Daily Archives: January 19, 2013

ಧಾರವಾಡ ಸಾಹಿತ್ಯ ಸಂಭ್ರಮ – ಭ್ರಮೆಗಳು

– ಸಂಗಮೇಶ ತುಕ್ಕಾನಟ್ಟಿ

ಧಾರವಾಡದಲ್ಲಿ ಅದೇನೋ  ಸಾಂಸ್ಕೃತಿಕ-ಸಾಮಾಜಿಕ ಅನಾಹುತ ಸಂಭವಿಸುತ್ತಿದೆಯೇನೋ ಎಂಬಂತೆ ಸಾಮಾಜಿಕ ತಾಣಗಳಲ್ಲಿ ಎರಡು-ಮೂರು ದಿನಗಳ ಹಿಂದೆ ಹುಯಿಲೆಬ್ಬಿತು. “ಧಾರವಾಡ ಸಾಹಿತ್ಯ ಸಂಭ್ರಮ”ಕ್ಕೆ ಆಹ್ವಾನಿತರಾಗಿದ್ದ ಅಗ್ರಗಣ್ಯರು ಒಬ್ಬೊಬ್ಬರಾಗಿ ತಾವು ಆ ಕಾರ್‍ಯಕ್ರಮಕ್ಕೆ ಹೋಗುವುದಿಲ್ಲ ಎಂದು ಘೋಷಿಸಿದರು.

ಅವರ ಹೇಳಿಕೆಗಳು..ಅರೇ, ಇಡೀ ಕಾರ್ಯಕ್ರಮವೇ ರದ್ದಾಗುತ್ತದೆಯೇನೋ ಎಂಬ ಗೊಂದಲ ಸೃಷ್ಟಿಸಿದ್ದಂತೂ ನಿಜ. ಒಂದರ್ಥದಲ್ಲಿ ಅಂತಹದೊಂದು ಕಾರ್ಯಕ್ರಮ ನಡೆಯುವ ಬಗ್ಗೆ ಮಾಹಿತಿ ಇಲ್ಲದಿದ್ದ ಅನೇಕರಿಗೆ ಈ ಹೇಳಿಕೆಗಳ ಮೂಲಕ ’ಜ್ಞಾನೋದಯ’ ಆಯಿತು.

ಸಂಘಟಕರು ಹೇಳುವಂತೆ ಅವರು ಜೈಪುರ ಸಾಹಿತ್ಯ ಹಬ್ಬದಿಂದ ಪ್ರೇರಿತರಾಗಿ ಧಾರವಾಡದಲ್ಲಿ ಇಂತಹದೊಂದು ಕಾರ್ಯಕ್ರಮ ಆಯೋಜಿಸಿದ್ದಾರೆ. ಅವರಿಗಾದ ಪ್ರೇರಣೆ ಎಷ್ಟು ಗಾಢವಾಗಿತ್ತೆಂದರೆ, ಜೈಪುರ ಕಾರ್ಯಕ್ರಮದ ಸಂಘಟಕರು ವಿಧಿಸಿದ್ದ ನಿಯಮಾವಳಿಗಳನ್ನೇ ಅನುವಾದ ಮಾಡಿ ಪ್ರಕಟಿಸಿದರು.Dharwad Sahithya Sambrama Broucher - 2 ಸಲ್ಮಾನ್ ರಶ್ದಿಯಂತಹ ವಿವಾದಿತ ಲೇಖಕರು ಭಾಗವಹಿಸುವ ನಿರೀಕ್ಷೆಯಲ್ಲಿ ಅಲ್ಲಿಯ ಸಂಘಟಕರು ತುಸು ಹೆಚ್ಚೇ ಎನ್ನಬಹುದಾದ ನಿಯಮಾವಳಿಗಳನ್ನು ರೂಪಿಸಿಕೊಂಡಿದ್ದರು. ಹಾಗಾಗಿಯೇ ಶಸ್ತ್ರಾಸ್ತ್ರಗಳನ್ನು ತರಬಾರದು ಎನ್ನುವ ಸೂಚನೆಯಿತ್ತು. ಆದರೆ ಧಾರವಾಡದ ಕಾರ್ಯಕ್ರಮಕ್ಕೆ ಅವೆಲ್ಲವೂ ಬೇಕಿಲ್ಲ.

ಅದರಲ್ಲೂ ಕೆಲವು ಸೂಚನೆಗಳಂತೂ ಅಸಂಬದ್ಧ. ಸಭೆಯಲ್ಲಿ ಗಂಭೀರವಾಗಿ ವರ್ತಿಸಬೇಕು.. ಸಭೆಯ ಆಸ್ತಿ ಪಾಸ್ತಿಗಳಿಗೆ ಹಾನಿಮಾಡಿದಲ್ಲಿ ಪ್ರತಿನಿಧಿಗಳೇ ನಷ್ಟ ಭರಿಸಬೇಕು.. ಎನ್ನುವಂತಹ ಮಾತುಗಳ ಅಗತ್ಯವೇನಿತ್ತು? ಇವುಗಳ ಕಾರಣಕ್ಕೆ ಹಲವು ಲೇಖಕರು ಇಡೀ ಕಾರ್ಯಕ್ರಮದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಹಲವರ ವಿರೋದಕ್ಕೆ ಮುಖ್ಯ ಕಾರಣ ಆಗಿರುವುದು – ಪ್ರವೇಶ ಶುಲ್ಕ ಮತ್ತು ನಿಯಮಾವಳಿಗಳು. ಅನೇಕರಿಗೆ ಇದು ಜಾಗತೀಕರಣದ ಹಿನ್ನೆಲೆಯಲ್ಲಿ ರೂಪುಗೊಂಡಿರುವ ದೊಡ್ಡ ವ್ಯಾಪಾರೀ ಮನೋಭಾವದ ಕಾರ್ಯಕ್ರಮವಾಗಿ ಕಾಣುತ್ತಿದೆ. ಆಹ್ವಾನ ಪತ್ರಿಕೆಯಲ್ಲಿ ಹಲವರಿಗೆ ಜಾಹೀರಾತು ಕಂಪನಿಗಳು ಕಾಣಿಸಿವೆ.

ಆದರೆ ಕಾರ್ಯಕ್ರಮ ಸಂಘಟಕರ ಉತ್ಸಾಹಕ್ಕೂ, ವಿರೋಧ ವ್ಯಕ್ತಪಡಿಸುತ್ತಿರುವವರ ಉಮ್ಮೇದಿಗೂ ತಾಳ-ಮೇಳ ಕಾಣುತ್ತಿಲ್ಲ. ಸಂಘಟಕರ ಉತ್ಸಾಹಕ್ಕಿಂತಲೂ ವಿರೋಧಿಸುವವರ ಉಮ್ಮೇದಿ ತುಸು ಹೆಚ್ಚಾಗಿದೆ. ಅನೇಕರು ತಮ್ಮ ನಿಷ್ಟುರ ಮಾತುಗಳಿಂದ ಸ್ಪಷ್ಟ ಆಲೋಚನೆಗಳಿಂದಲೇ ವಿರೋಧಿಸಿದ್ದರೆ, ಮತ್ತೆ ಕೆಲವರ ಮಾತುಗಳಲ್ಲಿ ಸ್ಪಷ್ಟತೆ ಇಲ್ಲ.

ಕತೆಗಾರ ಕುಂವೀಯವರು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದಾರೆ. ವಿಚಿತ್ರ ನೋಡಿ, ಅಮೆರಿಕಾದಲ್ಲಿ ನಡೆದ ಅಕ್ಕ ಕನ್ನಡ ಸಮ್ಮೇಳನಕ್ಕೆ ಭಾಗವಹಿಸಲು ಇವರಿಗೆ ಇಂತಹ ಯಾವ ಮುಜುಗರವೂ ಆಗಲೇ ಇಲ್ಲ. ಅಲ್ಲಿಯ ಸಂಘಟಕರು ನಡೆಸಿದ ಕಾರ್ಯಕ್ರಮ ರೂಪು-ರೇಷೆ ಬೇರೆಯಾಗಿತ್ತೆ? ಇವರೇ ಅನೇಕ ಕಾರ್ಯಕ್ರಮದಲ್ಲಿ, ಆಪ್ತರಲ್ಲಿ ಹೇಳಿಕೊಂಡಂತೆ, ಅವರು ಅಮೆರಿಕಾ ವೀಸಾಗಾಗಿ ಅಮೆರಿಕಾ ಎಂಬೆಸಿ ಮುಂದೆ ಮುಜುಗರ ಅನುಭವಿಸಬೇಕಾಯಿತು. ಅಮೆರಿಕಾದ ಕಾರ್ಯಕ್ರಮಕ್ಕೂ ಕರ್ನಾಟಕ ಸರಕಾರ ಹಣ ನೀಡಿತ್ತು. ಸಾಹಿತಿ, ಕಲಾವಿದರನ್ನು ಅಲ್ಲಿಗೆ ಕಳುಹಿಸುವ ಜವಾಬ್ದಾರಿಯನ್ನು ಹೊತ್ತಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಅಮೆರಿಕಾ ತನಕ ಹೋಗಿಬಂದವರು ಧಾರವಾಡದ ಕಾರ್ಯಕ್ರಮ ವಿರೋಧಿಸುತ್ತಾರೆ ಎಂದರೆ ಅನುಮಾನದಿಂದಲೇ ಗ್ರಹಿಸಬೇಕಾಗುತ್ತದೆ.

ಕರ್ನಾಟಕದಲ್ಲಿ ನೀನಾಸಂ ಪ್ರತಿ ವರ್ಷ ಸಂಸ್ಕೃತಿ ಶಿಬಿರ ನಡೆಸುತ್ತದೆ. ಅದರ ಪ್ರವೇಶ ಶುಲ್ಕ ಈಗ 1,800 ರೂ ಇರಬಹುದು. ನೀನಾಸಂ ಕಾರ್ಯಕ್ರಮಗಳಿಗೂ ಸರಕಾರದ ಅನುದಾನ ಇರುವುದು ಗೊತ್ತಿರುವ ಸಂಗತಿ.

ಈ ಲೇಖಕ ಧಾರವಾಡದ ಸಂಘಟಕರನ್ನು ಸಂಪರ್ಕಿಸಿದಾಗ ತಿಳಿದದ್ದು, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಐದು ಲಕ್ಷ ರೂಗಳನ್ನು ನೀಡಲು ಒಪ್ಪಿದೆಯಂತೆ. ಉಳಿದಂತೆ ಅವರು ಕೆಲ ಸಂಘ ಸಂಸ್ಥೆಗಳ ಮೊರೆ ಹೋಗಿದ್ದಾರೆ. ಅವರು ಈಗ ಹೇಳುವ ಪ್ರಕಾರ ಕಾರ್ಯಕ್ರಮದ ಒಟ್ಟು ವೆಚ್ಚ 16 ರಿಂದ 18 ಲಕ್ಷ ರೂ ಎಂದು ಅಂದಾಜಿಸಿದ್ದಾರೆ. ಹಾಗಾದರೆ ಸಂಭ್ರಮದ ಅಧ್ಯಕ್ಷರು ಮೊದಲು ತಮ್ಮ ವೆಬ್ ತಾಣದಲ್ಲಿ ಅಂದಾಜು ವೆಚ್ಚ 31 ಲಕ್ಷ ಎಂದು ಹೇಳಿದ್ದೇಕೆ? ವಾದ-ವಿವಾದ ಎದ್ದ ತಕ್ಷಣ ಅಂದಾಜು ವೆಚ್ಚ ಅರ್ಧದಷ್ಟು ಕಡಿಮೆಯಾಯಿತೆ?

ಮತ್ತು ಸರ್ಕಾರದಿಂದ ಪ್ರಾಯೋಜಕತ್ವ ಪಡೆದ ಮೇಲೆ ಇಷ್ಟು ದುಬಾರಿಯಾಗಿ ಪ್ರವೇಶ ಶುಲ್ಕ ಇಡಬೇಕೆ? ಸಂಪನ್ಮೂಲ ವ್ಯಕ್ತಿಗಳು ಮತ್ತು ಪ್ರೇಕ್ಷಕರಿಬ್ಬರೂ ಸೇರಿ ನಾಲ್ಕು ನೂರು ಜನರನ್ನು ದಾಟದ ಈ “ಸಂಭ್ರಮ”ಕ್ಕೆ 16 ಲಕ್ಷ ರೂಪಾಯಿ ಖರ್ಚು ಬರುತ್ತದೆ ಎಂದರೆ, ಒಬ್ಬೊಬ್ಬರಿಗೆ ತಲಾ ನಾಲ್ಕು ಸಾವಿರ ವೆಚ್ಚ ಬೀಳುತ್ತದೆ. ಈ ಕೋನದಿಂದ ನೋಡಿದರೆ, ಯಾವ ಕಾರ್ಯಕ್ರಮಕ್ಕೆ ಮತ್ತು ಯಾರಿಗೆ ಇವರು ಹತ್ತಾರು ಸಾವಿರ ಕೊಟ್ಟು ಕರೆಸಿಕೊಳ್ಳುತ್ತಿದ್ದಾರೆ? ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ?

ದುಡ್ಡು ತೆಗೆದುಕೊಂಡು ಸಾಹಿತ್ಯ ಕಾರ್ಯಕ್ರಮ ಆಯೋಜಿಸುವುದು ಅಕ್ಷಮ್ಯ ಅಪರಾಧವೇನಲ್ಲ. ಆದರೆ, ಸರ್ಕಾರದಿಂದ ದುಡ್ಡು -ಅದು ಯಾವುದೇ ಪ್ರಮಾಣದಲ್ಲಿರಲಿ- ತೆಗೆದುಕೊಂಡಾಗ ಆಯೋಜಕರು ಮತ್ತು ಸರ್ಕಾರ ಇಬ್ಬರೂ ಕೆಲವು ನಿಬಂಧನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಅದು ಇಲ್ಲಿ ಆದಂತೆ ಕಂಡುಬರುವುದಿಲ್ಲ.

ಇದೇ ಸಂದರ್ಭದಲ್ಲಿ, ಈ ಕಾರ್ಯಕ್ರಮಕ್ಕೆ ಪ್ರತಿರೋಧವಾಗಿ ಧಾರವಾಡದ ಇನ್ನೊಂದು ಸಾಹಿತಿ-ಬರಹಗಾರರ ವರ್ಗ ಪ್ರತಿ-ಸಮ್ಮೇಳನ ನಡೆಸಲು ಹೊರಟಿದೆ. ಅದು ಕೇವಲ ಈ ವರ್ಷ ನಡೆಸುವುದರ ಬದಲು ಪ್ರತಿ ವರ್ಷ ನಡೆಸಲು ಅಥವ ತಾವೇ ಒಂದು ಪರ್ಯಾಯ ಕೊಡಲು ಸಾಧ್ಯವಾಗಿದ್ದೇ ಆದರೆ ಅವರ ಪ್ರಾಮಾಣಿಕತೆಗೂ ಬೆಲೆ ಬರುತ್ತದೆ.

ಈ ವಿಷಯದ ಕಾರಣದಿಂದಲಾದರೂ ಬಹಳ ದಿನಗಳಿಂದ ನಿದ್ದೆ ಹೋದಂತಿದ್ದ ಧಾರವಾಡದ ಕನ್ನಡ ಸಾಂಸ್ಕೃತಿಕ ಲೋಕ ಕನ್ನಡ ಮತ್ತು ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಗತ್ಯಗಳ ಬಗ್ಗೆ ಕ್ರಿಯಾಶೀಲವಾಗುವುದಾದರೆ, ಒಳ್ಳೆಯದೇ.