Daily Archives: January 8, 2013

ಅತ್ಯಾಚಾರಗಳ ರಾಜಧಾನಿಗಳು..!

– ಡಾ. ಎಸ್.ಬಿ.ಜೋಗುರ

ಸಾಮೂಹಿಕ ಅತ್ಯಾಚಾರ ಎನ್ನುವದು ಒಂದು ಸಾರ್ವತ್ರಿಕವಾದ ವಿಕೃತ ಪಿಡುಗಾಗಿ ಪರಿಣಮಿಸುತ್ತಿದೆ. ಜಾತಿ, ಜನಾಂಗ, ವರ್ಗ, ಪ್ರದೇಶ, ವಯಸ್ಸು, ಎಲ್ಲ ಬಗೆಯ ವ್ಯಾಪ್ತಿಯನ್ನು ಮೀರಿ ಈ ಬಗೆಯ ವಿಕೃತ ಕ್ರಿಯೆ ನಡೆಯುವದಿದೆ. ಶಾಲೆ, ಕಾರ್ಯಸ್ಥಳ, ಗದ್ದೆಯ ಬಯಲು, ಪಾಳು ಬಿದ್ದ ಕಟ್ಟಡ, ರೈಲು ಭೋಗಿಯ ಟಾಯ್ಲೆಟ್ ಕೋಣೆ, ಕಾರು, ಬಸ್ಸು, ನಿರಾಶ್ರಿತರ ತಾಣ, ಕ್ಲಬ್ ಹಾಗೂ ಬಾರ್‌ಗಳು, ದಲಿತರ ಕೇರಿ, ಹೀಗೆ ಎಲ್ಲೆಂದರಲ್ಲಿ ಅತ್ಯಂತ ತುಚ್ಛವಾಗಿ ನಡೆಯುವ ಈ ಸಾಮಾಹಿಕ ಅತ್ಯಾಚಾರ ಮನುಷ್ಯನಲ್ಲಿಯ ಮೃಗೀಯತನಕ್ಕೆ ಸಾಕ್ಷಿಯಂತಿದೆ.

ಮೊನ್ನೆಯಷ್ಟೇ ದೆಹಲಿಯಲ್ಲಿ ಚಲಿಸುವ ಬಸ್ ಒಂದರಲ್ಲಿ ಅತ್ಯಂತ ತುಚ್ಚವಾಗಿ ಓರ್ವ ವಿದ್ಯಾರ್ಥಿನಿಯ ಮೇಲೆ ಹರಿದು ಮುಕ್ಕುವಂತೆ ನಾಲ್ವರು ದುರುಳುರು ಸಾಮೂಹಿಕ ಅತ್ಯಾಚಾರ ಎಸಗಿ, ಅವಳನ್ನು ಚಲಿಸುವ ಬಸ್‌ನಿಂದ ಹೊರಗೆಸೆದು ತಮ್ಮ ನೀಚತನದ ಪರಮಾವಧಿಯನ್ನು ಮೆರೆದಿದ್ದಾರೆ. rape-illustrationರಾಜಧಾನಿಯಲ್ಲಿ ನಡೆದ ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ‍ಮಹಿಳೆಯರ ಪಾಲಿಗೆ ದೆಹಲಿ ಈಗ ಸೇಫ್ ಆಗಿ ಉಳಿದಿಲ್ಲ ಎನ್ನುವದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ದೆಹಲಿ ಒಂದರಲ್ಲಿಯೇ 2012 ರ ಸಂದರ್ಭದಲ್ಲಿ 635 ಅತ್ಯಾಚಾರದ ಪ್ರಕರಣಗಳು ದಾಖಲಾಗಿವೆ. ಡಿಶೆಂಬರ್ ತಿಂಗಳಲ್ಲಿ ಕೇವಲ 14 ದಿನಗಳಲ್ಲಿ 5 ಅತ್ಯಾಚಾರದ ಪ್ರಕರಣಗಳು ದಾಖಲಾಗಿರುವದನ್ನು ಗಮನಿಸಿದರೆ ದೆಹಲಿ ಇಡೀ ದೇಶದಲ್ಲಿ ಈ ಅತ್ಯಾಚಾರದ ಪ್ರಕರಣದಲ್ಲಿ ಮುಂಚೂಣಿಯಲ್ಲಿದೆ. 2011 ರ ಸಂದರ್ಭದಲ್ಲಿ ಮುಂಬೈಯಲ್ಲಿ 221 ಅತ್ಯಾಚಾರದ ಪ್ರಕರಣಗಳು ದಾಖಲಾಗಿದ್ದರೆ, ದೆಹಲಿಯಲ್ಲಿ 572 ಪ್ರಕರಣಗಳು ವರದಿಯಾಗಿವೆ. ರಾಜ್ಯ ರಾಜಧಾನಿ ಬೆಂಗಳೂರು ಕೂಡಾ ಅತ್ಯಾಚಾರದ ಪ್ರಕರಣದಲ್ಲಿ ಹಿಂದೆ ಬಿದ್ದಿಲ್ಲ. 2011 ರಲ್ಲಿ 94 ಹಾಗೂ 2012 ರಲ್ಲಿ 30 ಅತ್ಯಾಚಾರದ ವರದಿಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಬರೀ ಡಿಶೆಂಬರ್ ತಿಂಗಳು ಒಂದರಲ್ಲಿಯೇ 15 ದಿನಗಳಲ್ಲಿ 14 ಅತ್ಯಾಚಾರದ ಪ್ರಕರಣಗಳು ಬಯಲಾಗಿವೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ವಿಶ್ವದ ಬಹುತೇಕ ಭಾಗಗಳಲ್ಲಿ ಮಹಿಳೆಯ ಮೇಲಾಗುವ ದೈಹಿಕ ಮತ್ತು ಲೈಂಗಿಕ ಹಿಂಸೆಯ ಪ್ರಮಾಣ ಸರಾಸರಿ 30 ರಿಂದ 60 ಪ್ರತಿಶತದಷ್ಟಿದೆ. ಅತ್ಯಾಚಾರದ ಪ್ರಕರಣಗಳ ಮೇಲೆ ಕಣ್ಣು ಹಾಯಿಸುವದಾದರೆ 2002 ರಲ್ಲಿ 16373 ಅತ್ಯಾಚಾರದ ಪ್ರಕರಣಗಳು ರಾಷ್ಟ್ರೀಯ ಅಪರಾಧಿ ಮಾಹಿತಿ ಇಲಾಖೆಯಲ್ಲಿ ದಾಖಲಾಗಿದ್ದರೆ 2009 ರ ಸಂದರ್ಭದಲ್ಲಿ ಆ ಪ್ರಮಾಣ 21397 ರಷ್ಟಾಗಿದ್ದರ ಬಗ್ಗೆ ದಾಖಲೆಗಳಿವೆ. ವರ್ಷದಿಂದ ವರ್ಷಕ್ಕೆ ಅತ್ಯಾಚಾರದ ಪ್ರಕರಣಗಳಲ್ಲಿ ಏರಿಕೆಯಾಗುತ್ತಲೇ ನಡೆದಿದೆ. ಕೇವಲ ನಮ್ಮ ದೇಶ ಮಾತ್ರವಲ್ಲ ವಿಶ್ವದ ಇತರೇ ರಾಷ್ಟ್ರಗಳ ಸ್ಥಿತಿ ಇದಕ್ಕೆ ತೀರಾ ಹೊರತಾಗಿಲ್ಲ. ಇಂಗ್ಲಂಡನ ‘ದ ಇಂಡಿಪೆಂಡೆಂಟ್’ ಎನ್ನುವ ಪತ್ರಿಕೆ [21 ಜೂನ್ 2009] ಹೊರಹಾಕಿರುವ ಮಾಹಿತಿಯಂತೆ ಕೇವಲ 2008 ರ ಸಂದರ್ಭದಲ್ಲಿ ಅಲ್ಲಿ ಸುಮಾರು 85 ರಷ್ಟು ಸಾಮೂಹಿಕ ಅತ್ಯಾಚಾರದ ಪ್ರಕರಣಗಳು ಲಂಡನ್ ಮಹಾನಗರ ಪೋಲಿಸ್ ಠಾಣೆಯಲ್ಲಿ ದಾಖಲೆಯಾದ ಬಗ್ಗೆ ವರದಿ ಮಾಡಿದೆ. ಆ ಪತ್ರಿಕೆ ಹೇಳುವಂತೆ ಅಲ್ಲಿ ನಡೆಯುವ ಈ ಬಗೆಯ ಸಾಮೂಹಿಕ ಅತ್ಯಾಚಾರಗಳು ಬಹುತೇಕವಾಗಿ ಜನಾಂಗೀಯ ಹಿನ್ನೆಯಲ್ಲಿ ಘಟಿಸಿದವುಗಳೇ ಹೆಚ್ಚು ಎಂದಿರುವದಿದೆ. 92 ಜನ ಅಪರಾಧಿಗಳನ್ನು ಈ ಸಾಮೂಹಿಕ ಅತ್ಯಾಚಾರದ ಪ್ರಕರಣಗಳಲ್ಲಿ ಬಂಧಿಸಿದಾಗ ಅವರಲ್ಲಿ ಸುಮಾರು 66 ಜನ ಕಪ್ಪು ಜನಾಂಗ ಇಲ್ಲವೇ ಮಿಶ್ರಿತ ಜನಾಂಗದವರೇ ಇದ್ದಿರುವ ಬಗ್ಗೆ ವರದಿಯಾಗಿದೆ. ಹಾಗೆಯೇ ಬಹಳಷ್ಟು ಸಾಮೂಹಿಕ ಅತ್ಯಾಚಾರದ ಪ್ರಕರಣಗಳಲ್ಲಿ ತೊಡಗಿದವರು ಹದಿಹರೆಯದ ಯುವಕರು. ಹದಿನಾರು ತುಂಬದವರೂ ಇರುವ ಬಗ್ಗೆ ಅನೇಕ ವಿದೇಶಗಳಲ್ಲಿಯ ಸಾಮೂಹಿಕ ಅತ್ಯಾಚಾರಗಳಲ್ಲಿ ಬಯಲಾಗಿರುವದಿದೆ.

ಮೆಟ್ಸ್ ಎನ್ನುವ ಚಿಂತಕರು ಹೇಳುವ ಹಾಗೆ ಮೂವರು ಇಲ್ಲವೇ ಮೂವರಿಗಿಂತಲೂ ಹೆಚ್ಚು ಜನ ಕೂಡಿ ಎಸಗುವ ಅತ್ಯಾಚಾರವನ್ನು ಸಾಮೂಹಿಕ ಅತ್ಯಾಚಾರ ಎಂದು ಕರೆಯಲಾಗುತ್ತದೆ, ಎಂದಿರುವರು. ಇದೊಂದು ವಿಕೃತ ಮನ:ಸ್ಥಿತಿಯವರು ಎಸಗುವ ಹೇಯ ಕೃತ್ಯ. ಹಿಂದೊಮ್ಮೆ ನಮ್ಮದೇ ದೇಶದಲ್ಲಿ ಈ ಬಗೆಯ ಸಾಮೂಹಿಕ ಅತ್ಯಾಚಾರ ಪೋಲಿಸ್ ಠಾಣೆಯೊಂದರಲ್ಲಿ ಘಟಿಸಿ ಆ ಎಲ್ಲ ಪೋಲಿಸರು ಏಡ್ಸ್ ರೊಗಕ್ಕೆ ಸಿಲುಕಿದ ದುರಂತವನ್ನು ಓದಿದ ನೆನಪು. rape-and-murder-of-thangjam-manorama-protestsಬಲತ್ಕಾರಕ್ಕೆ ಒಳಗಾದ ಆ ಮಹಿಳೆ ತಾನು ಎಚ್.ಆಯ್. ವಿ. ಪೊಜಿಟಿವ್ ಎನ್ನುವದನ್ನು ತಿಳಿದಿದ್ದರೂ ಬಾಯಿ ಬಿಟ್ಟಿರಲಿಲ್ಲ. ಹೆಣ್ಣನ್ನು ಅತ್ಯಂತ ಗೌರವಭಾವದಿಂದ ಕಾಣುವ ನಮ್ಮ ನೆಲದಲ್ಲೂ ಈಗೀಗ ಈ ಸಾಮೂಹಿಕ ಅತ್ಯಾಚಾರ ಎನ್ನುವದು ಒಂದು ವ್ಯಾಪಕ ಪಿಡುಗಾಗಿ ಹಬ್ಬತೊಡಗಿದೆ. ಮೊದಮೊದಲು ಕೇವಲ ದೆಹಲಿಯಲ್ಲಿ ಮಾತ್ರ ಆಗಾಗ ಅಪರೂಪಕ್ಕೊಮ್ಮೆ ಕೇಳಿಬರುವ ಈ ಬಗೆಯ ಸಾಮೂಹಿಕ ಅತ್ಯಾಚಾರದ ಪ್ರಕರಣ ಈಗೀಗ ಎಲ್ಲೆಂದರಲ್ಲಿ ಘಟಿಸುವ ಕುಕೃತ್ಯವಾಗಿದೆ. ಕೇವಲ ಕಳೆದ 25 ದಿನಗಳಲ್ಲಿ 10 ರಷ್ಟು ಅತ್ಯಾಚಾರದ ಪ್ರಕರಣಗಳು ಹರಿಯಾಣಾ ರಾಜ್ಯ ಒಂದರಲ್ಲಿಯೇ ದಾಖಲಾಗಿವೆ. ಅವುಗಳಲ್ಲಿ ಅರ್ಧದಷ್ಟು ಈ ಸಾಮಾಹಿಕ ಅತ್ಯಾಚಾರದ ಪ್ರಕರಣಗಳಿವೆ. ಹಿಸಾರ, ಜಿಂದ್, ಭಿವಾನಿ, ಸೋನಿಪತ್, ಯಮುನಾನಗರ ಜಿಲ್ಲೆಗಳಲ್ಲಿ ಈ ಪ್ರಕರಣಗಳು ಘಟಿಸಿವೆ. ಹರಿಯಾಣಾ ರಾಜ್ಯದಲ್ಲಿ 2011 ರಲ್ಲಿ ಸುಮಾರು 773 ಪ್ರಕರಣಗಳು ಅತ್ಯಾಚಾರಕ್ಕೆ ಸಂಬಂಧಿಸಿ ದಾಖಲಾಗಿವೆ. 2012 ರ ಆರಂಭದ ಆರು ತಿಂಗಳಲ್ಲಿ ಒಟ್ಟು 367 ಅತ್ಯಾಚಾರದ ಪ್ರಕರಣಗಳು ವರದಿಯಾಗಿವೆ [ಹಿಲ್ ಪೋಸ್ಟ್ ಅಕ್ಟೊಬರ್-2012], 2011 ರಿಂದ ಇಲ್ಲಿಯವರೆಗೆ ಹೆಚ್ಚೂ ಕಡಿಮೆ 1140 ಅತ್ಯಾಚಾರದ ಪ್ರಕರಣಗಳು ಬಿಹಾರದಲ್ಲಿ ಜರುಗಿರುವದಿದೆ.

ನನಗೆ ತಿಳಿದಂತೆ ತೀರಾ ಇತ್ತೀಚಿನವರೆಗೂ ಕರ್ನಾಟಕದಲ್ಲಿ ಸಾಮೂಹಿಕ ಅತ್ಯಾಚಾರದ ಪ್ರಕರಣಗಳು ತೀರಾ ಅಪರೂಪ ಎನ್ನುವಂತೆ ನಡೆಯುವದಿತ್ತು. ಆದರೆ ಕೇವಲ ಒಂದು ವಾರದೊಳಗೆ ಎಂಟು ಅತ್ಯಾಚಾರಗಳು ಜರುಗಿ, ಹರಿಯಾಣದ ದಾಖಲೆಯನ್ನು ಮುರಿಯಲು ನಿಂತಂತಿದೆ. ಇವುಗಳಲ್ಲಿ ಕೆಲವು ಸಾಮೂಹಿಕ ಅತ್ಯಾಚಾರಗಳೂ ಸೇರಿವೆ. ಸಾಮೂಹಿಕ ಅತ್ಯಾಚಾರ ಎನ್ನುವದರಲ್ಲಿ ಮಾನಸಿಕ ವಿಕೃತಿ ಅಡಕವಾಗಿರುವ ಬಗ್ಗೆ ಕೆಲ ಅಧ್ಯಯನಗಳು ತೋರಿಸಿಕೊಟ್ಟಿರುವದಿದೆ. ಈ ಬಗೆಯ ಗ್ಯಾಂಗ್-ರೇಪ್ ನಡೆದಾಗ ಅಲ್ಲಿ ಘಟಿಸಬಹುದಾದ ಸಂಗತಿಗಳನ್ನು ಗಮನಿಸಿದಾಗ ಅದು ನಿಜವೆನಿಸದೇ ಇರದು. ಒಂದು ಬಗೆಯ ಸಿಟ್ಟು, ಆಕ್ರೋಶ, ಬಲಪ್ರಯೋಗ, ದೌರ್ಜನ್ಯ, ದೈಹಿಕ ಹಿಂಸೆಗಳು ಅಲ್ಲಿ ಅನಾವರಣಗೊಂಡಿರುವದಿದೆ.

ಈ ಬಲತ್ಕಾರದ ವಿಷಯವಾಗಿ ಅನೇಕ ಅಧ್ಯಯನಗಳು ಜರುಗಿವೆ ಅವರಲ್ಲಿ ಪ್ರಮುಖವಾಗಿ ಡಬ್ಲ್ಯು.ಬಿ. ಸ್ಯಾಂಡರ್ಸ್, ಡಯಾನಾ ರಸಲ್, ಪೋರ್ಟರ್ ಹಾಗೂ ಇನ್ನಿತರರು ಹೇಳುವಂತೆ ಅತ್ಯಾಚಾರದಲ್ಲಿ ಅದು ಸಾಮೂಹಿಕ ಅತ್ಯಾಚಾರವೇ ಆಗಿರಲಿ ಇಲ್ಲವೇ ವ್ಯಕ್ತಿಗತವಾಗಿರಲಿ ಅದರಲ್ಲಿ ಸಿಲುಕಿರುವವವರು ಒಬ್ಬರಿಗೊಬ್ಬರು ಈ ಮುಂಚೆ ಪರಿಚಯವಾಗಿರುವವರೇ ಹೆಚ್ಚು. ಅಂದರೆ ಅತ್ಯಾಚಾರಗಳು ಹುಡುಗಿಗೆ ಪರಿಚಿತರಾಗಿರುವವರಿಂದಲೇ ನಡೆಯುವ ಸಾಧ್ಯತೆ ಹೆಚ್ಚು ಎನ್ನುವದನ್ನು ಇವರು ಒಪ್ಪಿಕೊಂಡಿರುವರು. ಜೊತೆಗೆ ಸಾಮೂಹಿಕ ಅತ್ಯಾಚಾರದ ಸಂದರ್ಭದಲ್ಲಿ ಆ ಗುಂಪಿನ ಒಬ್ಬ ಹುಡುಗ ಇಲ್ಲವೇ ಅತ್ಯಾಚಾರಕ್ಕೆ ಒಳಗಾದ ಹುಡುಗಿಯ ಗೆಳತಿಯೊಬ್ಬಳಿಂದಲೇ ಈ ಬಗೆಯ ಕೃತ್ಯ ಜರುಗುವ ಬಗ್ಗೆಯೂ ಅವರು ಮಾತನಾಡಿರುವದಿದೆ. ತೀರಾ ಸಣ್ಣ ಸಣ್ಣ ಕಾರಣಗಳಿಗಾಗಿ ಹುಡುಗಿಯೊಬ್ಬಳ ಮೇಲೆ ಸೇಡು ತೀರಿಸಿಕೊಳ್ಳುವ ಹಿನ್ನೆಲೆಯಲ್ಲಿ ಈ ಬಗೆಯ ಗ್ಯಾಂಗ್ ರೇಪ್ ಗಳು ಜರುಗುವದು ಹೆಚ್ಚು. hang-ropeದೆಹಲಿಯಲ್ಲಿ ಬಸ್‌ನಲ್ಲಿ ನಡೆದ ಅತ್ಯಾಚಾರದ ನಂತರ ಜನ ಬೀದಿಗಿಳಿದು ಆ ಕಾಮಣ್ಣಗಳಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಒತ್ತಾಯಿಸುತ್ತಿದ್ದಾರೆ. ಅತ್ಯಾಚಾರ ಎನ್ನುವದು ಉತ್ಪೀಡನೆಯಾದಾಗ ಈ ಬಗೆಯ ಪ್ರತಿಕ್ರಿಯೆ ಸಾರ್ವಜನಿಕರಿಂದ ಸಾಮಾನ್ಯ.

ಇತ್ತೀಚಿನ ದಿನಗಳಲ್ಲಿ ನಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವದೇ ಒಂದು ದೊಡ್ಡ ಚ್ಯಾಲೆಂಜಾಗಿದೆ. ಅವರು ಮನೆಯಲ್ಲಿ ಹೆತ್ತವರ ಮಾತನ್ನು ಕೇಳುವದಿಲ್ಲ, ಶಾಲೆ-ಕಾಲೇಜುಗಳಲ್ಲಿ ಶಿಕ್ಷಕರ ಮಾತಿಗೆ ಬೆಲೆಯಿಲ್ಲ, ಸಮಾಜವನ್ನು ಕ್ಯಾರೇ ಮಾಡುವದಿಲ್ಲ. ಮುಖದ ಮೇಲೆ ಮೀಸೆ ಚಿಗಿಯುತ್ತಿದ್ದಂತೆ ಪಟಿಂಗರ ಸಹವಾಸದಲ್ಲಿ ಸಿಲುಕಿ, ಸ್ವಾತಂತ್ರ್ಯವನ್ನು ಸ್ವೇಚ್ಚಾಚಾರದಲ್ಲಿ ಕಲಬೆರಕೆ ಮಾಡಿ ಮಸಾಲಾ ಸಿನಿಮೀಯ ರೀತಿಯಲ್ಲಿ ಬದುಕುವ ಇವರ ಜೀವನ ಶೈಲಿಯ ನಡುವೆ ಮುಂದುವರೆದ ಎಲ್ಲ ಪಾಶ್ಚಿಮಾತ್ಯ ರಾಷ್ಟ್ರಗಳ ಡೌಲುಗಳು.. ಇವರ ವೇಷ ಭೂಷಣ.. ಆಹಾರ ಪದ್ಧತಿ.. ಭಾಷೆ.. ಮಹಾನಗರಗಳ ಮಾಲ್ ಸಂಸ್ಕೃತಿ.. ಇವರು ಖರ್ಚು ಮಾಡುವ ರೀತಿ ಎಲ್ಲವೂ ಇವರಿಗೆ ಸಾಥ್ ನೀಡುತ್ತಿವೆ. ನಮ್ಮ ಇಂದಿನ ಪೀಳಿಗೆ ಪಕ್ಕಾ ಆನಿಮೇಟೆಡ್ ಕಾರ್ಟೂನ್‌ಗಳಂತೆ ಬದುಕುವ ಖಯಾಲಿ ಬೆಳೆಸಿಕೊಳ್ಳುತ್ತಿರುವಂತಿದೆ.

ಇಂದು ಇಡೀ ವಿಶ್ವದಾದ್ಯಂತ ಈ ಅತ್ಯಾಚಾರದ ಪಿಡುಗು ಒಂದು ಸಾಂಕ್ರಾಮಿಕ ರೋಗದಂತೆ ಹಬ್ಬುತ್ತಿದೆ. ನಮ್ಮಂತಾ ನಾಡಿನಲ್ಲೂ ಹೀಗೆ ವಾರದಲ್ಲಿ ನಾಕೈದು ಅತ್ಯಾಚಾರಗಳು ಜರುಗುವಂತಾಗಿದೆ ಎಂದಾಗ ಖಂಡಿತವಾಗಿ ಇಡೀ ಸಮಾಜ ವ್ಯಕ್ತಿಯ ಎದುರು ನಿಂತು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು..? ಎಂದು ಕೇಳುತ್ತಿರುವಂತಿದೆ ಎನಿಸುತ್ತದೆ. ಎಲ್ಲ ಬಗೆಯ ಅಹಿತಕರ ಘಟನೆಗಳು ನಡೆದಾಗಲೂ ನಮಗ್ಯಾಕೆ..? ಎನ್ನುವ ಪ್ರಶ್ನೆಯೇ ನಮಗೆ ಇಷ್ಟವಾದರೆ ನಮ್ಮ ಮುಂದಿನ ಪೀಳಿಗೆಯನ್ನು ನಾವು ಪಾಪಕೂಪಕ್ಕೆ ತಳ್ಳಲು ರೆಡಿಯಾಗಿದ್ದೇವೆ ಎಂದರ್ಥ.