“ದೊಡ್ಡವರು” ಎಂಬ ಕುಲದೈವ!

– ರಾಜೇಶ್. ಡಿ

“ಹೋಗಿ ದೊಡ್ಡವರನ್ನ ಕಂಡೆ, ಕೇಳ್ಕೊಂಡೆ.. ಕೆಲಸ ಆಯ್ತು ಕಣೋ.”.. ಎಂದು ಆಕಡೆಯಿಂದ ಮಿತ್ರ ಹೇಳಿದ. ಅವನ ಜೊತೆ ಅವನ ಜೊತೆ ಅವನ ಅಪ್ಪ, ಅಮ್ಮ ಕೂಡ ’ದೊಡ್ಡವರನ್ನು’ ಕಾಣಲು ಹೋಗಿದ್ದರು. ಅವರು ಕೆಲಸ ಆಗುವ ವಿಶ್ವಾಸ ತುಂಬಿಸಿ ಕಳುಹಿಸಿದ್ದರು. ನಂತರ ಅವರ ನಿರೀಕ್ಷೆಯಂತೆ, ಕೆಲಸ ಆಯಿತು. ಈಗ ಉತ್ತಮ ಹುದ್ದೆಯಲ್ಲಿದ್ದಾನೆ.

ಈ ಮೇಲಿನ ಘಟನೆಗೆ ಹೋಲುವಂತಹ ಪ್ರಕರಣಗಳು ಮೈಸೂರು, ಮಂಡ್ಯ, ಹಾಸನ, ರಾಮನಗರ ಜಿಲ್ಲೆಗಳಲ್ಲಿ ಬೇಕಾದಷ್ಟು ಸಿಗುತ್ತವೆ. ಈ ಪ್ರದೇಶದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಭೂ ಹಿಡುವಳಿಯಲ್ಲಿ ತುಂಬಾ ಮುಂದಿರುವ ಜನಾಂಗದ ಜನರ ಮಧ್ಯೆ ’ದೊಡ್ಡವರು’ ಎಂಬ ಪದ ಬಳಕೆಯಲ್ಲಿದೆ. ಅದು ಸೂಚಿಸುವುದು ಒಬ್ಬರನ್ನೇ. ಅವರು ಈ ರಾಜ್ಯದಿಂದ ದೇಶಕ್ಕೆ ಆಯ್ಕೆಯಾದ ಏಕೈಕ ಪ್ರಧಾನಿ. ಅವರ ಆಶೀರ್ವಾದದಿಂದ ಒಂದು ಸಮುದಾಯದ ಹುಡುಗ-ಹುಡುಗಿಯರು ಹೆಚ್ಚಿನ ಲಾಭ ಪಡೆದಿದ್ದಾರೆ ಎಂದು ಸಾಕ್ಷಿ ಸಮೇತ ನಿರೂಪಿಸಲು ಸಾಧ್ಯವಿಲ್ಲ. ಆದರೆ ಆ ದೊಡ್ಡ ನಾಯಕರಿಗೆ ಆ ಮಟ್ಟಿನ ಸಾಮರ್ಥ್ಯ ಇದೆ ಎಂಬ ಸತ್ಯವನ್ನು ಬಹುಶಃ ಯಾರೂ ಪ್ರಶ್ನಿಸಲಾರರು.

ಹೀಗೆ ದೊಡ್ಡ ದೊಡ್ಡ ಸರಕಾರಿ ಹುದ್ದೆ ಪಡೆದ ನೂರಾರು ಉದಾಹರಣೆಗಳಿವೆ. ಅವರ ಪಾಲಿಗೆ ’ದೊಡ್ಡವರು’ ದೇವರು. ಆದರೆ ಆ ದೇವರು, ದಲಿತ, ಬಲಿತ ಎನ್ನದೆ ಎಲ್ಲರೂ ಹರಕೆ ಒಪ್ಪಿಸುವ ಮಾರಮ್ಮನೋ ಅಥವಾ ಪುರದಮ್ಮನೋ ಅಲ್ಲ, ಬದಲಿಗೆ ಒಂದು ಕುಲದೈವ! ಕಳೆದ ಹತ್ತು ವರ್ಷಗಳಲ್ಲಿ ಕೆಪಿಎಸ್‌ಸಿ ಮೂಲಕ ನಡೆದ ನೇಮಕಾತಿಗಳಲ್ಲಿ, ಸಾಮಾನ್ಯ ವರ್ಗಕ್ಕೆಂದು ನಿಗದಿ ಪಡಿಸಿದ್ದ ಸೀಟುಗಳಲ್ಲಿ ಯಾವ್ಯಾವ ಜಾತಿಯವರು ಆಯ್ಕೆಯಾಗಿದ್ದಾರೆ ಎಂದು ಯಾರಾದರೂ ಹುಡುಕಿದರೆ, ಈ ಕುಲದೈವದ ಮಹಾತ್ಮೆ ಅರಿವಾಗುತ್ತದೆ.

ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಯವರ ಅಧಿಕಾರಾವಧಿ ಇತ್ತೀಚೆಗಷ್ಟೆ ಮುಗಿಯಿತು. ಆದರೆ ರಾಜ್ಯಪಾಲರು ತಮ್ಮ ವಿಶೇಷ ಅಧಿಕಾರ ಬಳಸಿ ಅವರ ಅವಧಿಯನ್ನು ಒಂದು ವರ್ಷದವರೆಗೂ ವಿಸ್ತರಿಸಿದರು. ಕಾರಣ ಹೇಳಬೇಕೆ – ಅವರು ಈ ಕುಲದೈವಕ್ಕೆ ಹತ್ತಿರದವರು. ರಾಜ್ಯಪಾಲರೊಬ್ಬರು ಇತ್ತೀಚಿನ ದಿನಗಳಲ್ಲಿ ಹೀಗೆ ಕುಲಪತಿಯವರ ಅಧಿಕಾರಾವಧಿಯನ್ನು ವಿಸ್ತರಿಸಿದ ಉದಾಹರಣೆ ಇಲ್ಲ. ಹೋಗಲಿ, ಈ ಕುಲಪತಿಯವರು ಇನ್ನೊಂದು ವರ್ಷ ವಿವಿಯಲ್ಲಿ ಕಾರ್ಯನಿರ್ವಹಿಸಿದರೆ ಏನೋ ಮಹತ್ವದ ಕಾರ್ಯ ಅಥವಾ ಸೇವೆ ದೊರಕುತ್ತದೆ ಎಂದು ನಂಬಲು ಇಲ್ಲಿಯವರೆಗೆ ಅಂತಹದ್ದೇನೂ ನಡೆದೇ ಇಲ್ಲವಲ್ಲ.

ಮುಕ್ತ ವಿವಿಯ ಸಾಧನೆಗಳನ್ನು ಪಟ್ಟಿಮಾಡುವಾಗಲೆಲ್ಲ, ತಾವು ಎಷ್ಟು ವಿದ್ಯಾರ್ಥಿಗಳಿಗೆ ಪದವಿ ನೀಡಿದ್ದೇವೆ, ಎಷ್ಟು ಅಧ್ಯಯನ ಕೇಂದ್ರ ಸ್ಥಾಪಿಸಿದ್ದೇವೆ..ಹೀಗೆ ಹಲವು ಪಟ್ಟಿ ನೀಡುತ್ತಾರೆಯೇ ವಿನಹ, ಪರೀಕ್ಷಾ ಕೇಂದ್ರಗಳಲ್ಲಿ ಕಾಪಿ ತಡೆಯಲು ಆಧುನಿಕ ತಂತ್ರಜ್ಞಾನ ಬಳಸುತ್ತಿದ್ದೇವೆ, ಸೂಕ್ತ ವ್ಯವಸ್ಥೆ ಇಲ್ಲದೆ ಅಧ್ಯಯನ ಕೇಂದ್ರ ನಡೆಸುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಂಡಿದ್ದೇವೆ ಎನ್ನುವಂತಹ ಮಾತುಗಳೇನಾದರೂ ಕೇಳಿ ಬಂದಿವೆಯಾ?

ಇದೇ ಗುರುವಾರ (ದಿನಾಂಕ ಜನವರಿ 10) ಕೂಡಾ ಬೆಂಗಳೂರಿನ ಕೇಂದ್ರವೊಂದರಲ್ಲಿ (ಮಾಧ್ಯಮಗಳು ವರದಿ ಮಾಡಿದಂತೆ) ಎಂಬಿಎ ವಿದ್ಯಾರ್ಥಿಗಳು ’ಮುಕ್ತ’ವಾಗಿ ಪರೀಕ್ಷೆ ಬರೆಯುತ್ತಿದ್ದರು. ಕೆಲವರು ಹೆಗಲಿಗೆ ಬ್ಯಾಗ್ ಹಾಕಿಕೊಂಡೇ ಉತ್ತರ ಬರೆಯುತ್ತಿದ್ದರು. KSOU_OpenCopying_Jan1113ಇನ್ನೂ ವಿಚಿತ್ರವೆಂದರೆ ಒಂದು ಬೆಂಚಿಗೆ ಮೂರು ಮಂದಿಯನ್ನು ಪರೀಕ್ಷೆ ಬರೆಯಲು ಕೂರಿಸಿದ್ದಾರೆ. ಬಹುಶಃ ಪ್ರಾಥಮಿಕ ಶಾಲಾ ಮಕ್ಕಳನ್ನೂ ಪರೀಕ್ಷೆಗೆ ಹೀಗೆ ಕೂರಿಸುವುದಿಲ್ಲ. ಮುಕ್ತ ವಿವಿಯ ಪದವಿಗಳಿಗೆ ಮರ್ಯಾದೆ ದಿನೇ ದಿನೇ ಮೋರಿ ಪಾಲಾಗುತ್ತಿದೆ, ಆದರೂ, ಈ ಕುಲಪತಿ ಸಾಧಕರು. ಆ ಕಾರಣಕ್ಕೆ ಅವರು ಮೈಸೂರು ವಿಶ್ವವಿದ್ಯಾನಿಲಯಕ್ಕೂ ಕುಲಪತಿಗಳಾಗಬೇಕು!

ಕುಲಪತಿ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನು ಸೂಚಿಸಲು ನೇಮಕಗೊಂಡಿರುವ ಸಮಿತಿಯಲ್ಲಿ ಇದೇ ಕಾರಣಕ್ಕೆ ಒಡಕು ಉಂಟಾಗಿದೆ. ಇಬ್ಬರು ಸದಸ್ಯರು ಸದ್ಯ ಮುಕ್ತ ವಿ.ವಿ ಕುಲಪತಿಯವರ ಹೆಸರನ್ನು ಒಪ್ಪಲು ನಿರಾಕರಿಸಿದ್ದಾರೆ. ಆದರೆ ಉಳಿದ ಇಬ್ಬರು, ಅವರ ಹೆಸರನ್ನೇ ಸೂಚಿಸಿದ್ದಾರೆ ಮತ್ತು ಅವರ ಹೆಸರನ್ನೇ ಪಟ್ಟಿಯಲ್ಲಿ ಮೊದಲನೆಯವರಾಗಿ ನಮೂದಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಏನಿದರ ಅರ್ಥ?

ಸದ್ಯ ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆ ಮತ್ತು ನೇಮಕಾತಿಯಲ್ಲಿ ಉಳ್ಳವರ ಪ್ರಾಬಲ್ಯವನ್ನು ಇಂತಹ ಬೆಳವಣಿಗೆಗಳು ಸ್ಪಷ್ಟವಾಗಿ ತೋರಿಸುತ್ತವೆ. ಯಾವ ಹುದ್ದೆಯೂ, ಯಾವ ಅವಕಾಶವೂ ಕೆಲವೇ ಸಮುದಾಯಗಳಿಗೆ ಸೀಮಿತವಾಗಬಾರದು. ಆದರೆ ಬಲಾಢ್ಯರು, ಅನ್ಯರನ್ನು ಕಡೆಗಣಿಸುತ್ತಲೇ ಸಾಗುತ್ತಿದ್ದಾರೆ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುತ್ತಿರುವ ಸಂವಿಧಾನೇತರ ಶಕ್ತಿಗಳು ಇವರಲ್ಲದೆ ಮತ್ತ್ಯಾರು? ಆದರೆ ಸಭೆ ಸಮಾರಂಭಗಳಲ್ಲಿ ನಿಂತು ಮಾತನಾಡುವಾಗ ’ನಾನು ದೀನ ದಲಿತರ ಪರ, ಹಿಂದುಳಿದವರ ಏಳಿಗೆಗೆ ಶ್ರಮಿಸಿದವನು,’ ಎನ್ನುತ್ತಾರಲ್ಲಾ.. ಒಮ್ಮೆ ಯೋಚಿಸಲಿ.

(ಚಿತ್ರಕೃಪೆ: ದಿ ಹಿಂದು)

4 thoughts on ““ದೊಡ್ಡವರು” ಎಂಬ ಕುಲದೈವ!

  1. ಹಿತೈಷಿ

    Superb Rajesh…..
    It’s not only in last 10 years… You need to probably go back a little more too…. Those selected because of “Doddavaru” are in important posts now and making sure that no information comes out related to “doddavara kutumbha”….
    Good example of mismanagement by people selected because of “doddavaru” is NWKRTC which went from profit making corporation to bankrupt….

    However, it is really bad that many people not able to understand their tricks till now ….

    Reply
  2. vasanthn

    ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಒಂದು ಸಂಶೋಧನ ಲೇಖನವನ್ನು ಕೃತಿ ಚೌಯ೵ ಮಾಡಿ ಅದು ನಿಜ ಎಂದು ತಿಳಿದು, ಸಂಶೋಧನ ಲೇಖನ ಪ್ರಕಟಣೆ ಮಾಡಿದ ನಿಯತಕಾಲಿಕೆ ಈ ಮಹಾಶಯನ ಲೇಖನವನ್ನು ವಾಪಸು ಪಡೆದಿತ್ತು.
    ಇಂತವರು ಇಂದು ವಿಶ್ವ ವಿದ್ಯಾಲಯದ ಕುಲಪತಿಗಳು.

    ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚಿಗೆ ನೆಡೆದ ನೇಮಕಾತಿಯಲ್ಲಿ ನೇಮಕಗೊಂಡ ಬಹುತೇಕರು, ನೀವು ಹೇಳಿದ ಹಾಗೆ ದೊಡ್ಡವರ ಜಾತಿಯವರು. ಕೆಲ ಸಂದಶ೵ನದಲ್ಲಿ ಭಾಗವಹಿಸಿದ ವಿಷಯ ಪರಿಣಿತರಿಗೆ ಈ ಕುಲಪತಿ ಕಾಡಿಬೇಡಿ ತನಗೆ ಬೇಕಾದ ಅಭ್ಯಥಿ೵ಗಳ ಪರ ಸಹಿ ಮಾಡುವಂತೆ ಒತ್ತಾಯಿಸಿದ ಬಗ್ಗೆ ಅನೇಕ ಸ್ವಾರಸ್ಯಕರ ಪುಕಾರುಗಳು ಮೈಸೂರಿನಲ್ಲಿ ಹರಿದಾಡುತ್ತಿವೆ. ಈತನ ಬಗ್ಗೆ ವಿಶ್ವ ವಿದ್ಯಾಲಯದ ಕಾರಿಡಾರ್ ನಲ್ಲಿ ಆಡುವ ಮಾತುಗಳನ್ನು ಕೇಳಿದರೆ, ಈತ ಅತಿ ಭ್ರಷ್ಟ ಮತ್ತು ಜಾತಿವಾದಿ.
    ವಿಶ್ವ ವಿದ್ಯಾಲಯದ ಕುಲಪತಿಗೆ ನಾಲಾಯಕ್ ಮನುಷ್ಯ. ಅದರೆ ನಮ್ಮ ಘನತೆಯೆತ್ತವರಿಗೆ ಇವರ ಮೇಲೆ ಒಂದು ರೀತಿಯ ಲವ್.

    Reply

Leave a Reply to vasanthn Cancel reply

Your email address will not be published. Required fields are marked *