Daily Archives: January 9, 2013

ಉಪವಾಸ ಸತ್ಯಾಗ್ರಹ – ಮೂರು ದಿನಗಳಲ್ಲಿ ಏನೇನಾಯಿತು…

ಸ್ನೇಹಿತರೇ,

ನವೀನ್ ಬಂಧನವಾದ ಆರಂಭದ ದಿನಗಳಲ್ಲಿಯೇ ಒಮ್ಮೆ ನಾನು ಬರೆದಿದ್ದೆ: “ದಾರಿ ಬಲು ದೂರ“. ಅದು ಸುಳ್ಳಾಗದೇ ಇರುವುದಕ್ಕೆ ಖಂಡಿತ ಬೇಸರವಾಗುತ್ತಿದೆ.

ಕಳೆದ ಬುಧವಾರ ಮತ್ತು ಗುರುವಾರ ಸಮಾನಮನಸ್ಕರ ಜೊತೆ ಮತ್ತು ಪತ್ರಕರ್ತರ ಹಲವು ಸಂಘಟನೆಗಳ ಜೊತೆ ಮಾತನಾಡಿ ಶನಿವಾರದಿಂದ ಮೂರು ದಿನಗಳ ಉಪವಾಸ ಸತ್ಯಾಗ್ರಹ ಮಾಡುವುದೆಂದು ತೀರ್ಮಾನಿಸಿದೆವು. ಆ ಬಗ್ಗೆ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಒಂದು ಪತ್ರಿಕಾಗೋಷ್ಟಿ ಸಹ ನಡೆಯಿತು. “ಪತ್ರಕರ್ತರ ಅಕ್ರಮ ಬಂಧನ ವಿರೋಧಿ ವೇದಿಕೆ” ಅಡಿಯಲ್ಲಿ ನಡೆದ ಈ ಗೋಷ್ಟಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಂಗಾಧರ ಮೊದಲಿಯಾರ್, ಪ್ರೆಸ್‌ಕ್ಲಬ್‌ನ ಉಪಾಧ್ಯಕ್ಷ ವೈ.ಜಿ.ಅಶೋಕ್‌ ಕುಮಾರ್, ಪತ್ರಕರ್ತರ ಪರವಾಗಿ ಭಾಗೇಶ್ರೀ ಸುಬ್ಬಣ್ಣ, ದಿನೇಶ್ ಕುಮಾರ್, ಮಹಿಳಾ ಸಂಘಟನೆಗಳ ಪರವಾಗಿ ಕೆ.ಎಸ್.ಲಕ್ಷ್ಮಿ, ಮತ್ತು ನಾನು ಭಾಗವಹಿಸಿದ್ದೆವು. ಅಂದಿನ ಪತ್ರಿಕಾಗೋಷ್ಟಿಗೆ ಸಂಬಂಧಿಸಿದ ಕೆಲವು ಪತ್ರಿಕಾ ವರದಿಗಳು ಈ ಪುಟದಲ್ಲಿ ಇವೆ.

ಮಾರನೆಯ ದಿನ, ಅಂದರೆ ಶನಿವಾರದಂದು ಉಪವಾಸ ಸತ್ಯಾಗ್ರಹ ಆರಂಭವಾಯಿತು. ನಮ್ಮ ವರ್ತಮಾನ ಬಳಗದ ಶ್ರೀಪಾದ್ ಭಟ್ ಮತ್ತು ಲೋಕಸತ್ತಾ ಪಕ್ಷದ ನನ್ನ ಸಹೋದ್ಯೋಗಿಯಾದ ದೀಪಕ್ ನಾಗರಾಜ್, ಫ್ರೀಡಂ ಪಾರ್ಕ್‌ನಲ್ಲಿಯ ಎಲ್ಲಾ ವ್ಯವಸ್ಥೆಗಳ ಉಸ್ತುವಾರಿ ತೆಗೆದುಕೊಂಡಿದ್ದರು. ಸುಮಾರು 9:30 ಕ್ಕೆಲ್ಲ ವೇದಿಕೆ ಸಿದ್ಧವಾಗಿ ನಾವೊಂದಿಷ್ಟು ಜನ ಧರಣಿ ಕುಳಿತೆವು. ಶ್ರೀಪಾದ್ ಭಟ್, ಬಸವರಾಜು ಮತ್ತು ಸಂಜ್ಯೋತಿ ದಂಪತಿಯರು, ಪ್ರಜಾ ರಾಜಕೀಯ ವೇದಿಕೆಯ ಮನೋಹರ್ ಎಳವರ್ತಿ, ಮತ್ತು ನಾನು ಉಪವಾಸ ಕುಳಿತೆವು. ದೇವನಹಳ್ಳಿಯಿಂದ ಬೆಳಗ್ಗೆಯೇ ಬಂದ ಬೆಂಗಳೂರು ಗ್ರಾಮಾಂತರ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ತಮ್ಮ ಬ್ಯಾನರ್ ಕಟ್ಟಿ ನಮ್ಮೊಡನೆ ಧರಣಿ ಕೂತರು. ಹತ್ತರ ಸುಮಾರಿಗೆಲ್ಲ ’ಜನಶ್ರೀ’ ಟಿವಿಯ ಅನಂತ ಚಿನಿವಾರ ಮತ್ತು ’ಟಿವಿ-9’ ನ Photo Captionಲಕ್ಷಣ ಹೂಗಾರ್ ನಮ್ಮ ಜೊತೆಗೂಡಿದರು. ಅದಾದ ಸ್ವಲ್ಪ ಸಮಯಕ್ಕೆ ಪಬ್ಲಿಕ್ ಟಿವಿಯ ಎಚ್. ರಂಗನಾಥ್ ಸಹ ಜೊತೆಯಾದರು. ನೋಡನೋಡುತ್ತಿದ್ದಂತೆ ಹನ್ನೊಂದರ ಸುಮಾರಿಗೆ ವೇದಿಕೆ ತುಂಬ ಪತ್ರಕರ್ತರು, ಲೇಖಕರು, ವಕೀಲರು, ಸಾಮಾಜಿಕ ಹೋರಾಟಗಾರರು ಜೊತೆಯಾದರು. ಸುವರ್ಣ ನ್ಯೂಸ್‌ನ ರಂಗನಾಥ್ ಭಾರದ್ವಾಜ್ ಮತ್ತು ಅಜಿತ್ ಹನುಮಕ್ಕನವರ್, ಕಸ್ತೂರಿ ಟಿವಿಯ ಬದ್ರುದ್ದೀನ್, ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾಧರ್ ಮೊದಲಿಯಾರ್, ಪ್ರಜಾವಾಣಿಯ ಪದ್ಮರಾಜ್ ದಂಡಾವತಿ, ಪ್ರೆಸ್‌ಕ್ಲಬ್‌ನ ಉಪಾಧ್ಯಕ್ಷ ವೈ.ಜಿ.ಅಶೋಕ್‌ ಕುಮಾರ್, ಖ್ಯಾತ ವಕೀಲರಾದ ಬಿ.ಟಿ.ವೆಂಕಟೇಶ್, ಕೋಡಿಹಳ್ಳಿ ಚಂದ್ರಶೇಖರ್, ನಗರಿ ಬಾಬಯ್ಯ, ನಗರಗೆರೆ ರಮೇಶ್, ಭಾಗೇಶ್ರೀ, ಗೌರಿ ಲಂಕೇಶ್, ಪಾರ್ವತೀಶ ಬಿಳಿದಾಳೆ, ಕೆ.ಎಸ್.ಲಕ್ಷ್ಮಿ, ದಿನೇಶ್ ಕುಮಾರ್, ಮಂಗಳೂರು ವಿಜಯ, ’ದ ಹಿಂದೂ’ ಪತ್ರಿಕೆಯ ಅನೇಕ ವರದಿಗಾರರು, ಇಂಗ್ಲಿಷ್ ಚಾನಲ್‌ಗಳ ಮತ್ತು ಇಂಗ್ಲಿಷ್ ಪತ್ರಿಕೆಗಳ ಹಲವರು, ಜಯ ಕರ್ನಾಟಕ ಸಂಘಟನೆಯವರು, ಸಂವಾದ ಸಂಸ್ಥೆಯ ಮಾಧ್ಯಮ ವಿದ್ಯಾರ್ಥಿಗಳು, ಇನ್ನೂ ಅನೇಕರು ಮತ್ತು ವಿವಿಧ ಸಂಘಟನೆಗಳ ಅನೇಕ ಮುಖಂಡರು ಅಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ನಮ್ಮ ವೇದಿಕೆಯ ಪಕ್ಕ ನಡೆದ ಟಿಬೇಟಿಯನ್ನರ ಕಾರ್ಯಕ್ರಮಕ್ಕೆ ಬಂದಿದ್ದ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ದಿನೇಶ್ ಗುಂಡೂರಾವ್ ನಮ್ಮ ವೇದಿಕೆಗೂ ಬಂದು ಸತ್ಯಾಗ್ರಹ ನಿರತರೊಡನೆ ಮಾತನಾಡಿ, ಬೆಂಬಲ ವ್ಯಕ್ತಪಡಿಸಿ ಹೋದರು. ಬಂದ ಎಲ್ಲರಿಗೂ ನವೀನ್ ಸೂರಿಂಜೆಯ ವಿರುದ್ಧ ಹತ್ತು-ಹನ್ನೊಂದು ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಆರೋಪಗಳು ಧಿಗ್ಭ್ರಾಂತಿ ಉಂಟು ಮಾಡಿದವು. ಸಂವಾದ ಸಂಸ್ಥೆಯ ಮಾಧ್ಯಮ ವಿದ್ಯಾರ್ಥಿಗಳು ಇಡೀ ದಿನ ಹೋರಾಟದ ಹಾಡುಗಳನ್ನು ಮತ್ತು ಭಾವಗೀತೆಗಳನ್ನು ಹಾಡುವ ಮೂಲಕ ಧರಣಿಗೆ ಸಾಂಸ್ಕೃತಿಕ ಆಯಾಮ ನೀಡಿದರು. ಕೆಲವರು ಕವನ ವಾಚನ ಮಾಡಿದರು. ಮೊದಲ ದಿನದ ಸತ್ಯಾಗ್ರಹಕ್ಕೆ ಹರಿದು ಬಂದ ಬೆಂಬಲ ನಮಗೆ ಅಪಾರ ಭರವಸೆ ನೀಡಿತು.

ಅಂದು ರಾತ್ರಿ ನಾವು ಹತ್ತು ಜನ ಅಲ್ಲಿಯೇ ಉಳಿದು ಧರಣಿ ಮುಂದುವರೆಸಿದೆವು. ಉಪವಾಸ ಮಾಡುತ್ತಿದ್ದ ಸಂಜ್ಯೋತಿ ಮತ್ತು ತೇಜಸ್ವಿನಿ ಮನೆಗೆ ಹೋದರೆ, ಉಪವಾಸ ಮುಂದುವರೆಸಿದ ಶ್ರೀಪಾದ್ ಭಟ್, ಮನೋಹರ್ ಎಳವರ್ತಿ, ಬಸವರಾಜ್, ಆನಂದ್ ಯಾದವಾಡ್, ಮತ್ತು ನಾನು ಅಂದು ರಾತ್ರಿ ಅಲ್ಲಿಯೇ ಉಳಿದೆವು. ನಮ್ಮೊಡನೆ ಹಿರಿಯ ಕವಿ-ಪತ್ರಕರ್ತ-ಲೇಖಕರಾದ ಆದಿಮದ ಕೋಟಗಾನಹಳ್ಳಿ ರಾಮಯ್ಯ ಸಹ ಉಳಿದರು. ಸಂವಾದದ ಮುರಳಿ ಮೋಹನ್ ಕಾಟಿ ಮತ್ತವರ ತಂಡದ ನಾಲ್ಕೈದು ಜನ ಸಹ ಅಲ್ಲಿಯೇ ಉಳಿದರು. ಅಂದ ಹಾಗೆ, ನಮ್ಮ ಪಕ್ಕದ ವೇದಿಕೆಯಲ್ಲಿ ಧರಣಿ ನಿರತರಾಗಿದ್ದ ದಾವಣಗೆರೆಯ ರೈತರು ನಮ್ಮಲ್ಲಿ ಉಪವಾಸ ಮಾಡದೇ ಇದ್ದವರಿಗೆ ತಾವು ತಯಾರಿಸಿದ ಊಟವನ್ನು ಹಂಚಿಕೊಂಡದ್ದೇ ಅಲ್ಲದೆ, ನಮ್ಮ ವೇದಿಕೆಯಲ್ಲಿ ಮಲಗಲು ಕೆಲವರಿಗೆ ಸ್ಥಳ ಸಾಲದೇ ಬಂದದ್ದರಿಂದ ಅವರ ವೇದಿಕೆಯಲ್ಲಿ ಸ್ಥಳವನ್ನೂ ಕೊಟ್ಟರು. KIADB ಎಂಬ ಕರ್ನಾಟಕ ಸರ್ಕಾರದ ರಿಯಲ್ ಎಸ್ಟೇಟ್ ಏಜೆಂಟ್ ಸಂಸ್ಥೆ ತಮ್ಮ ಕೃಷಿ ಜಮೀನುಗಳನ್ನು ಕಿತ್ತುಕೊಂಡಿರುವುದರ ವಿರುದ್ಧ ಈ ರೈತರು ಸಂಸಾರ ಸಮೇತರಾಗಿ (ಸುಮಾರು ನಲವತ್ತೈವತ್ತು ಜನ, ಹೆಚ್ಚಿನವರು ಹೆಂಗಸರೇ) ಅಲ್ಲಿಯೇ ಸುಮಾರು ಹದಿನೈದು ದಿನಗಳಿಂದ ಧರಣಿಯಲ್ಲಿ ನಿರತರಾಗಿದ್ದಾರೆ. ತಾವೇ ಸಂತ್ರಸ್ತರಾಗಿದ್ದರೂ ನಮ್ಮೊಡನೆ ಅವರು ತೋರಿದ ಪ್ರೀತಿ-ವಿಶ್ವಾಸ ದೊಡ್ದದು.

ಮಾರನೆಯ ದಿನ ಭಾನುವಾರ ಸಹ ನಮ್ಮ ಉಪವಾಸ ಮತ್ತು ಧರಣಿ ಮುಂದುವರೆಯಿತು. ಅಂದೂ ಸಹ ಬೆಳಗ್ಗೆಯೇ ಅನಂತ ಚಿನಿವಾರ್ ಮತ್ತು ಲಕ್ಷ್ಮಣ್ ಹೂಗಾರ್ ಬಂದರು. ಅಷ್ಟೊತ್ತಿಗೆ ಸತ್ಯಮೂರ್ತಿ ಆನಂದೂರು ಸಹ ಜೊತೆಯಾಗಿದ್ದರು. ಸ್ವಲ್ಪ ಸಮಯದ ನಂತರ ಬರಗೂರು ರಾಮಚಂದ್ರಪ್ಪ, ಗಂಗಾಧರ ಮೊದಲಿಯಾರ್ ಬಂದು ಕೂಡಿಕೊಂಡರು. ಮಧ್ಯಾಹ್ನಕ್ಕೆ ಶಿವಸುಂದರ್, ಎಸ್.ಜಿ.ಸಿದ್ದರಾಮಯ್ಯ ಮತ್ತು ಚಂಪಾ ಬಂದಿದ್ದರು. ಮಧ್ಯಾಹ್ನಕ್ಕೆ ಕಚೇರಿಗೆ ತೆರಳಿದ್ದ ಜನಶ್ರೀಯ ಅನಂತ ಚಿನಿವಾರರು ಪತ್ರಕರ್ತರ ಮತ್ತು ಪ್ರಜಾಪ್ರಭುತ್ವವಾದಿಗಳ ಈ ಧರಣಿಯ ಬಗ್ಗೆ ಗೃಹಸಚಿವ ಆರ್.ಅಶೋಕರೊಡನೆ ಪ್ರಸ್ತಾಪ ಮಾಡಿದ್ದರು.Photo Caption ಅವರಿಗೆ ಸಂಜೆ ಆರಕ್ಕೆ ಬಂದು ಧರಣಿ ನಿರತರೊಡನೆ ಮಾತನಾಡುವುದಾಗಿ ಸಚಿವರು ಭರವಸೆ ನೀಡಿದ್ದರಂತೆ. ಸಂಜೆಯ ನಾಲ್ಕೂವರೆ ಸುಮಾರಿಗೆ ವಿಧಾನಪರಿಷತ್‌ನ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ನಮ್ಮ ಧರಣಿಯ ಸ್ಥಳಕ್ಕೆ ಬಂದು, ನವೀನ್ ಸೂರಿಂಜೆಯ ವಿರುದ್ಧ ದಾಖಲಾಗಿರುವ ಆರೋಪಗಳನ್ನು ನೋಡಿ ದಂಗಾದರು. ಕೂಡಲೇ ನಮ್ಮ ಮನವಿಗೆ ಓಗೊಟ್ಟು ಅವರೂ ಸಹ ಗೃಹ ಸಚಿವರೊಡನೆ ಮಾತನಾಡಿದರು. ಅವರ ಮನವಿಗೂ ಸ್ಪಂದಿಸಿದ ಸಚಿವರು ಸಂಜೆ ಆರಕ್ಕೆ ಬರುವುದಾಗಿ ತಿಳಿಸಿದರು. ಅಂದು ರಾತ್ರಿ ಹೊಸಪೇಟೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಬೇಕಿದ್ದ ವಿ.ಆರ್.ಸುದರ್ಶನ್‌ರವರು ಸಚಿವರು ಬರುವ ತನಕವೂ ಎರಡು ಘಂಟೆಗಳ ಕಾಲ ನಮ್ಮೊಡನೆ ಧರಣಿ ಕೂತರು. ಅದೇ ಸಮಯಕ್ಕೆ ಈ ಹೋರಾಟಕ್ಕೆ ಬೆಂಬಲವಾಗಿ IDL BLIND BAND ನವರು ಆಗಮಿಸಿ ತಮ್ಮ ಹಾಡುಗಳ ಮೂಲಕ ಬೆಂಬಲಿಸಿದರು.

ಕತ್ತಲಾವರಿಸಿದ ನಂತರ, ಅಂದರೆ 6:45 ಕ್ಕೆ ಸಚಿವರು ಬಂದರು. ಅಷ್ಟೊತ್ತಿಗೆ ಮಾಧ್ಯಮದ ಬಹುತೇಕ ಹಿರಿಯರು ಸ್ಥಳಕ್ಕೆ ಬಂದಿದ್ದರು. ಗಂಗಾಧರ ಮೊದಲಿಯಾರ್, ಲಕ್ಷ್ಮಣ್ ಹೂಗಾರ್, ಅನಂತ ಚಿನಿವಾರ ಎಲ್ಲರೂ ಬಂದರು. ಸಚಿವರು ಬಂದು ಧರಣಿ ನಿರತರೊಡನೆ ತಾವೂ ಕುಳಿತು ವಿ.ಆರ್.ಸುದರ್ಶನರಿಗೆ ಮತ್ತು ಮಾಧ್ಯಮ ಮಿತ್ರರಿಗೆ ’ಪೋಲಿಸರ ಕಡೆಯಿಂದ ತಪ್ಪಾಗಿದೆ, ನವೀನರ ವಿರುದ್ಧ ಹಾಕಲಾಗಿರುವ ಕೇಸುಗಳನ್ನು ಹಿಂಪಡೆಯುವುದಾಗಿ Photo Captionತಾನು ಸದನದಲ್ಲಿ ಮಾತು ಕೊಟ್ಟಿದ್ದೇನೆ, ಅದೇ ರೀತಿ ನಾಲ್ಕೈದು ದಿನಗಳ ಹಿಂದೆಯೇ ಪತ್ರ ಬರೆದಿದ್ದೇನೆ, ಅದು ವಿವಿಧ ಹಂತಗಳಲ್ಲಿ ಇದೆ, ಮತ್ತು ಸಂಪುಟ ಸಭೆಯಲ್ಲಿ ಅದನ್ನು ಮಂಡಿಸಲು ಆ ಕಡತ ಹೀಗೀಗೆ ಸಾಗಬೇಕಾಗಿದೆ,’ ಎಂದು ಎಲ್ಲವನ್ನೂ ವಿವರಿಸಿದರು. ಸಚಿವರಿಗೆ ಧರಣಿ ನಿರತರ ಪರವಾಗಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಸಂಜ್ಯೋತಿಯವರು ಮನವಿ ಪತ್ರ ಸಲ್ಲಿಸಿದರು. ತಾವು ಈಗಾಗಲೇ ನವೀನ್ ಸೂರಿಂಜೆಯವರ ವಿರುದ್ಧ ಹಾಕಲಾಗಿರುವ ಸುಳ್ಳು ಆರೋಪಗಳನ್ನು ಕೈಬಿಡಲು ಕ್ರಮ ಕೈಗೊಂಡಿರುವುದಾಗಿಯೂ, ನಾಳೆಯಿಂದ ನೀವುಗಳೂ ಈ ಪ್ರಕ್ರಿಯೆ ತ್ವರಿತಗತಿಯಲ್ಲಿ ಮುಗಿಯಲು ಅದನ್ನು ಹಿಂಬಾಲಿಸಿ ಎಂತಲೂ, ತಾವು ನವೀನರ ಮೇಲಿನ ಕೇಸುಗಳನ್ನು ಹಿಂಪಡೆಯಲು ಕಟಿಬದ್ದರಾಗಿದ್ದೇವೆ, ಹಾಗಾಗಿ ನೀವುಗಳೂ ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕೆಂದು ಮನವಿ ಮಾಡಿದರು. ಅದನ್ನೇ ಅವರು ಮಾಧ್ಯಮಗಳ ಮುಂದೆಯೂ ನಂತರ ಹೇಳಿದರು.

ನವೀನ್ ಸೂರಿಂಜೆಗೆ ಆಗಿರುವ ಅನ್ಯಾಯವನ್ನು ಜನರ ಮುಂದೆ ಇಡಬೇಕು, ಕಾರ್ಯನಿರತ ಪತ್ರಕರ್ತರ ಮೇಲೆ ಸುಳ್ಳು ಆರೋಪಗಳನ್ನು ಹಾಕಿ ಪತ್ರಿಕಾ ಸ್ವಾತಂತ್ರ್ಯವನ್ನು ಸರ್ಕಾರ ದಮನ ಮಾಡಲು ಬಿಡಬಾರದು, ನವೀನ್ ಸೂರಿಂಜೆಯ ವಿಷಯಕ್ಕೆ ಸರ್ಕಾರ ತನ್ನ ನಿಲುವನ್ನು ಬಹಿರಂಗಗೊಳಿಸಬೇಕು, ಆದಷ್ಟು ಬೇಗ ನವೀನ್ ಸೂರಿಂಜೆಯನ್ನು ಕಾನೂನು ರೀತ್ಯ ಬಿಡುಗಡೆ ಮಾಡಲು ಈ ಕೂಡಲೇ ಕ್ರಮಕೈಗೊಳ್ಳಬೇಕು, ಎಂದಿದ್ದ ನಮ್ಮ ಒತ್ತಾಯಗಳು ಒಂದು ಹಂತಕ್ಕೆ ಈಡೇರಿದ ಕಾರಣಕ್ಕೆ ನಾವು ಮೂರು ದಿನದ ಉಪವಾಸವನ್ನು ಎರಡನೇ ದಿನ ರಾತ್ರಿ ಹಿಂತೆಗೆದುಕೊಳ್ಳಲು ತೀರ್ಮಾನಿಸಿದೆವು. ನಮ್ಮೊಡನೆ ಕೊನೆಯ ತನಕವೂ ಇದ್ದ ವಿ.ಆರ್.ಸುದರ್ಶನ್ ಇಂದಿನ ರಾಜಕಾರಣಿಗಳಲ್ಲಿ ತಾವೊಬ್ಬ ಅಪರೂಪದ ವ್ಯಕ್ತಿ ಎಂದು ತೋರಿಸಿ ನಮ್ಮೆಲ್ಲರ ಕೃತಜ್ಞತೆಗೆ ಪಾತ್ರರಾದರು. ರಾತ್ರಿ ಎಂಟರ ನಂತರ ನಮ್ಮವರೆಲ್ಲ ಮನೆಗಳಿಗೆ ವಾಪಸಾದರು.

(ಈ ಎರಡೂ ದಿನಗಳ ಉಪವಾಸ ಸತ್ಯಾಗ್ರಹದ ಕೆಲವು ಪತ್ರಿಕಾ ವರದಿಗಳು ಈ ಪುಟದಲ್ಲಿವೆ.)

ಈ ಹೋರಾಟಕ್ಕೆ ಸಹಕರಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಮತ್ತು ಕೃತಜ್ಞತೆಗಳನ್ನು ತಿಳಿಸುತ್ತೇನೆ. ಪತ್ರಕರ್ತರ, ಅವರ ಸಂಘಟನೆಗಳ, ಸಮಾನ-ಮನಸ್ಕರ ಸಂಘಟಿತ ಬೆಂಬಲದಿಂದ ಮಾತ್ರ ನಾವು ಇಷ್ಟಾದರೂ ಸಾಧಿಸಲು ಸಾಧ್ಯವಾಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ಮತ್ತು ಪರೋಕ್ಷವಾಗಿ ನಮ್ಮೊಡನೆ ನಿಂತ ಎಲ್ಲರಿಗೂ ವೇದಿಕೆಯ ಪರವಾಗಿ ನಾನು ಕೃತಜ್ಞತೆಗಳನ್ನು ತಿಳಿಸುತ್ತೇನೆ. ಹಾಗೆಯೇ ಎರಡು ಹಗಲು ಮತ್ತು ಒಂದು ರಾತ್ರಿ ನಮ್ಮೊಡನೆ ಇದ್ದ ಪೋಲಿಸರಿಗೂ ನಮ್ಮ ಧನ್ಯವಾದಗಳು.

ಮತ್ತು, ಎರಡೂ ದಿನ ಉಪವಾಸ ಮಾಡಿದ ತೇಜಸ್ವಿನಿ, ಶ್ರೀಪಾದ್ ಭಟ್, ಮನೋಹರ್ ಎಳವರ್ತಿ, ಸಂಜ್ಯೋತಿ, ಬಸವರಾಜ್, ಆನಂದ್ ಯಾದವಾಡ್, ಶಿವಸುಂದರ್, ಮತ್ತು ಗೊತ್ತಾಗದೇ ಉಳಿದ ಎಲ್ಲರಿಗೂ ಧನ್ಯವಾದಗಳು. ಹಾಗೂ, ಕಾರ್ಯಕ್ರಮ ವ್ಯವಸ್ಥೆಯ ವಿಚಾರದಲ್ಲಿ ಅನೇಕ ರೀತಿಯಲ್ಲಿ ಸಹಕರಿಸಿ ನಮ್ಮೊಡನೆ ನಿಂತ ದೀಪಕ್ ನಾಗರಾಜರಿಗೂ ಸಹ.

ಮೊನ್ನೆ ಸೋಮವಾರದಿಂದಲೇ ನಮ್ಮ ಪರವಾಗಿ ಸಂಜ್ಯೋತಿ ಮತ್ತು ಬಸವರಾಜ್‌ರವರು ಈ ಕೇಸಿನ ಹಿಂದೆ ಬಿದ್ದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದ ಕಡತ ಆದಷ್ಟು ಬೇಗ ಸಂಪುಟ ಸಭೆಗೆ ಬರುವ ನಿಟ್ಟಿನಲ್ಲಿ ನಮ್ಮವರು ಕಾರ್ಯಪ್ರವೃತ್ತರಾಗಿದ್ದಾರೆ.

ಆದರೆ ನವೀನ್ ಸೂರಿಂಜೆಯ ಮೇಲಿನ ಆರೋಪಗಳನ್ನು ಕೈಬಿಟ್ಟು, ಆತ ಜೈಲಿನಿಂದ ಹೊರಬರುವ ತನಕವೂ ನಮಗೆ ನ್ಯಾಯ ಸಿಗುವುದಿಲ್ಲ ಮತ್ತು ಅದು ಇಷ್ಟೇ ಅವಧಿಯಲ್ಲಿ ಆಗುತ್ತದೆ ಎನ್ನುವುದಕ್ಕೆ ಆಗುವುದಿಲ್ಲ. ಮತ್ತು, ಇಲ್ಲಿಯವರೆಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಯೂ ಹಾಗೆಯೇ ಇದೆ.

ಇದೇ ಸಂದರ್ಭದಲ್ಲಿ ಇದೇ ಕೇಸಿಗೆ ಸಂಬಂಧಪಟ್ಟಂತೆ ಶರಣ್ ಎನ್ನುವ ಕ್ಯಾಮೆರಾಮನ್‌ನನ್ನು ಸಹ ಮಂಗಳೂರಿನ ಪೋಲಿಸರು ಕಳೆದ ವಾರ ಬಂಧಿಸಿದ್ದಾರೆ. ಅವರ ಮೇಲೆಯೂ ನವೀನರ ಮೇಲಿರುವ ಆರೋಪಗಳನ್ನೇ ಹೊರೆಸಿದ್ದಾರೆ ಎನ್ನುವ ಸುದ್ಧಿಯಿದೆ. ಹಾಗಿದ್ದ ಪಕ್ಷದಲ್ಲಿ ಸರ್ಕಾರ ಅವರ ಮೇಲೆಯೂ ಹಾಕಿರುವ ಕೇಸುಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳಬೇಕು. ಪೋಲಿಸರಿಗೆ ಈ ಸುಳ್ಳು ಆರೋಪಗಳ ಹೊರತಾಗಿ ಬೇರೆಯದೇ ಆದ ಸಬೂತುಗಳಿದ್ದಲ್ಲಿ ಆ ಆಧಾರದ ಮೇಲೆ ಕೇಸುಗಳನ್ನು ಹಾಕಬೇಕೇ ಹೊರತು ಸುಳ್ಳುಸುಳ್ಳು ಆರೋಪಗಳನ್ನು ಹೊರೆಸಿ ಬಂಧಿಸುವುದು ಅಕ್ಷಮ್ಯ. ಶರಣರಿಗೆ ನನ್ನ ನೈತಿಕ ಬೆಂಬಲ ಹಿಂದೆ.

ಇಂತಹ ಸಂದರ್ಭದಲ್ಲಿಯೇ ವೃತ್ತಿಪರ ಸಂಘಟನೆಗಳ ಅಗತ್ಯ ಮತ್ತು ಅವುಗಳು ನಿಭಾಯಿಸಬೇಕಾದ ಜವಾಬ್ದಾರಿಗಳ ಪರೀಕ್ಷೆ ನಡೆಯುವುದು. ಈ ಎಲ್ಲಾ ವಿದ್ಯಮಾನಗಳ ಹಿನ್ನೆಲೆಯಲ್ಲಿ ಹೇಳುವುದಾದರೆ, ಮಾಧ್ಯಮಗಳ ಬಗ್ಗೆ, ಅದರಲ್ಲೂ ದೃಶ್ಯ ಮಾಧ್ಯಮಗಳ ಬಗ್ಗೆ ಜನರಿಗೆ ಗೌರವ, ಭಯ, ತಿರಸ್ಕಾರ ಎಲ್ಲವೂ ಇದೆ. ಈ ತಿರಸ್ಕಾರದ ಭಾಗವೇ ನವೀನ್ ಸೂರಿಂಜೆಯವರ ವಿಷಯಕ್ಕೆ ಅವರು ನಿರಪರಾಧಿಯಾಗಿದ್ದರೂ ಪ್ರತಿಕೂಲವಾಗಿ ಪರಿಣಮಿಸಿದ್ದು. ಹಾಗಾಗಿ, ಮಾಧ್ಯಮ ರಂಗ ನಿರಂತರವಾಗಿ ಆತ್ಮಶೋಧನೆಯಲ್ಲಿ ಮತ್ತು ಸರಿಪಡಿಸಿಕೊಳ್ಳುವ ಕ್ರಿಯೆಯಲ್ಲಿ ತೊಡಗಬೇಕಿದೆ. ಹಾಗೆಯೇ, ಕಾರ್ಯನಿರತ ಪತ್ರಕರ್ತರಿಗೆ ಅನ್ಯಾಯವಾದಾಗ ನ್ಯಾಯಕ್ಕಾಗಿ ಹೋರಾಡುವ ಒಂದು ಉತ್ತಮ ವೃತ್ತಿಪರ ಸಂಘಟನೆಯೊಂದರ ಅಗತ್ಯ ಮಾಧ್ಯಮ ರಂಗದಲ್ಲಿ ಕೆಲಸ ಮಾಡುವವರಿಗೆ ಬೇಕಾಗಿದ್ದು, ಅದನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಹಿರಿಯ ಪತ್ರಕರ್ತರು ಆಲೋಚಿಸಿ ಕಾರ್ಯೋನ್ಮುಖರಾಗುತ್ತಾರೆ ಎಂದು ಭಾವಿಸುತ್ತೇನೆ. ಈಗ ನಾವು ಕಟ್ಟಿಕೊಂಡ “ಪತ್ರಕರ್ತ ಅಕ್ರಮ ಬಂಧನ ವಿರೋಧಿ ವೇದಿಕೆ”ಯಲ್ಲಿ ಪತ್ರಕರ್ತರು, ಸಂಘಟನೆಗಳು, ಪತ್ರಕರ್ತರಲ್ಲದವರು, ಎಲ್ಲರೂ ಇದ್ದಾರೆ. ಆದರೆ, ಪತ್ರಕರ್ತರೇ ಇರುವ ಒಂದು ಸಂಘಟನೆಯ ಅಗತ್ಯತೆ ತೀರಾ ಇದೆ, ಇಲ್ಲದಿದ್ದರೆ, ಮೊನ್ನೆ ನವೀನ್ ಸೂರಿಂಜೆ, ನೆನ್ನೆ ಶರಣ್, ಇಂದು ಮತ್ತೊಬ್ಬರು, ತಾವು ಮಾಡದ ತಪ್ಪುಗಳಿಗಾಗಿ ಶಿಕ್ಷೆ ಅನುಭವಿಸುವಂತಾಗುತ್ತದೆ ಮತ್ತು ಅದು ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಗೌರವ ತರುವಂತಹುದೂ ಅಲ್ಲ ಮತ್ತು ನೈತಿಕವಾಗಿ ಉತ್ತಮವೂ ಅಲ್ಲ, ಮಾಧ್ಯಮ ಮಿತ್ರರು ಇದರ ಬಗ್ಗೆ ಯೋಚಿಸುತ್ತಾರೆ ಎಂದು ಭಾವಿಸುತ್ತೇನೆ. ಈ ಕೂಡಲೆ ಪತ್ರಕರ್ತರ ಸಂಘಟನೆಗಳು ಶರಣರ ಪರವಾಗಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲು ಕೋರುತ್ತೇನೆ. “ಪತ್ರಕರ್ತರ ಅಕ್ರಮ ಬಂಧನ ವಿರೋಧಿ ವೇದಿಕೆ”ಯ ಪರವಾಗಿಯೂ ಪತ್ರಿಕಾ ಪ್ರಕಟಣೆ ನೀಡಲು ಸಿದ್ಧತೆಗಳಾಗುತ್ತಿವೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ