Daily Archives: January 24, 2013

ಪ್ರಜಾ ಸಮರ – 19 (ನಕ್ಸಲ್ ಕಥನದ ಅಂತಿಮ ಅಧ್ಯಾಯ)


– ಡಾ.ಎನ್.ಜಗದೀಶ್ ಕೊಪ್ಪ


 

ಅಧಿಕೃತವಾಗಿ 45 ವರ್ಷಗಳನ್ನು, ಅನಧಿಕೃತವಾಗಿ 50 ವರ್ಷಗಳನ್ನು ಪೂರೈಸಿರುವ ಭಾರತದ ನಕ್ಸಲ್ ಹೋರಾಟವನ್ನು 2013 ರ ಹೊಸ್ತಿಲಲ್ಲಿ ನಿಂತು ಪರಾಮರ್ಶಿಸಿದರೆ, ಸಂಭ್ರಮ ಪಡುವ ವಿಷಯಕ್ಕಿಂತ ಸಂಕಟ ಪಡುವ ಸಂಗತಿಗಳೆ ಹೆಚ್ಚಾಗಿವೆ.

2010 ರಲ್ಲಿ ಅಜಾದ್ ಅಲಿಯಾಸ್ ಚುರುಮುರಿ ರಾಜ್ ಕುಮಾರ್, 2011 ನವಂಬರ್ ತಿಂಗಳಿನಲ್ಲಿ ಕಿಶನ್ ಜಿ ಇವರ ಹತ್ಯೆಯಿಂದಾಗಿ ತೀವ್ರ ಹಿನ್ನಡೆ ಅನುಭವಿಸಬೇಕಾದ ನಕ್ಸಲ್ ಹೋರಾಟಕ್ಕೆ 2012 ರಲ್ಲಿ ಆರ್.ಕೆ. ಎಂದು ಜನಪ್ರಿಯವಾಗಿದ್ದ ರಾಮಕೃಷ್ಣ ಅವರ ಬಂಧನದಿಂದ ಚೇತರಿಸಿಕೊಳ್ಳಲಾಗದ ಪೆಟ್ಟು ಬಿದ್ದಿತು. ಮಾವೋವಾದಿ ನಕ್ಸಲ್ ಚಳುವಳಿಗೆ ಬೇಕಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ನಿಪುಣರಾಗಿದ್ದramakrishna-naxal-india ರಾಮಕೃಷ್ಣರನ್ನು ಕೊಲ್ಕತ್ತ ಪೊಲೀಸರು, ಆಂಧ್ರ ಪೊಲೀಸರ ನೆರವಿನಿಂದ ಕೊಲ್ಕತ್ತ ನಗರದಲ್ಲಿ ರಾಕೆಟ್ ಲಾಂಚರ್‌ಗಳಿಗೆ ಬೇಕಾದ ಬಿಡಿಭಾಗಗಳನ್ನು ವರ್ಕ್‌ಶಾಪ್ ಒಂದರಲ್ಲಿ ತಯಾರಿಸುತ್ತಿದ್ದ ವೇಳೆ ಬಂಧಿಸುವಲ್ಲಿ ಯಶಸ್ವಿಯಾದರು.

ಆಂಧ್ರದ ಕರೀಂನಗರ ಜಿಲ್ಲೆಯ ಹಳ್ಳಿಯಿಂದ ಬಂದಿದ್ದ ರಾಮಕೃಷ್ಣರು 1976 ರಲ್ಲಿ ವಾರಂಗಲ್‌ನ ನ್ಯಾಷನಲ್ ಇನ್ಸಿಟ್ಯೂಟ್ ಆಪ್ ಟೆಕ್ನಾಲಜಿ ಸಂಸ್ಥೆಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್. ಪದವಿ ಪಡೆದು 1978 ರಲ್ಲಿ ಭೂಗತರಾಗುವ ಮೂಲಕ ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ಬೆಂಗಳೂರು, ಕೊಲ್ಕತ್ತ. ಚೆನ್ನೈ ನಗರಗಳಲ್ಲಿ ಶಸ್ತ್ರಾಸ್ತ್ರಗಳ ತಯಾರಿಕೆಗೆ ಬೇಕಾದ ಬಿಡಿಭಾಗಗಳನ್ನು ಸಣ್ಣ ಕೈಗಾರಿಕೆಗಳಿಗೆ ಆದೇಶ ನೀಡಿ ತಮಗೆ ಬೇಕಾದ ರೀತಿಯಲ್ಲಿ ತಯಾರಿಸಿಕೊಳ್ಳುತ್ತಿದ್ದರು. ಹೀಗೆ ಬಿಡಿಭಾಗ ಸಂಗ್ರಹಿಸಲು ಕೊಲ್ಕತ್ತ ನಗರಕ್ಕೆ ತೆರಳಿದಾಗ, ಪೊಲೀಸರಿಂದ ಬಂಧಿತರಾದರು. ಈಗ ಗಣಪತಿಯವರನ್ನು ಹೊರತು ಪಡಿಸಿದರೆ ಸೈದ್ಧಾಂತಿಕ ಹಿನ್ನೆಲೆಯುಳ್ಳ ಒಬ್ಬ ಹಿರಿಯ ನಾಯಕನನ್ನು ನಕ್ಸಲ್ ಹೋರಾಟದಲ್ಲಿ ಹುಡುಕುವುದು ಕಷ್ಟವಾಗಿದೆ.

ಕಳೆದ ಒಂದು ದಶಕದಿಂದ ನಗರಗಳಿಂದ ಹೋರಾಟಗಳತ್ತ ಆಕರ್ಷಿತರಾಗಿ ಬರುತ್ತಿದ್ದ ವಿದ್ಯಾವಂತರ ಸಂಖ್ಯೆ ಸಂಪೂರ್ಣ ಸ್ಥಗಿತಗೊಡಿದೆ. ವ್ಯವಸ್ಥೆಯಯ ವಿರುದ್ದದ ಹೋರಾಟಕ್ಕೆ ಅರಣ್ಯಕ್ಕೆ ಹೋಗಿ ಬಂದೂಕ ಹಿಡಿಯಬೇಕೆಂಬುದು ಈಗಿನ ಯುವಜನತೆಗೆ ಸವಕಲು ಮಾದರಿಯಾಗಿದೆ. ಇದೆ ವೇಳೆಗೆ 2010 ರ ಮಾರ್ಚ್ 23 ರಂದು ನಕ್ಸಲ್ ಚಳುವಳಿಯ ಸಂಸ್ಥಾಪಕ ಹಾಗೂ ಚಾರು ಮುಜುಂದಾರ್ ಸಂಗಾತಿ ಕನು ಸನ್ಯಾಲ್ ತಮ್ಮ ವೃದ್ಧಾಪ್ಯದಲ್ಲಿ ತೀವ್ರ ಬಡತನ ಮತ್ತು ಹದಗೆಟ್ಟ ಆರೋಗ್ಯಕ್ಕೆ ಔಷಧಕೊಳ್ಳಲು ಹಣವಿಲ್ಲದ ಸ್ಥಿತಿಯಲ್ಲಿ ತಮ್ಮ ಮಗಳ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಈಗಿನ ತಲೆಮಾರಿಗೆ ಹೋರಾಟ ಕುರಿತು ಮರುಚಿಂತನೆಗೆ ಪ್ರೇರೇಪಿಸಿದೆ. 1980 ಮತ್ತು 1990 ರ ದಶಕದಲ್ಲಿ ನಕ್ಸಲ್ ಹೋರಾಟಕ್ಕೆ ಸೇರ್ಪಡೆಯಾದ ಅನಕ್ಷರಸ್ತ ಆದಿವಾಸಿ ಯುವಕರು ಈಗ ಚಳುವಳಿಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಇವರಿಗೆ ಮಾವೋವಾಗಲಿ, ಲೆನಿನ್ ಆಗಲಿ ಅಥವಾ ಕಾರ್ಲ್ ಮಾರ್ಕ್ಸ್‌ನ ಸಿದ್ಧಾಂತಗಳ ಗಂಧ ಗಾಳಿ ತಿಳಿದಿಲ್ಲ. ಇಂತಹ ಕಾರಣಗಳಿಂದಾಗಿಯೆ ಸತ್ತು ಹೋಗಿರುವ ಯೋಧನ ಹೊಟ್ಟೆಯೊಳಗೆ ಸಿಡಿಮದ್ದನ್ನು ತುಂಬಿಸಿ ಇಡುವ ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ.

ಒಂದು ನೆಮ್ಮದಿಯ ಸಂಗತಿಯೆಂದರೆ, ಇಡೀ ರಾಷ್ಟ್ರಾದ್ಯಂತ ನಕ್ಸಲರು ಮತ್ತು ಸರ್ಕಾರಗಳ ನಡುವೆ ನಡೆಯುತ್ತಿದ್ದ ಸಂಘರ್ಷದಲ್ಲಿ ಹಿಂಸೆಯ ಪ್ರಮಾಣ ಇಳಿಮುಖವಾಗುತ್ತಿದೆ. ಜಾರ್ಖಂಡ್ ಮತ್ತು ಛತ್ತೀಸ್‌ ಗಡ್ ರಾಜ್ಯಗಳನ್ನು ಹೊರತುಪಡಿಸಿದರೆ, ಉಳಿದ ರಾಜ್ಯಗಳಲ್ಲಿ ಆಶಾಭಾವನೆ ಮೂಡುವಂತಿದೆ. pwg-naxalನಕ್ಸಲ್ ಚಳುವಳಿಯನ್ನು ಹುಟ್ಟುಹಾಕಿದ ಆಂಧ್ರಪ್ರದೇಶದಲ್ಲಿ ಕೇವಲ 13 ಸಾವುಗಳು ಸಂಭವಿಸಿವೆ. ಜಾರ್ಖಂಡ್ ನಲ್ಲಿ 160 ಸಾವು (2011 ರಲ್ಲಿ 182 ) ಛತ್ತೀಸ್‌ಗಡದಲ್ಲಿ 107 (2011 ರಲ್ಲಿ 204) ಬಿಹಾರದಲ್ಲಿ 43 ಸಾವು (2011 ರಲ್ಲಿ 63) ಪಶ್ಚಿಮ ಬಂಗಾಳದಲ್ಲಿ 6 ಸಾವು (2011 ರಲ್ಲಿ 45), ಹೀಗೆ ಭಾರತದಲ್ಲಿ 2011 ರಲ್ಲಿ 1760 ಪ್ರಕರಣಗಳು ನಡೆದು, 611 ನಾಗರೀಕರು ಮತ್ತು 99 ನಕ್ಸಲಿಯರು ಮೃತಪಟ್ಟಿದ್ದರೆ, 2012 ರ ವೇಳೆಗೆ 1365 ಪ್ರಕರಣಗಳು ದಾಖಲಾಗಿ 409 ನಾಗರೀಕರು ಮತ್ತು 74 ನಕ್ಸಲಿಯರು ಮೃತಪಟ್ಟಿದ್ದಾರೆ. ಒಟ್ಟಾರೆ ಸಕಾರ ಮತ್ತು ನಕ್ಸಲ್ ಸಂಘಟನೆಗಳಿಗೆ ಸಂಘರ್ಷ ಮತ್ತು ಹಿಂಸೆಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಅರಿವು ಮೂಡತೊಡಗಿದೆ.

ಭಾರತದ ನಕ್ಸಲ್ ಇತಿಹಾಸದಲ್ಲಿ ಪೊಲೀಸರತ್ತ, ಅಥವಾ ಸರ್ಕಾರಗಳತ್ತ, ಇಲ್ಲವೆ ನಕ್ಸಲ್ ಸಂಘಟನೆಗಳತ್ತ ಬೆರಳು ತೋರಿಸಿ ಆರೋಪ ಹೊರಿಸುವ ಮುನ್ನ ಉಭಯ ಬಣಗಳು ಎಲ್ಲಿ ಎಡವಿದವು ಎಂಬುದರತ್ತ ಗಮನಹರಿಸಿ ಹಿಂಸೆ ಮತ್ತು ಹೋರಾಟವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಸಾಂಘಿಕ ಪ್ರಯತ್ನ ನಡೆಯಬೇಕಿದೆ. ಇದಕ್ಕಾಗಿ ದೇಶದ ಎಲ್ಲಾ ಪ್ರಗತಿಪರರು, ಬುದ್ಧಿಜೀವಿಗಳು, ಪತ್ರಕರ್ತರು, ಲೇಖಕರು ಮುಕ್ತ ಮನಸ್ಸಿನಿಂದ ಕೈ ಜೋಡಿಸಬೇಕಿದೆ. ಇತಿಹಾಸದ ಘಟನೆಗಳನ್ನು ಕೆದುಕುತ್ತಾ ಪರಸ್ಪರ ಆರೋಪ ಮಾಡಿ ಕಾಲ ಕಳೆಯುವ ಬದಲು, ಹಿಂಸೆ ಮುಕ್ತ ಜಗತ್ತಿನತ್ತ ನಾವು ಹೆಜ್ಜೆ ಹಾಕಬೇಕಿದೆ. ನಾವು ಸೃಷ್ಟಿಸ ಬೇಕಾದ ಸಮಾಜದಲ್ಲಿ ಹಿಂಸೆ, ಬಡತನ, ಅಪಮಾನ, ಶೋಷಣೆ, ದಲಿತರು, ಆದಿವಾಸಿಗಳು, ಮತ್ತು ಅಲ್ಪಸಂಖ್ಯಾತರು ಇವರೆಲ್ಲಾ ಭಯಮುಕ್ತರಾಗಿ ಬದುಕುವಂತಹ ವಾತಾವರಣವನ್ನು ನಿರ್ಮಾಣ ಮಾಡುವ ನೈತಿಕ ಹೊಣೆ ಅಕ್ಷರ ಮತ್ತು ವಿದ್ಯೆಯನ್ನು ಬಲ್ಲ ನಮ್ಮೆಲ್ಲರ ಮೇಲಿದೆ. ವೈದ್ಯನೊಬ್ಬ ಖಾಯಿಲೆಯ ಮೂಲಕ್ಕೆ ಕೈ ಹಾಕುವಂತೆ ನಾವುಗಳು ಕೂಡ ಸಮಸ್ಯೆಗಳ ಬುಡಕ್ಕೆ ಕೈ ಹಾಕಬೇಕಿದೆ.

ಭಾರತದ ನಕ್ಸಲ್ ಹೋರಾಟದ ಇತಿಹಾಸವಾಗಲಿ ಅಥವಾ ಅದು ಹಿಡಿದ ಹಿಂಸೆಯ ಮಾರ್ಗ ಕುರಿತಂತೆ ನಮ್ಮಗಳ ಅಸಮಾಧಾನ ಏನೇ ಇರಲಿ, ಅವರುಗಳ ಹೋರಾಟದಲ್ಲಿ ಎಲ್ಲಿಯೂ ಸ್ವಾರ್ಥವೆಂಬುದು ಇರಲಿಲ್ಲ ಎಂಬುದನ್ನು ನಾವು ನೆನಪಿಡಬೇಕು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಇವೊತ್ತಿಗೂ ಮೂಕ ಪ್ರಾಣಿಗಳಂತೆ ಬದುಕುತ್ತಿರುವ ಆದಿವಾಸಿಗಳು, ಹಿಂದುಳಿದ ಬುಡಕಟ್ಟು ಜನಾಂಗಗಳ ನೆಮ್ಮದಿಯ ಬದುಕಿಗಾಗಿ ನಕ್ಸಲಿಸಂ ಹೆಸರಿನಲ್ಲಿ ಸಾವಿರಾರು ವಿದ್ಯಾವಂತ ಯುವಕರು ಪ್ರಾಣತೆತ್ತಿದ್ದಾರೆ. ಇವರ ಹೋರಾಟದ ಹಿಂದಿನ ಕಾಳಜಿಯನ್ನು ನಮ್ಮನ್ನಾಳುವ ಸರ್ಕಾರಗಳು ಅರಿಯುವ ಮನಸ್ಸು ಮಾಡಿದ್ದರೆ, ನಕ್ಸಲ್ ಸಂಘಟನೆಗಳು ಮತ್ತು ಸರ್ಕಾರಗಳ ನಡುವಿನ ಸಂಘರ್ಷಕ್ಕೆ ರಕ್ತದ ಕಲೆಗಳು ಅಂಟಿಕೊಳ್ಳುತ್ತಿರಲಿಲ್ಲ. ಸಂಘರ್ಷಕ್ಕೆ ಮೂಲ ಕಾರಣರಾದ ಭಾರತದ ಅರಣ್ಯವಾಸಿ ಆದಿವಾಸಿಗಳ ಬದುಕು ಹಸನಾಗಿದೆಯಾ? ಅದೂ ಇಲ್ಲ.

ನಮ್ಮ ನಡುವಿನ ಇತಿಹಾಸಕಾರ ಮತ್ತು ಅಂಕಣಕಾರ ರಾಮಚಂದ್ರ ಗುಹಾ 2011 ರ ಲ್ಲಿ ಆಗಸ್ಟ್ ಹದಿನೈದರೆಂದು ದೆಹಲಿಯ ಹಿಂದೂಸ್ತಾನ್ naxalite24fo4ಟೈಮ್ಸ್ ಪತ್ರಿಕೆಗೆ “ಟ್ರೈಬಲ್ ಟ್ರ್ಯಾಜಿಡಿಸ್” ( ಆದಿವಾಸಿಗಳ ದುರಂತ) ಎಂಬ ವಿಶೇಷ ಲೇಖನ ಬರೆದಿದ್ದರು. ಭಾರತದ ಆದಿವಾಸಿಗಳ ಸಮಸ್ಯೆಯನ್ನು ನಿಖರವಾಗಿ ಗುರುತಿಸಿರುವ ಗುಹಾ ಅವರು, ರಾಜಕಾರಣಿಗಳ ಕಪಟ ನಾಟಕವನ್ನೂ ಸಹ ಅನಾವರಣಗೊಳಿಸಿದ್ದಾರೆ. 2010 ರ ಆಗಸ್ಟ್ ತಿಂಗಳಿನಲ್ಲಿ ಒರಿಸ್ಸಾದಲ್ಲಿ ಆದಿವಾಸಿಗಳನ್ನು ಭೇಟಿ ಅವರ ಸಮಸ್ಯೆಗಳನ್ನು ಆಲಿಸಿದ್ದ ರಾಹುಲ್ ಗಾಂಧಿ, ಇನ್ನುಮುಂದೆ ದೆಹಲಿಯಲ್ಲಿ ನಿಮ್ಮ ಪರವಾಗಿ ಸೈನಿಕನಂತೆ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿ ಮರೆತು ಹೋದ ಪ್ರಸಂಗವನ್ನು ಪ್ರಸ್ತಾಪಿಸುತ್ತಾ, ಭಾರತದ ಬುಡಕಟ್ಟು ಅಥವಾ ಆದಿವಾಸಿಗಳ ಸಮಸ್ಯೆಯನ್ನು ಏಳು ಬಗೆಯಲ್ಲಿ ರಾಮಚಂದ್ರ ಗುಹಾ ಗುರುತಿಸಿದ್ದಾರೆ:

  1. ದಟ್ಟವಾದ ಅರಣ್ಯದಲ್ಲಿ ತಮ್ಮದೇ ಆದ ಸಂಸ್ಕೃತಿಯ ನೆರಳಿನಲ್ಲಿ ಮತ್ತು ಸಮೃದ್ಧಿಯಾದ ಖನಿಜ ಸಂಪತ್ತಿರುವ ಗುಡ್ಡಗಾಡು ಪ್ರದೇಶದಲ್ಲಿ ಬದುಕಿರುವ ಆದಿವಾಸಿಗಳು ಇಂದು ಅಭಿವೃದ್ಧಿಯ ನೆಪದಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಗಣಿಗಾರಿಕೆ, ಅಣೆಕಟ್ಟುಗಳ ನಿರ್ಮಾಣ, ಅರಣ್ಯದಲ್ಲಿ ನಿರಂತವಾಗಿ ನಡೆದಿರುವ ಮರಗಳ ಮಾರಣಹೋಮ ಇವೆಲ್ಲವೂ ಅವರನ್ನು ಆಧುನಿಕ ಅಭಿವೃದ್ಧಿ ಯೋಜನೆಗಳು ಅತಂತ್ರರನ್ನಾಗಿ ಮಾಡಿವೆ.
  2. ಭಾರತದಲ್ಲಿ ದಲಿತರಿಗೆ ದಿಕ್ಕುದೆಸೆಯಾಗಿ ಅಂಬೇಡ್ಕರ್ ಜನ್ಮತಾಳಿದ ಹಾಗೆ ಆದಿವಾಸಿಗಳಿಗೆ ಒಬ್ಬ ಅಂಬೇಡ್ಕರ್ ದೊರೆಯದಿರುವುದು ಅವರ ಈ ಶೋಚನೀಯ ಬದುಕಿಗೆ ಕಾರಣವಾಗಿದೆ.
  3. ಭಾರತದಾದ್ಯಂತ ಗುಡ್ಡಗಾಡು ಪ್ರದೇಶದಲ್ಲಿ ಹರಿದು ಹಂಚಿಹೋಗಿರುವ ಆದಿವಾಸಿಗಳು ಇಲ್ಲಿಯವರೆಗೆ ಯಾವುದೇ ರಾಜಕೀಯ ಪಕ್ಷಗಳಿಗೆ ದಲಿತರು ಅಥವಾ ಅಲ್ಪಸಂಖ್ಯಾತರ ಹಾಗೆ ಮತಬ್ಯಾಂಕ್‌ಗಳಾಗಿ ಕಾಣಲಿಲ್ಲ.
  4. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬುಡಕಟ್ಟು ಜನಾಂಗಕ್ಕಾಗಿ ಮೀಸಲಿಟ್ಟ ಉದ್ಯೋಗಗಳು ಈಶಾನ್ಯ ರಾಜ್ಯಗಳ ಬುಡಕಟ್ಟು ಜನಾಂಗದ ವಿದ್ಯಾವಂತರ ಪಾಲಾದವು.
  5. ಆದಿವಾಸಿಗಳ ಪ್ರತಿನಿಧಿಯಂತೆ ಉನ್ನತ ಹುದ್ದೆಯಲ್ಲಿ ಮೇಲ್ಮಟ್ಟದ ಅದಿಕಾರಿಯಾಗಲಿ, ಅಥವಾ ಒಬ್ಬ ಜನಪ್ರತಿನಿಧಿಯಾಗಲಿ ಇಲ್ಲದಿರುವುದು, ಆದಿವಾಸಿಗಳ ಸಮಸ್ಯೆಗಳು ಈವರೆಗೆ ಸರ್ಕಾರಗಳ ಕಣ್ಣಿಗೆ ಗೋಚರವಾಗಿಲ್ಲ.
  6. ಆದಿವಾಸಿಗಳ ಬದುಕು ಪರಿಸರಕ್ಕೆ ಮಾರಕವಾಗದಂತೆ, ದೇಶಿ ಜ್ಞಾನಪರಂಪರೆಯಿಂದ ಕೂಡಿದ್ದು ಅವರುಗಳು ಕಾಪಾಡಿಕೊಂಡು ಬಂದಿರುವ ಜ್ಞಾನಶಿಸ್ತುಗಳನ್ನು ಸುಲಭವಾಗಿ ಆಧುನಿಕ ಬದುಕಿಗಾಗಲಿ, ತಂತ್ರಜ್ಞಾನಕ್ಕಾಗಲಿ ಅಳವಡಿಸಲು ಸಾಧ್ಯವಾಗಿಲ್ಲ.
  7. ಪಶ್ಚಿಮ ಬಂಗಾಳದ ಸಂತಾಲ್ ಭಾಷೆಯೊಂದನ್ನು ಹೊರತು ಪಡಿಸಿದರೆ ಆದಿವಾಸಿಗಳ ಮಾತೃಭಾಷೆಗಳಿಗೆ ಅಧಿಕೃತ ಮಾನ್ಯತೆ ದೊರೆತಿಲ್ಲ. ಈ ಕಾರಣದಿಂದಾಗಿ ಆದಿವಾಸಿ ಮಕ್ಕಳು ಮಾತೃ ಭಾಷೆಯ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಸ್ವಾತಂತ್ರ್ಯ ಲಭಿಸಿ 66 ವರ್ಷಗಳಾದರೂ ಯಾವ ಪಕ್ಷಗಳಾಗಲಿ, ಸರ್ಕಾರಗಳಾಗಲಿ ಇವರ ಅಭಿವೃದ್ಧಿಯ ಕುರಿತಂತೆ ಮಾತನಾಡಿದ್ದು ಇಲ್ಲವೆ ಯೋಜನೆಗಳನ್ನು ರೂಪಿಸಿದ್ದನ್ನು ನಾವುಗಳು ಈವರೆಗೆ ಕಾಣಲು ಸಾಧ್ಯವಾಗಿಲ್ಲ. ಮಾವೋವಾದಿ ನಕ್ಸಲರು ಇವರ ಸಮಸ್ಯೆಯನ್ನು ಕೈಗೆತ್ತಿಕೊಳ್ಳದಿದ್ದರೆ ಈ ನತದೃಷ್ಟರು ಸಮಾಜದ ಮುಖ್ಯವಾಹಿನಿ ಗಮನಕ್ಕೆ ಬಾರದೆ ಶೋಷಣೆಯ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದರು. ಇತ್ತೀಚೆಗಿನ ದಿನಗಳಲ್ಲಿ ನಕ್ಸಲ್ ಸಮಸ್ಯೆ ತೀವ್ರವಾಗುತ್ತಿದ್ದಂತೆ ಕೇಂದ್ರ ಸರ್ಕಾರಕ್ಕೆ ಜ್ಞಾನೋದಯವಾದಂತಿದೆ. ಹಾಗಾಗಿ ನಕ್ಸಲ್ ಪೀಡಿತ ಪ್ರದೇಶಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ನಿರ್ಧರಿಸಿದೆ.

2003 ರಲ್ಲಿ ಪ್ರಥಮ ಬಾರಿಗೆ ನಕ್ಸಲ್ ಪೀಡಿತ ರಾಜ್ಯಗಳ ಮಖ್ಯಮಂತ್ರಿಗಳ ಸಭೆ ಕರೆದಿದ್ದ ಕೇಂದ್ರ ಸರ್ಕಾರ ನಕ್ಸಲರ ಹಾವಳಿಯನ್ನು tribal-schools-educationತಡೆಗಟ್ಟುವ ನಿಟ್ಟಿನಲ್ಲಿ, ಹಿಂದುಳಿದ ಮತ್ತು ನಕ್ಸಲ್ ಹಾವಳಿಗೆ ಸಿಲುಕಿರುವ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ಘೋಷಿಸಿತು. ಅಭಿವೃದ್ಧಿಯಲಿನ್ಲ ತಾರತಮ್ಯ ಮತ್ತು ಆದಿವಾಸಿಗಳ ಕಲ್ಯಾಣದ ಬಗ್ಗೆ ತಾಳಿದ್ದ ನಿರ್ಲಕ್ಷ್ಯ ಧೋರಣೆ ಇವುಗಳಿಂದಾಗಿ ನಕ್ಸಲ್ ಹೋರಾಟಕ್ಕೆ ಹಿಂದುಳಿದ ಬುಡಕಟ್ಟು ಜನಾಂಗಗಳ ಬೆಂಬಲ ದೊರಕುತ್ತಿದೆ ಎಂಬ ವಾಸ್ತವವನ್ನು ಕೇಂದ್ರ ಸರ್ಕಾರ ಗ್ರಹಿಸಿತು. ಇದರಿಂದಾಗಿ ನಕ್ಸಲ್ ಪೀಡಿತ ಹತ್ತು ರಾಜ್ಯಗಳಲ್ಲಿ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಮುಂತಾದ ವಿಷಯಗಳಿಗೆ ವಿಶೇಷ ಒತ್ತು ನೀಡಲಾಗಿದೆ. 2007 ರಲ್ಲಿ ಹತ್ತು ರಾಜ್ಯಗಳ 180 ಜಿಲ್ಲೆಗಳನ್ನು ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿತ್ತು. 2012 ರ ವೇಳೆಗೆ ಕರ್ನಾಟಕ ರಾಜ್ಯವನ್ನು ನಕ್ಸಲ್ ಪೀಡಿತ ರಾಜ್ಯವೆಂಬ ಪಟ್ಟಿಯಿಂದ ಕೈ ಬಿಡಲಾಗಿದೆ. ಜೊತೆಗೆ ದೇಶಾದ್ಯಂತ 60 ಜಿಲ್ಲೆಗಳನ್ನು ಮಾತ್ರ ನಕ್ಸಲ್ ಪೀಡಿತ ಜಿಲ್ಲೆಗಳೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಅಭಿವೃದ್ಧಿಯ ಜೊತೆ ಜೊತೆಗೆ ನಕ್ಸಲ್ ಸಂಘಟನೆಗಳ ಜೊತೆ ಸಂಧಾನದ ಮಾತುಕತೆಗಳನ್ನು ಮಧ್ಯವರ್ತಿಗಳ ಮೂಲಕ ಮುಂದುವರಿಸಲು ನಿರ್ಧರಿಸಿದೆ. ಇದರ ಮೊದಲ ಹಂತವಾಗಿ ನಿವೃತ್ತ ಐ.ಎ.ಎಸ್. ಅಧಿಕಾರಿ ಶರ್ಮ ಮಧ್ಯಸ್ಥಿಕೆಯಲ್ಲಿ ಜಾರ್ಖಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕದನ ವಿರಾಮ ಏರ್ಪಟ್ಟಿದೆ.

ಉದ್ಭವಿಸುವ ಸಮಸ್ಯೆಗಳಿಗೆ ಬಂದೂಕ ಪರಿಹಾರವಲ್ಲ ಎಂಬುದು ನಮ್ಮನ್ನಾಳುವ ಸರ್ಕಾರಗಳಿಗೆ ಮನದಟ್ಟಾಗಿರುವುದು ನೆಮ್ಮದಿಯ ಸಂಗತಿ. ಜಗತ್ತಿನಲ್ಲಿ ಜನ ಸಮುದಾಯದ ಬೆಂಬಲವಿಲ್ಲದೆ ಯಾವುದೇ ಹೋರಾಟಗಳು ಯಶಸ್ವಿಯಾಗುವುದಿಲ್ಲ. ನಕ್ಸಲ್ ಚಳುವಳಿಯನ್ನು ಕುಗ್ಗಿಸಬೇಕಾದರೆ, ಆದಿವಾಸಿಗಳು ನಕ್ಸಲ್ ಹೋರಾಟದ ತೆಕ್ಕೆಗೆ ಬೀಳುವುದನ್ನು ತಡೆಯಬೇಕು. ಇದಕ್ಕಿರುವ ಏಕೈಕ ಪರಿಹಾರ ಭಾರತದ ಆದಿವಾಸಿಗಳ ಹಲವಾರು ದಶಕಗಳ ಕನಸಾದ “ಜಲ್, ಜಂಗಲ್, ಜಮೀನ್” ಎಂಬ ಬೇಡಿಕೆಗಳು.

ಅರಣ್ಯದಲ್ಲಿ ಅತಂತ್ರರಾಗಿರುವ ಆದಿವಾಸಿಗಳ ನಿಸರ್ಗಮಯ ಸಹಜ ಬದುಕಿಗೆ ಅಡ್ಡಿಯಾಗದಂತೆ ಸರ್ಕಾರಗಳು ಕಾಳಜಿ ವಹಿಸಬೇಕು. ಅರಣ್ಯದ ಕಿರು ಉತ್ಪನ್ನಗಳ ಮೇಲಿನ ಹಕ್ಕನ್ನು ಅವರಿಗೆ ವರ್ಗಾಹಿಸಬೇಕು. (ಈಗಾಗಲೇ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಈ ಕುರಿತು ಸೃಷ್ಟನಿದರ್ಶನ ನೀಡಿದೆ.) ದಲ್ಲಾಳಿಗಳು ಮತ್ತು ಏಜೆಂಟರಿಂದ ಆದಿವಾಸಿಗಳು ಮೋಸ ಹೋಗದಂತೆ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸಿ, ಆ ಮೂಲಕ ಅರಣ್ಯ ಕಿರು ಉತ್ಪನ್ನಗಳಾದ ತೆಂಡು ಎಲೆ, ಜೇನು ತುಪ್ಪ, ಗಿಡಮೂಲಿಕೆ ಔಷಧಿಯ ಬೇರು ಮತ್ತು ಕಾಂಡಗಳು, ಬಿದರಿನ ಬೊಂಬು, ಸಂಗ್ರಹಿಸಿದ ಹಣ್ಣು ಹಂಪಲು ಇವುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಆರೋಗ್ಯ ಮತ್ತು ಶಿಕ್ಷಣದಿಂದ ವಂಚಿತರಾಗಿರುವ ಆದಿವಾಸಿಗಳ ಹಳ್ಳಿಗಳಿಗಲ್ಲಿ ಶಾಲೆ, ಆಸ್ಪತ್ರೆ ಇವುಗಳನ್ನು ತೆರೆಯುವುದರ ಮೂಲಕ ಎಲ್ಲಾ ಮಕ್ಕಳಿಗೆ ಈ ಸೌಲಭ್ಯ ದೊರೆಯುವಂತಾಗಬೇಕು. ಆದಿವಾಸಿ ಹಳ್ಳಿಗಳಿಗಳಲ್ಲಿ ಕುಡಿಯುವ ಶುದ್ದ ನೀರು ದೊರಕುವಂತಾಗಬೇಕು. ಯುವಕರಿಗೆ ವೃತ್ತಿ ಕೋರ್ಸುಗಳ ತರಬೇತಿ ನೀಡುವುದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಆರಣ್ಯದಲ್ಲಿ ಆದಿವಾಸಿಗಳು ಬೇಸಾಯ ಮಾಡುತ್ತಿರುವ ಜಮೀನಿನ ಹಕ್ಕನ್ನು ಅವರಿಗೆ ವರ್ಗಾಯಿಸಬೇಕು. ವರ್ಗಾಯಿಸುವ ಸಂದರ್ಭದಲ್ಲಿ ಅಂತಹ ಜಮೀನುಗಳ ಮರು ಮಾರಾಟ ಅಥವಾ ಭೋಗ್ಯಕ್ಕೆ ಅವಕಾಶ ಇಲ್ಲದಂತೆ ನಿಬಂಧನೆಗಳನ್ನು ಹೇರಬೇಕು. ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆ ನಡೆಸಲು ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡುವ ಮೊದಲು ಈ ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು.

ಇಂತಹ ಮಾನವೀಯ ಮುಖವುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಮಾತ್ರ ಸರ್ಕಾರಗಳಿಗೆ ನಕ್ಸಲ್ ಚಟುವಟಿಕೆಯನ್ನು ಚಿವುಟಿ ಹಾಕಲು ಸಾಧ್ಯ. ನಕ್ಸಲ್ ಹಿಂಸಾಚಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ನೆಲದ ಬುದ್ಧಿಜೀವಿಗಳು ವಿಶೇಷವಾಗಿ ಎಡಪಂಥೀಯ ಪಕ್ಷಗಳ ಚಿಂತಕರ ಪಾತ್ರವಿದೆ. communist-photoಈ ಹಿಂದೆ ಎಡಪಂಥೀಯ ಚಿಂತನೆಗಳಿಂದ ಪ್ರೇರಿತರಾಗಿದ್ದರೂ, ಭಾರತದ ಬಡವರು, ಬಡತನ, ಇಲ್ಲಿನ ವ್ಯವಸ್ಥೆಗಳ ವೈರುದ್ಯ, ಚಳವಳಿ ಮತ್ತು ಕಾರ್ಮಿಕರ ಬವಣೆ ಇವುಗಳ ಬಗ್ಗೆ ಅಪಾರ ಕಾಳಜಿ ಮತ್ತು ಒಳನೋಟಗಳನ್ನು ಹೊಂದಿದ್ದ ನಂಬೂದರಿಪಾಡ್, ಸುರ್ಜಿತ್ ಸಿಂಗ್, ಸುಂದರಯ್ಯ, ಜ್ಯೋತಿ ಬಸು ಇಂತಹ ನಾಯಕರು ಬೇಕಾಗಿದ್ದಾರೆ. ಕಮ್ಯುನಿಸ್ಟ್ ಪಕ್ಷದ ವೈಪಲ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ಬುದ್ದದೇವ್ ಭಟ್ಟಾಚಾರ್ಯ ನಡೆಸಿದ ಆಡಳಿತ ಮಾದರಿ ನಮ್ಮೆದುರು ಸಾಕ್ಷಿಯಾಗಿದೆ. ರೈತರು, ಕಾರ್ಮಿಕರ ಮಂತ್ರ ಜಪಿಸುತ್ತಾ ಬಂಡವಾಳಶಾಹಿಗಳಿಗೆ ಭೂಮಿ ಒದಗಿಸಿಕೊಡಲು ಸಿಂಗೂರ್ ಮತ್ತು ನಂದಿಗ್ರಾಮಗಳಲ್ಲಿ ರೈತರ ಮೇಲೆ ನಡೆಸಿದ ದೌರ್ಜನ್ಯಗಳು ನಮ್ಮ ಕಣ್ಣೆದುರು ಜೀವಂತವಾಗಿವೆ. ಈಗಿನ ಕಮ್ಯುನಿಸ್ಟ್ ಪಾಲಿಟ್ ಬ್ಯೂರೊದಲ್ಲಿ ಪ್ರಕಾಶ್ ಕಾರಟ್, ಸಿತಾರಾಮ್ ಯಚೂರಿ, ಬೃಂದಾ ಕಾರಟ್ ಮುಂತಾದ ಬದ್ಧತೆಯುಳ್ಳ ನಾಯಕರಿದ್ದರೂ ಸಹ ಕಮ್ಯುನಿಸ್ಟ್ ಕೇಂದ್ರ ಸಮಿತಿಯ ಸದಸ್ಯರು ಎಲೈಟ್ ಸಂಸ್ಕೃತಿಯ ಜನರಂತೆ ಚಿಂತಿಸುತ್ತಿದ್ದಾರೆ. ಉಳ್ಳವರ ಈ ಭಾರತದಲ್ಲಿ ನರಳುವವರ ಭಾರತವೂ ಕೂಡ ಇದೆ ಎಂಬುದನ್ನು ಅವರು ಮನಗಾಣಬೇಕಿದೆ.

ಒಂದು ಸಮಸ್ಯೆಯ ಪರಿಹಾರಕ್ಕೆ ಉಭಯ ಬಣಗಳ ನಡುವೆ ಸೌಹಾರ್ದಯುತ ಮಾತುಕತೆಗೆ ಸಿದ್ದಗೊಂಡಿರುವ ಮನಸ್ಸುಗಳು ಬೇಕು. ಸಮಸ್ಯೆಗಳನ್ನು ಬಗೆಹರಿಸಲು ಉಭಯಬಣಗಳ ನಡುವೆ ರಾಯಭಾರಿಯಾಗಿ ಕಾರ್ಯನಿರ್ವಹಿಸಲು ಅನೇಕ ನಿವೃತ್ತ ಸರ್ಕಾರಿ ಅಧಿಕಾರಿಗಳು, ಸ್ವಯಂ ಸೇವಾ ಸಂಘಟನೆಗಳ ಮುಖ್ಯಸ್ಥರು ಮತ್ತು ಸಮಾಜದ ವಿವಿಧ ವಲಯದ ಗಣ್ಯರು ನಮ್ಮ ನಡುವೆ ಇದ್ದಾರೆ. ಇಲ್ಲಿ ತುರ್ತಾಗಿ ಆಗಬೇಕಾಗಿರುವುದು ಎರಡು ಕಡೆಯಿಂದ ಸಿದ್ಧವಾಗಿರುವ ಮುಕ್ತ ಮನಸ್ಸುಗಳು ಮಾತ್ರ. ಇಂತಹ ಜ್ವಲಂತ ಸಮಸ್ಯೆಯನ್ನು ಹೀಗೆ ಬೆಳೆಯಲು ಬಿಟ್ಟರೆ ಈಗಾಗಲೇ ಅರ್ಧ ಶತಮಾನ ಕಳೆದಿರುವ ರಕ್ತ ಇತಿಹಾಸ ಕಥನ ಎಂದೆಂದೂ ಮುಗಿಯದ ಯುದ್ದವಾಗಿ ಮುಂದುವರಿಯುವ ಸಾಧ್ಯತೆಗಳಿವೆ. ಅಂತಹ ನೋವಿನ ಗಳಿಗೆಯಲ್ಲಿ ನಾವುಗಳು ಮೌನವಾಗಿ ಸಾಕ್ಷಿಗಳಾಗಬೇಕಾಗುತ್ತದೆ. ಅಂತಿಮವಾಗಿ ಇದು ಮಾನವೀಯತೆಗಾಗಿ ತುಡಿಯುವ ಮನಸ್ಸುಗಳ ಪಾಲಿಗೆ ಹಿಂಸಾತ್ಮಕವಾದ ಮತ್ತು ನರಕ ಸದೃಶ್ಯ ಜಗತ್ತು.


[ಕೊನೆಯ ಮಾತು :- ಪ್ರಿಯ ಓದುಗರೆ, ವರ್ತಮಾನ ಅಂತರ್ಜಾಲ ಪತ್ರಿಕೆಯಲ್ಲಿ ನಕ್ಸಲ್ ಕಥನದ ಸರಣಿ ಬರೆಯಲು ಅವಕಾಶ ಮಾಡಿಕೊಟ್ಟ ಪ್ರ್ರಿಯ ಮಿತ್ರ ರವಿ ಕೃಷ್ಣಾರೆಡ್ಡಿಯವರಿಗೆ ನನ್ನ ಧನ್ಯವಾದಗಳು. ಈ ಕಥನಕ್ಕೆ ಓದುಗ ಮಿತ್ರರು ತೋರಿದ ಪ್ರೀತಿ, ಪ್ರತಿಕ್ರಿಯೆ ಮತ್ತು ಆಸಕ್ತಿಯಿಂದಾಗಿ ನಾನು ಗಂಭೀರವಾಗಿ ಇಂತಹ ಅಧ್ಯಯನದಲ್ಲಿ ತೊಡಗಿಕೊಳ್ಳಲು ಸಾಧ್ಯವಾಯಿತು. ನಾನು ಕಳೆದ ಮುವ್ವತ್ತು ವರ್ಷಗಳಿಂದ ಹಲವು ಪ್ರಗತಿಪರ ಸಂಟನೆಗಳ ಜೊತೆ ಗುರುತಿಸಿಕೊಂಡಿದ್ದರೂ, ನಕ್ಸಲ್ ಚಳುವಳಿಯಿಂದ ಬಂದವನಲ್ಲ. ಕೆಲವು ರಾಜ್ಯಗಳಲ್ಲಿ ಪ್ರವಾಸ ಮಾಡಿ ಒರ್ವ ಪತ್ರಕರ್ತನಾಗಿ, ಸಂಶೋಧಕನಾಗಿ ನಡೆಸಿದ ಕ್ಷೇತ್ರ ಕಾರ್ಯ ಮತ್ತು ಮಾಜಿ ಹೋರಾಟಗಾರರ ಜೊತೆ ನಡೆಸಿದ ಚರ್ಚೆ ಮತ್ತು ಮಾತುಕತೆ, ಹಾಗೂ ಅವರು ನೀಡಿದ ಮಾಹಿತಿ ಮತ್ತು ಇತಿಹಾಸದ ದಾಖಲೆಗಳಿಂದ ಇಂತಹದ್ದೊಂದು ಸರಣಿ ಸಾಧ್ಯವಾಯಿತು. ನನ್ನ ಈ ಸರಣಿ ಕಥನದಲ್ಲಿ ಏನಾದರೂ ಕೊರತೆಯಿದ್ದರೆ, ಅಥವಾ ತಪ್ಪು ಮಾಹಿತಿಗಳಿದ್ದರೆ ನನ್ನ ಗಮನಕ್ಕೆ ತರಬೇಕಾಗಿ ವಿನಂತಿಸಿಕೊಳ್ಳತ್ತೇನೆ. ನನ್ನ ಇ-ಮೈಲ್ ವಿಳಾಸ : jagadishkoppa@gmail.com.

ಮುಂದಿ ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನ ಪ್ರಸಿದ್ದ ಪ್ರಕಾಶನ ಸಂಸ್ಥೆಯಿಂದ “ಎಂದೂ ಮುಗಿಯದ ಯುದ್ದ” (ಭಾರತದ ನಕ್ಸಲ್ ಇತಿಹಾಸದ ಕಥನ) ಎಂಬ ಹೆಸರಿನಲ್ಲಿ ಪ್ರಕಟವಾಗುವ ಈ ಲೇಖನಗಳ ಸರಣಿಯ ಕೃತಿಯಲ್ಲಿ 1967 ರಿಂದ 1980 ರ ವರೆಗೆ ಜರುಗಿದ ಹೋರಾಟದ ಕಥನ ಮೊದಲ ಭಾಗದಲ್ಲಿ, ನಂತರ 1980 ರಿಂದ 2012 ರವರೆಗೆ ನಡೆದ ಹೋರಾಟ ಎರಡನೆ ಭಾಗದಲ್ಲಿ ಅಡಕವಾಗಿರುತ್ತದೆ. ಕೃತಿಯ ಕೊನೆಯ ಪುಟಗಳ ಅನುಬಂಧದ ವಿಭಾಗದಲ್ಲಿ ಈವರೆಗೆ ನಕ್ಸಲ್ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ನಕ್ಸಲ್ ಹುತಾತ್ಮ ನಾಯಕರ ವಿವರ ಮತ್ತು 1967 ರಿಂದ 2012 ರವರೆಗೆ ನಡೆದ ಪ್ರಮುಖ ಹಿಂಸಾಚಾರ ಘಟನೆಗಳು ಹಾಗೂ ನಕ್ಸಲ್ ಹೋರಾಟಕ್ಕಾಗಿ ಕಮ್ಯುನಿಸ್ಟ್ ಪಕ್ಷದಲ್ಲಿ ಹುಟ್ಟಿಕೊಂಡ ಸಂಘಟನೆಗಳ ಸಂಪೂರ್ಣ ಮಾಹಿತಿ ನೀಡಲಾಗಿದೆ. ಆಸಕ್ತರು ಗಮನಿಸ ಬಹುದು. ಎಲ್ಲರಿಗೂ ನಮಸ್ಕಾರ. – ಡಾ. ಎನ್. ಜಗದೀಶ್ ಕೊಪ್ಪ]

(ಮುಗಿಯಿತು)