ದಿಲ್ಲಿ ಅತ್ಯಾಚಾರ : ದಾಖಲಾಗದ ಭಾವಗಳು

-ಎಲ್.ಎಂ. ನಾಗರಾಜು

ದಿಲ್ಲಿ ಅತ್ಯಾಚಾರ ಪ್ರಕರಣದ ಪ್ರತಿಭಟನೆಯ ಪ್ರಖರತೆಯ ಓಘ ವೇಗ ಕಳೆದುಕೊಳ್ಳುತ್ತಿದೆ. ಕಳೆದರ್ಧ ತಿಂಗಳು ದೇಶದ ಮಾಧ್ಯಮಗಳಲ್ಲಿ ಈ ಪ್ರಕರಣದ್ದೇ ಪುಕಾರು. ಈ ‘ಅತ್ಯಾಚಾರ ಸುದ್ದಿ ಸಂತೆ’ಯಲ್ಲಿ ಮೀಡಿಯಾಕ್ಕೆ ಉತ್ತಮ ವ್ಯಾಪಾರವೂ ಆಯಿತು. ಈ ಮಾರಾಟದ ಭರಾಟೆಯಲ್ಲಿ ಚರ್ಚೆಯಾಗಬೇಕಿದ್ದ ಹಲವು ಮುಖ್ಯ ಅಂಶಗಳು ಮುನ್ನಲೆಗೆ ಬರಲೇ ಇಲ್ಲ. ಈ ‘ಗದ್ದಲ ಮತ್ತು ಸಂತೆ’ ಬಗ್ಗೆ ಸ್ವಲ್ಪವೇ ತಕರಾರೆತ್ತಿದರೂ ಸಮೂಹ ಸನ್ನಿಯ ಅಮಲಿನಲ್ಲಿದ್ದ ಜನ ಮುಗಿಬಿದ್ದಾರೆಂಬ ಭಯವೂ ಹಲವರಲ್ಲಿ ಇಲ್ಲದಿರಲಿಲ್ಲವೇನೋ.

ನನಗೆ ತಿಳಿದಂತೆ ಮಾಧ್ಯಮೋದ್ಯಮದ ‘ಮೊಗಸಾಲೆ ಚರ್ಚೆ’ಯಲ್ಲಿ ಅತ್ಯಾಚಾರದ ಕಾರಣ, ಪರಿಹಾರ ಕುರಿತ ಚರ್ಚೆಯೇ ಆಗಲಿಲ್ಲ. rape-illustrationಬದಲಿಗೆ ‘ಆರೋಪಿಗಳನ್ನು ನಿರ್ವೀರ್ಯರನ್ನಾಗಿ ಮಾಡಿ, ಕುಟುಂಬಕ್ಕೆ ನ್ಯಾಯ ಕೊಡಿಸಿ, ಸರಕಾರ ವಿಫಲ’ ಇದರ ಸುತ್ತಲೇ ಮಾತುಗಳು ಗಿರಕಿ ಹೊಡೆದವು.

ಭಾರತದಂಥ ದೇಶ ಪುರುಷಪ್ರಧಾನ ಮನಃಸ್ಥಿತಿಯಿಂದ ಕೂಡಿದ್ದು, ‘ನ ಸ್ತ್ರೀ ಸ್ವಾತಂತ್ರಮರ್ಹತಿ’ ಎಂಬ ಮನುಶಾಸ್ತ್ರ ಇಲ್ಲಿ ಶತಮಾನಗಳ ಕಾಲ ಆಳಿದೆ. ಅದು ಗತಕಾಲವಾದರೂ ನಮ್ಮ ಮನಸ್ಥಿತಿ ಆ ಚಿಂತನೆಯಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಬದಲಿಗೆ ಅದೇ ಶ್ರೇಷ್ಠವೆಂದು ಪುನಃ ಅದನ್ನು ಕಟ್ಟುವ ಕೆಲಸವೂ ನಡೆಯುತ್ತಿರುವುದು ನಿಗೂಢವೇನಲ್ಲ.

ಅದೆಲ್ಲ ಇರಲಿ, ಈಗ ಅತ್ಯಾಚಾರದಂಥ ಪಾಶವೀ ಕತ್ಯಗಳಿಗೆ ಪ್ರೇರಕವಾಗುತ್ತಿರುವ ಕೆಲ ವಿಷಯಗಳತ್ತ ಚಿತ್ತ ಹರಿಸೋಣ. ಆ ಪೈಕಿ ಮೊದಲನೆಯದು ಜಾತಿ. ಈ ಕಾರಣಕ್ಕೇ ಮೇಲು ಕೀಳು ಎಂಬ ಕಲ್ಪನೆ ಜತೆಗೆ ‘ಕೀಳವರನ್ನು ಅನುಭವಿಸುವುದು ತಪ್ಪಲ್ಲ’ ಎಂಬ ಕಲ್ಪನೆ ದೇಶದ ಲಕ್ಷಾಂತರ ಹೆಣ್ಣುಮಕ್ಕಳ ಮಾನ, ಪ್ರಾಣಹರಣಕ್ಕೆ ಕಾರಣವಾಗಿದೆ. ಈ ಬಗ್ಗೆ ಚರ್ಚೆಯಾಗುವ ಕಾಲ ಬೇಗ ಬರಲಿ.

ಇನ್ನು ಧನ ಮತ್ತು ಅಧಿಕಾರ ಬಲ ಮತ್ತು ಇವುಗಳೆದುರು ನಡೆಯದ ಕಾನೂನಿನ ಆಟಕ್ಕೆ ನಿತ್ಯವೂ ಹಲವು ತಾಯಂದಿರ ಮಾನ, ಪ್ರಾಣ ಹಾಗೂ ಬದುಕಿನ ಘನತೆಯೇ ಪತನವಾಗುತ್ತಿದೆ. ಕಠಿಣ ಕಾನೂನು ಬೇಕು ಎನ್ನುವವರು ಕಾನೂನು ಖರೀದಿ ಬಗ್ಗೆ ಯೋಚಿಸುವಷ್ಟರ ಮಟ್ಟಿಗೆ ಪ್ರಾಜ್ಞರಲ್ಲದಿರಬಹುದು, ಇರಲಿ ಬಿಡಿ.

ಇನ್ನು ಅನುಭೋಗಿ ಸಂಸ್ಕೃತಿಯ ಆಟಾಟೋಪ ಕಣ್ಣಿಗೆ ಕಾಣಿಸದಂಥದ್ದು. ಕೆಲವೊಮ್ಮೆಯಷ್ಟೇ ಬೀದಿಗಿಳಿಯುವ ‘ಥಳುಕು-ಬಳುಕಿನ ಮಹಿಳೆಯರು ಮತ್ತು ಪುರುಷರು’ ಇದೇ ಸಂಸ್ಕೃತಿಯವರು; ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳೂ. ಇದರ ಪರಿಣಾಮ ಕೇವಲ ವಸ್ತುಗಳಷ್ಟೇ ಅಲ್ಲ, ಮನುಷ್ಯ ಮತ್ತು ಮನಸ್ಸುಗಳೂ ಭೋಗವಸ್ತುಗಳಾಗಿಬಿಟ್ಟಿವೆ. ನಮಗೆ ಪ್ರತಿಕ್ಷಣವೂ ಮಾಧ್ಯಮಗಳು ತೋರುವುದು ಹೆಂಗಸರ ಹೊಕ್ಕಳು, ಕೂದಲಿಲ್ಲದ ಕಂಕುಳು, ಹಿಡಿಗೆ ಸಿಗುವ ತೊಡೆಗಳು, ನಿರ್ದಿಷ್ಟ ಅಳತೆಯ ನಡು, sex-sellsಬೊಜ್ಜಿಲ್ಲದ ಹೊಟ್ಟೆ, ಗಂಡಸರ ಸಿಕ್ಸ್ ಪ್ಯಾಕ್, ಅದಕ್ಕೆ ತರಾವರಿ ವಸ್ತ್ರವಿನ್ಯಾಸ, ಇತ್ಯಾದಿ, ಇತ್ಯಾದಿ. ಇದನ್ನು ತೋರಿಸದಿದ್ದರೆ ‘ಕಾಸಾಗದು’ ಎನ್ನುವ ಧೋರಣೆ ಅದರದ್ದು. ಹೀಗೆ ನೋಡುಗರ ಕಣ್ಣಿಗೆ ‘ಮಜಾ’ ಕೊಡುವ ಉದ್ಯಮ ಸೃಷ್ಟಿಯಾಗಿದೆ.

ಹೊಟ್ಟೆ ಮತ್ತು ಅದರ ಕೆಳಗಿನ ಭಾಗದ ಅಂಗಗಳ ಸಂತೃಪ್ತಿಯನ್ನಷ್ಟೇ ಮನುಷ್ಯ ತಲುಪಬೇಕಾದ ಗಮ್ಯ ಎನ್ನಲಾಗುತ್ತಿದೆ. ಇದೇ ಸಂಸ್ಕೃತಿ ದೇಶದ ಮೂಲೆಮೂಲೆಗೆ ನುಗ್ಗುತ್ತಿದೆ. ಮೊಬೈಲು ಕೊಟ್ಟು, ಅದರಲ್ಲಿ ಸೆಕ್ಸ್ ವಿಡಿಯೋ ಕೊಡುತ್ತಿದೆ. ಮಕ್ಕಳು, ಯುವಕರು, ಮುದುಕರು, ಎಲ್ಲ ವಯೋಮಾನದವರೂ ಇದರ ಫಲಾನುಭವಿಗಳಾಗುತ್ತಿದ್ದಾರೆ. ಈ ಹಕೀಕತ್ತು ಯಾರಿಗೂ ಅರ್ಥವಾಗುವಂಥದ್ದಲ್ಲ. (ಈ ಸಂಸ್ಕೃತಿಯ ಸಿನಿಮಾ, ಟಿವಿ ಕಾರ್ಯಕ್ರಮಗಳ ಸಂದೇಶ ಮತ್ತು ರಂಜನೆಯಂತೂ ಹೇಳಲೇ ಬೇಡಿ) ಜನಕ್ಕೆ ಕಾಸೇ ನೀತಿ, ಕಾಸೇ ಧರ್ಮವಾಗಿದೆ. ಉಳ್ಳವರ ತೃಷೆ ತಣಿಸಲು ದಾರಿಗಳಿವೆ. ಇಲ್ಲದವರದ್ದು ಅಡ್ಡದಾರಿ.

ಇನ್ನು ಸೆಕ್ಸ್‌ಗೆ ನಮ್ಮಲ್ಲಿ ಯಾವ ಸ್ಥಾನವಿದೆ ಎಂದು ಮಾತಾಡಿದರೂ ಅದು ಬಹಿಷ್ಕಾರದ ಆದೇಶಕ್ಕೆ ಆಹ್ವಾನವೇ ಸರಿ. ಮನುಷ್ಯ ಸಹಜ ಹಸಿವಾದ ಲೆಂಗಿಕತೆ ಇಲ್ಲಿ ದಕ್ಕಬೇಕಾದರೆ, ಜಾತಿ, ವಯಸ್ಸು, ಧರ್ಮ, ವಿವಾಹ, ಇತ್ಯಾದಿಯಂತಹ ಅನೈಸರ್ಗಿಕ ಹಾದಿಯನ್ನು ಕ್ರಮಿಸಬೇಕು. ಆದರೆ, ದೇಹದ ಸಹಜ ಹಸಿವನ್ನು ಅಸಹಜವಾಗಿಯಾದರೂ ಹೆಚ್ಚಿಸಿ ಅವರನ್ನು ಅತ್ಯಾಚಾರದಂಥ ಕುಕೃತ್ಯಕ್ಕೆ ಪ್ರೇರಣೆ ನೀಡುವಂಥ ಸಂದರ್ಭಗಳೇ ಸೃಷ್ಟಿಯಾಗುತ್ತಿವೆ. ಆದಾಗ್ಯೂ, ‘ಕಾಲ ಕೆಟ್ಟೋಯ್ತು ಕಣ್ರೀ, ಅಮ್ಮನ್ನ ಅಮ್ಮನ್ ತರಾ ನೋಡ್ತಿಲ್ಲ, ತಮ್ಮನ್ನ ತಮ್ಮನ್ ತರಾ ನೋಡಲ್ಲ’ ಎಂದು ಮಮ್ಮಲ ಮರುಗುವ ಮಂದಿ, ಅದರ ಪರಿಹಾರಕ್ಕೆ ಇರುವ ದಾರಿಗಳೇನು ಎಂದು ಯಾರಾದರು ಸೂಚಿಸಿದರೆ ಅಥವ ಕೇಳಿದರೆ ಬಟ್ಟೆ ಬಿಚ್ಚಿ ಜಂಗಿ ಕುಸ್ತಿಗೆ ನಿಂತುಬಿಡುತ್ತಾರೆ. ಮಚ್ಚು, ಕುಡ್ಲು ಕೊಡ್ಲಿಗಳೂ ಕೈಗೆ ಬಂದು ಬಿಡುತ್ತವೆ. ಹಾಗೆಯೇ, ಕೆಲವು ಮೂಢ ನಂಬಿಕೆಗಳಿಗೂ ಕೊರತೆಯಿಲ್ಲ. ‘ವರ್ಜಿನ್ ಸವಿದರೆ, ರೋಗ ದೂರ’, ‘ಇಂಥ ಜಾತಿಯ ಹೆಣ್ಣಿನ ರುಚಿ ಹೀಗೆ,’ ಇತ್ಯಾದಿ, ಇತ್ಯಾದಿ.

ಇನ್ನು ನಗರೀಕರಣ ಎಂಬ ನರಕದಲ್ಲಿ ಧನಿಕರ ಪಾಲಿಗೆ ಬದುಕೆಂದರೆ ಭೋಗ. ಒಬ್ಬ ಬಾಯ್‌ಫ್ರೆಂಡ್ ಇಲ್ಲದಿದ್ದರೆ ಆಕೆ ಹೆಣ್ಣೇ ಅಲ್ಲ. ಒಬ್ಬ ಗರ್ಲ್‌ಫ್ರೆಂಡ್ ಇಲ್ಲದಿದ್ದರೆ ಆತ ಗಂಡೇ ಅಲ್ಲ ಎನ್ನುವ ಭಾವ ಯುವಜನರಲ್ಲಿ. ಜತೆಜತೆಗೆ ಹೈ-ಫೈ ಕಲ್ಚರ್ ಎಂಬ ಪ್ರತ್ಯೇಕ ಜಾತಿ ಬೆಳೆಯುತ್ತಿದೆ. ಓದು, ಹಣ, ಕೆಲಸ, ಅಂತಸ್ತುಗಳ ಆದಾರದ ಮೇಲೆ ಜನ ಎರಡು ಜಾತಿಯಾಗಿ ವಿಭಾಗವಾಗುತ್ತಿದ್ದಾರೆ. ಈ ಪೈಕಿ ಮೇಲು ಜಾತಿಗೆ ಸೇರಲು ಶ್ರಮಿಸುತ್ತಿರುವ ಜನರು ಹತಾಶರಾಗಿ, ಅದು ನಾನಾ ರೂಪದಲ್ಲಿ ವ್ಯಕ್ತವಾಗುತ್ತಿದೆ. ಒಂದು ಜಾತಿಗೆ ಮತ್ತೊಂದು ಜಾತಿ ಬಗ್ಗೆ ಜುಗುಪ್ಸೆ ಬೆಳೆಯುತ್ತಿದೆ. ಅತ್ಯಾಚಾರಿಗಳ ಮನಸ್ಸು ಇಂಥ ಮಾದರಿಯದ್ದೇನೋ ಎನಿಸುತ್ತದೆ. ಇಲ್ಲದಿರೆ, ತೃಷೆ ತೀರಿದ ಬಳಿಕವಾದರೂ ಬಿಟ್ಟು ಕಳುಹಿಸಬಹುದಿತ್ತಲ್ಲ. ಸರಳು ತುರುಕಿ ಕೊಂದರೇಕೆ ಎಂಬ ಪ್ರಶ್ನೆಗೆ, ರಾಜಕೀಯ ಮನಃಶಾಸ್ತ್ರಜ್ಞರೊ, ಸಮಾಜ ಶಾಸ್ತ್ರಜ್ಞರೋ ಉತ್ತರ ಕೊಡಲಿ.

ಇದೇ “ಸಂಸ್ಕೃತಿ”ಯ ಇನ್ನೊಂದು ರೂಪವು ಯುಟಿವಿಗಳಂಥ ಕಾರ್ಯಕ್ರಮಗಳಲ್ಲಿ ಕಾಣಬಹುದು. ಪರಸ್ಪರ ಕಾಸಿದೆ ಎಂದು ಲವ್ ಮಾಡುವ ಹುಡುಗ ಹುಡುಗಿಯರು, ‘ಒಂದು ತಿಂಗಳ ಬಳಿಕ ಸೆಕ್ಸ್‌ನಲ್ಲಿ ಅನ್‌ಫಿಟ್ ಅನಿಸಿದ.. ಸೋ ಬೇರೆಯವನ ಹುಡುಕಾಡಿದೆ’ ಎನ್ನುವ ಕನ್ಯೆಯರು, ಐದು ದಿನ ಕೆಲಸ ಮಾಡುತ್ತಾ ಪ್ರತಿ ವಾರದ ಎರಡು ದಿನ ಹೊಸ ಸಂಗಾತಿಯೊಂದಿಗೆ ಇರವಬಯಸುವ ಯುವಜನರು ನಮ್ಮ ಮಧ್ಯೆಯೇ ಇದ್ದಾರೆ. ಭೋಗದ ಬೆನ್ನುಬಿದ್ದು ತಪ್ತಿ ಕಾಣದೆ ನಿರಂತರ ’ಲವ್, ಸೆಕ್ಸ್, ಔರ್ ಧೋಖಾ’ದಲ್ಲಿ ಮುಳುಗಿರುವ ವಿಷಯವನ್ನೂ ಯಾರೂ ಉದಾಹರಿಸಲಿಲ್ಲ.

ಅತ್ಯಾಚಾರಗಳಂಥ ಸಾಮಾಜಿಕ ಪಿಡುಗುಗಳ ಬಗ್ಗೆ ಬರೆಯುವವರು, ಮಾತಾಡುವವರಿಂದ ಜನ ಸ್ವಲ್ಪವಾದರೂ ನಿಯತ್ತು, ಬದ್ಧತೆಯನ್ನು ನಿರೀಕ್ಷಿಸುತ್ತಾರೆ. ಆ ಜಾಗ್ರತೆ ಇಲ್ಲದೆ ಹೋದರೆ, ‘ಎಲ್ಲ ಗಂಡಸರೂ ದಪ್ಪ ದಪ್ಪ ಜಿರಲೆಗಳು ಕಂಡಂತೆ ಕಾಣುತ್ತಿದ್ದಾರೆ’ ಎಂದು ನಾಟಕೀಯವಾಗಿ ಗೀಚಬೇಕಾಗುತ್ತದೆ. ಅತ್ಯಾಚಾರ ಘಟನೆ ಮರೆತು, ‘ಮರ್ಕಟ ಮನದ ತುರಿಕೆ ತಡೆಯಲಾಗದೆ ಹುಡುಕಿ ಹೊರಡುವ ಪ್ರೀತಿ!’ ಬಗ್ಗೆ ಬರೆದು ಬೆತ್ತಲಾಗುತ್ತೇವೆ. ಅತ್ಯಾಚಾರದಲ್ಲೂ ರಾಜಕೀಯ ಬೆಳೆ ಅರಸಿ ಸಣ್ಣವರಾಗುತ್ತೇವೆ. ಇಲ್ಲವೇ ಯಾವುದನ್ನೂ ಕಟುವಾಗಿ ಮಾತನಾಡದೆ ‘ಎಲ್ಲೆಡೆ ಸಲ್ಲುವ ಬರವಣಿಗೆ ಬರೆದು’ ಆರಾಮವಾಗಿ ಹೊಟ್ಟೆ ಹೊರೆಯುತ್ತೇವೆ. sowjanya-rape-murderನಮ್ಮ ಪಕ್ಕದ ಮನೆಯ ಬಾಲೆ “ಸೌಜನ್ಯ ಅತ್ಯಾಚಾರ ಪ್ರಕರಣ” ಗೊತ್ತಾಗುವುದೇ ಇಲ್ಲ. ಇನ್ನು ಖೈರ್ಲಂಜಿ ಬಗ್ಗೆ ಯಾರಿಗೆ ಗೊತ್ತಾಗುತ್ತೆ? ಈ ಕುರಿತು ನಾವು ಬಳಸುವ ರೂಪಕಗಳೂ ‘ನೋ ಕಾಮೆಂಟ್ಸ್’ ಅನಿಸಬೇಕು. ಎಲ್ಲೆಲ್ಲಿಂದಲೋ ಪೆಕಪೆಕ ನಗು ತರುವಂತಿರಬಾರದು ಎನ್ನುತ್ತಾರೆ, ಏನಂತೀರಿ?

ಕಾಕತಾಳೀಯವೋ ಏನೋ, ದೆಹಲಿ ಘಟನೆ ಬಳಿಕ ಇಂದಿನವರೆಗೂ ಅತ್ಯಾಚಾರ ಪ್ರಕರಣಗಳು ನಿರಂತರ ವರದಿಯಾಗುತ್ತಲೇ ಇವೆ. ರಾಜ್ಯದಲ್ಲಂತೂ ಪ್ರಕರಣ ದಾಖಲಾಗುತ್ತಿರುವ ಪ್ರಮಾಣ ಏರುತ್ತಿದೆ. ವಿದೇಶಗಳಲ್ಲಿ ಸಣ್ಣ ಘಟನೆಗಳಿಗೂ ಜನ ಸರಕಾರಗಳು ವಿವಿಗಳತ್ತ ನೋಡುತ್ತವೆ. ಆದರೆ, ನಮ್ಮ ವಿವಿಗಳ ಸಮಾಜಶಾಸ್ತ್ರ ವಿಭಾಗಗಳು, ಮಹಿಳಾ ವಿವಿಗಳು ಅಸಲಿಯತ್ತೇನು ಎಂಬ ಬಗ್ಗೆ ಜನರ ಮನಹೊಕ್ಕು ಹೊಸ ವಿಷಯಗಳನ್ನು ತರುವ ಕೆಲಸ ಮಾಡುತ್ತಿಲ್ಲ. ಬದಲಿಗೆ ನಮ್ಮಂಥಹ ಅಯೋಗ್ಯರು ಬಾಯಿಗೆ ಬಂದಂತೆ ಹರಟುತ್ತಾ, ಸಮಸ್ಯೆಗಳನ್ನು ಸಮಸ್ಯೆಗಳಾಗಿಯೇ ಉಳಿಸುವ ಅಧ್ವಾನ ಮಾಡುತ್ತೇವೆ.

ಕೊನೆಯದಾಗಿ, ಮಹಿಳೆಯರ ಮೇಲಿನ ಲೈಂಗಿಕ ಹಲ್ಲೆಗಳಷ್ಟೇ ಅತ್ಯಾಚಾರಗಳೇ? ಖಂಡಿತ ಅಲ್ಲ, ವೈಯಕ್ತಿಕ ತೀಟೆಗೆ ಯಾರದ್ದೋ ಕೆಲಸ ಕಳೆಯುವುದು, ಲಾಭಕ್ಕಾಗಿ ಜನರನ್ನು ಬಳಸಿ ಬೀಸಾಡುದುವುದು, ಯಾವಾಗಲೂ ಒಬ್ಬರ ಅಸಹಾಯಕತೆ ಮೇಲೆ ಆಟ ಆಡುವುದು. ಸುಖಾ-ಸುಮ್ಮನೆ ಇನ್ನೊಬ್ಬರ ಮೇಲೆ ಅಪಪ್ರಚಾರ ಮಾಡಿಬಿಡುವುದು, ಅಧಿಕಾರ, ಹಣ, ಜಾತಿ, ಅಂತಸ್ತು, ಬಣ್ಣ ಇವುಗಳ ಹೆಸರಿನಲ್ಲಿ ಅನ್ಯರಿಗೆ ಕೊಡುವ ನೋವು, ಇವೆಲ್ಲ ವೇಳೆಯೂ ಅಗುವ ಪರಿಣಾಮ ಅತ್ಯಾಚಾರದಷ್ಟೇ ಘೋರವಾಗಿರುತ್ತದೆ. “ನೇಣು ಹಾಕಿ, ನಿರ್ವೀರ್ಯರಾಗಿಸಿ, ಆಕೆಯ ಕುಟುಂಬಕ್ಕೆ ನ್ಯಾಯಕೊಡಿ” ಎಂದು ಅರಚುತ್ತಿರುವ ನಮ್ಮೆಲ್ಲರಿಗೂ ಇದು ಅರ್ಥವಾಗಲಿ.

Leave a Reply

Your email address will not be published. Required fields are marked *