Daily Archives: January 22, 2013

ಮನೆಯೊಳಗಿನ ಅತ್ಯಾಚಾರಗಳು…

– ಡಾ.ಎಸ್.ಬಿ.ಜೋಗುರ

ಕುಂದಾಪುರದ ಹುಣಸಮಕ್ಕಿ ಎನ್ನುವ ಗ್ರಾಮದಲ್ಲಿ ಅಪ್ಪನೆಂಬ ಪರಮಪಾಪಿಯಿಂದ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರಕ್ಕೊಳಗಾದ ಮಗಳು, ಕೊನೆಗೂ ತಾಯಿಯಾಗುವ ಮೂಲಕ ಅಪ್ಪನ ಪಾಪವನ್ನು ಹೊರುವಂತಾಗಿದ್ದು ಅತ್ಯಂತ ಹೇಯವಾದ ಕೃತ್ಯ. ಪಕ್ಕದ ಮನೆಯ ಹುಡುಗನಿಂದ ಅತ್ಯಾಚಾರ, ಸ್ನೇಹಿತನಿಂದ ಹೆಂಡತಿಯ ಅತ್ಯಾಚಾರ, ಹೀಗೆ ಮನುಷ್ಯ ಸಂಬಂಧಗಳೇ ಅಸಹ್ಯ ಹುಟ್ಟಿಸುವಂತೆ ನಡೆಯುವ ವಿಕೃತಿಗಳಲ್ಲಿ ಮನೆಯೊಳಗಿನ ಅತ್ಯಾಚಾರ ಇನ್ನೂ ಭಯಂಕರವಾದುದು.

ದೆಹಲಿಯ ಬಸ್ಸಲ್ಲಿ ಜರುಗಿದ ಅತ್ಯಾಚಾರದ ಕರ್ಮಕಾಂಡ ಇಡೀ ದೇಶವನ್ನು ಬೆಚ್ಚಿ ಬೀಳಿಸಿತುrape-illustration ಎನ್ನುವಾಗಲೇ ಅದರ ಬೆನ್ನಲ್ಲಿಯೇ ಸರಣಿ ಹಂತದಲ್ಲಿ ಅತ್ಯಾಚಾರದ ಪ್ರಕರಣಗಳು ಬಯಲಾಗಿ, ಥಾಮಸ್ ಹಾಬ್ಸ್ ಹೇಳುವ “ನಿಯಂತ್ರಣ ಶಿಥಿಲತೆ ಮಾನವನ ಸಮಾಜವನ್ನು ಪಶುಸದೃಶಗೊಳಿಸುತ್ತದೆ,” ಎನ್ನುವ ಮಾತು ನಮ್ಮ ದೇಶದ ಸದ್ಯದ ಸಂದರ್ಭ ಮತ್ತು ಅಪರಾಧಿ ಕೃತ್ಯಗಳ ವಿಜೃಂಭಿಸುವಿಕೆಗೆ ಪಕ್ಕಾ ಅನ್ವಯಿಸುವಂತಾಗಿದೆ. ದೆಹಲಿ ಅತ್ಯಾಚಾರ ಪ್ರಕರಣದ 23 ವರ್ಷದ ಯುವತಿ ತಾನಳಿದು ಉಳಿದವರಾದರೂ ಸೇಫ್ ಆಗಿರಲಿ ಎನ್ನುವಂತೆ ನಮ್ಮನ್ನಗಲಿ ಬೆಂಕಿಯಲ್ಲಿ ಬೀದಿಯಾದರೂ, ಅದರ ಕಾವಿನಲ್ಲಿಯೇ ಮೈ ಕಾಯಿಸಿಕೊಳ್ಳುವವರ ನಡುವೆ ಅದರ ಬಿಸಿ ತಟ್ಟಬೇಕಾದವರನ್ನು ಸರಿಯಾಗಿ ತಟ್ಟಿಲ್ಲ. ಮತ್ತೊಮ್ಮೆ ಕೊನೆಗೂ ದಪ್ಪ ಚರ್ಮಗಳು ಸಂವೇದನಾಹೀನವೇ.. ಎನ್ನುವದನ್ನು ತೋರಿಸಿಕೊಟ್ಟಂತಾಗಿದೆ.

ಕರ್ನಾಟಕದಂತಹ ನೆಲದಲ್ಲಿಯೂ ಕಳೆದ ಅನೇಕ ದಿನಗಳಿಂದ ಅತ್ಯಾಚಾರಗಳು ಮತ್ತೆ ಮತ್ತೆ ಮರುಕಳುಹಿಸುತ್ತಿವೆ. ದೆಹಲಿಯ ಬಸ್‌ನಲ್ಲಿ ಜರುಗಿದ ಅತ್ಯಾಚಾರದ ಪ್ರಕರಣ ಇನ್ನೂ ಬಿಸಿಯಾಗಿರುವಾಗಲೇ ಡಿಸೆಂಬರ್ ತಿಂಗಳ ಕೊನೆಯಲ್ಲಿ ಸಿಟಿ ಬಸ್ಸಲ್ಲಿ ಮತ್ತೊಂದು ಅತ್ಯಾಚಾರದ ಪ್ರಕರಣ ಬಯಲಾಗಿದೆ. ಇಡೀ ದೇಶ ಹೊಸ ವರ್ಷದ ಆಚರಣೆಯ ಹೊಸ್ತಿಲಲ್ಲಿರುವಾಗಲೇ ದೆಹಲಿಯ ಸಿಟಿ ಬಸ್ಸಲ್ಲಿ 16 ವರ್ಷದ ಬಾಲಕಿಯ ಮೇಲೆ 19 ವರ್ಷದ ಆಕೆಯ ಮಲ ಸಹೋದರನೇ ಅತ್ಯಾಚಾರ ನಡೆಸಿದ ಘಟನೆಯೊಂದು ಬಯಲಾಗಿ, ಬೇಲಿಯೇ ಎದ್ದು ಹೊಲ ಮೇಯುವ ಇಂತಹ ಪ್ರಕರಣಗಳು ಕೂಡಾ ಈಗ ಬಯಲಾಗುತ್ತಿರುವುದು, ದಾಖಲಾಗುತ್ತಿರುವದು ನೋಡಿದರೆ ಕುಟುಂಬದ ಮಾನ ಹರಾಜು, ಹುಡುಗಿಯ ಮಾನದ ಪ್ರಶ್ನೆ ಎಂದೆಲ್ಲಾ ಬಾಯಿ ಮುಚ್ಚಿ ಕುಳಿತುಕೊಳ್ಳುತ್ತಿದ್ದ ದಿನಗಳು ಹೋದವು. ಕೊನೆಯ ಪಕ್ಷ ಪೋಲಿಸ್ ಠಾಣೆಗೆ ತೆರಳಿ ಕಂಪ್ಲೇಂಟ್ ಕೊಡುವ ಮಟ್ಟಿಗಾದರೂ ಧೈರ್ಯ ತಂದು ಕೊಡುವಲ್ಲಿ ದೆಹಲಿಯಲ್ಲಿ ಪಾರ್ಲಿಮೆಂಟ್ ಎದುರಲ್ಲಿ ನಡೆದ ಅತ್ಯಾಚಾರ ವಿರೋಧಿ ಬೃಹತ್ ಆಂದೋಲನ ಕೆಲಸ ಮಾಡಿದೆ.

ಹೀಗೆ ಅಣ್ಣ ತಂಗಿಯ ಮೇಲೆ, ಅಪ್ಪ ಮಗಳ ಮೇಲೆ, ಅತ್ಯಾಚಾರ ಎಸಗುವ ಪ್ರಕರಣಗಳಿಗೇನೂ ಕೊರತೆಯಿಲ್ಲ. prohibited-marriages-Clerke_tableಆದರೆ ಇಲ್ಲಿಯವರೆಗೆ ಅವು ಬಹುತೇಕವಾಗಿ ಗಪ್‌ಚುಪ್ ಆಗಿಯೇ ನಡೆಯುತ್ತಿದ್ದವು. ತೀರಾ ಅಪರೂಪಕ್ಕೆ ಎನ್ನುವ ಹಾಗೆ ಮನೆಯ ಗೋಡೆ ದಾಟಿ ಪೋಲಿಸ್ ಸ್ಟೇಷನ್‌ವರೆಗೂ‍ ಬಂದು ದಾಖಲಾಗುವದು ತುಂಬಾ ವಿರಳವಾಗಿತ್ತು. ಈಗ ಇಡೀ ಸಮಾಜ ಅತ್ಯಾಚಾರದ ವಿರುದ್ಧ ರೋಸಿ ಹೋಗಿದೆ. ಹಾಗಾಗಿಯೇ ಮತ್ತೆ ಮತ್ತೆ ಅತ್ಯಾಚಾರದ ಪ್ರಕರಣಗಳು ಬಯಲಾಗುತ್ತಿವೆ. ಈ ಮೊದಲು ಅಳು ನುಂಗಿ ನಗುವ ಅನಿವಾರ್ಯತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದ ನಾರಿಯರು, ಇಂದು ಅತ್ಯಾಚಾರವನ್ನು ದಾಖಲಿಸಿ ಅಪರಾಧಿಗೆ ಶಿಕ್ಷೆ ಕೊಡಿಸುವಲ್ಲಿ ಮುಂದಾಗುವ ಮೂಲಕ ತಾನು ಮುನಿದರೆ ಮಾರಿ ಎನ್ನುವದನ್ನು ಸಾಬೀತು ಮಾಡಹೊರಟಂತಿದೆ. ಮನೆಯ ಹೊರಗಿನವರು ಮಾಡುವ ಅತ್ಯಾಚಾರದ್ದು ಒಂದು ಮುಖವಾದರೆ, ಮನೆಯ ಒಳಗಡೆ ನಡೆಯುವ ಅತ್ಯಾಚಾರ ಇನ್ನೂ ಭಯಂಕರವಾದುದು. ಇಲ್ಲಿ ಪ್ರತಿಭಟನೆಯಾಗಲೀ, ಪ್ರಕರಣ ಬಯಲುಗೊಳಿಸುವದಾಗಲೀ ತೀರಾ ಕಡಿಮೆ. ಹೀಗೆ ಮನೆಯ ಒಳಗಿನವರೇ ಅದರಲ್ಲೂ ಲೈಂಗಿಕವಾಗಿ ನಿಷೇಧಿತ ಸಂಬಂಧಗಳಲ್ಲಿಯೇ ನಡೆಯುವ ಲೈಂಗಿಕ ಕ್ರಿಯೆಯನ್ನು ಅಗಮ್ಯಗಮನ ಸಂಬಂಧ [Incest relations] ಎಂದು ಕರೆಯಲಾಗುತ್ತದೆ.

ಈ ಬಗೆಯ ಸಂಬಂಧಗಳು ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ತೀರಾ ಪ್ರಾಚೀನ ಕಾಲದಲ್ಲಿ, ಪುರಾಣ ಮಹಾಕಾವ್ಯಗಳ ಕಾಲದಲ್ಲಿ ಸ್ವೀಕೃತ ಎನ್ನುವಂತೆ ಇರಬಹುದಾದ ಉದಾಹರಣೆಗಳೂ ಇಲ್ಲದಿಲ್ಲ. ಬ್ರಹ್ಮ ತನ್ನ ಮಗಳೊಂದಿಗೆ ಹೊಂದಿರುವ ಸಂಬಂಧ, ಯಮ ತನ್ನ ಸಹೋದರಿ ಯಮಿಯೊಂದಿಗೆ ಹೊಂದಿರುವ ಸಂಬಂಧಗಳು ಈ ಪ್ರಕಾರದ್ದಾಗಿವೆ. ಮಧ್ಯ ಅಮೇರಿಕೆಯಲ್ಲಿ ರೆಡ್ ಇಂಡಿಯನ್ನರು ತಮ್ಮ ಮಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಬಗ್ಗೆ ಉಲ್ಲೇಖಗಳಿವೆ. ಹಾಗೆಯೇ ಕೆಲವು ಪ್ರಾಚೀನ ರಾಜಮನೆತನಗಳಲ್ಲಿಯೂ ಈ ಬಗೆಯ ಆಚರಣೆಗಳಿದ್ದವು. ತಮ್ಮದು ಪರಿಶುದ್ಧ ರಕ್ತ, ಅದರ ಸಂರಕ್ಷಣೆಯೇ ತಮ್ಮ ಪರಮಕರ್ತವ್ಯ ಎನ್ನುವ ಹಿನ್ನೆಲೆಯಲ್ಲಿ ಈ ಬಗೆಯ ಸಂಬಂಧಗಳು ಆಗ ಇದ್ದವು. ಪ್ರಾಚೀನ ಈಜಿಪ್ತ ಮತ್ತು ಇರಾನಗಳಲ್ಲಿ ಸಹೋದರಿಯರನ್ನು ವಿವಾಹವಾಗುವ ಕ್ರಮವಿತ್ತು.Cleopatra_and_Caesar_by_Jean-Leon-Gerome ಕ್ಲೀಯೋಪಾತ್ರಾ ತನ್ನ ಸಹೋದರ ಟಾಲೆಮಿಯನ್ನೇ ವಿವಾಹವಾದ ಪ್ರಸ್ತಾಪವಿದೆ. ಪ್ರಾಚೀನ ಕಾಲದ ರೋಮನ್ನರಲ್ಲಿಯೂ ಈ ಬಗೆಯ ಅಗಮ್ಯಗಮನ ವಿವಾಹಕ್ಕೆ ಸಮ್ಮತಿಯಿತ್ತು. ಮುಂಗೋಲಿಯನ್, ರಷ್ಯನ್, ಕೊರ್ಶಿಕನ್ಸ್, ಐರಿಷ್, ಮೀಡ್ಸ್, ಕಾಂಬೊಡಿಯನ್ಸ್, ಅಮೇರಿಕಾದ ರೆಡ್ ಇಂಡಿಯನ್ಸ್, ಎಸ್ಕಿಮೋಗಳು, ಟಿಟೀನ್ಸ್ ಮುಂತಾದ ಜನಾಂಗಗಳಲ್ಲಿ ಈ ಬಗೆಯ ಅಗಮ್ಯಗಮನ ಸಂಬಂಧ ಪ್ರಚಲಿತದಲ್ಲಿತ್ತು. ಖ್ಯಾತ ಚಿಂತಕ ಬರ್ಟಂಡ್ ರಸಲ್ ಅವರು ತಮ “ಮ್ಯಾರೇಜ್ ಆಂಡ್ ಮಾರಲ್ಸ್” ಎನ್ನುವ ಕೃತಿಯಲ್ಲಿ ಈ ಅಗಮ್ಯಗಮನ ಸಂಬಂಧಗಳ ಅಸ್ಥಿತ್ವದ ಬಗ್ಗೆ ಪ್ರಸ್ತಾಪಿಸಿರುವುದಿದೆ.

ಹ್ಯಾವಲಾಕ್ ಎಲ್ಲಿಸ್ ಎನ್ನುವ ಮನ:ಶಾಸ್ತ್ರಜ್ಞ ತನ್ನ ಕೃತಿ “ಸ್ಟಡೀಸ್ ಆಫ಼್ ದಿ ಸೈಕಾಲಾಜಿ ಆಫ಼್ ಸೆಕ್ಸ್” ಎನ್ನುವದರಲ್ಲಿ ‘ಕೌಟುಂಬಿಕ ಪರಿಸರದಲ್ಲಿ ತಂದೆ-ತಾಯಿ, ಮಕ್ಕಳು, ಸಹೋದರ, ಸಹೋದರಿಯರು ಬೆಳೆದು ಬರುವ ರೀತಿಯ ಮಧ್ಯೆ ತಪ್ಪಿಯೂ ಈ ಅಗಮ್ಯಗಮನ ಸಂಬಂಧಕ್ಕೆ ಆಸ್ಪದವೇ ಇಲ್ಲ,’ ಎಂದಿದ್ದಾರೆ. ಆದಾಗ್ಯೂ ಡಯಾನಾ ರಸಲ್‌ರವರು ಸುಮಾರು 4.5 ಪ್ರತಿಶತ ಸಂಬಂಧಗಳು ತಂದೆ-ಮಗಳ ನಡುವಿನ ಅಗಮ್ಯಗಮನ ಸಂಬಂಧಗಳಾಗಿರುವ ಬಗ್ಗೆ ಅವರು ಸ್ಯಾನ್ ಫ಼್ರಾನ್ಸಿಸ್ಕೋದಲ್ಲಿ ಮಾಡಲಾದ ಅಧ್ಯಯನದ ಮೂಲಕ ಗುರುತಿಸಿರುವದಿದೆ. ಹಿಂದೊಮ್ಮೆ ಬ್ರಿಟಿಷ ಮೂಲದ ನ್ಯಾಯಾಧೀಶ ಮೆಕಾರ್ಟಿ ಎನ್ನುವವರು, ’ತಂದೆ ಮಗಳನ್ನು ಬಲಾತ್ಕರಿಸಿದ, ಸಹೋದರ ತನ್ನ ಮಂದಬುದ್ಧಿಯ ಸಹೋದರಿಯನ್ನು ಕೆಡಿಸಿದ ಅನೇಕ ಉದಾಹರಣೆಗಳು ನ್ಯಾಯಾಲಯದಲ್ಲಿ ದಾಖಲಾಗಿವೆ,’ ಎಂದಿದ್ದರು. ಈ ಬಗೆಯ ಅಗಮ್ಯಗಮನ ಸಂಬಂಧಗಳನ್ನು ಯೋಚಿಸಲು ಸಾಧ್ಯವೇ ಇಲ್ಲ ಎನ್ನಬಹುದಾದ ನಮ್ಮ ನೆಲದಲ್ಲಿಯೇ ಇಂಥಾ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತವೆ. ಇನ್ನು ಕತ್ತಲಲ್ಲಿಯೇ ಉಳಿಯುವ ಪ್ರಮಾಣಗಳೆಷ್ಟೋ..?

ಈ ಅಗಮ್ಯಗಮನ ಸಂಬಂಧಗಳಲ್ಲಿ ಜರುಗುವ ಲೈಂಗಿಕ ಶೋಷಣೆಗೆ ಧ್ವನಿ ಇರುವದೇ ಅಪರೂಪ. ಇದೊಂಥರಾ ಬಾಯಿ ಸತ್ತವರ ಮೇಲಿನ ಅತ್ಯಾಚಾರ, ನಿರ್ವಾಹವಿಲ್ಲದ ಸ್ಥಿತಿಯಲ್ಲಿರುವವರ ಮೇಲಿನ ದೌರ್ಜನ್ಯ. ಈ ಬಗೆಯ ಸಂಬಂಧಗಳು ಬಿಸಿ ತುಪ್ಪದಂತೆ ಇತ್ತ ಹೇಳುವಂತೆಯೂ ಇಲ್ಲ, ಹೇಳದೇ ಇರುವಂತೆಯೂ ಇಲ್ಲ. ಅನೇಕ ಸಂದರ್ಭಗಳಲ್ಲಿ ತಮ್ಮ ತಂದೆ-ತಾಯಿಗಳು ‘ಆ ಅಂಕಲ್ ತುಂಬಾ ಒಳ್ಳೆಯವರು,’ ಎಂದು ಪರಿಚಯ ಮಾಡಿಸಿದ ಮೇಲೆಯೂ ಆ ಅಂಕಲ್ ಎಂಬುವಾತ ಆ ಬಾಲಕಿಯನ್ನು ಲೈಂಗಿಕವಾಗಿ ಶೋಷಿಸಿದಾಗ ಆಕೆಗೆ ತನ್ನ ಪಾಲಕರ ಮುಂದೆ ಹೇಳಲಾಗುವುದಿಲ್ಲ. ಪಾಲಕರಿರದಿದ್ದರಂತೂ ಆ ಬಾಲಕಿಯ ಬದುಕು ನರಕವೇ ಸರಿ. ಇತ್ತೀಚಿಗೆ ಫ್ರೆಂಚ್ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿನಲ್ಲಿ ತನ್ನ ಮೂರು ವರ್ಷದ ಮಗಳನ್ನು ಲೈಂಗಿಕವಾಗಿ ಶೋಷಣೆ ಮಾಡಿದ ಬಗ್ಗೆ ನಮ್ಮ ರಾಜ್ಯದ ಮತ್ತು ರಾಷ್ಟ್ರದ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

ಡಿ.ರಸಲ್ ಎನ್ನುವವರು 80 ರ ದಶಕದಲ್ಲಿ ಸುಮಾರು 930 ರಷ್ಟು ಮಾದರಿಗಳನ್ನು [ಮಹಿಳೆಯರು] ಆಯ್ಕೆ ಮಾಡಿ ಅವರಿಗೆ ಬಾಲ್ಯದಲ್ಲಿ ಅಗಿರಬಹುದಾದ ಅಗಮ್ಯಗಮನ ಸಂಬಂಧಗಳಲ್ಲಿಯ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದಳು. ಈ 930 ಮಹಿಳೆಯರಲ್ಲಿ ಸುಮಾರು 16 ಪ್ರತಿಶತದಷ್ಟು ಮಹಿಳೆಯರು ತಮ್ಮ 18 ವರ್ಷ ವಯೋಮಿತಿ ತಲುಪುವದರೊಳಗಾಗಿ ಒಂದಿಲ್ಲಾ ಒಂದು ಬಗೆಯ ಅಗಮ್ಯಗಮನ ಸಂಬಂಧದಲ್ಲಿಯ ಲೈಂಗಿಕ ಶೋಷಣೆಯ ಬಗ್ಗೆ ಮಾತನಾಡಿರುವುದಿದೆ. ಹಾಗೆಯೇ 152 ಮಹಿಳೆಯರು ತಮಗೆ ಸಂಬಂಧಗಳಲ್ಲಿಯೇ ಉಂಟಾದ 186 ಬಗೆಯ ಲೈಂಗಿಕ ಶೋಷಣೆಯ ಅನುಭವವನ್ನು ಡಯಾನಾ ರಸಲ್ ಎದುರು ಹಂಚಿಕೊಂಡಿರುವದಿದೆ [Sexual Exploitation. pages 182-183]. sexual-exploitationಇದರಲ್ಲಿ ಸುಮಾರು 12 ಪ್ರತಿಶತ ಮಹಿಳೆಯರು ಅವರಿನ್ನೂ 14 ವರ್ಷ ತಲುಪುವದರೊಳಗೆ ತಮ್ಮ ಸಂಬಂಧಿಗಳಿಂದಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಗ್ಗೆ ಮಾಹಿತಿ ನೀಡಿರುವದಿದೆ. ರಸಲ್, ಸ್ಯಾನ್ ಫ಼್ರಾನ್ಸಿಸ್ಕೋದಲ್ಲಿ ತನ್ನ ಅಧ್ಯಯನ ಮಾಡಿರುವರಾದರೂ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಈ ಬಗೆಯ ಅಗಮ್ಯಗಮನ ಸಂಬಂಧಗಳ ಹಾವಳಿ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಇದ್ದೇ ಇದೆ.

ಈಗಾಗಲೇ ಅತ್ಯಾಚಾರಿಗಳಿಗೆ ಶಿಕ್ಷೆಯ ಪ್ರಮಾಣ ಮತ್ತು ಸ್ವರೂಪ ಹೇಗಿರಬೇಕು ಎನ್ನುವ ನಿಟ್ಟಿನಲ್ಲಿ ದೇಶದ ಬಹುತೇಕ ಕಡೆಯಿಂದ ಅತ್ಯಂತ ರೋಷದಿಂದ ಗಲ್ಲು ಶಿಕ್ಷೆಯೇ ಆಗಬೇಕು, ಅವರ ಪುರುಷತ್ವವನ್ನೇ ಕತ್ತರಿಸಬೇಕು, ಸಾರ್ವಜನಿಕರ ಎದುರಲ್ಲಿ ಕಲ್ಲು ಹೊಡೆದು ಸಾಯಿಸಬೇಕು, ಹೀಗೆ ಹತ್ತಾರು ಬಗೆಯ ಆಕ್ರೋಶಭರಿತ ಸಲಹೆಗಳು ಬಂದಿವೆ. ಇಂತಹ ಸಂದರ್ಭದಲ್ಲಿ ಮನುಷ್ಯ ಸಂಬಂಧಗಳ ಅರ್ಥವಂತಿಕೆಯನ್ನೇ ಕಳೆಯ ಹೊರಟ, ಮಾನವ ಮತ್ತು ಪ್ರಾಣಿಗಳ ನಡುವಿನ ಗೆರೆಯನ್ನೇ ಅಳಿಸ ಹೊರಟವರಿಗೆ ಕೊಡಬೇಕಾದ ಶಿಕ್ಷೆಯ ಪ್ರಮಾಣ ಹೇಗಿರಬೇಕು?