ಮಹೇಶಪ್ಪರಂತಹ “ಕುಲಪತಿ”ಗಳು ತೊಲಗಲಿ…

– ರವಿ ಕೃಷ್ಣಾರೆಡ್ಡಿ

ನಮ್ಮ ಸಾರ್ವಜನಿಕ ಜೀವನದಲ್ಲಿ ಇಂದು ಲಜ್ಜೆ ಮತ್ತು ಸಂಕೋಚಗಳೇ ಇಲ್ಲವಾಗಿವೆ. ವೈಯಕ್ತಿಕವಾಗಿ ಜನ ಲಜ್ಜೆ ಕಳೆದುಕೊಳ್ಳಬಹುದು, ಆದರೆ ಈ ಮಟ್ಟದಲ್ಲಿ ಇಡೀ ಸಮಾಜವೇ ವಿಕೃತ ಸಂವೇದನೆಗಳಿಂದ, ಸಣ್ಣದಷ್ಟೂ ಮಾನ-ಮರ್ಯಾದೆ-ನಾಚಿಕೆಗಳಿಲ್ಲದೇ ವರ್ತಿಸುವುದು ಅಧಮತನ.

ಇತ್ತೀಚೆಗೆ ಕೆಲವು ದಿನಗಳಿಂದ ಕನ್ನಡದ ನ್ಯೂಸ್ ಚಾನಲ್‌ಗಳಲ್ಲಿ “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ”ದ ಜಾಹೀರಾತೊಂದು ಬರುತ್ತಿದೆ. ಸುಮಾರು ಒಂದು-ಒಂದೂವರೆ ನಿಮಿಷದ ಸುದೀರ್ಘ ಜಾಹೀರಾತಿದು. ಮೊದಲಿಗೆ, ಈ “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ” ಜಾಹೀರಾತು ನೀಡುವ ಅಗತ್ಯ ಏನಿದೆ? ಮತ್ತು, ಇದು ಕೊಡುತ್ತಿರುವ ಜಾಹೀರಾತಂತೂ ಅತ್ಯಂತ ಕೀಳುಮಟ್ಟದ್ದಾಗಿದ್ದು, ಒಬ್ಬ ಅಯೋಗ್ಯ, ಕೀಳು ಅಭಿರುಚಿಯ, ಪುಡಾರಿಯೊಬ್ಬ ಕೊಟ್ಟುಕೊಳ್ಳುವ ಸ್ವಯಂಜಾಹೀರಾತಿನಂತಿದೆ.

ಇಡೀ ಜಾಹೀರಾತು ಈ ವಿಶ್ವವಿದ್ಯಾಲಯದ ಕುಲಪತಿಯ ಹೆಸರನ್ನು ಮತ್ತು ಅವರ ಸಾಧನೆಗಳನ್ನು, ಪವಾಡಗಳನ್ನು, ದೈವಾಂಶಸಂಭೂತತ್ವವನ್ನು ರಾಜ್ಯದ ಜನತೆಗೆ ಸಾರಿ ಹೇಳುವ ಅಗತ್ಯದಿಂದ ಕೂಡಿದೆ. “ಮಹೇಶಪ್ಪ” ಎನ್ನುವ ಈ ವಿಶ್ವವಿದ್ಯಾಲಯದ ಕುಲಪತಿಯ ಚಿತ್ರ ಬಂದಾಕ್ಷಣ ಈ ಜಾಹೀರಾತಿನಲ್ಲಿ ಅವರ ಮುಖದ ಹಿಂದೆ ಪ್ರಭೆ ಕಾಣಿಸುತ್ತದೆ; ದೇವರ ಪೋಟೋಗಳ ಹಿಂದೆ ಕಾಣಿಸುವ ಪ್ರಭೆಯಂತೆ. ಮತ್ತು ಇಡೀ ಜಾಹೀರಾತು ಈ ವ್ಯಕ್ತಿಯ ಏಕಮೇವ ತಿಕ್ಕಲು ಪ್ರಚಾರಕ್ಕಾಗಿ ನಿರ್ಮಾಣಗೊಂಡಂತಿದೆ.

ರಾಜ್ಯದ ಅಕಡೆಮಿಕ್ ಮತ್ತು ಶಿಕ್ಷಣ ವಲಯದಲ್ಲಿ ಮಹೇಶಪ್ಪ ನಿಜಕ್ಕೂ ಖ್ಯಾತಿವಂತರು. ಆದರೆ ಅದು ಪ್ರಖ್ಯಾತಿ ಅಲ್ಲ. maheshappaಅವರು ಕುಲಪತಿಗಳಾಗಿ ಆಯ್ಕೆಯಾದಂದಿನಿಂದ ಅವರ ಸ್ವಯಾಂಕೃತಾಪರಾಧಗಳಿಂದಾಗಿ, ಸುಳ್ಳು ಘೋಷಣೆಗಳಿಂದಾಗಿಯೇ ಹೆಚ್ಚು ಪ್ರಸಿದ್ದರಾದವರು. ಈ ವಿಷಯಕ್ಕೆ ಹೆಚ್ಚಿನ ವಿವರಗಳು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಈ ಪುಟದಲ್ಲಿವೆ. ಇಷ್ಟೆಲ್ಲ ಆರೋಪ, ಕುಖ್ಯಾತಿ, ತೆಗಳಿಕೆಗಳು ಮನುಷ್ಯನನ್ನು ಇನ್ನೂ ಭಂಡನನ್ನಾಗಿ, ನಿರ್ಲಜ್ಜನನ್ನಾಗಿ ಮಾಡಿಬಿಡುತ್ತದೆಯೆ?

ಮತ್ತು, ಸಮಾಜವೂ ಇಷ್ಟು ನಿರ್ಲಜ್ಜವೂ, ಸಂವೇದನಾರಹಿತವೂ ಆಗಿಬಿಟ್ಟಿದೆಯೆ? ಬಹುಶಃ ಒಂದು ವಾರದಿಂದ ಬರುತ್ತಿರುವ ಈ ಜಾಹೀರಾತಿನ ಬಗ್ಗೆ ಎಲ್ಲೂ ಸುದ್ದಿಯಿಲ್ಲ. ಒಂದು ವಿಶ್ವವಿದ್ಯಾಲಯ, ಅದೂ ತನ್ನ ಕುಲಪತಿಯ ವೈಯಕ್ತಿಕ ತೆವಲಿಗೋಸ್ಕರ, ಈ ರೀತಿ ಮಾಡುವುದು ಸರಿಯೇ ಎಂದು ಒಂದು ಪತ್ರಿಕೆಯಾಗಲಿ, ರಾಜಕಾರಣಿಯಾಗಲಿ, ಹಾಲಿ ಮತ್ತು ಮಾಜಿ ಅಕಡೆಮೀಷಿಯನ್‌ಗಳಾಗಲಿ ಉಸಿರೆತ್ತಿದ ಸುದ್ದಿಯೇ ಇಲ್ಲ.

ಇಂದು ವಿಶ್ವವಿದ್ಯಾಲಯಗಳ ಕುಲಪತಿಗಳ ಹುದ್ದೆ ಸಂಪೂರ್ಣವಾಗಿ ರಾಜಕೀಯ ನೇಮಕಾತಿಗಳಾಗಿಬಿಟ್ಟಿವೆ. ಯಾವ ಮನುಷ್ಯನಿಗೆ ಜಾತಿ ಮತ್ತು ಹಣದ ಪ್ರಭಾವ ಇದೆಯೋ ಆತ ಮಾತ್ರ ಇಂದು ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಯಾಗಬಲ್ಲ. ಇದು ನಮ್ಮ ವಿಶ್ವವಿದ್ಯಾಲಯಗಳನ್ನು ಕೀಳು ಮಟ್ಟದ, ಭ್ರಷ್ಟಾಚಾರದಿಂದ ಕೂಡಿದ, ಯಾವುದೇ ರೀತಿಯ ಶೈಕ್ಷಣಿಕ-ಜ್ಞಾನದ ಕೊಡುಗೆಗಳಿಲ್ಲದ, ರಾಜಕಾರಣಿಗಳ ಮತ್ತು ಭ್ರಷ್ಟ ಅಧಿಕಾರಿಗಳ ಕುಟಿಲ ಕಾರಸ್ಥಾನಗಳನ್ನಾಗಿ ಪರಿವರ್ತಿಸಿವೆ.

ನಿಮಗೆ ನೆನಪಿರಬಹುದು; ಕಳೆದ ಶುಕ್ರವಾರ ನಮ್ಮಲ್ಲಿ ““ದೊಡ್ಡವರು” ಎಂಬ ಕುಲದೈವ!” ಲೇಖನ ಪ್ರಕಟವಾಗಿತ್ತು. ಅಂದು ರಾಜ್ಯದ ಹಲವು ಪತ್ರಿಕೆಗಳಲ್ಲಿ “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ”ದ ಪರೀಕ್ಷೆಗಳಲ್ಲಿ ನಡೆಯುವ “ಮುಕ್ತ ನಕಲು” ಬಗ್ಗೆ ಫೋಟೋ ಸಮೇತ ವರದಿಗಳು ಪ್ರಕಟವಾಗಿದ್ದವು. KSOU_OpenCopying_Jan1113ಅದರ ಹಿಂದಿನ ದಿನ ಅದೇ ಪರೀಕ್ಷೆಗಳ ಬಗ್ಗೆ ಕೆಲವು ಟಿವಿ ಮಾಧ್ಯಮಗಳಲ್ಲಿ “ಕುಟುಕು ಕಾರ್ಯಾಚರಣೆ”ಯ ವರದಿಗಳೂ ಪ್ರಸಾರವಾಗಿದ್ದವು. ತಮ್ಮ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಇಂತಹ “ಪ್ರಬುದ್ಧ ಮತ್ತು ಉನ್ನತಮಟ್ಟದ ಶಿಕ್ಷಣ”ಕ್ಕಾಗಿ ಅದರ ಕುಲಪತಿಗಳನ್ನು ಬೆಂಗಳೂರಿಗೇ ಕರೆಸಿಕೊಂಡ ರಾಜ್ಯದ ರಾಜ್ಯಪಾಲ, ಈ ಕುಲಪತಿಗಳನ್ನು ಇನ್ನೂ ದೊಡ್ದದಾದ, ಹಲವು ಪಟ್ಟು ಯೋಜನೆಗಳ, ನೂರಾರು-ಸಾವಿರಾರು ಶಿಕ್ಷಕರ ನೇಮಕಾತಿ ಬೇಡುವ “ಮೈಸೂರು ವಿಶ್ವವಿದ್ಯಾಲಯ”ದ ಕುಲಪತಿಗಳನ್ನಾಗಿ ನೇಮಿಸಿ ಆದೇಶ ಪತ್ರ ಕೊಟ್ಟು ಕಳುಹಿಸಿಕೊಟ್ಟರು. ನಿಮಗೆ ಗೊತ್ತಿರಲಿ, ಇದಕ್ಕಿಂತ ಒಳ್ಳೆಯ ಮುಂಭಡ್ತಿ ಇವತ್ತಿನಂತಹ ನೀಚ ಸಂದರ್ಭದಲ್ಲಿಯೂ ಸಾಧ್ಯವಿಲ್ಲ.

ಇವೆಲ್ಲದಕ್ಕಿಂತ ನಾಚಿಕೆ ಪಡಬಹುದಾದ ಸಂಗತಿ ನಡೆದದ್ದು ಅಂದು ಸಂಜೆ. ಬೆಂಗಳೂರಿನಿಂದ ನೇಮಕಾತಿ ಹಿಡಿದು ವಾಪಸಾದ ನಿಯುಕ್ತ ಕುಲಪತಿಗಳು ಅಂದೇ ಸಂಜೆ ಆತುರಾತುರದಲ್ಲಿ ಅಧಿಕಾರ ವಹಿಸಿಕೊಂಡೂ ಬಿಟ್ಟರು. ಆದು ಘಟಿಸುತ್ತಿದ್ದಂತೆ ರಾಜ್ಯದ ಶೈಕ್ಷಣಿಕ ವಲಯದಲ್ಲಿ ಅಲ್ಲಿಯವರೆಗೂ ಘಟಿಸದ್ದೇ ಇದ್ದದ್ದು ಆಗ ನಡೆಯಿತು. ಅದು ಪಟಾಕಿ ಸದ್ದು. ಒಳಗೆ ಕುಲಪತಿಗಳು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್‌ನ ಹೊರಗೆ ಹೊಸ ಕುಲಪತಿಗಳ ಅಭಿಮಾನಿಗಳು, ಚೇಲಾಗಳು, ಬಹುಶಃ ಅವರಿಂದ ಲಾಭ ಮಾಡಿಕೊಂಡ ಅಥವ ಲಾಭ ಮಾಡಿಕೊಳ್ಳಲಿರುವ ಭ್ರಷ್ಟರು, ಚುನಾವಣೆಯೊಂದರಲ್ಲಿ ಗೆದ್ದ ಪುಡಾರಿಯ ಹಿಂಬಾಲಕರು ಮಾಡುವಂತೆ ಪಟಾಕಿ ಸಿಡಿಸಿ ಸಂಭ್ರಮೋತ್ಸವ ಆಚರಿಸಿದರು.

ಈ ವಿಷಯ ಮಾರನೆ ದಿನದ ಪತ್ರಿಕೆಗಳಲ್ಲಿ ಬಂತು. ಅಂದು ಏನಾದರೂ ಮೈಸೂರಿನ ಬರಹಗಾರರ, ಅಧ್ಯಾಪಕರ, ಪ್ರಜ್ಞಾವಂತರ ಮನಸ್ಸು ಅಸಹನೆ ಮತ್ತು ಸಂಕೋಚದಿಂದ ಮಿಡುಕಿಲ್ಲ ಎಂದಾದರೆ ಮೈಸೂರಿನ ಸಾಕ್ಷಿಪ್ರಜ್ಞೆ ಸತ್ತಿದೆ ಎಂದರ್ಥ. ಮತ್ತು, ರಾಜ್ಯದ್ದೂ.

ಮೊದಲೇ ಪ್ರಸ್ತಾಪಿಸಿದ ಹಾಗೆ, ನಮ್ಮ ರಾಜ್ಯದ ಯಾವ ವಿಶ್ವವಿದ್ಯಾಲಯದ ಕುಲಪತಿಗಳೂ ಇಂದು ಹಣ ಅಥವ ಜಾತಿಯ ಪ್ರಭಾವ ಇಲ್ಲದೆ ಆಯ್ಕೆಯಾಗುತ್ತಿಲ್ಲ. ಮತ್ತು ಅದೇ ಆ ಹುದ್ದೆಗೆ ಬೇಕಾದ ಮಾನದಂಡ ಎಂದು ನಮ್ಮ ನೀಚ ಆಡಳಿತಗಾರರು ಕಾನೂನು ಬದಲಾಯಿಸಿಬಿಟ್ಟಿದ್ದಾರೆ. ಹಿರಿಯ ಅಧ್ಯಾಪಕನೊಬ್ಬ ಸರ್ಕಾರಿ ಅಧ್ಯಾಪಕನ ಕೆಲಸ ಕೊಡಿಸುವುದಾಗಿ ಒಬ್ಬನ ಹತ್ತಿರ ಕಮಿಟ್ ಆಗಿಬಿಟ್ಟಿದ್ದಾನೆ. ಅಭ್ಯರ್ಥಿ ತನ್ನ ಸಂದರ್ಶನಕ್ಕೆ ತನ್ನ ಪ್ರಕಟಿತ ಸಂಶೋಧನೆಗಳನ್ನೊ, ಶೈಕ್ಷಣಿಕ ವರದಿಗಳನ್ನೋ ಒಯ್ಯಬೇಕಾಗಿರುತ್ತದೆ. ಆತನ ಬಳಿ ಅಂತಹವು ಯಾವುದೂ ಇಲ್ಲ. ಆದರೆ ಆತ ಪತ್ರಿಕೆಯೊಂದರ ವರದಿಗಾರ. ತನ್ನ ಪತ್ರಿಕಾ ವರದಿಗಳನ್ನೇ/ಸುದ್ದಿಗಳನ್ನೇ ಒಯ್ದಿರುತ್ತಾನೆ. ಈ ಹಿರಿಯ ಅಧ್ಯಾಪಕ ಹೇಗಾದರೂ ಮಾಡಿ ಈತನಿಗೆ ಕೆಲಸ ಕೊಡಿಸಬೇಕು. ಈ ಪತ್ರಿಕಾ ವರದಿಗಳನ್ನೇ ಶೈಕ್ಷಣಿಕ ವರದಿಗಳೆಂದು ಪರಿಗಣಿಸಿ ಆತನನ್ನು ಆಯ್ಕೆ ಮಾಡಿ ಎಂದು ಆಯ್ಕೆ ಸಮಿತಿಯ ಮೇಲೆ ಒತ್ತಡ ತರುತ್ತಾನೆ. ಇಂದು ಅದೇ ಹಿರಿಯ ಅಧ್ಯಾಪಕ ನೂರಾರು ಕೋಟಿ ರೂಗಳ ಕೆಲಸಗಳು ನಡೆಯುತ್ತಿರುವ, ನೂರಾರು ಸಿಬ್ಬಂದಿಯನ್ನು, ಅಧ್ಯಾಪಕರನ್ನು, ನೇಮಿಸಿಕೊಳ್ಳುತ್ತಿರುವ ವಿಶ್ವವಿದ್ಯಾಲಯದ ಕುಲಪತಿ. ಹಾಗೆಂದು ನೀವು ಆ ವ್ಯಕ್ತಿ ರಾಜ್ಯದ ಬಲಿಷ್ಟ ಜಾತಿಗೆ ಸೇರಿದವರು ಎಂದುಕೊಳ್ಳಬೇಡಿ. ಮೀಸಲಾತಿ ಸೌಲಭ್ಯ ದೊರೆಯದ ಸಮುದಾಯದಿಂದ ಬಂದವರವರು.

ಮತ್ತು ಈಗಿನ ಸರ್ಕಾರವಂತೂ ಹಿಂದಿನ ಎಲ್ಲಾ ಸರ್ಕಾರಗಳಿಗಿಂತ ಹೆಚ್ಚು ಲಂಪಟರಿಂದ ಕೂಡಿದೆ. ನೇಮಕಾತಿಗಳಲ್ಲಿ, ಹಂಗಾಮಿ ನೌಕರರನ್ನು ಕಾಯಂ ಗೊಳಿಸುವುದರಲ್ಲಿ, ವರ್ಗಾವಣೆಗಳಲ್ಲಿ, ಆಡಳಿತದ ಪ್ರತಿಯೊಂದು ವ್ಯವಸ್ಥೆಯಲ್ಲಿಯೂ ಹಪ್ತಾ ವಸೂಲು ಮಾಡಲು ಟೇಬಲ್ ಹಾಕಿಕೊಂಡು ಕುಳಿತಿದೆ. (ಮಂತ್ರಿಗಳು ಕೇಳುವ “ಮಾಮೂಲಿ” ಕೊಡಲಾಗದೆ ಸಭ್ಯರೊಬ್ಬರು ತಮ್ಮ ಕುಲಪತಿ ಅಧಿಕಾರಾವಧಿ ಇನ್ನೂ ಇರುವಾಗಲೇ ರಾಜೀನಾಮೆ ಕೊಟ್ಟು ಹೋದ ಉದಾಹರಣೆಯೂ ಒಂದಿದೆಯಂತೆ.)  ಕೆಲವರು ಹೇಳುವ ಪ್ರಕಾರ ರಾಜ್ಯದ ಅತ್ಯುನ್ನತ ಸಂವಿಧಾನಿಕ ಸ್ಥಾನದಲ್ಲಿ ಇರುವವರೂ ಹೀಗೆ ಬಟ್ಟೆ ಹರಡಿಕೊಂಡು ಕುಳಿತಿದ್ದಾರೆ. ಅದು ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿ ಮತ್ತು ಮುಂದುವರಿಕೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಮತ್ತು ಎಲ್ಲಾ ಭ್ರಷ್ಟರೂ ಒಂದಾಗಿ ತಮಗೆ ಅನುಕೂಲವಾಗುವ ಹಾಗೆ ಆದೇಶಗಳನ್ನು ಹೊರಡಿಸುವ, ಸುಗ್ರೀವಾಜ್ಞೆಗಳನ್ನು ತರುವ ಆತುರವನ್ನೂ ತೋರಿಸುತ್ತಿದ್ದಾರೆ. ರಾಜ್ಯದ ಹಲವು ಮಾನ್ಯ, ಘನತೆವೆತ್ತ ಕುಲಪತಿಗಳಿಗೆ ಅನುಕೂಲ ಮಾಡಿಕೊಡುವುದು ಇಂತಹ ಸುಗ್ರೀವಾಜ್ಞೆಯೊಂದರ ಹಿಂದಿರುವ ಹುನ್ನಾರ ಎಂದು ಪ್ರಜಾವಾಣಿಯ ಇಂದಿನ ಈ ವರದಿ ಹೇಳುತ್ತದೆ.

ನಮ್ಮಲ್ಲಿಯ ನೈತಿಕ ಅಧಃಪತನಕ್ಕೆ ಜಾತಿ, ಲಿಂಗ, ವಯಸ್ಸು, ಶಿಕ್ಷಣ, ಪ್ರದೇಶವಾರು ಭೇದಗಳಿಲ್ಲ.

ಹೀಗಿರುವಾಗ, ಇವುಗಳಿಗೆ ತಡೆ ಒಡ್ಡುವುದು ಹೇಗೆ? ಸುಮ್ಮನಿರುವುದಾದರೂ ಹೇಗೆ?

(ಚಿತ್ರಕೃಪೆ: ಡೆಕ್ಕನ್ ಹೆರಾಲ್ಡ್, ದಿ ಹಿಂದು.)

1 thought on “ಮಹೇಶಪ್ಪರಂತಹ “ಕುಲಪತಿ”ಗಳು ತೊಲಗಲಿ…

 1. vasanthn

  ಸಾರ್,

  ಮೈಸೂರಿ ಇಂದು ಪ್ರೊ. ರಾಮದಾಸ್ ಇಲ್ಲದೇ ಬಡವಾಗಿದೆ. ಇಲ್ಲಿನ ವಿಶ್ವ ವಿದ್ಯಾಲಯದ ಅಧ್ಯಾಪಕರಂತು ಅನ್ಯಾಯಗಳ ವಿರುದ್ಧ ಮೌನವಹಿಸಿದ್ದಾರೆ. ಅವರಿಗೆ ತಿಂಗಳ ಸಂಬಳ ಮುಖ್ಯವಾಗಿದೆ. ಸರಿ-ತಪ್ಪುಗಳ ವಿವೇಚನೆಗಳನ್ನು ಮರೆತಿದ್ದಾರೆ.

  ಕೆ.ಎಸ್. ರಂಗಪ್ಪರ ಕೃತಿ ಚೌಯ೵ದ ಕರಾಮತ್ತು ಈ ಕೆಳಗಿದೆ ನೋಡಿ:

  ಕೃತಿಚೌರ್ಯ ಮಾಡಿದವರು ಮೈಸೂರು ವಿವಿಯ ಕುಲಪತಿಯಾಗಿ ಆಯ್ಕೆ!

  ಮೈಸೂರು ವಿಶ್ವವಿದ್ಯಾಲಯ ದೇಶದ ಹಳೆಯ ಮತ್ತು ಪ್ರತಿಷ್ಟಿತ ವಿಶ್ವವಿದ್ಯಾಲಯಗಳಲ್ಲೊಂದು. ಮೈಸೂರು ವಿಶ್ವವಿದ್ಯಾಲಯಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಕೂಡ ಒಳ್ಳೆಯ ಹೆಸರಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುಮಾಡಿದ ಅನೇಕ ವಿಜ್ಞಾನಿಗಳು ಈ ವಿಶ್ವವಿದ್ಯಾಲಯದಲ್ಲಿ ಓದಿದ ಚರಿತ್ರೆ ಇದೆ. ಹಾಗೇ ನಾಡಿಗೆ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಈ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯನ್ನು ಅಲಂಕರಿಸಿದ್ದವರು ಆ ಮೂಲಕ ಕುಲಪತಿ ಹುದ್ದೆಗೆ ಒಂದು ಘನತೆಯನ್ನು ತಂದವರು.
  ಶೈಕ್ಷಣಿಕ ಮತ್ತು ಸಂಶೋಧನ ಕ್ಷೇತ್ರದಲ್ಲಿ ಕೃತಿಚೌರ್ಯ ಘೋರ ಅಪರಾಧ. ಮತ್ತೊಬ್ಬರು ಶ್ರಮವಹಿಸಿ ಮಾಡಿದ ಸಂಶೋಧನೆಯ ಪ್ರಕಟಣೆಗಳನ್ನು ಕದ್ದು ಅಥವಾ ಯಥಾವತ್ತು ನಕಲು ಮಾಡಿ ತಮ್ಮ ಹೆಸರಿನಲ್ಲಿ ಪ್ರಕಟಣೆ ಮಾಡುವ ಕೃತಿಚೌರ್ಯದಂತಹ ಕೆಲಸಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ತೀವ್ರ ವಿರೋಧವಿದೆ ಮತ್ತು ತಕ್ಕ ಶಿಕ್ಷೆಯು ಉಂಟು. ಅದರಲ್ಲೂ ಮುಕ್ತ ಅರ್ಥ ವ್ಯವಸ್ಥೆಯ ಈ ಯುಗದಲ್ಲಿ ಬೌಧಿಕ ಸ್ವತ್ತಿನ ರಕ್ಷಣೆ ತುಂಬಾ ಮಹತ್ವಪಡೆದಿವೆ.

  ಅದರೆ ಇಂದು ಕೃತಿಚೌರ್ಯದಂತಹ ಗಂಭೀರ ತಪ್ಪು ಮಾಡಿರುವ ಪ್ರೊ. ಕೆ.ಎಸ್. ರಂಗಪ್ಪನಂತವರನ್ನು ವಿಶ್ವವಿದ್ಯಾಲಯದ ಕುಲಪತಿಯಾಗಿ ಆಯ್ಕೆಮಾಡಿರುವುದು, ಮೈಸೂರು ವಿಶ್ವವಿದ್ಯಾಲಯದ ಘನತೆಗೆ ಕುಂದುತರುವಂತಹ ಕೆಲಸ.

  2009ರಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯದ ರಾಸಾಯನ ಶಾಸ್ತ್ರದ ಪ್ರಾಧ್ಯಾಪಕರುಗಳಾದ ವಿಜಯಲಕ್ಷ್ಮಿ, ಆದ್ಯನಾರಾಯಣ ಮತ್ತು ಜೈಪ್ರಕಾಶರಾವ್ ಎಂಬವರು ಸಂಶೋಧಿಸಿ Indian Journal of Biochemistry & Biophysics ಎಂಬ ನಿಯತಕಾಲಿಕೆಯ ಸಂಪುಟ 46ರ ಸಂಚಿಕೆಯಲ್ಲಿ ““Kinetics of oxidation of adenosine by tert-butoxyl radicals: Protection and repair of chlorogenic acid” ಎಂಬ ಲೇಖನವನ್ನು ಪ್ರಕಟಿಸಿದ್ದರು. ಇದರ ಪೂರ್ಣಪ್ರತಿ ಈ ವೆಬ್ ವಿಳಾಸದಲ್ಲಿ ಲಭ್ಯ: http://nopr.niscair.res.in/bitstream/123456789/6297/1/IJBB%2046%285%29%20389-394.pdf

  ವಿಜಯಲಕ್ಷ್ಮಿ, ಆದ್ಯನಾರಾಯಣ ಮತ್ತು ಜೈಪ್ರಕಾಶರಾವ್‍ರವರ ಲೇಖನವನ್ನು ಯಾವುದೇ ಬದಲಾವಣೆ ಇಲ್ಲದೇ, ಲೇಖನದ ಶೀರ್ಷಿಕೆಯು ಸೇರಿದಂತೆ ಕೆ. ಎಸ್. ರಂಗಪ್ಪನವರು, ಇತರರು ಅಂದರೆ ಎಂ. ಎನ್. ಕುಮಾರ್ ಮತ್ತು ಭದ್ರೇಗೌಡ ಎಂಬವರ ಜೊತೆಗೂಡಿ ಅಂತರರಾಷ್ಟ್ರೀಯ ಪ್ರಕಾಶಕರಾದ ಜಾನ್ ಅಂಡ್ ವೈಲ್ಲಿ ಪ್ರಕಟಿಸುವ Journal of Physical Organic Chemistryಯಲ್ಲಿ ಪ್ರಕಟಿಸಿದ್ದರು.

  ಇದನ್ನು ನೋಡಿದ ಮೂಲ ಲೇಖಕರು Journal of Physical Organic Chemistry ನಿಯತಕಾಲಿಕೆಯ ಸಂಪಾದಕರಿಗೆ ಪತ್ರ ಬರೆದು ಈ ಲೇಖನವನ್ನು ಮಾನ್ಯ ರಂಗಪ್ಪ ಮತ್ತು ಇತರರು ಕೃತಿಚೌರ್ಯಮಾಡಿರುವುದನ್ನು ಗಮನಕ್ಕೆ ತಂದು ಅದು ದೃಢಪಟ್ಟ ಹಿನ್ನಲೆಯಲ್ಲಿ ಈ ಲೇಖನವನ್ನು ಪ್ರಕಟಿಸಿದ Journal of Physical Organic Chemistry ಈ ಲೇಖನವನ್ನು ತನ್ನ ನಿಯತಕಾಲಿಕೆಯಿಂದ ತೆÀಗೆದುಹಾಕಿದೆ. ಈ ಲೇಖನವನ್ನು ತೆಗೆದುಹಾಕಿರುವ ಬಗ್ಗೆ ಈ ವೆಬ್ ವಿಳಾಸದಲ್ಲಿ ಮಾಹಿತಿ ಲಭ್ಯ: http://onlinelibrary.wiley.com/doi/10.1002/poc.1683/abstract

  ಮಾನ್ಯ ಕೆ.ಎಸ್.ರಂಗಪ್ಪರವರ ಈ ಘನ ಕೆಲಸದ ಬಗ್ಗೆ ಮೂಲ ಲೇಖನದ ಲೇಖಕರು ಯುಜಿಸಿಯ ಮುಖ್ಯಸ್ಥರಿಗೆ, ಮಾನ್ಯ ಕರ್ನಾಟಕದ ರಾಜ್ಯಪಾಲರಿಗೆ ಮತ್ತು ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಿಗೆ 2011ರಲ್ಲಿ ಪತ್ರ ಬರೆದು ಇವರ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅದರೆ ಈ ಯಾವ ಸಂಸ್ಥೆಗಳು ಈ ಬಗ್ಗೆ ಯಾವ ಕ್ರಮ ತೆಗೆದುಕೊಂಡಿಲ್ಲ. ಬದಲಾಗಿ ಮಾನ್ಯ ರಾಜ್ಯಪಾಲರು ಕೆ.ಎಸ್. ರಂಗಪ್ಪನವರಿಗೆ ಎರಡು ವಿಶ್ವವಿದ್ಯಾಲಯದ ಕುಲಪತಿಗಳಾಗುವ ಭಾಗ್ಯ ಕಲ್ಪಿಸಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನಿನ ಸಚಿವರಾಗಿದ್ದ ಮಾನ್ಯ ರಾಜ್ಯಪಾಲರಿಗೆ ಕೃತಿಚೌರ್ಯzಂತಹ ಅಪರಾಧ ಕ್ರಿಮಿನಲ್ ಪ್ರಕರಣದ ವ್ಯಾಪ್ತಿಗೆ ಬರುವಂತಹದು ಎಂದು ಯಾರು ಹೇಳಿಕೊಡ ಬೇಕಾಗಿಲ್ಲ.

  ಬೇರೆ ದೇಶಗಳಲ್ಲಿ ಕೃತಿಚೌರ್ಯದಂತಹ ಆರೋಪ ಎದುರಿಸಿದ್ದಾರೆ, ಅಂತಹ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಂದ ರಾಜೀನಾಮೆ ಪಡೆದು ಅವರನ್ನು ಮನೆಗೆ ಕಳುಹಿಸುತ್ತಿದ್ದರು ಇದರೆ ಇಲ್ಲಿ ಬಡ್ತಿ ಮೇಲೆ ಬಡ್ತಿ. ಇನ್ನೂ ಮೈಸೂರು ವಿಶ್ವವಿದ್ಯಾಲಯದ ಸಂಶೋಧನೆಯ ಗುಣಮಟ್ಟವನ್ನು ನೀವೇ ಊಹಿಸಿ.

  Reply

Leave a Reply to vasanthn Cancel reply

Your email address will not be published.