ಪ್ರಜಾ ಸಮರ – 18 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಕರ್ನಾಟಕಕ್ಕೆ ನಕ್ಸಲ್ ಚಳುವಳಿ ಕಾಲಿಟ್ಟು ಒಂದು ದಶಕ ಕಳೆಯಿತು. ಹಲವು ಕನಸು ಮತ್ತು ಆದರ್ಶಗಳನ್ನು ನಕ್ಸಲ್ ಚಳುವಳಿಯ ಜೊತೆ ಹೊತ್ತು ತಂದ ಸಾಕೇತ್ ರಾಜನ್ ಈಗ ನಮ್ಮ ನಡುವೆ ಇಲ್ಲ. ಸಾಕೇತ್ ನಂತರ ತಂಡವನ್ನು ಮುನ್ನೆಡೆಸುತ್ತಿದ್ದ ನೂರ್ ಜುಲ್ಫಿಕರ್ ಅಲಿಯಾಸ್ ಶ್ರೀಧರ್ ಎಂಬುವವರು ಕೂಡ ಈಗ ಹೋರಾಟವನ್ನು ತೊರೆದು ಹೊರ ಬಂದಿದ್ದಾರೆ, ಅಲ್ಲದೇ ತಮ್ಮ 25 ವರ್ಷಗಳ ನಕ್ಸಲ್ ಹೋರಾಟದ ಹಿನ್ನೆಲೆಯಲ್ಲಿ “ಭಾರತದ ಕ್ರಾಂತಿ ಮತ್ತು ಮಾವೋವಾದಿ ಚಳವಳಿ” ಎಂಬ ಕೃತಿಯನ್ನು ಹೊರತಂದಿದ್ದು, ಈ ಕೃತಿಯಲ್ಲಿ ಭಾರತದ ನಕ್ಸಲ್ ಹೋರಾಟವನ್ನು ವಿಮರ್ಶೆಗೆ ಒಡ್ಡಿದ್ದಾರೆ. ಆನಂತರ ನಾಯಕತ್ವ ವಹಿಸಿದ್ದ ಕೃಷ್ಣಮೂರ್ತಿ ಅನಾರೋಗ್ಯಕ್ಕೆ ತುತ್ತಾದರೆ, ನಂತರ ವ್ಯಕ್ತಿ ವಿಕ್ರಮ್ ಗೌಡ ಪೊಲೀಸರಿಗೆ ಬಲಿಯಾಗಿದ್ದಾನೆ.

ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆದ ಪೊಲೀಸರು ಮತ್ತು ನಕ್ಸಲರ ನಡುವಿನ ಸಂಘರ್ಷದಲ್ಲಿ 25 ಕ್ಕೂ ಹೆಚ್ಚು ಮಂದಿಯಷ್ಟು ಹತ್ಯೆಯಾಗಿದ್ದಾರೆ. ಇವರಲ್ಲಿ ಇಬ್ಬರು ಪೊಲೀಸ್ ಮಾಹಿತಿದಾರರು (ಶೇಷಯ್ಯ ಮತ್ತು ಸುಧಾಕರಗೌಡ ?) ಹಾಗೂ ಕಾಂಗ್ರೆಸ್ ಮುಖಂಡ ವೆಂಕಟೇಶ್ ನಕ್ಸಲರಿಂದ ಹತ್ಯೆಯಾಗಿದ್ದಾರೆ. ಇಬ್ಬರು ಗಿರಿಜನ ದಂಪತಿಗಳು (ರಾಮೇಗೌಡ ಮತ್ತು ಕಾವೇರಮ್ಮ) ಪೊಲೀಸರು ಮತ್ತು ನಕ್ಸಲರ ನಡುವಿನ ಗುಂಡಿನ ದಾಳಿಯಲ್ಲಿ ಬಲಿಯಾದ ಅಮಾಯಕರು. ಸಾಕೇತ್ ರಾಜನ್, ಶಿವಲಿಂಗು, ಸುಂದರೇಶ್, ವಿಕ್ರಮ್ ಗೌಡ, ವಸಂತ್ ಗೌಡ, ನಾರವಿ ದಿವಾಕರ್, ಅಜಿತ್ ಕುಸುಬಿ, ಉಮೇಶ್, ಹಾಜಿಮಾ, ಪಾರ್ವತಿ, ಗೌತಮ್ ಪರಮೇಶ್ವರ್, ಎಲ್ಲಪ್ಪ, ಸೇರಿದಂತೆ ಒಟ್ಟು ಹದಿನೈದು ಮಂದಿ ಶಂಕಿತ ನಕ್ಸಲರು ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ನಕ್ಸಲರ ಗುಂಡಿಗೆ ಅಸಿಸ್ಟೆಂಟ್ ಪೊಲೀಸ್‌ ಇನ್ಸ್‌ಪ್ಪೆಕ್ಟರ್ ವೆಂಕಟೇಶ್ ಮತ್ತು ಪೇದೆ ಗುರುಪ್ರಸಾದ್ ಹಾಗೂ ಗುಂಡಿನ ಚಕಮಕಿ ವೇಳೆ ಪೊಲೀಸರ ಗುಂಡು ತಗುಲಿದ ಮಹಾದೇವ ಮಾನೆ ಎಂಬ ಪೇದೆಯೂ ಸೇರಿದಂತೆ (ಪಶ್ಚಿಮಘಟ್ಟದ ಅರಣ್ಯದಲ್ಲಿ) ಒಂಬತ್ತು ಮಂದಿ ಪೊಲೀಸರು ಹತರಾಗಿದ್ದಾರೆ. ಇವರಲ್ಲಿ ಕರ್ನಾಟಕ ಸಶಸ್ತ್ರ ಮೀಸಲು ಪಡೆಯ ಆರು ಪೊಲೀಸರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೆಂಕಮನಹಳ್ಳಿಯಲ್ಲಿ ಹತರಾದರು. ಇವರ ಜೊತೆ ಓರ್ವ ಬಸ್ ಕ್ಲೀನರ್ ಕೂಡ ನಕ್ಸಲರ ಗುಂಡಿಗೆ ಬಲಿಯಾದ.

ಹತ್ತು ವರ್ಷಗಳ ಹಿಂದೆ ಪಶ್ಚಿಮ ಘಟ್ಟದ ಅರಣ್ಯ ರಕ್ಷಣೆ ಮತ್ತು ಕುದುರೆ ಮುಖ ಅಭಯಾರಣ್ಯ ಯೋಜನೆಯಿಂದ ನೆಲೆ ಕಳೆದುಕೊಳ್ಳುತ್ತಿರುವ ಸ್ಥಳೀಯ ಬುಡಕಟ್ಟು western ghatsಜನರಿಗೆ ನ್ಯಾಯ ಕೊಡಿಸಲು ಪಶ್ಚಿಮ ಘಟ್ಟದ ಅರಣ್ಯಕ್ಕೆ ನಕ್ಸಲರು ಕಾಲಿಟ್ಟ ನಂತರ ಅಭಿವೃದ್ಧಿಗಿಂತ ಅನಾಹುತಕ್ಕೆ ದಾರಿಯಾಯಿತೆಂದು ಹೇಳಬಹುದು. ಹೆಚ್ಚು ಮಾವೋವಾದಿಗಳು ಪಶ್ಚಿಮಘಟ್ಟಕ್ಕೆ ಕಾಲಿಡುವ ಮುನ್ನವೇ ಅನೇಕ ಜನಪರ ಸಂಘಟನೆಗಳು ಮತ್ತು ಪರಿಸರವಾದಿಗಳು ಈ ಸಮಸ್ಯೆಯನ್ನು ಕೈಗೆತ್ತಿಕೊಂಡು ಹೋರಾಡುತ್ತಿದ್ದರು. ಇವರಲ್ಲಿ ಕಲ್ಕುಳಿ ವಿಠಲ ಹೆಗ್ಡೆ ಮುಖ್ಯರಾದವರು. ನಕ್ಸಲರು ಈ ಪ್ರದೇಶಕ್ಕೆ ಬಂದ ನಂತರ ಎಲ್ಲರನ್ನೂ ನಕ್ಸಲರಂತೆ ಭಾವಿಸುವ, ಕಾಣುವ ಮನೋಭಾವವನ್ನು ಕರ್ನಾಟಕ ಪೊಲೀಸರು ಬೆಳಸಿಕೊಂಡರು. ಇದರಿಂದಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಇದ್ದುಕೊಂಡು ಹೋರಾಟ ನಡೆಸುತ್ತಿದ್ದ ಹೋರಾಟಗಾರರಿಗೆ ತೀವ್ರ ಹಿನ್ನಡೆಯಾಯಿತು.

ಅರಣ್ಯದ ಆದಿವಾಸಿಗಳ ಹಿತ ಕಾಪಾಡಲು ಬಂದ ನಕ್ಸಲರು ಇಂದು ಅರಣ್ಯವಾಸಿಗಳ ಹಿತ ಕಾಪಾಡುವುದಿರಲಿ, ತಮ್ಮ ಹಿತ ಕಾಪಾಡಿಕೊಳ್ಳುವುದು ಕಷ್ಟವಾಗಿದೆ. ಇವರು ನಿರೀಕ್ಷೆ ಮಾಡಿದಷ್ಟು ಪ್ರೋತ್ಸಾಹ ಸ್ಥಳಿಯರಿಂದ ಸಿಗಲು ಸಾಧ್ಯವಾಗದೇ ಅಕ್ಷರಶಃ ಅತಂತ್ರರಾಗಿದ್ದಾರೆ. ಇದರ ಜೊತೆಯಲ್ಲೇ ಪಶ್ಚಿಮ ಘಟ್ಟದ ಚಿಕ್ಕಮಗಳೂರು, ಮಂಗಳೂರು, ಉಡುಪಿ, ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅರಣ್ಯದಂಚಿನಲ್ಲಿ ಬದುಕುತ್ತಿರುವ ಬಡಜನತೆಯನ್ನು ಆತಂಕದ ಮಡುವಿಗೆ ನೂಕಿದ್ದಾರೆ. ಈ ಪ್ರದೇಶಗಳಲ್ಲಿ ಒಬ್ಬ ಸಾಮಾನ್ಯ ಬಡವ ಸ್ಥಳಿಯ ದಿನಸಿ ಅಂಗಡಿಗೆ ಹೋಗಿ ಐದು ಕೆ.ಜಿ. ಅಕ್ಕಿ ಅಥವಾ ಒಂದು ಕೆ.ಜಿ. ಸಕ್ಕರೆ ಕೊಂಡರೆ, ಇಲ್ಲವೇ ಅರ್ಧ ಕೆ.ಜಿ. ಚಹಾ ಪುಡಿ ಖರೀದಿ ಮಾಡಿದರೆ, ತನ್ನ ಮನೆಗೆ ಹಿಂತಿರುಗುವ ದಾರಿಯಲ್ಲಿ ಅಥವಾ ಬಸ್‌ನಲ್ಲಿ ಎದುರಾಗುವ ಗುಪ್ತ ದಳದ ಪೊಲೀಸರಿಂದ ನೂರಾರು ಪ್ರಶ್ನೆಗಳನ್ನು ಎದುರಿಸಬೇಕಾಗಿದೆ. ಸಮರ್ಪಕ ಉತ್ತರ ನೀಡದಿದ್ದರೆ ನಕ್ಸಲರ ಬೆಂಬಲಿಗ ಎಂಬ ಆರೋಪದಡಿ ಪೊಲೀಸರ ಕಿರುಕುಳ ಅನುಭವಿಸಬೇಕಾಗಿದೆ.‍

ಕರ್ನಾಟಕದ ಅರಣ್ಯದಲ್ಲಿ ಹೋರಾಡುತ್ತಿರುವ ಅಥವಾ ಇರಬಹುದಾದ ಇಪ್ಪತ್ತು ಮಂದಿ ನಕ್ಸಲರಲ್ಲಿ ವಿಚಾರಧಾರೆ ಹಿನ್ನೆಲೆ ಇರುವ ವ್ಯಕ್ತಿಗಳು ತೀರಾ ಕಡಿಮೆ. ಸಾಕೇತ್ ರಾಜನ್ ದಾಳಿಯ ಸಂದರ್ಭದಲ್ಲಿ ಕಾಲಿಗೆ ಗುಂಡು ತಗುಲಿ ಅಪಾಯದಿಂದ ಪಾರಾಗಿದ್ದ ನೂರ್ ಜುಲ್ಫಿಕರ್ ಅಲಿಯಾಸ್ ಶ್ರೀಧರ್ ಎಂಬುವವರು ಕೆಲವು ಸದಸ್ಯರ ಜೊತೆ ಹೋರಾಟ ತೊರೆದು ಹೊರಬಂದ ನಂತರ ಈಗನ ಹೋರಾಟಗಾರರಲ್ಲಿ ಸೈದ್ಧಾಂತಿಕ ನಿಲುವುಗಳು ಇದ್ದಂತಿಲ್ಲ. ಸಾಕೇತ್ ನಿಧನದ ನಂತರ ಕರ್ನಾಟಕದ ಉಸ್ತುವಾರಿ ಹೊತ್ತಿದ್ದ ಚುರುಕುರಿ ರಾಜ್‌ಕುಮಾರ್ ನೇತೃತ್ವದಲ್ಲಿ 2007 ರಲ್ಲಿ ನಡೆದ ಗುಪ್ತ ಸಭೆಯಲ್ಲಿ ಹೋರಾಟ ಮುನ್ನೆಡೆಸುವ ಕಾರ್ಯ ವಿಧಾನದ ಬಗ್ಗೆ ತೀವ್ರ ಚರ್ಚೆಯಾಯಿತು. ಕರ್ನಾಟಕದಲ್ಲಿ ಮೂರು ತಂಡಗಳಾಗಿ (ನೇತ್ರಾವತಿ, ಶರಾವತಿ ಮತ್ತು ತುಂಗಭದಾ) ಕ್ರಿಯಾಶೀಲವಾಗಿದ್ದ ಕೆಲವರು ಸಮಾಜದ ಅನುಕಂಪವಿಲ್ಲದೆ ಯಾವುದೇ ಹೋರಾಟ ವ್ಯರ್ಥ ಎಂಬ ವಾದವನ್ನು ಮುಂದಿಟ್ಟು ನಗರ ಪ್ರದೇಶಗಳಲ್ಲಿದ್ದು ಯುವ ವಿದ್ಯಾವಂತ ಯುವಕರನ್ನು ಚಳುವಳಿಗೆ ಸೆಳೆಯಬೇಕು ಎಂಬ ತಮ್ಮ ಯೋಜನೆಯನ್ನು ಮುಂದಿಟ್ಟರು. ಆದರೆ ಕೆಲವರು ಇದನ್ನು ವಿರೋಧಿಸಿ ಗೆರಿಲ್ಲಾ ತಂತ್ರದ ಯುದ್ದ ಮಾದರಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಹಠ ಹಿಡಿದಾಗ ಅನಿವಾರ್ಯವಾಗಿ ಕೆಲವು ಸುಧಾರಣಾವಾದಿಗಳು 2007 ರಲ್ಲಿ ಹೋರಾಟ ತೊರೆದು ಹೊರಬಂದರು. 1980 ರಿಂದಲೂ ಕರ್ನಾಟಕದ ಉಸ್ತುವಾರಿ ಹೊತ್ತಿದ್ದ ಅಜಾದ್ ಅಲಿಯಾಸ್ ಚುರುಕುರಿ ರಾಜ್‌ಕುಮಾರ್ 2010 ರವರೆಗೆ ಆಂಧ್ರಪ್ರದೇಶದಿಂದ ಬೆಂಗಳೂರು ನಗರಕ್ಕೆ ಗುಪ್ತವಾಗಿ ಬೇಟಿ ನೀಡಿ ನಕ್ಸಲರಿಗೆ ಮಾರ್ಗದರ್ಶನದ ಜೊತೆಗೆ ಆರ್ಥಿಕ ನೆರವು ನೀಡಿ ಹೋಗುತ್ತಿದ್ದರು.

ಅಜಾದ್ ಅಲಿಯಾಸ್ ಚುರುಕುರಿ ರಾಜಕುಮಾರ್ 1952 ರಲ್ಲಿ ಹುಟ್ಟಿದ್ದು, ಆಂಧ್ರದ ಕೃಷ್ಣ ಜಿಲ್ಲೆಯಿಂದ ಬಂದವರು. ಭಾರತದ ಮಾವೋವಾದಿ ನಕ್ಸಲ್ ಚಳುವಳಿಯಲ್ಲಿ ಮುಖ್ಯನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡು, ಕೇಂದ್ರ ಪಾಲಿಟ್‌ಬ್ಯೂರೊ ಸದಸ್ಯರಾಗಿ ಮತ್ತು ಸಂಘಟನೆಯ ವಕ್ತಾರರಾಗಿ ನಿರ್ವಹಿಸುತ್ತಿದ್ದರು. ಆಂದ್ರದ ಜಿಲ್ಲಾ ಕೇಂದ್ರವಾದ ವಾರಂಗಲ್ ಪಟ್ಟಣದ ನ್ಯಾಷನಲ್ ಇನ್ಸಿಟ್ಯೂಟ್ ಆಪ್ ಟೆಕ್ನಾಲಜಿ ಎಂಬ ಪ್ರತಿಷ್ಟಿತ ಕಾಲೇಜಿನಿಂದ ಇಂಜಿನಿಯರಿಂಗ್‌ನಲ್ಲಿ ಎಂ.ಟೆಕ್. ಪದವಿ ಪಡೆದು ಪೀಪಲ್ಸ್ ವಾರ್ ಗ್ರೂಪ್‌ಗೆ ಸೇರ್ಪಡೆಯಾಗಿದ್ದರು. 1975 ಮತ್ತು 1978 ರಲ್ಲಿ ಆಂಧ್ರ ಪೊಲೀಸರಿಂದ ಬಂಧಿತರಾಗಿ ನಂತರ ಜಾಮೀನಿನ ಮೇಲೆ ಹೊರಬಂದು ತಲೆತಪ್ಪಿಸಿಕೊಂಡಿದ್ದರು. ಆಂಧ್ರ ಸರ್ಕಾರ ಅಜಾದ್ ಸುಳಿವೆಗೆ 12 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಕರ್ನಾಟಕದ ಸಾಕೇತ್ ರಾಜನ್ ಮತ್ತು ಸಿರಿಮನೆ ನಾಗರಾಜ್ ಹಾಗೂ ರಾಯಚೂರು ಜಿಲ್ಲೆ ಕಾರ್ಯಕತರು ನಕ್ಸಲ್ ಸಂಘಟನೆಗೆ ಸೇರುವಲ್ಲಿ ಅಜಾದ್ ಪ್ರಭಾವವಿತ್ತು. ಅಂತಿಮವಾಗಿ 2010 ರ ಜೂನ್ ಒಂದರಂದು ನೆರೆಯ ಮಹಾರಾಷ್ಟ್ರದಲ್ಲಿ ಅಜಾದ್ ಮತ್ತು ಜೊತೆಗಿದ್ದ ಹೇಮಚಂದ್ರ ಪಾಂಡೆ ಎಂಬ ಯುವ ಪತ್ರಕರ್ತನನ್ನು ಬಂಧಿಸಿದ ಆಂಧ್ರ ಪೊಲೀಸರು ಮಾರನೇ ದಿನ ನಸುಕಿನ ಜಾವ ಅಂದ್ರದ ಗಡಿ ಜಿಲ್ಲೆಯಾದ ಅದಿಲಾಬಾದ್ ಅರಣ್ಯಕ್ಕೆ ಕರೆತಂದು ಇಬ್ಬರನ್ನು ಗುಂಡಿಟ್ಟು ಕೊಂದರು. (ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದಲ್ಲಿ ಆಂಧ್ರ ಪೊಲೀಸರ ವಿರುದ್ದ ದೂರು ದಾಖಲಾಗಿದೆ.) ಅಜಾದ್ ನಿಧನಾ ನಂತರ ಕರ್ನಾಟಕದ ನಕ್ಸಲ್ ಚಳುವಳಿ ದಿಕ್ಕು ದಿಸೆಯಿಲ್ಲದೆ, ಸೈದ್ಧಾಂತಿಕ ತಳಹದಿಯಿಲ್ಲದೆ ಸಾಗುತ್ತಿದೆ.

ಕರ್ನಾಟಕ ಪೊಲೀಸರು ತಮ್ಮ ಗುಪ್ತದಳ ಇಲಾಖೆಯಿಂದ ಸಕ್ರಿಯವಾಗಿರುವ ನಕ್ಸಲರ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅವರಲ್ಲಿ ಉಡುಪಿಯ ಹೆಬ್ರಿ ಸಮೀಪದ ವಿಕ್ರಂ ಗೌಡ (2006 ರ ಡಿಸಂಬರ್ 26 ರಂದು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ), ಬೆಳ್ತಂಗಡಿಯ ಸುಂದರಿ, ಶೃಂಗೇರಿಯ ಬಿ.ಜಿ ಕೃಷ್ಣಮೂರ್ತಿ, ತೀರ್ಥಹಳ್ಳಿ ಸಮೀಪದ ಹೊಸಗದ್ದೆಯ ಪ್ರಭಾ, ಕೊಪ್ಪ ತಾಲ್ಲೂಕಿನ ನಿಲುಗುಳಿ ಪದ್ಮನಾಭ, ಶೃಂಗೇರಿ ಸಮೀಪದ ಮುಂಡಗಾರು ಲತಾ, ಮೂಡಿಗೆರೆಯ ಕನ್ಯಾಕುಮಾರಿ ಮತ್ತು ಎ.ಎಸ್. ಸುರೇಶ, ಬೆಂಗಳೂರಿನ ರಮೇಶ್ ಅಲಿಯಾಸ್ ಶ್ರೀನಿವಾಸ್ ಮತ್ತು ಈಶ್ವರ್, ಕಳಸದ ಸಾವಿತ್ರಿ, ವನಜಾ ಅಲಿಯಾಸ್ ಜಲಜಾಕ್ಷಿ, ಭಾರತಿ, ಮನೋಜ್, ರಾಯಚೂರು ಜಿಲ್ಲೆಯ ಕಲ್ಪನಾ, ಜಾನ್ ಅಲಿಯಾಸ್ ಜಯಮ್ಮ, ಚಿಕ್ಕಮಗಳೂರು ಜಿಲ್ಲೆಯ ಕಿಗ್ಗದ ರವೀಂದ್ರ, ಚಿತ್ರದುರ್ಗ ಮೂಲದ ಇಂಜಿನಿಯರಿಂಗ್ ಪದವಿ ತೊರೆದು ಬಂದ ನೂರ್ ಜುಲ್ಫಿಕರ್, ತಮಿಳುನಾಡಿನ ಮಧುರೈನ ವೀರಮಣಿ ಅಲಿಯಾಸ್ ಮುರುಗನ್ (ಈತ ಗಂಗಾಧರ್ ಹೆಸರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುತ್ತಾನೆ), ಕೇರಳದ ನಂದಕುಮಾರ್, ಆತನ ಸಂಗಾತಿ ಶಿವಮೊಗ್ಗ ಮೂಲದ ಸಿಖ್ ಜನಾಂಗದ ಆಶಾ, ತಮಿಳುನಾಡಿನ ಧರ್ಮಪುರಿಯ ಕುಪ್ಪಸ್ವಾಮಿ, ಮುಖ್ಯರಾದವರು. (ಇವರಲ್ಲಿ ಈದು ಎನ್‌ಕೌಂಟರ್ ನಲ್ಲಿ ಗಾಯಗೊಂಡಿದ್ದ ಸೊರಬದ ವಿಷ್ಣು ಅಲಿಯಾಸ್ ದೇವೆಂದ್ರಪ್ಪ ಜೀವಂತ ವಿರುವ ಬಗ್ಗೆ ಗೊಂದಲವಿದೆ.)

ಇವರುಗಳಲ್ಲಿ ಕರ್ನಾಟಕ ಪೊಲೀಸರು ವಿಕ್ರಮ್ ಗೌಡ, ಬಿ.ಜಿ,ಕೃಷ್ನಮೂರ್ತಿ, ಹೊಸಗದ್ದೆ ಪ್ರಭಾ, ನಿಲುಗುಳಿ ಪದ್ಮನಾಭ, ಮುಂಡಗಾರು ಲತಾ, ಕನ್ಯಾಕುಮಾರಿ ಮತ್ತು ಸುರೇಶ ಇವರುಗಳ ಸುಳಿವಿಗೆ 5 ಲಕ್ಸ ರೂಪಾಯಿ ಬಹುಮಾನ ಮತ್ತು ಬೆಂಗಳೂರಿನ ರಮೇಶ್, ಈಶ್ವರ್ ಇವರಿಗೆ 3 ಲಕ್ಷ ರೂ, ಸಿರಿಮನೆ ನಾಗರಾಜು, ನೂರ್ ಜುಲ್ಫಿಕರ್, ಸುಂದರಿ, ಸಾವಿತ್ರಿ, ವನಜ, ಭಾರತಿ, ಮನೋಜ್ ಕಲ್ಪನಾ, ರವೀಂದ್ರ ಇವರುಗಳ ಸುಳಿವಿಗಾಗಿ ಒಂದು ಲಕ್ಷ ರೂ ಬಹುಮಾನ ಘೋಷಿಸಿದ್ದರು.

ಇತ್ತೀಚೆಗಿನ ದಿನಗಳ ಕರ್ನಾಟಕ ನಕ್ಸಲಿಯರ ನಡೆಯನ್ನು ಆತ್ಮಾಹುತಿಯ ಮಾರ್ಗದತ್ತ ಮುನ್ನೆಡೆಯುತ್ತಿರುವ ಮೂರ್ಖರ ಪಡೆಯೆಂದು ಘಂಟಾಘೋಷವಾಗಿ ಹೇಳಬಹುದು.

ಇಡೀ ಭಾರತದ ನಕ್ಸಲ್ ಚಳುವಳಿಯನ್ನು ಅವಲೋಕಿಸದಾಗ ನಕ್ಸಲಿಯರ ಬಗ್ಗೆ ಸಂಯಮ ಮತ್ತು ಮಾನವೀಯ ಅನುಕಂಪದ ನೆಲೆಯಲ್ಲಿ Western_Ghat_forestನಡೆದುಕೊಂಡ ಪೊಲೀಸರೆಂದರೇ, ಅವರು ಕರ್ನಾಟಕದ ಪೊಲೀಸರು ಮಾತ್ರ ಎಂದು ನಿಸ್ಸಂಕೋಚವಾಗಿ ಹೇಳಬಹುದು. ನಕ್ಸಲ್ ಚರಿತ್ರೆಯಲ್ಲಿ ಆಂಧ್ರ ಪೊಲೀಸರ ಬರ್ಭರತೆ ಮತ್ತು ರಾಕ್ಷಸಿ ಗುಣ ಹಾಗೂ ಪಶ್ಚಿಮ ಬಂಗಾಳ ಮತ್ತು ಛತ್ತೀಸ್ ಗಡದ ಪೊಲೀಸರ ಅನಾಗರೀಕ ವರ್ತನೆಯನ್ನು ಭಾರತದ ಇತಿಹಾಸದಲ್ಲಿ ಯಾವೊಬ್ಬ ನಾಗರೀಕ ಕ್ಷಮಿಸಲಾರ. ದೇಶದಲ್ಲಿ ಪ್ರಪಥಮ ಬಾರಿಗೆ ನಕ್ಸಲರ ಶರಣಗಾತಿಗೆ ಅವಕಾಶ ಕಲ್ಪಿಸಿಕೊಟ್ಟ ಮತ್ತು ಶರಣಾದ ನಕ್ಸಲಿಗರಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ವಿಶೇಷ ಪ್ಯಾಕೇಜ್ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ ಸರ್ಕಾರ, ಈ ಅವಕಾಶವನ್ನು 2008 ಮತ್ತು 2009 ರಲ್ಲಿ ಸಮರ್ಥವಾಗಿ ಬಳಸಿಕೊಂಡ ಹಾಗಲಗಂಚಿ ವೆಂಕಟೇಶ, ಹೊರಳೆ ಜಯ, ಮಲ್ಲಿಕಾ ಮತ್ತು ಕೋಮಲಾ ಈದಿನ ನಮ್ಮಗಳ ನಡುವೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಕರ್ನಾಟಕ ಸರ್ಕಾರದ ಇಂತಹ ಮಾನವೀಯ ನೆಲೆಯ ನಿರ್ಧಾರದ ಹಿಂದೆ, ಕರ್ನಾಟಕ ಕಂಡ ಅಪರೂಪದ ದಕ್ಷ ಹಾಗೂ ಮಾತೃ ಹೃದಯದ ಪೊಲೀಸ್ ಅಧಿಕಾರಿ ಶಂಕರ್ ಬಿದರಿಯವರ ಶ್ರಮವಿದೆ. ತಾವು ಸೇವೆಯಿಂದ ನಿವೃತ್ತರಾಗುವ ಕೆಲವೇ ದಿನಗಳ ಹಿಂದೆ ನಕ್ಸಲ್ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿ ನಮ್ಮ ಯುವಕರು ಮಾವೋವಾದಿ ನಕ್ಸಲರಾಗಿ ಪೊಲೀಸರ ಗುಂಡಿಗೆ ಬಲಿಯಾಗುವುದು ವೈಯಕ್ತಿವಾಗಿ ನನಗೆ ನೋವು ತರುವ ವಿಚಾರ ಎಂದು ಹೇಳಿಕೊಂಡಿದ್ದರು. ಹೋರಾಟ, ಕ್ರಾಂತಿ ನೆಪದಲ್ಲಿ ದಾರಿ ತಪ್ಪಿರುವ ಯುವಕರನ್ನು ಮರಳಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಕನಸು ಬಿದರಿಯವರಿಗೆ ಇತ್ತು. ನಿವೃತ್ತಿಯ ನಂತರವೂ ಅವರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ.

ಕಳೆದ ನವಂಬರ್‌ನಲ್ಲಿ ಹಾಸನ ಜಿಲ್ಲೆಯ ಸಕಲೇಶ್ವರ ಬಳಿಯ ಬಿಸಿಲೆ ಘಾಟ್ ಬಳಿ ಪೊಲೀಸರು ಸೃಷ್ಟಿಸಿದ ಚಕ್ರವ್ಯೂಹಕ್ಕೆ ಸಿಲುಕಿ ಸಾಯುವ ಸಂದರ್ಭದಲ್ಲಿ ಶರಣಾಗತಿಯ ನಾಟಕವಾಡಿ ತಪ್ಪಿಸಿಕೊಂಡ ನಕ್ಸಲರ ಬಗ್ಗೆ ಯಾವೊಬ್ಬ ಪ್ರಜ್ಙಾವಂತ ನಾಗರೀಕ ಅನುಕಂಪ ಅಥವಾ ಗೌರವ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ಒಂದು ವಾರ ಕಾಲ ನಕ್ಸಲರ ವಿರುದ್ಧ ಕಾರ್ಯಾಚರಣೆ ನಿಲ್ಲಿಸುವುದಕ್ಕೆ ಶಂಕರ್ ಬಿದರಿಯವರ ಕಳಕಳಿಯ ಮನವಿ ಕಾರಣವಾಗಿತ್ತು. ಕರ್ತವ್ಯ ಮತ್ತು ಕಾನೂನು ವಿಷಯದಲ್ಲಿ ಅತ್ಯಂತ ಕಠಿಣವಾಗಿ ನಡೆದುಕೊಳ್ಳುತ್ತಿದ್ದ ಶಂಕರ್ ಬಿದರಿಯವರು ಸಹಾಯ ಅಥವಾ ಮಾನವೀಯತೆಯ ವಿಷಯದಲ್ಲಿ ಒಬ್ಬ ಅಪ್ಪಟ ಹೃದಯವಂತ ತಂದೆಯಂತೆ ವರ್ತಿಸುತ್ತಿದ್ದರು. ಕನ್ನಡದ ಹಿರಿಯ ಅನುಭಾವ ಕವಿ ಮತ್ತು ಬೇಂದ್ರೆಯವರ ಆತ್ಮ ಸಂಗಾತಿಯಂತಿದ್ದ ಮಧುರ ಚೆನ್ನ ಇವರ ಪುತ್ರಿಯನ್ನು ವಿವಾಹವಾಗಿರುವ ಶಂಕರ್ ಬಿದರಿ ವೀರಪ್ಪನ್ ಕಾರ್ಯಾಚರಣೆಯ ಸಂದರ್ಭದಲ್ಲಿ ತಮಗೆ ಬಹುಮಾನವಾಗಿ ಬಂದ ಒಂದು ಕೋಟಿ ಐವತ್ತು ಲಕ್ಷ ರೂಪಾಯಿಗಳಲ್ಲಿ ಕೇವಲ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಮಾತ್ರ ತೆಗೆದುಕೊಂಡು ಉಳಿದ ಹಣವನ್ನು ಪೊಲೀಸರ ಮಕ್ಕಳ ಶಿಕ್ಷಣಕ್ಕಾಗಿ ದಾನ ಮಾಡಿದ ಅಪರೂಪದ ವ್ಯಕ್ತಿ. (ತಾವು ಇಟ್ಟುಕೊಂಡಿದ್ದ ಹಣವನ್ನು ಸಹ ತಮ್ಮ ಮಡದಿಗೆ ಕೊಡುಗೆಯಾಗಿ ನೀಡಿದ್ದಾರೆ.) ಇಂತಹ ಮಾನವೀಯ ಮುಖವುಳ್ಳ ಅಧಿಕಾರಿಯ ಮಾರ್ಗದರ್ಶನದಲ್ಲಿ ಶರಣಾಗುವ ಅವಕಾಶವನ್ನು ತೊರೆದು ಬಂದೂಕಿನ ಜೊತೆಯಲ್ಲಿ ಗುರಿ ತಲುಪುತ್ತೇವೆ ಎಂದು ನಂಬಿ ಹೊರಟವರನ್ನು ಸಮಾಜ ನಂಬಲಾರದು. ಈ ಬಗ್ಗೆ ಮಾವೋವಾದಿ ನಕ್ಸಲರು ಮತ್ತು ಇವರಿಗೆ ಬೆಂಬಲವಾಗಿ ನಿಂತವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು.

ಭಾರತದಲ್ಲಿ ಪಶ್ಚಿಮ ಬಂಗಾಳಕ್ಕೆ ಮುನ್ನವೇ ನಕ್ಸಲ್ ಚಳುವಳಿಯನ್ನು ಹುಟ್ಟಿಹಾಕಿದ ನಮ್ಮ ನೆರೆಯ ಆಂಧ್ರಪ್ರದೇಶದಲ್ಲಿ ಈ ಹೋರಾಟNaxal-india ವಿಜೃಂಭಿಸಿದ ರೀತಿಯಲ್ಲಿ ನೆರೆಯ ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿ ಏಕೆ ಯಶಸ್ವಿಯಾಗಲಿಲ್ಲ ಎಂಬುದನ್ನು ಅರಿಯಲು ನಾವು ಒಮ್ಮೆ ಇತಿಹಾಸದತ್ತ ತಿರುಗಿನೋಡಬೇಕಿದೆ. ಆಂಧ್ರದಲ್ಲಿ ಅಂದಿನ ದಿನಗಳಲ್ಲಿ ಅಸ್ತಿತ್ವದಲ್ಲಿದ್ದ ಜಮೀನ್ದಾರಿ ಪದ್ದತಿಯಾಗಲಿ, ಹೆಚ್ಚಿನ ಸಂಖ್ಯೆಯ ಆದಿವಾಸಿ ಜನಾಂಗವಾಗಲಿ ದಕ್ಷಿಣದ ಇತರೆ ರಾಜ್ಯಗಳಲ್ಲಿ ಇರಲಿಲ್ಲ. ತಮಿಳುನಾಡಿನಲ್ಲಿ ನಕ್ಸಲ್ ಚಳುವಳಿ ಹುಟ್ಟುವ ಮುನ್ನವೇ ಪೆರಿಯಾರ್ ರಾಮಸ್ವಾಮಿಯಂತಹವರು ಮತ್ತು ಕೇರಳದಲ್ಲಿ ನಾರಾಯಣ ಗುರು ಅಂತಹ ಮಹಾನುಭಾವರು ಸಮಾಜದ ಅಸಮಾನತೆಯ ವಿರುದ್ದ ಸಮರ ಸಾರಿ ಸಾಮಾಜಿಕ ಸುಧಾರಣೆಯಲ್ಲಿ ಯಶಸ್ವಿಯಾಗಿದ್ದರು. 1980 ರ ದಶಕದಲ್ಲಿ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಕ್ಸಲ್ ಚಳುವಳಿ ಹುಟ್ಟು ಹಾಕುವ ಪ್ರಯತ್ನ ನಡೆಯಿತಾದರೂ ಪ್ರಯೋಜನವಾಗಲಿಲ್ಲ. ಅಲ್ಲಿರುವ ಬಹುತೇಕ ರಾಜಕೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳಾಗಿರುವುದರಿಂದ ನಕ್ಸಲ್ ಹೋರಾಟಗಾರರಿಗಿಂತ ಹೆಚ್ಚು ಪ್ರಭಾವಶಾಲಿಯಾಗಿ ಜನರ ಸಮಸ್ಯೆಗಳ ಬಗ್ಗೆ ಹೋರಾಡುವ ಗುಣಗಳನ್ನು ಮೈಗೂಡಿಸಿಕೊಂಡಿವೆ. ಇನ್ನು ಕೇರಳ ರಾಜ್ಯದಲ್ಲಿ 1968 ರಲ್ಲೇ ಇಂತಹ ಪ್ರಯತ್ನ ನಡೆಯಿತಾದರೂ ಯಶಸ್ವಿಯಾಗಲಿಲ್ಲ. ಇ.ಎಂ.ಎಸ್. ನಂಬೂದರಿಪಾಡ್‌ರಂತಹ ಕಮ್ಯುನಿಸ್ಟ್ ನಾಯಕರ ನೇತೃತ್ವದಲ್ಲಿ ಎಡಪಕ್ಷ ಅಧಿಕಾರಕ್ಕೆ ಬಂದಿದ್ದರಿಂದ ಕೇರಳದಲ್ಲಿ ಪ್ರಮುಖ ಸಮಸ್ಯೆಯಾಗಿದ್ದ ಗೇಣಿದಾರರ ಸಮಸ್ಯೆಯನ್ನು ಕಮ್ಯೂನಿಷ್ಟ್ ಸರ್ಕಾರ ಬಗೆಹರಿಸಿತು. ಚಾರು ಮುಜಂದಾರ್‌ರ ಅನುಯಾಯಿಗಳು ಹಾಗೂ ಹಿರಿಯ ಮಾವೋವಾದಿ ನಾಯಕರಾದ ವೇಣು ಮತ್ತು ಕೆ. ಅಜಿತಾ ಎಂಬುವರು ( ಅಜಿತಾ 9 ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿದ ಹಿರಿಯ ನಾಯಕಿ) ಕೇರಳದಲ್ಲಿ ನಕ್ಸಲ್ ಚಳುವಳಿ ವಿಫಲವಾದುದರ ಕುರಿತು ಬಣ್ಣಿಸುವುದು ಹೀಗೆ: “ಕೇರಳದ ಉತ್ತರದ ಜಿಲ್ಲೆಗಳಲಿ ಆದಿವಾಸಿಗಳ ಮತ್ತು ಗೇಣಿದಾರರ ಸಮಸ್ಯೆ ಇತ್ತು ನಿಜ. ಆದರೆ ಅಧಿಕಾರದಲ್ಲಿ ಎಡಪಕ್ಷವಿದ್ದುದರಿಂದ ನಂತರದ ದಿನಗಳಲ್ಲಿ ಎಲ್ಲಾ ರೀತಿಯ ಪ್ರತಿಭಟನೆಗೆ ಮತ್ತು ಹೋರಾಟಕ್ಕೆ ಬಹಿರಂಗವಾಗಿ ಅವಕಾಶವಿದ್ದ ಸಂದರ್ಭದಲ್ಲಿ ಬಂದೂಕು ಹಿಡಿದು ಅರಣ್ಯದಲ್ಲಿ ಮರೆಯಾಗಿ ಹಿಂಸಾತ್ಮಕ ಹೋರಾಟ ನಡೆಸುವ ಅವಶ್ಯಕತೆ ನಮಗೆ ಕಾಣಲಿಲ್ಲ.”

ಇಂತಹ ಸತ್ಯದ ಅನುಭವದ ಮಾತುಗಳನ್ನು ಕರ್ನಾಟಕದಲ್ಲಿ ಹೋರಾಡುತ್ತಿರುವ ಮಾವೋವಾದಿಗಳು ಮನಗಾಣಬೇಕಿದೆ. ಕರ್ನಾಟಕ ರಾಜ್ಯಕ್ಕೆ ನಕ್ಸಲ್ ಹೊರಾಟ ಕಾಲಿಡುವ ಮುನ್ನವೆ ಈ ನೆಲದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ಇದ್ದವು. ಪರಿಸರದ ಉಳಿವಿಗಾಗಿ, ದಲಿತರು ಹಕ್ಕು ಮತ್ತು ರಕ್ಷಣೆಗಾಗಿ, ಕೃಷಿ ಕೂಲಿಕಾರ್ಮಿಕರ ಸೂಕ್ತ ವೇತನಕ್ಕಾಗಿ, ಮತ್ತು ತಾನು ಬೆಳೆದ ಫಸಲಿಗೆ ಸೂಕ್ತ ಬೆಲೆಯಿಲ್ಲದೆ ಪರದಾಡುತ್ತಿದ್ದ ರೈತರು, ಗೇಣಿದಾರರ ಸಮಸ್ಯೆ, ಆರಣ್ಯದಿಂದ ಒಕ್ಕಲೆಬ್ಬಿಸಲಾದ ಅರಣ್ಯವಾಸಿಗಳ ಸಮಸ್ಯೆ, ಎಲ್ಲವೂ ಇದ್ದವು. ಅವುಗಳಿಗೆ ಯಾರೂ ಬಂದೂಕಿನಿಂದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚಿಸಲಿಲ್ಲ. ಅವುಗಳಿಗೆ ಪ್ರಜಾಪ್ರಭುತ್ವ ನೀಡಿರುವ ಸಂವಿಧಾನ ಬದ್ದ ಹಕ್ಕುಗಳ ಅಡಿಯಲ್ಲಿ ಸೂಕ್ತವಾದ ಪರಿಹಾರ ಕಂಡುಕೊಳ್ಳುವ ಸಲುವಾಗಿ ಅನೇಕ ಹೋರಾಟದ ವೇದಿಕೆಗಳು ಅಸ್ತಿತ್ವದಲ್ಲಿ ಇದ್ದವು. ಈಗಲೂ ಇವೆ ಎಂಬ ಸತ್ಯವನ್ನು ಕನಾಟಕದ ಮಾವೋವಾದಿಗಳು ಅರಿಯಬೇಕಿದೆ.

ಸುಮಾರು ಮುವತ್ತು ವರ್ಷಗಳಿಂದ ಬಿಳಿಗಿರಿ ರಂಗನ ಬೆಟ್ಟದಲ್ಲಿ ಸೋಲಿಗರ ಉನ್ನತಿಗಾಗಿ ಶ್ರಮಿಸುತ್ತಿರುವ ಡಾ.ಸುದರ್ಶನ್ ಮತ್ತು ಹೆಗ್ಗಡದೇವನಕೋಟೆ ಸುತ್ತಮುತ್ತಲಿನ ಬುಡಕಟ್ಟು ಜನಾಂಗಗಳ ಅಭಿವೃದ್ಧಿಗಾಗಿ ಗೆಳಯರ ತಂಡ ಕಟ್ಟಿಕೊಂಡು ಸ್ವಯಂ ಸೇವಾ ಸಂಸ್ಥೆ ಮೂಲಕ ದುಡಿಯುತ್ತಿರುವ ಡಾ.ಬಾಲಸುಬ್ರಮಣ್ಯಂ ಇವರುಗಳ ಬದುಕು, ತ್ಯಾಗ ಮನೋಭಾವ ಇವೆಲ್ಲವನ್ನು ಮಾವೋವಾದಿಗಳು ತಮ್ಮ ಚಿಂತನಾ ಧಾರೆಯಲ್ಲಿ ಅಳವಡಿಸಿಕೊಳ್ಳುವುದು ಒಳಿತು. ಚಾಮರಾಜನಗರದಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿರುವ ಪ್ರೊ.ಜಯದೇವ ಇವರು ಹಿಂದುಳಿದ ವರ್ಗಗಳ ಮಕ್ಕಳು ಮತ್ತು ಬುಡಕಟ್ಟು ಜನಾಂಗಗಳ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಕನ್ನಡದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಪುತ್ರರಾದ ಜಯದೇವರವರು, ಈ ಮಕ್ಕಳಿಗಾಗಿ ವಿವಾಹವಾಗದೆ ಅವಿವಾಹಿತರಾಗಿ ಉಳಿದು ಚಾಮರಾಜನಗರದಲ್ಲಿ ಎಲೆಮರೆ ಕಾಯಿಯಂತೆ ವಾಸಿಸುತ್ತಾ ಐವತ್ತು ಮಕ್ಕಳನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಓದಿಸುತ್ತಿದ್ದಾರೆ. ಈ ಮೂವರು ಮಹನೀಯರು ಗಿರಿಜನ ಅಭಿವೃದ್ಧಿಗಾಗಿ ಮೂರು ದಶಕಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೂ ಸಹ ಎಂದೂ ವ್ಯವಸ್ಥೆಯ ವಿರುದ್ಧ ಕೈಗೆ ಬಂದೂಕ ತೆಗೆದುಕೊಳ್ಳಲಿಲ್ಲ. ಏಕೆಂದರೇ, ಉರಿಯುವ ಬೆಂಕಿಯಂತೆ ತಣ್ಣನೆಯ ಮಂಜುಗೆಡ್ಡೆ ಕೂಡ ಶಕ್ತಿಶಾಲಿ ಎಂಬುದನ್ನು ಬಲ್ಲ ಪ್ರಜ್ಞಾವಂತರಿವರು.

ಹೋರಾಟಗಳ ಬಗ್ಗೆ ಪ್ರವಾದಿಯೊಬ್ಬನ ಪ್ರವಚನದ ಹಾಗೆ ಅಥವಾ ನಮ್ಮ ಧಾರವಾಡದ ಎಮ್ಮೆಗಳು ಒಂದೂವರೆ ಕಿಲೋಮೀಟರ್ ಉದ್ದ ಸಗಣಿ ಹಾಕುವ ರೀತಿ ಮಾತನಾಡುವುದು ಅತಿಸುಲಭ. ಕ್ರಾಂತಿಯ ಕುರಿತು ಇಂತಹ ಮಾತುಗಳನ್ನಾಡುವ ಮುನ್ನ ಈವರೆಗೆ ಕರ್ನಾಟಕದಲ್ಲಿ naxals-indiaನಕ್ಸಲರ ಗುಂಡಿಗೆ ಬಲಿಯಾದ ರಾಯಚೂರು ಜಿಲ್ಲೆ ಮತ್ತು ಮಂಗಳೂರು, ಉಡುಪಿ ಜಿಲ್ಲೆಗಳ ಯುವಕರ ಕುಟುಂಬಗಳು ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಯಾರಾದರೂ ಹೋಗಿ ನೋಡಿದ ಉದಾಹರಣೆಗಳು ಇವೆಯಾ? ಗುಂಡಿಗೆ ಬಲಿಯಾದ ಯುವಕರ ಅಮಾಯಕ ಕುಟುಂಬಗಳು ಪೊಲೀಸರಿಗೆ ಹೆದರಿ ತಮ್ಮ ಮಕ್ಕಳ ಶವಗಳನ್ನು ತಮ್ಮ ಸುಪರ್ದಿಗೆ ಪಡೆಯಲು ಹಿಂಜರಿದ ಬಗ್ಗೆ ಎಲ್ಲಿಯೂ ವರದಿಯಾಗಲಿಲ್ಲ. ಕಳೆದ ನವಂಬರ್‌ನಲ್ಲಿ ಉಡುಪಿ ಜಿಲ್ಲೆಯ ಸುಬ್ರಮಣ್ಯದ ಬಳಿ ಗುಂಡಿಗೆ ಬಲಿಯಾದ ರಾಯಚೂರಿನ ಯುವಕ ಎಲ್ಲಪ್ಪನ ಶವವನ್ನು ತನ್ನೂರಿಗೆ ಕೊಂಡೊಯ್ಯಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ಅವನ ಸಹೋದರ ತಾಯಪ್ಪ ಎಂಬಾತ ಆಸ್ಪತ್ರೆ ಎದುರು ಕಣ್ಣೀರು ಹಾಕುತ್ತಾ ನಿಂತಿದ್ದಾಗ, ನಕ್ಸಲ್ ಚಳುವಳಿ ಕುರಿತ ಅಥವಾ ಕ್ರಾಂತಿ ಕುರಿತಾದ ಯಾವ ಭಾಷಣಗಳು, ಹೇಳಿಕೆಗಳು ಆತನ ನೆರವಿಗೆ ಬರಲಿಲ್ಲ. ಕೆಲವರ ತೆವಲಿಗೆ ಮತ್ತು ಅಪ್ರಬುದ್ಧ ಪ್ರಯೋಗಗಳಿಗೆ ಬಡವರ ಕುಟುಂಬಗಳ ಮುಗ್ಧ ಹುಡುಗರು ಬಲಿ ಕೊಡುತ್ತಿರುವ ಇಂತಹ ಹೋರಾಟ ಮತ್ತು ಚಳುವಳಿಗಳಿಗೆ ಯಾವ ಅರ್ಥವಿದೆ? ಇದರಿಂದ ಭವಿಷ್ಯದಲ್ಲಿ ಪ್ರಯೋಜನವಿದೆಯಾ? ಯಾವುದೋ ಒಂದು ಕಾಲಘಟ್ಟದಲ್ಲಿ ಪ್ರಸ್ತುತವಾಗಿದ್ದ ಹೋರಾಟ ಮತ್ತು ಚಿಂತನೆಗಳನ್ನು ಆಯಾ ಕಾಲಕ್ಕೆ ಅನುಗುಣವಾಗಿ ಪರಿಷ್ಕರಿಸದೆ ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೋದರೆ, ಅಲ್ಲಿ ಸಫಲತೆಗಿಂತ ವಿಫಲತೆಯನ್ನು ನಾವು ಕಾಣಬೇಕಾಗುತ್ತದೆ. ಪ್ರತಿಯೊಂದು ದಶಕದಲ್ಲಿ ಈ ನೆಲಕ್ಕೆ ಹೊಸ ತಲೆಮಾರು ಸಮಾಜಕ್ಕೆ ಸೇರ್ಪಡೆಯಾಗುತ್ತಿದ್ದು ಅದರ ಚಿಂತನಾಕ್ರಮ ನಮ್ಮ ಹಳೆಯ ಆಲೋಚನಾ ಕ್ರಮಗಳಿಗಿಂತ ಭಿನ್ನವಾಗಿದೆ. ಈಗಿನ ಯುವ ಶಕ್ತಿಗೆ ಸರ್ಕಾರವನ್ನು ಅಥವಾ ಸಮಾಜವನ್ನು ಮಣಿಸಲು ಯಾವುದೇ ಆಯುಧ ಬೇಕಾಗಿಲ್ಲ ಎಂಬ ಸತ್ಯವನ್ನು ನಾವು ಅರಿಯದಿದ್ದರೇ ವರ್ತಮಾನದ ನಾಗರೀಕ ಸಮಾಜದಲ್ಲಿ ಬದುಕಲು ನಾವು ಅಯೋಗ್ಯರು ಎಂದರ್ಥ.

ದಶಕಗಳಿಂದ ಮಹಿಳಾ ಮೀಸಲಾತಿ ಕುರಿತ ಮಸೂದೆಯೊಂದು ಎಲ್ಲಾ ರಾಜಕೀಯ ಪಕ್ಷಗಳ ಅಗೋಚರ ಅಪವಿತ್ರ ಮೈತ್ರಿಯಿಂದಾಗಿ ಸಂಸತ್ತಿನಲ್ಲಿ ಕೊಳೆಯುತ್ತಾ ಬಿದ್ದಿದೆ. ಆದರೆ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆದ ಯುವತಿಯ ಮೇಲಿನ ಅತ್ಯಾಚಾರದಿಂದ ಸಿಡಿದೆದ್ದ ದೇಶದ ಯುವಜನತೆ, ಕೇವಲ ಸರ್ಕಾರಗಳನ್ನು ಮಾತ್ರವಲ್ಲ, ನ್ಯಾಯಲಯಗಳು, ಸಮಾಜ ಎಲ್ಲವೂ ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಇಡೀ ದೇಶಾದ್ಯಂತ ಬೀದಿಗಿಳಿದು ಹೋರಾಡಿದ ಯುವಕ ಮತ್ತು ಯುವತಿಯರ ಕೈಗಳಲ್ಲಿ ಆಯುಧ ಅಥವಾ ಬಂದೂಕಗಳಿರಲಿಲ್ಲ, ಬದಲಾಗಿ ಭಿತ್ತಿ ಪತ್ರ ಮತ್ತು ಉರಿಯುವ ಮೇಣದ ಬತ್ತಿಗಳಿದ್ದವು. ಇದೆಲ್ಲಕ್ಕಿಂತ ಹೆಚ್ಚಾಗಿ ವ್ಯವಸ್ಥೆಯನ್ನು ಮಣಿಸಬೇಕೆಂಬ ಸಾತ್ವಿಕ ಸಿಟ್ಟಿತ್ತು. ಕಣ್ಣೆದುರುಗಿನ ಇಂತಹ ವಾಸ್ತವ ಸತ್ಯಗಳನ್ನು ಗ್ರಹಿಸದೆ ಕ್ರಾಂತಿಯ ಬಗ್ಗೆ, ಹೋರಾಟಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವುದು, ಇಲ್ಲವೇ ಬರೆಯುವುದೆಂದರೆ, ಅದು ಗಾಳಿಯಲ್ಲಿ ಕತ್ತಿ ತಿರುಗಿಸುವ ಕೆಲಸವಾಗಬಲ್ಲದು ಅಷ್ಟೇ.

(ಮುಂದಿನ ವಾರ ಅಂತಿಮ ಅಧ್ಯಾಯ)

10 thoughts on “ಪ್ರಜಾ ಸಮರ – 18 (ನಕ್ಸಲ್ ಕಥನ)

  1. Pavan

    What ever you said in this article is 100 percent true…. People who talk about Naxalism and who supports Naxalism are not sending there children or relatives for this.. There is a proverb in Kannda “Kandora makkalannu bavige talli Ala Nodu” anta.. Same thing these Buddi(laddi) jeevigalu madtha irodu…

    Reply
  2. vasanthn

    Sir,

    You have misunderstood the ideological base behind naxalism. Your reading is wrong. You are misleading the readers as well. Naxalism might be a failed effort but has a strong ideological foundations. In your early writings you mentioned about Jarkand and Chhatisgarh. You know what is happening there.

    Your previous post also had a lot of negatives. CPI (ML) is a political party like any other parties but their way is different.

    You should not make a sweeping statement about a movement which has almost 6 decades of history and struggle for upliftment of poor people. Your hypothesis is like British were strong in Pre-independent India so we should not have raised our voice for our freedom. If that was the case we would have remained in the clutches of British even today. There was struggle, sacrifice. Naxals also help us and add strength to the cause. What ever it may be we need aggressive forces to combat governments anti-people policies.

    Reply
  3. naveen

    Mr Vasanth:

    Can you give instance where naxalism is successful? What sort of development or change you can get by making the entire system as enemy? Whatever Jagadeesh Koppa has written is the fact. You cant win by waging war.

    Reply
  4. jagadishkoppa

    ವಸಂತ್ ಅವರೇ ನಿಮ್ಮ ಅಭಿಪ್ರಾಯವನ್ನು ತಳ್ಳಿಹಾಕುವಂತಿಲ್ಲ. ನಾನು ಅಂತಿಮ ಅಧ್ಯಾಯದಲ್ಲಿ ವಿವರವಾಗಿ ಚರ್ಚಿಸಿದ್ದೇನೆ. ನಾನು 17ನೇ ವಯಸ್ಸಿನಿಂದ 44ನೇ ವಯಸ್ಸಿನವರೆಗೆ ಹೋರಾಟದ ಹುಚ್ಚು ಹತ್ತಿಸಿಕೊಂಡಿದ್ದವನು. 12ವರ್ಷದ ಹಿಂದೆ ಎಲ್ಲವನ್ನು ಬಿಟ್ಟಿದ್ದೇನೆ. ಆದರೇ ಅನ್ಯಾಯ ಮತ್ತು ಅಕ್ರಮಗಳಿಗೆ ವ್ಯಯಕ್ತಿಕ ನೆಲೆಯಲ್ಲಿ ಹೋರಾಟ ಮಾಡುವ ಮನಸ್ಸು ಮತ್ತು ಶಕ್ತಿಯನ್ನು ಉಳಿಸಿಕೊಂಡಿದ್ದೇನೆ. ಆಂಧ್ರದಲ್ಲಿ
    219 ಮಹಿಳೆಯರು ಪೀಪಲ್ಸ್ ವಾರ್ ಗ್ರೂಪ್ ನ ಪರವಾಗಿ ನಕ್ಸಲಿಯ ಮಹಿಳೆಯರು ಎಂಬ ಹಣೆಪಟ್ಟಿಯೊಂದಿಗೆ ಹತರಾಗಿದ್ದಾರೆ. ಅವರ ಹಿನ್ನಲೆ ಬದುಕು, ತ್ಯಾಗ ನೋಡಿದಾಗ ಕಣ್ಣೀರು, ಸಿಟ್ಟು ಒಟ್ಟಿಗೆ ಒತ್ತರಿಸಿ ಬರುತ್ತದೆ. ಕಾಲಕ್ಕೆ ತಕ್ಕಂತೆ ನಮ್ಮ ಚಿಂತನೆಗಳು ಹೊಸ ರೂಪ ದೊಂದಿಗೆ ಪರಿಷ್ಕರಣೆಗೊಳ್ಳದಿದ್ದರ ಏನು ಪ್ರಯೋಜನ? ಈ ದೇಶದಲ್ಲಿ ಇವೊತ್ತು ನಾನು ಆಸೆಗಣ್ಣಿನಿಂದ ನೋಡುವ ಒಂದು ರಾಜಕೀಯ ಸಂಘಟನೆ ಎಂಬುದು ಇದ್ದರೆ ಅದು ಕಮ್ಯೂನಿಷ್ಟ್ ಪಕ್ಷ ಮಾತ್ರ.ಆದರೆ ಏನು ಮಾಡುವುದು? ಈಗ ಅದು ಇತ್ತೀಚೆಗೆ ಕರ್ಮಠ ಬ್ರಾಹ್ಮಣರಿಂದ ತುಂಬಿಕೊಂಡಿರುವ ಆರ್.ಎಸ್,ಎಸ್. ನಂತಾಗಿದೆ. ಜ್ಯೋತಿ ಬಸುಗೆ ಪ್ರಧಾನಿಯಾಗುವ ಅವಕಾಶವನ್ನು ಸಿದ್ಧಾಂತದ ಹಿನ್ನಲೆಯಿಂದ ತಡೆದದ್ದು ತಪ್ಪಲ್ಲವೆ? ದೇಶವನ್ನು ಮಿತ್ರ ಪಕ್ಷಗಳ ಸಹಕಾರದಿಂದ ಸುಧಾರಿಸುವ ಅವಕಾಶವನ್ನು ಮತ್ತು ಕಮ್ಯೂನಿಷ್ಟರ ಶ್ರದ್ಧೆ ಮತ್ತು ಬದ್ಧತೆಯನ್ನು ತೋರಿಸುವ ಅವಕಾಶ ಕಳೆದುಕೊಂಡಂತಾಯಿತು. ಹಿರಿಯ ಮುತ್ಸಧಿ ಸೋಮನಾಥ ಚಟರ್ಜಿ ಪಕ್ಷ ತೊರೆಯಲು ಕಾರಣವೇನು? ಇವೆಲ್ಲವನ್ನು ಗಮನಿಸಬೇಕಾಗಿದೆ. ಕಮ್ಯೂನಿಷ್ಟರು ತಮ್ಮ ಧೋರಣೆಯನ್ನು ಬದಲಿಸಕೊಳ್ಳಬೇಕಾಗಿದೆ. ಯಾವುದೇ ದ್ವೇಷ ಅಥವಾ ಮಮಕಾರವಿಲ್ಲದೆ ವಸ್ತು ನಿಷ್ಟೆಯಿಂದ ಒಬ್ಬ ಪತ್ರಕರ್ತನಾಗಿ ನಕ್ಸಲ್ ಕಥನವನ್ನು ಕಂಡಿದ್ದೇನೆ. ಇದರ ಹಿಂದೆ ನನಗೆ ಯಾವುದೇ ವ್ಯಯಕ್ತಿಕ ಹಿತಾಸಕ್ತಿ ಇಲ್ಲ. ಬರೆವಣಿಗೆಯಿಂದ ಬದುಕು ಕಟ್ಟಿಕೊಂಡಿರುವ ನಾನು ಅಕ್ಷರಕ್ಕೆ ದ್ರೋಹ ಬಗೆಯಬಾರದು ಎಂದುಕೊಂಡಿದ್ದೇನೆ. ನಾನು ಎತ್ತಿರುವ ಕೆಲವು ವಸ್ತು ಸ್ಥಿತಿಗಳು ಹೋರಾಟಗಾರರಿಗೆ ಬೇಸರವಾಗಿದ್ದರೆ ನಾನು ಅಸಹಾಯಕ. ಅನ್ಯಾಯವನ್ನು ಅನ್ಯಾಯವೆಂದೇ ಹೇಳಬೇಕಲ್ಲವೆ?
    ಇಂತಿ ಪ್ರೀತಿಯಿಂದ ಜಗದೀಶ್ ಕೊಪ್ಪ

    219

    Reply
  5. anand prasad

    ಕರ್ನಾಟಕದಲ್ಲಿ ನಕ್ಸಲ್ ಹೋರಾಟಕ್ಕೆ ಭವಿಷ್ಯ ಇಲ್ಲ. ಬಂದೂಕು ಹಿಡಿದು ಹೋರಾಡುವುದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನದನ್ನು ಅಹಿಂಸಾತ್ಮಕ ಪ್ರಜಾಪ್ರಭುತ್ವ ವಿಧಾನದ ಮೂಲಕ ಸಾಧಿಸಲು ಸಾಧ್ಯ. ಆದರೂ ನಮ್ಮಲ್ಲಿ ಹೋರಾಟಗಳು ಯಶಸ್ವಿಯಾಗುತ್ತಿಲ್ಲ ಏಕೆಂದರೆ ನಿಸ್ವಾರ್ಥ ಭಾವದಿಂದ ಹೋರಾಟವನ್ನು ಮುನ್ನಡೆಸುವ ಸಮರ್ಥ ನಾಯಕರು ನಮ್ಮಲ್ಲಿ ಇಲ್ಲ. ಜನಬೆಂಬಲ ಪಡೆದುಕೊಳ್ಳಬೇಕಾದರೆ ಪ್ರಭಾವಶಾಲಿ ಮಾತಿನ ಬಲ ಹೊಂದಿದ್ದು ಸಂಘಟನಾ ಚತುರತೆ ಇರಬೇಕು ಮಾತ್ರವಲ್ಲ ಗಾಢ ಚಿಂತನಶೀಲ ಗುಣ ಹೊಂದಿರಬೇಕು. ಇದು ಎಲ್ಲರಲ್ಲೂ ಇರುವುದಿಲ್ಲ ಮತ್ತು ಇದನ್ನು ತರಬೇತಿ ನೀಡಿ ಬೆಳೆಸಲು ಸಾಧ್ಯವಿಲ್ಲ. ಇದು ಹುಟ್ಟಿನಿಂದಲೇ ಬರುವ ಒಂದು ಅನುವಂಶಿಕ ಸಾಮರ್ಥ್ಯವಾಗಿದೆ. ಇಂಥ ಸಾಮರ್ಥ್ಯ ಇರುವವರು ಇಂದು ಮ್ಯಾನೇಜ್ಮೆಂಟ್ ಹುದ್ದೆಗಳಲ್ಲಿ ಲಕ್ಷಾಂತರ ಸಂಬಳ ಪಡೆಯುತ್ತಾ ಭೋಗಜೀವನದಲ್ಲಿ ಮುಳುಗಿದ್ದಾರೆ ಹಾಗೂ ದೇಶದ ಬಗೆಗಾಗಲಿ, ನಾಡಿನ ಬಗೆಗಾಗಲಿ ಚಿಂತನೆ ನಡೆಸಲಾಗದ ಜಡ ಜೀವನಶೈಲಿ ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಹೋರಾಟಗಳನ್ನು ಮುನ್ನಡೆಸುವ, ಅದಕ್ಕೆ ಜನಬೆಂಬಲ ಗಳಿಸಿಕೊಡಬಲ್ಲ ನಿಸ್ವಾರ್ಥ ಮನೋಭಾವದ ಸಮರ್ಥರ ತೀವ್ರ ಅಭಾವವಿದೆ. ಇದುವೇ ನಮ್ಮ ದೇಶದ ಹಾಗೂ ನಾಡಿನ ಅಧೋಗತಿಗೆ ಮೂಲ ಹಾಗೂ ಪ್ರಧಾನ ಕಾರಣ.

    Reply
  6. anand prasad

    ಕಮ್ಯುನಿಸ್ಟ್ ವ್ಯವಸ್ಥೆಯೊಳಗೆ ಹಲವು ಗಂಭೀರ ಲೋಪಗಳಿವೆ. ಹೀಗಾಗಿಯೇ ಒಂದು ಕಾಲದಲ್ಲಿ ಇಡೀ ಜಗತ್ತಿನಲ್ಲಿಯೇ ಭರವಸೆ ಭರವಸೆ ಮೂಡಿಸಿದ್ದ ಕಮ್ಯುನಿಷ್ಟ್ ವ್ಯವಸ್ಥೆ ಇಂದು ಜಗತ್ತಿನಿಂದ ಮಾಯವಾಗಿದೆ. ವ್ಯಕ್ತಿ ಸ್ವಾತಂತ್ರ್ಯದ ನಿರಾಕರಣೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ಕಾರ್ಮಿಕ ಸಂಘಟನೆಗಳ ಹೆಸರಿನಲ್ಲಿ ಸೌಲಭ್ಯಗಳಿಗೆ ಹಾಗೂ ಮಿತಿಮೀರಿದ ವೇತನಕ್ಕಾಗಿ ಬೆಳೆಸಿಕೊಂಡ ಮುಷ್ಕರ ಸಂಸ್ಕೃತಿ, ಕಮ್ಯುನಿಷ್ಟ್ ವ್ಯವಸ್ಥೆ ಜನತೆಯಲ್ಲಿ ಬೆಳೆಸುವ ಆಲಸ್ಯ ಮನೋಭಾವ, ಉದ್ಯಮಶೀಲತೆಯ ಕೊರತೆ ಇವುಗಳು ಅಂತಿಮವಾಗಿ ಇಡೀ ಕಮ್ಯುನಿಷ್ಟ್ ವ್ಯವಸ್ಥೆಯನ್ನು ಜಗತ್ತಿನಿಂದ ಮರೆಯಾಗುವಂತೆ ಮಾಡಿವೆ. ಕಮ್ಯುನಿಷ್ಟ್ ವ್ಯವಸ್ಥೆಯಲ್ಲಿ ಉದ್ಯೋಗಿಗಳಿಗೆ ಅತಿಯಾದ ಭದ್ರತೆ ಇರುವುದು ಆಲಸ್ಯ, ಬೇಜವಾಬ್ದಾರಿ ಬೆಳೆಯಲು ತನ್ಮೂಲಕ ಇಡೀ ವ್ಯವಸ್ಥೆ ಕೆಟ್ಟು ಹೋಗಲು ಪ್ರಧಾನ ಕಾರಣವಾಗಿ ಕಂಡುಬರುತ್ತದೆ. ಇದು ನಮ್ಮ ಸರ್ಕಾರದ ಎಲ್ಲ ಉದ್ಯೋಗಗಳಿಗೂ ಅನ್ವಯವಾಗುತ್ತದೆ. ಅವಿಭಕ್ತ ಕುಟುಂಬದಲ್ಲಿ ಇರುವಾಗ ಕೆಲವು ಸದಸ್ಯರು ಆಲಸ್ಯ, ಬೇಜವಾಬ್ದಾರಿ ಬೆಳೆಸಿಕೊಳ್ಳುತ್ತಾರೆ ಆದರೆ ವಿಭಕ್ತ ಕುಟುಂಬವಾಗಿ ವಿಭಜನೆ ಆದಾಗ ಹೆಚ್ಚಿನ ಉತ್ಸಾಹ, ಶ್ರದ್ಧೆಯಿಂದ ದುಡಿಯುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದು. ಇದೇ ಮನೋಭಾವವನ್ನು ಕಮ್ಯುನಿಷ್ಟ್ ವ್ಯವಸ್ಥೆಯೂ ಜನತೆಯಲ್ಲಿ ಬೆಳೆಸುತ್ತದೆ. ಹೀಗಾಗಿಯೇ ಭಾರತದಲ್ಲೂ ಕಮ್ಯುನಿಷ್ಟ್ ಪಕ್ಷಗಳಿಗೆ ಭವಿಷ್ಯ ಕಂಡುಬರುತ್ತಿಲ್ಲ. ಕಮ್ಯುನಿಷ್ಟ್ ಪಕ್ಷಗಳು ಆಮೂಲಾಗ್ರ ಬದಲಾವಣೆಗಳಿಗೆ ತಮ್ಮನ್ನು ಒಡ್ಡಿಕೊಳ್ಳದೆ ಹೋದರೆ ಅವುಗಳಿಗೆ ಎಂದಿಗೂ ಭವಿಷ್ಯ ಇಲ್ಲ.

    Reply
  7. Pavan

    I agree Naxalism was started for good reason but now there is no difference between robbers and Naxalites.. No one want to put bomb in the dead body including Talibanies also but these Naxalites did that.. it only shows what kind of people are these..

    Reply
  8. Raghavendra S

    ನಕ್ಸಲ್ ಚಳವಳಿ ಜನರಿಗೆ ಅನುಕೂಲವಾಗಿರಬೇಕು ಆದರೇ ಸ್ವಹಿತಸಕ್ತಿಯಾಗಬಾರದು… ಕರ್ನಾಟಕದಲ್ಲಿ ಶಸ್ತ್ರಸ್ತ್ರ ಅಂದರೇ ಹಿಂಸೆಯ ಮೂಲಕ ಹೋರಾಟದ ಹಾದಿ ಹಿಡಿದಾಗ ನಮ್ಮ ಭಾಗದ ಜನರಿಗೆ ಅಂದರೇ.. ಕೊಪ್ಪ ತಾಲ್ಲೂಕಿನ ನಕ್ಸಲ್ ಪ್ರದೇಶ ಹಾಗೂ ಮೂಡಿಗೆರೆ ಹಾಗೂ ಶೃಂಗೇರಿಯ ದಟ್ಟ ಅರಣ್ಯದಲ್ಲಿ ಇದ್ದ ನಮ್ಮ ಆದಿವಾಸಿ ಜನಾಂಗಗಳನ್ನ ನಕ್ಸಲರಂತೆ ಕಾಣ ತೊಡಗಿದರು. ಈ ಚಳವಳಿಗಳು ಅಹಿಂಸಾತ್ಮಕವಾಗಿರಬೇಕೆ ಹೊರತು ಹಿಂಸಾತ್ಮಕವಾಗಿರಬಾರದು .. ನಿಮ್ಮ ಲೇಖನದಲ್ಲಿ ಪ್ರಸ್ತುತ ನಕ್ಸಲ್ ಪ್ರದೇಶದಲ್ಲಿ ಬುಡಕಟ್ಟು ಜನಾಂಗಅನುಭವಿಸುತ್ತಿರುವ ನೋವಿನ ಕಥೆಯು ಇದೆ

    Reply

Leave a Reply

Your email address will not be published. Required fields are marked *