ಸಿನಿಕರಿಗೆ ಸಂಜೀವಿನಿಯಂಥಾ ಕೃತಿ : ಏನೇ ಆಗಲಿ…

– ಡಾ.ಎಸ್.ಬಿ.ಜೋಗುರ

ಏನೂ ಕಳೆದುಕೊಳ್ಳದಿರುವಾಗಲೂ ಎಲ್ಲವೂ ಕಳೆದುಕೊಂಡವರಂತೆ ತಡಕಾಡುವ, ಹುಡುಕಾಡುವ ಸಂದರ್ಭದಲ್ಲಿ ರವಿ ಕೃಷ್ಣಾರೆಡ್ದಿಯವರು ಕೆಂಟ್ ಎಂ. ಕೀತ್ ಎನ್ನುವ ಲೇಖಕರ ಕೃತಿಯನ್ನು “ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ” ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿ ಓದುಗರ ಕೈಗಿಟ್ಟಿರುವದು ಒಂದು ಸದ್ಯದ ಅವಶ್ಯಕತೆಯೇ ಹೌದು. ಅದರಲ್ಲೂ ಸದಾ ಸಿನಿಕರಾಗಿಯೇ ಮಾತನಾಡುವವರಿಗೆ ವ್ಯವಹರಿಸುವವರಿಗೆ ಈ ಕೃತಿ ಒಂದು ಹೊತ್ತಿಗೊದಗಿದ ಸಂಜೀವಿನಿಯಂತೆ ನೆರವಾಗಲಿದೆ. ಹಿಂದೆ ಗುರು ಮುಂದೆ ಗುರಿ ಇಲ್ಲದೇ ತಾವು ನಡೆದದ್ದೇ ದಾರಿ ಎಂದು ಹೆಜ್ಜೆಯೂರುತ್ತಿರುವ ಯುವಕರ ಪಾಲಿಗೆ ಒಂದು ಉತ್ತಮ ಮೆನಿಫ಼ೆಸ್ಟೊ ಥರಾ ಈ ಕೃತಿ ಇದೆ.

ಇಲ್ಲಿರುವ ಪ್ರತಿಯೊಂದು ಕಟ್ಟಳೆಯೂ ತಾಯಿ ತೊಡೆಯ ಮೇಲೆ ಮಲಗಿಸಿಕೊಂಡು ಹೆಳುವ ಕಿವಿ ಮಾತಿನಂತಿವೆ. anyway-partial-coverಅದರಲ್ಲೂ ಆರನೆಯ ಕಟ್ಟಳೆಯಂತೂ ಹುಡುಗಿಯೊಬ್ಬಳು ಮದುವೆಯಾಗಿ ಗಂಡನಮನೆಗೆ ತೆರಳುವಾಗ ತಾಯಿಯಾದವಳು ಆಪ್ತವಾಗಿ ಹೇಳುವಂತಿದೆ. ದೊಡ್ದ ಆಲೋಚನೆಗಳು, ಕನಸುಗಳು ನಮ್ಮನ್ನು ಹೇಗೆ ರೂಪಿಸಬಲ್ಲವು ಎನ್ನುವದನ್ನು ಕೆಲವು ಮಹಾನ್ ಸಾಧಕರ ಕನಸುಗಳು, ತಲುಪಿರುವ ಗುರಿಗಳನ್ನು ಚಿತ್ರರೂಪಕ ಶಕ್ತಿಯ ಹಾಗೆ ಮನಮುಟ್ಟುವಂತೆ ರೆಡ್ದಿಯವರು ಅನುವಾದಿಸಿದ್ದಾರೆ. ನಾವು ಮಾಡುವ ಒಳ್ಳೆಯ ಕೆಲಸಗಳನ್ನು ಜನರು ಮರೆಯುತ್ತಾರೆ ಎಂದು ಯೋಚಿಸಿ ಮಾಡದಿರುವದು ಸರಿಯಲ್ಲ, ನಮ್ಮ ಮನಸಿನ ಆನಂದಕ್ಕಾಗಿಯಾದರೂ ಆ ಕೆಲಸ ನಿರಂತರವಾಗಿರಲಿ ಎನ್ನುವ ವಿಚಾರದ ಶಕ್ತಿ ಮತ್ತು ಸತ್ವದಂತೆಯೇ, ಯಾರೋ ಒಬ್ಬರು ನಮ್ಮನ್ನು ಹೊಗಳಲಿ ಎನ್ನುವ ಕಾರಣಕ್ಕಾಗಿಯೂ ನಾವು ಕೆಲಸ ಮಾಡಬಾರದು, ಹಾಗಾದಾಗ ನಾವು ಹೊಗಳುವವರ ಮರ್ಜಿ ಕಾಯಲು ಕೆಲಸ ಮಾಡಬೇಕಾಗುತ್ತದೆ ಎನ್ನುವ ಸತ್ಯವನ್ನು ಕೂಡಾ ತುಂಬಾ ಸೊಗಸಾಗಿ ಸಾದರಪಡಿಸಲಾಗಿದೆ.

ನನ್ನ ಪ್ರಕಾರ ಈ ಪುಟ್ಟ ಹೊತ್ತಿಗೆ ಸದ್ಯದ ಸಂದರ್ಭದ ಮಾನಸಿಕ ಜಂಜಾಟಗಳಿಗೆ ಮತ್ತು ಬದುಕಿನ ಬಿಕ್ಕಟ್ಟುಗಳಿಗೆ ಪರಿಹಾರದ ರೂಪದಲ್ಲಿ ಮೂಡಿಬಂದಿದೆ. ಮೂಲ ಲೇಖಕ ಕೇಂಟ್ ಎಂ. ಕೀತ್‌ರ ವಿಚಾರಧಾರೆಗಳಿಗೆ ಧಕ್ಕೆ ಬಾರದ ಹಾಗೆ, ನಮ್ಮ ನೆಲದ ಸಂಸ್ಕೃತಿಯ ಭಾಷೆಗೆ ಸಮ್ಮತಿಯಾಗಬಹುದಾದ ರೀತಿಯಲ್ಲಿ, ಓದುಗನಿಗೆ ಗೊಂದಲವಾಗದ ಹಾಗೆ ರೆಡ್ದಿಯವರು ಈ ಕೃತಿಯನ್ನು ಅನುವಾದಿಸಿದ್ದಾರೆ. ಇದೊಂದು ಒಳ್ಳೆಯ ಕೃತಿಯೂ ಹೌದು. ಅನುವಾದಕನ ಒಳ್ಳೆಯ ಕೆಲಸವೂ ಹೌದು.


ಕೃತಿ : “ಏನೇ ಆಗಲಿ ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ”
ಆಂಗ್ಲ ಮೂಲ : ಕೆಂಟ್ ಎಂ. ಕೀತ್
ಕನ್ನಡಕ್ಕೆ: ರವಿ ಕೃಷ್ಣಾ ರೆಡ್ದಿ
ಪ್ರಕಾಶಕರು : ಮೌಲ್ಯಾಗ್ರಹ ಪ್ರಕಾಶನ, ನಂ.400, 23ನೇ ಮುಖ್ಯ ರಸ್ತೆ, ಕುವೆಂಪು ನಗರ ಎರಡನೇ ಹಂತ, ಬೆಂಗಳೂರು – 560076
ಪುಟ :112
ಬೆಲೆ: ರೂ. 75

Leave a Reply

Your email address will not be published. Required fields are marked *