Daily Archives: January 21, 2013

ಟಿಪ್ಪು ವಿ.ವಿ. ವಿವಾದ – ತಲೆ ಮಾಸಿದವರ ತಳಮಳಗಳು


– ಡಾ.ಎನ್.ಜಗದೀಶ್ ಕೊಪ್ಪ


 

ಕೇಂದ್ರ ಸರ್ಕಾರ ಶ್ರೀರಂಗಪಟ್ಟಣದಲ್ಲಿ ಅಲ್ಪ ಸಂಖ್ಯಾತರ ಉನ್ನತ ಶಿಕ್ಷಣಕ್ಕಾಗಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ವಿಶ್ವ ವಿದ್ಯಾನಿಲಯ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ ನಂತರ ಕರ್ನಾಟಕದ ಹಿಂದೂ ಮತೀಯವಾದಿಗಳು ಕುಂಡೆಗೆ ಬೆಂಕಿ ಬಿದ್ದವರಂತೆ ಕಿರುಚುತ್ತಾ ರಾಜ್ಯದ ಉದ್ದಗಲಕ್ಕು ಓಡಾಡುತ್ತಿದ್ದಾರೆ. ಇವರಿಗೆ ಮಠಾಧೀಶರೆಂಬ ಮತಿಹೀನರು ಮತ್ತು ಲೇಖಕ ಮತ್ತು ಸಂಶೋಧಕರೆಂಬ ತಲೆಮಾಸಿದ ಗಿರಾಕಿಗಳು ಹಾಗೂ ಇವರ ಪಾಲಿಗೆ ಬೊಗಳುವ ನಾಯಿಯಂತಿರುವ ಹಲವು ಮಾಧ್ಯಮಗಳ ಅಂಕಣಕಾರರು ಬೆಂಬಲವಾಗಿ ನಿಂತಿದ್ದಾರೆ.

ಈ ದೇಶದಲ್ಲಿ ಎಡಪಂಥೀಯ ಚಿಂತನೆಯ ಶಾಲೆಗಳಿಂದ ಬಂದ ಇತಿಹಾಸಕಾರರು ಬರೆದ ಚರಿತ್ರೆಗಳು ನಕಲಿ; ನಾವು ಬರೆದದ್ದು ಮಾತ್ರ ಅಪ್ಪಟ ಇತಿಹಾಸ ಎಂದು ನಂಬಿರುವ, ಹಾಗೂ ಜನರನ್ನು ನಂಬಿಸಲು ಹೊರಟಿರುವ ಈ ಮೂರ್ಖರು ತಾವು ಹೇಳುತ್ತಿರುವ ಸಂಗತಿಗಳನ್ನು ನನ್ನ ನೆಲವಾದ ಮಂಡ್ಯ ಜಿಲ್ಲೆಯ ಯಾವುದಾದರೂ ಹಳ್ಳಿಗೆ ಹೋಗಿ ದನ ಆಥವಾ ಕುರಿ ಕಾಯುವ ಒಬ್ಬ ವೃದ್ಧ ಅನಕ್ಷರಸ್ತನ ಬಳಿ ಹೋಗಿ ಹೇಳಬೇಕು, ಆತ ನಗಬಾರದ ಜಾಗದಲ್ಲಿ ಗೊಳ್ ಎಂದು ನಕ್ಕು ಬಿಡುತ್ತಾನೆ. ಏಕೆಂದರೆ ನನ್ನ ಜನ ಅಕ್ಷರ ಲೋಕದಿಂದ ದೂರ ಉಳಿದಿದ್ದರೂ, Tippuಕಳೆದ ನಾಲ್ಕು ಶತಮಾನಗಳಿಂದ ನನ್ನ ನೆಲದ ನೆಲದ ಜನ ಟಿಪ್ಪು ಸುಲ್ತಾನ್ ಮತ್ತು ಆತನ ಶೌರ್ಯ ಮತ್ತು ಪರಧರ್ಮ ಸಹಿಷ್ಣುತೆ ಕುರಿತಂತೆ ಬಾಯಿಂದ ಬಾಯಿಗೆ ಹರಿದು ಬಂದಿರುವ ಮೌಖಿಕ ಕಾವ್ಯ ಪ್ರಕಾರಗಳಲ್ಲಿ ಒಂದಾಗಿರುವ ಲಾವಣಿಯಿಂದ ಟಿಪ್ಪು ಸುಲ್ತಾನ್ ಬಗ್ಗೆ ಅಪಾರ ಜ್ಞಾನ ಮತ್ತು ತಿಳುವಳಿಕೆ ಸಂಪಾದಿಸಿದ್ದಾರೆ. ಚರಿತ್ರೆ ಸುಳ್ಳಾದರೂ ವಾಸ್ತವಿಕ ಘಟನೆಗಳ ಆಧಾರದ ಮೇಲೆ ಸೃಷ್ಟಿಯಾಗಿರುವ ಗಾದೆಗಳು ಮತ್ತು ಲಾವಣಿಗಳು ಭೂತಕಾಲದ ಬಗ್ಗೆ ಸುಳ್ಳು ಹೇಳುವುದಿಲ್ಲ. ಇವೊತ್ತಿಗೂ ಮಂಡ್ಯ ಜಿಲ್ಲೆಯಲ್ಲಿ ಒಂದು ಜನಪ್ರಿಯವಾದ ಬೈಗುಳವಿದೆ. ಏನೂ ಕೈಲಾಗದ ಸೋಮಾರಿ ಗಂಡಸನ್ನು “ಗಂಜಾಮ್‌ಗೆ ಹೆಣ ಹೊರೋಕೆ ಹೋಗು” ಎಂದು ಬೈಯ್ಯುವ ವಾಡಿಕೆಯಿದೆ. ತನ್ನ ಜೀವಮಾನದ ಬಹುತೇಕ ಸಮಯವನ್ನು ಬ್ರಿಟಿಷರೊಂದಿಗೆ ಯುದ್ಧ ಮಾಡುವುದರಲ್ಲಿ ಕಳೆದ ಟಿಪ್ಪುವಿನ ಹೋರಾಟ ಮತ್ತು ಜೀವ ಕಳೆದುಕೊಂಡ ಸಾವಿರಾರು ಸೈನಿಕ ಕಥನನವನ್ನು ಪರೋಕ್ಷವಾಗಿ ಬಿಂಬಿಸುವ ಬೈಗುಳವಿದು. (ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಸಮೀಪ ಇರುವ ಪ್ರದೇಶದಲ್ಲಿ ಗಂಜಾಂ ಎಂಬ ಗ್ರಾಮವಿದೆ.)

ಟಿಪ್ಪು ಸುಲ್ತಾನ್ ಒಬ್ಬ ಕೋಮುವಾದಿಯಾಗಿದ್ದ ಎಂದು ಬಿಂಬಿಸುವ ಈ ಮಹಾಶಯರು ಒಮ್ಮೆ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯ ಮತ್ತು ಮೇಲುಕೋಟೆಯ ಯೋಗನರಸಿಂಹ ದೇವಾಲಯಕ್ಕೆ ಹೋಗಿ ಟಿಪ್ಪು ಕೊಟ್ಟಿರುವ ಒಡವೆಗಳು ಯಾವುವು ಹಾಗೂ ಶೃಂಗೇರಿಯ ಶಾರದಾ ದೇವಿಗೆ ನೀಡಿರುವ ಕಾಣಿಕೆಗಳು ಏನು, ಈ ದಾನ ಪತ್ರಗಳು ಯಾವ ಭಾಷೆಯಲ್ಲಿವೆ ಎಂಬುದನ್ನು ನೋಡಿ ಬರಲಿ. ಇಷ್ಟೆಲ್ಲಾ ಸುಳ್ಳು ಹೇಳುವ ಇವರು ಟಿಪ್ಪು ಸುಲ್ತಾನ್ ಆಸ್ಥಾನದಲ್ಲಿ ಸಲಹೆಗಾರರಾಗಿದ್ದವರು ದಿವಾನ್ ಪೂರ್ಣಯ್ಯ, ದೆಹಲಿಯ ಮೊಗಲ್ ಸುಲ್ತಾನ ಆಲಂ ಶಾ ಆಸ್ಥಾನಕ್ಕೆ ಟಿಪ್ಪು ಸುಲ್ತಾನ್ ರಾಯಭಾರಿ ಆಗಿ ನೇಮಕವಾದದ್ದು ಮಾಧವರಾವ್, ವಕೀಲರಾಗಿ ಸೇವೆ ಸಲ್ಲಿಸಿದ್ದು ಸಜ್ಜನರಾವ್, ಇವೆರೆಲ್ಲಾ ಹಿಂದೂ ಜನಾಂಗದ ಬ್ರಾಹಣರಾಗಿದ್ದರು ಎಂದು ತಿಳಿಯದಷ್ಟು ಅಜ್ಞಾನಿಗಳೆ? ಈ ಸತ್ಯ ಕರ್ನಾಟಕದಲ್ಲಿ ಯಾವುದೇ ಮುಸ್ಲಿಂ ಗೋರಿ ಕಂಡೊಡನೆ ಕಿಟಾರನೆ ಕಿರಿಚಿಕೊಳ್ಳುವ ಚಿದಾನಂದಮೂರ್ತಿಗೆ, ಭಾರತದ ಇತಿಹಾಸವನ್ನೆಲ್ಲಾ ಅರೆದು ಕುಡಿದು ಅದನ್ನು ಆಧಾರವಾಗಿ ಇಟ್ಟುಕೊಂಡು ಕಾದಂಬರಿ ಹೊಸೆಯುವ ಎಸ್ .ಎಲ್. ಬೈರಪ್ಪನವರಿಗೆ ಮತ್ತು ಈ ಇಬ್ಬರೂ ಪುರುಷೋತ್ತಮರಿಗೆ ಉತ್ತರ ಕೊಡಿ ಎಂದು ಕೀರಲು ಧ್ವನಿಯಲ್ಲಿ ಕೂಗುತ್ತಿರುವ, ನಮ್ಮ ಪೇಜಾವರ ಸ್ವಾಮಿಗೆ ಏಕೆ ಅರ್ಥವಾಗುವುದಿಲ್ಲ?

ಪ್ರಿಯ ಓದುಗರೆ, ನಿಮ್ಮಲ್ಲಿ ಕೆಲವರಿಗಾದರೂ ಶ್ರೀರಂಗಪಟ್ಟಣದ ಪರಿಚಯವಿದೆ ಎಂದು ಭಾವಿಸಿದ್ದೇನೆ. ಮುಂದೆ ನೀವು ಬೇಟಿ ನೀಡಿದಾಗ ಈ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕಾವೇರಿ ನದಿ ಶ್ರೀರಂಗಪಟ್ಟಣಕ್ಕೆ ಮೊದಲು ಎರಡು ಭಾಗವಾಗಿ ಹರಿದು ನಂತರ ಗಂಜಾಂ ಎಂಬ ಊರಿನ ಬಳಿ ಮತ್ತೇ ಸೇರುತ್ತದೆ. aerial_view_srirangapattanaಈ ಪ್ರದೇಶವನ್ನು ಸಂಗಮ ಎಂದು ಕರೆಯಲಾಗುತ್ತದೆ. ಒಂದು ರೀತಿಯಲ್ಲಿ ದ್ವೀಪದಂತಿರುವ ಶ್ರೀರಂಗಪಟ್ಟಣದ ಕೋಟೆಯ ಮುಖ್ಯಬಾಗಿಲು ಪೂರ್ವದಿಕ್ಕಿಗಿದೆ (ಈಗಿನ ಬಸ್ ನಿಲ್ದಾಣದ ಸಮೀಪ.) ಇನ್ನೊಂದು ಬಾಗಿಲು ದಕ್ಷಿಣ ಭಾಗಕ್ಕಿದ್ದು ಇದನ್ನು ಆನೆ ಬಾಗಿಲು ಎಂದು ಕರೆಯುತ್ತಾರೆ. ಸದಾ ಯುದ್ಧದಲ್ಲಿ ತೊಡಗಿರುತ್ತಿದ್ದ ಟಿಪ್ಪು, ಬ್ರಿಟೀಷರ ಅಂಜಿಕೆಯಿಂದ ಬಲಿಷ್ಟವಾದ ಕೋಟೆಯನ್ನು ಕಟ್ಟಿದ್ದ. ಈ ಎರಡು ಬಾಗಿಲು ಬಿಟ್ಟರೆ ಪಟ್ಟಣ ಪ್ರವೇಶಕ್ಕೆ ಬೇರೆ ಯಾವುದೇ ಅವಕಾಶವಿರಲಿಲ್ಲ. ಆದರೆ ಪ್ರತಿ ದಿನ ಶ್ರೀರಂಗನಾಥನ ದೇವಾಲಯಕ್ಕೆ ಮತ್ತು ದೇವಾಲಯದ ಕೂಗಳತೆಯಲ್ಲಿ ಉತ್ತರ ಭಾಗದ ಕೋಟೆಗೆ ಅಂಟಿಕೊಂಡಂತೆ ಇರುವ ಶ್ರೀರಾಮ ದೇವಸ್ಥಾನದ (ಟಿಪ್ಪು ಶವ ಸಿಕ್ಕ ಜಾಗದ ಬಳಿ ಇರುವ ದೇವಸ್ಥಾನ) ಪೂಜೆ ಪುನಸ್ಕಾರ ಮುಂತಾದ ಕಾರ್ಯಕ್ರಮಗಳಿಗೆ ಉತ್ತರ ಭಾಗದಲ್ಲಿ ಹರಿಯುವ ಕಾವೇರಿಯಿಂದ ನೀರು ತರಲು ಕೋಟೆಯಲ್ಲಿ ಎರಡು ವಿಶೇಷ ಬಾಗಿಲುಗಳನ್ನು ನಿರ್ಮಿಸಿದ್ದ. ಅವುಗಳು ಈಗಲೂ ಅಸ್ತಿತ್ವದಲ್ಲಿವೆ. ಅವನು ಹಿಂದೂ ವಿರೋಧಿಯಾಗಿದ್ದರೆ ಅತಿಕ್ರಮಣದ ಭಯದ ನಡುವೆಯೂ ಬಾಗಿಲು ತೆರೆಯಲು ಸಾಧ್ಯವಿತ್ತೆ? ಶತ್ರುಗಳು ನದಿಯನ್ನು ಈಜಿ ಕೋಟೆ ಪ್ರವೇಶಿಸುವ ಸಾಧ್ಯತೆಗಳಿರಲಿಲ್ಲವೆ? ಟಿಪ್ಪು ಸುಲ್ತಾನನ ಮೂಲ ಅರಮನೆ (ಕುಸಿದ ಹೋಗಿರುವ ಅವಶೇಷಗಳು) ಶ್ರೀರಂಗನಾಥನ ದೇವಸ್ಥಾನಕ್ಕೆ ಅಭಿಮುಖವಾಗಿದೆ. ಅವನು ಪಕ್ಕಾ ಮುಸ್ಲಿಂ ದೊರೆಯಾಗಿದ್ದರೇ ತನ್ನ ಅರಮನೆಯ ಮುಂದೆ ಶ್ರೀರಂಗನಾಥನ ಹಿಂದೂ ದೇಗುಲವಿರಲು ಸಾಧ್ಯವಿತ್ತೆ? ಇಂತಹ ಇತಿಹಾಸದ ಸತ್ಯಗಳನ್ನು ಏಕೆ ಮರೆ ಮಾಚುತ್ತಿದ್ದಾರೆ?

ಕನ್ನಡದ ದಿನಪತ್ರಿಕೆಯಲ್ಲಿ ಯಾವನೋ ಒಬ್ಬ ಆಸಾಮಿ ತನ್ನ ಹೆಸರಿನ ಮುಂದೆ “ಬ್ಲಾಗಿಗ, ಸಾಪ್ಟ್‌ವೇರ್ ತಜ್ಞ” ಎಂದು ವಿಶೇಷಣಗಳನ್ನು ಸೇರಿಸಿಕೊಂಡು ಅಂಕಣ ಬರೆಯುತ್ತಿದ್ದಾನೆ. ಅವನ ಇತಿಹಾಸ ಪ್ರಜ್ಞೆ ಮತ್ತು ಅವನು ಬರೆಯುತ್ತಿರುವ ವಿಷಯ ವೈಖರಿಗಳನ್ನು ಗಮನಿಸಿದರೆ, ಈತ ತನ್ನ ಹೆಸರಿನ ಮುಂದೆ “ಅರಬೆಂದ ಮಡಕೆ” ಎಂಬ ಅರ್ಹತೆಯನ್ನು ಸಹ ಸೇರಿಸಿಕೊಳ್ಳುವುದು ಒಳಿತು.

ಯಾಕೆಂದರೆ, ಟಿಪ್ಪು ಸುಲ್ತಾನ್ ಮತ್ತು ಅವನ ತಂದೆ ಹೈದರ್‌ ಆಲಿ ಬೆಂಗಳೂರು ಸಮೀಪದ ದೇವನಳ್ಳಿಯಲ್ಲಿ ಜನಿಸಿದ ಕನ್ನಡಿಗ ಮುಸ್ಲಿಂರು ಎಂಬ ಜ್ಞಾನವಿಲ್ಲದ ಈ ಅವಿವೇಕಿ, ಟಿಪ್ಪು ಆಳ್ವಿಕೆಯಲ್ಲಿ ಕರ್ನಾಟಕದಲ್ಲಿ ಪರ್ಷಿಯನ್ ಭಾಷೆ ಜಾರಿಗೆ ಬಂತು ಎಂದು ಬರೆಯುತ್ತಾನೆ. ನನ್ನೂರಾದ ಕೊಪ್ಪ ಗ್ರಾಮದಲ್ಲಿ “ಮದ್ದನಹಟ್ಟಿ ನಂಜೇಗೌಡರ ಕುಟುಂಬ” ಎಂಬ ನಮ್ಮ ಮನೆತನದಲ್ಲಿ ನನ್ನ ತಾತ, ಮುತ್ತಾತ ಎಲ್ಲರೂ ಆಗಿನ ಕಾಲದ ಮಠಗಳಲ್ಲಿ ಮರಳಿನ ಮೇಲೆ ಕನ್ನಡ ಅಕ್ಷರ ಕಲಿತು ಕುಮಾರವ್ಯಾಸನ ಮಹಾಭಾರತ ಮತ್ತು ರಾಮಾಯಣ ಕಾವ್ಯಗಳನ್ನು ಶಿವರಾತ್ರಿ ಮತ್ತು ಯುಗಾದಿ ಹಬ್ಬಗಳ ಸಮಯದಲ್ಲಿ ವಾಚನ ಮಾಡುತ್ತಿದ್ದರು. 1966 ರಲ್ಲಿ ಹತ್ತು ವರ್ಷದವನಿರುವಾಗ ನನ್ನ ಚಿಕ್ಕತಾತ ಪುಟ್ಟೀರೆಗೌಡ ನನಗೆ ಅವುಗಳನ್ನು ಕಂಠ ಪಾಠ ಮಾಡಿಸುತ್ತಿದ್ದ. ಟಿಪ್ಪು ಪರ್ಷಿಯನ್ ಭಾಷೆ ಜಾರಿಗೆ ತಂದಿದ್ದರೆ ನನ್ನ ತಾತ ಮತ್ತು ಅವನ ಅಪ್ಪ, ಅಜ್ಜ ಇವರೆಲ್ಲಾ ಪರ್ಷಿಯನ್ ಭಾಷೆ ಕಲಿಯಬೇಕಿತ್ತಲ್ಲವೆ? ಕನ್ನಡವನ್ನು ಏಕೆ ಕಲಿತರು? ಕರ್ನಾಟಕದಲ್ಲಿ ಅತ್ಯಧಿಕ ಕನ್ನಡ ಭಾಷೆಯನ್ನಾಡುವ ಜಿಲ್ಲೆ ಮಂಡ್ಯ ಜಿಲ್ಲೆ ( ಶೇಕಡ 97 ರಷ್ಟು.) ಮಂಡ್ಯ ಟಿಪ್ಪು ಆಳಿದ ನೆಲ. ಇವೊತ್ತಿಗೂ ಕಂದಾಯ ಇಲಾಖೆಯಲ್ಲಿರುವ ಅಮಲ್ದಾರ್, ಶಿರಸ್ತೆದಾರ್, ತಹಶಿಲ್ದಾರ್, ಖಾತೆ, ಪಹಣಿ, ತಲಾಟಿ, ಕಛೇರಿ, ಇಂತಹ ಶಬ್ಧಗಳು ಮೊಗಲರ ಆಳ್ವಿಕೆಯಿಂದಾಗಿ ಮತ್ತು ಹಿಂದಿ, ಉರ್ದು, ಮರಾಠಿ ಭಾಷೆಗಳ ಕೊಡುಕೊಳ್ಳುವಿಕೆಗಳಿಂದಾಗಿ ಜಾರಿಗೆ ಬಂದ ಶಬ್ದಗಳು. ಡಾ. ಹಂಪ ನಾಗರಾಜಯ್ಯನವರು ನಲವತ್ತೈದು ವರ್ಷಗಳ ಹಿಂದೆ ಪಿ.ಹೆಚ್.ಡಿ. ಸಂಶೋಧನೆಗಾಗಿ ಆರಿಸಿಕೊಂಡ ವಿಷಯ, “ದ್ರಾವಿಡ ಭಾಷಾ ವಿಜ್ಞಾನ”. ಈ ಸಂಶೋಧನಾ ಕೃತಿಯಲ್ಲಿ ಕನ್ನಡ ಭಾಷೆಗೆ ಭಾರತೀಯ ಇತರೆ ಭಾಷೆಗಳ ಜೊತೆ ಇರಬಹುದಾದ ಸಂಬಂಧ ಅದ್ಭುತವಾಗಿ ವಿವರಿಸಿದ್ದಾರೆ. ಈ ಅಂಕಣಕೋರನಿಗೆ ಭಾರತೀಯ ಭಾಷೆಗಳ ಬಗ್ಗೆ ಜ್ಞಾನವಿದ್ದರೆ ಟಿಪ್ಪುವಿನಿಂದಾಗಿ ಮುಸ್ಲಿಮರು ಉರ್ದು ಭಾಷೆಯನ್ನಾಡುತ್ತಿದ್ದಾರೆ ಎಂದು ಬರೆಯುತ್ತಿರಲಿಲ್ಲ. ಕರ್ನಾಟಕಕ್ಕೆ 16 ನೇ ಶತಮಾನದಲ್ಲಿ ಆದಿಲ್ ಶಾಹಿ ಆಡಳಿತದಲ್ಲಿ ದಖಃನಿ ಎಂದು ಕರೆಸಿಕೊಳ್ಳುತ್ತಿದ್ದ ಉರ್ದು ನೆರೆಯ ಆಂಧ್ರದ ಮೂಲಕ ಕನ್ನಡದ ನೆಲಕ್ಕೆ ಕಾಲಿಟ್ಟಿತ್ತು.

ಹಾಗೆಯೇ, ಬೆಂಗಳೂರಿನ ಲಾಲ್‌ಬಾಗ್ ಉದ್ಯಾನವನ ಹೈದರ್ ಆಲಿ ಮತ್ತು ಟಿಪ್ಪು ಇವರ ಕೊಡುಗೆ ಎಂಬುದನ್ನು ಹಿಂದೂ ಧರ್ಮದ ಗುತ್ತಿಗೆ ಹಿಡಿದ ಇವರೆಲ್ಲಾ ಏಕೆ ಮುಚ್ಚಿಡುತ್ತಿದ್ದಾರೆ?

ಭಾರತದ ಪ್ರಖ್ಯಾತ ಇತಿಹಾಸ ತಜ್ಞರಲ್ಲಿ ಕೆ.ಎನ್. ಪಣಿಕ್ಕರ್ ಮುಖ್ಯರು. ಇವರು ಜಗತ್ತಿನ 56 ವಿಶ್ವವಿದ್ಯಾನಿಲಯಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸಮಾಡಿದವರು. ಇವರು ಭಾರತದ ಇತಿಹಾಸ ಕುರಿತ ಬರೆದ ಲೇಖನಗಳು “ದ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ” ಪತ್ರಿಕೆಯಲ್ಲಿ ಪ್ರಕಟವಾಗಿವೆ. panikkar-bookನಾಲ್ಕೈದು ವರ್ಷಗಳ ಹಿಂದೆ  ಆಕ್ಷ್‌ಪರ್ಡ್ ಯೂನಿರ್ವಸಿಟಿ ಪ್ರೆಸ್ ಪ್ರಕಾಶನ ಸಂಸ್ಥೆ ಈ ಲೇಖನಗಳ ಸಂಕಲನವನ್ನು “Colonialism, Culture, and Resistance” ಎಂಬ ಹೆಸರಿನಲ್ಲಿ ಪ್ರಕಟಿಸಿದೆ. ಈ ಕೃತಿಯಲ್ಲಿ ಟಿಪ್ಪು ಸುಲ್ತಾನ್ ಕುರಿತು ಅಯ್ಯಪ್ಪ ಪಣಿಕ್ಕರ್ ಹೀಗೆ ಬರೆದಿದ್ದಾರೆ:

“The Mysoreans, the Marathas, and the Sikhs, who had fairly large army at their command, fought against the British independently and were worsted. The others Like rulers of Rajputana, the Nizam, Nawab of Carnatic, and others preferred to function as subordinate allies of the British.
“The Indians had larger infantry and superior on the side, as demonstrated by Mysoreans and the Marathas, but were unable to match the Europeans in artillery which proved to be decisive. By the time the Indian rulers realized this, it was too late to acquire the necessary resources and skills, as in the case of Tipu Sultan, who initiated rather desperate attempts to modernize the state institutaion, including the army, by acquiring scientific knowledge and technological skills from the French.”

ಟಿಪ್ಪು ಸುಲ್ತಾನ್ ಆಧುನಿಕ ತಂತ್ರಜ್ಞಾನಕ್ಕೆ ಎಷ್ಟೊಂದು ಕಾಳಜಿ ವಹಿಸಿದ್ದ ಮತ್ತು ಭಾರತದಲ್ಲಿ ಬ್ರಿಟೀಷರ ವಿರುದ್ದ ಎಷ್ಟು ಕಠಿಣವಾಗಿದ್ದ ಎಂಬುದಕ್ಕೆ ಈ ಮೇಲಿನ ವಾಖ್ಯೆಗಳು ಸಾಕ್ಷಿಯಾಗಿವೆ.

ಭಾರತದ ಇತಿಹಾಸದಲ್ಲಿ ಫಿರಂಗಿಗಳನ್ನು ಆಧುನಿಕ ಪ್ರೆಂಚ್ ತಂತ್ರಜ್ಞಾನದಿಂದ ಅಭಿವೃದ್ಧಿ ಪಡಿಸಿದ ಮೊದಲ ದೊರೆ ಅವನು. ಚೀನಾದಿಂದ ರೇಷ್ಮೆ ಬೆಳೆಯನ್ನು ತಂದು ಕರ್ನಾಟಕಕ್ಕೆ ಪರಿಚಯಿಸಿದ ಕೀರ್ತಿ ಅವನದು. (ಈಗಲೂ ಚನ್ನಪಟ್ಟಣದಲ್ಲಿ ರೇಷ್ಮೆ ಇಲಾಖೆಯ ಆರು ಎಕರೆ ತೋಟಕ್ಕೆ ಟಿಪ್ಪುವಿನ ಹೆಸರಿಡಲಾಗಿದೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ತೋಟದ ಪಕ್ಕ ರೈಲ್ವೆ ಹಳಿ ಹಾದು ಹೋಗಿದೆ. ಆಸಕ್ತರು ಗಮನಿಸಬಹುದು.) ಸಕ್ಕರೆ ತಂತ್ರಜ್ಞಾನದ ಬಗ್ಗೆ ಅವನಿಗೆ ಆಸಕ್ತಿ ಇತ್ತು ಎಂಬುದಕ್ಕೆ ಮೈಸೂರಿನಿಂದ ಕೆ.ಆರ್.ಎಸ್. ಜಲಾಶಯಕ್ಕೆ ಹೋಗುವ ಮಾರ್ಗದಲ್ಲಿ ಪಾಲಹಳ್ಳಿ ಎಂಬ ಒಂದು ಊರಿದೆ. ಆ ಊರಿನ ಬತ್ತದ ಗದ್ದೆಗಳಲ್ಲಿ ಟಿಪ್ಪು ಸ್ಥಾಪಿಸಿದ್ದ ಸಕ್ಕರೆ ಕಾರ್ಖಾನೆಯ ಕಟ್ಟಡಗಳ ಅವಶೇಷಗಳಿವೆ.

ನಮ್ಮ ಕಣ್ಣೆದುರಿಗೆ ಇಷ್ಟೆಲ್ಲಾ ಸಾಕ್ಷಾಧಾರಗಳಿರುವಾಗ ಟಿಪ್ಪು ಸುಲ್ತಾನ್ ಒಬ್ಬ ರಾಷ್ಟ್ರ ದ್ರೋಹಿ, ಒಬ್ಬ ಮತಾಂಧ ಎಂದು ಬೊಬ್ಬೆ ಹಾಕುವವರನ್ನು ನಾವು ಏನೆಂದು ಕರೆಯಬೇಕು?

1799 ರ ಮೇ 4 ರಂದು ನಾಲ್ಕನೇ ಮೈಸೂರು ಯುದ್ದದಲ್ಲಿ ಟಿಪ್ಪು ಮಡಿದಾಗ ಅವನ ಅರಮನೆಯಲ್ಲಿದ್ದ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡ ಬ್ರಿಟೀಷರು ಅವುಗಳನ್ನು ಈಸ್ಟ್ ಇಂಡಿಯಾ ಕಂಪನಿಯ ಕಚೇರಿಯಿದ್ದ ಕೊಲ್ಕತ್ತ ನಗರಕ್ಕೆ ಕೊಡೊಯ್ದರು. ಟಿಪ್ಪು ಯುದ್ದದಲ್ಲಿ ಮಡಿದಾಗ ಓರ್ವ ಬ್ರಿಟಿಷ್ ಅಧಿಕಾರಿ ಇನ್ನು ಮುಂದೆ ಭಾರತ ನಮ್ಮದಾಯಿತು ಎಂದು ಘೋಷಿಸಿದ ಅಧಿಕೃತ ದಾಖಲೆಗಳಿವೆ. ಬ್ರಿಟೀಷರಿಗೆ ಟಿಪ್ಪು ಸುಲ್ತಾನ್ ಬಗ್ಗೆ ಎಷ್ಟೊಂದು ಭಯವಿತ್ತು ಎಂಬುದಕ್ಕೆ ಈಗ ಕೊಲ್ಕತ್ತ ನಗರದಲ್ಲಿರುವ ವಿಕ್ಟೋರಿಯಾ ಸ್ಮಾರಕ ಭವನದಲ್ಲಿ ಸಾಕ್ಷಾಧಾರವಿದೆ. kolkata-victoria-memorial1799 ರಲ್ಲಿ ಟಿಪ್ಪು ಮಡಿದನಂತರ ಮುನ್ನೆಚ್ಚರಿಕೆ ಕ್ರಮವಾಗಿ ಬ್ರಿಟೀಷರು 1802 ರಲ್ಲಿ ಸಿದ್ದಪಡಿಸಿರುವ 10 ಅಡಿ ಅಗಲ ಮತ್ತು 15 ಅಡಿ ಉದ್ದ ಮೇಜಿನ ಮೇಲೆ ಶ್ರೀರಂಗಪಟ್ಟಣದ ಪ್ರತಿಕೃತಿಯನ್ನು ನಾವು ಇಂದಿಗೂ ನೋಡಬಹುದು. ಇಷ್ಟೆಲ್ಲಾ ಸಾಹಸ ಮೆರೆದ ವ್ಯಕ್ತಿಯನ್ನು ಅನುಮಾನದಿಂದ ನೊಡುವ ಮನಸ್ಸುಗಳಿಗೆ, ಅಪಮಾನಿಸುತ್ತಿರುವ ವಿದ್ವಾಂಸರೆಂಬ ಆರೋಪ ಹೊತ್ತಿರುವವರಿಗೆ ನಾವೀಗ ಕೇಳಲೇ ಬೇಕಿದೆ, “ನೀವು ಹೊಟ್ಟೆಗೆ ಏನು ತಿನ್ನುತ್ತೀರಿ?” ಎಂದು.

ಕಲ್ಯಾಣ ರಾಜ್ಯದಲ್ಲಿ ನ್ಯಾಯದ ಬುನಾದಿಗಾಗಿ ಹುಡುಕಾಟ

– ಬಿ.ಶ್ರೀಪಾದ ಭಟ್

ಮೂವತ್ತರ ದಶಕದಲ್ಲಿ ಸಾರ್ವಜನಿಕವಾಗಿ ಸಂಕಿರಣಗಳಲ್ಲಿ ಭಾಗವಹಿಸಿ ಮಾತನಾಡುತ್ತ ಚಿಂತಕ ಜಾರ್ಜ ಅರ್ವೆಲ್, “ಸ್ವತಂತ್ರ ಚಿಂತನೆಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳ ಮೊದಲ ಶತೃಗಳೆಂದರೆ ಮಾಧ್ಯಮಗಳು. ಕೆಲವೇ ಬಂಡವಾಳಶಾಹಿಗಳ ಹಿಡಿತದಲ್ಲಿರುವುದು, ರೇಡಿಯೋದ ಮೇಲೆ ಏಕಾಧಿಪತ್ಯ ಸಾಧಿಸುವುದು, ಅಧಿಕಾರಶಾಹಿ ಮತ್ತು ನಾಗರಿಕರು ಪುಸ್ತಕಗಳನ್ನು ಓದಲು ನಿರಾಕರಿಸುವುದು,” ಎಂದು ನಿರ್ಭಿಡೆಯಿಂದ ಹೇಳುತ್ತ ಲೇಖಕರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿರುವುದು ಅದನ್ನು ಸಮರ್ಥಿಸಬೇಕಾದ ಜನರಿಂದಲೇ ಎಂದು ಆತಂಕ ವ್ಯಕ್ತಪಡಿಸಿದ್ದ. ಇದಕ್ಕೆ ಉದಾಹರಣೆಯಾಗಿ George_Orwellಧಾರ್ಮಿಕ ಮತ್ತು ಕ್ಯಾಥೋಲಿಕ್ ಮೂಲಭೂತವಾದಿಗಳ ವಿರುದ್ಧ ಸೆಣೆಸಬೇಕಾದಂತಹ ಸಂದರ್ಭದಲ್ಲೇ ಕಮ್ಯನಿಷ್ಟರ ಸರ್ವಾಧಿಕಾರದ ವಿರುದ್ಧವೂ ಪ್ರತಿಭಟಿಸಬೇಕಾಗುವಂತಹ ಸಂದರ್ಭ ಸೃಷ್ಟಿಯಾಗಿರುವುದು ದುರಂತವೇ ಸರಿ ಎಂದು ಮರುಗಿದ್ದ. ಇದಕ್ಕೆ ಉಕ್ರೇನಿನ ಬರಗಾಲ, ಸ್ಪಾನಿಷ್‌ನ ಜನಾಂಗೀಯ ಯುದ್ಧ ಮತ್ತು ಪೋಲೆಂಡಿನ ಅಸಹಾಯಕತೆಯನ್ನು ಉದಾಹರಿಸಿದ್ದ. ಮಧ್ಯಯುಗೀನ ಧಾರ್ಮಿಕ ಆಳ್ವಿಕೆಯ ಕಾಲದಲ್ಲಿ ಹತ್ತಿಕ್ಕಲ್ಪಟ್ಟಿದ್ದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯವು ಏಕಚಕ್ರಾಧಿಪತ್ಯದ ಆಧುನಿಕ ಕಾಲದಲ್ಲೂ ಅಂಚಿಗೆ ತಳ್ಳಲ್ಪಟ್ಟಿರುವುದಕ್ಕೆ ವಿಷಾದಿಸಿದ್ದ. ಆದರೆ ಒಂದು ಪ್ರಮುಖ ವ್ಯತ್ಯಾಸವೆಂದರೆ ಆಧುನಿಕ ಏಕಚಕ್ರಾಧಿಪತ್ಯದ ಸಂದರ್ಭದಲ್ಲಿ ಸಿದ್ಧಾಂತಗಳು ಅಸ್ಥಿರವಾಗಿರುತ್ತವೆ, ಇದರ ಕಾರಣಕ್ಕಾಗಿಯೇ ಮರಳಿ ಮರಳಿ ಇತಿಹಾಸವನ್ನು ಪುನರಚಿಸಲು ಸುಳ್ಳುಗಳು ನಿರಂತರವಾಗಿ ಬದಲಾವಣೆಗೊಳ್ಳುತ್ತಿರುತ್ತವೆ ಎಂದು ಆರ್ವೆಲ್ ಪ್ರತಿಪಾದಿಸಿದ. ಇದು ನಂಬಿಕೆಯ ಕಾಲದ ಬದಲಾಗಿ ವಿಕ್ಷಿಪ್ತತೆಯ ಕಾಲದ ಹುಟ್ಟಿಗೆ ಕಾರಣವಾಗುತ್ತದೆ ಎಂದು ವಿವರಿಸಿದ. ಎಂಬತ್ತು ವರ್ಷಗಳ ಹಿಂದೆ ಜಾರ್ಜ ಅರ್ವೆಲ್ ಹೇಳಿದ ಮಾತುಗಳು: “ನಮ್ಮ ಕಾಲಘಟ್ಟದಲ್ಲಿ ಬೌದ್ಧಿಕ ಸ್ವಾತಂತ್ರ್ಯವು, ಒಂದು ದಿಕ್ಕಿನಲ್ಲಿ ಏಕಚಕ್ರಾಧಿಪತ್ಯದ ವಿರೋಧಿಗಳಾದ ಪ್ರಜಾಪ್ರಭುತ್ವವಾದಿಗಳಾದ ಅಕಡೆಮಿಕ್ ಬುದ್ಧಿಜೀವಿಗಳ ಮೂಲಕ, ಮತ್ತು ಮತ್ತೊಂದು ದಿಕ್ಕಿನಲ್ಲಿ ವ್ಯವಸ್ಥೆಯ ಭಾಗವಾಗಿರುವ ಅಧಿಕಾರಶಾಹಿ ಮತ್ತು ಸರ್ವಾಧಿಕಾರಿ ಆಡಳಿದಿಂದ ನಿರಂತರ ಹಲ್ಲೆಗೊಳಗಾಗುತ್ತಿರುತ್ತದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಪತ್ರಕರ್ತ ಮತ್ತು ಲೇಖಕ ತನ್ನ ಐಡೆಂಟಿಟಿ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಲು ಸಕ್ರಿಯ ಹಿಂಸಾವಾದಿಗಳ ವಿರುದ್ಧಕ್ಕಿಂತಲೂ ಗೊತ್ತುಗುರಿಯಿಲ್ಲದ ಘೋಷಿತ ನಾಗರಿಕ ವ್ಯವಸ್ಥೆಯ ವಿರುದ್ಧ ಸೆಣಸಬೇಕಾಗುತ್ತದೆ.”

ತೃತೀಯ ಜಗತ್ತಿನ ತಲ್ಲಣಗಳು, ಬಿಕ್ಕಟ್ಟುಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಸಹ ಒಂದಾಗಿರುವುದು ನಾಗರಿಕತೆಯ ಮಿತಿಗಳನ್ನು ಸೂಚಿಸುತ್ತದೆ. ಸಾಕ್ರೆಟೀಸ್, ಗೆಲಿಲಿಯೋ ಸಂಬಂಧಿತ ದಮನಕಾರಿ ದಿನಗಳಿಂದ ಹಿಡಿದು, ಮುದ್ರಣಗಳ ಮೇಲೆ ನಿರ್ಬಂಧ ಹೇರಿದ ರೋಮನ್ ಕ್ಯಾಥೋಲಿಕ್‌ನ ಕಾಲವನ್ನು ಹಿಂದಿಕ್ಕಿ, ಬ್ರಿಟೀಷರ ವಸಾಹತುಶಾಹಿ ಆಳ್ವಿಕೆ ಶುರುವಾದಾಗಿನ ಕಾಲದಿಂದ ಇಂದಿನವರೆಗಿನ ಸುಮಾರು ಮುನ್ನೂರು ವರ್ಷಗಳ ಕಾಲಘಟ್ಟವನ್ನು ಅವಲೋಕಿಸಿದಾಗಲೂ ಅನೇಕ ಸ್ಥಿತ್ಯಂತರಗಳನ್ನು, ಆಳವಾದ ಪಲ್ಲಟಗಳನ್ನು ಕಾಣಬಹುದು. ಪೂರ್ವ ಮತ್ತು ಪಶ್ಚಿಮಗಳ ಸಂಗಮದ ಕಾಲಘಟ್ಟವೆಂದೇ ಕರೆಯಲ್ಪಡುವ ಮುನ್ನೂರು ವರ್ಷಗಳ ಈ ಪಯಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ತನ್ನ ಆಕೃತಿಯನ್ನು ಗಟ್ಟಿಗೊಳಿಸಲು, ಆಳದ ಪೊಳ್ಳುತನದಿಂದ ಹೊರಬಂದು ಸುಭದ್ರ ನೆಲೆಗೆ ಶಾಶ್ವತವಾಗಿ ನೆಲೆಯೂರಲು ಇಂದಿಗೂ ಸಾಧ್ಯವಾಗುತ್ತಿಲ್ಲ. ರಾಜರ ಆಳ್ವಿಕೆಯ ದಿನಗಳಿಂದ ಶುರುವಾಗಿ, ಬ್ರಿಟೀಷರ ವಸಾಹತುಶಾಹಿಯ ಸರ್ವಾಧಿಕಾರದ ಆಡಳಿತದ ಮೂಲಕ ಇಂದು ಜಗತ್ತಿನ ಬಲು ದೊಡ್ಡ ಪ್ರಜಾಪ್ರಭುತ್ವಗಳಲ್ಲೊಂದೆಂದು ಹೆಮ್ಮೆಯಿಂದ ಬೀಗುತ್ತಿರುವ ಇಂಡಿಯಾದ ಇಂದಿನ ವರ್ತಮಾನದ ದಿನಗಳವರೆಗೆ ಅಭಿವ್ಯಕ್ತಿ ಸ್ವಾತ್ರಂತ್ರ್ಯವು ಸದಾ ಕಾಲ ಅಭದ್ರತೆಯಿಂದ ನರಳುತ್ತಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ವಿದ್ಯಾಮಾನಗಳನ್ನು, ಅಲ್ಲಿನ ಸ್ಥಿತ್ಯಂತರಗಳನ್ನು ಚರ್ಚಿಸಲು ಬಳಕೆಗೊಂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯು ಕಾಲಕ್ರಮೇಣ ಪ್ರಜಾಪ್ರಭುತ್ವದ ಕುರೂಪಗಳಾದ ಭ್ರಷ್ಟಾಚಾರ, ವಂಶಾಡಳಿತದ ಹೆಳವಂಡಗಳು, ಕೋಮುವಾದದ ಕ್ರೌರ್ಯದ ಕುರಿತಾಗಿನ ಚರ್ಚೆಗಳವರೆಗೂ ಮುಂದುವರೆಯಿತು.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳು ದಮನಗೊಂಡಿದ್ದಕ್ಕೆ ವಿವರಣೆಗಳು ಮತ್ತು ಸಮಜಾಯಿಷಿಗಳು ಇರಬಹುದಾದರೂ ತದನಂತರ ಎಂಬತ್ತರ ದಶಕದಿಂದ ಶುರುವಾಗಿ ಇಲ್ಲಿನವರೆಗಿನ ಮಾನವ ಹಕ್ಕುಗಳ ದಮನಕ್ಕೆ ಯಾವುದೇ ಸಮರ್ಥನೆ ನೀಡಲು ಸಾಧ್ಯವಿಲ್ಲ. ಇದಕ್ಕೆ ವ್ಯಕ್ತಿಗತ ಭಯವೇ ಮೂಲ ಕಾರಣವೆಂದು ಸಕಾರಣವಾಗಿ ಹೇಳಲಾಗುತ್ತಿದ್ದರೂ ನಿರ್ಭಿಡೆಯಿಂದ ವರ್ತಿಸಲು ಅನುಕೂಲಕರ ವಾತಾವರಣವನ್ನು ನಾವೆಲ್ಲಿ ನಿರ್ಮಿಸಿದ್ದೇವೆ? ಹಿಂಸೆ ಎನ್ನುವುದು ಹಲವಾರು ರೂಪಗಳಲ್ಲಿ ಸದಾ ಅಸ್ತಿತ್ವದಲ್ಲಿರುವಂತಹ ವಾಸ್ತವ ಸ್ಥಿತಿಯಲ್ಲಿ, ವ್ಯವಸ್ಥೆಯ ಅಮಾನವೀಯ, ಜೀವವಿರೋಧಿ ಕಟ್ಟುಪಾಡುಗಳನ್ನು ಉಲ್ಲಂಘಿಸುತ್ತಾ ಸತ್ಯದ ಪರವಾಗಿ ನಿರಂತರವಾಗಿ ಅಹಿಂಸಾತ್ಮಕವಾಗಿ ಹೋರಾಡಲು ಸಮಾಜವು ಯಾವ ಕಾಲಕ್ಕೂ ಸಮ್ಮತಿಯನ್ನು ನೀಡುವುದಿಲ್ಲ. ಅಳಿದುಳಿದ ಅವಕಾಶಗಳನ್ನು ಸಹ ಹೆಚ್ಚೂಕಡಿಮೆ ನಿರ್ದಯವಾಗಿ ಅಳಿಸಿಹಾಕಿಬಿಡುತ್ತದೆ. ದಮನಿತರ ಪರವಾಗಿ ಸಂಘಟನೆಯನ್ನು ರೂಪಿಸಿ ಶೋಷಣೆಯ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟಿಸತೊಡಗಿದರೆ ತತ್‌ಕ್ಷಣದಲ್ಲಿ ಇನ್ನೊಂದು ಬಗೆಯ ವಿಶೇಷ ಕಾರ್ಯಪಡೆಗಳೆಂಬ ಸಮಿತಿಗಳು ಹುಟ್ಟಿಕೊಂಡು ನ್ಯಾಯ ಹಂಚಿಕೆಯ ಕುರಿತಾಗಿ ಮಾತನಾಡತೊಡಗುತ್ತವೆ. ಆಗ ಪ್ರಾಮಾಣಿಕ ಮತ್ತು ಅಪ್ರಾಮಾಣಿಕತೆಯ ನಡುವಿನ ಗೆರೆಯೇ ಅಳಿಸಿ ಹೋಗಿ ಪ್ರಜ್ಞಾವಂತರಿಗೆ ಯಾವ ಕಡೆಗೆ ವಾಲುವುದೆಂದು ಗೊತ್ತಾಗದೆ ಕಕ್ಕಾಬಿಕ್ಕಿಯಾಗುತ್ತಾರೆ, ನಂತರ ಕ್ರಮೇಣ ನಿಷ್ಕ್ರಿಯರಾಗುತ್ತಾರೆ.

ಹಿಂದೊಮ್ಮೆ ಡಿ.ಆರ್.ನಾಗರಾಜ್ ಅವರು ನ್ಯಾಯಕ್ಕೆ ಬುನಾದಿ ಯಾವುದು ಎಂದು ಮಾರ್ಮಿಕವಾಗಿ ಕೇಳಿದ್ದರು. DR nagarajಏಕೆಂದರೆ ಮೂಲಭೂತವಾಗಿ ಸಂಪ್ರದಾಯಸ್ಥವಾದ ಭಾರತೀಯ ಮನಸ್ಸು ಪ್ರಜ್ಞಾಪೂರ್ವಕವಾಗಿಯೇ ಎಳಸು ಎಳಸಾಗಿ ವರ್ತಿಸುತ್ತಾ ಅನೇಕ ಮೌಲಿಕ ವಿಚಾರಧಾರೆಗಳ ಪ್ರತಿರೋಧದ ನೆಲೆಗಳನ್ನು ಹೊಸಕಿ ಹಾಕುತ್ತದೆ. ಅತ್ಯಂತ ಕ್ಲಿಷ್ಟ ಪ್ರಶ್ನೆಗಳಿಗೆ ಸರಳ ಉತ್ತರಗಳಿದ್ದರೂ ಸಹ ಅದನ್ನು ಜಟಿಲಗೊಳಿಸಿಬಿಡುತ್ತದೆ ಭಾರತದ ಸಂಪ್ರದಾಯವಾದಿ ಮನಸ್ಸು. ನಮಗರಿವಿಲ್ಲದೆ ಇಂಡಿಯಾದ ನಾಗರಿಕನ ಹಕ್ಕುಗಳ ರಕ್ಷಣೆಯಾಗಿರುವ ಸಂವಿಧಾನವನ್ನೇ ತೆರೆಮೆರೆಗೆ ಸರಿಸಿ ನಿಷ್ಕ್ರಿಯಗೊಳಿಸಿಬಿಡುತ್ತದೆ. ಇಲ್ಲದಿದ್ದರೆ ಬಿನಾಯಕ್ ಸೇನ್ ಮೂರು ವರ್ಷಗಳ ಕಾಲ ಜೈಲಿನಲ್ಲಿರುತ್ತಿದ್ದರೇ?ಇಲ್ಲದಿದ್ದರೆ ಆದಿವಾಸಿ ಮಹಿಳೆ ಸೋನು ಸೂರಿ ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿದ್ದರೆ? ಇಲ್ಲದಿದ್ದರೆ ಸೂಕ್ಷ್ಮ ಹೆಣ್ಣುಮಗಳು ಖುಷ್ಬೂ ಕೋರ್ಟಗೆ ಅಲೆಯುವಂತಾಗುತ್ತಿತ್ತೆ? ಕಲಾವಿದ ಎಂ.ಎಫ್.ಹುಸೇನ್ ದೇಶಭ್ರಷ್ಟರಾಗಿ ಅಲೆಯಬೇಕಾಗಿತ್ತೆ? 2002 ರ ಮುಸ್ಲಿಂರ ಹತ್ಯಾಕಾಂಡದ ವಿರುದ್ಧ ದನಿಯೆತ್ತಿದ ದಿಟ್ಟ ಮಹಿಳೆಯರಾದ ನಫೀಜ ಅಲಿ ಮತ್ತು ದಿವ್ಯ ಭಾಸ್ಕರ್ ಗುಜರಾತ್ ಸರ್ಕಾರದಿಂದ ಕಿರುಕುಳಕ್ಕೆ ಒಳಗಾಗಬೇಕಿತ್ತೆ? ಇಂದಿನವರೆಗೂ ಫಿಜಾ ಮತ್ತು ಪರ್ಜಾನಿಯ ಚಿತ್ರಗಳು ಗುಜರಾತ್‌ನಲ್ಲಿ ಬಿಡುಗಡೆಯ ಭಾಗ್ಯದ ಸೌಭಾಗ್ಯವಿಲ್ಲದೆ ಡಬ್ಬದಲ್ಲೇ ಉಳಿಯುತ್ತಿದ್ದವೇ?ರೋಹಿನ್ಟನ್ ಮಿಸ್ತ್ರಿ ಮತ್ತು ಎ.ಕೆ.ರಾಮಾನುಜನ್ ಪುಸ್ತಕಗಳು ನಿಷೇಧಿಸಲ್ಪಡುತ್ತಿದ್ದವೇ? ಶಹೀನ ಮತ್ತು ರೇಣು ಎನ್ನುವ ಮಹಾರಾಷ್ಟ್ರದ ತರುಣಿಯರು ಪತ್ರಕರ್ತರು ಜೈಲಿಗೆ ಹೋಗಬೇಕಿತ್ತೆ? ಇನ್ನೂ ನೂರಾರು ಉದಾಹರಣೆಗಳಿವೆ.

ಇಂದು ಪ್ರಾಮಾಣಿಕ ಪತ್ರಕರ್ತ ನವೀನ ಸೂರಿಂಜೆ ವ್ಯವಸ್ಥೆಯ ಮತ್ತು ಪಟ್ಟಭದ್ರರ ವಿರುದ್ಧ ನಿರ್ಭಿಡೆಯಿಂದ, ಪ್ರಾಮಾಣಿಕವಾಗಿ ಬರೆದಿದ್ದಕ್ಕೆ ಬಂಧಿತನಾಗಿ ಕಳೆದ ಮೂರು ತಿಂಗಳಿಂದ ಜೈಲಿನಲ್ಲಿರಬೇಕಾದಂತಹ ದುಸ್ಥಿತಿ ಬಂದೊದಿಗಿದೆ. ಇದಕ್ಕೆ ಮೂಲಭೂತ ಕಾರಣಗಳನ್ನು ಎಂಬತ್ತು ವರ್ಷಗಳ ಹಿಂದೆ ಸತ್ಯವನ್ನು ನುಡಿದ ಆರ್ವೆಲ್‌ನ ಮಾತುಗಳಲ್ಲಿ ಕಾಣಬಹುದು. ಪತ್ರಕರ್ತನಾಗಿ ಸೂರಿಂಜೆಯಂತಹವರು ತಮ್ಮ ಪ್ರಾಮಾಣಿಕ ಅಭಿವ್ಯಕ್ತಿಯನ್ನು Justiceದಾಖಲಿಸಲು ವ್ಯವಸ್ಥೆಯು ನಿರಂತರವಾಗಿ ಪ್ರತಿರೋಧ ತೋರಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ದಶಕಗಳಲ್ಲಿ ಇಂತಹ ನೂರಾರು ಘಟನೆಗಳು ಜರುಗಿವೆ. ಪತ್ರಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯ ನಿರಂತರವಾಗಿ ಚಾಲ್ತಿಯಲ್ಲಿಡಲು ಅನೇಕ ಕಾನೂನುಗಳು ಸೃಷ್ಟಿಯಾದರೂ ಇದೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸಲು ನೂರಕ್ಕೂ ಮೇಲ್ಪಟ್ಟು ಕಾನೂನುಗಳು ಜಾರಿಯಲ್ಲಿವೆ. ಇಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಲು ಪ್ರತಿಯೊಬ್ಬ ನಾಗರೀಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಕಾನೂನುಗೊಳಿಸಲಾಗಿದ್ದರೂ ವಾಸ್ತವದಲ್ಲಿ ಅವನ ಪ್ರತಿಯೊಂದು ಮಾತುಗಳು ಮತ್ತು ನಡೆಗಳನ್ನು ಅಕ್ಷರಶಃ ತನಿಖೆಗೊಳಪಡಿಸಲಾಗುತ್ತದೆ ಮತ್ತು ಪ್ರಭುತ್ವವು ಕಾನೂನನ್ನು ತನ್ನ ಮೂಗಿನ ನೇರಕ್ಕೆ ತಿರುಚಿ ಸಂಬಂಧಪಟ್ಟ ವ್ಯಕ್ತಿಯನ್ನು ಹಿಂಸೆಗೆ, ಅವಮಾನಕ್ಕೆ ಒಳಪಡಿಸಲಾಗುತ್ತದೆ. ಕಾನೂನುಬದ್ಧವಾಗಿಯೇ ರಚಿಸಲ್ಪಟ್ಟ ಮಾನವ ಹಕ್ಕುಗಳ ಅಯೋಗವು ವರ್ಷಗಳ ಕಾಲ ಅಧ್ಯಕ್ಷನಿಲ್ಲದೆ ಕೊಳೆಯುತ್ತಿರುತ್ತದೆ. ಇದರ ಅರಿವೂ ಸಹ ನಾಗರಿಕ ಸಮಾಜಕ್ಕೆ ಇರುವುದಿಲ್ಲ. ಇದು ಮೇಲ್ನೋಟಕ್ಕೆ ಎಲ್ಲವೂ ಸುಗಮವಾಗಿರುವಂತೆ ಕಂಡರೂ ವ್ಯವಸ್ಥೆಯೊಳಗಡೆ ಒಂದು ಬಗೆಯಲ್ಲಿ ಅಗೋಚರವಾದ ಭಯದ ವಾತಾವರಣ ನಿರ್ಮಾಣಗೊಂಡಿರುತ್ತದೆ.ಇದಕ್ಕಾಗಿ ತುರ್ತುಪರಿಸ್ಥಿಯನ್ನು ಹೇರುವ, ಆ ಮೂಲಕ ಸೆನ್ಸಾರ್‌ಶಿಪ್ ಅನ್ನು ಜಾರಿಗೊಳಿಸುವ ಪರಿಸ್ಥಿತಿಯ ಅಗತ್ಯವೇ ಇರುವುದಿಲ್ಲ. ಪ್ರಜಾಪ್ರಭುತ್ವದ ಪರಿಧಿಯೊಳಗೇ ಇವೆಲ್ಲವೂ ನಿರ್ಮಾಣಗೊಂಡಿರುತ್ತವೆ ಮತ್ತು ನಿರ್ಮಾಣಗೊಳ್ಳುತ್ತಿರುತ್ತವೆ. ಈ ಬಗೆಯ ನಿರ್ಮಿತಿಯನ್ನೇ ಚೊಮೆಸ್ಕಿ “Friendly Fascism” ಎಂದು ಕರೆದ. ಇಲ್ಲಿ ಎಲ್ಲವೂ ಸುಸೂತ್ರವಾಗಿರುವಂತೆ ಭಾಸವಾದರೂ ಯಾವುದೂ ಸುಸಂಬದ್ಧವಾಗಿರುವುದಿಲ್ಲ. ಇದರ ಇನ್ನೊಂದು ಮುಖವೇ ಸಮಾಜದ ಕೋಮುವಾದಿ ಗುಂಪುಗಳಾದ ಫ್ಯಾಸಿಸ್ಟ್ ಮನೋಸ್ಥಿತಿಯ ಸಂಘ ಪರಿವಾರ, ಜಮಾತೆ, ತೊಗಾಡಿಯಾಗಳು, ಮೋದಿಗಳು, ಮುತಾಲಿಕ್‌ಗಳು, ಬುಖಾರಿಗಳು, ಅಕ್ಬರುದ್ದೀನ್ ಓವೈಸಿಗಳು, ಇತ್ಯಾದಿ ಮೂಲಭೂತವಾದಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನೇ ದುರ್ಬಳಕೆ ಮಾಡಿಕೊಂಡು ಸಮಾಜದಲ್ಲಿ ದ್ವೇಷದ ವಾತಾವರಣವನ್ನು ಹುಟ್ಟು ಹಾಕುವುದು ಮತ್ತು ಸಾವಿರಾರು ಸಾವುನೋವಿಗಳಿಗೆ ಕಾರಣಕರ್ತರಾಗುವುದು. ಇದನ್ನು ಉದಾಹರಿಸುತ್ತ ಕಡೆಗೆ ಇವನ್ನೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳೆಂದು ಕರೆದು ಒಂದೇ ಏಟಿಗೆ ಎಲ್ಲಾ ಬಗೆಯ ಕೈದೀಪಗಳನ್ನು ಒಡೆದು ಹಾಕುವ ಹುನ್ನಾರಗಳೂ ನಿರಂತರವಾಗಿ ಜಾರಿಗೊಳ್ಳುತ್ತಿರುತ್ತವೆ.

ಒಟ್ಟಾರೆ ಈ ಬಗೆಯ ಬಿಕ್ಕಟ್ಟಿಗೆ ಮೂಲಭೂತ ಕಾರಣಗಳನ್ನು ನಾವೆಲ್ಲಿ ಹುಡುಕಬೇಕು?

ಹೆಚ್ಚೂ ಕಡಿಮೆ ಪ್ರಜೆಗಳೇ ಪ್ರಭುಗಳೆಂಬ ಪರಿಕಲ್ಪನೆಯೇ ಅಳಿಸಿ ಹೋಗಿ ಹಣಬಲ, ತೋಳ್ಬಲವಿರುವ ಪ್ರಭುಗಳೇ ಪ್ರಭುತ್ವದ ವಾರಸುದಾರರೆನ್ನುವ ಕಟು ವಾಸ್ತವವು ಕೇಂದ್ರೀಕರಣಗೊಳ್ಳುತ್ತಿರುವ ವ್ಯವಸ್ಥೆಯೇ? ಅಧಿಕಾರಿಶಾಹಿಯ ಮಾತಿರಲಿ, ಜನಸಾಮಾನ್ಯರೂ ಸಹ ಇನ್ನೂ ರಾಷ್ಟ್ರಪ್ರಭುತ್ವದ, activism-alice-walkerರಾಜಧರ್ಮದ ಗುಂಗಿನಿಂದ ಹೊರಬರಲಾಗದಂತಹ ಗುಲಾಮಿ ಮನಸ್ಥಿತಿಯ ಬೌದ್ಧಿಕ ನೆಲೆಗಳೇ? ಬಾಹ್ಯದ ಜೀವನಕ್ರಮದಲ್ಲಿ ಆಧುನಿಕರಾಗುತ್ತಿದ್ದರೂ ಅಂತರ್ಯದಲ್ಲಿ ಪ್ರಗತಿಪರರಾಗಲು ನಿರಾಕರಿಸುವ ಅಕ್ಷರಸ್ತರ ಕಠೋರ, ಸನಾತನ ಮನಸ್ಸುಗಳೇ? ತಮ್ಮ ಮನಸ್ಸಿಗೆ ಮಂಪರು ಕವಿದಂತೆ ಆಡುತ್ತಿರುವ ಮಧ್ಯಮವರ್ಗದ ಪ್ರಜ್ಞಾವಂತರೇ? ರಾಜ್ಯಾಂಗ ಮತ್ತು ಕಾರ್ಯಾಂಗದ ಪ್ರತಿನಿಧಿಗಳು, ವಕ್ತಾರರು ಸ್ವಹಿತಾಸಕ್ತಿ ಮತ್ತು ಸ್ವಜನ ಪಕ್ಷಪಾತಕ್ಕಾಗಿ ಪರಸ್ಪರ ಒಳ ಒಪ್ಪಂದದ ಮೂಲಕ ಬಹಿರಂಗವಾಗಿಯೇ ಸಂವಿಧಾನವನ್ನೇ ಧಿಕ್ಕರಿಸಿ ಇಡೀ ವ್ಯವಸ್ಥೆಯನ್ನೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಾಗ ಬುದ್ಧಿಜೀವಿಗಳು, ಅಕಡೆಮಿಕ್ ಚಿಂತಕರು ಇದರ ವಿರುದ್ಧ ಹೇಗೆ ಮುಖಾಮುಖಿಯಾಗುತ್ತಾರೆ? ಈಗಿನಂತೆ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕೇವಲ ಭಾಷಣಗಳ, ಲೇಖನಗಳ ಮೂಲಕ ಸಮರ್ಥಿಸಿಕೊಳ್ಳುವುದರಲ್ಲೇ ಮೈಮರೆಯುತ್ತಾರೆಯೇ? ಅಥವಾ ಬೌದ್ಧಿಕ ಕಸರತ್ತನ್ನು ಚಣಕಾಲ ಕೈಬಿಟ್ಟು ಸಾರ್ವಜನಿಕವಾಗಿ ಸಕ್ರಿಯವಾಗುತ್ತ ಮುಖ್ಯ ಅಜೆಂಡಾಗಳನ್ನಿಟ್ಟುಕೊಂಡು ತಲೆಮಾರುಗಳನ್ನು ರೂಪಿಸುತ್ತಾರೆಯೇ? ತಮ್ಮ ಅಮೂರ್ತ ಪಾಂಡಿತ್ಯವನ್ನು ಬಳಸಿಕೊಂಡು, ಜನಸಾಮಾನ್ಯರೊಂದಿಗೆ ಬೆರೆಯುತ್ತಾ, ಮಾನವ ಹಕ್ಕುಗಳ ವ್ಯಾಪ್ತಿಯನ್ನು ಬಲಗೊಳಿಸುವತ್ತ ಧೃಢ ಹೆಜ್ಜೆಯನ್ನಿಡುತ್ತ ಸಂವಿಧಾನ ವಿರೋಧಿ ಶಕ್ತಿ ಕೇಂದ್ರಗಳನ್ನು ಅಸ್ಥಿರಗೊಳಿಸಲು ಅಹಿಂಸಾತ್ಮಕವಾಗಿ ಮುನ್ನುಗ್ಗುತ್ತಾರೆಯೇ?