ನವೀನ್ ಮೇಲಿನ ಆರೋಪಗಳನ್ನು ಕೈಬಿಡಲು ಮತ್ತು ಅವರ ಬಿಡುಗಡೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಮಿತ್ರರೇ,

ಅನೇಕ ನಿರಪರಾಧಿಗಳು ಜೈಲಿಗೆ ಹೋಗುತ್ತಾರೆ. ಬಹುಪಾಲು ಜನರದು ಸುದ್ದಿಯೇ ಆಗುವುದಿಲ್ಲ. ಅನೇಕ ಮುಗ್ಧರ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆಗಳಾಗುತ್ತವೆ. ಎಲ್ಲವೂ ವರದಿಯಾಗುವುದಿಲ್ಲ ಮತ್ತು ಅವೆಲ್ಲದಕ್ಕೂ ಜನ ಒಂದೇ ರೀತಿ ಸ್ಪಂದಿಸುವುದಿಲ್ಲ. ದೇಶ ಈಗ ತಾನೆ ಅನ್ಯಾಯಕ್ಕೊಳಗಾದವಳ ಪರವಾಗಿ ಸಕಾರಣವಾಗಿ ಸ್ಪಂದಿಸಿ ಈ ದೇಶದಲ್ಲಿ ಎಲ್ಲವೂ ನಷ್ಟವಾಗಿಲ್ಲ ಎಂದು ನಿರೂಪಿಸಿದೆ.

ನವೀನ್ ಸೂರಿಂಜೆಯ ಹಾಗೆ ಅನೇಕ ನಿರಪರಾಧಿಗಳು ಜೈಲಿನಲ್ಲಿರಬಹುದು. ಆದರೆ ನಮಗೆ ಅವರ ಬಗ್ಗೆ ತಿಳಿದಿಲ್ಲ. ಆದರೆ ನವೀನ್‌ಗೆ ಆಗಿರುವ-ಆಗುತ್ತಿರುವ ಅನ್ಯಾಯ ನಮಗೆಲ್ಲ ತಿಳಿದಿದೆ. ಹಾಗಾಗಿ ನವೀನ್‌ ಪರವಾಗಿ ಹೋರಾಡುವುದು ನಮ್ಮ ಆತ್ಮಸಾಕ್ಷಿಯ ಪ್ರಶ್ನೆ. ಅವರ ಪರವಾಗಿ ಎತ್ತುವ ಧ್ವನಿ ಕೇವಲ ಅವರೊಬ್ಬರ ಪರ ಅಲ್ಲ; ಬದಲಿಗೆ ಅವರಂತಹ ಎಲ್ಲಾ ನಿರಪರಾಧಿಗಳ ಪರವಾಗಿಯೂ ಆಗಿರುತ್ತದೆ.

ಕಳೆದ ಎರಡು ತಿಂಗಳಿನಿಂದ ರಾಜ್ಯದ ನೂರಾರು ಲೇಖಕರು, ಪತ್ರಕರ್ತರು, ಹೋರಾಟಗಾರರು, ಸಮಾಜಮುಖಿಗಳು, naveen-soorinjeಪ್ರಜಾಪ್ರಭುತ್ವವಾದಿಗಳು, ನವೀನ್‌ ಸೂರಿಂಜೆಗೆ ಆಗುತ್ತಿರುವ ಅನ್ಯಾಯವನ್ನು ತಾವು ಯಾವ ರೀತಿ ಪ್ರತಿಭಟಿಸುವುದು ಎಂದು ಗೊತ್ತಾಗದೇ ತೊಳಲಿದ್ದಾರೆ. ಅದರಲ್ಲಿ ನಾನು, ನೀವು, ಎಲ್ಲರೂ ಇದ್ದೇವೆ. ಆದರೆ ನಮ್ಮೆಲ್ಲರಿಗೂ ನ್ಯಾಯಾಲಯದಲ್ಲಿಯೇ ಇದು ಇತ್ಯರ್ಥವಾಗಿ ಬೇಗ ನ್ಯಾಯ ಸಿಗಬಹುದು ಎಂಬ ವಿಶ್ವಾಸವಿತ್ತು. ರಾಜ್ಯದ ಉಚ್ಚ ನ್ಯಾಯಾಲಯದಲ್ಲಿಯೂ ನವೀನ್ ಎಂಬ ಪತ್ರಕರ್ತನಿಗೆ–ಘಟನೆಯನ್ನು ಕೇವಲ ವರದಿ ಮಾಡುವ ಕರ್ತವ್ಯ ನಿಭಾಯಿಸಿದಾತನಿಗೆ–ಜಾಮೀನು ಸಿಗದೇ ಹೋಯಿತು. ನಮಗೆಲ್ಲರಿಗೂ ಈಗ ಅನ್ನಿಸಿರುವ ಹಾಗೆ, ಈಗ ಇದು ನ್ಯಾಯಾಲಯದಲ್ಲಿ ತೀರ್ಮಾನವಾಗುವ ವಿಷಯವಾಗಿ ಉಳಿದಿಲ್ಲ. ಸರ್ಕಾರ ಈ ಕೂಡಲೇ ತನ್ನ ಪೋಲಿಸರು ಹೊರಿಸಿರುವ ಸುಳ್ಳು ಆರೋಪಗಳನ್ನು ಕೈಬಿಡುವಂತೆ ಮಾಡಿದರೆ ಮಾತ್ರ ಇಲ್ಲಿ ನವೀನ್ ಜೈಲಿನಿಂದ ಹೊರಗೆ ಬರುತ್ತಾರೆ. ಆಗುತ್ತಿರುವ ಅನ್ಯಾಯ ನಿಲ್ಲುತ್ತದೆ.

ಹಾಗಾಗಿ ಈಗ ನಾವೆಲ್ಲರೂ ಹೋರಾಟ ಮಾಡಲೇಬೇಕಿದೆ. ಈ ವಿಷಯದ ಮೇಲೆ ಸರ್ಕಾರದ ಮೇಲೆ ಒತ್ತಡ ತರುವ, ನಾಡಿನ ಜನತೆಗೆ ವಿಷಯ ಮುಟ್ಟಿಸುವ, ಆಗಿರುವ ಅನ್ಯಾಯವನ್ನು ತಿಳಿಸಿ ಜನಾಭಿಪ್ರಾಯ ರೂಪಿಸುವ ಸಮಯ ಬಂದಿದೆ. ಇಷ್ಟು ದಿನ ನವೀನ್ ಬಂಧನವನ್ನು ವಿರೋಧಿಸಿ ತಾವೇನು ಮಾಡಬಹುದು ಎಂದುಕೊಂಡವರಿಗೆಲ್ಲ, ಈ ಹೋರಾಟದಲ್ಲಿ ಪಾಲ್ಗೊಳ್ಳಲು ಸಂದರ್ಭ ಬಂದಿದೆ.

ಈಗಾಗಲೆ ನಾನು ಒಂದಷ್ಟು ಹಿರಿಯ ಪತ್ರಕರ್ತರ ಜೊತೆ, ಸಂಘಟನೆಗಳ ಜೊತೆ, ಸಮಾನ ಮನಸ್ಕರ ಜೊತೆ ಮಾತನಾಡಿದ್ದೇನೆ. ನಾವೊಂದಷ್ಟು ಜನ ಈ ಶನಿವಾರದಿಂದ (5-1-2013) ಬೆಂಗಳೂರಿನಲ್ಲಿ ಮೂರು ದಿನಗಳ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ. ನಮ್ಮ ಜೊತೆ ನೂರಾರು ಜನರು ಭಾಗಿಯಾಗುವ ವಿಶ್ವಾಸ ಇದೆ. ನಾಡಿನ ಹಿರಿಯ ಲೇಖಕರು, ಪತ್ರಕರ್ತರು, ಸಂಘಟನೆಗಳು, ಮೌಲ್ಯಾಧಾರಿತ ರಾಜಕಾರಣಿಗಳು, ಹೋರಾಟಗಾರರು, ಅಲ್ಲಿಗೆ ಬಂದು ಈ ಹೋರಾಟಕ್ಕೆ ಬೆಂಬಲಿಸಲಿದ್ದಾರೆ.

ನಾಳೆ ಮತ್ತು ನಾಡಿದ್ದು ಇದೇ ವಿಚಾರವಾಗಿ ಒಂದೆರಡು ಸಭೆಗಳಾಗಲಿವೆ. ಸಮಾನಮನಸ್ಕರ ಒಂದು ವೇದಿಕೆ ರಚನೆಯಾಗಿ ಅದರ ಆಶ್ರಯದಲ್ಲಿ ಈ ಹೋರಾಟ, ಜಾಗೃತಿ, ಉಪವಾಸ ಸತ್ಯಾಗ್ರಹ ನಡೆಯಲಿದೆ. ಹೆಚ್ಚಿನ ವಿವರಗಳು ಒಂದೆರಡು ದಿನಗಳಲ್ಲಿ ನೀಡಲಾಗುತ್ತದೆ.

ಈ ಸತ್ಯಾಗ್ರಹದಲ್ಲಿ ಕೇವಲ ಬೆಂಗಳೂರಿನಲ್ಲಿರುವವರು ಮಾತ್ರವಲ್ಲ, ರಾಜ್ಯದ ಎಲ್ಲಾ ಕಡೆಗಳಿಂದಲೂ ಅನ್ಯಾಯವನ್ನು ವಿರೋಧಿಸುವ ಮನಸ್ಥಿತಿಯುಳ್ಳ ಎಲ್ಲರೂ ಬಂದು ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

6 thoughts on “ನವೀನ್ ಮೇಲಿನ ಆರೋಪಗಳನ್ನು ಕೈಬಿಡಲು ಮತ್ತು ಅವರ ಬಿಡುಗಡೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

 1. ಭಾರತೀಯ

  ಬಹುಷಃ ಇವರ ಪರವಾಗಿ ಹೋರಾಡುತ್ತಿರುವವರು ನೀವೊಬ್ಬರೇ ಅನ್ನಿಸುತ್ತದೆ. ಬೇರೆ ಯಾರಿಗೂ ಇದರ ಬಗ್ಗೆ ಉತ್ಸಾಹ ಕಂಡುಬರುತ್ತಿಲ್ಲ. ಮತ್ತೆ ನೀವು ಮಾಡುತ್ತಿರುವ ಪ್ರಯತ್ನ ನೋಡಿದಾಗ ನಮ್ಮ ಘನ ಸರಕಾರ ನಿಜವಾಗಿಯೂ “ಘನವಸ್ತು” ಎಂದು ಸಾಬೀತಾಗುತ್ತದೆ. ದೆಹಲಿಯಲ್ಲಿ ಅತ್ಯಾಚಾರವಾದಾಗ ಸುಮ್ಮನಿದ್ದ ಸಂಘಟನೆಗಳು (ರಾಮಸೇನೆ, ಶಿವಸೇನೆ, ವಾನರಸೇನೆ etc etc) ಇವರನ್ನು ಸೆರೆಮನೆಗೆ ಕಳಿಸುವಲ್ಲಿ ತೋರಿದ ಉತ್ಸಾಹ ಮೆಚ್ಚುವಂಥದ್ದು. ಜೈ ಕರ್ನಾಟಕ ಮಾತೆ !!! ಜೈ ಭಾರತ ಮಾತೆ !!! ಮೇರಾ ಭಾರತ ಮಹಾನ್ !!!

  Reply
 2. jagadishkoppa

  ಪ್ರಿಯ ರವಿ ಕೃಷ್ಣಾ ರೆಡ್ಡಿ ಸೋಮವಾರ ನಿಮ್ಮ ಜೊತೆ ಬೆಂಗಳೂರಿನಲ್ಲಿ ನಾನಿರುತ್ತೇನೆ.
  ಜಗದೀಶ್ ಕೊಪ್ಪ, ಧಾರವಾಡ

  Reply
 3. Dr.kiran.m gajanur

  ಒಳ್ಳೆಯ ಅಲೋಚನೆ ಸಾಧ್ಯವಾದರೆ ಖಂಡಿತ ಬರುತ್ತೇನೆ ಆಗದಿದ್ದರೆ ನನ್ನ ಹಾರೈಕೆ ನಿಮ್ಮೊಂದಿಗೆ ಇರುತ್ತದೆ. . . .

  Reply
 4. Oduga

  ಬೆಂಗಳೂರಿನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಒಳ್ಳೆಯದೇ, ಆದರೆ ರಾಜ್ಯ ಸರಕಾರ ಅದನ್ನು ಹಾಗೂ ಅದರ ಬೇಡಿಕೆಗಳನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತೆಯೆಂಬುವುದನ್ನು ನಾವು ಊಹಿಸಬಹುದು. ಪ್ರಕರಣ ಸರ್ವೊಚ್ಚ ನ್ಯಾಯಲಯದಲ್ಲಿರುವುದರಿಂದ, ದೆಹಲಿಯಲ್ಲಿ ಇಂತಹ ಸತ್ಯಾಗ್ರಹವನ್ನು ಹಮ್ಮಿಕೊಂಡರೆ ಹೆಚ್ಚು ಪರಿಣಾಮ ಬೀರಬಹುದೆಂದು ನನ್ನ ಅಭಿಪ್ರಾಯ. ಪ್ರೆಸ್ ಕೌನ್ಸಿಲ್ ನ ಜಸ್ಟಿಸ್ ಮಾರ್ಕಂಡೆಯ ಕಾಟ್ಜು ಅವರನ್ನೂ ಸಂಪರ್ಕಿಸಿ ಅವರ ಮೂಲಕ ಪ್ರಕರಣದ ಗಂಭೀರತೆಯನ್ನು ನ್ಯಾಯಲಯದ ಗಮನಕ್ಕೆ ತರಬಹುದು.

  Reply
 5. sandeep

  ರವಿಯವರೇ , ದಯವಿಟ್ಟು ಸ್ಥಳ ಮತ್ತು ವೇಳೆ ತಿಳಿಸಿ

  Reply

Leave a Reply

Your email address will not be published.