ಎಲ್.ಕೆ.ಜಿ ಮಕ್ಕಳಿಗೂ ಹಾಸ್ಯದ ವಸ್ತುವಾದ ‘ಕೆ.ಜಿ.ಬೋಪಯ್ಯ ನಾಪತ್ತೆ ಪ್ರಕರಣ’

– ಸುಧಾಂಶು ಕಾರ್ಕಳ

ಮಗು ಎರಡು ಮೂರು ವರ್ಷಗಳಷ್ಟು ಕಾಲ ಬೆಳೆದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಲ-ಮೂತ್ರ ವಿಸರ್ಜಿಸಲು ಹಿಂಜರಿಯುತ್ತದೆ. ಕಾರಣ, ಆ ಹೊತ್ತಿಗೆ ಆ ಮಗುವಿಗೆ ಹಾಗೆ ಮಾಡುವುದು ಮುಜುಗರದ ಕೆಲಸವಾಗಿರುತ್ತೆ. ಅದಾಗ್ಯೂ ಯಾವುದಾದರೂ ಮಗು, ಹಾಗೆ ಮಾಡಿದಲ್ಲಿ, ಹಿರಿಯರು ನಾಚಿಕೆ ಆಗೋಲ್ವಾ ಅಂತ ಪ್ರೀತಿಯಿಂದಲೇ ಛೇಡಿಸುವುದುಂಟು. ಆದರೆ, ತಕ್ಕಮಟ್ಟಿಗೆ ಸುಶಿಕ್ಷಿತ ಹಾಗೂ ಸಮಾಜದಲ್ಲಿ ಗಂಭೀರವಾಗಿ ಪರಿಗಣಿಸಬಹುದಾದ ವಯಸ್ಸು ದಾಟಿದ ನಂತರ ಯಾರೇ ಹಾಗೆ ಮಾಡಿದರೆ, ಅವರನ್ನು ಲಜ್ಜೆಗೆಟ್ಟವನು ಎಂದು ಕರೆಯುವುದು ರೂಢಿ.

ಪಕ್ಷಾತೀತನಾಗಿ ಕೆಲಸ ನಿರ್ವಹಿಸುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬ ತನ್ನ ಜವಾಬ್ದಾರಿಯನ್ನು ಮರೆತು ಕಣ್ಮರೆಯಾಗುವುದೆಂದರೆ, ಆ ಮೂಲಕ ತನ್ನ ಮೂಲ ಪಕ್ಷಕ್ಕೆ ನಿಷ್ಠೆಯನ್ನು ತೋರಿಸುತ್ತಾರೆಂದರೆ, ಅವರನ್ನು ಬೇರೆ ಏನೆಂದು ಕರೆಯಬೇಕು? ಕೆ.ಜಿ. ಬೋಪಯ್ಯನವರು ಸದ್ಯ ವಿಧಾನ ಸಭೆಯ ಅಧ್ಯಕ್ಷ. ರಾಜ್ಯದ ಪ್ರೊಟೋಕಾಲ್ ವ್ಯವಸ್ಥೆಯಲ್ಲಿ ಅವರಿಗೆ ಮೂರನೇ ಸ್ಥಾನ. ವಿಧಾನ ಸಭೆ ಅಧಿವೇಶನದಲ್ಲಿ ಎಲ್ಲರೂ ಅವರನ್ನು ‘ಅಧ್ಯಕ್ಷರು’ ಎಂದೇ ಸಂಭೋದಿಸಬೇಕು. ಅವರಿಗೆ ತೋರುವ ಅಗೌರವ ಶಿಕ್ಷಾರ್ಹ.

ಅಂತಹ ಸ್ಥಾನದಲ್ಲಿರುವ ವ್ಯಕ್ತಿ ಘನತೆ ಮರೆತು ವರ್ತಿಸುತ್ತಿದ್ದಾರೆ. ತನ್ನ ವರ್ತನೆಯಲ್ಲಿ ಲೋಪಗಳಿವೆ ಎಂಬುದನ್ನು ಎಲ್.ಕೆ.ಜಿ ಹುಡುಗ/ಹುಡುಗಿಯರಿಗೂ ಅರ್ಥವಾಗುತ್ತೆ ಎನ್ನವ ಸಾಮಾನ್ಯ ಜ್ಞಾನ ಈ ಕೆ.ಜಿ. ಬೋಪಯ್ಯನವರಿಗಿಲ್ಲವೆ? ಖಂಡಿತ ಇದೆ. ಹಾಗಿದ್ದರೂ, ಅಂತಹ ಕೆಲಸ ಮಾಡುತ್ತಾರೆ, ಯಾರ ಕೈಗೂ ಸಿಗದಂತೆ ಕಣ್ಮರೆಯಾಗುತ್ತಾರೆ ಎಂದರೆ ಅವರನ್ನು ‘ಸ್ವ ಇಚ್ಚೆಯಿಂದ ನಾಚಿಕೆ ಬಿಟ್ಟವರು’ ಎಂದು ಕರೆಯಬಹುದೆ?

ಒಬ್ಬ ಸ್ಪೀಕರ್ ನಾಪತ್ತೆ ಅಂದರೆ ಏನು? ಅವರು ಎಲ್ಲಿದ್ದಾರೆ ಅಂತ ಯಾರಿಗೂ ಗೊತ್ತಿಲ್ಲವಂತೆ! ಅರವಿಂದ ಲಿಂಬಾವಳಿ ಎಂಬ ಮಂತ್ರಿ ಹೇಳುತ್ತಾರೆ, “ಅವರು ಸದನ ಸಮಿತಿಯ ನೇತಾರರು, ಹಾಗಾಗಿ ಅವರು ಸಮಿತಿಯ ವಿದೇಶ ಪ್ರವಾಸದಲ್ಲಿದ್ದಾರೆ”. ಆಯ್ತಪ್ಪ, ಅವರು ಅಧ್ಯಕ್ಷರಾಗಿರುವ ಸಮಿತಿ ಯಾವುದು, ಅವರು ಸದ್ಯ ಯಾವ ದೇಶದಲ್ಲಿದ್ದಾರೆ ಎಂದು ಕೇಳಿದರೆ, ಉತ್ತರ ಇಲ್ಲ. ( ಲೇಖನ ಬರೆಯುತ್ತಿರುವ  ಈ ಹೊತ್ತಿನವರೆಗೂ,  ಅವರುಎಲ್ಲಿದ್ದಾರೆಂದು ಪತ್ತೆಯಾಗಿಲ್ಲ.)

ಬಿಜೆಪಿ ಸರಕಾರದಲ್ಲಿ ಮಂತ್ರಿಗಳಾಗಿ ರಾಜೀನಾಮೆ ನೀಡಿರುವ ಶೋಭಾ ಕರಂದ್ಲಾಜೆ ಮತ್ತು ಸಿ.ಎಂ. ಉದಾಸಿಯವರು ಸ್ಪೀಕರ್ ಅವರನ್ನು ದಿನಾಂಕ ಜನವರಿ 22 ರಂದು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಬೆಂಗಳೂರಿನಲ್ಲೇ ಇದ್ದರು. ನಂತರದ ದಿನವೂ ಕಚೇರಿಯಲ್ಲಿಯೇ ಇರುತ್ತೇನೆ, ಬಂದು ಭೇಟಿ ಮಾಡಬಹುದು ಎಂದು ಹೇಳಿದ್ದರು. ಆದರೆ ರಾತ್ರೋರಾತ್ರಿ ಅವರು ಗಾಯಬ್! ಅವರು ಹೋಗಿರಬಹುದಾದ ಸ್ಥಳ, ಉದ್ದೇಶಗಳ ಬಗ್ಗೆ ಹೇಳಲು ಅವರ ಕಚೇರಿಯಲ್ಲಿ ಯಾರೂ
ಸಿದ್ಧರಿಲ್ಲ. Anarchy ಎಂದರೆ ಇದಲ್ಲವೆ?

ಸ್ಪೀಕರ್ ಹಕ್ಕು, ಕರ್ತವ್ಯಗಳ ಬಗ್ಗೆ ಸದನದ ನಿಯಮಾವಳಿಗಳಲ್ಲಿ ಸ್ಪಷ್ಟತೆ ಇದೆ. ಸದಸ್ಯರೊಬ್ಬರು ರಾಜೀನಾಮೆ ನೀಡಬೇಕು ಎಂದರೆ, ದಿನದ ಯಾವುದೇ ಸಮಯದಲ್ಲಿ ಸ್ಪೀಕರ್ ಅವರನ್ನು ಸಂಪರ್ಕಿಸಬಹುದು. ಸ್ಪೀಕರ್ ಸ್ಥಾನದ ವಿಶೇಷತೆ ಏನೆಂದರೆ, ಅವರು ಎಲ್ಲಿಯೇ ಇದ್ದರೂ ಅವರಿಗೆ ರಾಜೀನಾಮೆ ಪತ್ರ ಕೊಡಬಹುದು. ಅವರ ಸಮ್ಮುಖದಲ್ಲಿ ಸದಸ್ಯರು ರಾಜೀನಾಮೆ ಕೊಟ್ಟರೆ, ಸ್ಪೀಕರ್ ‘ಸ್ವ ಇಚ್ಚೆಯಿಂದ ನೀಡುತ್ತಿದ್ದೀರಾ, ಅಥವಾ ಯಾವುದಾದರೂ/ಯಾರದಾದರೂ ಒತ್ತಡವೋ’ ಎಂದು ಕೇಳಬಹುದು. ಅವರ ಪ್ರತಿಕ್ರಿಯೆ ಸೂಕ್ತ ಎನಿಸಿದ ಕೂಡಲೆ ಅವರು ಪತ್ರ ಸ್ವೀಕರಿಸಿ ರುಜು ಹಾಕಿದರೆಂದರೆ, ಆ ಕ್ಷಣದಿಂದ ರಾಜೀನಾಮೆ ಸಲ್ಲಿಸಿದ ವ್ಯಕ್ತಿ ಸ್ಥಾನದಿಂದ ಬಿಡುಗಡೆ ಹೊಂದಿದಂತೆ.

ಆದರೆ, ಪಕ್ಷಾತೀತನಾಗಿ ಕೆಲಸ ನಿರ್ವಹಿಸುವ ಉದ್ದೇಶವೇ ಇಲ್ಲದ ವ್ಯಕ್ತಿ ಹೇಗೆ ಬೇಕಾದರೂ ಅಡ್ಡ ದಾರಿ ಹುಡುಕಬಹುದು. ಇದೇ ಬೋಪಯ್ಯನವರು ರಾತ್ರೋರಾತ್ರಿ ರಾಜೀನಾಮೆ ಪಡೆದುಕೊಂಡಿದ್ದಾರೆ (ಆಪರೇಶನ್ ಕಮಲ), ಅಂತೆಯೇ ತಿಂಗಳುಗಟ್ಟಲೆ ಕಾದು ಕ್ಯಾಬಿನೆಟ್ನಲ್ಲಿ ಲೋಕಾಯುಕ್ತರ ಗಣಿ ವರದಿಯ ಬಗ್ಗೆ ಸ್ಪಷ್ಟೀಕರಣ ಕೇಳುವ ತೀರ್ಮಾನ ತೆಗೆದುಕೊಳ್ಳುವ ದಿನದ ತನಕ ಕಾದಿದ್ದು ಶ್ರೀರಾಮುಲು ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದೂ ಇದೆ. (ಹಲವರಿಗೆ ನೆನಪಿರಬಹುದು, ಶ್ರೀರಾಮುಲು ರಾಜೀನಾಮೆ ನೀಡಿದ್ದೇ ಲೋಕಾಯುಕ್ತ ವರದಿಯಲ್ಲಿ ತಮ್ಮ ಹೆಸರು ಬಂದ ಕಾರಣ. ಆ ವರದಿಯನ್ನೇ ಪ್ರಶ್ನಿಸುವಂತಹ ನಿರ್ಧಾರವನ್ನು ಕ್ಯಾಬಿನೆಟ್ ತೆಗೆದುಕೊಳ್ಳುವ ದಿನ, ಅವರ ರಾಜೀನಾಮೆ ಅಂಗೀಕಾರವಾಯಿತು. ರಾಮುಲು ಕೂಡಾ ಈ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು).

ರಾಜೀನಾಮೆ ಅಂಗೀಕರಿಸುವುದಷ್ಟೇ ಅಲ್ಲ, ರಾತ್ರೋರಾತ್ರಿ ಸದಸ್ಯರನ್ನು ಮುಲಾಜಿಲ್ಲದೆ ಸದಸ್ಯರನ್ನು ಅನರ್ಹಗೊಳಿಸಿದ್ದರು. ಆ ನಂತರ ಸದಸ್ಯರು ಸುಪ್ರೀಂ ಕೋರ್ಟ್ ತನಕ ಹೋಗಿ ಸದಸ್ಯತ್ವ ಉಳಿಸಿಕೊಂಡರು. ಸುಪ್ರೀಂ ಕೋರ್ಟ್ ಕೂಡಾ ಈ ಸ್ಪೀಕರ್ ರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದರು. ನಂತರ ಗೂಳಿಹಟ್ಟಿ ಶೇಖರ್ ಅವರು ಬೋಪಯ್ಯನವರನ್ನು ‘ಕಳಂಕಿತ ಅಧ್ಯಕ್ಷರೇ’ ಎಂದು ಕರೆದು ತನ್ನ ಪ್ರತಿಭಟನೆಯನ್ನು ದಾಖಲಿಸಲು ಹೋದಾಗ, ಅವರನ್ನು ಒಂದು ದಿನದ ಮಟ್ಟಿಗೆ ಅಮಾನತ್ತು ಮಾಡಿದರು.

ಈ ಎಲ್ಲಾ ವರ್ತನೆಗಳ ಹಿನ್ನೆಲೆಯಲ್ಲಿ ಬೋಪಯ್ಯ ಕಾಣುವುದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ಜನಪ್ರತಿನಿಧಿಯಾಗಿ ಅಲ್ಲ, ಬದಲಿಗೆ ಉಳಿಗಮಾನ್ಯ ಪದ್ಧತಿಯ ಅಸಲಿ ವಾರಸುದಾರನಂತೆ. ಪ್ರಜಾಪ್ರಭುತ್ವ ಅಂತೆಲ್ಲಾ ಅವರ ಎದುರು ಮಾತನಾಡಲು ಹೊರಟವರು ನಗೆಪಾಟಿಲಿಗೆ ಈಡಾದರೆ ಅಚ್ಚರಿಯಿಲ್ಲ.

ಇಂತಹ ಬೆಳವಣಿಗೆಗಳಿಂದ ತೀರಾ ವಿಚಲಿತರಾದಂತೆ ಕಂಡವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ತನ್ನ ಅವಧಿಯಲ್ಲಿ 16 ಜನ ಶಾಸಕರು ಅನರ್ಹರಾದಾಗ ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದ ಯಡಿಯೂರಪ್ಪ, 13 ಜನ ರಾಜೀನಾಮೆ ಕೊಡಲು ಮುಂದಾದ ತಕ್ಷಣ ಜಗದೀಶ್ ಶೆಟ್ಟರ್ “ನಾಚಿಕೆಗೆಟ್ಟ” ಮುಖ್ಯಮಂತ್ರಿಯಾದರು. ತಮ್ಮದೇ ತಂತ್ರಗಳು ತಿರುಗುಬಾಣವಾಗುವುದು ಎಂದರೆ ಇದೇ ಅಲ್ಲವೇ, ಮಿಸ್ಟರ್. ಬಿ.ಎಸ್.ವೈ.? ಅಂದು ಆ ಹದಿನಾರು ಶಾಸಕರು ಸ್ಪಷ್ಟವಾಗಿ ತಾವು ಬಿಜೆಪಿಯಲ್ಲಿಯೇ ಇದ್ದೇವೆ, ಆದರೆ ಮುಖ್ಯಮಂತ್ರಿ ಬದಲಾಗಬೇಕು ಎಂದು ಕೇಳಿದರು. ಆದರೂ ಅವರನ್ನು (ಸ್ವತಂತ್ರವಾಗಿ ಆಯ್ಕೆಯಾದ ಸದಸ್ಯರೂ ಸೇರಿದಂತೆ) ‘ಪಕ್ಷ ವಿರೋಧಿ ಚಟುವಟಿಕೆ’ ಆರೋಪದ ಮೇಲೆ ಅನರ್ಹಗೊಳಿಸಲಾಯಿತು.

ಸದ್ಯ ರಾಜೀನಾಮೆ ಕೊಡಲು ಮುಂದಾಗಿರುವವರ ಆತಂಕವೂ ಅದೇ. ಅವರು ರಾಜ್ಯಪಾಲರನ್ನು ಭೇಟಿಯಾದಾಗ ಸ್ಪಷ್ಟವಾಗಿ ಕೇಳಿದ್ದು ಸ್ಪೀಕರ್ ಅವರನ್ನು ಕರೆಸಿ ಎಂದು. ಅವರಿಗೆ ಶೆಟ್ಟರ್ ಸಭೆಯಲ್ಲಿ ವಿಶ್ವಾಸ ಗೊತ್ತುವಳಿ ಮಂಡಿಸಬೇಕು ಎಂಬ ಉದ್ದೇಶವಿಲ್ಲ. ಈ ಸ್ಪೀಕರ್ ತಮ್ಮ ರಾಜೀನಾಮೆ ಒಪ್ಪುವ ಮೊದಲೆ, ವಿಶ್ವಾಸ ಗೊತ್ತುವಳಿ ಮಂಡಿಸುವ ಸಂದರ್ಭ ಬಂದರೆ, ಬಿಜೆಪಿ ಖಂಡಿತವಾಗಿ ಶೆಟ್ಟರ್ ಅವರನ್ನು ಬೆಂಬಲಿಸುವಂತೆ ತನ್ನ ಶಾಸಕರಿಗೆ ವ್ಹಿಪ್ ಜಾರಿ ಮಾಡುತ್ತದೆ. ಅದನ್ನು ಉಲ್ಲಂಘಿಸುವ ಧೈರ್ಯ ಯಾರಿಗೂ ಇಲ್ಲ. ಒಂದೊಮ್ಮೆ ಹಾಗೆ ಮಾಡಿದರೆ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಇವರು ಮತ್ತಷ್ಟು ಸಂಕಷ್ಟಕ್ಕೀಡಾಗುತ್ತಾರೆ. bhopayyaಹಿಂದೊಮ್ಮೆ 16 ಜನ ಶಾಸಕರನ್ನು ಅನರ್ಹಗೊಳಿಸಿ ಯಡಿಯೂರಪ್ಪನವರಿಗೆ ಬಹುಮತ ಸಾಬೀತುಮಾಡಲು ಅವಕಾಶ ಮಾಡಿಕೊಟ್ಟ ಬೋಪಯ್ಯನವರಿಗೆ, ಅದೇ ದಾಳ ಹೂಡಿ, 13 ಜನರ ರಾಜೀನಾಮೆ ಅಂಗೀಕರಿಸದೆ, ಶೆಟ್ಟ್ರರ್ ಸರಕಾರ ಉಳಿಸುವುದು ಕಷ್ಟವೇನಲ್ಲ.

(ಸಂಪಾದಕರ ಮಾತು: ಈ  ಲೇಖನ ಪ್ರಕಟವಾಗುವ ಹೊತ್ತಿಗೆ ಬೋಪಯ್ಯನವ ರು ಮಂಗಳೂರಿನಲ್ಲಿ ಪತ್ತೆಯಾಗಿ ಮಡಿಕೇರಿ ತಲುಪಿದ್ದಾರೆ.)

4 thoughts on “ಎಲ್.ಕೆ.ಜಿ ಮಕ್ಕಳಿಗೂ ಹಾಸ್ಯದ ವಸ್ತುವಾದ ‘ಕೆ.ಜಿ.ಬೋಪಯ್ಯ ನಾಪತ್ತೆ ಪ್ರಕರಣ’

  1. vasanthn

    ಮಾನ್ಯ ಬೋಪಯ್ಯನವರು ತಲೆಗೆ ಬಣ್ಣ ಹಾಕಿಸಿಕೊಳ್ಳಲು ನಾಪತ್ತೆಯಾಗಿದ್ದಿರಬಹುದು. ಈ ವ್ಯಕ್ತಿಗೆ ಸ್ವಲ್ಪನಾದರೂ ಮಾನ-ಮಾಯ೵ದೆ ಇದಿಯಾ?

    Reply
  2. anand prasad

    ಕರ್ನಾಟಕದ ಶಾಸಕಾಂಗದ ಇತಿಹಾಸದಲ್ಲಿ ಸ್ಪೀಕರ್ ಬೋಪಯ್ಯನವರ ನಡವಳಿಕೆ ಕಪ್ಪು ಚುಕ್ಕೆಯಾಗಿ ನಿಲ್ಲಲಿದೆ. ಸ್ಪೀಕರ್ ಆಗಿ ಇಷ್ಟು ಕೆಳ ಮಟ್ಟಕ್ಕೆ ಇದುವರೆಗೆ ಯಾರೂ ಇಳಿದಿರಲಿಲ್ಲ. ಒಬ್ಬ ಕಳ್ಳನಂತೆ ವಿಮಾನದಲ್ಲಿ ತನ್ನ ವೇಷಮರೆಸಿಕೊಂಡು ಪ್ರಯಾಣಿಸಲು ಬೋಪಯ್ಯ ಪ್ರಯತ್ನಿಸಿದ ವರದಿಯಾಗಿದೆ. ಅತ್ಯಂತ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಒಂದು ಪಕ್ಷದ ಸರ್ಕಾರದ ನೈತಿಕ ಅಧಃಪತನದ ಪರಾಕಾಷ್ಠೆ ಇದು. ಈ ಸರ್ಕಾರದ ಸೂತ್ರದಾರನಾಗಿ ಸರ್ಕಾರವನ್ನು ಕುಣಿಸುತ್ತಿರುವ ಒಂದು ‘ದೇಶಭಕ್ತರ’ ಸಂಘಟನೆಯ ಆದೇಶದಂತೆ ಈ ಎಲ್ಲ ಕಪಟ ನಾಟಕ ನಡೆಯುತ್ತಿರುವುದರಲ್ಲಿ ಸಂದೇಹವಿಲ್ಲ.

    Reply
  3. Shekhar (@angadiindu)

    ನಮ್ಮ ಆಫೀಸಿನಲ್ಲಿ ಕಸ ಗುಡಿಸುವ ಮಲ್ಲಪ್ಪ ಸಹ ತಾನು ಆಫೀಸಿಗೆ ರಜೆ ಹಾಕುವಾಗ ಸಂಬಂದಿಸಿದವರಿಗೆ ಹೇಳಿ ಕಸ ಗುಡಿಸುವ ವ್ಯವಸ್ಥೆ ಮಾಡಿ ಹೋಗುತ್ತಾನೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಈತ ಯಾರಿಗೂ ಹೇಳದೇ, ಬದಲೀ ವ್ಯವಸ್ಥೆ ಮಾಡದೇ ಓಡಿ ಹೋದ ಇವನಿಂದ ನಮ್ಮ ಪ್ರಜಾಪ್ರಭುತ್ವ ಪದ್ಧತಿಗೇ ಅಪಚಾರವಾಗಿದೆ. ತಾನು ಓಡಿ ಹೋದ ದಿನಗಳ ಸಂಬಳವನ್ನು ಬಿಡುತ್ತಾನಾ?
    ಆತ್ಮಸಾಕ್ಷಿ ಅನ್ನುವದೇನಾದರೂ ಈತನಿಗಿದೆಯಾ ?

    Reply
  4. Harish Babu M.R.

    Shobakka Heluthare ‘Yediyurappanavara runa theerisoke BJP ge Rajiname Koduthine antha.
    S.M.Krishna Heluthare ‘Soniyaji runa theerisoke rajiname koduthini’ antha.

    Melina Yeradu prakarana Kevala udaharanege mathra. Inthaha nooraru prakaranagalu namma nenapina buthhiyallide.

    Heegidda meley Votudarara runa theerisuvaru Yaru?

    NAMMA
    DESHAKKE PRAJA PRABUTHVA BEKA????

    Reply

Leave a Reply to Shekhar (@angadiindu) Cancel reply

Your email address will not be published. Required fields are marked *