳ ತಾಳ್ಮೆ ಮತ್ತು ಅರ್ಹತೆಯನ್ನು ಪರೀಕ್ಷೆ ಮಾಡಲಿದೆ. ವಿದ್ಯುತ್ ಅಭಾವ ಜನರ ನಿದ್ದೆ ಕೆಡಿಸಲಿದೆ. ನಿಧಾನಗತಿಯ ಆರ್ಥಿಕ ಪ್ರಗತಿ ನಿರುದ್ಯೋಗವನ್ನು ಹೆಚ್ಚಿಸಲಿದೆ. ಇಳಿಮುಖವಾಗಲಿರುವ ಸರ್ಕಾರದ ಆದಾಯ ಅನೇಕ ಯೋಜನೆಗಳಿಗೆ ಕಡಿವಾಣ ಹಾಕಲಿದೆ. ಹಾಗೆಯೇ, ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ಮತ್ತು ನ್ಯಾಯಕ್ಕಾಗಿ ಜನರ ಒತ್ತಡವೂ ಹೆಚ್ಚಾಗಲಿದೆ.

ಇವೆಲ್ಲದರ ನೇರ ಪರಿಣಾಮ ನಮ್ಮ ಜನಪ್ರತಿನಿಧಿಗಳ ಮೇಲಾಗುತ್ತದೆ. ಎಲ್ಲೆಂದರಲ್ಲಿ ಶಾಸಕರ, ಸಂಸದರ, ಚುನಾಯಿತ ಪ್ರತಿನಿಧಿಗಳ ಕುತ್ತಿನಪಟ್ಟಿ ಹಿಡಿದು ಗಟ್ಟಿಸಿ ಕೇಳುವ ಜನರ ಸಂಖ್ಯೆ ಏರಲಿದೆ. ಇವೆಲ್ಲದರ ಪರಿವೆಯೇ ಇಲ್ಲದ ಅವಿವೇಕಿಗಳು ಮತ್ತು ಅಹಂಕಾರಿಗಳು ಈ ಸಲದ ಚುನಾವಣೆಯಲ್ಲಿ ಕಳೆದ ಸಲಕ್ಕಿಂತ ಹೆಚ್ಚಿನ ದುಡ್ದನ್ನು ಚೆಲ್ಲಿ, ಅಕ್ರಮಗಳನ್ನು ಮಾಡಿ, ಜಾತಿ-ಸಮುದಾಯಗಳನ್ನು ಸಂಘಟಿಸಿ/ವಿಘಟಿಸಿ, ಗೆದ್ದು ಬಂದು ಸುಡುತ್ತಿರುವ ಬಾಣಲೆಗೆ ಬೀಳಲಿದ್ದಾರೆ. ಹತ್ತಾರು ಕೋಟಿ ಖರ್ಚು ಮಾಡಿಯೂ ಸೋತವರು ರಾಜಕೀಯದಿಂದ ಹೊರಬೀಳಲಿದ್ದಾರೆ. ಆ ನಿಟ್ಟಿನಲ್ಲಿ ನೋಡಿದರೆ 2013 ಕರ್ನಾಟಕದ ಇತಿಹಾಸದಲ್ಲಿ ಗಮನಾರ್ಹ ಸ್ಥಾನ ಪಡೆಯಲಿರುವ ವರ್ಷವಾಗಲಿದೆ. ನಮ್ಮ ಸಾರ್ವಜನಿಕ ಜೀವನದ ಮೌಲ್ಯಗಳ ಅಧಃಪತನದ ಪಾತಾಳವನ್ನು ಈ ವರ್ಷ ಕಾಣಲಿದ್ದೇವೆ. ಅದಾದ ನಂತರ ಮುಂದಿನ ವರ್ಷಗಳಲ್ಲಿ ಜನರೇ ಅದನ್ನು ಮೇಲೆತ್ತಲಿದ್ದಾರೆ.

ಈ ಹಿನ್ನೆಲೆಯಲ್ಲಿ ವರ್ತಮಾನ.ಕಾಮ್‌ನ ಪ್ರಸ್ತುತತೆ ಮತ್ತು ಜವಾಬ್ದಾರಿಯೂ ಹೆಚ್ಚಾಗಲಿದೆ. ಜವಾಬ್ದಾರಿ ಮತ್ತು ಹೊರೆಯನ್ನು ಹಂಚಿಕೊಳ್ಳಲು ಇನ್ನೂ ಹಲವರು ಕೈಜೋಡಿಸಬೇಕಿದೆ. ಆ ಕೈ ನಿಮ್ಮದೇ ಆಗಿರುತ್ತದೆ ಎನ್ನುವ ವಿಶ್ವಾಸದಲ್ಲಿ….

2013 ರಲ್ಲಿ ನಮ್ಮ ಜವಾಬ್ದಾರಿಗಳನ್ನು ನಾವೇ ಹೊರುತ್ತೇವೆ ಎನ್ನುವ ಸಂಕಲ್ಪದೊಂದಿಗೆ…

ನ್ಯಾಯ ಗೆಲ್ಲಲಿ… ನಿರಪರಾಧಿಗಳ ತ್ಯಾಗ ನೆನಪಿರಲಿ… ಒಳ್ಳೆಯ ದಿನಗಳು ಬರಲಿ… ಎಲ್ಲರಿಗೂ ಒಳ್ಳೆಯದಾಗಲಿ…

ನಮಸ್ಕಾರ,
ರವಿ ಕೃಷ್ಣಾರೆಡ್ಡಿ