“ಮಲೆನಾಡ ಗಾಂಧಿ”ಯೊಡನೆಯ ಭೇಟಿ ಹುಟ್ಟಿಸಿದ ಪ್ರಶ್ನೆಗಳು, ಹೆಚ್ಚಿಸಿದ ಭರವಸೆಗಳು..

– ರವಿ ಕೃಷ್ಣಾರೆಡ್ಡಿ

ಮೊನ್ನೆ ಸೋಮವಾರ, ಸಂಕ್ರಾಂತಿಯಂದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪಕ್ಕೆ ಹೋಗಿದ್ದೆ. ಕೊಪ್ಪದಲ್ಲಿ ವಕೀಲರಾಗಿರುವ ಗೆಳೆಯ ಸುಧೀರ್ ಕುಮಾರ್ ಮುರೊಳ್ಳಿಯವರೊಡನೆ ಅಲ್ಲಿಯ ಮಾಜಿ ಶಾಸಕ ಮತ್ತು ಕರ್ನಾಟಕದ ಮಾಜಿ ಸಚಿವ, ನಿವೃತ್ತ ರಾಜಕಾರಣಿ ಹೆಚ್.ಜಿ.ಗೋವಿಂದ ಗೌಡರನ್ನು ಭೇಟಿಯಾಗಿದ್ದೆ. ನನ್ನೊಡನೆ ಇದ್ದ ಇನ್ನೊಬ್ಬ ಗೆಳೆಯ ಸತೀಶ್, ಗೌಡರನ್ನು ಸಂದರ್ಶನ ಮಾಡಿದರು.

ರಾಜ್ಯದ ಇನ್ನೊಬ್ಬ ದೇಶಪ್ರಸಿದ್ಧ ಗೌಡರು ನಮಗೆಲ್ಲಾ ಗೊತ್ತು. ಇತ್ತೀಚೆಗೆ ಅವರು ಮಾತನಾಡುತ್ತ, ಪಕ್ಕದ ರಾಜ್ಯದ ಕರುಣಾನಿಧಿಯವರಿಗೊದಗಿರುವ ಕೌಟುಂಬಿಕ ವಿಷಮ ಪರಿಸ್ಥಿತಿಯನ್ನು ತಾನು ತನ್ನ ಇಳಿಕಾಲದಲ್ಲಿ ನೊಡಲು ಇಚ್ಚಿಸುವುದಿಲ್ಲ ಎಂತಲೊ, ಹಾಗಾಗಲು ಬಿಡುವುದಿಲ್ಲ ಎಂತಲೋ ಅಂದಿದ್ದರು. ಅದು ಅವರ ಮತ್ತೊಬ್ಬ ಸೊಸೆ ರಾಜಕೀಯಕ್ಕೆ ಬರುವ ವಿಷಯಕ್ಕೆ ಮತ್ತು ಅವರ ಕುಟುಂಬದಲ್ಲಿ ನಡೆಯುತ್ತಿರುವ ಮೇಲಾಟಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು ಉತ್ತರಿಸಿದ ರೀತಿ.

“ಮಲೆನಾಡ ಗಾಂಧಿ” ಎಂದೇ ಗುರುತಿಸಲಾಗುವ ಕೊಪ್ಪದ ಗೋವಿಂದ ಗೌಡರು ರಾಜಕೀಯ ನಿವೃತ್ತಿ ಘೋಷಿಸಿ ಸುಮಾರು 13 ವರ್ಷವಾಯಿತು. govindagowdaಅವರು ಜನತಾ ದಳದ ಸರ್ಕಾರದಲ್ಲಿ ಸಚಿವರಾಗಿದ್ದಾಗಲೇ, ಅಂದರೆ 1999 ರಲ್ಲಿ ನಡೆದ ರಾಜಕೀಯ ಕಚ್ಚಾಟಗಳನ್ನು ನೋಡಿ, ಇದು ತಮಗೆ ತರವಲ್ಲ ಎಂದು ಮತ್ತೊಮ್ಮೆ ಚುನಾವಣೆಗೆ ನಿಲ್ಲಲಿಲ್ಲ. ಆಗ ಅವರಿಗೆ ಬಹುಶಃ 73 ವರ್ಷವಾಗಿತ್ತೇನೊ. ಈಗ ಅವರಿಗೆ 87; ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ 88 ತುಂಬುತ್ತದೆ. ಆರೋಗ್ಯವಾಗಿದ್ದಾರೆ. ಈಗಲೂ ಪತ್ರಿಕೆ-ಪುಸ್ತಕಗಳನ್ನು ಓದುತ್ತಾರೆ. ಅವರ ಶ್ರೀಮತಿಯವರಾದ ಶಾಂತಕ್ಕನವರಿಗೆ 82 ಇರಬಹುದು. ಬಹಳ ಹಸನ್ಮುಖದ ಅವರೂ ಆರೋಗ್ಯದಿಂದಿದ್ದಾರೆ. ತಮ್ಮ ಮತ್ತು ತಮ್ಮ ಪತಿಯ ಬಟ್ಟೆಗಳನ್ನು ಅವರೇ ಒಗೆಯುತ್ತಾರೆ.

ಬಹುಶಃ ಅರವತ್ತು-ಎಪ್ಪತ್ತು ದಾಟಿದ ಕರ್ನಾಟಕದ ಯಾವೊಬ್ಬ ಮಾಜಿ ಸಚಿವನೂ ಗೋವಿಂದ ಗೌಡರಷ್ಟು ನೆಮ್ಮದಿಯ, ಸಂತೋಷದ, ಮತ್ತು ವೈಯಕ್ತಿಕ ವಿಷಾದಗಳಿಲ್ಲದ ಜೀವನ ನಡೆಸುತ್ತಿರುವುದು ಸಂದೇಹ. ಇಂತಹ ಮುಪ್ಪಿನ ಜೀವನ ಗಳಿಸಿಕೊಳ್ಳಲಾಗದೆ ಏನೆಲ್ಲಾ ಸಾಧಿಸಿದರೂ ಏನು ಪ್ರಯೋಜನ?

ಇತ್ತೀಚಿನ ಯುವಕರಿಗೆ ಗೋವಿಂದ ಗೌಡರ ಪರಿಚಯ ಇಲ್ಲದಿರಬಹುದು. ಆದರೆ, 1996 ರ ನಂತರದಲ್ಲಿ ಸರ್ಕಾರಿ ಶಾಲೆಗಳ ಅಧ್ಯಾಪಕರಾಗಿ ನೇಮಕಗೊಂಡ ಪ್ರತಿಯೊಬ್ಬ ಅಧ್ಯಾಪಕನಿಗೂ ಗೋವಿಂದ ಗೌಡರ ಹೆಸರು ಗೊತ್ತಿರಲೇಬೇಕು. ಸರಿಯಾಗಿ ಒಂದು ಲಕ್ಷ ಐದು ಸಾವಿರ ಅಧ್ಯಾಪಕರು (1,05,000) ಯಾವುದೇ ಸಂದರ್ಶನಗಳಿಲ್ಲದೆ, ಲಂಚ ಕೊಡದೆ, ವಶೀಲಿ-ಪ್ರಭಾವಗಳನ್ನು ಬಳಸದೆ, ಅತ್ಯಂತ ಪಾರದರ್ಶಕವಾಗಿ ತಮ್ಮ ಅಂಕಪಟ್ಟಿಗಳ ಆಧಾರದ ಮೇಲೆ ಸರ್ಕಾರಿ ಅಧ್ಯಾಪಕರಾಗಿ ನೇಮಕಗೊಂಡರು. ಅದನ್ನು ಮಾಡಿದ್ದು ಆಗಿನ ಶಿಕ್ಷಣ ಸಚಿವರಾಗಿದ್ದ ಹೆಚ್.ಜಿ.ಗೋವಿಂದ ಗೌಡರು. ಆಗ ಅವರಿಗೆ ನೆರವಾದವರು ರಾಜ್ಯದ ಐಎ‌ಎಸ್ ಅಧಿಕಾರಿಗಳಾದ ಎಸ್.ವಿ.ರಂಗನಾಥ್ (ಈಗಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು) ಮತ್ತು ಹರೀಶ್‌ ಗೌಡ.

ಗೋವಿಂದ ಗೌಡರು ಮಾತನಾಡುತ್ತ ಹೇಳಿದ್ದು, ಸಂದರ್ಶನಗಳ ಮೂಲಕ ನೇಮಿಸುವ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವನ್ನು ಮನಗಂಡೇ ತಾನು ಸಂದರ್ಶನ-ರಹಿತ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು. ಸಚಿವರೂ ಒಳ್ಳೆಯವರಿದ್ದರು. ತಮ್ಮ ಕೈಕೆಳಗಿನ ಅಧಿಕಾರಿಗಳೂ ಒಳ್ಳೆಯವರಿರುವಂತೆ ನೋಡಿಕೊಂಡರು. ಯಾವುದೋ ಒಂದು ಗತಕಾಲದ ಸಂದರ್ಭದಲ್ಲಾದರೂ (ಹದಿನೈದು ವರ್ಷಗಳ ಹಿಂದೆ) ಕರ್ನಾಟಕದಲ್ಲಿ ಭ್ರಷ್ಟತೆಯ ಯಾವೊಂದು ಕುರುಹುಗಳೂ ಇಲ್ಲದೆ ಸರ್ಕಾರಿ ನೇಮಕಾತಿಗಳಾದವು.

ನಿಮಗೆ ಗೊತ್ತಿರಲಿ, ಸರ್ಕಾರಿ ಕೆಲಸಗಳಿಗೆಂದು ನಡೆಸುವ ಸಂದರ್ಶನಗಳಷ್ಟು ಶುದ್ದ ಮೋಸದ, ಅಕ್ರಮದ, ಭ್ರಷ್ಟಾಚಾರದ ವ್ಯವಸ್ಥೆ ಇನ್ನೊಂದಿಲ್ಲ. ಅಪಾಯಕಾರಿ ಹುಚ್ಚುನಾಯಿಗಳೆಲ್ಲ ಈ ಸಂದರ್ಶನದ ಪ್ಯಾನೆಲ್‌ಗಳಲ್ಲಿ ಇರುತ್ತಾರೆ. ಕೆಪಿಎಸ್‌ಸಿ ನೇಮಕಾತಿಯಲ್ಲಿ ನಡೆಯುವಷ್ಟು ಭ್ರಷ್ಟತೆಗೆ ಹೋಲಿಕೆಗಳೇ ಇಲ್ಲವೇನೋ. ಪ್ರತಿಯೊಬ್ಬ ಜಾತಿಯ ಪ್ರಭಾವಿ ಮುಖಂಡನೂ ತಮ್ಮ ಜಾತಿಯವನೊಬ್ಬ ಕೆಪಿಎಸ್‍ಸಿ ಸದಸ್ಯನಾಗಬೇಕೆಂದು ಬಯಸುತ್ತಾರೆ ಮತ್ತು ಅದು ದುಡ್ಡು ಮಾಡಲೆಂದೇ ಇರುವ ಸದಸ್ಯತ್ವ. ರಾಜ್ಯದ ಯಾವೊಬ್ಬ ಘನತೆವೆತ್ತ ಅಧಿಕಾರಸ್ಥ ರಾಜಕೀಯ ಮುಖಂಡನೂ ಈ ಕ್ರಮವನ್ನು ಬದಲಿಸಲು ಹೋಗಿಲ್ಲ.

ನನಗೆ ಇತ್ತೀಚೆಗೆ ಗೊತ್ತಾದ ಈ ಉದಾಹರಣೆಯ ಮೂಲಕ ಕೆಪಿಎಸ್‌ಸಿಯಲ್ಲಿ ನಡೆಯುವ ಸಂದರ್ಶನ ಎಂಬ ಮಹಾನ್ ಭ್ರಷ್ಟತೆಯನ್ನು ವಿವರಿಸಲು ಯತ್ನಿಸುತ್ತೇನೆ. ನಾಲ್ಕೈದು ವರ್ಷಗಳ ಹಿಂದೆ ರಾಜ್ಯದಲ್ಲಿ ಅನೇಕ ಸರ್ಕಾರಿ ಕಾಲೇಜುಗಳಿಗೆ ಸಾವಿರಾರು ಅಧ್ಯಾಪಕರನ್ನು ನೇಮಿಸಲಾಯಿತು. ಒಬ್ಬ ಅಭ್ಯರ್ಥಿಗೆ ಎಲ್ಲಾ ಲಿಖಿತ ಪರೀಕ್ಷೆಗಳಲ್ಲಿ ಅತ್ಯುತ್ತಮ ಎನ್ನಬಹುದಾದಷ್ಟು, 85% ಅಂಕಗಳು ಬಂದಿದ್ದವು. ಸಂದರ್ಶನಕ್ಕೆಂದು ಇರುವುದು 25 ಅಂಕಗಳು. ಆ ಅಭ್ಯರ್ಥಿಗೆ ಸಂದರ್ಶನದಲ್ಲಿ ಕೇವಲ ಮೂರೇ ಮೂರು ಅಂಕಗಳು (ಅಂದರೆ ಸುಮಾರು 12%) ಬಂದರೂ ಲಿಖಿತ ಪರೀಕ್ಷೆಗಳ ಅಂಕಗಳ ಆಧಾರದ ಮೇಲೆ ಕೆಲಸ ಖಚಿತ. ಆ ಅಭ್ಯರ್ಥಿ ಯಾವುದೇ ಜಾತಿ ವಶೀಲಿಬಾಜಿ ಮಾಡಲಿಲ್ಲ, ಹಣ ಕೊಟ್ಟು ಕೆಲಸ ಖಚಿತಪಡಿಸಿಕೊಳ್ಳುವ ಸಂಪ್ರದಾಯವನ್ನೂ ಪಾಲಿಸಲಿಲ್ಲ. ಆದರೆ ಸಂದರ್ಶನ ನಡೆಸಿದ ಅಧಮರು, ಹೊಟ್ಟೆಗೆ ಅನ್ನ ತಿನ್ನದ ಕೊಳಕರು, ನೀಚರು, ಲೋಫರ್‌ಗಳು, ಉತ್ತಮವಾಗಿ ಪ್ರಶ್ನೆಗಳಿಗೆ ಉತ್ತರಿಸಿದ ಆ ಅರ್ಹ ಅಭ್ಯರ್ಥಿಗೆ ಕೊಟ್ಟ ಅಂಕಗಳು ಕೇವಲ ಎರಡು. ಶೇ.ಹತ್ತಕ್ಕೂ ಕಡಿಮೆ. ಆ ಅಭ್ಯರ್ಥಿ ಎರಡನೇ ಸಲ ಅರ್ಜಿ ಹಾಕಿದಾಗಲೂ ಇದೇ ಪುನರಾವರ್ತನೆ. ಈ ಸಂದರ್ಶನ ನಡೆಸುವ ಹುಚ್ಚು-ಕಜ್ಜಿ ನಾಯಿಗಳನ್ನು ಏನು ಮಾಡಬೇಕು? ಅದನ್ನು ಈಗಲೂ ಮುಂದುವರೆಸುತ್ತಿರುವ ನಮ್ಮ ರಾಜಕಾರಣಿಗಳನ್ನು ಮತ್ತು ಅಧಿಕಾರಶಾಹಿಯನ್ನು ಹೇಗೆ ಶಿಕ್ಷಿಸಬೇಕು? ಒಳ್ಳೆಯತನವನ್ನು, ಯೋಗ್ಯತೆಯನ್ನು, ಪ್ರಾಮಾಣಿಕತೆಯನ್ನು ಶಿಕ್ಷಿಸುವ ಈ ಸಮಾಜಕ್ಕೆ ಭವಿಷ್ಯವುಂಟೆ?

ಈ ಹಿನ್ನೆಲೆಯಲ್ಲಿ ನೋಡಿದಾಗ ಕೇವಲ ಹದಿನೈದು ವರ್ಷದ ಹಿಂದೆ ಗೋವಿಂದ ಗೌಡರು ಮಾಡಿದ ಕಾರ್ಯ ನಮಗೆ ಗತಕಾಲದ್ದೆಂದು ಅನ್ನಿಸುತ್ತದೆ. ಈ ಹತ್ತು-ಹದಿನೈದು ವರ್ಷಗಳಲ್ಲಿ ಸಮಾಜ ಈ ಪರಿ ಸಂಪೂರ್ಣವಾಗಿ ಕೆಟ್ಟಿದ್ದಾದರೂ ಹೇಗೆ?

ಗೋವಿಂದ ಗೌಡರು ಹೇಳಿದ ಇನ್ನೊಂದು ಮಾತು: ಅವರಿಗೆ ಐವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಅವರ ಯಾವೊಬ್ಬ ಅಳಿಯನಾಗಲಿ ಮತ್ತು ಮಗನಾಗಲಿ, ಅವರು ಸಚಿವರಾಗಿರುವ ತನಕವೂ ತಾನು ಇಂತಹವರ ಮಗ ಅಥವ ಅಳಿಯ ಎಂದುಕೊಂಡು ವಿಧಾನಸೌಧದ ಒಳಗೆ ಕಾಲಿಡಲಿಲ್ಲ. ಅವರು ರಾಜಕೀಯದಲ್ಲಿರುವ ತನಕವೂ ಅವರ ಮಗ ರಾಜಕೀಯಕ್ಕೆ ಬರಲು ಬಿಡಲಿಲ್ಲ. ಈಗ ಅವರ ಮಗನಿಗೆ ಸುಮಾರು 57 ವರ್ಷ ಇರಬಹುದು. ಇತ್ತೀಚೆಗೆ ಕಾಂಗ್ರೆಸ್ ಸೇರಿಕೊಂಡಿರುವ ಅವರಿಗೆ ಅಪ್ಪನ ಕಡೆಯಿಂದ ಯಾವೊಂದು ರಾಜಕೀಯ ಬೆಂಬಲವೂ, ವಶೀಲಿಬಾಜಿಯೂ ಇಲ್ಲ. ಆತ ರಾಜಕೀಯ ಮಾಡಬೇಕಿದ್ದರೆ ಆತನೇ ಹೆಸರು ಸಂಪಾದಿಸಿಕೊಂಡು ತನ್ನ ಸ್ವಂತ ಯೋಗ್ಯತೆಯ ಮೇಲೆ ರಾಜಕೀಯ ಮಾಡಲಿ ಎನ್ನುವುದು ಅಪ್ಪನ ನಿಲುವು. ತಮ್ಮ ಹೆಂಡತಿಯರನ್ನು, ಮಕ್ಕಳನ್ನು, ಅಳಿಯರನ್ನು, ಮೊಮ್ಮಕ್ಕಳನ್ನು, ಕೊನೆಗೆ ಪ್ರೇಯಸಿಯರನ್ನೂ ಸಹ, ಅನೈತಿಕ ಮಾರ್ಗಗಳಿಂದ ರಾಜಕೀಯ ನಾಯಕರನ್ನಾಗಿ ಪ್ರತಿಷ್ಠಾಪಿಸಲು ಯತ್ನಿಸುತ್ತಿರುವ ನಮ್ಮ ರಾಜಕೀಯ ನಾಯಕರು ಗೋವಿಂದ ಗೌಡರ ಜೀವನಾಚರಣೆಯನ್ನು ಗಮನಿಸಿ ತಮ್ಮ ಕುಕೃತ್ಯಗಳಿಗೆ ನೇಣು ಹಾಕಿಕೊಳ್ಳಬೇಕು.

ಇವತ್ತಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯ ಬಗ್ಗೆ ನಮ್ಮೆಲ್ಲರಿಗೂ ಇರುವಷ್ಟೇ ಅಸಮಾಧಾನ ಈ ವಯಸ್ಸಿನಲ್ಲಿಯೂ ಗೋವಿಂದ ಗೌಡರಿಗೆ ಇದೆ. ಹಾಗೆಂದು ಅವರು ನಮಗೆ ಕೇವಲ ನಿರಾಶೆಯ ಮಾತನಾಡಿ ಕಳುಹಿಸಲಿಲ್ಲ. ಬದಲಿಗೆ ಇನ್ನಷ್ಟು ಉತ್ಸಾಹ ತುಂಬಿ, ಜೀವನಪ್ರೀತಿಯನ್ನು ಹೆಚ್ಚಿಸಿ ಕಳುಹಿಸಿದರು.

ಕರ್ನಾಟಕದಲ್ಲಿ ಈಗ ಬದುಕಿರುವ ಎಷ್ಟು ಹಿರಿಯ ರಾಜಕಾರಣಿಗಳ ಬಗ್ಗೆ ನಾವು ಹೀಗೆ ಪ್ರೀತಿಯಿಂದ ಮತ್ತು ಗೌರವದಿಂದ ಮಾತನಾಡಲು ಸಾಧ್ಯ?

6 thoughts on ““ಮಲೆನಾಡ ಗಾಂಧಿ”ಯೊಡನೆಯ ಭೇಟಿ ಹುಟ್ಟಿಸಿದ ಪ್ರಶ್ನೆಗಳು, ಹೆಚ್ಚಿಸಿದ ಭರವಸೆಗಳು..

 1. ಗಾಣಧಾಳು ಶ್ರೀಕಂಠ

  ನನ್ನ ಅಪ್ಪ ನಿವೃತ್ತ ಶಿಕ್ಷಕರು. ಸುಮಾರು ಹನ್ನೆರಡು ವರ್ಷ ಆಯಿತು ನಿವೃತ್ತಿಯಾಗಿ. ಇವತ್ತಿಗೂ ಗೋವಿಂದೆ ಗೌಡರ ಆಡಳಿತವನ್ನು ನೆನಪಿಸಿಕೊಳ್ಳುತ್ತಾರೆ. ಮನಸಾರೆ ಕೊಂಡಾಡುತ್ತಾರೆ. ನನ್ನ ಮಟ್ಟಿಗೆ ಗೌಡರ ಕಾಲದಲ್ಲಿ ಸರ್ಕಾರಿಗಳಿಗೆ ಸಿಕ್ಕ ಮೂಲ ಸೌಲಭ್ಯ (ಡೆಸ್ಕ್ ಮತ್ತಿತರ ಪರಿಕರಗಳು) ಯಾವ ಸಚಿವರ ಕಾಲದಲ್ಲೂ ದೊರೆತಿಲ್ಲ. ಇಂಥ ಅನೇಕ ವಿಷಯದಲ್ಲಿ ಗೋವಿಂದೇಗೌಡರನ್ನು ನಾನು ನೆನಪಿಸಿಕೊಳ್ಳುತ್ತೇನೆ. ಇವತ್ತಿನ ಕೊಳಕು ರಾಜಕೀಯದಲ್ಲಿ ಗೌಡರಂಥ ಒಂದಷ್ಟು ಚಿಂತಕರು ಇಲ್ಲವಲ್ಲಾ ಎಂಬುದೇ ನನ್ನ ಚಿಂತೆ.
  ಸಂದರ್ಶನ ತುಮಬಾ ಚೆನ್ನಾಗಿದೆ. ಈ ಪೀಳಿಗೆಗೆ ಗೌಡರಂತಹ ವ್ಯಕ್ತಿತ್ವ ಪರಿಚಯವಾಗಲೇ ಬೇಕು.

  Reply
 2. Anand Yadwad

  ಇವತ್ತು ಹರ್ಯಾಣಾದ ಮಾಜಿ ಮುಖ್ಯಮಂತ್ರಿ ಮತ್ತು ಮಗನನ್ನು ಶಿಕ್ಷಕರ ನೇಮಕಾತಿಯಲ್ಲಿ ಭ್ರಷ್ಟಾಚಾರವೆಸಗಿದ ಆರೋಪದ ಮೇಲೆ ಬಂಧಿಸಲಾಗಿದೆ. ಅವರು ೩೦೦೦ ಕ್ಕೂ ಹೆಚ್ಚು ಸ್ಥಾನಗಳಿಗೆ ೩ರಿಂದ ೪ ಲಕ್ಷ ಲಂಚ ಪಡೆದಿದ್ದರಂತೆ!

  Reply
 3. anand prasad

  ಜನತಾ ದಳದಲ್ಲಿದ್ದ ಕೆಲವು ಉತ್ತಮ ರಾಜಕಾರಣಿಗಳು ಅಲ್ಲಿನ ಒಳಜಗಳದಿಂದ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ಸೇರಿ ತಮ್ಮತನವನ್ನು ಕಳೆದುಕೊಂಡು ಅನ್ಯಾಯ, ಭ್ರಷ್ಟಾಚಾರವನ್ನು ವಿರೋಧಿಸಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಅಥವಾ ಪರಿಸ್ಥಿತಿಯೊಂದಿಗೆ ರಾಜಿಯಾಗಿದ್ದಾರೆ. ಹೀಗಾಗಿ ಕಳೆದ ಹದಿನೈದು ವರ್ಷಗಳಲ್ಲಿ ರಾಜ್ಯದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಪರಿಸ್ಥಿತಿಗಳು ತೀವ್ರವಾಗಿ ಹದಗೆಟ್ಟಿವೆ. ಸಿದ್ಧರಾಮಯ್ಯನವರಂಥ ರಾಜಕಾರಣಿಗಳು ಬಾಯಿಯಿದ್ದೂ ಇಲ್ಲದವರಂತೆ ಮೌನವಾಗಿ ಎಲ್ಲವನ್ನೂ ಸಹಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದಲ್ಲಿ ಅನಿವಾರ್ಯ ಕರ್ಮವಾಗಿದೆ. ಸ್ವಾರ್ಥರಹಿತವಾಗಿ ನಾಯಕತ್ವ ನೀಡುವ ಜನ ರಾಜ್ಯದಲ್ಲಿ ಕಾಣೆಯಾಗಿರುವ ಕಾರಣ ಇಂಥ ಪರಿಸ್ಥಿತಿ ತಲೆದೋರಿದೆ. ನಾಯಕತ್ವ ನೀಡಬಲ್ಲ ಸಾಮರ್ಥ್ಯವಿರುವ ಜನರು ಭೋಗಜೀವನದಲ್ಲಿ ಮುಳುಗೇಳುತ್ತಿದ್ದಾರೆ. ನ್ಯಾಯಾಧೀಶರುಗಳು ಎಲ್ಲವನ್ನೂ ಕಂಡೂ ಕಾಣದಂತೆ ತಮಗೆ ಸಂಬಳ ಸಿಕ್ಕಿದರೆ ಸಾಕು, ಎಷ್ಟೇ ಅನ್ಯಾಯ ನಡೆದರೂ ತಮಗೂ ಅದಕ್ಕೂ ಸಂಬಂಧ ಇಲ್ಲ ಎಂಬ ರೀತಿಯಲ್ಲಿ ನಿರ್ಲಕ್ಷ್ಯ ತಾಳಿದ್ದಾರೆ. ಇಂಥ ನಿರ್ಲಕ್ಷ್ಯ ಮನೋಭಾವದ ನ್ಯಾಯಾಧೀಶರುಗಳು ಇರುವವರೆಗೂ ದೇಶ ಉದ್ಧಾರ ಆಗಲಿಕ್ಕಿಲ್ಲ.

  Reply
 4. Basavaraju

  ನಾಡು ಮರೆತ ಗೌಡರನ್ನು ನೆನಪಿಸಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸ್. ಇಂಥವರ ಬಗ್ಗೆ ಇನ್ನೊಂದಿಷ್ಟು ಬರೆಯಿರಿ, ಬರೆಸಿರಿ. ನಾನೂ ಬರೆಯುತ್ತೇನೆ.

  Reply
 5. Jagannath Ballupet

  I had a good association with him for more than a decade. Though I am his son’s age,he used to support me in the struggle against bad situation of coffee growers. We were together representing small coffee growers in coffee board. The simplicity, commitment, and concern for the people is admired by each one of us including the official team.I have no other person to compare in the public life.

  Reply

Leave a Reply

Your email address will not be published.