Daily Archives: January 23, 2013

ಬಲಿತ ಸಚಿವರ ದಲಿತ ಚಿಂತನೆ…!

– ಡಾ. ಕಿರಣ್. ಎಂ. ಗಾಜನೂರು

ಸನ್ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಎ.ನಾರಾಯಣಸ್ವಾಮಿಯವರು ಮತಾಂತರ ಹೊಂದಿದ ದಲಿತರಿಗೆ ಇನ್ನು ಮುಂದೆ ಮಿಸಲಾತಿ ಸೌಲಭ್ಯಗಳು ಸಿಗುವುದಿಲ್ಲ ಎಂಬ ಎಚ್ಚರಿಕೆಯ ಹೇಳಿಕೆಯನ್ನು ನೀಡಿದ್ದಾರೆ. ನಿಜಕ್ಕೂ ಈ ಹೇಳಿಗೆ ಅಂತ್ಯಂತ ಬೇಜಾವಬ್ದಾರಿ ಮತ್ತು ಬಾಲಿಷವಾದುದು. a-narayanaswamyಏಕೆಂದರೆ ಸಚಿವರ ಹೇಳಿಕೆಯ ಅರ್ಥ ಹಿಂದೂ ಧರ್ಮದಿಂದ (ಹಾಗೆಂದರೆ ಎನು ಎಂದು ಇದುವರೆಗೂ ವೈಜ್ಞಾನಿಕವಾಗಿ ಯಾರೂ ನಿರೂಪಿಸಿಲ್ಲ, ಅದು ಬೇರೆಯೇ ವಿಚಾರ) ಮುಖ್ಯವಾಗಿ ಕ್ರಿಶ್ಚಿಯನ್ ಅಥವ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರ ಕುರಿತು ಮಾತ್ರವಾಗಿದೆಯೊ ಅಥವಾ ಅಂಬೆಡ್ಕರ್ ಅವರನ್ನು ಅನುಸರಿಸಿ ಹಿಂದೂ ಧರ್ಮವನ್ನು ಮತ್ತು ಅದರ ಅರ್ಥಹಿನ ಆಚರಣೆಗಳನ್ನು ಧಿಕ್ಕರಿಸಿ ಬೌಧ್ದ ಧರ್ಮವನ್ನು ಸ್ವಿಕರಿಸಿದ ಬಹುದೊಡ್ಡ ಸಂಖ್ಯೆಯ ದಲಿತ ಬಾಂಧವರು ಈ ಎಚ್ಚರಿಕೆಯ ವ್ಯಾಪ್ತಿಯೋಳಗೆ ಬರುತ್ತಾರೆಯೇ ಎಂಬುದನ್ನು ಸಚಿವರು ಸ್ಪಷ್ಟಪಡಿಸಿಲ್ಲ. ಎಕೆಂದರೆ ಇದೂ ಮತಾಂತರವೇ ತಾನೆ!

ಅಷ್ಟೇ ಅಲ್ಲದೆ, ಭಾರತೀಯ ಸಮಾಜದ ಜೀವನಾಡಿ ದುಡಿಯುವ ವರ್ಗವಾದ ದಲಿತರು ಮಾತಾಂತರಗೊಳ್ಳಲು ಮೊದಲ ಕಾರಣ ಬಡತನವಾಗಿದ್ದರೆ, ಎರಡನೇಯದು ಸೊ ಕಾಲ್ಡ್ ಹಿಂದೂ ಧರ್ಮದ ಅನಿಷ್ಟ ಮತ್ತು ಅಸಮಾನ ಪದ್ದತಿಗಳು. ಒಬ್ಬ ಪ್ರಸಿದ್ಧ ಇತಿಹಾಸಕಾರ ಗುರುತಿಸುವಂತೆ ಭಾರತದ ಸುಮಾರು ಶೇ. 60 ರಿಂದ 70 ರಷ್ಟು ಜನಸಂಖ್ಯೆ ಇಂದಿಗೂ ಪ್ರಾಣಿಗಳ ಮಾದರಿಯಲ್ಲಿ ಆಹಾರ ಸಂಗ್ರಹಣೆ ಮತ್ತು ಅದರ ಶೇಖರಣೆಯ ಹಂತದಲ್ಲಿಯೇ ಇದ್ದಾರೆ. ಶಿಕ್ಷಣ, ಸಬಲಿಕರಣ, ಆರ್ಥಿಕ ಸ್ವಾಯತ್ತತೆ ಮತ್ತು ಸಮಾಜಿಕ ಸ್ಥಾನ ಅವರಿಗೆ ಕನಸಿನ ಮಾತಾಗಿದೆ. ದುರಂತವೆಂದರೆ ಇವರಲ್ಲಿ ಶೇಕಡಾ 90 ರಷ್ಟು ಮಂದಿ ದಲಿತರೇ ಇದ್ದಾರೆ ಎಂಬುದನ್ನು ಅವರು ಗುರುತಿಸುತ್ತಾರೆ. ಇವರುಗಳು ಯಾರದೋ ಮನೆ ಮತ್ತು ಹೊಲಗಳಲ್ಲಿ ದುಡಿಯುವುದು, ಶೌಚಾಲಯ ಬಳಿಯುವುದು, ಜೀತಕ್ಕೆ ಒಳಗಾಗುವುದು, ಎಲ್ಲವೂ ತನ್ನ ಮತ್ತು ತನ್ನ ಕುಟುಂಬದ ಆ ಹೊತ್ತಿನ ಅನ್ನಕ್ಕಾಗಿಯೇ.

ಹಾಗೆ ನೋಡುವುದಾದರೆ, ಪ್ರಜಾತಾಂತ್ರಿಕ ಶಿಕ್ಷಣದ ಗಂಧ ಗಾಳಿಯೂ ಗೊತ್ತಿರದ ಈ ಅನಕ್ಷರಸ್ಥ ವರ್ಗ ಚುನಾವಣೆಯಲ್ಲಿ ಹಣ Young_Ambedkarಪಡೆಯುವುದು ಅನ್ನಕ್ಕಾಗಿಯೇ. ಇದನ್ನು ನಾವು ಭ್ರಷ್ಟತೆ ಅದು ಇದು ಎಂಬೆಲ್ಲ ಚರ್ಚಿಸುತ್ತಿದ್ದೇವೆ! ಈ ಹಿನ್ನೆಲೆಯಲ್ಲಿ ದಲಿತರ ಮತಾಂತರಕ್ಕೆ ಕಾರಣ ಅವರ ಆ ಹೊತ್ತಿನ ಅನ್ನವೇ ಹೊರತು ಯಾವುದೇ ಧಾರ್ಮಿಕ ವಿಚಾರಗಳಲ್ಲ…

ಅದ್ದರಿಂದ ಸನ್ಮಾನ್ಯ ಸಚಿವರು ಮೇಲೆ ತಿಳಿಸಿದ ದಲಿತರಿಗೆ ’ಯಾವುದೇ ಧರ್ಮಕ್ಕೆ ಮಾತಾಂತರ ಹೊಂದಬೇಡಿ, ದಲಿತರೆಂದು ನೀವು ಗುರುತಿಸಿಕೊಳ್ಳಬೇಕಾದರೆ ಎಷ್ಟೇ ಅಸಮಾನತೆ ಅವಮಾನಗಳಾದರೂ ಹಿಂದೂಗಳಾಗಿಯೇ ಉಳಿಯಿರಿ, ಹಿಂದೂ ಧರ್ಮವೇ ನಿಮಗೆ ದಲಿತತ್ವ ನೀಡಿ ನಿಮಗೆ ಮೀಸಲಾತಿ ಮತ್ತಿತರ ಸವಲತ್ತುಗಳನ್ನು ದಯಪಾಲಿಸಿದೆ (ಸಂವಿಧಾನವಲ್ಲ), ಅದ್ದರಿಂದ ದಲಿತರಾಗಿ ಹಿಂದೂ ಧರ್ಮದಲ್ಲಿಯೇ ಇರಿ ಮತ್ತು ಹಿಂದುತ್ವವನ್ನು ಗಟ್ಟಿಗೊಳಿಸಿ, ಅದಕ್ಕೆ ಪ್ರತಿಯಾಗಿ ಈ ಮಹಾನ್ ಧರ್ಮಿಯರು ನೀಡುವ ಮೀಸಲಾತಿ ಅವಕಾಶವನ್ನು ಪಡೆಯಿರಿ,’ ಎಂಬ ಮಾದರಿಯ ತತ್ವ ಬೋಧನೆಯನ್ನು ಬಿಟ್ಟು ಅನ್ನ, ಹಕ್ಕು, ಮತ್ತು ಶಿಕ್ಷಣಕ್ಕಾಗಿ ಪರಿತಪಿಸುತ್ತಿರುವ ದಲಿತ ಸಮಾಜದ ಕುಟುಂಬಗಳಿಗೆ ದುಡಿಯಲು ಭೂಮಿ ಅಥವಾ ಹೂಡಲು ಬಂಡವಾಳ ಮತ್ತು ಆಧುನಿಕ ಉದ್ಯೋಗಿಕರಣದ ಭಾಗವಾಗಲು ಬೇಕಾದ ಸ್ಕಿಲ್‌ಗಳನ್ನು ನೀಡುವತ್ತ ತಮ್ಮ ಗಮನ ಹರಿಸಲಿ.

(ಚಿತ್ರಕೃಪೆ: ದಿ ಹಿಂದು)